WFTW Body: 

ಧರ್ಮೋಪದೇಶಕಾಂಡವು, "ಎರಡನೆಯ ಧರ್ಮೋಪದೇಶ" ಎಂಬ ಅರ್ಥವನ್ನು ಹೊಂದಿದೆ. ಇದಕ್ಕೆ ಕಾರಣ, ಧರ್ಮಶಾಸ್ತ್ರದ ಅನೇಕ ಮುಖ್ಯ ಅಂಶಗಳನ್ನು ಇಲ್ಲಿ ಮತ್ತೊಮ್ಮೆ ಪುನರಾವರ್ತಿಸಲಾಗಿದೆ. ನಾವು ಈ ಪುಸ್ತಕವನ್ನು ಎರಡು ರೀತಿಯಲ್ಲಿ ವಿಭಜಿಸಬಹುದು. ಮೊದಲನೆಯದಾಗಿ, ಇದನ್ನು ಮೋಶೆಯು ನೀಡಿದ ಮೂರು ಉಪನ್ಯಾಸಗಳಾಗಿ ವಿಭಜಿಸಬಹುದು:

(ಅ) ಮೊದಲನೇ ಉಪನ್ಯಾಸ (ಅಧ್ಯಾಯ 1-4) .

(ಆ) ಎರಡನೇ ಉಪನ್ಯಾಸ (ಅಧ್ಯಾಯ 5-26).

(ಇ) ಮೂರನೇ ಉಪನ್ಯಾಸ (ಅಧ್ಯಾಯ 27-30) .

ಇವೆಲ್ಲಾ ಉಪನ್ಯಾಸಗಳನ್ನು ಕೊಟ್ಟ ಮನುಷ್ಯನು, ಉರಿಯುವ ಪೊದೆಯ ಘಟನೆಯ ಸಂದರ್ಭದಲ್ಲಿ "ನಾನು ವಾಕ್ಚಾತುರ್ಯ ಇಲ್ಲದವನು," ಎಂದು ಹೇಳಿದ ವ್ಯಕ್ತಿಯಾಗಿದ್ದನು! ಅಂತ್ಯಯಲ್ಲಿ ಮೋಶೆಯ ಗೀತೆ (ಅಧ್ಯಾಯ 32), ಮೋಶೆಯ ಆಶೀರ್ವಾದ (ಅಧ್ಯಾಯ 33) ಮತ್ತು ಮೋಶೆಯ ಮರಣದೊಂದಿಗೆ (ಅಧ್ಯಾಯ 34) ಧರ್ಮೋಪದೇಶಕಾಂಡವು ಕೊನೆಗೊಳ್ಳುತ್ತದೆ.

ಈ ಪುಸ್ತಕವನ್ನು ವಿಭಜಿಸುವ ಎರಡನೆಯ ವಿಧಾನವು, ಇದು ಮೂರು ದೆಸೆಗಳಲ್ಲಿ ನೋಡುತ್ತದೆ ಎಂಬುದನ್ನು ಆಧರಿಸಿದೆ:

1. ಹಿಂದಿನ ಸಂಗತಿಗಳನ್ನು ನೋಡುವಂತದ್ದು. ಎರಡು ಸಂದೇಶಗಳು ಅರಣ್ಯ ಪ್ರದೇಶದಲ್ಲಿ 40 ವರ್ಷಗಳ ಕಾಲ ದೇವರ ನಂಬಿಗಸ್ತಿಕೆಯನ್ನು ತೋರಿಸುತ್ತವೆ (ಅಧ್ಯಾಯ 1-11).

2. ಮೇಲೆ ನೋಡುವಂತದ್ದು. ಎರಡು ಸಂದೇಶಗಳು - ದೇವರ ಆಜ್ಞಾವಿಧಿಗಳ ಮೂಲಕ - ದೇವರನ್ನು ನೋಡುತ್ತವೆ. ಮನುಷ್ಯನು ದೇವರ ಆಜ್ಞಾವಿಧಿಗಳ ಮೂಲಕ ತನ್ನ ಕೊರತೆಯನ್ನು ಅರಿಯುತ್ತಾನೆ (ಅಧ್ಯಾಯ 12-31).

