WFTW Body: 

"ಕರ್ತನ ಭಯವೇ ತಿಳುವಳಿಕೆಗೆ ಮೂಲವು; ಮೂರ್ಖರಾದರೋ ಜ್ಞಾನವನ್ನು ಮತ್ತು ಬೋಧನೆಯನ್ನು ಅಸಡ್ಡೆ ಮಾಡುವರು"(ಜ್ಞಾನೋಕ್ತಿಗಳು 1:7).

ಇದು ಮೊದಲನೆಯ ಜ್ಞಾನೋಕ್ತಿಯಾಗಿದೆ, ಮತ್ತು ಇದರಲ್ಲಿ ಪ್ರಸ್ತಾಪಿಸಿರುವ ವಿಷಯ ಗಮನಾರ್ಹವಾಗಿದೆ. ಇಲ್ಲಿ ’ತಿಳುವಳಿಕೆಯ ಆರಂಭ’ವೆಂದು ತೋರಿಸಲ್ಪಟ್ಟ ವಿಷಯ, ಒಂದು ಅಸ್ತಿವಾರದಂತಿದೆ. ಮುಂದೆ ’ಜ್ಞಾನೋಕ್ತಿಗಳು 9:10'ರಲ್ಲಿ ಹೀಗೆ ಹೇಳಲಾಗಿದೆ, "ಕರ್ತನ ಭಯವೇ ಜ್ಞಾನಕ್ಕೆ ಮೂಲವು". ತಿಳುವಳಿಕೆ ಮತ್ತು ಜ್ಞಾನ ಇವೆರಡರ ನಡುವೆ ನಿಜವಾಗಿ ಪರಸ್ಪರ ನಿಕಟ ಸಂಬಂಧವಿದೆ, ಏಕೆಂದರೆ ತಿಳುವಳಿಕೆಯೆಂದರೆ ಸತ್ಯವೇದದ ತಿಳುವಳಿಕೆ ಅಲ್ಲ. ಇಲ್ಲಿ ಈ ಪದದ ಅರ್ಥ ದೇವರ ಬಗ್ಗೆ ತಿಳುವಳಿಕೆಯಾಗಿದೆ. ನಾವು ಸತ್ಯವೇದದಲ್ಲಿ ’ತಿಳುವಳಿಕೆ’ ಎಂಬುದಾಗಿ ಓದುವಾಗ, ಅದರ ಅರ್ಥ ಸತ್ಯವೇದದ ಕುರಿತಾದ ಶೈಕ್ಷಣಿಕ ತಿಳುವಳಿಕೆ ಅಲ್ಲ. ವಾಸ್ತವವಾಗಿ ಪಿಶಾಚನು ಸತ್ಯವೇದದ ಉತ್ತಮ ಶೈಕ್ಷಣಿಕ ತಿಳುವಳಿಕೆ ಹೊಂದಿದ್ದಾನೆ, ಆದಾಗ್ಯೂ ಆತನಲ್ಲಿ ದೇವಭಯ ಇಲ್ಲವಾಗಿದೆ. ಹಾಗಾಗಿ ’ಜ್ಞಾನೋಕ್ತಿಗಳು 1:7'ರ ವಚನವು ಸತ್ಯವೇದ ತಿಳುವಳಿಕೆಯನ್ನು ಪ್ರಸ್ತಾಪಿಸುತ್ತಿಲ್ಲ. ಇಲ್ಲಿ ಹೇಳಲಾಗಿರುವ ತಿಳುವಳಿಕೆಯು ದೇವರ ಕುರಿತಾದ ತಿಳುವಳಿಕೆಯಾಗಿದೆ! ಅದು ಸತ್ಯವೇದದ ತಿಳುವಳಿಕೆಯಿಂದ ಸಂಪೂರ್ಣ ವಿಭಿನ್ನವಾಗಿದೆ.

"ಜ್ಞಾನೋಕ್ತಿಗಳ ಪುಸ್ತಕವು ಎಲ್ಲಕ್ಕಿಂತ ಮೊದಲು ದೇವರ ಭಯವನ್ನು ಒತ್ತಿ ಹೇಳುತ್ತದೆ, ಎಂಬುದು ಗಮನಾರ್ಹ ವಿಷಯವಾಗಿದೆ."

ಸತ್ಯವೇದದ ತಿಳುವಳಿಕೆಯಿರುವ ಅನೇಕ ಜನರಲ್ಲಿ ದೇವರ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಕರ್ತನ ಭಯವೇ ತಿಳುವಳಿಕೆಗೆ ಮೂಲವಾಗಿದೆ. "ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ, ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವುದೇ ನಿತ್ಯಜೀವವು"(ಯೋಹಾ. 17:30).ದೇವರ ನಿಜಸ್ವರೂಪವನ್ನು ಹೆಚ್ಚು ಹೆಚ್ಚಾಗಿ ತಿಳಿಯುವುದು, ಎಂದು ಇದರ ಅರ್ಥವಾಗಿದೆ. ಪೌಲನು ತನ್ನ ಜೀವಿತದ ದೊಡ್ಡ ಹಂಬಲ, ".... ಆತನನ್ನು ತಿಳಿದುಕೊಳ್ಳುವುದು ನನ್ನ ಗುರಿಯಾಗಿದೆ ...." ಎಂದು ಹೇಳಿದನು (ಫಿಲಿ. 3:10). ಅಂದರೆ ದೇವರನ್ನು ಹೆಚ್ಚು ಹೆಚ್ಚಾಗಿ, ಇನ್ನೂ ಸಂಪೂರ್ಣವಾಗಿ ತಿಳಿದುಕೊಳ್ಳುವುದು ಆತನ ಧ್ಯೇಯವಾಗಿತ್ತು. ದೇವರ ಸ್ವರೂಪವನ್ನು ಹೆಚ್ಚು ಹೆಚ್ಚಾಗಿ ತಿಳಿದುಕೊಳ್ಳುವುದು, ದೇವರು ಜನರನ್ನು ಹೇಗೆ ದೃಷ್ಟಿಸುತ್ತಾರೆಂದು ಅರಿಯುವುದು, ದೇವರು ವಿಭಿನ್ನ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸುತ್ತಾರೆಂದು ತಿಳಿಯುವುದು, ಎಲ್ಲಾ ಸಂಗತಿಗಳನ್ನು ದೇವರು ಹೇಗೆ ದೃಷ್ಟಿಸುತ್ತಾರೆಂದು ಅರಿಯುವುದು - ಇದರ ನಂತರ ಅದೇ ಮಾದರಿಯಲ್ಲಿ ತನ್ನ ಸ್ವಂತ ಆಲೋಚನೆಗಳನ್ನು ಬದಲಾಯಿಸಬೇಕೆಂದು ಪೌಲನು ಹಂಬಲಿಸಿದನು. ಇಲ್ಲಿ ಇಂತಹ ತಿಳುವಳಿಕೆಯ ಬಗ್ಗೆ ಹೇಳಲ್ಪಟ್ಟಿದೆ.

