WFTW Body: 

ನಿಮ್ಮ ಜೀವನದಲ್ಲಿ ಶೋಧನೆಗಳು ಬರುವುದಕ್ಕೆ ಕಾರಣವೇನೆಂದರೆ, ಈ ಶೋಧನೆಗಳು "ಚಿನ್ನವನ್ನು ಬೆಂಕಿಯಲ್ಲಿ ಪುಟಹಾಕಿದಂತೆ," ನಿಮ್ಮ ನಂಬಿಕೆ ನಿಜವಾದದ್ದೋ ಎಂದು ಪರೀಕ್ಷಿಸುತ್ತವೆ (1 ಪೇತ್ರ. 1:7). ಚಿನ್ನವನ್ನು ಭೂಮಿಯ ಆಳವಾದ ಪ್ರದೇಶದಿಂದ ಅಗೆದು ತೆಗೆದಾಗ ಅದು ಶುದ್ಧವಾಗಿ ಇರುವುದಿಲ್ಲ. ಅದನ್ನು ಶುದ್ಧೀಕರಿಸುವ ಒಂದೇ ಒಂದು ವಿಧಾನ, ಅದನ್ನು ಬೆಂಕಿಗೆ ಹಾಕುವುದು. ಅದನ್ನು ಸಾಬೂನು ಮತ್ತು ನೀರಿನಿಂದ ಉಜ್ಜಿ ತೊಳೆದು ಸ್ವಚ್ಛಗೊಳಿಸಲು ಆಗುವುದಿಲ್ಲ. ಹಾಗೆ ಮಾಡುವುದರಿಂದ, ಅದರಲ್ಲಿರುವ ಮಣ್ಣು ಮತ್ತು ಕೊಳೆಯನ್ನು ಮಾತ್ರ ತೆಗೆಯಬಹುದು. ಆದರೆ ಚಿನ್ನದೊಳಗೆ ಮಿಶ್ರವಾಗಿರುವ ಲೋಹಗಳನ್ನು ತೆಗೆಯಬೇಕಾದರೆ, ಅದನ್ನು ಬೆಂಕಿಗೆ ಹಾಕಬೇಕಾಗುತ್ತದೆ. ಆಗ ಅದರಲ್ಲಿ ಸೇರಿಕೊಂಡಿರುವ ಲೋಹಗಳು ಕರಗಿ ಶುದ್ಧ ಬಂಗಾರವು ಹೊರಬರುತ್ತದೆ. ನೀವು ಎದುರಿಸುವ ಶೋಧನೆಗಳು ಉರಿಯುತ್ತಿರುವ ಬೆಂಕಿಯ ಜ್ವಾಲೆಯ ಹಾಗೆ ಇರಬಹುದು. ಅವು ನೋವನ್ನು ಉಂಟುಮಾಡುತ್ತವೆ, ಮತ್ತು ನಿಮ್ಮ ದೇಹಕ್ಕೆ ಉರಿಯುವ ಅನುಭವ ಉಂಟಾಗಬಹುದು. ಇಂತಹ ಅನುಭವದ ಏಕೈಕ ಉದ್ದೇಶ, ನಿಮ್ಮ ಜೀವನದ ಅಶುದ್ಧ ಸಂಗತಿಗಳನ್ನು ತೆಗೆದುಹಾಕಿ ಸ್ವಚ್ಛಗೊಳಿಸುವುದಾಗಿದೆ. ಉದಾಹರಣೆಗಾಗಿ, ಕೆಲವು ದೇಶಗಳಲ್ಲಿ ಕ್ರೈಸ್ತರು ಸಂಕಟಗಳಿಗೆ ಗುರಿಯಾಗುತ್ತಾರೆ, ಮತ್ತು