ಬರೆದಿರುವವರು :   ಝ್ಯಾಕ್ ಪೂನನ್
WFTW Body: 

1. ಪ್ರೀತಿಯು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತದೆ

ವಿವಾಹದ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಇಡೀ ಪುಸ್ತಕ -"ಪರಮಗೀತ"ವನ್ನು ದೇವರು ಸತ್ಯವೇದದಲ್ಲಿ ಸೇರಿಸಿದ್ದಾರೆ. ಸೊಲೊಮೋನನು ಬರೆದ ಈ ಪುಸ್ತಕದಲ್ಲಿ ಗಂಡನು ತನ್ನ ಹೆಂಡತಿಗೆ ಹೇಳುವ ಮಾತುಗಳನ್ನು ಪರಿಗಣಿಸಿರಿ (ಇವು "Message Bible" ಭಾಷಾಂತರದಿಂದ ಆರಿಸಿದ ಹಲವು ವಚನಗಳು.): "ನನ್ನ ಪ್ರಿಯಳೇ, ನೀನು ಹೋಲಿಸಲಾಗದ ಸರ್ವಾಂಗಸುಂದರಿ, ನಿನ್ನಲ್ಲಿ ಯಾವ ದೋಷವೂ ಇಲ್ಲ. ನೀನು ಮೈಮರೆಸುವಂತ ಮೋಹಕಳಾಗಿದ್ದೀ. ನಿನ್ನ ದನಿ ಎಷ್ಟೋ ಇಂಪು, ನಿನ್ನ ರೂಪ ಎಷ್ಟೋ ಅಂದ. ನಿನ್ನ ದನಿಯು ಹೃದಯವನ್ನು ತಣಿಸುತ್ತದೆ ಮತ್ತು ನಿನ್ನ ಮೊಗವು ಎಷ್ಟೋ ಮೋಹಕವಾಗಿದೆ. ನನ್ನ ಪ್ರಿಯ ಸ್ನೇಹಿತೆ, ನಿನ್ನಲ್ಲಿ ಒಳಗೂ ಹೊರಗೂ ಪರಿಪೂರ್ಣ ಸೌಂದರ್ಯವಿದೆ. ನಾನು ನಿನ್ನಲ್ಲಿ ಸ್ವರ್ಗವನ್ನು ಕಂಡಿದ್ದೇನೆ." "ನೀನು ನನ್ನ ಹೃದಯವನ್ನು ಅಪಹರಿಸಿದ್ದೀ. ನೀನು ಒಂದು ಕಡೆಗಣ್ಣಿನಿಂದ ನನ್ನ ಹೃದಯವನ್ನು ವಶಪಡಿಸಿಕೊಂಡಿದ್ದೀ. ನಿನ್ನ ಕಣ್ಣಿನ ನೋಟದಿಂದ ನೀನು ನನ್ನ ಹೃದಯವನ್ನು ಸೆರೆಹಿಡಿದೆ! ನನ್ನ ಹೃದಯ ಉಲ್ಲಾಸಗೊಂಡಿದೆ. ನಾನು ನಿನ್ನನ್ನು ನೋಡಿದಾಗ ನನ್ನ ಭಾವನೆಗಳು ಮತ್ತು ಬಯಕೆಗಳು ಉಕ್ಕುತ್ತವೆ. ನಿನ್ನನ್ನು ನೋಡಿದ ಮೇಲೆ ನನಗೆ ಇನ್ನು ಯಾರೂ ಬೇಡ!" "ಭೂಲೋಕದಲ್ಲಿ ನಿನ್ನಂತೆ ಇನ್ಯಾರೂ ಇಲ್ಲ, ಹಿಂದೆಯೂ ಇರಲಿಲ್ಲ, ಮತ್ತು ಮುಂದೆಯೂ ಇರಲಾರರು. ಸ್ತ್ರೀಯರ ನಡುವೆ ನಿನ್ನನ್ನು ಎಲ್ಲರೂ ಪ್ರಶಂಸಿಸುವರು." ಇದಕ್ಕೆ ಹೆಂಡತಿಯು ನೀಡುವ ಉತ್ತರವನ್ನು ಲಾಲಿಸಿರಿ. ಅವಳ ಪ್ರತಿಕ್ರಿಯೆ ಹೀಗಿದೆ: "ಆಹಾ, ಎನ್ನಿನಿಯನೇ, ನೀನು ಎಷ್ಟು ಸುಂದರ, ಎಷ್ಟು ರಮ್ಯ! ನೀನು ಲಕ್ಷದಲ್ಲಿ ಒಬ್ಬನು. ನಿನ್ನಂತೆ ಯಾರೂ ಇಲ್ಲ! ನೀನು ಚೊಕ್ಕ ಬಂಗಾರದಂತೆ. ಗಾಂಭೀರ್ಯದಲ್ಲಿ ನೀನು ಪರ್ವತ ಶಿಖರದಂತ ಮನುಷ್ಯನು. ನಿನ್ನ ನುಡಿ ಬಹು ಇಂಪು. ನಿನ್ನ ಮಾತುಗಳು ಮುತ್ತಿನಂತಿವೆ ಮತ್ತು ನಿನ್ನ ಮುತ್ತುಗಳು ಮಾತಾಗಿವೆ. ನೀನು ಸರ್ವಾಂಗದಲ್ಲಿಯೂ ಮನೋಹರನು. ನೀನು ನನ್ನನ್ನು ರೋಮಾಂಚನಗೊಳಿಸುತ್ತೀ! ನಾನು ನಿನಗಾಗಿ ಹಾತೊರೆಯುತ್ತೇನೆ ಮತ್ತು ನಿನ್ನನ್ನು ಬಿಟ್ಟು ನಾನು ಇರಲಾರೆನು. ನೀನು ಇಲ್ಲದಿರುವುದು ನನಗೆ ನೋವನ್ನು ಉಂಟುಮಾಡುತ್ತದೆ. ನಿನ್ನನ್ನು ಕಂಡುಕೊಂಡಾಗ ನಾನು ನಿನ್ನನ್ನು ಎರಡು ಕೈಗಳಿಂದ ಅಪ್ಪಿಕೊಂಡು, ಬಿಗಿಯಾಗಿ ಹಿಡಿದುಕೊಂಡೇ ಇರುತ್ತೇನೆ. ನೀನು ಹೋಗಲು ಬಿಡುವುದಿಲ್ಲ. ನನ್ನ ನಲ್ಲನೇ, ನಾನು ನಿನ್ನವಳೇ ಮತ್ತು ನೀನೇ ನನ್ನ ಪ್ರಿಯನು, ನೀನೊಬ್ಬನೇ ನನಗೆ ಬೇಕಾದ ಪುರುಷನು."