3. ಭವಿಷ್ಯವನ್ನು ನೋಡುವಂತದ್ದು. ದೇವರು ಭವಿಷ್ಯಕಾಲದಲ್ಲಿ ಮಾಡಲಿರುವ ಅದ್ಭುತ ಸಂಗತಿಗಳನ್ನು ಮುಂದಾಗಿ ತೋರಿಸುವ ಎರಡು ಸಂದೇಶಗಳು (ಅಧ್ಯಾಯ 32-33).

ಈ ಮೂರು ದೆಸೆಯ ನೋಟಗಳು ನಮ್ಮಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಅವಶ್ಯವಾದವುಗಳು. ನಮಗೆ ಎಷ್ಟೇ ವಯಸ್ಸಾದರೂ, ನಮ್ಮ ದೃಷ್ಟಿಯನ್ನು ಈ ಮೂರು ದೆಸೆಗಳಿಂದ ಕದಲಿಸಬಾರದು.

ಹಿಂದಿನ ಸಂಗತಿಗಳನ್ನು ನೋಡುವುದು (ಧರ್ಮೋಪದೇಶ 1-11)

ಹಿಂದಿನ ಸಂಗತಿಗಳನ್ನು ನಾವು ಅವಶ್ಯವಾಗಿ ನೋಡಬೇಕು. ನನ್ನ ಜೀವಿತದಲ್ಲಿ ಕರ್ತನು ನನ್ನನ್ನು ಹೇಗೆ ನಡೆಸಿದ್ದಾನೆಂದು ನಾನು ಅನೇಕ ಬಾರಿ ಯೋಚಿಸಿದ್ದೇನೆ - ಮತ್ತು ಅದು ನನ್ನ ನಂಬಿಕೆಗೆ ಹೊಸ ಚೈತನ್ಯ ನೀಡಿದೆ. ಯಾವುದೋ ಕಷ್ಟಕರ ಸನ್ನಿವೇಶ ಎದುರಾದಾಗ ಮತ್ತು ಅದಕ್ಕೆ ಪರಿಹಾರ ಕಾಣಿಸದಿದ್ದಾಗ, ನಾನು ಸತ್ಯವೇದದ ವಾಗ್ದಾನಗಳನ್ನು ನೆನಪಿಸಿಕೊಳ್ಳುತ್ತೇನೆ ಮತ್ತು ಇತರ ವಿಶ್ವಾಸಿಗಳು ನನಗೆ ನೀಡುವ ಉತ್ತೇಜನವನ್ನು ಕೇಳಿಸಿಕೊಳ್ಳುತ್ತೇನೆ. ಆದರೆ ಇವೆಲ್ಲಕ್ಕೂ ಹೆಚ್ಚಾಗಿ, ಹಿಂದೆ ಜರುಗಿದ ಘಟನೆಗಳನ್ನು ನಾನು ತಿರುಗಿ ನೋಡಿದಾಗ, ನನ್ನ ನಂಬಿಕೆಯು ಬಲಗೊಳ್ಳುತ್ತದೆ. ಕರ್ತನು ನನ್ನನ್ನು, "ನಾನು ಒಂದು ಬಾರಿಯಾದರೂ ನಿನ್ನ ಕೈಯನ್ನು ಬಿಟ್ಟಿದ್ದೇನೆಯೇ?" ಎಂದು ಪ್ರಶ್ನಿಸುತ್ತಾನೆ. ನನ್ನ ಜವಾಬು, "ಇಲ್ಲ ಕರ್ತನೇ. ಒಂದು ಬಾರಿಯೂ ಕೈ ಬಿಟ್ಟಿಲ್ಲ." ಆಗ ಆತನ ಉತ್ತರ, "ಈ ಬಾರಿಯೂ ನಾನು ಕೈ ಬಿಡುವುದಿಲ್ಲ." ಬೇರೆ ಎಲ್ಲಕ್ಕೂ ಹೆಚ್ಚಾಗಿ, ’ಹಿಂದಿನ ಸಂಗತಿಗಳನ್ನು ನೋಡುವಂತ’ ಈ ದೃಷ್ಟಿಯು ನನಗೆ ಹೆಚ್ಚಿನ ಉತ್ತೇಜನ ನೀಡುತ್ತದೆ.

