WFTW Body: 

ಮೋಶೆಯು ತನ್ನ ಕೈಯಲ್ಲಿ ದೇವರ ಆಜ್ಞೆಗಳು ಬರೆಯಲ್ಪಟ್ಟಿದ್ದ ಎರಡು ಕಲ್ಲಿನ ಹಲಗೆಗಳನ್ನು ಹಿಡಿದುಕೊಂಡು ಸಿನಾಯಿ ಬೆಟ್ಟದಿಂದ ಇಳಿದು ಬಂದನು. ಒಂದು ಕಲ್ಲಿನ ಹಲಗೆಯಲ್ಲಿ ದೇವರೊಂದಿಗೆ ಮನುಷ್ಯನ ಸಂಬಂಧವನ್ನು ವಿವರಿಸುವ ಮೊದಲ ನಾಲ್ಕು ಆಜ್ಞೆಗಳಿದ್ದವು. ಮತ್ತೊಂದರಲ್ಲಿ ಮನುಷ್ಯನು ತನ್ನ ನೆರೆಯವರೊಂದಿಗೆ ಇರಿಸಿಕೊಳ್ಳಬೇಕಾದ ಸಂಬಂಧವನ್ನು ವಿವರಿಸುವ ಮಿಕ್ಕ ಆರು ಆಜ್ಞೆಗಳಿದ್ದವು.

ಈ ಎರಡು ಕಲ್ಲಿನ ಹಲಗೆಗಳ ಸಾರಾಂಶವನ್ನು ಎರಡು ಆಜ್ಞೆಗಳಲ್ಲಿ ಚುಟುಕಾಗಿ ಹೇಳಬಹುದೆಂದು ಕರ್ತನಾದ ಯೇಸುವು ಹೇಳಿದರು. ಮೊದಲನೆಯದು, "ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು;" ಮತ್ತು ಎರಡನೆಯದು, "ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು" (ಮತ್ತಾಯನು 22: 37-39).

ಯೇಸುವು ತಾನು ಕಲಿಸಿದ ಪ್ರಾರ್ಥನೆಯಲ್ಲೂ ಈ ಎರಡು ಅಂಶಗಳನ್ನು ಒತ್ತಿ ಹೇಳಿದರು. ಆ ಪ್ರಾರ್ಥನೆಯ ಮೊದಲ ಮೂರು ಮನವಿಗಳು ಮೊದಲನೇ ಆಜ್ಞೆಗೆ ಸಂಬಂಧಿಸಿವೆ. ಮತ್ತು ಮುಂದಿನ ಮೂರು ಮನವಿಗಳು ಎರಡನೇ ಆಜ್ಞೆಗೆ ಸಂಬಂಧಿಸಿವೆ. ಮತ್ತು ಯೇಸುವು ತನ್ನ ಶಿಷ್ಯರಿಗೆ ನೀಡಿದ "ಹೊಸ ಆಜ್ಞೆಯಲ್ಲಿ" ಇದನ್ನು ಈ ರೀತಿಯಾಗಿ ವಿವರಿಸಿ ಹೇಳಿದರು: "ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು" (ಯೋಹಾನನು 13:34).

ಯೇಸುವಿನ ಒಬ್ಬ ನಿಜವಾದ ಶಿಷ್ಯನು ಅರಿವಿದ್ದು ಹಾಗೂ ಅರಿವಿಲ್ಲದಿರುವಲ್ಲಿಯೂ ಸಹ ದೇವರಲ್ಲಿ ಪರಿಪೂರ್ಣವಾಗಿ ಕೇಂದ್ರೀಕೃತವಾಗಿರುವುದನ್ನು ಬಯಸುತ್ತಾನೆ - ಅಂದರೆ ಆತನ ಪ್ರತಿಯೊಂದು ಬಯಕೆಯು ದೇವರೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗಿರಬೇಕು ಎಂಬುದನ್ನು ಬಯಸುತ್ತಾನೆ; ಮತ್ತು ತನ್ನ ಜೀವಿತದಲ್ಲಿ ದೇವರ ಚಿತ್ತವನ್ನು ಮೀರುವ ಯಾವ ಇಚ್ಛೆ, ಮಹತ್ವಾಕಾಂಕ್ಷೆ ಅಥವಾ ಭಾವನೆಯೂ ಇರದಂತೆ ನೋಡಿಕೊಳ್ಳುತ್ತಾನೆ. ಅದೇ ವೇಳೆ, ಯೇಸುವು ತನ್ನನ್ನು ಪ್ರೀತಿಸಿದ ಹಾಗೆಯೇ, ತಾನು ತನ್ನ ಸಹೋದರರನ್ನು ಪರಿಪೂರ್ಣವಾಗಿ ಪ್ರೀತಿಸಬೇಕೆಂದು ಸಹ ಆತನು ಎದುರುನೋಡುತ್ತಾನೆ.

