ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ
WFTW Body: 

ದೇವರಿಂದ ಒಬ್ಬ ಮನುಷ್ಯನು ಯಶಸ್ವಿಯಾಗಿ ಮುರಿಯಲ್ಪಡುವದಕ್ಕೆ ಅತ್ಯುತ್ತಮವಾದ ಉದಾಹರಣೆ ಯಾಕೋಬನು ಆಗಿದ್ದಾನೆ. ಈತನು ದೇವರನ್ನು ಎರಡು ಬಾರಿ ಭೇಟಿಯಾದನು, ಮೊದಲ ಭೇಟಿ ಬೇತೇಲ್‍ನಲ್ಲಿ (ಆದಿಕಾಂಡ 28), ಮತ್ತೊಂದು ಭೇಟಿ ಪೆನೀಯೇಲ್‍ನಲ್ಲಿ (ಆದಿಕಾಂಡ 32) ಆಯಿತು. ಬೇತೇಲ್‍ನ ಅರ್ಥ ''ದೇವರ ಮನೆ'' (ದೇವಸಭೆಯ ಹೋಲಿಕೆ) ಎಂದು ಮತ್ತು ಪೆನೀಯೇಲ್ ಎನ್ನುವುದರ ಅರ್ಥ 'ದೇವರ ಪ್ರತ್ಯಕ್ಷತೆ''. ನಾವೆಲ್ಲರೂ ದೇವರ ಸಭೆಗೆ ಪ್ರವೇಶಿಸಿದ ನಂತರ, ಮುಂದುವರಿದು ದೇವರನ್ನು ಪ್ರತ್ಯಕ್ಷವಾಗಿ ಬೇಟಿಯಾಗುವ ಅಗತ್ಯತೆ ಇದೆ. ಬೇತೇಲ್‍ನಲ್ಲಿ ಈ ರೀತಿಯಾಗಿ ಹೇಳಲಾಗಿದೆ - ''ಸೂರ್ಯ ಮುಳುಗಿದನು'' ಎಂದು (ಆದಿಕಾಂಡ 28:11) - ಇದು ಭೌಗೋಳಿಕ ವಾಸ್ತವಾಂಶ, ಆದರೆ ಯಾಕೋಬನ ಜೀವಿತದಲ್ಲಿ ಆಗುವಂತದ್ದನ್ನು ಇದು ಸೂಚಿಸುತ್ತದೆ, ಏಕೆಂದರೆ ಮುಂದಿನ 20 ವರುಷಗಳ ಅವಧಿಯು ಯಾಕೋಬನಿಗೆ ಕತ್ತಲೆಯ ಅವಧಿಯಾಗಿತ್ತು. ನಂತರ ಪೆನೀಯೇಲ್‍ನಲ್ಲಿ ಹೀಗೆ ಹೇಳಲಾಗಿದೆ 'ಸೂರ್ಯೋದಯವಾಯಿತು'' ಎಂಬುದಾಗಿ (ಆದಿಕಾಂಡ 32:31) - ಮತ್ತೊಮ್ಮೆ ಇದು ಭೌಗೋಳಿಕ ವಾಸ್ತವಾಂಶವಾದರೂ ಸಹ, ಯಾಕೋಬನು ಕೊನೆಯದಾಗಿ ದೇವರ ಬೆಳಕಿನೊಳಗೆ ಬಂದನು ಎಂಬುದಾಗಿ ಇದು ಸೂಚಿಸುತ್ತದೆ. ದೇವರೊಟ್ಟಿಗೆ ನಡೆದ ಹಲವು ವಿಶ್ವಾಸಿಗಳ ಚರಿತ್ರೆಯನ್ನು ನೋಡುವಾಗ, ಅವರು ದೇವರೊಂದಿಗೆ ಎರಡು ಬಾರಿ ಸಂಧಿಸಿರುವದು ಕಾಣುತ್ತದೆ. ಅವರು ಹೊಸದಾಗಿ ಹುಟ್ಟುವ ಮೂಲಕ ದೇವರ ಮನೆಯನ್ನು ಪ್ರವೇಶಿಸಿದಾಗ (ಸಭೆ) ಮೊದಲನೆಯ ಭೇಟಿ ಆಗುತ್ತದೆ. ಅವರು ದೇವರನ್ನು ಮುಖಾಮುಖಿಯಾಗಿ ಸಂಧಿಸಿ, ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಾಗ ಹಾಗೂ ಅವರ ಜೀವಿತ ಬದಲಾದಾಗ ಎರಡನೆಯ ಭೇಟಿ ಆಗುತ್ತದೆ.

