WFTW Body: 

ದೇವರು ನಮ್ಮ ಬಲ ಮತ್ತು ಗರ್ವವನ್ನು ಮುರಿಯುವ ಮತ್ತೊಂದು ಮಾರ್ಗವೆಂದರೆ ನಮ್ಮ ನಾಯಕರ ಮೂಲಕ ನಮ್ಮನ್ನು ತಿದ್ದುವಂತದ್ದಾಗಿದೆ. ಬಹುತೇಕ ಎಲ್ಲಾ ವಿಶ್ವಾಸಿಗಳು ತಿದ್ದುವಿಕೆಯನ್ನು ಸ್ವೀಕರಿಸಿಕೊಳ್ಳುವುದು ಕಷ್ಟ ಎಂಬುದಾಗಿ ಕಂಡುಕೊಳ್ಳುತ್ತಾರೆ. ಎರಡು ವರ್ಷದ ಮಗುವು ಸಹ ತಿದ್ದುವಿಕೆಯನ್ನು ಸ್ವೀಕರಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ವಿಶೇಷವಾಗಿ ಬಹಿರಂಗವಾಗಿ ಎಲ್ಲರ ಎದುರು ತಿದ್ದುವಾಗ.

ಕೊನೆ ಬಾರಿ ಯಾವಾಗ ನೀವು ಬಹಿರಂಗವಾಗಿ ತಿದ್ದುವಿಕೆಯನ್ನು ಸಂತೋಷದಿಂದ ಒಪ್ಪಿಕೊಂಡಿದ್ದೀರಿ? ನಿಮ್ಮ ಜೀವಿತದಲ್ಲಿ ಒಂದು ಬಾರಿಯಾದರೂ ಒಪ್ಪಿಕೊಂಡಿದ್ದೀರಾ? ಇಲ್ಲವಾದಲ್ಲಿ, ನೀವು ಆತ್ಮಿಕ ಅಧಿಕಾರದ ಕೊರತೆಯನ್ನು ಹೊಂದಿರುವುದು ಆಶ್ಚರ್ಯವೇನಲ್ಲ.

ಪೇತ್ರ ಮತ್ತು ಇಸ್ಕರಿಯೋತ ಯೂದನ ನಡುವೆ ಇದು ಒಂದು ದೊಡ್ಡ ವ್ಯತ್ಯಾಸವಾಗಿತ್ತು. ಕರ್ತನು ಶಿಲುಬೆಗೆ ಹೋಗುವುದನ್ನು ತಪ್ಪಿಸುವ ಮಾತನ್ನು ಪೇತ್ರನು ಮೂಢತನದಿಂದ ಹೇಳಿದಾಗ, ಕರ್ತರು ಆತನನ್ನು ಬಹಳ ತೀಕ್ಷ್ಣವಾಗಿ ಗದರಿಸಿ, "ಸೈತಾನನೇ, ನನ್ನ ಮುಂದೆ ನಿಲ್ಲಬೇಡ" ಎಂದು ಹೇಳಿದರು. ಇದು ಬಹಳ ಪ್ರಬಲವಾದ ಗದರಿಕೆಯಾಗಿತ್ತು, ಈ ರೀತಿ ಯೇಸು ಯಾವ ಮನುಷ್ಯನಿಗೂ ಗದರಿಸಿರಲಿಲ್ಲ. ಫರಿಸಾಯರಿಗೂ ಸಹ "ವಿಷಸರ್ಪಗಳೇ"ಎಂಬುದಾಗಿ ಮಾತ್ರ ಕರೆದರು. ಆದರೆ ಪೇತ್ರನು "ಸೈತಾನನೇ"ಎಂದು ಕರೆಸಿಕೊಂಡನು. ಯೇಸುವಿನ ಪ್ರಬಲವಾದ ಗದರಿಕೆಗಳು ಕೇವಲ ತನಗೆ ಹತ್ತಿರವಿದ್ದವರಿಗೆ ಮಾತ್ರ ಕಾಯ್ದಿರಿಸಲ್ಪಟ್ಟಿವೆ. ಆತನು ಯಾರನ್ನು ಹೆಚ್ಚಾಗಿ ಪ್ರೀತಿಸುತ್ತಾನೋ, ಅವರನ್ನು ಮಾತ್ರ ಹೆಚ್ಚಾಗಿ ಗದರಿಸುತ್ತಾನೆ (ಪ್ರಕಟನೆ 3:19).