ಅವರ ಆಸ್ತಿ-ಸ್ವತ್ತುಗಳನ್ನು ಅವರ ಕೈಯಿಂದ ಕಿತ್ತುಕೊಳ್ಳಲಾಗುತ್ತದೆ. ಇದರ ಫಲಿತಾಂಶವೇನು? ಅವರು ಒಳ್ಳೆಯ ಯಾತ್ರಾರ್ಥಿಗಳು ಆಗುತ್ತಾರೆ. ಎಲ್ಲವನ್ನೂ ಕಳಕೊಂಡ ಮೇಲೆ ಅವರಲ್ಲಿ ಆಸ್ತಿ-ಸಂಪತ್ತಿನ ಮೋಹ ಇರುವುದಿಲ್ಲ. ಆದರೆ ಇಂತಹ ಸಂಕಟ ಪರಿಸ್ಥಿತಿ ಇಲ್ಲದಿರುವ ದೇಶಗಳಲ್ಲಿ, ಅತಿ ಉತ್ತಮ ವಿಶ್ವಾಸಿಗಳಲ್ಲೂ ಸಹ ಸ್ವತ್ತು, ಸಂಪತ್ತಿನ ವ್ಯಾಮೋಹ ಇರುತ್ತದೆ. ಹಾಗಿದ್ದರೂ ನಾವು ನಮ್ಮಲ್ಲಿ ಇಂತಹ ವ್ಯಾಮೋಹ ಇಲ್ಲವೆಂದು ಕಲ್ಪಿಸಿಕೊಂಡು, ನಮ್ಮನ್ನೇ ಮೋಸ ಮಾಡಿಕೊಳ್ಳುತ್ತೇವೆ. ಹಾಗಾಗಿ, ನಮ್ಮ ದೇಶದಲ್ಲಿಯೂ ಒಂದು ದಿನ ಸಂಕಟಗಳು ಬರುವುದನ್ನು ದೇವರು ಅನುಮತಿಸಬಹುದು - ಮತ್ತು ನಾವು ಇದರ ಮೂಲಕ ಶುದ್ಧಿಗೊಳ್ಳುತ್ತೇವೆ.

ರಷ್ಯಾ ದೇಶವನ್ನು ಕಮ್ಯೂನಿಸ್ಟರು ಆಳುತ್ತಿದ್ದ ಸಮಯದಲ್ಲಿ, ಅಲ್ಲಿದ್ದ ಕ್ರೈಸ್ತರಿಗೆ ಕಾಲೇಜು ವಿದ್ಯಾಭ್ಯಾಸ ಮತ್ತು ಒಳ್ಳೆಯ ಕೆಲಸಗಳು ಸಿಗುತ್ತಿರಲಿಲ್ಲವೆಂದು ನಾನು ಕೇಳಿದ್ದೇನೆ. ಅವರಿಗೆ ಸಿಗುತ್ತಿದ್ದ ನೌಕರಿಗಳೆಂದರೆ, ರಸ್ತೆಗಳ ಸ್ವಚ್ಛತಾ ಕರ್ಮಚಾರಿಗಳ ಹಾಗಿನ ಕೆಳಮಟ್ಟದ ನೌಕರಿಗಳು. ಇಂತಹ ಸ್ಥಿತಿಯಲ್ಲಿ, ದೊಡ್ಡ ಹುದ್ದೆ ಅಥವಾ ಉತ್ತಮ ಸ್ಥಾನಮಾನಗಳಿಂದ ಬರುವ ಅಹಂಭಾವದಿಂದ ನಾವು ಬಹಳ ಸುಲಭವಾಗಿ ಬಿಡುಗಡೆಗೊಳ್ಳುತ್ತೇವೆ. ಬಂಗಾರದ ಎಲ್ಲಾ ಕಲ್ಮಶಗಳು ಸುಡಲ್ಪಟ್ಟಾಗ ಅದು ಶುದ್ಧವಾಗುವಂತೆ, ನಾವು