ಬೇತೇಲ್‍ನಲ್ಲಿ ಯಾಕೋಬನು ಒಂದು ಕನಸು ಕಾಣುತ್ತಾನೆ, ಆ ಕನಸಿನಲ್ಲಿ ಒಂದು ನಿಚ್ಚಣಿಗೆ ನೆಲದ ಮೇಲೆ ನಿಂತಿರುವುದನ್ನು, ಅದರ ತುದಿ ಆಕಾಶ ಮುಟ್ಟಿರುವುದನ್ನು ಕಂಡನು. ಯೋಹಾನ 1:51 ರಲ್ಲಿ ಯೇಸು ನಿಚ್ಚಣಿಗೆಯನ್ನು ತನಗೆ ಹೋಲಿಸಿಕೊಂಡಿರುವುದನ್ನು ನಾವು ನೋಡುತ್ತೇವೆ, ಅದರ ಅರ್ಥವನ್ನು ಯೇಸು ಹೀಗೆ ವಿವರಿಸಿದ್ದಾರೆ - ಭೂಮಿಯಿಂದ ಪರಲೋಕಕ್ಕೆ ಮಾರ್ಗವು ತಾನೇ ಎಂಬುದಾಗಿ. ಹಾಗಾಗಿ ಯಾಕೋಬನು ಇಲ್ಲಿ ನಿಜವಾಗಿಯೂ ನೋಡಿದ್ದು ಪ್ರವಾದನ ದರ್ಶನವಾಗಿದೆ, ಅಂದರೆ ಯೇಸು ಪರಲೋಕಕ್ಕೆ ಮಾರ್ಗವನ್ನು ತೆರೆದಿರುವುದಾಗಿದೆ. ನಂತರ ದೇವರು ಯಾಕೋಬನಿಗೆ ಆ ಕನಸಿನಲ್ಲಿ ಅನೇಕ ವಾಗ್ದಾನಗಳನ್ನು ನೀಡಿದರು. ಆದರೆ ಯಾಕೋಬನು ಇಹಲೋಕದ ಮನಸ್ಸನ್ನು ಹೊಂದಿದ್ದನು ಮತ್ತು ಇಹಲೋಕದ ಭದ್ರತೆಯನ್ನು ಮಾತ್ರ ಯೋಚಿಸುತ್ತಿದ್ದನು, ಶಾರೀರಿಕ ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿ ಹೀಗೆ ಹಲವು ರೀತಿಯಲ್ಲಿ ಯೋಚಿಸುತ್ತಿದ್ದನು. ಹಾಗಾಗಿ ಆತನು ದೇವರಿಗೆ - ''ದೇವರೇ ನೀನು ನನ್ನ ಈ ಪ್ರಯಾಣವನ್ನು ನೋಡಿಕೊಂಡು, ಆಹಾರವನ್ನು, ಬಟ್ಟೆಯನ್ನು ಒದಗಿಸುವುದಾದರೆ ಮತ್ತು ಮನೆಗೆ ನನ್ನನ್ನು ಜೋಪಾನವಾಗಿ ವಾಪಸ್ಸು ಕರೆದುಕೊಂಡು ಬರುವುದಾದರೆ, ನಾನು ನನ್ನ ಆದಾಯದಲ್ಲಿ ಶೇ.10 ರಷ್ಟನ್ನು ನಿನಗೆ ಕೋಡುತ್ತೇನೆ,'' ಎಂದು ಹೇಳಿದನು.

