WFTW Body: 

1. ಹೃದಯವು ವಿಶಾಲವಾಗಿರಲಿ

ಎರಡು ಪದಗುಚ್ಛಗಳು ಆಮೋಸನ ಗ್ರಂಥದ ಉದ್ದಕ್ಕೂ ಎಲ್ಲಿಯೂ ಕಂಡುಬರುವುದಿಲ್ಲ: ’ಇಸ್ರಾಯೇಲ್ಯರ ದೇವರು’ ಮತ್ತು ’ಇಸ್ರಾಯೇಲ್ಯರ ಸದಮಲಸ್ವಾಮಿ’. ಇದಕ್ಕೆ ಕಾರಣವೇನೆಂದರೆ, ಆಮೋಸನು ದೇವರನ್ನು ಭೂಮಿಯಲ್ಲಿರುವ ಎಲ್ಲಾ ಜನಾಂಗಗಳ ದೇವರಾಗಿ ಕಂಡುಕೊಂಡನು, ಕೇವಲ ಇಸ್ರಾಯೇಲ್ಯರ ದೇವರಾಗಿ ಅಲ್ಲ. ಆಮೋಸನು ಕರ್ತನ ಮಾತುಗಳನ್ನು ಉಲ್ಲೇಖಿಸುತ್ತಾ, "ಯೆಹೋವನು ಇಂತೆನ್ನುತ್ತಾನೆ - ಇಸ್ರಾಯೇಲ್ಯರೇ, ನೀವು ನನ್ನ ಗಣನೆಯಲ್ಲಿ ಕೂಷ್ಯರಿಗಿಂತ (Ethiopians) ಹೆಚ್ಚಿನವರು ಆಗಿದ್ದೀರೋ? ನಾನು ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ ಕರೆದುಕೊಂಡು ಬಂದಂತೆಯೇ ಇತರ ದೇಶಗಳಿಗೂ ಮಾಡಿಲ್ಲವೋ? ನಾನು ಫಿಲಿಷ್ಟಿಯರನ್ನು ಕಫ್ತೋರಿನಿಂದ, ಅರಾಮ್ಯರನ್ನು (Syrians) ಕೀರಿನಿಂದ ಕರೆತಂದೆನು. ಅದರಂತೆಯೇ ನಿಮ್ಮನ್ನು ಐಗುಪ್ತದೇಶದಿಂದ ಕರೆತಂದೆನು. ನಾನು ನಿಮ್ಮೆಲ್ಲರನ್ನೂ ಏಕ ರೀತಿಯಾಗಿ ಬರಮಾಡಲಿಲ್ಲವೇ?" (ಆಮೋಸ 9:7 - ಭಾವಾನುವಾದ).

ಆಮೋಸನು ಜಗತ್ತಿನ ಎಲ್ಲಾ ದೇಶಗಳ ಸಕಲ ಜನಾಂಗಗಳಿಗೂ ಅನ್ವಯಿಸುವಂಥ "ಹೊಸ ಒಡಂಬಡಿಕೆಯ" ದೀರ್ಘದರ್ಶನವನ್ನು ಹೊಂದಿದ್ದ ಒಬ್ಬ ಪ್ರವಾದಿಯಾಗಿದ್ದನು. ದೇವರು ಯೆಹೂದ್ಯರ ಜೊತೆಗೆ ಅನ್ಯ ಜನರನ್ನೂ ಸಹ ಒಂದುಗೂಡಿಸಿ ಒಂದೇ ದೇಹವನ್ನಾಗಿ ಮಾಡಲಿರುವುದಾಗಿ ಆತನು ನಂಬಿದ್ದನು. ಅಮೋಸನು ಇಸ್ರಾಯೇಲ್ಯರ ಸಣ್ಣ ಮನಸ್ಸಿನ ಮನೋಭಾವಕ್ಕಿಂತ ಮೇಲ್ಮಟ್ಟಕ್ಕೆ ಏರಿದನು. ಆತನ ವಿಶಾಲ ಹೃದಯದಲ್ಲಿ ಇಡೀ ಜಗತ್ತಿನ ಎಲ್ಲಾ ಜನರಿಗಾಗಿ ಜಾಗವಿತ್ತು. ಇತರ ಇಸ್ರಾಯೇಲ್ಯರು ಹೊಂದಿದ್ದ "ನಾವು ದೇವರು ಅಂಗೀಕರಿಸಿರುವ ಏಕೈಕ ಜನಾಂಗ ಆಗಿದ್ದೇವೆ," ಎಂಬ ಇತರರನ್ನು ಕಡೆಗಣಿಸುವ ದೃಷ್ಟಿಕೋನ ಆತನಲ್ಲಿ ಇರಲಿಲ್ಲ.

ಇಂದೂ ಸಹ ಹಲವು ಕ್ರೈಸ್ತ ಪಂಗಡಗಳಲ್ಲಿ ತಾವು ಮಾತ್ರ ಭೂಮಿಯ ಮೇಲೆ ದೇವರು ಆರಿಸಿಕೊಂಡಿರುವ ಜನಾಂಗವಾಗಿದ್ದೇವೆ, ಎಂಬ ಕಲ್ಪನೆ ಇದೆ!! ನಿಜ ಹೇಳಬೇಕೆಂದರೆ, ಇಂತಹ ದೃಷ್ಟಿಕೋನವು ತಪ್ಪು ದಾರಿಯಲ್ಲಿ ಸಾಗುವ ಒಂದು ಧಾರ್ಮಿಕ ಪಂಗಡದ ('cult') ಸೂಚಕ ಚಿಹ್ನೆಗಳಲ್ಲಿ ಒಂದಾಗಿದೆ. ಅಂದಿನ ದಿನದ ಇಸ್ರಾಯೇಲಿನಲ್ಲೂ ಇಂತಹ ಜನರು ಇದ್ದರು. ಆದರೆ ಆಮೋಸನು ಅವರಲ್ಲಿ ಒಬ್ಬನಾಗಿರಲಿಲ್ಲ - ಅವನ ಹೃದಯವು ವಿಶಾಲವಾಗಿತ್ತು.

ದೇವರ ನಿಜ ಸೇವಕನು ಕ್ರೈಸ್ತರ ಎಲ್ಲಾ ಪಂಗಡಗಳು ಮತ್ತು ವಿವಿಧ ಒಳಗುಂಪುಗಳ ದೇವಜನರನ್ನು ಸ್ವೀಕರಿಸುವ ವಿಶಾಲ ಹೃದಯವನ್ನು ಹೊಂದಿರುತ್ತಾನೆ. ಬಾಬೆಲ್ ಎನ್ನುವಂಥದ್ದು ಕೇವಲ ಒಂದು ಕ್ರೈಸ್ತ ಪಂಗಡದಲ್ಲಿ ಕಂಡುಬರುವ ನಮೂನೆ ಅಥವಾ ಸಂಸ್ಕಾರ ಅಲ್ಲ. ಇದೊಂದು ಜಾಗತಿಕ ಪದ್ಧತಿಯಾಗಿದ್ದು, ನಿಮ್ಮ ಹೃದಯದ ಒಳಗೂ ಇದು ಅಡಗಿರಲು ಸಾಧ್ಯವಿದೆ. ಜಗತ್ತಿನ ಅತ್ಯುತ್ತಮ ಸಭೆ ಎನಿಸುವಲ್ಲಿ ಕುಳಿತಿರುವ ಜನರೂ ಸಹ ಬಾಬೆಲಿಗೆ ಸೇರಿದವರು ಆಗಿರಬಹುದು - ಏಕೆಂದರೆ ಅವರ ಆತ್ಮದಲ್ಲಿ ಬಾಬೆಲ್ ನೆಲೆಗೊಂಡಿರಬಹುದು. ಅವರು ಕ್ರೈಸ್ತ ಪಂಗಡಗಳ (denominations) ಪದ್ದತಿಯನ್ನು ತ್ಯಜಿಸಿ, ತಾವು ಬಾಬೆಲ್‌ನಿಂದ ಬಿಡುಗಡೆಗೊಂಡೆವು, ಎಂಬ ಕಲ್ಪನೆ ಮಾಡಬಹುದು. ಆದರೆ ಇದು