ನಾವು ಈ ವಾರ ದೇವರ ಶ್ರೇಷ್ಠ ಆಜ್ಞೆಯಲ್ಲಿ ಅಡಕವಾಗಿರುವ ಎರಡು ಅಂಶಗಳನ್ನು ಸಂಪೂರ್ಣವಾಗಿ ನೆರವೇರಿಸುವುದರ ಬಗ್ಗೆ ಅಧ್ಯಯನವನ್ನು ಮುಂದುವರಿಸುತ್ತಿದ್ದೇವೆ. ಕಳೆದ ವಾರ ನಾವು ಶಿಷ್ಯತ್ವದ ಮೊದಲನೆಯ ಷರತ್ತು ಅಂದರೆ, ಕ್ರಿಸ್ತನಿಗಾಗಿ ನಮ್ಮಲ್ಲಿ ಇರಬೇಕಾದ ಅತಿ ಉತ್ಕೃಷ್ಟವಾದ ಪ್ರೀತಿಯಾಗಿದೆ ಎಂಬುದಾಗಿ ತಿಳಕೊಂಡೆವು. ಮತ್ತು ಅದು ಕ್ರಿಸ್ತನನ್ನು ನಮ್ಮ ತಂದೆತಾಯಿಗಿಂತ, ನಮ್ಮ ಹೆಂಡತಿಗಿಂತ, ನಮ್ಮ ಮಕ್ಕಳಿಗಿಂತ, ನಮ್ಮ ರಕ್ತ ಸಂಬಂಧಿಗಳಾದ ಪ್ರತಿಯೊಬ್ಬ ಅಣ್ಣತಮ್ಮಂದಿರು ಮತ್ತು ಅಕ್ಕತಂಗಿಯರಿಗಿಂತ, ನಮ್ಮ ಕ್ರೈಸ್ತಸಭೆಯ ಸಹೋದರ-ಸಹೋದರಿಯರಿಗಿಂತ, ಮತ್ತು ನಮ್ಮ ಸ್ವಂತ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವುದೇ ಆಗಿದೆಯೆಂದು ಕಂಡುಕೊಂಡೆವು.
ಶಿಷ್ಯತ್ವದ ಎರಡನೆಯ ಷರತ್ತನ್ನು ಲೂಕ. 14:27ರಲ್ಲಿ ಪ್ರಸ್ತಾಪಿಸಲಾಗಿದೆ: "ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬಾರದ ಹೊರತು ಅವನು ನನ್ನ ಶಿಷ್ಯನಾಗಿರಲಾರನು."
ಯೇಸುವು ಮತ್ತೊಮ್ಮೆ ಖಡಾಖಂಡಿತವಾಗಿ (ಈ ಷರತ್ತಿನ ಬಗ್ಗೆಯೂ) ನುಡಿದರು: "ಶಿಷ್ಯನಾಗಲು ಸಾಧ್ಯವೇ ಇಲ್ಲ."
ದಿನಾಲೂ ಶಿಲುಬೆಯನ್ನು ಹೊತ್ತುಕೊಳ್ಳುವುದು ಎಂದರೇನು? ಯೇಸು ಹೇಳಿದ್ದು "ತನ್ನ ಸ್ವಂತ ಶಿಲುಬೆ" ಎಂಬುದಾಗಿತ್ತು; ಯೇಸು ಕ್ರಿಸ್ತನ ಶಿಲುಬೆಯನ್ನು ನಾನು ಹೊತ್ತುಕೊಂಡು ಸಾಗಿಸಬೇಕಿಲ್ಲ, ಮತ್ತು ನಾನು ಮತ್ತೊಬ್ಬರ ಶಿಲುಬೆಯನ್ನೂ ಸಹ ಸಾಗಿಸಬೇಕಿಲ್ಲ. ಆದರೆ ನಾನು ನನ್ನ ಸ್ವಂತ ಶಿಲುಬೆಯನ್ನು ಹೊರಬೇಕು. ಯೇಸುವು ಇದನ್ನು ಲೂಕ. 9:23ರಲ್ಲಿ ಈ ರೀತಿಯಾಗಿ ವಿವರಿಸಿದನು: "ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ, ಅವನು ತನ್ನನ್ನು ನಿರಾಕರಿಸಬೇಕು, ಮತ್ತು ತನ್ನ ಶಿಲುಬೆಯನ್ನು ದಿನಾಲೂ ಹೊತ್ತುಕೊಂಡು ನನ್ನ ಹಿಂದೆ ಬರಬೇಕು."