ನೀವು ಮತ್ತೊಮ್ಮೆ ಬಿದ್ದುಹೋದಿರಾ? ’ಹಿಂದಿರುಗಿ ನೋಡಿರಿ,’ ಮತ್ತು ಹಿಂದೆ ಕರ್ತನು ನಿಮ್ಮನ್ನು ಹೇಗೆ ಕ್ಷಮಿಸಿದನು ಎಂಬುದನ್ನು ನೆನಪಿಸಿಕೊಳ್ಳಿರಿ. ಅವನು ಕ್ಷಮಿಸಿದಾಗ ಅವನಿಗೆ ನೀವು ಮತ್ತೊಮ್ಮೆ ಬೀಳುವಿರೆಂದು ಗೊತ್ತಿರಲಿಲ್ಲವೇ? ನೀವು ಮತ್ತೆ ಬಿದ್ದಾಗ ಅವನಿಗೆ ಆಶ್ಚರ್ಯವಾಯಿತೇ? ಇಲ್ಲ. ಹಾಗಿದ್ದಲ್ಲಿ ಅವನು ನಿಮ್ಮನ್ನು ಇನ್ನೊಮ್ಮೆ ಕ್ಷಮಿಸುತ್ತಾನೆ. ಹಿಂದಿನ ಸಂಗತಿಗಳನ್ನು ಕೃತಜ್ಞತೆಯೊಂದಿಗೆ ನೆನಪಿಸಿಕೊಳ್ಳಿರಿ. ಅದು ನಿಮ್ಮ ನಂಬಿಕೆಯನ್ನು ಬಲಪಡಿಸುವುದು. ಕರ್ತನ ಕರುಣೆಗಾಗಿ ನಿಮ್ಮಲ್ಲಿ ಕೃತಜ್ಞತೆಯಿರಲಿ. ನೀವು ನಿಮ್ಮ ಹಿಂದಿನ ಸೋಲುಗಳನ್ನು ತಿರುಗಿ ನೋಡಿದಾಗ, ನಿಮ್ಮ ಅಕ್ಕಪಕ್ಕದಲ್ಲಿ ಸಹ-ವಿಶ್ವಾಸಿಗಳು ಮಾಡುವ ತಪ್ಪುಗಳನ್ನು ಹೇಗೆ ಕರುಣೆಯಿಂದ ನೋಡಬೇಕೆಂಬ ತಿಳುವಳಿಕೆ ನಿಮ್ಮಲ್ಲಿ ಉಂಟಾಗುತ್ತದೆ.

ಆದರೆ ಇನ್ನೊಂದು ವಿಷಯ, ನಾವು ಹಿಂದಿನವುಗಳನ್ನು ಹೇಗೆ ’ನೋಡಬಾರದು’ ಎನ್ನುವಂಥದ್ದು. "ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟೆನು," ಎಂದು ಪೌಲನು ಹೇಳಿದನು (ಫಿಲಿ. 3:13) . ನಾವು ಹಿಂದಿನ ಸಂಗತಿಗಳನ್ನು ತಪ್ಪಾದ ರೀತಿಯಲ್ಲಿ ನೋಡಿದರೆ, ಬೇಸರಗೊಳ್ಳುವೆವು ಮತ್ತು ನಾವು ನಮ್ಮ ಜೀವನದ ಅನೇಕ ವರ್ಷಗಳನ್ನು ಪೋಲು ಮಾಡಿರುವುದರಿಂದ, ನಾವು ಕೆಲಸಕ್ಕೆ ಬಾರದವರು ಮತ್ತು ನಮ್ಮ ಜೀವನ ವಿಫಲವಾಗಿದೆಯೆಂದು ನಮಗೆ ಅನ್ನಿಸುತ್ತದೆ.

