ಯೇಸುವು ಪವಿತ್ರಾತ್ಮನಿಂದ ಅಭಿಷೇಕಿಸಲ್ಪಟ್ಟ ನಂತರ ಕಲಿಸಿದ ಮೊಟ್ಟಮೊದಲ ವಿಷಯ ಏನೆಂದರೆ, ನಾವು ದೇವರ ನುಡಿಯನ್ನು ಪಡೆದುಕೊಳ್ಳದೇ ಬದುಕಲಾರೆವು. ಕೇವಲ ದೇವರ ಸೇವೆಯನ್ನು ಮಾಡುವುದರ ಮೂಲಕ ನಾವು ದೇವರ ಉದ್ದೇಶವನ್ನು ಪೂರೈಸಲಾರೆವು ಮತ್ತು ಅವರ ಹೃದಯವನ್ನು ತೃಪ್ತಿಪಡಿಸಲಾರೆವು. ಹಲವಾರು ಕ್ರೈಸ್ತ ವಿಶ್ವಾಸಿಗಳು ಕೆಲವೊಂದು ಮಾತುಗಳನ್ನು ಹೇಳುವುದರಲ್ಲಿ ತೃಪ್ತಿಗೊಳ್ಳುತ್ತಾರೆ, "ನಾನು ಕರ್ತನಿಗಾಗಿ ಇದನ್ನು ಮಾಡುತ್ತಿದ್ದೇನೆ," "ನಾನು ಕರ್ತನಿಗಾಗಿ ಅದನ್ನು ಮಾಡುತ್ತಿದ್ದೇನೆ," "ನಾನು ಒಂದು ಅನಾಥಾಲಯವನ್ನು ನಡೆಸುತ್ತಿದ್ದೇನೆ," "ನಾನು ಒಂದು ಸತ್ಯವೇದ ಅಧ್ಯಯನ ಸಂಸ್ಥೆಯನ್ನು ನಡೆಸುತ್ತಿದ್ದೇನೆ ಮತ್ತು ಜನರಿಗೆ ಸಹಾಯ ಮಾಡುತ್ತಿದ್ದೇನೆ," "ಈ ಬಡಜನರಿಗೆ ನಾನು ಹಣವನ್ನು ಕೊಡುತ್ತಿದ್ದೇನೆ," ಮತ್ತು "ನಾನು ಈ ಜಾಗಕ್ಕೆ ಹೋಗಿ ಇದನ್ನು ಮಾಡುತ್ತೇನೆ."ಅವರು ಯಾವಾಗಲೂ ಕರ್ತನಿಗಾಗಿ ತಾವು ಮಾಡುತ್ತಿರುವ ಕಾರ್ಯದ ಬಗ್ಗೆ ಯೋಚಿಸುತ್ತಿರುತ್ತಾರೆ. ಇವೆಲ್ಲ ಕಾರ್ಯಗಳನ್ನು ನಾನು ಕೀಳಾಗಿ ನೋಡುವುದಿಲ್ಲ. ಕರ್ತನು ಹಿಂದಿರುಗುವ ತನಕ ನಾವು ಕರ್ತನ ಸೇವೆ ಮಾಡಬೇಕು, ಏಕೆಂದರೆ 1 ಕೊರಿಂಥ.15:58ರಲ್ಲಿ ಹೀಗೆ ಹೇಳಲಾಗಿದೆ, "ಸ್ಥಿರಚಿತ್ತರಾಗಿಯೂ, ನಿಶ್ಚಲರಾಗಿಯೂ ಇರ್ರಿ, ಯಾವಾಗಲೂ ಕರ್ತನ ಕೆಲಸವನ್ನು ಅತ್ಯಾಸಕ್ತಿಯಿಂದ ಮಾಡುವವರಾಗಿರಿ."ನಾನು ನನ್ನ ಜೀವಿತದ ಕೊನೆಯವರೆಗೆ, ಕ್ರಿಸ್ತನು ಹಿಂದಿರುಗುವರೆಗೆ, ಇದನ್ನು ಮಾಡಲು ಇಚ್ಛಿಸುತ್ತೇನೆ, ಮತ್ತು "ಯಾವಾಗಲೂ ಕರ್ತನ ಕೆಲಸವನ್ನು ಅತ್ಯಾಸಕ್ತಿಯಿಂದ ಮಾಡಲು ಇಚ್ಛಿಸುತ್ತೇನೆ." ನಾನು ಎಂದಿಗೂ ಕರ್ತನ ಸೇವೆ ಮಾಡುವುದನ್ನು ನಿಲ್ಲಿಸಲು ಬಯಸುವುದಿಲ್ಲ. ಹಾಗಾಗಿ ನಾನು ಇವೆಲ್ಲಾ ಕಾರ್ಯಗಳನ್ನು ತಾತ್ಸಾರ ಮಾಡುವುದಿಲ್ಲ.