ನಿಜವಲ್ಲ. ಉದಾಹರಣೆಗಾಗಿ, ನಿಮ್ಮಲ್ಲಿ ಹಣದಾಶೆ ಇದ್ದರೆ, ನೀವು ಈ ಜಗತ್ತಿನ ಯಾವುದೇ ಸಭೆಗೆ ಸೇರಿದ್ದರೂ ಸರಿ, ನೀವು ಬಾಬೆಲಿಗೆ ಸೇರಿದ್ದೀರಿ. ನೀವು ಶರೀರದಾಶೆಗಳ ಹಿಡಿತದಲ್ಲಿ ಜೀವಿಸುತ್ತಿದ್ದರೆ, ನೀವು ಈ ಜಗತ್ತಿನ ಯಾವುದೇ ಸಭೆಗೆ ಸೇರಿದ್ದರೂ ಸರಿ, ನೀವು ಒಬ್ಬ ಜಾರಸ್ತ್ರೀ ಆಗಿದ್ದೀರಿ. ನಿಮ್ಮ ಪರಿಶುದ್ಧ ಸಿದ್ಧಾಂತಗಳ ಕುರಿತಾಗಿ ನೀವು ಹೆಮ್ಮೆಪಡುತ್ತಾ, "ನಾವು ಮರಿಯಳನ್ನು ಆರಾಧಿಸುವುದಿಲ್ಲ ಅಥವಾ ಶಿಶುಗಳಿಗೆ ದೀಕ್ಷಾಸ್ನಾನ ಮಾಡಿಸುವುದಿಲ್ಲ ..." ಎಂದು ಹೇಳಿಕೊಳ್ಳಬಹುದು. ಅದು ಒಳ್ಳೆಯದೇ. ಆದರೆ ನೀವು ಹಣವನ್ನು ಆರಾಧಿಸುವುದನ್ನು ಮತ್ತು ನಿಮ್ಮ ಭೋಗಾಪೇಕ್ಷೆಗಳಲ್ಲಿ ನಡೆಯುವುದನ್ನು ಬಿಡದಿದ್ದರೆ, ವಾಸ್ತವಿಕವಾಗಿ ನೀವು ಇತರರಿಗಿಂತ ಕೆಳಮಟ್ಟದಲ್ಲಿ ಇರಬಹುದು. ಇತರರು ಹೊಂದಿರುವ ಸಮಸ್ಯೆ ತಲೆಗೆ ಸಂಬಂಧಿಸಿದ್ದು (ಸೈದ್ಧಾಂತಿಕವಾದದ್ದು), ಆದರೆ ನಿಮ್ಮಲ್ಲಿ ಹೆಚ್ಚು ಗಂಭೀರವಾದ ಹೃದಯದ ಸಮಸ್ಯೆ (ಜೀವಕ್ಕೆ ಸಂಬಂಧಿಸಿದ್ದು) ಇದೆ. ಇಂದಿನ ಕ್ರೈಸ್ತ ಪ್ರಪಂಚದಲ್ಲಿ ವ್ಯಾಪಿಸಿರುವ ಪ್ರತ್ಯೇಕತೆಯ ಕಲ್ಪನೆ ಏನೆಂದರೆ, ದೇವರು ಕೇವಲ ತಮ್ಮ ಚಿಕ್ಕ ಗುಂಪನ್ನು ವಿಶೇಷವಾಗಿ ಪರಿಗಣಿಸುತ್ತಾರೆ, ಎಂಬುವದು!! ಕ್ರಿಸ್ತನ ದೇಹವು ಯಾವುದೇ ಗುಂಪು-ಪಂಗಡಗಳಿಗಿಂತ ದೊಡ್ಡದಾಗಿದೆ. ಇಂದು