WFTW Body: 

ನಾವು ಉನ್ನತ ಗುಣಮಟ್ಟದ ಕ್ರೈಸ್ತಸಭೆಗಳನ್ನು ಕಟ್ಟುವದಕ್ಕೆ, ಉತ್ತಮ ಗುಣಮಟ್ಟದ ಬೋಧಕರು ನಮಗೆ ಬೇಕು.

ಯೇಸುವು "ನನ್ನನ್ನು ಹಿಂಬಾಲಿಸಿರಿ,"ಎಂದು ನುಡಿದರು (ಲೂಕ. 9:23).

ಪೌಲನೂ ಸಹ, "ನಾನು ಕ್ರಿಸ್ತನನ್ನು ಹಿಂಬಾಲಿಸುವಂತೆಯೇ ನೀವು ನನ್ನನ್ನು ಹಿಂಬಾಲಿಸಿರಿ," ಎಂದು ಹೇಳಿದನು (1 ಕೊರಿ. 11:1; ಫಿಲಿ. 3:17.ಪ್ರತಿಯೊಬ್ಬ ದೈವಿಕ ಬೋಧಕನು ತಾನು ಬೋಧಿಸುವ ಎಲ್ಲರಿಗೂ ಇದೇ ಮಾತನ್ನು ಹೇಳಲು ಸಾಧ್ಯವಾಗಬೇಕೆಂದು ಪವಿತ್ರಾತ್ಮನ ನಿರೀಕ್ಷೆಯಾಗಿದೆ, ಎಂದು ಅಪೊಸ್ತಲ ಪೌಲನ ಈ ಮಾತುಗಳಿಂದ ನಮಗೆ ತಿಳಿದುಬರುತ್ತದೆ.

ಅನೇಕ ಬೋಧಕರು, ”ನನ್ನನ್ನು ಅನುಸರಿಸಬೇಡಿರಿ, ಆದರೆ ಕ್ರಿಸ್ತನನ್ನು ಅನುಸರಿಸಿರಿ,” ಎಂದು ಹೇಳುತ್ತಾರೆ. ಈ ಮಾತು ಬಹಳ ದೀನತೆಯಿಂದ ತುಂಬಿದಂತೆ ಕಾಣುತ್ತದೆ. ಆದರೆ ಇದು ಅವರ ಸೋತಿರುವ ಜೀವಿತವನ್ನು ಮರೆಮಾಚುವಂತ ಕೇವಲ ಒಂದು ನೆಪವಾಗಿದೆ; ಮತ್ತು ಇದು ಪವಿತ್ರಾತ್ಮನ ಬೋಧನೆಗೆ ಸಂಪೂರ್ಣ ವಿರುದ್ಧವಾಗಿದೆ.

”ನಾನು ಕ್ರಿಸ್ತನನ್ನು ಹಿಂಬಾಲಿಸುವಂತೆ, ನೀವು ನನ್ನನ್ನು ಹಿಂಬಾಲಿಸಿರಿ,”ಎಂಬುದಾಗಿ ಜನರನ್ನು ಆಹ್ವಾನಿಸುವ ಬೋಧಕರನ್ನು ಮಾತ್ರ ನಾನು ಗೌರವಿಸಿ ಅನುಸರಿಸುತ್ತೇನೆ. ಆದರೆ ವಿಷಾದಕರ ಸಂಗತಿ ಏನೆಂದರೆ, ಇಂತಹ ಬೋಧಕರು ಇಂದಿನ ದಿನ ಅಪರೂಪವಾಗಿದ್ದಾರೆ.