ಮೊಟ್ಟಮೊದಲನೆಯ ಜ್ಞಾನೋಕ್ತಿಯು ಕಲಿಸುವುದು ಏನೆಂದರೆ, ದೇವರ ಜ್ಞಾನವೆಂದರೆ ಆತನ ಬಗ್ಗೆ ಭಯವನ್ನೂ, ಭಕ್ತಿಯನ್ನೂ ಹೊಂದಿರುವುದು. ಪಾಪವನ್ನು ದ್ವೇಷಿಸಿ ನೀತಿಯನ್ನು ಪ್ರೀತಿಸುವುದು. ಇದೇ ದೇವರ ಭಯವಾಗಿದೆ. ಇದು ನಮ್ಮಲ್ಲಿದ್ದರೆ, ನಾವು ದೇವರನ್ನು ಹೆಚ್ಚು ಹೆಚ್ಚಾಗಿ ತಿಳಿದುಕೊಳ್ಳಬಹುದು. ಇದರಲ್ಲಿ ನಮ್ಮ ಬುದ್ಧಿವಂತಿಕೆ ಎಷ್ಟು ಚುರುಕಾಗಿದೆ ಎಂಬ ಪ್ರಶ್ನೆ ಬರುವುದಿಲ್ಲ, ಆದರೆ ನಮ್ಮಲ್ಲಿ ಆತನ ಭಯ ಎಷ್ಟಿದೆ ಎಂಬುದು ಮುಖ್ಯವಾದದ್ದು, ಮತ್ತು ಇದಕ್ಕೆ ಅನುಗುಣವಾಗಿ ನಮ್ಮ ಆತ್ಮಿಕ ತಿಳುವಳಿಕೆ ಮತ್ತು ಆತ್ಮಿಕ ಜ್ಞಾನವು ವೃದ್ಧಿಯಾಗುತ್ತದೆ.

ಹಾಗಾಗಿ ಆರಂಭದಲ್ಲೇ ಈ ದೇವಭಯ ಇರಬೇಕು - ಇದು ಅಸ್ತಿವಾರ ಅಥವಾ ಮೂಲೆಗಲ್ಲು ಎಂಬುದಾಗಿ ನೀವು ಹೇಳಬಹುದು. ಇದು ಓಟದ ಸ್ಪರ್ಧೆಯ ಆರಂಭದ ಸ್ಥಾನಕ್ಕೆ ಸಮನಾಗಿದೆ. ನೀವು ಓಟವನ್ನು ಅಲ್ಲಿಂದ ಆರಂಭಿಸದಿದ್ದರೆ, ನೀವು ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಇದನ್ನು ನೀವು ಸಕಲ ತಿಳುವಳಿಕೆಯ ಸಾರಾಂಶವೆಂದು ವಿವರಿಸಬಹುದು. ದೇವರ ಕುರಿತಾದ ಎಲ್ಲಾ ತಿಳುವಳಿಕೆಯ ಮುಖ್ಯ ಭಾಗ ದೇವಭಯವಾಗಿದೆ, ಮತ್ತು ನಾನು ದೇವಭಯವನ್ನು ಕಳಕೊಂಡರೆ, ಆ ದಿನದಿಂದ ನಾನು ದೇವರನ್ನು ಅರಿಯಲಾರೆನು ಅಥವಾ ಜ್ಞಾನವನ್ನು ಹೊಂದಲಾರೆನು. ಜ್ಞಾನವನ್ನು ಹೆಚ್ಚಿಸಿಕೊಳ್ಳಲು ದೇವಭಯವನ್ನು ಹೆಚ್ಚಿಸಿಕೊಳ್ಳಬೇಕು.