ನಾವು ದೇವರ ಸೇವೆ ಮಾಡಬೇಕು ಎಂಬುದಾಗಿ ನಂಬುತ್ತೇನೆ, ಆದಾಗ್ಯೂ ಸೇವೆಗಿಂತ ಹೆಚ್ಚು ಪ್ರಾಮುಖ್ಯವಾದದ್ದು ದೇವರ ವಾಕ್ಯವನ್ನು ಪಡೆದುಕೊಳ್ಳುವುದು, ಎಂಬುದನ್ನು ನಾನು ಒತ್ತಿ ಹೇಳಬಯಸುತ್ತೇನೆ. "ಮನುಷ್ಯನು ಕೇವಲ ದೇವರ ಸೇವೆಯಿಂದ ಬದುಕುವುದಿಲ್ಲ, ಆದರೆ ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು."ಈ ವಾಕ್ಯವು ಯೇಸುವು ಪವಿತ್ರಾತ್ಮನಿಂದ ಅಭಿಷೇಕಿಸಲ್ಪಟ್ಟ ನಂತರ ನುಡಿದ ಮೊದಲ ಮಾತಾಗಿದೆ, ಆದ್ದರಿಂದ ಇದು ಬಹಳ ಮಹತ್ವದ ಮಾತು ಆಗಿರಬೇಕು. ಯೇಸುವಿನ ಸಂಪೂರ್ಣ ಬೋಧನೆಯಲ್ಲಿ ಮೊದಲನೆಯದು ಇದಾಗಿತ್ತು: ಪ್ರತಿದಿನ ನಿರಂತರವಾಗಿ ದೇವರ ವಾಕ್ಯವನ್ನು ಪಡೆದುಕೊಳ್ಳುವುದನ್ನು ಅಭ್ಯಾಸಿಸಿರಿ. ನಿಮಗೆ ಪ್ರತಿದಿನ ದೇವರ ಜೀವವುಳ್ಳ ವಾಕ್ಯವು ಪ್ರಾಪ್ತವಾಗಬೇಕು.