ಪೌಲನ ಮಾನಸಾಂತರದ ಮೊದಲು, ಆತನು ಸಂಪೂರ್ಣವಾಗಿ ಸೋತುಹೋಗಿದ್ದನು. ಆದರೆ ದೇವರು ಆತನನ್ನು ಬದಲಾಯಿಸಿದರು ಮತ್ತು ಆತನು ಪರಿಪೂರ್ಣನಾಗಿರದಿದ್ದರೂ, ಇತರರು ಅನುಸರಿಸಲು ಯೋಗ್ಯನಾದ ಒಂದು ಉತ್ತಮ ಮಾದರಿಯಾಗಿ ದೇವರು ಆತನನ್ನು ಪರಿವರ್ತಿಸಿದರು (ಫಿಲಿ. 3:12-14 ಓದಿಕೊಳ್ಳಿರಿ). (ಈ ಲೋಕದ ಅತ್ಯುತ್ತಮ ಕ್ರೈಸ್ತನು ಕೂಡ ಪರಿಪೂರ್ಣನಾಗಿರುವುದಿಲ್ಲ, ಆದರೆ ಆತನು ಕೇವಲ ಆ ಪರಿಪೂರ್ಣತೆಯ ಕಡೆಗೆ ಶ್ರದ್ಧೆಯಿಂದ ಸಾಗುತ್ತಿದ್ದಾನೆ.)

ಹಾಗಾಗಿ ನೀವು ಹಿಂದೆ ಸಂಪೂರ್ಣವಾಗಿ ಸೋತಿರುವವರಾಗಿದ್ದರೂ, ದೇವರು ನಿಮ್ಮನ್ನು ಇತರರು ಅನುಸರಿಸಬಹುದಾದ ಒಂದು ಮಾದರಿಯನ್ನಾಗಿ ಮಾಡಬಲ್ಲರು.

"ಕ್ರೈಸ್ತಲೋಕವು ಇಹಲೋಕದೊಂದಿಗೆ ರಾಜಿ ಮಾಡಿಕೊಳ್ಳುವುದರಲ್ಲಿ ಮತ್ತು ಲೌಕಿಕತನದಲ್ಲಿ ತೊಡಗಿರುವ ಈ ದಿನದಲ್ಲಿ, ಕ್ರೈಸ್ತಸಭೆಯ ಜೀವಿತ ಮತ್ತು ಸೇವೆಯನ್ನು ಉನ್ನತ ಮಟ್ಟಕ್ಕೆ ಏರಿಸುವುದು ನಮಗೆ ಕೊಡಲ್ಪಟ್ಟಿರುವ ಕರೆಯಾಗಿದೆ."

ನಾನು ಒಬ್ಬ ಬೋಧಕನನ್ನು ಗೌರವಿಸಿ, ಆತನನ್ನು ಒಬ್ಬ ಮಾದರಿಯಾಗಿ ಅನುಸರಿಸಬೇಕಾದರೆ, ಮೊದಲು ಆತನಲ್ಲಿ ಪ್ರಾಥಮಿಕವಾಗಿ ಈ ಕೆಳಗಿನ ಏಳು ಗುಣಲಕ್ಷಣಗಳು ಇವೆಯೋ ಎಂದು ನೋಡುತ್ತೇನೆ:

1.ಆತನು ತನ್ನನ್ನು ತಗ್ಗಿಸಿಕೊಂಡವನೂ, ಇತರರು ತನ್ನನ್ನು ಸುಲಭವಾಗಿ ಸಂಧಿಸಲು ಒಪ್ಪಿಕೊಳ್ಳುವವನೂ ಆಗಿರಬೇಕು.