ಇದೇ ಜ್ಞಾನೋಕ್ತಿಯ ಮೂಲಕ ಮೂರ್ಖನು ಯಾರೆಂದು ನಮಗೆ ಕಂಡುಬರುತ್ತದೆ. ಸತ್ಯವೇದವು ಮೂರ್ಖನ ಬಗ್ಗೆ ಪ್ರಸ್ತಾಪಿಸುವಾಗ, ಗಣಿತ ಪರೀಕ್ಷೆಯಲ್ಲಿ 15% ಅಂಕವನ್ನು ಅಥವಾ ವಿಜ್ಞಾನ ಪರೀಕ್ಷೆಯಲ್ಲಿ 10% ಅಂಕವನ್ನು ಗಳಿಸುವ ಒಬ್ಬ ವ್ಯಕ್ತಿಯ ಬಗ್ಗೆ ಅದು ಹೇಳುತ್ತಿಲ್ಲ. ಒಬ್ಬನು ಇಷ್ಟು ಕಡಿಮೆ ಅಂಕಗಳನ್ನು ಗಳಿಸಿದರೂ, ಆತನಲ್ಲಿ ದೇವಭಯವಿದ್ದರೆ, ದೇವರ ವಾಕ್ಯದ ಪ್ರಕಾರ ಆತನು ಜ್ಞಾನಿಯೆಂದು ಕರೆಯಲ್ಪಡುತ್ತಾನೆ. ಸತ್ಯವೇದವು ಒಬ್ಬನನ್ನು ಮೂರ್ಖನೆಂದು ಕರೆಯುವಾಗ, ಅದು ಓದಿನಲ್ಲಿ ಕಷ್ಟಪಡುವ ಒಬ್ಬನ ಬಗ್ಗೆ ಹೇಳುತ್ತಿಲ್ಲ. ಅದು ಕರ್ತನ ಭಯವಿಲ್ಲದ ವ್ಯಕ್ತಿಯ ಬಗ್ಗೆ ಮಾತನಾಡುತ್ತದೆ - ಅಂತಹ ವ್ಯಕ್ತಿಯು ಪರಸ್ತ್ರೀಯರನ್ನು ಮೋಹಿಸಿ ಅದಕ್ಕಾಗಿ ಬೇಸರಪಟ್ಟು ದುಃಖಿಸುವುದಿಲ್ಲ, ಅದಕ್ಕಾಗಿ ಅಳುವುದಿಲ್ಲ. ಆ ವ್ಯಕ್ತಿಯು ಗಣಿತ ಮತ್ತು ವಿಜ್ಞಾನದಲ್ಲಿ 90% ಅಂಕಗಳನ್ನು ಪಡೆದರೂ ಆತನು ಒಬ್ಬ ಮೂರ್ಖನಾಗಿದ್ದಾನೆ! ಅವನು ಮಹಾ ಮೂರ್ಖನಾಗಿದ್ದಾನೆ, ಮತ್ತು ಸೊಲೊಮೋನನು ಜ್ಞಾನೋಕ್ತಿಗಳ ಪುಸ್ತಕದಲ್ಲಿ ಆತನ ಬಗ್ಗೆ 66 ಸಂಗತಿಗಳನ್ನು ಬರೆದಿದ್ದಾನೆ. ಇಂತಹ ವ್ಯಕ್ತಿಯಲ್ಲಿ ಪಾಪದ ವಿಷಯದಲ್ಲಿ ಯಾವುದೇ ದೇವಭಯ ಇರುವುದಿಲ್ಲ - ಸುಳ್ಳು ಹೇಳುವುದಕ್ಕೆ ಅಥವಾ ಸುಳ್ಳು ಹೇಳಿಕೆಗಳಿಗೆ ಸಹಿ ಹಾಕುವುದಕ್ಕೆ ಅಥವಾ ಹಲವಾರು ವಿಧವಾದ ಪಾಪಗಳಲ್ಲಿ ಪಾಲ್ಗೊಳ್ಳುವುದಕ್ಕೆ ಆತನು ಹಿಂಜರಿಯುವುದಿಲ್ಲ. ಆತನ ಹೃದಯವು ಇವೆಲ್ಲಾ ವಿಷಯಗಳಿಗಾಗಿ ತಳಮಳಗೊಳ್ಳುವುದಿಲ್ಲ. ಇಂತಹ ಮೂರ್ಖರ ಬಗ್ಗೆ ಸೊಲೊಮೋನನು 66 ಸಂಗತಿಗಳನ್ನು ಬರೆದಿದ್ದಾನೆ.