2. ಪ್ರೀತಿಯು ತಪ್ಪನ್ನು ಒಡನೆಯೇ ಕ್ಷಮಿಸುತ್ತದೆ

ಪ್ರೀತಿಯು ದೂಷಿಸುವುದರಲ್ಲಿ ನಿಧಾನ ಮತ್ತು ಕ್ಷಮಿಸುವುದರಲ್ಲಿ ಶೀಘ್ರವಾಗಿರುತ್ತದೆ. ಪ್ರತಿಯೊಂದು ವಿವಾಹ ಜೀವಿತದಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ಸಮಸ್ಯೆಗಳು ಬರುತ್ತವೆ. ಆದರೆ ನೀವು ಆ ಸಮಸ್ಯೆಗಳನ್ನು ಪರಿಹರಿಸದೆ ಮುಚ್ಚಿಟ್ಟರೆ, ಮುಂದೆ ಅವು ದೊಡ್ಡದಾಗಿ ಬೆಳೆದು ಉಕ್ಕಿ ಹರಿಯುತ್ತವೆ. (ಇದರ ಅರ್ಥವೇನೆಂದರೆ, ಸಮಸ್ಯೆಗಳನ್ನು ಒಡನೆಯೇ ಬಗೆಹರಿಸುವುದರ ಬದಲಾಗಿ ಅವುಗಳನ್ನು ಹಾಗೆಯೇ ಕಡೆಗಣಿಸಿದರೆ, ಆಗ ಅವು ಇನ್ನೂ ಹೆಚ್ಚಿನ ಹಾನಿಯನ್ನು ಉಂಟುಮಾಡುತ್ತವೆ). ಹಾಗಾಗಿ ಬೇಗನೆ ಕ್ಷಮಿಸಲು ಉತ್ಸುಕರಾಗಿರಿ ಮತ್ತು ಬೇಗನೆ ಕ್ಷಮೆ ಕೇಳಲು ಉತ್ಸುಕರಾಗಿರಿ. ಇದನ್ನು ಮಾಡುವುದಕ್ಕೆ ಸಂಜೆಯವರೆಗೆ ತಡ ಮಾಡಬೇಡಿರಿ. ನಿಮ್ಮ ಕಾಲಿಗೆ ಮುಂಜಾನೆ ಒಂದು ಮುಳ್ಳು ಚುಚ್ಚಿದರೆ, ನೀವು ಒಡನೆಯೇ ಅದನ್ನು ಕೀಳುತ್ತೀರಿ. ಇದಕ್ಕಾಗಿ ಸಂಜೆಯವರೆಗೆ ಕಾಯುವುದಿಲ್ಲ. ನೀವು ನಿಮ್ಮ ಗಂಡ ಅಥವಾ ಹೆಂಡತಿಯನ್ನು ನೋಯಿಸಿದರೆ, ಅದು ಅವನಿಗೆ/ ಅವಳಿಗೆ ಒಂದು ಮುಳ್ಳನ್ನು ಚುಚ್ಚಿದಂತೆ ಆಗಿದೆ. ಅದನ್ನು ತಡಮಾಡದೆ ಕಿತ್ತುಬಿಡಿರಿ - ಕೂಡಲೇ ಕ್ಷಮೆ ಕೇಳಿರಿ, ಮತ್ತು ಕೂಡಲೇ ಕ್ಷಮಿಸಿರಿ.

3. ಕಾರ್ಯಗಳನ್ನು ಮಾಡುವಾಗ ಪ್ರೀತಿಯು ತನ್ನ ಸಂಗಾತಿಯ ಒಡನಾಟವನ್ನು ಬಯಸುತ್ತದೆ - ಒಂಟಿಯಾಗಿ ಮಾಡುವುದಿಲ್ಲ

ಏದನಿನ ತೋಟದಲ್ಲಿ ಪಿಶಾಚನು ಹವ್ವಳನ್ನು ಶೋಧಿಸಲು ಬಂದ ಸಂದರ್ಭದಲ್ಲಿ, ಆಕೆ "ನಾನು ನಿರ್ಣಯಕ್ಕೆ ಬರುವ ಮೊದಲು ನನ್ನ ಗಂಡನ ಸಲಹೆಯನ್ನು ಕೇಳಲು ಬಯಸುತ್ತೇನೆ," ಎಂದು ಒಂದು ಮಾತನ್ನು ಹೇಳಿದ್ದರೆ, ಮಾನವ ಇತಿಹಾಸ ಎಷ್ಟು ಬದಲಾಗುತ್ತಿತ್ತು. ಆಹಾ, ಆಗ ಇಡೀ ಕಥೆಯೇ ಸಂಪೂರ್ಣವಾಗಿ ಬೇರೆಯಾಗುತ್ತಿತ್ತು! ನೆನಪಿರಿಸಿಕೊಳ್ಳಿರಿ, ದೇವರು ಸ್ತ್ರೀಗೆ ಒಬ್ಬ ಸಂಗಾತಿಯನ್ನು ಕೊಟ್ಟು ಅವನೊಂದಿಗೆ ಚರ್ಚಿಸಿ ನಿರ್ಣಯಗಳನ್ನು ತೆಗೆದುಕೊಳ್ಳುವ ಅವಕಾಶವನ್ನು ಕೊಟ್ಟಿದ್ದರೂ, ಆಕೆ ತಾನಾಗಿಯೇ ಒಂದು ನಿರ್ಣಯವನ್ನು ಕೈಗೊಂಡದ್ದು ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಮೂಲಕಾರಣವಾಯಿತು. ನಿಜವಾದ ಪ್ರೀತಿಯು ಕೆಲಸಗಳನ್ನು ಜೊತೆಯಾಗಿ ಮಾಡುತ್ತದೆ. ಯಾವಾಗಲೂ ಒಬ್ಬನಿಗಿಂತ ಇಬ್ಬರು ಲೇಸು.