WFTW Body: 

ದೈವಿಕ ಜೀವನವನ್ನು ಜೀವಿಸುವ ರಹಸ್ಯವು ಯೇಸುವಿನಲ್ಲಿ ಅಡಗಿದೆ - ಆತನು ಭೂಲೋಕದಲ್ಲಿ ಒಬ್ಬ ಮಾನವನಾಗಿ ಜೀವಿಸಿದನು, ನಮ್ಮಂತೆ ಎಲ್ಲಾ ವಿಷಯಗಳಲ್ಲಿ ಶೋಧನೆ ಮತ್ತು ಪ್ರೇರಣೆಗಳಿಗೆ ಗುರಿಯಾದನು, ಆದರೆ ಒಂದೇ ಒಂದು ಸಲವೂ ತನ್ನ ಯೋಚನೆಯಲ್ಲಿ, ಮಾತಿನಲ್ಲಿ, ಕಾರ್ಯದಲ್ಲಿ, ಮನೋಭಾವದಲ್ಲಿ, ಉದ್ದೇಶಗಳಲ್ಲಿ ಅಥವಾ ಬೇರೆ ಯಾವುದೇ ರೀತಿಯಲ್ಲಿ ಪಾಪವನ್ನು ಮಾಡಲಿಲ್ಲ (1 ತಿಮೊಥೆಯ. 3:16, ಇಬ್ರಿಯ 4:15).

ನಾವು ಪ್ರೇರಣೆ ಅಥವಾ ಶೋಧನೆಗೆ ಒಳಗಾದಾಗ, ಪಾಪ ಮಾಡಿದೆವು ಎನ್ನಲಾಗದು. ಯಾಕೋಬ. 1:14-15 ಇದನ್ನು ಸ್ಪಷ್ಟ ಪಡಿಸುತ್ತದೆ. ಆ ಪ್ರೇರಣೆ ಅಥವಾ ಶೋಧನೆ ಬಂದಾಗ, ನಮ್ಮ ಮನಸ್ಸು ತಪ್ಪಾದ ನಿರ್ಣಯ ಮಾಡಿದರೆ ಮಾತ್ರ, ನಾವು ಪಾಪ ಮಾಡಿದ್ದೇವೆ. ಯೇಸುವು ಶೋಧಿಸಲ್ಪಟ್ಟರೆಂದು ಮತ್ತಾಯ 4 ಸ್ಪಷ್ಟವಾಗಿ ತೋರಿಸುತ್ತದೆ. ಆದರೆ ಅವರ ಮನಸ್ಸು ಯಾವ ಪರಿಸ್ಥಿತಿಯಲ್ಲೂ ಯಾವ ಶೋಧನೆಗೂ ಒಂದು ಸಲವೂ ಒಪ್ಪಿಗೆ ನೀಡಲಿಲ್ಲ. ಈ ರೀತಿಯಾಗಿ ಅವರು ಪಾಪ ಮಾಡಲೇ ಇಲ್ಲ. ಅವರು ತಮ್ಮ ಹೃದಯವನ್ನು ಶುದ್ಧವಾಗಿ ಇರಿಸಿಕೊಂಡರು.