''ನಿಮ್ಮ ಬಳಿ ದೇವರೊಬ್ಬನೇ ಉಳಿದಾಗ, ದೇವರು ಮಾತ್ರವೇ ಸಾಕೆಂಬ ಅರಿವು ನಿಮಗೆ ಆಗುತ್ತದೆ''

''ದೇವರ ಆಶಿರ್ವಾದ''ದ ನಿಜವಾದ ಗುರುತೇನು? ಅದು ಅಭಿವೃದ್ಧಿಯಾ? ಇಲ್ಲ. ಅದು ಕ್ರಿಸ್ತನ ರೀತಿಯಲ್ಲಿ ರೂಪಾಂತರಗೊಳ್ಳುವುದಾಗಿದೆ. ನಿಮ್ಮ ಜೀವಿತವು ದೇವರಿಗೆ ಮತ್ತು ಮನುಷ್ಯನಿಗೆ ಉಪಯೋಗಕ್ಕೆ ಬಾರದ್ದಾಗಿದ್ದರೆ, ಒಳ್ಳೇ ನೌಕರಿ, ಒಳ್ಳೇ ಮನೆ ಮತ್ತು ಅನೇಕ ಸೌಕರ್ಯಗಳನ್ನು ಹೊಂದುವುದರಲ್ಲಿ ಉಪಯೋಗವೇನಿದೆ? ಆದರೆ ದೇವರು ಯಾಕೋಬನೊಟ್ಟಿಗೆ ತಾನು ವ್ಯವಹರಿಸುವುದನ್ನು ನಿಲ್ಲಿಸಲಿಲ್ಲ. ದೇವರು ಆತನನ್ನು ಎರಡನೇ ಬಾರಿ ಪೆನೀಯೇಲ್‍ನಲ್ಲಿ ಭೇಟಿಯಾದರು. ನಿಮ್ಮಲ್ಲಿ ಅನೇಕರಿಗೆ ದೇವರೊಂದಿಗೆ ಎರಡನೆಯ ಭೇಟಿ ಅವಶ್ಯಕವಾಗಿದೆ - ಆ ಸಂಧಿಸುವಿಕೆಯು ನೀವು ನಿಮ್ಮ ಜೀವಿತದಲ್ಲಿ ಅತೀ ಕೆಳಮಟ್ಟವನ್ನು ತಲುಪಿದಾಗ ನಡೆಯುತ್ತದೆ - ಆಗ ದೇವರು ನಿಮ್ಮನ್ನು ನ್ಯಾಯತೀರ್ಪಿಗೆ ಒಳಪಡಿಸಿ, ನರಕಕ್ಕೆ ಕಳುಹಿಸುವುದರ ಬದಲಾಗಿ, ನಿಮ್ಮನ್ನು ಪವಿತ್ರಾತ್ಮನಿಂದ ತುಂಬಿಸುತ್ತಾನೆ.

ಪೆನೀಯೇಲ್‍ನಲ್ಲಿ ಯಾಕೋಬನು ಒಂಟಿಗನಾಗಿದ್ದನು (ಆದಿಕಾಂಡ 32:24). ದೇವರು ನಮ್ಮೊಂದಿಗೆ ಭೇಟಿಯಾಗುವದಕ್ಕೆ ಮೊದಲು, ನಮ್ಮನ್ನು ಒಂಟಿತನದ ಸ್ಥಿತಿಗೆ ತಲಪಿಸುತ್ತಾರೆ. ಆ ರಾತ್ರಿ ದೇವರು ಯಾಕೋಬನೊಟ್ಟಿಗೆ ಬಹಳಷ್ಟು ತಾಸುಗಳ ವರೆಗೂ ಹೋರಾಡಿದರು, ಆದರೆ ಯಾಕೋಬನು ಹಿಮ್ಮೆಟ್ಟಲಿಲ್ಲ. ಆ ಹೋರಾಟವು ಹಿಂದಿನ 20 ವರುಷಗಳಲ್ಲಿ ಯಾಕೋಬನ ಜೀವಿತದಲ್ಲಿ ಏನೆಲ್ಲಾ ನಡೆದಿತ್ತೋ, ಅವುಗಳನ್ನು ಸಾಂಕೇತಿಕವಾಗಿ ಸೂಚಿಸುತ್ತದೆ. ಕೊನೆಗೆ ಯಾಕೋಬನ ಹಠಮಾರಿತನವನ್ನು ನೋಡಿದ ದೇವರು ಯಾಕೋಬನ ತೊಡೆಯ ಕೀಲನ್ನು ಮುಟ್ಟಿದರು. ಯಾಕೋಬನು ಆ ಸಮಯದಲ್ಲಿ ಕೇವಲ 90 ವರುಷದವನಾಗಿದ್ದನು ಹಾಗೂ ಆತನು ತುಂಬಾ ಬಲಿಷ್ಠ ಮನುಷ್ಯನಾಗಿದ್ದನು. ಈತನ ಅಜ್ಜನಾದ ಅಬ್ರಹಾಮನು 175 ವರುಷಗಳ ಕಾಲ ಬದುಕಿದ್ದನು. ಅದಕ್ಕೆ ಹೋಲಿಸಿದಾಗ ನಾವು ಈ ರೀತಿಯಾಗಿ ಹೇಳಬಹುದು, ಯಾಕೋಬನು ಇಲ್ಲಿ ತನ್ನ ಯೌವನದ ಶಿಖರವನ್ನು ತಲುಪಿದ್ದನು ಎಂಬುದಾಗಿ, ಮತ್ತು ಆತನ ಮುಂದೆ 75%ರಷ್ಟು ಜೀವಿತ ಇನ್ನೂ ಉಳಿದಿತ್ತು.