ದೇವಜನರು ಕೇವಲ ಯಾವುದೋ ಒಂದು ಕ್ರೈಸ್ತ-ಪಂಗಡದಲ್ಲಿ ಕಂಡುಬರುವುದಿಲ್ಲ. ದೇವರು ಪ್ರತಿಯೊಂದು ಕ್ರೈಸ್ತ-ಪಂಗಡದಲ್ಲೂ ತನ್ನ ಜನರನ್ನು ಇರಿಸಿದ್ದಾರೆ. ಬೇರೆ ಬೇರೆಯಾದ ಸಿದ್ಧಾಂತಗಳನ್ನು ಹೊಂದಿರುವ ಹಲವು ಕ್ರೈಸ್ತಸಭೆಗಳಲ್ಲಿ ಹೊಸದಾಗಿ ಹುಟ್ಟಿರುವ ಜನರು ಇದ್ದಾರೆ. ಅನೇಕ ಸಭೆಗಳ ಆತ್ಮಿಕ ಸಿದ್ಧಾಂತವನ್ನು ನಾನು ಒಪ್ಪಿಕೊಳ್ಳುವುದಿಲ್ಲ; ಆದರೆ ಆ ಸಭೆಗಳಲ್ಲಿ ದೇವರು ತನ್ನ ಕೆಲವು ಮಕ್ಕಳನ್ನು ಇರಿಸಿದ್ದಾರೆ ಎನ್ನುವುದನ್ನು ನಾನು ಅಲ್ಲಗಳೆಯಲಾರೆ. ಅದೇ ರೀತಿಯಾಗಿ, ಮಾನಸಾಂತರ ಪಡದಿರುವ ಜನರು ತಮ್ಮನ್ನು ಸುವಾರ್ತಾ ಪ್ರಚಾರಕ ಸಭೆಗಳ ಸದಸ್ಯರಾಗಿ ನೊಂದಾಯಿಸಿಕೊಂಡಿದ್ದಾರೆ, ಅದಲ್ಲದೆ "ಪ್ರತ್ಯೇಕಿಸಲ್ಪಟ್ಟ" ಕೂಟಗಳಲ್ಲಿ ಕುಳಿತು ರೊಟ್ಟಿ ಮುರಿಯುವವರ ನಡುವೆಯೂ ಅಂಥವರು ಇದ್ದಾರೆ - ಇವರು ಹೆಚ್ಚಾಗಿ ಆ ಸಭೆಗಳಲ್ಲಿ ಎರಡನೆಯ ಮತ್ತು ಮೂರನೆಯ ತಲೆಮಾರಿನ ಗುಂಪಿನಲ್ಲಿ ಇರುತ್ತಾರೆ. ಇಂದಿನ ದಿನಗಳಲ್ಲಿ ನಮಗೆ ಆಮೋಸನು ಹೊಂದಿದ್ದ ದರ್ಶನವು ಅವಶ್ಯವಾಗಿ ಬೇಕಾಗಿದೆ. ದೇವರು ಎಲ್ಲಾ ದೇಶಗಳಲ್ಲಿ ಮತ್ತು ಎಲ್ಲಾ ಕ್ರೈಸ್ತ-ಪಂಗಡಗಳಲ್ಲಿ ಜನರನ್ನು ಶಿಕ್ಷಿಸುತ್ತಾರೆ. ಅದರ ಜೊತೆಗೆ ಅವರು ಎಲ್ಲಾ ದೇಶಗಳಲ್ಲಿ ಮತ್ತು ಎಲ್ಲಾ ಕ್ರೈಸ್ತ-ಪಂಗಡಗಳಲ್ಲಿ ಜನರನ್ನು ಆರಿಸಿ ಜೊತೆಗೂಡಿಸುತ್ತಾರೆ.

