ಯೆಶಾಯನ ಗ್ರಂಥದಲ್ಲಿ ಕರ್ತನಾದ ಯೇಸುವಿನ ಬಗ್ಗೆ ಪ್ರಸ್ತಾಪಿಸಲಾಗಿರುವ ಒಂದು ಪ್ರವಾದನಾ ವಾಕ್ಯವು ಈ ರೀತಿಯಾಗಿದೆ: "ಅವರು (ನನ್ನ ತಂದೆಯು) ಬೆಳಬೆಳಗೂ ನನ್ನನ್ನು ಎಚ್ಚರಗೊಳಿಸಿ, ನಾನು ಅವರ ಚಿತ್ತವನ್ನು ಅರಿತುಕೊಳ್ಳುವಂತೆ ನನ್ನ ತಿಳುವಳಿಕೆಯನ್ನು ತೆರೆಯುತ್ತಾರೆ" (ಯೆಶಾಯನು 50:4). ಇದು ಯೇಸುವಿನ ಪ್ರತಿದಿನದ ಅನುಭವವಾಗಿತ್ತು. ಅವನು ಮುಂಜಾನೆಯಿಂದ ಆರಂಭಿಸಿ, ದಿನವಿಡೀ ತನ್ನ ತಂದೆಯ ಸ್ವರವನ್ನು ಆಲಿಸುತ್ತಿದ್ದನು ಮತ್ತು ತಂದೆಯು ತನಗೆ ಹೇಳಿದ್ದನ್ನು ನಿಖರವಾಗಿ ಮಾಡುತ್ತಿದ್ದನು. ಅವನು ತಾನು ಮಾಡಬೇಕಾದ ಕಾರ್ಯದ ಬಗ್ಗೆ ತೀರ್ಮಾನಿಸಲು ಮನುಷ್ಯರೊಂದಿಗೆ ಚರ್ಚಿಸುತ್ತಿರಲಿಲ್ಲ, ಆದರೆ ತನ್ನ ತಂದೆಯ ಜೊತೆಗೆ ಪ್ರಾರ್ಥನಾ ಸಭೆಗಳಲ್ಲಿ ಸೇರಿಕೊಳ್ಳುತ್ತಿದ್ದನು. ಭಾವಾತ್ಮಕ ಸ್ವಭಾವದ ಕ್ರೈಸ್ತರು ಮನುಷ್ಯರೊಂದಿಗೆ ಚರ್ಚಿಸಿ ಯೋಜನೆಗಳನ್ನು ಹಾಕುತ್ತಾರೆ. ಆತ್ಮಿಕ ಕ್ರೈಸ್ತರು ದೇವರ ಸ್ವರವನ್ನು ಕೇಳಲು ಕಾಯುತ್ತಾರೆ.
ಯೇಸುವು ತನ್ನ ಜೀವಿತದಲ್ಲಿ ಪ್ರಾರ್ಥನೆಗೆ ಹೆಚ್ಚಿನ ಆದ್ಯತೆ ನೀಡಿದನು. ಅವರು ಹಲವು ಬಾರಿ ಯಾರಿಗೂ ತಿಳಿಯದಂತೆ ಅರಣ್ಯಕ್ಕೆ ಹೋಗಿ ಪ್ರಾರ್ಥನೆ ಮಾಡುತ್ತಿದ್ದನು (ಲೂಕನು 5:16). ಒಂದು ಸಲ ಅವನು ಹನ್ನೆರಡು ಶಿಷ್ಯರನ್ನು ಆರಿಸಿಕೊಳ್ಳಬೇಕಾಗಿದ್ದ ಸಂದರ್ಭದಲ್ಲಿ, ಆ ವಿಚಾರವಾಗಿ ತನ್ನ ತಂದೆಯ ಚಿತ್ತವನ್ನು ತಿಳಿದುಕೊಳ್ಳಲು ಇಡೀ ರಾತ್ರಿ ಪ್ರಾರ್ಥನೆಯಲ್ಲಿ ಕಳೆದನು (ಲೂಕನು 6:12,13). ಭಾವಾತ್ಮಕ ಕ್ರೈಸ್ತನು ದೇವರಿಗಾಗಿ ಕಾಯುವುದು ಸಮಯವನ್ನು ವ್ಯರ್ಥ ಮಾಡಿದಂತೆ ಎಂದು ಅಂದುಕೊಳ್ಳುತ್ತಾನೆ, ಮತ್ತು ತನ್ನ ಆತ್ಮಸಾಕ್ಷಿಯ ಸಮಾಧಾನಕ್ಕಾಗಿ ಮಾತ್ರ ಪ್ರಾರ್ಥಿಸುತ್ತಾನೆ. ಆತನ ಜೀವನದಲ್ಲಿ ಪ್ರಾರ್ಥನೆಯ ಕಡ್ಡಾಯ ಅವಶ್ಯಕತೆ ಇರುವುದಿಲ್ಲ, ಏಕೆಂದರೆ ಆತನು ತನ್ನಲ್ಲೇ ಭರವಸೆ ಇಡುತ್ತಾನೆ. ಇದಕ್ಕೆ ಪ್ರತಿಯಾಗಿ, ಒಬ್ಬ ಆತ್ಮಿಕ ಮನುಷ್ಯನು ಎಲ್ಲಾ ವಿಷಯಗಳಿಗಾಗಿ ನಿರಂತರವಾಗಿ ದೇವರನ್ನು ಆತುಕೊಳ್ಳುತ್ತಾನೆ, ಮತ್ತು ತನ್ನ ವಿಪರೀತವಾದ ಅವಶ್ಯಕತೆಯ ಸಲುವಾಗಿ ಆತನು ಪ್ರಾರ್ಥನೆ ಮಾಡುವುದು ಅನಿವಾರ್ಯವಾಗುತ್ತದೆ.
"ಯೇಸುವು ಜೀವನವಿಡೀ ತನ್ನ ತಂದೆಯ ಮಾತನ್ನು ಕೇಳಿಸಿಕೊಂಡು ಜೀವಿಸಿದನು ಮತ್ತು ಆ ರೀತಿಯಾಗಿ ತನ್ನ ತಂದೆಯ ಸಂಪೂರ್ಣ ಚಿತ್ತವನ್ನು ನೆರವೇರಿಸಿದನು"
ಯೇಸುವು ತನ್ನ ತಂದೆಯ ಮೂಲಕ ಜೀವಿಸಿದನು (ಯೋಹಾನನು 6:57). ಯೇಸುವಿಗೆ ದೇವರ ವಾಕ್ಯವು ರೊಟ್ಟಿಗಿಂತ ಪ್ರಾಮುಖ್ಯವಾಗಿತ್ತು (ಮತ್ತಾಯನು 4:4). ಅವನು ದಿನದಲ್ಲಿ ಅನೇಕ ಸಾರಿ ದೇವರ ವಾಕ್ಯವನ್ನು ನೇರವಾಗಿ ತನ್ನ ತಂದೆಯಿಂದ ಪಡೆಯಲೇಬೇಕಾಗಿತ್ತು.ತಾನು ಪಡೆದ ವಾಕ್ಯಕ್ಕೆ ಅವನು ವಿಧೇಯನಾದನು. ವಾಕ್ಯಕ್ಕೆ ವಿಧೇಯತೆಯೂ ಸಹ ಅವನಿಗೆ ಅನುದಿನದ ಆಹಾರಕ್ಕಿಂತ ಹೆಚ್ಚು ಪ್ರಾಮುಖ್ಯವಾಗಿತ್ತು (ಯೋಹಾನನು 4:34).ಯೇಸುವು ತಂದೆಯ ಮೇಲೆ ಆತುಕೊಂಡು ಜೀವಿಸುತ್ತಿದ್ದನು. "ತಂದೆಯೇ, ಮಾತನಾಡು, ನಾನು ಕೇಳಿಸಿಕೊಳ್ಳುತ್ತೇನೆ," ಎಂಬುದು ಅವರ ಇಡೀ ದಿನದ ಮನೋಭಾವವಾಗಿತ್ತು.