ಯೇಸುವು ದೀನ ಮನಸ್ಸುಳ್ಳವನು ಮತ್ತು ಇತರರನ್ನು ತನ್ನ ಬಳಿಗೆ ಬರಮಾಡಿಕೊಳ್ಳಲು ಸಿದ್ಧನಾಗಿದ್ದವನು ಆಗಿದ್ದನು (ಮತ್ತಾ. 11:29). ಜನರು ಯೇಸುವನ್ನು ಯಾವುದೇ ಸಮಯದಲ್ಲಿ ಎಲ್ಲೇ ಆದರೂ ಭೇಟಿಮಾಡಬಹುದಾಗಿತ್ತು. ನಿಕೊದೇಮನು ಯೇಸುವನ್ನು ಮಧ್ಯರಾತ್ರಿಯಲ್ಲಿ ಭೇಟಿಯಾಗಲು ಸಾಧ್ಯವಾಯಿತು; ಮತ್ತು ಯಾರೇ ಆದರೂ ಯಾವುದೇ ಸಮಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಯೇಸುವಿನೊಂದಿಗೆ ಮಾತನಾಡಬಹುದಾಗಿತ್ತು. ಯೇಸುವಿನ ದೀನತೆಯಿಂದಾಗಿ ಆತನು ಬಡವರಿಗೆ ಸುವಾರ್ತೆಯನ್ನು ಸಾರಲು ಆಸಕ್ತನಾಗಿದ್ದನು (ಲೂಕ. 4:18 ಓದಿಕೊಳ್ಳಿರಿ). ಪೌಲನು ದೀನನಾಗಿದ್ದನು ಮತ್ತು ಆತನು ತನ್ನ ತಪ್ಪುಗಳನ್ನು ತಕ್ಷಣವೇ ಒಪ್ಪಿಕೊಂಡು, ಒಡನೆಯೇ ಇತರರಿಂದ ಕ್ಷಮೆ ಕೇಳುತ್ತಿದ್ದನು (ಅ.ಕೃ. 23:1-5). ನಾನು ಎಂತಹ ಬೋಧಕರನ್ನು ಮಾತ್ರ ಅನುಸರಿಸುತ್ತೇನೆಂದರೆ, ಶ್ರೀಮಂತರನ್ನು ಮತ್ತು ಬಡವರನ್ನು ಒಂದೇ ರೀತಿಯಾಗಿ ಪರಿಗಣಿಸುವವರು, "ತಾವು ಇತರರಿಗಿಂತ ಹೆಚ್ಚಿನವರು" ಎಂಬ ಮನೋಭಾವವನ್ನು ಇರಿಸಿಕೊಳ್ಳದವರು, ತಮ್ಮ ತಪ್ಪುಗಳಿಗಾಗಿ ತಡಮಾಡದೆ ಕ್ಷಮೆ ಕೇಳುವವರು ಮತ್ತು ಯಾವಾಗಲೂ "ಸಾಮಾನ್ಯ ಸಹೋದರರಾಗಿ" ಇರುವಂತವರು.

2.ಆತನು ಎಂದಿಗೂ ಯಾರಿಂದಲೂ ಹಣವನ್ನು ಕೇಳಬಾರದು - ತನಗಾಗಿ ಆಗಲೀ ಅಥವಾ ತನ್ನ ಸೇವೆಗಾಗಿ ಆಗಲೀ - ಮತ್ತು ಆತನು ಸರಳವಾಗಿ ಜೀವಿಸಬೇಕು.

ಆ ಬೋಧಕನು ಸ್ವೇಚ್ಛೆಯಿಂದ ಕೊಡಲ್ಪಟ್ಟ ಯಾವುದೇ ಕಾಣಿಕೆಯನ್ನು ಸ್ವೀಕರಿಸಿದರೆ, (ಪೌಲನು ಕೆಲವೊಮ್ಮೆ ಮಾಡಿದಂತೆ - ಫಿಲಿ. 4:16-18) - ಅದನ್ನು ತನಗಿಂತ ಹೆಚ್ಚು ಶ್ರೀಮಂತರಾದ ಜನರಿಂದ ಮಾತ್ರ ಸ್ವೀಕರಿಸಬೇಕು - ಮತ್ತು ತನಗಿಂತ ಬಡವರಾಗಿ ಇರುವವರಿಂದ ಎಂದಿಗೂ ಅಲ್ಲ. ಯೇಸು ಯಾರಿಂದಲೂ ತನ್ನ ಸ್ವಂತಕ್ಕಾಗಿ ಆಗಲೀ ಅಥವಾ ತನ್ನ ಸೇವೆಗಾಗಿ ಆಗಲೀ ಹಣವನ್ನು ಕೇಳಲಿಲ್ಲ. ಅದಲ್ಲದೆ ಅವರು ತನಗಿಂತ ಶ್ರೀಮಂತರಾಗಿ ಇರುವವರಿಂದ ಮಾತ್ರ ಕಾಣಿಕೆಗಳನ್ನು ಸ್ವೀಕರಿಸಿದರು (ಲೂಕ. 8:3).ಯೇಸುವು ಮತ್ತು ಪೌಲನು ಸರಳವಾಗಿ ಜೀವಿಸಿದರು. ನಾನು ಹಣದ ವಿಷಯದಲ್ಲಿ ಮತ್ತು ಭೌತಿಕ ವಸ್ತುಗಳ ವಿಷಯದಲ್ಲಿ ಯೇಸುವು ಮತ್ತು ಪೌಲನು ಹೊಂದಿದ್ದ ಮನೋಭಾವವನ್ನೇ ಹೊಂದಿರುವ ಬೋಧಕರನ್ನು ಮಾತ್ರ ಅನುಸರಿಸುತ್ತೇನೆ.

3.ಆತನು ಒಬ್ಬ ದೈವಿಕ ಮನುಷ್ಯನ ಸಾಕ್ಷಿಯನ್ನು ಹೊಂದಿರಬೇಕು.

ಆತನು ಪರಿಶುದ್ಧತೆಗಾಗಿ ಅತ್ಯಾಸಕ್ತನಾದ ಒಬ್ಬ ದೇವಭಕ್ತನು ಮತ್ತು ಪ್ರಾಮಾಣಿಕ ಮನುಷ್ಯನು ಎಂಬ ಹೆಸರನ್ನು ಗಳಿಸಿರಬೇಕು - ಯಾವುದರಲ್ಲೂ ತನ್ನ ಸ್ವಪ್ರಯೋಜನಕ್ಕಾಗಿ ಚಿಂತಿಸದವನೂ, ತನ್ನ ನಾಲಿಗೆಯನ್ನು ಹಿಡಿತದಲ್ಲಿ ಇರಿಸಿಕೊಳ್ಳುವವನು (ಯಾಕೋಬ. 1:26;ಎಫೆ. 4:26-31), ಸೋತಿರುವವರಿಗೆ ಕರುಣೆ ತೋರಿಸುವವನು ಮತ್ತು ತಾನು ಮಾಡುವ ಪ್ರಾರ್ಥನೆ, ಉಪವಾಸ ಅಥವಾ ತನ್ನ ಧರ್ಮಕಾರ್ಯಗಳನ್ನು ಇತರರ ಮುಂದೆ ತೋರಿಸಿಕೊಳ್ಳದವನು (ಮತ್ತಾ. 6:1-18)ಮತ್ತು ತನ್ನ ವೈರಿಗಳನ್ನು ಸಹ ಪ್ರೀತಿಸುವವನು (ಮತ್ತಾ. 5:44). ಆತನು ಎಲ್ಲಾ ವೃದ್ಧ ಸ್ತ್ರೀಯರು ಮತ್ತು ಯೌವನಸ್ಥ ಸ್ತ್ರೀಯರನ್ನು ತನ್ನ ಅಕ್ಕತಂಗಿಯರೆಂಬ ಪರಿಶುದ್ಧ ಮನೋಭಾವದಿಂದ ನೋಡುವವನೆಂಬ ಒಳ್ಳೆಯ ಸಾಕ್ಷಿಯನ್ನು ಹೊಂದಿರಬೇಕು (1 ತಿಮೊ. 5:2). ನಾನು ನನ್ನ ಜೀವಿತದಲ್ಲಿ ಇಂತಹ ದೇವಭಕ್ತಿಯ ಸುವಾಸನೆಯುಳ್ಳಂತ ಬೋಧಕರನ್ನು ಮಾತ್ರ ಅನುಸರಿಸುತ್ತೇನೆ.

4.ಆ ಬೋಧಕನು ತನ್ನ ಮಕ್ಕಳು ಕರ್ತನನ್ನು ಪ್ರೀತಿಸುವಂತೆ ಅವರನ್ನು ಬೆಳೆಸಿರಬೇಕು.