2. ಪ್ರವಾದನಾ ವಾಕ್ಯದ ಮಹತ್ವ

ಆಮೋಸ 8:11, 12ರಲ್ಲಿ, ನಾವು ಕೊನೆಯ ದಿನಗಳ ಕುರಿತಾದ ಈ ಪ್ರವಾದನಾ ವಾಕ್ಯವನ್ನು ಓದುತೇವೆ: "ನಾನು ದೇಶಕ್ಕೆ ಕ್ಷಾಮವನ್ನು ಉಂಟುಮಾಡುವ ದಿನಗಳು ಬರುತ್ತಿವೆ; ಅದು ಅನ್ನದ ಕ್ಷಾಮವಲ್ಲ, ಕರ್ತನ ವಾಕ್ಯಗಳ ಕ್ಷಾಮವೇ - ಜನರು ಕರ್ತನ ವಾಕ್ಯವನ್ನು ಹುಡುಕುತ್ತಾ ಓಡಾಡುವರು, ಆದರೂ ಅದು ಸಿಕ್ಕದು." ನಾವು ಈ ದಿನ ಆ ಕ್ಷಾಮ ಬಂದಿರುವುದನ್ನು ನೋಡುತ್ತಿದ್ದೇವೆ. ’ದೇವರ ವಾಕ್ಯ’ ಎಂದರೆ ಸತ್ಯವೇದವು - ಮತ್ತು ಈಗ ಅದರ ಅಭಾವ ಬಂದಿಲ್ಲ. ಬೈಬಲ್ ಸೊಸೈಟಿಯು ಲಕ್ಷಾಂತರ ಸತ್ಯವೇದ ಪ್ರತಿಗಳನ್ನು ವರ್ಷ ವರ್ಷವೂ ಹಂಚುತ್ತಿದೆ ಮತ್ತು ಈಗಲೂ ಕೂಡ ಸತ್ಯವೇದವೇ ಜಗತಿನಲ್ಲಿ ಅತೀ ಹೆಚ್ಚಾಗಿ ಮಾರಾಟಗೊಳ್ಳುವ ಪುಸ್ತಕವಾಗಿದೆ. ಆದರೆ ಇಲ್ಲಿ ಪ್ರಸ್ತಾಪಿಸಿರುವದು ’ಕರ್ತನ ವಾಕ್ಯ’ವನ್ನು - ಇದು ಅವಶ್ಯಕತೆಗೆ ತಕ್ಕಂತೆ, ಸಮಯಕ್ಕೆ ಸೂಕ್ತವಾಗಿ, ಒಬ್ಬ ಪ್ರವಾದಿಯ ಮೂಲಕ ದೇವರಿಂದ ಬರುವ ಪ್ರವಾದನಾ ವಾಕ್ಯವಾಗಿದೆ. ಕೊನೆಯ ದಿನಗಳಲ್ಲಿ "ಕರ್ತನ ವಾಕ್ಯವು" ಅಪರೂಪವಾಗುತ್ತದೆ. ಜನರು ಒಬ್ಬ ನಿಜವಾದ ಪ್ರವಾದಿಯ ಮಾತುಗಳನ್ನು ಹುಡುಕುತ್ತಾ ಅಲ್ಲಿಲ್ಲಿ ಓಡಾಡುವರು - ಆದರೆ ಅದು ಸುಲಭವಾಗಿ ಸಿಗುವುದಿಲ್ಲ. ಹೀಗಿರುವಾಗ, ನಿಮಗೆ ಕರ್ತನಿಂದ ಒಂದು ಪ್ರವಾದನಾ ವಾಕ್ಯವನ್ನು ಪಡೆದುಕೊಳ್ಳುವ ಅವಕಾಶ ಸಿಕ್ಕಿದಾಗ, ಅದನ್ನು ಗಮನವಿಟ್ಟು ಕೇಳಿ ಎಚ್ಚರಗೊಳ್ಳಿರಿ - ಮತ್ತು ಅದನ್ನು ಗಂಭೀರವಾಗಿ ಸ್ವೀಕರಿಸಿರಿ.