ಸಂಪೂರ್ಣವಾಗಿ ಪರಿಶುದ್ಧರಾಗುತ್ತೇವೆ. ಇದೇ ಕಾರಣದಿಂದಾಗಿ, ಇಂದು ಲೋಕದಲ್ಲಿ ಅತಿ ಶ್ರೇಷ್ಠ ಕ್ರೈಸ್ತರು ಧಾರ್ಮಿಕ ಹಿಂಸಾಚಾರ ಹರಡಿರುವ ಪ್ರದೇಶಗಳಲ್ಲಿ ನಿಮಗೆ ಕಂಡುಬರುತ್ತಾರೆ. ಹಾಗಾಗಿ ನಾನು ಕ್ರೈಸ್ತರಿಗೆ ಹಿಂಸೆ ಬರಕೂಡದು ಎಂಬುದಾಗಿ ಪ್ರಾರ್ಥಿಸುವುದಿಲ್ಲ, ಏಕೆಂದರೆ ಆಗ ನಾನು ಸಭೆಯ ಶುದ್ಧೀಕರಣದ ವಿರುದ್ಧವಾಗಿ ಪ್ರಾರ್ಥಿಸಿದಂತೆ ಆಗುತ್ತದೆ. "ಶೋಧನೆಗಳು ಬರಲಿ" ಎಂದಾಗಲೀ, ಅಥವಾ "ಶೋಧನೆಗಳು ಬಾರದಿರಲಿ" ಎಂದಾಗಲೀ ನಾನು ಪ್ರಾರ್ಥಿಸುವುದಿಲ್ಲ. ನಮಗೆ ಯಾವ ಸಮಯದಲ್ಲಿ ಯಾವುದು ಉತ್ತಮವಾದದ್ದು, ಎಂದು ಕರ್ತರಿಗೆ ಗೊತ್ತಿದೆ. ಹಾಗಾಗಿ ನಾನು ಈ ನಿರ್ಧಾರವನ್ನು ಅವರಿಗೇ ಬಿಡುತ್ತೇನೆ. ಅವರ ನಿರ್ಧಾರ ಏನಿದ್ದರೂ ಅದು ನನಗೆ ಒಪ್ಪಿಗೆಯಾಗುತ್ತದೆ. ನಾವು ದೇವರ ನಿಜವಾದ ಕೃಪೆಯನ್ನು ಪಡೆದಾಗ ಇಂತಹ ಮನೋಭಾವ ನಮ್ಮದಾಗುತ್ತದೆ.

ಅಪೊಸ್ತಲನಾದ ಪೇತ್ರನು ಮುಂದುವರಿದು, "ಕ್ರಿಸ್ತನು ಪ್ರತ್ಯಕ್ಷನಾಗುವಾಗ, ನಂಬಿಕೆಯು ಶೋಧಿತವಾಗಿ (ಆತನಿಗೆ) ಕೀರ್ತಿ ಪ್ರಭಾವ ಮಾನಗಳನ್ನು ಉಂಟುಮಾಡುತ್ತದೆ," ಎಂದು ಹೇಳುತ್ತಾನೆ. ನಾವು ಯೇಸುವನ್ನು ನೋಡಿರದಿದ್ದರೂ, ಈ ಪರಿಶೋಧನೆಗಳ ಮಧ್ಯದಲ್ಲಿ ಆತನನ್ನು ಪ್ರೀತಿಸುತ್ತೇವೆ, ಆತನಲ್ಲಿ ನಂಬಿಕೆ ಇಡುತ್ತೇವೆ ಮತ್ತು ಸಂತೋಷದಿಂದ ಹರ್ಷಿಸುತ್ತೇವೆ (1 ಪೇತ್ರ. 1:8,9). ಪೇತ್ರನು