ಆ ಬೋಧಕನ ಮನೆಯಲ್ಲಿ ಮಕ್ಕಳು ತಂದೆಯಾದ ಆತನಿಗೆ ವಿಧೇಯರಾಗಿ ಇರಬೇಕು. ಪವಿತ್ರಾತ್ಮನು ತಿಳಿಸುವುದೇನೆಂದರೆ, ಒಬ್ಬ ಮನುಷ್ಯನ ಮಕ್ಕಳು ಕರ್ತನನ್ನು ಪ್ರೀತಿಸದವರು ಅಥವಾ ತಮ್ಮ ತಂದೆಗೆ ಅವಿಧೇಯರು ಆಗಿದ್ದಲ್ಲಿ, ಆತನು ಸಭಾ ಹಿರಿಯನಾಗಿ ನೇಮಕಗೊಳ್ಳಲು ಅರ್ಹನಲ್ಲ(1 ತಿಮೊ. 3:4,5; ತೀತ. 1:6).ನಮ್ಮ ಮಕ್ಕಳು ನಮ್ಮನ್ನು ಬೇರೆ ಎಲ್ಲರಿಗಿಂತಲೂ ಚೆನ್ನಾಗಿ ಅರಿತಿದ್ದಾರೆ, ಏಕೆಂದರೆ ಮನೆಯಲ್ಲಿ ಅವರು ನಮ್ಮನ್ನು ಎಲ್ಲಾ ಸಮಯದಲ್ಲಿ ವೀಕ್ಷಿಸುತ್ತಾರೆ. ಹಾಗಾಗಿ ನಾವು ಮನೆಯಲ್ಲಿ ದೇವಭಕ್ತಿಯಿಂದ ಜೀವಿಸುವುದನ್ನು ಅವರು ಕಂಡುಕೊಂಡರೆ, ಅವರು ಸಹ ದೇವರನ್ನು ಹಿಂಬಾಲಿಸುತ್ತಾರೆ. ಯಾವ ಬೋಧಕರು ತಮ್ಮ ಮನೆಗಳಲ್ಲಿ ಮಕ್ಕಳು ದೀನರಾಗಿರುವಂತೆ ಮತ್ತು ವಿಧೇಯರಾಗಿ ನಡೆಯುವಂತೆ ಮತ್ತು ಎಲ್ಲರೊಂದಿಗೆ ಗೌರವಭಾವದಿಂದ ವ್ಯವಹರಿಸುವಂತೆ ಬೆಳೆಸುತ್ತಾರೋ, ಅವರನ್ನು ಮಾತ್ರ ನಾನು ಅನುಸರಿಸುತ್ತೇನೆ.

5.ಆ ಬೋಧಕನು ಯಾರಿಗೂ ಹೆದರದೆ, ದೇವರ ಸಕಲ ಸಂಕಲ್ಪವನ್ನು ಬೋಧಿಸುವವನು ಆಗಿರಬೇಕು.

ಆತನು ಹೊಸ ಒಡಂಬಡಿಕೆಯಲ್ಲಿ ಬರೆಯಲ್ಪಟ್ಟಿರುವ ಪ್ರತಿಯೊಂದು ವಿಷಯವನ್ನು ಸಾರುವಾಗ - ಪ್ರತಿಯೊಂದು ಆಜ್ಞೆಯನ್ನು ಮತ್ತು ಪ್ರತಿಯೊಂದು ವಾಗ್ದಾನವನ್ನು - ಯಾವುದೇ ಜನರ ಮೆಚ್ಚುಗೆಯನ್ನು ಪಡೆಯುವುದಕ್ಕಾಗಿ ಅದನ್ನು ಮಾಡಬಾರದು (ಅ.ಕೃ. 20:27; ಗಲಾತ್ಯದವರಿಗೆ 1:10).ಆತನು ನಿಜವಾಗಿ ಯೇಸುವಿನಂತೆ ಮತ್ತು ಪೌಲನಂತೆ ಸತತವಾಗಿ ಪವಿತ್ರಾತ್ಮನ ಅಭಿಷೇಕವನ್ನು ಹೊಂದುತ್ತಿದ್ದರೆ, ಆಗ ಆತನ ಸಂದೇಶಗಳು ಸವಾಲುಗೊಳಿಸುವಂತದ್ದು ಮತ್ತು ಪ್ರೋತ್ಸಾಹಿಸುವಂತದ್ದಾಗಿರುತ್ತವೆ. ಯಾರ ಸಂದೇಶಗಳಲ್ಲಿ ದೇವರ ಅಭಿಷೇಕವನ್ನು ನಾನು ಕಾಣುತ್ತೇನೋ - ನಾನು ಅಂತಹ ಬೋಧಕರನ್ನು ಮಾತ್ರ ಅನುಸರಿಸುತ್ತೇನೆ.