ಇದಾದ ನಂತರ ತಕ್ಷಣವೇ, ಕರ್ತನ ಬೋಧನೆಯನ್ನು ಕೇಳಿ ಅನೇಕ ಶಿಷ್ಯರು ಬೇಸರಪಟ್ಟು ಆತನನ್ನು ಬಿಟ್ಟು ಹೋಗುತ್ತಿದ್ದಾಗ, ನೀವು ಸಹ ಹೊರಟು ಹೋಗಬೇಕೆಂದಿದ್ದೀರೋ ಎಂದು ಕರ್ತರು ತಮ್ಮ ಶಿಷ್ಯಂದಿರಿಗೆ ಕೇಳಿದರು. ಪೇತ್ರನು ಪ್ರತಿಕ್ರಿಯಿಸಿ, "ಕರ್ತನೇ, ನಾವು ಯಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವದ ವಾಕ್ಯಗಳು ಉಂಟಲ್ಲಾ"ಎಂದು ಹೇಳಿದನು (ಯೋಹಾನ 6:60, 66-68).ನಿತ್ಯ ಜೀವವನ್ನು ಉಂಟು ಮಾಡುವ ಯಾವ ಮಾತನ್ನು ಪೇತ್ರನು ಕೇಳಿದ್ದನು? "ನನ್ನ ಮುಂದೆ ನಿಲ್ಲಬೇಡ ಸೈತಾನನೇ"!

"ಪೇತ್ರನು ತಿದ್ದುವಿಕೆಗೆ ತನ್ನನ್ನು ತಗ್ಗಿಸಿಕೊಂಡದ್ದರಿಂದ, ದೇವರು ಆತನನ್ನು ಮೇಲಕ್ಕೇರಿಸಿದರು"

ತಿದ್ದುವಿಕೆಯ ಮಾತುಗಳು ನಮ್ಮನ್ನು ನಿತ್ಯಜೀವಕ್ಕೆ ನಡೆಸುವ ಮಾತುಗಳಾಗಿವೆ ಎಂಬುದಾಗಿ ನಾವು ನೋಡುತ್ತೇವಾ?

ಪೇತ್ರನು ತಿದ್ದುವಿಕೆಯನ್ನು ಅದೇ ರೀತಿಯಾಗಿ ನೋಡಿದನು ಮತ್ತು ಅದು ಅವನನ್ನು ಅಂತಹ ಮನುಷ್ಯನನ್ನಾಗಿ ಮಾಡಿತು.

ಮತ್ತೊಂದು ಸಂದರ್ಭದಲ್ಲಿ ಪೇತ್ರನು ಕರ್ತನಿಂದ ತಿದ್ದುವಿಕೆಯನ್ನು ಸ್ವೀಕರಿಸಿಕೊಂಡನು. ಕರ್ತನ ಕಡೇ ಭೋಜನದಲ್ಲಿ ಪೇತ್ರನು ಈ ರೀತಿ ಹೇಳುತ್ತಾನೆ - ಇತರೆ ಶಿಷ್ಯರು ಕರ್ತನನ್ನು ನಿರಾಕರಿಸಿದರೂ, ತಾನು ನಿರಾಕರಿಸುವುದಿಲ್ಲ. ಕರ್ತರು ತಕ್ಷಣವೇ ಈ ರೀತಿ ಪ್ರತಿಕ್ರಿಯಿಸುತ್ತಾರೆ, ಮುಂದಿನ 12 ಗಂಟೆಗಳೊಳಗೆ ಪೇತ್ರನು ಮೂರು ಬಾರಿ ತನ್ನನ್ನು ನಿರಾಕರಿಸುವನು ಎಂಬುದಾಗಿ. ಆದರೆ, ಪೇತ್ರನು ಆ ಪ್ರತಿಕ್ರಿಯೆಯಿಂದ ಬೇಸರ ಪಟ್ಟುಕೊಳ್ಳಲಿಲ್ಲ. ಪಂಚಾಶತ್ತಮ ದಿನದಂದು ಕರ್ತರು ಇಂತಹ ಮನುಷ್ಯನನ್ನು ತೆಗೆದುಕೊಂಡು ತನ್ನ ಮುಖ್ಯ ಅಪೊಸ್ತಲನನ್ನಾಗಿಯೂ, ಪ್ರತಿನಿಧಿಯನ್ನಾಗಿಯೂ ಮಾಡಿದರು.