ಲೂಕ. 9:23ರಲ್ಲಿ "ದಿನಾಲೂ" ಎಂಬ ಪದವನ್ನು ಸೇರಿಸಲಾಗಿದೆ. ಈ ಪದವು ಲೂಕ. 14:27ಕ್ಕೂ ಸಹ ಅನ್ವಯಿಸುತ್ತದೆ. ನಾವು ನಮ್ಮ ಜೀವನದ ಪ್ರತಿಯೊಂದು ದಿನವೂ ಶಿಲುಬೆಯನ್ನು ಹೊತ್ತುಕೊಂಡು ಕ್ರಿಸ್ತನನ್ನು ಹಿಂಬಾಲಿಸ ಬೇಕಾಗಿರುವಾಗ, ಅದರ ಅರ್ಥ ಸ್ವತಃ ಕ್ರಿಸ್ತನೂ ಒಂದು ಶಿಲುಬೆಯನ್ನು ಪ್ರತಿದಿನ ಹೊತ್ತಿದನು ಎಂದಾಗಿರಬೇಕು. ಇಲ್ಲವಾದರೆ, ಆತನು ನನಗೆ ನನ್ನ ಶಿಲುಬೆಯನ್ನು ಹೊತ್ತುಕೊಂಡು ತನ್ನನ್ನು ಹಿಂಬಾಲಿಸುವಂತೆ ಹೇಳಲು ಹೇಗೆ ಸಾಧ್ಯ?
ಕರ್ತನಾದ ಯೇಸುವು ತನ್ನ ಜೀವನದ ಮೂವತ್ಮೂರುವರೆ ವರ್ಷಗಳ ಉದ್ದಕ್ಕೂ ಅಂತರಂಗದಲ್ಲಿ (ಯಾರ ಕಣ್ಣಿಗೂ ಕಾಣಿಸದಂತೆ) ಒಂದು ಶಿಲುಬೆಯನ್ನು ಹೊತ್ತಿದ್ದನು, ಮತ್ತು ಇದು ಆತನು ಕಲ್ವಾರಿ ಬೆಟ್ಟಕ್ಕೆ ಹೊತ್ತು ಸಾಗಿಸಿದ ಭೌತಿಕ (ಮರದ) ಶಿಲುಬೆಯಲ್ಲಿ ಕೊನೆಗೊಂಡಿತು. ಯಾರಿಗೂ ಕಾಣಿಸದ ಈ ಒಳಗಿನ ಶಿಲುಬೆಯ ಅರ್ಥವೇನೆಂದು ನಾವು ಅರಿತುಕೊಳ್ಳಬೇಕು. ಏಕೆಂದರೆ ನಾನು ನನ್ನ ಜೀವನದಲ್ಲಿ ಆ ಶಿಲುಬೆಯನ್ನು ಹೊರದಿದ್ದರೆ ನಾನು ಒಬ್ಬ ಶಿಷ್ಯನಾಗಲಾರೆನು.