ಯೇಸುವನ್ನು ದೈಹಿಕವಾಗಿ ನೋಡಿದ್ದನು. ಆದರೆ ಯೇಸುವು ಹೇಳಿದ ಮಾತು, "ನನ್ನನ್ನು ನೋಡದೆ ನಂಬಿದವರು ಧನ್ಯರು" (ಯೋಹಾನ 20:29). ಈ ವಾಕ್ಯವನ್ನು ನಿಮ್ಮಲ್ಲಿ ಎಷ್ಟು ಜನರು ನಂಬುತ್ತೀರೋ, ನನಗೆ ಗೊತ್ತಿಲ್ಲ - ಪೇತ್ರನಂತೆ ಯೇಸುವನ್ನು ದೃಷ್ಟಿಸಿ ನೋಡಿದವರಿಗಿಂತ ಹೆಚ್ಚಾಗಿ, ಆತನನ್ನು ದೈಹಿಕವಾಗಿ ಕಂಡಿರದ ನಾವು ಧನ್ಯರು, ಎಂಬುದಾಗಿ. ನಾನು ಈ ಮಾತನ್ನು ಮನಃಪೂರ್ವಕವಾಗಿ ನಂಬುತ್ತೇನೆ, ಏಕೆಂದರೆ ಇದು ಯೇಸುವಿನ ಮಾತಾಗಿದೆ. ಮುಂದೆ ಪೇತ್ರನು ತಿಳಿಸುವಂತೆ, ನಾವು ಈ ರೀತಿಯಾಗಿ ನಾನಾ ಕಷ್ಟಗಳನ್ನು ಎದುರಿಸುತ್ತಾ ನಡೆದಾಗ, ಅದರ "ಅಂತ್ಯಫಲ ನಮ್ಮ ಆತ್ಮರಕ್ಷಣೆಯು" (1 ಪೇತ್ರ. 1:9). ಅಪೊಸ್ತಲರು "ನರಕದಿಂದ ರಕ್ಷಣೆ" ಪಡೆಯುವುದಕ್ಕಿಂತ ಹೆಚ್ಚಾಗಿ "ಆತ್ಮರಕ್ಷಣೆಯ" ಕುರಿತಾಗಿ ಮಾತನಾಡಿದರು.

ನಮ್ಮ ಆತ್ಮವು ಆದಾಮನಿಂದ ಸ್ವಾರ್ಥತೆ, ಅಹಂಕಾರ ಮತ್ತು ಇನ್ನೂ ಅನೇಕ ನೀಚ ಅಭ್ಯಾಸಗಳನ್ನು ಪಡೆದುಕೊಂಡಿದೆ. ಆದಾಮನಿಂದ ಬಂದಿರುವ ಎಲ್ಲಾ ಕೆಟ್ಟತನದಿಂದ - ಅಂದರೆ ಲೌಕಿಕ ಸಂಗತಿಗಳ ಮೋಹ, ಸ್ವ-ಗೌರವದ ಆಸೆ, ನಮ್ಮ ಸ್ವಾರ್ಥ ಜೀವನ ಶೈಲಿ, ಇಂಥವುಗಳಿಂದ ನಾವು ಬಿಡುಗಡೆಯನ್ನು ಹೊಂದಬೇಕು. ಉರಿಯುವ ಬೆಂಕಿಯ ಹಾಗಿನ ಪರಿಶೋಧನೆಗಳು ಮತ್ತು ಸಂಕಟಗಳು ನಮ್ಮನ್ನು ಇವುಗಳಿಂದ ಬಿಡುಗಡೆಗೊಳಿಸಲು ವಿಶೇಷವಾಗಿ ಸಹಾಯ ಮಾಡುತ್ತವೆ.