ಜೀವನವನ್ನು ಹಾಳು ಮಾಡಿಕೊಂಡಿದ್ದೇವೆ ಅಂದುಕೊಳ್ಳುವವರಿಗೆ, ನಾನು ಒಂದು ಉತ್ತೇಜಕ ಮಾತನ್ನು ಹೇಳಬಯಸುತ್ತೇನೆ. ಯೇಸುವಿನ ಒಂದು ಸಾಮ್ಯದಲ್ಲಿ, ಕೆಲವು ಕೂಲಿಯಾಳುಗಳು ಒಂದು ದಿನದ ಕೆಲಸ ಅಂದರೆ 12 ತಾಸುಗಳಲ್ಲಿ, 11 ತಾಸು ಸುಮ್ಮನೆ ನಿಂತಿದ್ದರು. ಸಾಯಂಕಾಲ ಐದು ಗಂಟೆಗೆ ಒಬ್ಬ ಮನುಷ್ಯನು ಅವರನ್ನು ಕರೆದು, ತನ್ನ ದ್ರಾಕ್ಷೇತೋಟದಲ್ಲಿ ಕೆಲಸ ಮಾಡಲು ಕಳುಹಿಸಿದನು. ಅವರು ತೋಟಕ್ಕೆ ಹೋಗಿ ಕೇವಲ ಒಂದು ಗಂಟೆ ಕೆಲಸ ಮಾಡಿದರು. ಆದರೆ ಯೇಸುವು ಹೇಳಿದಂತೆ, ಈ ಆಳುಗಳಿಗೆ ಮೊದಲು ಕೂಲಿ ಕೊಡಲ್ಪಟ್ಟಿತು! 12 ತಾಸುಗಳ ಕಾಲ ದುಡಿದವರಿಗೆ ಪಗಾರ ಕೊನೆಗೆ ಸಿಕ್ಕಿತು! ಇದು ನಿಮ್ಮನ್ನು ಧೈರ್ಯಪಡಿಸುತ್ತದೆ ಎಂದು ನಾನು ಹಾರೈಸುತ್ತೇನೆ. ಹಿಂದಿರುಗಿ ನೋಡುವದು ನಮ್ಮನ್ನು ’ಬೇಸರ ಪಡಿಸಬಾರದು’.

ಅದಲ್ಲದೆ, ಹಿಂದಿರುಗಿ ನೋಡುವದು ನಮ್ಮನ್ನು ’ಅಹಂಕಾರಕ್ಕೂ’ ನಡೆಸಬಾರದು. "ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟೆನು," ಎನ್ನುವ ಮಾತು ’ಬೇಸರ ಪಡಿಸುವ ಸಂಗತಿ’ ಮತ್ತು ’ಅಹಂಕಾರ ಪಡಿಸುವ ಸಂಗತಿ,’ ಎರಡಕ್ಕೂ ಅನ್ವಯಿಸುತ್ತದೆ. ನಿಮ್ಮನ್ನು ನಿರುತ್ಸಾಹ ಅಥವಾ ಅಹಂಕಾರಕ್ಕೆ ನಡಿಸುವಂತ ಯಾವುದೇ ಸಂಗತಿ ಇದ್ದರೆ, ಅದನ್ನು ಆದಷ್ಟು ಬೇಗ ಮರೆತು ಬಿಡಿರಿ, ಎಂದು ನಾನು ನಿಮಗೆ ಹೇಳುತ್ತೇನೆ. ಆದರೆ ಹಿಂದೆ ದೇವರು ನಮಗೆ ಮಾಡಿದ ಸಂಗತಿಗಳಿಗಾಗಿ ನಮ್ಮಲ್ಲಿ ಯಾವಾಗಲೂ ಕೃತಜ್ಞತೆಯಿರಬೇಕು. ಇದನ್ನೇ ನಾನು "ಹಿಂದಿರುಗಿ ನೋಡುವುದು" ಎನ್ನುತ್ತಿದ್ದೇನೆ. ಪೇತ್ರನು ಹೇಳುವಂತೆ, ಯಾರು ಈ ರೀತಿಯಾಗಿ ಹಿಂದಿರುಗಿ ನೋಡುವುದಿಲ್ಲವೋ, ಮತ್ತು ಹಿಂದಿನ ಪಾಪಗಳಿಂದ ಶುದ್ಧರಾದುದನ್ನು ನೆನಪಿಗೆ ತರುವುದಿಲ್ಲವೋ, ಅವರು ಕುರುಡರೂ, ದೂರದೃಷ್ಟಿ ಇಲ್ಲದವರೂ ಆಗುತ್ತಾರೆ (2 ಪೇತ್ರ. 1:9) .