ಇತ್ತೀಚಿನ ದಿನಗಳಲ್ಲಿ "ಶಿಲುಬೆ" ಎಂಬ ಪದವನ್ನು ನಾವು ಹೆಚ್ಚಾಗಿ ಉಪಯೋಗಿಸುವುದಿಲ್ಲ. ಏಕೆಂದರೆ ಅದು ಕ್ರೈಸ್ತತ್ವದ ಒಂದು ಚಿಹ್ನೆಯಾಗಿ ಬದಲಾಗಿದೆ. ಜನರು ಚಿನ್ನದ ಶಿಲುಬೆಗಳನ್ನು ಮತ್ತು ದಂತದ ಶಿಲುಬೆಗಳನ್ನು ಧರಿಸುತ್ತಾರೆ, ಆದರೆ ಯೇಸುವು ಇದನ್ನು ಉಲ್ಲೇಖಿಸಿದ ಕಾಲಾವಧಿಯಲ್ಲಿ, ರೋಮನ್ನರು ಜನರಿಗೆ ಮರಣದಂಡನೆ ವಿಧಿಸಲು ಕಂಡುಹಿಡಿದ ಅತ್ಯಂತ ಭಯಾನಕ ವಿಧಾನ ಶಿಲುಬೆಯಾಗಿತ್ತು. ಇಂದು ಇದನ್ನು ಸೂಚಿಸುವ ಹೆಚ್ಚು ಸಮರ್ಪಕವಾದ ಚಿಹ್ನೆ ಎಂದರೆ ನೇಣಿನ ಹಗ್ಗ ಅಥವಾ ಮರಣ ದಂಡನೆಯ ವಿದ್ಯುತ್ ಕುರ್ಚಿ, ಅಥವಾ ಶಿರಚ್ಛೇದನದ ಕಟ್ಟೆ ಎನ್ನಬಹುದು. ಶಿಲುಬೆಯು ಮರಣದಂಡನೆಯ ಒಂದು ಸಂಕೇತವಾಗಿತ್ತು. ಅಂದರೆ ಅಪರಾಧದ ನಿಮಿತ್ತವಾಗಿ ಒಬ್ಬ ವ್ಯಕ್ತಿಯು ಮರಣಕ್ಕೆ ಗುರಿಯಾಗುವುದು. ಕೇವಲ ಅಪರಾಧಿಗಳು ಮಾತ್ರ ಶಿಲುಬೆಗೆ ಏರಿಸಲ್ಪಡುತ್ತಿದ್ದರು.
ನಾವು ಯೇಸುವನ್ನು ಹಿಂಬಾಲಿಸಬೇಕಾದರೆ ಪ್ರತಿದಿನ ಮರಣಕ್ಕೆ ಒಳಪಡಿಸಬೇಕಾದ ನಮ್ಮೊಳಗಿನ ಯಾವುದೋ ಒಂದು ವಿಷಯವನ್ನು ಯೇಸುವು ಇಲ್ಲಿ ಪ್ರಸ್ತಾಪಿಸಿದನು. ಅದು ಏನು? ಯೇಸುವು ನಮ್ಮ ಸ್ವಜೀವದ ಕುರಿತಾಗಿ ಇದನ್ನು ಹೇಳಿದನು: "ಯಾರು ತನ್ನ ಪ್ರಾಣದ ಮೇಲೆ (ತನ್ನ ಸ್ವಜೀವದ ಮೇಲೆ) ಮಮತೆಯಿಡುತ್ತಾನೋ, ಅವನು ಅದನ್ನು ಕಳಕೊಳ್ಳುವನು"(ಯೋಹಾ. 12:25).
ಇದೇ ನಾವು ಹೊರಬೇಕಾದ ಶಿಲುಬೆಯಾಗಿದೆ. ಅಂದರೆ ನಮ್ಮ ಸ್ವಜೀವ (ಪ್ರಾಣ) ಪ್ರತಿದಿನ ಶಿಲುಬೆಗೆ ಹಾಕಲ್ಪಡಬೇಕು. ಆಗ ಯೇಸುವು ಗೆತ್ಸೇಮನೆ ತೋಟದಲ್ಲಿ ಹೇಳಿದಂತೆ, "ನನ್ನ ಚಿತ್ತವಲ್ಲ, ನಿನ್ನ ಚಿತ್ತವೇ ಆಗಲಿ," ಎಂದು ನಾವು ತಂದೆಯಾದ ದೇವರಿಗೆ ಹೇಳುತ್ತೇವೆ. ನನ್ನ ಸ್ವಜೀವದ ಬಲ ನನ್ನ ಚಿತ್ತವೇ ಆಗಿದೆ. ನಾನು ನನಗೆ ಇಷ್ಟವಾದದ್ದನ್ನು ಮಾಡುತ್ತೇನೆ; ನನ್ನ ಚಿತ್ತದ ಪ್ರಕಾರ ನಡೆಯುತ್ತೇನೆ. ಇದು ಎಲ್ಲಾ ಪಾಪದ ಮೂಲವಾಗಿದೆ ಮತ್ತು ಇದನ್ನು ನಾನು ಸಾಯಿಸದಿದ್ದರೆ, ನಾನು ನನ್ನ ಶಿಲುಬೆಯನ್ನು ಹೊರುತ್ತಿಲ್ಲ.