ಇಂದಿನ ದಿನ ನಮಗೆ ಸುಲಭವಾಗಿ ಸಿಗುವ ಸತ್ಯವೇದವು, ಕ್ರೈಸ್ತತ್ವದ ಆರಂಭದ ದಿನಗಳಲ್ಲಿ ಜನರಿಗೆ ಸಿಗುತ್ತಿರಲಿಲ್ಲ. ನಾವು ಇಂದು ಸತ್ಯವೇದವನ್ನು ಪಡೆದಿರುವುದು ಒಂದು ಸೌಭಾಗ್ಯವಾಗಿದೆ. ನಾವು ಪ್ರತಿದಿನ ದೇವರ ವಾಕ್ಯವನ್ನು ಪಡೆಯಬೇಕಾದರೆ, ಪ್ರತಿದಿನ ಸತ್ಯವೇದವನ್ನು ಓದಿಕೊಳ್ಳಬೇಕು. ಆದಿ ಸಭೆಯ ದಿನದಲ್ಲಿ, ಜನರಿಗೆ ಸತ್ಯವೇದದ ಪ್ರತಿಗಳು ಸಿಗುತ್ತಿರಲಿಲ್ಲ, ಆದಾಗ್ಯೂ ಅಪೊಸ್ತಲರ ಸಂದೇಶಗಳನ್ನು ಅವರಿಗೆ ನೆನಪಿಸುವ ಪವಿತ್ರಾತ್ಮನನ್ನು ಅವರು ಪಡೆದುಕೊಂಡಿದ್ದರು. ಒಬ್ಬ ಕ್ರೈಸ್ತ ವಿಶ್ವಾಸಿಯ ಬಳಿ ಸತ್ಯವೇದ ಇಲ್ಲದಿರಬಹುದು ಮತ್ತು ಆತನು ತನ್ನ ನಂಬಿಕೆಯ ನಿಮಿತ್ತ ಸೆರೆಮನೆಗೆ ಹಾಕಲ್ಪಟ್ಟು ಅಲ್ಲಿ ಸುಮ್ಮನೆ ಕುಳಿತಿದ್ದರೂ, ಸೆರೆಮನೆಗೆ ಹಾಕಲ್ಪಡುವದಕ್ಕೆ ಮೊದಲು ಆತನು ದೇವರ ವಾಕ್ಯವನ್ನು ಓದುತ್ತಿದ್ದುದರಿಂದ, ಈಗ ಪ್ರತಿದಿನವೂ ಆತನು ದೇವರ ವಾಕ್ಯವನ್ನು ಪಡೆಯುತ್ತಾನೆ. ಈ ಕಾರಣಕ್ಕಾಗಿಯೇ ದೇವರ ವಾಕ್ಯವನ್ನು ಓದಿ ಧ್ಯಾನಿಸುವುದು ಬಹಳ ಪ್ರಾಮುಖ್ಯವಾಗಿದೆ, ಏಕೆಂದರೆ ನಮ್ಮ ಅಗತ್ಯತೆಯ ಕ್ಷಣದಲ್ಲಿ ದೇವರು ಪವಿತ್ರಾತ್ಮನ ಮೂಲಕ ನಮ್ಮ ಸಮಸ್ಯೆಯ ಪರಿಹಾರಕ್ಕಾಗಿ ಒಂದು ನಿರ್ದಿಷ್ಟ ವಾಕ್ಯವನ್ನು ನಮಗೆ ನೀಡುತ್ತಾರೆ, ಮತ್ತು ಅದು ನಮ್ಮ ಅವಶ್ಯಕತೆಗೆ ಸೂಕ್ತ ಉತ್ತರವಾಗಿರುತ್ತದೆ ಹಾಗೂ ನಾವು ಪ್ರಾರ್ಥಿಸಿ ಪಡೆಯಬಹುದಾದ ವಾಗ್ದಾನವಾಗಿರುತ್ತದೆ.
"ನಾವು ಕಲಿಯಬೇಕಾದ ಮೊದಲನೆಯ ಪಾಠ ಹಾಗೂ ಒಂದು ಅವಶ್ಯಕ ಸಂಗತಿ ಯಾವುದೆಂದರೆ, ನಾವು ಪ್ರತಿದಿನವೂ ಯೇಸುವಿನ ಪಾದದ ಬಳಿ ಕುಳಿತುಕೊಳ್ಳಬೇಕು."