ಅಂತಹ ಯೌವನ ಪ್ರಾಯದಲ್ಲಿ ತೊಡೆಯ ಕೀಲು ಮುರಿದುಹೋಗುವದೆಂದು ಅತನು ಯೋಚಿಸಿಯೇ ಇರಲಿಲ್ಲ - ಆತನು ತನ್ನ ಜೀವಿತಕ್ಕಾಗಿ ಮಾಡಿಕೊಂಡಿದ್ದ ಎಲ್ಲಾ ಯೋಜನೆಗಳು ಭಗ್ನಗೊಂಡಿದ್ದವು. ಇವತ್ತಿನ ಕಾಲಮಾನಕ್ಕೆ ಇದನ್ನು ಅಳವಡಿಸಿ ನೋಡುವದಾದರೆ, 20 ವರುಷದ ಒಬ್ಬ ಯೌವನಸ್ಥನ ತೊಡೆಯ ಕೀಲನ್ನು ತಪ್ಪಿಸಿದ ಹಾಗೆ ಆಗಿತ್ತು ಮತ್ತು ಮುಂದೆ ಜೀವಮಾನವಿಡೀ ಆತನು ಊರುಗೋಲನ್ನು ಉಪಯೋಗಿಸಬೇಕು!! ಅದು ಒಂದು ರೀತಿ ಎಲ್ಲವನ್ನೂ ಕಳೆದುಕೊಂಡಂತಹ ಅನುಭವ. ಯಾಕೋಬನು ತನ್ನ ಮಿಕ್ಕ ಜೀವಿತದಲ್ಲಿ ಊರುಗೋಲನ್ನು ಉಪಯೋಗಿಸದೇ ನಡೆಯುವಂತಿರಲಿಲ್ಲ. ದೇವರು ಯಾಕೋಬನನ್ನು ಮುರಿಯಲು ಬಹಳಷ್ಟು ರೀತಿಯಲ್ಲಿ ಪ್ರಯತ್ನಿಸಿದ್ದರು, ಆದರೆ ಯಶಸ್ಸು ಕಾಣಲಿಲ್ಲ; ಹಾಗಾಗಿ ದೇವರು ಕೊನೆಯದಾಗಿ ಮಾಡಿದ್ದೇನೆಂದರೆ, ಆತನಿಗೆ ಶಾಶ್ವತವಾಗಿ ದೈಹಿಕ ಅಂಗವಿಕಲತೆಯನ್ನು ಕೊಟ್ಟುಬಿಟ್ಟರು. ಯಾಕೋಬನನ್ನು ಮುರಿಯುವಲ್ಲಿ ಅಂತಿಮವಾಗಿ ಈ ತಂತ್ರ ಯಶಸ್ವಿಯಾಗಿತ್ತು. ನಮ್ಮ ಜೀವಿತವೂ ಹೀಗಿದ್ದರೆ, ದೇವರು ನಮಗೂ ಅದನ್ನೇ ಮಾಡುತ್ತಾರೆ. ದೇವರು ಯಾರನ್ನು ಪ್ರೀತಿಸುತ್ತಾರೋ ಅವರನ್ನೇ ಗದರಿಸುತ್ತಾರೆ, ಕಾರಣ ಅವರನ್ನು ಇನ್ನೂ ದೊಡ್ಡ ಅನಾಹುತದಿಂದ ತಪ್ಪಿಸುವ ಸಲುವಾಗಿ. ದೇವರು ಯಾಕೋಬನ ಕೀಲನ್ನು ತಪ್ಪಿಸಿದ ನಂತರ, ಆತನಿಗೆ ಹೇಳಿದ್ದೇನೆಂದರೆ, ''ಸರಿ, ನಾನು ನನ್ನ ಕೆಲಸವನ್ನು ಮುಗಿಸಿದ್ದೇನೆ. ಈಗ ನನ್ನನ್ನು ಹೋಗಲು ಬಿಡು. ನೀನು ಯಾವತ್ತೂ ನನ್ನನ್ನು ಬಯಸಲಿಲ್ಲ. ನಿನಗೆ ಬೇಕಾಗಿದ್ದುದು ಸಂಪತ್ತು ಮತ್ತು ಹೆಣ್ಣು