ಯೇಸುವು ಎಲ್ಲಾ ವಿಷಯಗಳಲ್ಲಿ ನಮ್ಮ ಹಾಗೆಯೇ ಶೋಧನೆಗೆ ಗುರಿಯಾದರು. ಆದರೆ ಯಾವುದೋ ಒಂದು ಶೋಧನೆಗೆ ಮತ್ತೆ ಮತ್ತೆ ಒಳಗಾಗಿ ಅವರು ಸಮಯ ವ್ಯರ್ಥ ಮಾಡಲಿಲ್ಲ. ಅವರು ನಮ್ಮಂತೆಯೇ ಶೋಧಿಸಲ್ಪಟ್ಟದ್ದಾದರೆ, ಲೈಂಗಿಕ ಪ್ರೇರಣೆಯ ವಿಷಯದಲ್ಲೂ ನಮ್ಮ ಹಾಗೆ ಶೋಧನೆಯನ್ನು ಅನುಭವಿಸಿರಬೇಕು. ಆದರೆ ಅವರು ಸಂಪೂರ್ಣ ನಂಬಿಗಸ್ತರಾಗಿ ನಡೆದು, ಯೌವನದ ಪ್ರಾಯದಲ್ಲೇ (20ರ ವಯಸ್ಸಿಗೆ ಮೊದಲು) ಈ ಕ್ಷೇತ್ರದಲ್ಲಿ ಜಯವನ್ನು ಗಳಿಸಿರಬೇಕು. ಇದರ ಫಲವಾಗಿ, ಅವರು ಜನರ ನಡುವೆ ಸೇವೆಯನ್ನು ಆರಂಭಿಸಿದಾಗ ಲೈಂಗಿಕ ಶೋಧನೆಗಳ ಸಮಸ್ಯೆಯೇ ತಲೆದೋರಲಿಲ್ಲ. ಹೆಂಗಸರು ಅವರ ಪಾದಗಳನ್ನು ಒರಸಿದಾಗಲೂ ಅವರಿಗೆ ಯಾವುದೇ ಪ್ರೇರಣೆ ಅಥವಾ ಪ್ರಚೋದನೆ ಉಂಟಾಗಲಿಲ್ಲ. ಈ ಕ್ಷೇತ್ರದಲ್ಲಿ ಶೋಧನೆಯ ವಿರುದ್ಧವಾಗಿ ಹೋರಾಡುವುದರಲ್ಲಿ ಯಾರು ಸ್ವತಃ ಯಥಾರ್ಥರಾಗಿಲ್ಲವೋ, ಅವರು ಈ ವಿಷಯದಲ್ಲಿ ಸತ್ಯವನ್ನು ಅರ್ಥ ಮಾಡಿಕೊಳ್ಳಲಾರರು.

’ಶೋಧನೆಯ ಪಾಠಶಾಲೆ’ ಇತರ ಶಾಲೆಗಳ ಹಾಗೆಯೇ ಇರುತ್ತದೆ. ನಾವೆಲ್ಲರೂ ಇಲ್ಲಿ ಬಾಲವಾಡಿ (ಶಿಶುವಿಹಾರ) ತರಗತಿಯಿಂದ ಆರಂಭ ಮಾಡಬೇಕು. ನಮ್ಮ ಕರ್ತನಿಗೂ ಸಹ ಮೊದಮೊದಲು ಬಹಳ ಸಾಧಾರಣ ಶೋಧನೆಗಳು ಎದುರಾಗಿರುತ್ತವೆ. ಆದರೆ ಅವರು ಇಂತಹ ಒಂದೊಂದು ತರಗತಿಯಲ್ಲಿ ಬಹಳ ಕಡಿಮೆ ಸಮಯ ಕಳೆದಿರುತ್ತಾರೆ. ಹೀಗಾಗಿ ಅವರು ತನ್ನ 33ನೇ ವಯಸ್ಸಿನಲ್ಲಿ, ಶಿಲುಬೆಯ ಮೇಲೆ ಸಾಯುವಾಗ, "ಇದು ತೀರಿತು" ಎಂದು ಹೇಳಲು ಸಾಧ್ಯವಾಯಿತು. ಹಾಗೆಂದರೆ, ಪ್ರತಿಯೊಂದು ಶೋಧನೆಯೂ ಸೋಲಿಸಲ್ಪಟ್ಟಿತ್ತು. ಅವರು ಪಾಠಶಾಲೆಯ ಪ್ರತಿಯೊಂದು ಪರೀಕ್ಷೆಯನ್ನೂ ಸಫಲವಾಗಿ ಎದುರಿಸಿದ್ದರು. ಅವರು ಪರಿಪೂರ್ಣತೆಯ ಹಂತಕ್ಕೆ ಏರಿದ್ದರು. ಒಬ್ಬ ಮಾನವನಾಗಿ ಬಾಧೆಗಳನ್ನು ಜಯಿಸುವ ಅವರ ವಿದ್ಯಾಭ್ಯಾಸ ಪೂರ್ಣವಾಗಿತ್ತು (ಇಬ್ರಿಯ 5: 8,9).