ಮೇಲೆ ನೋಡುವುದು (ಧರ್ಮೋಪದೇಶ 12-31)

ನಾವು ಮೇಲೆ ನೋಡುವುದು ಸಹ ಅವಶ್ಯವಾದದ್ದು. ನಾವು ಮೇಲೆ ನೋಡುತ್ತಾ, ದೇವರ ಮಹಿಮೆಯನ್ನು ಹೆಚ್ಚು ಹೆಚ್ಚಾಗಿ ಕಂಡುಕೊಳ್ಳುವುದನ್ನು ನಿಲ್ಲಿಸಬಾರದು. ಯೇಸುವಿನ ಮಹಿಮೆಯ ಬಹಳಷ್ಟು ಅಂಶ ನಮಗೆ ಇನ್ನೂ ಗೋಚರವಾಗಿಲ್ಲ. ನಾವು ಇದಕ್ಕಾಗಿ ಹಸಿದಿರಬೇಕು, ಏಕೆಂದರೆ ಈ ಪ್ರಭಾವದ ಸಾರೂಪ್ಯಕ್ಕೆ ನಮ್ಮನ್ನು ಬದಲಾಯಿಸುವುದೇ ಪವಿತ್ರಾತ್ಮನು ಮಾಡಬೇಕೆಂದಿರುವ ಕೆಲಸವಾಗಿದೆ. ನಾವು ದೇವರ ಪ್ರಭಾವವನ್ನು ನೋಡುತ್ತಿರುವಾಗ, ಅದು ನಮ್ಮನ್ನು ದೀನರನ್ನಾಗಿ ಮಾಡುತ್ತದೆ, ಏಕೆಂದರೆ ಆಗ ನಾವು ನಮ್ಮ ಕೊರತೆಯನ್ನು ಅರಿತುಕೊಳ್ಳುವೆವು. ನಮ್ಮ ಜೀವಿತದ ಅಂತ್ಯದ ವರೆಗೆ ದೀನತೆಯಲ್ಲಿ ಮುಂದುವರಿಯುವ ರಹಸ್ಯ ಇದಾಗಿದೆ.

ದೇವರು ಅಭಿಷೇಕಿಸಿ ಪ್ರಬಲವಾಗಿ ಬಳಸಿಕೊಂಡಿರುವ ಮನುಷ್ಯನು ಬಹಳ ಸುಲಭವಾಗಿ ಗರ್ವಿಷ್ಠನಾಗಬಹುದು. ನಾನು ಇಂತಹ ಅನೇಕ ಬೋಧಕರನ್ನು ಕಂಡಿದ್ದೇನೆ. ಅವರನ್ನು ದೇವರು ಬಳಸಿಕೊಂಡಾಗ, ಅವರು ಬಹಳ ಗರ್ವಿಗಳಾಗುತ್ತಾರೆ ಮತ್ತು ಜನರಿಂದ ಬಹಳ ದೂರ ಸರಿಯುತ್ತಾರೆ. ನಮ್ಮನ್ನು ನಮ್ಮ ಜೀವಿತದ ಕೊನೆಯ ವರೆಗೆ ಮುರಿಯಲ್ಪಟ್ಟವರಾಗಿ, ದೀನರಾಗಿ ಯಾವುದು ಕಾಪಾಡುತ್ತದೆ? ಒಂದೇ ಒಂದು ಸಂಗತಿ. ನಮ್ಮ ನಂಬಿಕೆಯನ್ನು ಹುಟ್ಟಿಸುವವನು ಮತ್ತು ಪೂರೈಸುವವನಾದ ಯೇಸುವಿನ ಮೇಲೆ ಇಡುವ ದೃಷ್ಟಿ. ನಾವು ಯೇಸುವನ್ನು ನೋಡುತ್ತಿರುವಾಗ ಗರ್ವಿಷ್ಟರಾಗುವುದು ಅಸಾಧ್ಯವೇ ಸರಿ.