ಮಾನಸಿಕ ನ್ಯೂನ್ಯತೆಯುಳ್ಳ ಮಗುವನ್ನು ಪಡೆಯುವ ಒಂದು ಕುಟುಂಬಕ್ಕೆ ಉಂಟಾಗುವ ಶೋಧನೆಯ ಕುರಿತಾಗಿ ಯೋಚಿಸಿರಿ. ಕೆಲ ಜನರು ಇದನ್ನು ದೊಡ್ಡ ದುರದೃಷ್ಟವೆಂದು ತಿಳಿಯುತ್ತಾರೆ. ನಮ್ಮಲ್ಲಿ ಯಾರೂ ಸಹ ಇಂತಹ ಮಕ್ಕಳನ್ನು ಪಡೆಯಬೇಕೆಂದು ಪ್ರಾರ್ಥಿಸುವುದಿಲ್ಲ. ಆದರೆ ಒಂದು ವೇಳೆ ದೇವರನ್ನು ಪ್ರೀತಿಸುವ ಒಂದು ಕುಟುಂಬದಲ್ಲಿ ಇಂತಹ ಒಂದು ಮಗುವು ಜನಿಸುವುದನ್ನು ದೇವರು ಅನುಮತಿಸಿದರೆ, ಆಗ ಇದು ಅವರ ಒಳ್ಳೆಯದಕ್ಕಾಗಿ ನಡೆಯುವಂತೆ ದೇವರು ದೃಢಪಡಿಸುತ್ತಾರೆಂದು ನಾವು ನಿಶ್ಚಯವಾಗಿ ಹೇಳಬಹುದು. ನಾನು ಗಮನಿಸಿರುವಂತೆ, ಇಂತಹ ಮಕ್ಕಳನ್ನು ಪಡೆದಿರುವ ಕುಟುಂಬದ ಇತರ ಮಕ್ಕಳಲ್ಲಿ, ಸ್ನೇಹಶೀಲತೆ, ಮೃದುತನ ಮತ್ತು ತ್ಯಾಗ ಮತ್ತು ಸೇವೆಯ ಆತ್ಮ ಬೇರೆ ಕುಟುಂಬಗಳಿಗಿಂತ ಹೆಚ್ಚಾಗಿ ಕಂಡುಬರುತ್ತದೆ. ಎಷ್ಟೋ ಸಲ ಎಲ್ಲಾ ಮಕ್ಕಳು ಜಾಣರು ಮತ್ತು ಚುರುಕಾಗಿರುವ ಹೆತ್ತವರ ಹೃದಯಗಳು ತಮಗೇ ಅರಿವಿಲ್ಲದಂತೆ ಹೆಮ್ಮೆಯಿಂದ ತುಂಬಿರುತ್ತವೆ. ಅಹಂಕಾರವು ಪರಲೋಕಕ್ಕೆ ಸೇರಿದ್ದಲ್ಲ, ಅದು ನರಕದಲ್ಲಿ ಕಾಣಿಸುವ ಸ್ವಭಾವವಾಗಿದೆ. ಆದರೆ, ದುರದೃಷ್ಟಕರ ಸಂಗತಿಯೆಂದರೆ, ಅನೇಕ ವಿಶ್ವಾಸಿಗಳ ಕುಟುಂಬದಲ್ಲಿ ಅಹಂಕಾರವು ಕಂಡುಬರುತ್ತದೆ.

ದೇವರು ತನ್ನ ಎಲ್ಲಾ ಮಕ್ಕಳು ಕಷ್ಟ ಸಂಕಟಗಳನ್ನು ಎದುರಿಸುವುದನ್ನು ಅನುಮತಿಸುತ್ತಾರೆ. ಅವುಗಳನ್ನು ಕಳುಹಿಸಲು ಸರಿಯಾದ ಸಮಯ ಯಾವುದೆಂದು ಅವರಿಗೆ ತಿಳಿದಿದೆ. ನಾವು ಕರ್ತನ ಮುಂದೆ ನಿಂತಾಗ, ದೇವರು ನಮ್ಮ ಜೀವನದಲ್ಲಿ ಅನುಮತಿಸಿದ ಒಂದೇ ಒಂದು ಶೋಧನೆಯನ್ನೂ ಸಹ ಅವರು ತಪ್ಪಾಗಿ ಕಳುಹಿಸಲಿಲ್ಲವೆಂದು ನಮಗೆ ಅರ್ಥವಾಗಲಿದೆ. ಅವರು ನಮ್ಮ ಜೀವನದಲ್ಲಿ ಅನುಮತಿಸಿದ ಒಂದೊಂದು ಶೋಧನೆಯೂ ನಮ್ಮನ್ನು ಚಿನ್ನದಂತೆ ಶುದ್ಧಿಗೊಳಿಸಲು ಬಂತೆಂದು ನಮಗೆ ಆ ದಿನದಲ್ಲಿ ಪ್ರಕಟವಾಗಲಿದೆ. ನೀವು ಈ ಮಾತನ್ನು ನಂಬಿದರೆ, ಎಲ್ಲಾ ಕ್ಷಣಗಳಲ್ಲಿ ಕರ್ತನಿಗೆ ಸ್ತೋತ್ರ ಸಲ್ಲಿಸುವಿರಿ!