ಮೂರ್ಖರು ಜ್ಞಾನವನ್ನು ಮತ್ತು ಬೋಧನೆಯನ್ನು ತಿರಸ್ಕರಿಸುತ್ತಾರೆ. ದೇವರ ದೃಷ್ಟಿಕೋನದಿಂದ ವಿಷಯಗಳನ್ನು ನೋಡಬೇಕೆಂಬ ತಿಳುವಳಿಕೆ ಅವರಲ್ಲಿ ಇರುವುದಿಲ್ಲ. ಜ್ಞಾನವೆಂದರೆ ಜನರನ್ನು ಮತ್ತು ಸಂಗತಿಗಳನ್ನು ಮತ್ತು ಇಡೀ ಲೋಕವನ್ನು ದೇವರು ನೋಡುವ ರೀತಿಯಲ್ಲಿ ನೋಡುವುದು, ಎಂದು ನಾವು ವಿವರಿಸಬಹುದು. ನನ್ನಲ್ಲಿ ಜ್ಞಾನವು ಹೆಚ್ಚಿದಂತೆಲ್ಲಾ, ನಾನು ಜನರನ್ನು ದೇವರ ದೃಷ್ಟಿಯಿಂದ - ಅಂದರೆ ಕೋಮಲವಾಗಿ, ಅನುಕಂಪದಿಂದ, ಪ್ರೀತಿಯಿಂದ ಹಾಗೂ ಪರಿಶುದ್ಧತೆಯಿಂದ - ನೋಡುವುದನ್ನು ಕಲಿಯುತ್ತೇನೆ. ನಾನು ಜನರನ್ನು ಈ ರೀತಿಯಾಗಿ ಕೋಮಲತೆಯಿಂದ, ಅನುಕಂಪದಿಂದ, ಪ್ರೀತಿ ಹಾಗೂ ಪರಿಶುದ್ಧತೆಯಿಂದ ನೋಡಲು ಸಾಧ್ಯವಾಗದೇ ಹೋದರೆ, ನನ್ನ ಸತ್ಯವೇದದ ತಿಳುವಳಿಕೆಯು ಎಷ್ಟು ಹೆಚ್ಚಾಗಿ ಬೆಳೆಯುತ್ತಿದ್ದರೂ (ಹೇಗಿದ್ದರೂ ಸೈತಾನನಲ್ಲಿ ನನಗಿಂತ ಎಷ್ಟೋ ಹೆಚ್ಚಿನ ಸತ್ಯವೇದ ಜ್ಞಾನವಿದೆ), ನಾನು ಜ್ಞಾನವನ್ನು ಸಂಪಾದಿಸುತ್ತಿಲ್ಲ. ಹಾಗಾಗಿ ಸತ್ಯವೇದವು ಮೂರ್ಖನೆಂದು ಸಂಬೋಧಿಸುವ ವ್ಯಕ್ತಿಯ ಮೂರ್ಖತನ ದೇವರ ಭಯ ಇಲ್ಲದಿರುವುದು, ಜೀವನದಲ್ಲಿ ದೇವರಿಗೆ ಗೌರವ ಸಲ್ಲಿಸದಿರುವುದು, ಪಾಪವನ್ನು ದ್ವೇಷಿಸದೇ ಇರುವುದು ಮತ್ತು ನೀತಿಯನ್ನು ಪ್ರೀತಿಸದೇ ಇರುವುದರಲ್ಲಿ ಕಂಡುಬರುತ್ತದೆ, ಎಂಬುದಾಗಿ ನಾವು ಗಮನಿಸಬೇಕು.

ಜ್ಞಾನೋಕ್ತಿಗಳ ಪುಸ್ತಕವು ಎಲ್ಲಕ್ಕಿಂತ ಮೊದಲು ಒತ್ತಿ ಹೇಳುವುದು ದೇವರ ಭಯ ಎಂಬುದು ಗಮನಾರ್ಹವಾಗಿದೆ. ದೇವರಾತ್ಮನು ಹೇಳುವುದನ್ನು ಕಿವಿಯುಳ್ಳವನು ಕೇಳಲಿ.