ಲೂಕ. 10:38-42ರ ನಿದರ್ಶನವು ಇದನ್ನು ಚಿತ್ರಿಸುತ್ತದೆ. ಅಲ್ಲಿ ಯೇಸುವು ಮಾರ್ಥ ಮತ್ತು ಮರಿಯಳ ಮನೆಯಲ್ಲಿ ಉಳಕೊಳ್ಳುತ್ತಾರೆಂದು ನಾವು ಓದುತ್ತೇವೆ. ಮಾರ್ಥಳು ಕರ್ತನನ್ನು ತನ್ನ ಮನೆಗೆ ಸ್ವಾಗತಿಸಿದಳು, ಮತ್ತು ಅವರಿಗಾಗಿ ಊಟವನ್ನು ತಯಾರಿಸಲು ಹೊರಟಳು, ಆದರೆ ಆಕೆಯ ತಂಗಿ ಮರಿಯಳು ಯೇಸು ಸ್ವಾಮಿಯ ಪಾದಗಳ ಬಳಿಯಲ್ಲಿ ಕೂತುಕೊಂಡು ಆತನ ಮಾತನ್ನು ಕೇಳುತ್ತಿದ್ದಳು. ಈಗ, ನಾವು ಮೊದಲು ಓದಿಕೊಂಡ ವಚನ ಇದಕ್ಕೆ ಹೇಗೆ ಅನ್ವಯಿಸುತ್ತದೆಂದು ಗಮನಿಸಿರಿ, "ಮನುಷ್ಯನು ರೊಟ್ಟಿ ತಿಂದ ಮಾತ್ರಕ್ಕೆ ಬದುಕುವುದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು."ಇಲ್ಲಿ ಎರಡು ಆಯ್ಕೆಗಳಿವೆ, ಆಹಾರ ಮತ್ತು ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತುಕೊಳ್ಳುವುದು. ಆಹಾರವು ಮುಖ್ಯವಾಗಿದೆಯೇ? ಹೌದು, ನಿಶ್ಚಯವಾಗಿ. ಆದರೆ ಅದಕ್ಕಿಂತ ಹೆಚ್ಚು ಮುಖ್ಯವಾದದ್ದು ದೇವರ ಬಾಯಿಂದ ಹೊರಡುವ ವಾಕ್ಯವನ್ನು ಸ್ವೀಕರಿಸುವುದು. ಇಬ್ಬರು ಸಹೋದರಿಯರ ಮೂಲಕ ಇದನ್ನು ಬಹಳ ಪರಿಣಾಮಕಾರಿಯಾಗಿ ವಿವರಿಸಲಾಗಿದೆ.
ಮಾರ್ಥಳ ಗಮನ ಊಟದ ಸಿದ್ಧತೆಯಲ್ಲೇ ಇತ್ತು. ಆಕೆ ಯಾರಿಗಾಗಿ ಅದನ್ನು ತಯಾರಿಸುತ್ತಿದ್ದಳು? ತನಗಾಗಿ ಅಲ್ಲ. ಆಕೆಯು ಬಹಳ ನಿಸ್ವಾರ್ಥಳಾಗಿದ್ದಳು. ಹಸಿದಿದ್ದ ಹದಿಮೂರು ಪುರುಷರಿಗೆ (ಯೇಸು ಮತ್ತು ಹನ್ನೆರಡು ಶಿಷ್ಯರು) ಊಟ ಸಿದ್ಧಪಡಿಸುವುದು ಎಷ್ಟು ದೊಡ್ಡ ಕೆಲಸವೆಂದು ನಿಮಗೆ ತಿಳಿದಿದೆಯೇ? ಆ ದಿನ ಆಕೆ ಅಡುಗೆ ಮನೆಯಲ್ಲಿ ಬೆವರು ಸುರಿಸಿ ಶ್ರಮಿಸಿದ್ದು ತನಗಾಗಿ ಅಲ್ಲ, ಆದರೆ ಕರ್ತನಿಗಾಗಿ. ಮಾರುಕಟ್ಟೆಯಿಂದ ಕರ್ತನ ಭೋಜನಕ್ಕೆ ಬೇಕಾದ ಸಾಮಾನನ್ನು ತರುವುದಕ್ಕಾಗಿ ಆಕೆ ತನ್ನ ಸ್ವಂತ ಹಣವನ್ನು ಖರ್ಚು ಮಾಡಿದ್ದಳು; ತನ್ನ ಸಮಯ ಮತ್ತು ಬಲವನ್ನು ಉಪಯೋಗಿಸಿದ್ದಳು ಮತ್ತು ಕರ್ತನ ಸೇವೆಗಾಗಿ ಅಷ್ಟೊಂದು ತ್ಯಾಗ ಮಾಡಿದ್ದಳು. ಬಹುಶಃ ನೀವು ಸಹ ಹೀಗೆ ಮಾಡಿರುತ್ತೀರಿ. ಒಂದು ವೇಳೆ ನೀವು ಅನೇಕ ಸಂದರ್ಭಗಳಲ್ಲಿ ತ್ಯಾಗ ಮಾಡಿ, ಕರ್ತನಿಗಾಗಿ ಅನೇಕ ಕಾರ್ಯಗಳನ್ನು ಕೈಗೊಳ್ಳಲು ನಿಮ್ಮ ಸಮಯ, ಹಣ ಮತ್ತು ಶಕ್ತಿಯನ್ನು ಉಪಯೋಗಿಸಿದ್ದೀರಿ. ಒಳ್ಳೆಯದು. ನೀವು ಸಹ ಮಾರ್ಥಳಂತೆ ಯೋಚಿಸಿ, "ಒಳ್ಳೆಯದು, ನಾನು ಇಷ್ಟೆಲ್ಲಾ ಮಾಡಿದ ನಂತರ ಕರ್ತನ ಮುಂದೆ ಬಂದು ನಿಂತಾಗ, ಆತನು - ’ಭಲಾ, ನೀನು ನಂಬಿಗಸ್ಥೆಯಾದ ಒಳ್ಳೇ ಆಳು. ನೀನು ಚೆನ್ನಾಗಿ ದುಡಿದಿದ್ದೀ!’ - ಎಂದು ನನ್ನನ್ನು ಹೊಗಳಬಹುದು," ಎಂದು ಭಾವಿಸಬಹುದು. ಆದರೆ ಮಾರ್ಥಳಿಗೆ ಈ ಪ್ರಶಂಸೆ ದೊರಕಲಿಲ್ಲ.
ಆಕೆ ಯೇಸುವಿನ ಬಳಿಗೆ ಬಂದಾಗ, ತನ್ನ ಮನಸ್ಸಿನಲ್ಲಿ ತನ್ನ ತಂಗಿಯಾದ ಮರಿಯಳ ಮೇಲೆ ಕೋಪಗೊಂಡಿದ್ದಳು. ಒಬ್ಬ ವ್ಯಕ್ತಿಯ ಹೃದಯ ಎಂದಾದರೂ ಅಶಾಂತಿಯನ್ನು ಹೊಂದಿದ್ದರೆ, ಏನೋ ತಪ್ಪು ನಡೆದಿದೆಯೆಂದು ಅದರ ಅರ್ಥ. ಮಾರ್ಥಳ ಹೃದಯದಲ್ಲಿ ವಿಶ್ರಾಂತಿ ಇರಲಿಲ್ಲ. "ಮರಿಯಳು ನನ್ನ ಸಹಾಯಕ್ಕಾಗಿ ಏಕೆ ಬರುತ್ತಿಲ್ಲ?" ಎಂದು ಗಡಿಬಿಡಿಯಾಗಿ ಚಿಂತಿಸುತ್ತಾ ಆಕೆ ಬಂದದ್ದನ್ನು ಗಮನಿಸಿದ ಯೇಸುವು ಆಕೆಯನ್ನು ಗದರಿಸಿದರು. ಅವರು ಆಕೆಗೆ, "ಮಾರ್ಥಳೇ, ಊಟವು ಬಹಳ ಪ್ರಾಮುಖ್ಯವಾದ ಸಂಗತಿಯಲ್ಲ. ನನ್ನ ಮಾತುಗಳನ್ನು ಕೇಳಿಸಿಕೊಳ್ಳುವುದು