"ಪೇತ್ರನು ತಿದ್ದುವಿಕೆಗೆ ತನ್ನನ್ನು ತಗ್ಗಿಸಿಕೊಂಡದ್ದರಿಂದ, ದೇವರು ಆತನನ್ನು ಮೇಲಕ್ಕೇರಿಸಿದರು".ತನ್ನ ಸ್ವಂತ ಅನುಭವದಿಂದ ಕಲಿತುಕೊಂಡು, ಪೇತ್ರನು ನಮ್ಮೆಲ್ಲರನ್ನು ಯಾವಾಗಲೂ ತಗ್ಗಿಸಿಕೊಳ್ಳುವಂತೆ 1 ಪೇತ್ರ 5:5,6 ರಲ್ಲಿ ಉತ್ತೇಜಿಸುತ್ತಾನೆ. ನಮ್ಮನ್ನು ನಾವು ತಗ್ಗಿಸಿಕೊಳ್ಳುವುದರಿಂದ ನಾವು ಏನನ್ನೂ ಕಳೆದುಕೊಳ್ಳುವುದಿಲ್ಲ. ಒಂದು ದಿನ ದೇವರು ನಮ್ಮನ್ನು ಮೇಲಕ್ಕೆತ್ತುವರು.

ತಿದ್ದುವಿಕೆಗೆ ಪೇತ್ರನ ಮನೋಭಾವದ ತದ್ವಿರುದ್ಧವಾಗಿ ಇಸ್ಕರಿಯೋತ ಯೂದನ ಮನೋಭಾವವನ್ನು ನೋಡಿರಿ. ಒಬ್ಬ ಸ್ತ್ರೀ ಬೆಲೆಯುಳ್ಳ ತೈಲದಿಂದ ಯೇಸುವನ್ನು ಅಭಿಷೇಕಿಸಿದಾಗ, ಆ ಹಣವನ್ನು ವ್ಯರ್ಥವಾಗಿ ಖರ್ಚು ಮಾಡುವುದಕ್ಕಿಂತ ಅದನ್ನು ಬಡವರಿಗೆ ನೀಡಬಹುದಾಗಿತ್ತು ಎಂದು ಯೂದನು ಹೇಳಿದನು (ಯೋಹಾನ 12:5; ಮತ್ತಾಯ 26:10-13). ಯೇಸು ಯೂದನನ್ನು ಬಹಳ ಮೃದುವಾಗಿ ತಿದ್ದಿದರು ಮತ್ತು ಆಕೆಯನ್ನು ಬಿಟ್ಟುಬಿಡು ಎಂದು ಹೇಳಿದರು. ಏಕೆಂದರೆ ಆಕೆಯು ಒಳ್ಳೆಯ ಕಾರ್ಯವನ್ನು ಮಾಡಿದ್ದಳು. ಆದರೆ ಯೂದನು ಬೇಸರ ಪಟ್ಟುಕೊಂಡನು.

ಮುಂದಿನ ವಚನದಲ್ಲಿಯೇ (ಮತ್ತಾಯ 26:14), ಯೂದನು ಮಹಾಯಾಜಕರ ಬಳಿಗೆ ಹೋಗಿ ಯೇಸುವನ್ನು ಹಿಡಿದುಕೊಡುವುದಕ್ಕೆ ಒಪ್ಪಂದ ಮಾಡಿಕೊಳ್ಳುವುದನ್ನು ನಾವು ಓದುತ್ತೇವೆ. ಇದರ ಸಮಯ ಬಹಳ ಗಮನಾರ್ಹವಾಗಿದೆ. ಯಾಕೆಂದರೆ ಯೇಸು ಯೂದನನ್ನು ಎಲ್ಲರ ಮುಂದೆ ತಿದ್ದಿದ್ದಕ್ಕಾಗಿ, ಅವನು ಮನನೊಂದನು.

ಯೂದನು ಆ ಸ್ತ್ರೀಯನ್ನು ಪರಿಗಣಿಸಿದ ರೀತಿ ಸರಿಯಿರಲಿಲ್ಲ ಎಂದು ಯೇಸು ಯೂದನಿಗೆ ಹೇಳಿದರು. ಇಷ್ಟು ಮಾತ್ರ ಆತನ ಅಸಮಾಧಾನಕ್ಕೆ ಸಾಕಾಗಿತ್ತು. ನೀವು ಮುರಿಯಲ್ಪಡದೇ ಇದ್ದಾಗ, ನಿಮ್ಮನ್ನು ಬೇಸರಪಡಿಸಲು ಒಂದು ಸಣ್ಣ ವಿಷಯ ಸಾಕು.