ಶೋಧನೆಗಳ ಶಾಲೆಯ ಬಾಲವಾಡಿ ತರಗತಿಯಲ್ಲಿ ಒಬ್ಬ ವ್ಯಕ್ತಿಯು ನಿಷ್ಠಾವಂತನಾಗಿರದೇ ಇದ್ದರೆ (ಉದಾಹರಣೆಗಾಗಿ, ಲೈಂಗಿಕವಾಗಿ ಅಶುದ್ಧ ಆಲೋಚನೆ ಮಾಡುವುದು, ಕೋಪಿಸುವುದು, ಸುಳ್ಳು ಹೇಳುವುದು, ಇತ್ಯಾದಿ), ಡಾಕ್ಟರೇಟ್ ಮಟ್ಟದಲ್ಲಿ ಯೇಸುವು ಎದುರಿಸಿದ ಶೋಧನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಹುಚ್ಚುತನ ಮತ್ತು ದುರಹಂಕಾರ. ಈ ವಿಷಯದಲ್ಲಿ ನೀವು ಸ್ವತಃ ನಿಷ್ಠೆಯಿಂದ ನಡೆದರೆ, ನಿಮಗೆ ಇದು ಅರ್ಥವಾಗುತ್ತದೆ (ಯೇಸುವು ಇದನ್ನೇ ಯೋಹಾನ 7:17ರಲ್ಲಿ ನೇರವಾಗಿ ತಿಳಿಸಿದ್ದಾರೆ). ಆದರೆ ಶೋಧನೆಗಳು ಬಂದಾಗ ನೀವು ನಿಷ್ಠೆಯಿಂದ ನಡೆಯದೇ ಇದ್ದರೆ, ನೀವು ಎಷ್ಟು ಪುಸ್ತಕಗಳನ್ನು ಓದಿದರೂ ಅಥವಾ ಎಷ್ಟು ಸಂದೇಶಗಳನ್ನು ಕೇಳಿಸಿಕೊಂಡರೂ, ಎಂದಿಗೂ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ದೇವರ ರಹಸ್ಯಗಳು ವೀಡಿಯೋ ಸಂದೇಶಗಳ ಮೂಲಕ ಅಥವಾ ಪುಸ್ತಕಗಳ ಮೂಲಕ ಪ್ರಕಟವಾಗುವುದಿಲ್ಲ, ಆದರೆ ಅವು ಸ್ವತಃ ದೇವರ ಬಾಯಿಯಿಂದ ನೇರವಾಗಿ ಬರುವ ವಾಕ್ಯದ ಮೂಲಕ ತಿಳಿಸಲ್ಪಡುತ್ತವೆ.

ನಾವು ನಮ್ಮಲ್ಲಿರುವ ಯಾವುದೋ ಒಂದು ಪಾಪದ ವಿರುದ್ಧ ಜೀವಿತವಿಡೀ ಹೋರಾಡುತ್ತಾ ಇರುವುದು ದೇವರ ಚಿತ್ತವಲ್ಲ. "ಕಾನಾನಿನ ಎಲ್ಲಾ ದೈತ್ಯರು" ಕೊಲ್ಲಲ್ಪಡಬೇಕೆಂದು ದೇವರು ಬಯಸುತ್ತಾರೆ. ನಾವು ಹಂತ ಹಂತವಾಗಿ ಬೆಳೆಯುತ್ತಿರುವಾಗ - ಶಾರೀರಿಕವಾಗಿ ಮತ್ತು ಆತ್ಮಿಕವಾಗಿ - ನಾವು ಹೊಸಹೊಸದಾದ ಶೋದನೆಗಳನ್ನು ಎದುರಿಸಬೇಕಾಗುತ್ತದೆ. ನಾಲ್ಕು ವಯಸ್ಸಿನ ಮಗುವು ಸಿಟ್ಟಾಗುವ ಶೋಧನೆಗೆ ಒಳಗಾಗುತ್ತದೆ, ಆದರೆ ಲೈಂಗಿಕ ಶೋಧನೆಗೆ ಒಳಗಾಗುವುದಿಲ್ಲ. ಇದು ಮುಂದಿನ ವರ್ಷಗಳಲ್ಲಿ, ಆತನ ಹದಿಹರೆಯದಲ್ಲಿ, ಎದುರಾಗುತ್ತದೆ. ಆದರೆ ಒಬ್ಬ ಮನುಷ್ಯನು ಲೈಂಗಿಕ ಕ್ಷೇತ್ರದಲ್ಲಿ ತಾನು ಒಂದು ದಿನ ಜಯಶಾಲಿಯಾಗುತ್ತೇನೆಂದು ಸಾಕ್ಷಿ ನುಡಿಯುತ್ತಾ, ವರ್ಷಾನುಗಟ್ಟಳೆ ಸೋಲನ್ನೇ ಅನುಭವಿಸುತ್ತಾ ಜೀವಿಸುವದು ದೇವರ ಚಿತ್ತವಲ್ಲ. ಆತನು ಪೂರ್ಣಹೃದಯದಿಂದ ಜೀವಿಸಿದರೆ, ಶೀಘ್ರವೇ ಜಯಶಾಲಿಯಾಗಲು ಸಾಧ್ಯವಿದೆ.