6.ಸ್ಥಳೀಯ ಸಭೆಯು ಕ್ರಿಸ್ತನ ದೇಹವನ್ನು ತೋರಿಸಿಕೊಡುವಂತೆ ಅದನ್ನು ಕಟ್ಟುವ ಅತ್ಯಾಸಕ್ತಿ ಆತನಲ್ಲಿ ಇರಬೇಕು.

ಯೇಸುವು ಲೋಕಕ್ಕೆ ಬಂದದ್ದು ಜನರನ್ನು ಎಲ್ಲಾ ಪಾಪಗಳಿಂದ ಬಿಡುಗಡೆಗೊಳಿಸುವುದಕ್ಕಾಗಿ ಮಾತ್ರವಲ್ಲದೆ, ತನ್ನ ಸಭೆಯನ್ನು ಕಟ್ಟುವ ಸಲುವಾಗಿಯೂ ಆಗಿತ್ತು - ಸಭೆಯು ಆತನ ಜೀವಿತವನ್ನು ತೋರಿಸುವಂತ ಒಂದು ದೇಹವಾಗಿರಬೇಕು, ಎಂಬುದು ಆತನ ಉದ್ದೇಶವಾಗಿತ್ತು (ಮತ್ತಾ. 16:18).ಅದೇ ರೀತಿ, ಕ್ರಿಸ್ತನ ದೇಹವಾಗಿ ಕಾರ್ಯ ಮಾಡುವ ಇಂತಹ ಸ್ಥಳೀಯ ಸಭೆಗಳನ್ನು ಎಲ್ಲೆಡೆಯೂ ಕಟ್ಟುವ ಅತ್ಯಾಸಕ್ತಿ ಪೌಲನಲ್ಲಿ ಇತ್ತು (ಎಫೆ. 4:15,16).ಆತನು ಈ ಕಾರ್ಯವನ್ನು ಸಾಧಿಸುವುದಕ್ಕಾಗಿ ಬಹಳವಾಗಿ ಶ್ರಮಿಸಿದನು (ಕೊಲೊ. 1:28,29). ಯಾವ ಬೋಧಕರು (ಅವರು ಸೌವಾರ್ತಿಕರು ಅಥವಾ ಉಪದೇಶಕರು ಅಥವಾ ಪ್ರವಾದಿಗಳು ಆಗಿದ್ದರೂ) ತಮ್ಮ ವರಗಳನ್ನು ಸ್ಥಳೀಯ ಸಭೆಗಳನ್ನು ಕ್ರಿಸ್ತನ ದೇಹವಾಗಿ ಕಟ್ಟಲು ಉಪಯೋಗಿಸುತ್ತಾರೋ, ನಾನು ಅವರನ್ನು ಮಾತ್ರ ಅನುಸರಿಸುತ್ತೇನೆ.

7.ಆತನು ತನ್ನ ಆತ್ಮವನ್ನು ಮತ್ತು ತನ್ನ ಧ್ಯೇಯವನ್ನು ಇರಿಸಿಕೊಂಡಿರುವ ಕೆಲವು ಸಹ-ಕಾರ್ಯಕರ್ತರನ್ನಾದರೂ ಸಿದ್ಧಗೊಳಿಸಿರಬೇಕು.