ಹೆಚ್ಚು ಮುಖ್ಯವಾದದ್ದು, ಮತ್ತು ಮರಿಯಳು ಅದನ್ನು ಆರಿಸಿಕೊಂಡಿದ್ದಾಳೆ, ಮತ್ತು ಅದನ್ನು ಆಕೆಯಿಂದ ಕಸಿದುಕೊಳ್ಳಲು ಆಗುವುದಿಲ್ಲ," ಎಂದು ಹೇಳುತ್ತಾರೆ (ಲೂಕ. 10:42). "ಮನುಷ್ಯನು ರೊಟ್ಟಿ ತಿಂದ ಮಾತ್ರಕ್ಕೆ ಬದುಕುವುದಿಲ್ಲ," ಎಂಬ ಯೇಸುವಿನ ಮಾತಿನ ಅರ್ಥ ಏನೆಂದು ಈಗ ನಿಮಗೆ ತಿಳಿಯಿತೇ? ಮಾರ್ಥಳು ಯಾವುದನ್ನು ಮೊದಲು ಗಮನಿಸಬೇಕೆಂದು ಯೇಸುವು ಬಯಸಿದರು? ಆಕೆಯ ಸೇವೆಯೇ? ಯೇಸುವು ನಿಮ್ಮಿಂದ ಏನನ್ನು ಬಯಸುತ್ತಾರೆ? ಸೇವೆಯು ಒಳ್ಳೆಯದು. ಕೆಲವು ದಿನಗಳ ನಂತರ ಮರಿಯಳು ಯೇಸುವಿನ ಪಾದಕ್ಕೆ ಸುಗಂಧ ದ್ರವ್ಯವನ್ನು ಹಚ್ಚಿ ಆತನ ಸೇವೆ ಮಾಡಿದ್ದಾಗಿ ನಾವು ಓದುತ್ತೇವೆ, ಆದ್ದರಿಂದ ಸೇವೆಯೂ ಪ್ರಾಮುಖ್ಯವಾದದ್ದು ಎಂದು ನಾವು ಅರಿತುಕೊಳ್ಳುತ್ತೇವೆ; ಆದರೆ ಮೊದಲನೆಯದು ಹಾಗೂ ಅತೀ ಪ್ರಾಮುಖ್ಯವಾದದ್ದು ಏನೆಂದರೆ, ದೇವರ ವಾಕ್ಯವನ್ನು ಪಡೆದುಕೊಳ್ಳುವುದು. ಯೇಸುವು ಇದನ್ನೇ ಕಲಿಸಿಕೊಟ್ಟರು.
ನಾವು ಕಲಿತುಕೊಳ್ಳಬೇಕಾದ ಈ ಮೊದಲನೆಯ ಪಾಠ ಏನೆಂದರೆ, ಈಗ ಅವಶ್ಯವಾಗಿರುವುದು ಒಂದು ಸಂಗತಿ. 25 ಸಂಗತಿಗಳಲ್ಲ. ಲೂಕ. 10:42ರ ವಾಕ್ಯ ಏನನ್ನು ತಿಳಿಸುತ್ತದೆ ಎಂದರೆ, ನಾವು ಪ್ರತಿ ದಿನವೂ ಯೇಸುವಿನ ಪಾದದ ಬಳಿ ಕುಳಿತುಕೊಳ್ಳಬೇಕು, ಎಲ್ಲಾ ಸಮಯದಲ್ಲಿ ಈ ಕೇಳಿಸಿಕೊಳ್ಳುವ ಮನೋಭಾವ ನಮ್ಮಲ್ಲಿ ಇರಬೇಕು, ಮತ್ತು ಯೇಸುವು ನಮಗೆ ಖುದ್ದಾಗಿ, ವೈಯಕ್ತಿಕವಾಗಿ ಹೇಳಲು ಬಯಸುವ ಸಂಗತಿಯನ್ನು ಪಡೆದುಕೊಳ್ಳಬೇಕು.
ನೀವು ಆಶೀರ್ವಾದ ತುಂಬಿರುವಂತ ಹೊಸ ವರ್ಷವನ್ನು ಹೊಂದುವಂತಾಗಲಿ, ಎಂದು ನಾನು ಹಾರೈಸುತ್ತೇನೆ!