ಆದರೆ ಯೂದನ ಪ್ರತಿಕ್ರಿಯೆಯ ನಿತ್ಯತ್ವದ ಪರಿಣಾಮಗಳನ್ನು ನೋಡಿರಿ ಹಾಗೂ ಪೇತ್ರನ ಪ್ರತಿಕ್ರಿಯೆಯ ನಿತ್ಯತ್ವದ ಪರಿಣಾಮಗಳನ್ನು ನೋಡಿರಿ. ಇಬ್ಬರೂ ಸಹ ತಿದ್ದುವಿಕೆಯಿಂದ ಪರೀಕ್ಷಿಸಲ್ಪಟ್ಟರು. ಒಬ್ಬನು ವಿಫಲನಾದನು, ಮತ್ತೊಬ್ಬನು ತೇರ್ಗಡೆಯಾದನು.

ಇಂದು, ಇದೇ ರೀತಿಯಲ್ಲಿ ನಾವೂ ಪರೀಕ್ಷೆಗೆ ಒಳಗಾಗುತ್ತೇವೆ.

ಎಲ್ಲರ ಎದುರು ತಿದ್ದುವಿಕೆಯು ನಮ್ಮನ್ನು ಬೇಸರಪಡಿಸಿದರೆ, ನಾವು ಕೇವಲ ಮನುಷ್ಯರ ಗೌರವವನ್ನು ಎದುರು ನೋಡುತ್ತಿದ್ದೇವೆ ಎಂಬುದನ್ನು ಇದು ರುಜುವಾತುಪಡಿಸುತ್ತದೆ. ಇದು ನಿಜವಾದಲ್ಲಿ, ಈಗ ನಾವು ಇದನ್ನು ತಿಳಿದುಕೊಳ್ಳುವುದು ಒಳ್ಳೆಯದು. ಮನುಷ್ಯರ ಗೌರವವನ್ನು ಹುಡುಕುವುದರಿಂದ ನಮ್ಮನ್ನು ನಾವು ಶುದ್ಧೀಕರಿಸಿಕೊಳ್ಳಬಹುದು. ನಾವು ಮನುಷ್ಯರ ಅಭಿಪ್ರಾಯಗಳಿಗೆ ಎಷ್ಟು ದಾಸರಾಗಿದ್ದೇವೆ ಎಂಬುದನ್ನು ತೋರಿಸಲು ದೇವರು ಇಂತಹ ಸನ್ನಿವೇಶವನ್ನು ಅನುಮತಿಸಬಹುದು. ಆಗ ನಮ್ಮನ್ನು ನಾವು ಶುದ್ಧೀಕರಿಸಿ, ಇದರಿಂದ ಬಿಡುಗಡೆ ಹೊಂದಬಹುದು.

ಹೀಗಿರಲಾಗಿ, ಕರ್ತರು ಪವಿತ್ರಾತ್ಮನ ಮೂಲಕವಾಗಿ ನಮ್ಮನ್ನು ನೇರವಾಗಿ ತಿದ್ದಿದರೂ ಅಥವಾ ಬೇರೊಬ್ಬರ ಮೂಲಕವಾಗಿ ನಮ್ಮನ್ನು ತಿದ್ದಿದರೂ, ನಾವು ಎಲ್ಲಾ ಸಮಯಗಳಲ್ಲಿ ತಿದ್ದುವಿಕೆಯಲ್ಲಿ ಪೇತ್ರನ ಮನೋಭಾವವನ್ನು ಹೊಂದಿಕೊಳ್ಳೋಣ. ಇದು ನಮಗೆಲ್ಲರಿಗೂ ನಿತ್ಯಜೀವದ ಮಾರ್ಗವಾಗಿದೆ. ನಮ್ಮನ್ನು ನಾವು ತಗ್ಗಿಸಿಕೊಂಡಲ್ಲಿ, ನಾವು ದೇವರಿಂದ ಕೃಪೆಯನ್ನು ಸ್ವೀಕರಿಸಿಕೊಳ್ಳುತ್ತೇವೆ ಮತ್ತು ಸರಿಯಾದ ಸಮಯದಲ್ಲಿ ಆತನು ನಮ್ಮನ್ನು ಮೇಲಕ್ಕೆ ಎತ್ತುತ್ತಾನೆ.