ಯೇಸುವು ನಲ್ವತ್ತು ದಿನಗಳ ಸಮಯ ಅಡವಿಯಲ್ಲಿ ಕಷ್ಟಕರವಾದ ಶೋಧನೆಗಳನ್ನು ಎದುರಿಸಿದ ಸಂದರ್ಭದಲ್ಲಿ, ಕೊನೆಯ ಹಂತದಲ್ಲಿ ಸೈತಾನನು ಆತನನ್ನು ಶೋಧಿಸಲು ಬಂದಾಗ, ಯೇಸುವು ಲೈಂಗಿಕ ಶೋಧನೆಗಳು ಮತ್ತು ಹಣದ ವಿಚಾರವಾದ ಶೋಧನೆಗಳನ್ನು ಅನೇಕ ವರ್ಷಗಳ ಹಿಂದೆಯೇ ಸಂಪೂರ್ಣವಾಗಿ ಜಯಿಸಿದ್ದುದರಿಂದ, ಇವೆರಡು ಕ್ಷೇತ್ರಗಳಲ್ಲಿ ಯೇಸುವನ್ನು ಶೋಧನೆಗೆ ಒಳಪಡಿಸುವುದು ವ್ಯರ್ಥವೆಂದು ಸೈತಾನನಿಗೆ ಚೆನ್ನಾಗಿ ತಿಳಿದಿತ್ತು. ಅಡವಿಯಲ್ಲಿ ಎದುರಾದ ಕೊನೆಯ ಮೂರು ಶೋಧನೆಗಳು ಎಷ್ಟು ಕಠಿಣವಾದವುಗಳು ಎಂದರೆ, ಅವುಗಳ ಸೂಕ್ಷ್ಮವಾದ ಅರ್ಥವನ್ನು ನಾವು ತಿಳಕೊಳ್ಳುವುದಕ್ಕೆ ಮೊದಲು, ಯೇಸುವು ನಡೆದ ಹಾದಿಯಲ್ಲಿ ನಾವು ಪ್ರಾಮಾಣಿಕವಾಗಿ ನಡೆಯಬೇಕಾಗುತ್ತದೆ.

ಸುವಾರ್ತೆಯಲ್ಲಿ ಅಡಕವಾಗಿರುವ ಒಳ್ಳೆಯ ಸುದ್ದಿ ಯಾವುದೆಂದರೆ, ಯೇಸುವು ಮನುಷ್ಯನಾಗಿ ಬಂದು ನಮ್ಮಂತೆಯೇ ಎಲ್ಲಾ ವಿಧವಾದ ಶೋಧನೆಗಳಿಗೆ ಒಳಗಾಗಿ ಅವುಗಳನ್ನು ಜಯಿಸಿರುವುದರಿಂದ, ನಾವೂ ಸಹ ಆತನ ಹಾಗೆಯೇ ಜಯಹೊಂದಲು ಸಾಧ್ಯವಿದೆ (ಪ್ರಕಟನೆ 3:21).