ಯೇಸುವು ದೇವಾಲಯದಲ್ಲಿದ್ದ ವ್ಯಾಪಾರಸ್ಥರನ್ನು ಹೊರಕ್ಕೆ ಅಟ್ಟಿದ್ದರ ಬಗ್ಗೆ ಆಲೋಚಿಸೋಣ. ಅನೇಕ ಸಂದರ್ಭಗಳಲ್ಲಿ ದೇವಾಲಯದಲ್ಲಿ ಯೇಸು ಮತ್ತು ಈ ವ್ಯಾಪಾರಿಗಳು ಒಟ್ಟಿಗೆ ಇದ್ದರು. ಆದರೂ ಆತನು ಅವರನ್ನು ಅಲ್ಲಿಂದ ಓಡಿಸಲಿಲ್ಲ. ಆದರೆ ಅವನು ತನ್ನ ತಂದೆಯಿಂದ ನಡೆಸಲ್ಪಟ್ಟಾಗ ಮಾತ್ರ ಆ ಕಾರ್ಯವನ್ನು ಮಾಡಿದನು. ಆದರೆ ಭಾವಾತ್ಮಕ ಕ್ರೈಸ್ತರು ಒಂದೋ ನಿರಂತರವಾಗಿ ಈ ವ್ಯಾಪಾರಸ್ಥರನ್ನು ಹೊರಕ್ಕೆ ಅಟ್ಟಿಸುತ್ತಾರೆ, ಇಲ್ಲವೇ ಯಾವತ್ತೂ ಅದನ್ನು ಮಾಡುವುದಿಲ್ಲ. ಆದಾಗ್ಯೂ ದೇವರಿಂದ ನಡೆಸಲ್ಪಟ್ಟವನು ಯಾವಾಗ, ಎಲ್ಲಿ ಮತ್ತು ಹೇಗೆ ವರ್ತಿಸಬೇಕೆಂಬುದಾಗಿ ತಿಳಿದಿರುತ್ತಾನೆ.
ಯೇಸುವು ಮಾಡಬಹುದಾಗಿದ್ದ ಅನೇಕ ಸತ್ಕಾರ್ಯಗಳಿದ್ದವು, ಆದರೆ ಅವುಗಳು ತನ್ನ ಪರಲೋಕದ ತಂದೆಯ ಚಿತ್ತಾನುಸಾರವಾದ ಕಾರ್ಯಗಳು ಆಗಿರದಿದ್ದುದರಿಂದ, ಅವನು ಅವನ್ನು ಮಾಡಲೇ ಇಲ್ಲ. ಅವರು ಯಾವಾಗಲೂ ಅತ್ಯುತ್ತಮ ಕಾರ್ಯಗಳಲ್ಲಿ ನಿರತರಾಗಿದ್ದನು. ಅಷ್ಟು ಮಾತ್ರವೇ ಸಾಕಾಗಿತ್ತು. ಅವನು ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕಾಗಿ ಈ ಲೋಕಕ್ಕೆ ಬರಲಿಲ್ಲ, ಆದರೆ ತನ್ನ ತಂದೆಯ ಚಿತ್ತವನ್ನು ನೆರವೇರಿಸುವುದಕ್ಕಾಗಿ ಬಂದನು.
ಯೇಸುವು ಹನ್ನೆರಡು ವಯಸ್ಸಿನ ಹುಡುಗನಾಗಿದ್ದಾಗ, "ನಾನು ನನ್ನ ತಂದೆಯ ಕಾರ್ಯಗಳಲ್ಲಿ ತೊಡಗಿರಬೇಕೆಂದು ನಿಮಗೆ ತಿಳಿದಿಲ್ಲವೇ?" ಎಂದು ಯೋಸೇಫ ಮತ್ತು ಮರಿಯಳನ್ನು ಪ್ರಶ್ನಿಸಿದನು (ಲೂಕನು 2:49 - YLT ಅನುವಾದ). ಕೇವಲ ಆ ಕಾರ್ಯಗಳನ್ನು ಪೂರೈಸುವುದು ಆತನ ಆಸಕ್ತಿಯಾಗಿತ್ತು. ಈ ಲೋಕದಲ್ಲಿ ಅವರು 33 1/2 ವರ್ಷಗಳನ್ನು ಕಳೆಯುವಷ್ಟರಲ್ಲಿ, "ತಂದೆಯೇ, ನೀವು ಮಾಡಬೇಕೆಂದು ಹೇಳಿದ್ದನ್ನೆಲ್ಲಾ ನಾನು ಮಾಡಿದ್ದೇನೆ," ಎಂದು ಸಂಪೂರ್ಣ ತೃಪ್ತಿಯಿಂದ ಹೇಳಲು ಸಾಧ್ಯವಾಯಿತು (ಯೋಹಾನನು 17:4).