ಇಷ್ಟೇ'' ಎಂಬುದಾಗಿ. ಆದರೆ ಈಗ ಯಾಕೋಬನು ದೇವರನ್ನು ಹೋಗಲು ಬಿಡಲಿಲ್ಲ. ಕೊನೆಗೂ ಆತನಲ್ಲಿ ಬದಲಾವಣೆ ಉಂಟಾಗಿತ್ತು! ಜೀವಿತವನ್ನೆಲ್ಲಾ ಹೆಣ್ಣನ್ನೂ ಮತ್ತು ಆಸ್ತಿಯನ್ನೂ ದೋಚುವದರಲ್ಲಿ ತೊಡಗಿದ್ದ ಈ ಮನುಷ್ಯ, ಈಗ ದೇವರನ್ನು ಥಟ್ಟನೆ ಹಿಡಿದುಕೊಂಡು ಹೀಗೆ ಹೇಳಿದನು, ''ನೀನು ನನ್ನನ್ನು ಆಶಿರ್ವದಿಸದ ಹೊರತು, ನಾನು ನಿನ್ನನ್ನು ಹೋಗಲು ಬಿಡುವುದಿಲ್ಲ''. ಯಾಕೋಬನ ಕೀಲು ತಪ್ಪಿದಾಗ ಆತನ ಹೃದಯದಲ್ಲಿ ಎಂಥಹ ದೊಡ್ಡ ಕಾರ್ಯ ಪೂರೈಸಲ್ಪಟ್ಟಿತ್ತು ಎಂದರೆ, ಈಗ ಆತನು ದೇವರನ್ನು ಮಾತ್ರ ಬಯಸುತ್ತಿದ್ದನು.

ಹಳೆಯ ಗಾದೆ ಮಾತೊಂದು ಇದೆ, ''ನಿಮ್ಮ ಬಳಿ ದೇವರೊಬ್ಬನೇ ಉಳಿದಾಗ, ದೇವರು ಮಾತ್ರವೇ ಸಾಕೆಂಬ ಅರಿವು ನಿಮಗೆ ಆಗುತ್ತದೆ''!! ಅದು ನಿಜವೇ. ಇಲ್ಲಿ ದೇವರು ''ನಿನ್ನ ಹೆಸರೇನು?'' ಎಂದು ಆತನನ್ನು ಪ್ರಶ್ನಿಸುತ್ತಾರೆ. ಯಾಕೋಬನ ಪ್ರತಿಕ್ರಿಯೆ: 'ನನ್ನ ಹೆಸರು ಯಾಕೋಬನೆಂದು''. ''ಯಾಕೋಬ'' ಎಂಬುದರ ಅರ್ಥ ವಂಚಕನೆಂದು. ಕೊನೆಯಲ್ಲಿ ಯಾಕೋಬನು ತಾನು ಮೋಸಗಾರನೆಂದು ಒಪ್ಪಿಕೊಂಡನು. ಒಂದು ವೇಳೆ ನೀವೂ ಸಹ ಮೋಸಗಾರರು ಆಗಿರುವಿರೇ? ನೀವು ಇತರರ ಮುಂದೆ ಆತ್ಮಿಕ ವ್ಯಕ್ತಿಯೆಂಬ ತೋರಿಕೆಯನ್ನು ಮಾಡಿ ಅವರನ್ನು ಮೂರ್ಖರನ್ನಾಗಿಸುತ್ತಿದ್ದೀರಾ? ಹಾಗಿದ್ದಲ್ಲಿ, ಇವತ್ತು ಪ್ರಾಮಾಣಿಕವಾಗಿ ನಡೆದು, ದೇವರ ಮುಂದೆ ನಿಮ್ಮ ಕಪಟತನವನ್ನು ಒಪ್ಪಿಕೊಳ್ಳುತ್ತೀರಾ? ಅನೇಕ ವರುಷಗಳ ಹಿಂದೆ, ಯಾಕೋಬನ ಕುರುಡು ತಂದೆಯಾದ ಇಸಾಕನು ಈತನ ಹೆಸರನ್ನು ಕೇಳಿದಾಗ, ಆತನು ಏಸಾವನೆಂದು ನಟಿಸಿದ್ದನು. ಆದರೆ ಈಗ ಈತನು ಪ್ರಾಮಾಣಿಕನಾಗಿದ್ದನು. ದೇವರು ತಕ್ಷಣವೇ ಆತನಿಗೆ ಹೇಳಿದ್ದೇನೆಂದರೆ, ''ನೀನು ಇನ್ನು ಮುಂದೆ ಮೋಸಗಾರನಾಗಿರುವುದಿಲ್ಲ (ಯಾಕೋಬ)'' (ಆದಿಕಾಂಡ 32:28). ಇದು ಒಂದು ಪ್ರೋತ್ಸಾಹದಾಯಕ ಮಾತಲ್ಲವೇ? ಇದನ್ನು ನೀವು ಕೇಳಿಸಿಕೊಂಡಿರಾ? "ನೀನು ಇನ್ನು ಮುಂದೆ ವಂಚಕನು ಆಗಿರುವುದಿಲ್ಲ". ಹಲ್ಲೇಲೂಯ! ದೇವರು ಮುಂದುವರೆಸಿ ಯಾಕೋಬನಿಗೆ ಹೇಳಿದ್ದೇನೆಂದರೆ, "ನಿನ್ನ ಹೆಸರು ಇನ್ನು ಮುಂದೆ ಇಸ್ರಾಯೇಲೆಂದು (ದೇವರ ರಾಜಕುಮಾರ) ಇರುವುದು, ಏಕೆಂದರೆ ನೀನು ದೇವರ ಸಂಗಡ ಮತ್ತು ಮನುಷ್ಯರ ಸಂಗಡ ಹೋರಾಡಿ ಗೆದ್ದಿದ್ದೀಯ". ಎಂತಹ ಬದಲಾವಣೆ - ಒಬ್ಬ ಮೋಸಗಾರನು ರಾಜಕುಮಾರನಾಗುವದು. ಇವೆಲ್ಲವೂ ಕೈಗೂಡಿದ್ದು ಯಾಕೋಬನು ಮುರಿಯಲ್ಪಟ್ಟಾಗ ಮಾತ್ರ. ನಮ್ಮ ಕರೆಯೂ ಸಹ ಇದೆ ಆಗಿದೆ - ಒಬ್ಬ ರಾಜಕುಮಾರನಾಗಿ, ಕ್ರಿಸ್ತನೊಟ್ಟಿಗೆ ಆತನ ಸಿಂಹಾಸನದಲ್ಲಿ ಆಸೀನರಾಗಿ, ಸೈತಾನನ ಮೇಲೆ ಆತ್ಮಿಕ ಅಧಿಕಾರವನ್ನು ಪ್ರಯೋಗಿಸಿ, ಪುರುಷರು ಮತ್ತು ಸ್ತ್ರೀಯರನ್ನು ಸೈತಾನನ ಬಂಧನದಿಂದ ಬಿಡಿಸುವುದಾಗಿದೆ. ಕ್ರಿಸ್ತನ ದೇಹದ ಭಾಗಗಳಾಗಿ, ದೇವರ ಸಂಗಡ ಹಾಗೂ ಮನುಷ್ಯರ ಸಂಗಡ ಬಲವನ್ನು ಹೊಂದಿದವರಾಗಿ ಜಯಶಾಲಿಗಳು ಆಗಬೇಕು. ನಾವು ಎಲ್ಲಾ ಮನುಷ್ಯರಿಗೆ ಆಶಿರ್ವಾದದ ನಿಧಿಯಾಗಿರಬೇಕು ಎಂಬುದಾಗಿ ಕರೆಯಲ್ಪಟ್ಟಿದ್ದೇವೆ. ಆದರೆ ಇದು ಸಾಧ್ಯವಾಗುವದು ನಾವು ಮುರಿಯಲ್ಪಟ್ಟಾಗ ಮಾತ್ರ. ಮತ್ತು ನಾವು ಮುರಿಯಲ್ಪಡುವದು ನಮ್ಮ ಕಪಟತನ ಹಾಗೂ ನಮ್ಮ ವಂಚನೆಯ ಬಗ್ಗೆ ಪ್ರಾಮಾಣಿಕವಾಗಿ ದೇವರ ಮುಂದೆ ಒಪ್ಪಿಕೊಂಡಾಗ ಮಾತ್ರವೇ.