3. ಒಂದು ಅದ್ಭುತವಾದ ವಾಗ್ದಾನ

ಆಮೋಸ 9:13ರಲ್ಲಿ, ನಾವು ಇದನ್ನು ಓದುತೇವೆ: ಕರ್ತನು ಇಂತೆನ್ನುತ್ತಾನೆ, ಆಹಾ, ಮುಂದಿನ ಕಾಲದಲ್ಲಿ "ಉಳುವವನು ಕೊಯ್ಯುವವನನ್ನು ದಾಟಿ ಹೋಗುವನು" (ಭಾವಾನುವಾದ). ಈ ಮಾತಿನ ಅರ್ಥ: ನಾವು ಹಿಂದಿನ ದಿನಗಳಲ್ಲಿ ಬಹಳಷ್ಟು ಕೆಟ್ಟದ್ದನ್ನು ಬಿತ್ತಿದ್ದೇವೆ, ಮತ್ತು ನಾವು ಕ್ಷಮಿಸಲ್ಪಟ್ಟಿದ್ದರೂ ಕೂಡ, ನಾವು ಬಿತ್ತಿರುವುದರ ಒಂದಿಷ್ಟು ಫಲ ನಮಗೆ ಸಿಕ್ಕೇ ಸಿಗುತ್ತದೆ. ಆದರೆ ಶೀಘ್ರವೇ ಬರಲಿರುವ ಕಾಲದಲ್ಲಿ, ನೀವು ನಿಮ್ಮ ಜೀವನದಲ್ಲಿ (ಒಬ್ಬ ಪೂರ್ಣ-ಹೃದಯದ ಶಿಷ್ಯನಾದ ನಂತರ) ಹೊಸದಾಗಿ ಬಿತ್ತುತ್ತಿರುವ ಕಾರ್ಯಗಳು ಇದುವರೆಗೆ (ಹಿಂದಿನ ಕಾರ್ಯಗಳ ಪ್ರಯುಕ್ತ) ಪಡೆಯುತ್ತಿರುವ ಫಲಗಳನ್ನು ಅಳಿಸಿಬಿಡುತ್ತವೆ. ಉದಾಹರಣೆಗಾಗಿ: ಹಿಂದೆ ನೀವು ಬಹಳಷ್ಟು ಅಶ್ಲೀಲ ಸಂಗತಿಗಳ ಬಗ್ಗೆ ಓದಿದ್ದರಿಂದ ಮತ್ತು ಅಂತಹ ಚಿತ್ರಗಳನ್ನು ನೋಡಿರುವದರಿಂದ ನಿಮ್ಮ ಮನಸ್ಸನ್ನು ಕಲಕುತ್ತಿರುವ ಕೆಟ್ಟ ಆಲೋಚನೆಗಳು ಮತ್ತು ದುಃಸ್ವಪ್ನಗಳು, ಕ್ರಮೇಣವಾಗಿ ಆತ್ಮಿಕ ಸಂಗತಿಗಳ ಕುರಿತಾದ ಆಲೋಚನೆಗಳಿಂದ ಮತ್ತು ಸ್ವಪ್ನಗಳಿಂದ ಭರ್ತಿಗೊಳ್ಳುತ್ತವೆ, ಏಕೆಂದರೆ ಈಗ ನೀವು ನಿಮ್ಮ ಮನಸ್ಸನ್ನು ದೇವರ ವಚನದಿಂದ ತುಂಬುತ್ತಿದ್ದೀರಿ. ಅದಲ್ಲದೆ ನಿಮ್ಮ ಜೀವನವು ದೇವರಿಗಾಗಿ ಫಲಕಾರಿಯಾಗಲಿದೆ. ಇದು ಎಂತಹ ಅದ್ಭುತವಾದ ವಾಗ್ದಾನವಾಗಿದೆ! ಹಲ್ಲೆಲೂಯ, ದೇವರಿಗೆ ಸ್ತೋತ್ರವಾಗಲಿ!