ದೇವರ ಉನ್ನತವಾದ ಕರೆ ಏನೆಂದರೆ, ದೇವರಲ್ಲಿ ಪರಿಪೂರ್ಣವಾಗಿ ಕೇಂದ್ರೀಕೃತವಾಗಿರುವುದು

ಆದಾಗ್ಯೂ ಇವೆರಡು ಕ್ಷೇತ್ರಗಳಲ್ಲಿ ತನ್ನ ಮನೋಭಾವವು ಇನ್ನೂ ಪರಿಪೂರ್ಣವಾಗಿಲ್ಲ ಎಂಬ ಅರಿವು ಯಾವಾಗಲೂ ಆತನಲ್ಲಿರುತ್ತದೆ. ಆದರೆ ಆತನು ಆ ಗುರಿಯ ಕಡೆಗೆ ಯಾವಾಗಲೂ ಕಾರ್ಯೋನ್ಮುಖನಾಗಿರುತ್ತಾನೆ; ಅದಕ್ಕಾಗಿ ಯಾವ ಬೆಲೆಯನ್ನು ತೆರಲೂ ಸಹ ಆತನು ಮನಸ್ಸುಳ್ಳವನಾಗಿರುತ್ತಾನೆ.

ನಮ್ಮ ಸಹೋದರರನ್ನು ಪ್ರೀತಿಸುವುದೆಂದರೆ ಅವರ ಬಗ್ಗೆ ಕಾಳಜಿ ಹೊಂದಿರುವುದಾಗಿದೆ. ನಾವು ಪ್ರಪಂಚದ ಎಲ್ಲಾ ಜನರಿಗಾಗಿ ಕಾಳಜಿ ವಹಿಸಲು ಸಾಧ್ಯವಿಲ್ಲ. ಅದು ದೇವರಿಗೆ ಮಾತ್ರ ಸಾಧ್ಯವಿದೆ. ಆದರೆ ವಿಶ್ವಾಸಿಗಳಾದ ನಮ್ಮ ಸಹೋದರರ ಬಗ್ಗೆ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಕಾಳಜಿಯನ್ನು ನಾವು ವಹಿಸಬೇಕು; ಮತ್ತು ನಮ್ಮಲ್ಲಿ ಈ ಸಾಮರ್ಥ್ಯವು ಸದಾ ಹೆಚ್ಚುತ್ತಿರಬೇಕು.

ನಾವು ಈ ರೀತಿ ಪ್ರಾರಂಭಿಸುವುದಿಲ್ಲ. ನಮ್ಮ ಮೊದಲ ಹೆಜ್ಜೆ ಯಾವುದೆಂದರೆ, ಯೇಸುವು ನಮ್ಮನ್ನು ಪ್ರೀತಿಸಿದ ಹಾಗೆ ನಾವು ನಮ್ಮ ಕುಟುಂಬದ ಸದಸ್ಯರನ್ನು ಪ್ರೀತಿಸುವುದಾಗಿದೆ. ಆದರೆ ನಾವು ಅಲ್ಲಿಗೇ ನಿಲ್ಲಿಸಬಾರದು. ಮುಂದಕ್ಕೆ ಸಾಗುತ್ತಾ, ನಾವು ದೇವರ ಕುಟುಂಬದ ನಮ್ಮ ಸಹೋದರ-ಸಹೋದರಿಯರನ್ನು ಯೇಸುವು ನಮ್ಮನ್ನು ಪ್ರೀತಿಸಿದ ಹಾಗೆಯೇ ಪ್ರೀತಿಸುವುದನ್ನು ಎದುರುನೋಡಬೇಕು.

ಮುಂದಕ್ಕೆ ಸಾಗುವುದರ ಒಂದು ಗುರಿ ಪರಿಪೂರ್ಣತೆಯಾಗಿದೆ. ಆದರೆ ನಮ್ಮಲ್ಲಿ ಅಲ್ಲಿಗೆ ತಲಪುವ ಧೃಢ ನಿರ್ಧಾರ ಇರಬೇಕು. ಇದೇ ದಿಕ್ಕಿನೆಡೆಗೆ ಪೌಲನು ಸಾಗುವಾಗ, "ನಾನು ಹಿಂದಿನ ವಿಷಯಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವುದಕ್ಕಾಗಿ ಕ್ರಿಸ್ತ ಯೇಸುವಿನಲ್ಲಿ ದೇವರ ಉನ್ನತವಾದ ಕರೆಯುವಿಕೆಯ ಬಹುಮಾನವನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ". (ಫಿಲಿಪ್ಪಿಯವರಿಗೆ 3:13,14).ದೇವರ ಉನ್ನತವಾದ ಕರೆ ಏನೆಂದರೆ, ದೇವರಲ್ಲಿ ಪರಿಪೂರ್ಣವಾಗಿ ಕೇಂದ್ರೀಕೃತವಾಗಿರುವುದು, ದೇವರನ್ನು ಉನ್ನತವಾಗಿ ಪ್ರೀತಿಸುವುದು ಮತ್ತು ಯೇಸುವು ನಮ್ಮನ್ನು ಪ್ರೀತಿಸಿದ ಹಾಗೆ ನಾವು ಸಹ ನಮ್ಮ ಸಹ-ವಿಶ್ವಾಸಿಗಳನ್ನು ಪ್ರೀತಿಸುವುದಾಗಿದೆ ಹಾಗೂ ನಾವು ನಮ್ಮ ನೆರೆಹೊರೆಯವರನ್ನು ನಮ್ಮಂತೆಯೇ ಪ್ರೀತಿಸುವುದಾಗಿದೆ.