ಇದು ಪ್ರತಿಯೊಂದು ದಿನ ಅವಶ್ಯಕವಾಗಿ ಮಾಡಬೇಕಾದದ್ದು. ಆಗ ಮಾತ್ರ ನಾನೊಬ್ಬ ಶಿಷ್ಯನಾಗಲು ಸಾಧ್ಯ. ಪ್ರತಿಯೊಂದು ದಿನವೂ ಸಹ ನಾನು ಈ ಪದಗಳನ್ನು ಹೇಳಬೇಕಾಗಿಲ್ಲ. ಆದರೆ ನನ್ನಲ್ಲಿ ಇರಬೇಕಾದ ಮನೋಭಾವ ಯಾವುದೆಂದರೆ, "ಇವತ್ತು ನಾನು ಯಾವುದೇ ಕ್ಷೇತ್ರದಲ್ಲಿ ನನ್ನ ಸ್ವಚಿತ್ತದ ಪ್ರಕಾರ ನಡೆಯುವುದಿಲ್ಲ. ನಾನು ದೇವರ ಚಿತ್ತವನ್ನು ಪಾಲಿಸುತ್ತೇನೆ." ಯೇಸುವು ನಮಗೆ ಕಲಿಸಿಕೊಟ್ಟ ಪ್ರಾರ್ಥನೆಯ ಒಂದು ಅಂಶ ಇದೇ ಆಗಿದೆ, "ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರವೇ ಭೂಲೋಕದಲ್ಲೂ ನೆರವೇರಲಿ."
ಕರ್ತನ ಕಡೆಗೆ ಒಬ್ಬ ಶಿಷ್ಯನ ಮನೋಭಾವ ಹೇಗಿರಬೇಕೆಂದರೆ, "ಕರ್ತನೇ, ನಾನು ಯಾವುದರಲ್ಲೂ ನನ್ನ ಸ್ವಚಿತ್ತದಂತೆ ನಡೆಯಲು ಎಂದಿಗೂ ಬಯಸುವುದಿಲ್ಲ"
ಪರಲೋಕದಲ್ಲಿ, ಒಬ್ಬ ದೇವದೂತರೂ ಸಹ ತಮ್ಮ ಸ್ವಚಿತ್ತದಂತೆ ನಡೆಯುವುದಿಲ್ಲ. ಅವರು ಯಾವಾಗಲೂ ತಾವು ಏನು ಮಾಡಬೇಕೆಂದು ದೇವರು ಬಯಸುತ್ತಾರೆ ಎಂಬುದನ್ನು ನಿರೀಕ್ಷಿಸುತ್ತಾ ದೇವರ ಮುಂದೆ ಕಾದಿರುತ್ತಾರೆ, ಮತ್ತು ಪ್ರತೀ ದಿನವೂ ಸಹ ಅವರು ಅದನ್ನೇ ಮಾಡುತ್ತಾರೆ. ಒಂದು ವೇಳೆ ನಮ್ಮ ದಿನಗಳು ಭೂಮಿಯ ಮೇಲೆ ಪರಲೋಕದ ದಿನಗಳಂತೆ ಇರಬೇಕಾದರೆ ಹಾಗೂ ನಮ್ಮ ಜೀವನವು ಸ್ವರ್ಗೀಯ ಜೀವಿತವಾಗಿರಬೇಕಾದರೆ, ಅದರ ರಹಸ್ಯ ಇದರಲ್ಲಿದೆ: "ಪರಲೋಕದಲ್ಲಿ ನಿನ್ನ ಚಿತ್ತವು ನೆರವೇರುವ ಪ್ರಕಾರವೇ ಭೂಲೋಕದಲ್ಲೂ ನೆರವೇರಲಿ."
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಕರ್ತನ ಕಡೆಗೆ ಒಬ್ಬ ಶಿಷ್ಯನ ಮನೋಭಾವ ಹೀಗಿರುತ್ತದೆ. "ಕರ್ತನೇ, ಯಾವುದರಲ್ಲೂ ನಾನು ನನ್ನ ಸ್ವಂತ ಚಿತ್ತದ ಪ್ರಕಾರ ನಡೆಯಲು ಎಂದಿಗೂ ಇಚ್ಛಿಸುವುದಿಲ್ಲ. ನಾನು ಇಷ್ಟಪಡುವವರನ್ನು ಮದುವೆ ಮಾಡಿಕೊಳ್ಳುವುದಿಲ್ಲ; ನಾನು ನನ್ನ ಇಷ್ಟದಂತೆ ನೌಕರಿಯನ್ನು ಆರಿಸಿಕೊಳ್ಳುವುದಿಲ್ಲ; ನನಗೆ ಬೇಕಾದ ಸ್ಥಳದಲ್ಲಿ ನಾನು ವಾಸಿಸುವುದಿಲ್ಲ; ಈ ಒಂದೊಂದು ಕ್ಷೇತ್ರಗಳಲ್ಲೂ ನಿನ್ನ ಚಿತ್ತವೇನೆಂದು ಅರಿಯಲು ನಾನು ಬಯಸುತ್ತೇನೆ. ಯಾರಾದರೂ ನನ್ನೊಂದಿಗೆ ಕೆಟ್ಟದಾಗಿ ನಡಕೊಂಡರೆ, ನಾನು ನನ್ನ ಮಾನವೀಯ ಪ್ರಾಣದ ಬಲದಿಂದ, ನನ್ನ ಸ್ವಚಿತ್ತದ ಪ್ರಕಾರ ನಡೆಯಲು ಬಯಸುವುದಿಲ್ಲ. ನಾನು ಯಾವ ರೀತಿ ವರ್ತಿಸಬೇಕೆಂದು ನೀನು ಬಯಸುತ್ತೀಯೋ ಅದರಂತೆಯೇ ನಾನು ಪ್ರತಿಕ್ರಿಯೆ ತೋರಿಸುತ್ತೇನೆ."
ಪ್ರತಿದಿನವೂ ಶಿಲುಬೆಯನ್ನು ಎತ್ತಿಕೊಳ್ಳುವುದರ ಅರ್ಥ ಇದೇ ಆಗಿದೆ; ಒಂದು ವೇಳೆ ನೀನು ಹೀಗೆ ಮಾಡದಿದ್ದರೆ ಯೇಸುವು ಹೇಳುವುದು ಏನೆಂದರೆ, "ನೀನು ನನ್ನ ಶಿಷ್ಯನಾಗಿರಲು ಸಾಧ್ಯವೇ ಇಲ್ಲ."
ನೀವು ಭೇಟಿಯಾಗಿರುವ ವಿಶ್ವಾಸಿಗಳು ಯೇಸುವು ಮತ್ತಾ. 28ರಲ್ಲಿ ಶ್ರೇಷ್ಠ ಆಜ್ಞೆಯ ಎರಡನೆಯ ಅರ್ಧಭಾಗವನ್ನು ಕೊಟ್ಟಿರುವುದರ ಬಗ್ಗೆ ತಿಳಿದುಕೊಂಡ ನಂತರ, ಪ್ರತಿದಿನವೂ ಶಿಲುಬೆಯನ್ನು ಹೊತ್ತುಕೊಂಡು ತಮ್ಮ ಸ್ವ-ಜೀವವನ್ನು ಸಾಯಿಸುತ್ತಿರುವುದು ನಿಮಗೆ ಭಾಸವಾಗುತ್ತಿದೆಯೇ? ಈ ಆಜ್ಞೆಗೆ ಸ್ವತಃ ನೀವು ವಿಧೇಯರಾಗಿದ್ದೀರಾ? ಮತ್ತಾ. 28:19ರ ಶ್ರೇಷ್ಠ ಆಜ್ಞೆಯನ್ನು ಗಂಭೀರವಾಗಿ ಪರಿಗಣಿಸುವ ಕ್ರೈಸ್ತರು ಎಷ್ಟು ಕಡಿಮೆ ಜನ ಇದ್ದಾರೆ ಎಂಬುದನ್ನು ಇದು ರುಜುವಾತುಪಡಿಸುತ್ತದೆ.