ಅವನು ಪ್ರಪಂಚದಾದ್ಯಂತ ಪ್ರಯಾಣಿಸಲಿಲ್ಲ, ಅಥವಾ ಒಂದು ಪುಸ್ತಕವನ್ನೂ ಸಹ ಬರೆಯಲಿಲ್ಲ, ಅವನಿಗೆ ಕೇವಲ ಕೆಲವು ಶಿಷ್ಯರು ಮಾತ್ರ ಇದ್ದರು, ಪ್ರಪಂಚದ ಅನೇಕ ಭಾಗಗಳಲ್ಲಿ ಪೂರೈಸದ ಅವಶ್ಯಕತೆಗಳು ಇನ್ನೂ ಅನೇಕವಿದ್ದವು. ಆದರೆ ತಂದೆಯು ಅವನಿಗಾಗಿ ನೇಮಿಸಿದ್ದ ಕೆಲಸವನ್ನು ಅವನು ಮುಗಿಸಿದನು. ಅಂತಿಮವಾಗಿ, ಅದು ಮತ್ತು ಅದು ಮಾತ್ರವೇ ಪ್ರಮುಖವಾದದ್ದಾಗಿದೆ.
ಯೇಸುವು ಸೃಷ್ಟಿಕರ್ತನಾದ ದೇವರ ಒಬ್ಬ ಸೇವಕನಾಗಿದ್ದನು. ಹಾಗಿರುವಾಗ, "ಒಬ್ಬ ಸೇವಕನ ಅತ್ಯಂತ ಮುಖ್ಯವಾದ ಅರ್ಹತೆ ಏನೆಂದರೆ, ಅವನು ನಂಬಿಗಸ್ತನಾಗಿದ್ದು, ತನ್ನ ಯಜಮಾನನು ಏನು ಹೇಳುತ್ತಾನೋ ಅದನ್ನು ಮಾಡುತ್ತಾನೆ" (1 ಕೊರಿ. 4:2 - The Living Bible ಭಾವಾನುವಾದ). ಜೀವನವಿಡೀ ಅವನು ತನ್ನ ತಂದೆಯ ಮಾತನ್ನು ಕೇಳಿಸಿಕೊಂಡು ಜೀವಿಸಿದನು ಮತ್ತು ಆ ರೀತಿಯಾಗಿ ತನ್ನ ತಂದೆಯ ಸಂಪೂರ್ಣ ಚಿತ್ತವನ್ನು ನೆರವೇರಿಸಿದನು; ಅವರಿಗೆ ಇದರಲ್ಲಿ ಬಳಲಿಕೆಯಾಗಲೀ, ಅಥವಾ ಬೇಸರವಾಗಲೀ, ಅಥವಾ ಅನ್ಯ ವಿಷಯಗಳ ಕಡೆ ಗಮನವಾಗಲೀ ಇರಲಿಲ್ಲ. ಅವನು ತನ್ನ ಸ್ವಂತ ಮಾನವ ಹಿತಾಸಕ್ತಿಗಳನ್ನು ತನ್ನ ಮನಸ್ಸಿನಿಂದ ಕಿತ್ತುಹಾಕಿದನು. ಅವನು ಭಾವಾತ್ಮಕ ವ್ಯಕ್ತಿಯಾಗಿರಲಿಲ್ಲ. ಅವನು ಆತ್ಮಿಕನಾಗಿದ್ದನು.