ಒಬ್ಬ ದೈವಿಕ ಬೋಧಕನು ತನ್ನ ಮುಂದಿನ ಪೀಳಿಗೆಯಲ್ಲಿ ಕರ್ತನಿಗಾಗಿ ಪರಿಶುದ್ಧ ಸಾಕ್ಷಿಯನ್ನು ಉಳಿಸಿಕೊಳ್ಳಬೇಕು, ಎಂಬ ಕಾಳಜಿಯನ್ನು ಸದಾ ಹೊಂದಿರುತ್ತಾನೆ. ಯೇಸುವು ತನ್ನ ಕಾರ್ಯವನ್ನು ಮುಂದುವರಿಸಲಿಕ್ಕಾಗಿ ತನ್ನ ಆತ್ಮವನ್ನೇ ಹೊಂದಿದ್ದ ಮತ್ತು ಸೇವಾಕಾರ್ಯದಲ್ಲಿ ತನ್ನ ಗುಣಮಟ್ಟವನ್ನು ಉಳಿಸಿಕೊಳ್ಳುವ 11 ಮಂದಿ ಶಿಷ್ಯರನ್ನು ಎಬ್ಬಿಸಿದರು (ತರಬೇತುಗೊಳಿಸಿದರು). ಪೌಲನು ತನ್ನ ಕಾರ್ಯವನ್ನು ಯಥಾರ್ಥವಾಗಿ ಮುಂದುವರಿಸುವುದಕ್ಕಾಗಿ ತನ್ನ ದೀನತೆಯ ಆತ್ಮ ಮತ್ತು ನಿಸ್ವಾರ್ಥ ಮನೋಭಾವವನ್ನು ಹೊಂದಿದ್ದ ತಿಮೊಥೆಯನನ್ನು ಮತ್ತು ತೀತನನ್ನು ಬೆಳೆಸಿದನು. (ಫಿಲಿ. 2:19-21;2 ಕೊರಿ. 7:13-15).ಮೇಲೆ ತಿಳಿಸಿರುವ ಗುಣಗಳನ್ನು ಹೊಂದಿರುವ ಕೆಲವು ಸಹ-ಕಾರ್ಯಕರ್ತರನ್ನಾದರೂ ತಯಾರು ಮಾಡಿರುವ ಬೋಧಕರನ್ನು ಮಾತ್ರ ನಾನು ಅನುಸರಿಸುತ್ತೇನೆ.

ನೀವು ಒಬ್ಬ ಬೋಧಕರಾಗುವುದಕ್ಕಾಗಿ ದೇವರಿಂದ ಕರೆಯಲ್ಪಟ್ಟಿದ್ದರೆ, ಕರ್ತನು ನಿಮ್ಮನ್ನು ಆತನ ಪವಿತ್ರಾತ್ಮನಿಂದ ಸತತವಾಗಿ ಅಭಿಷೇಕಿಸುವಂತೆ ಮತ್ತು ಮೇಲೆ ತಿಳಿಸಿರುವಂತ ಎಲ್ಲಾ ಗುಣಲಕ್ಷಣಗಳನ್ನು ನೀವು ಹೊಂದಬೇಕೆಂದು ನೀವು ಪ್ರಾರ್ಥಿಸಬೇಕು. ಈ ರೀತಿಯಾಗಿ ನೀವು ಇತರರು ಅನುಸರಿಸಲು ಯೋಗ್ಯವಾದ ಒಂದು ಮಾದರಿಯಾಗಬಹುದು.

ಕ್ರೈಸ್ತಲೋಕವು ಇಹಲೋಕದೊಂದಿಗೆ ರಾಜಿ ಮಾಡಿಕೊಳ್ಳುವುದರಲ್ಲಿ ಮತ್ತು ಲೌಕಿಕತನದಲ್ಲಿ ತೊಡಗಿರುವ ಈ ದಿನದಲ್ಲಿ, ಕ್ರೈಸ್ತಸಭೆಯ ಜೀವಿತ ಮತ್ತು ಸೇವೆಯನ್ನು ಉನ್ನತ ಮಟ್ಟಕ್ಕೆ ಏರಿಸುವುದು ನಮಗೆ ಕೊಡಲ್ಪಟ್ಟಿರುವ ಕರೆಯಾಗಿದೆ.