ಒಬ್ಬ ಮನುಷ್ಯನು ತನ್ನನ್ನು ಇತರರೊಂದಿಗೆ ಹೋಲಿಸಿಕೊಳ್ಳಲು ಆರಂಭಿಸಿ, ತಾನು ಅವರಿಗಿಂತ ಉತ್ತಮನು, ಅವರಿಗಿಂತ ಹೆಚ್ಚು ಅಭಿಷಿಕ್ತನು, ಅವರಿಗಿಂತ ಹೆಚ್ಚು ಬಳಸಲ್ಪಟ್ಟವನು, ಇತ್ಯಾದಿಯಾಗಿ ಯೋಚಿಸುತ್ತಾ ಗರ್ವಿಷ್ಠನು ಆಗುತ್ತಾನೆ. ಇದಕ್ಕೆ ಬದಲಾಗಿ, ಅವನು ಮೇಲಕ್ಕೆ ನೋಡಿ ಯೇಸುವನ್ನು ದೃಷ್ಟಿಸಿದರೆ, ಪಶ್ಚಾತಾಪಪಟ್ಟು - ಪತ್ಮೊಸ್ ದ್ವೀಪದಲ್ಲಿ ಅಪೊಸ್ತಲ ಯೋಹಾನನು ಮಾಡಿದ ಹಾಗೆ - ಅಡಿಮೊಗವಾಗಿ ಅಡ್ಡಬೀಳುವನು. ಹೀಗೆ ಯೇಸುವನ್ನು ಎಡೆಬಿಡದೆ ದೃಷ್ಟಿಸಿದರೆ, ಅವನು ತನ್ನ ಮೊಗವನ್ನು ಕೊನೆಯ ವರೆಗೂ ಧೂಳಿನಲ್ಲಿ ಇರಿಸಿಕೊಳ್ಳುವನು.

ನಮ್ಮಲ್ಲಿ ಪ್ರತಿಯೊಬ್ಬರೂ ಎಲ್ಲಾ ವೇಳೆಯಲ್ಲಿ ನಮ್ಮ ಮುಖಗಳನ್ನು ಧೂಳಿನಲ್ಲಿ ಇರಿಸಿಕೊಳ್ಳಬೇಕು. ಇದೇ ನಿರ್ಭಯ ಸ್ಥಳವಾಗಿದೆ. ಹಾಗಾಗಿ ನಿಮ್ಮ ಜೀವಿತದ ಎಲ್ಲಾ ದಿನಗಳು ದೇವರು ನಿಮ್ಮೊಂದಿಗೆ ಸಂತೋಷಿಸಬೇಕು ಎಂದು ನೀವು ಬಯಸಿದರೆ, ಮೇಲೆ ನೋಡುತ್ತಿರಿ. ನಾವು ಮೊದಲು ನಮ್ಮ ಒಳಗಿರುವುದನ್ನು ನೋಡಲೇಬಾರದು. ನಾವು ಯಾವಾಗಲೂ ಮೊದಲು ಮೇಲೆ ನೋಡಬೇಕು. ನಾವು ಯೇಸುವನ್ನು ನೋಡಬೇಕು ಮತ್ತು ಆತನ ಮಹಿಮೆಯನ್ನು ನಾವು ನೋಡುವಾಗ, ನಮಗೆ ನಮ್ಮ ಪಾಪವು ಕಾಣಿಸುತ್ತದೆ. ಇದು ನಮ್ಮ ಪಾಪವನ್ನು ನೋಡುವ ಅತ್ಯುತ್ತಮ ವಿಧಾನವಾಗಿದೆ; ಇನ್ಯಾವುದೋ ರೀತಿಯಲ್ಲಿ ನೋಡಿದಾಗ ನಾವು ಬೇಸರಗೊಳ್ಳುತ್ತೇವೆ.

ಮುಂದೆ ನೋಡುವುದು (ಧರ್ಮೋಪದೇಶ 32-33)

ನಾವು ಮುಂದೆ ನೋಡುವುದು ಸಹ ಅವಶ್ಯವಾದದ್ದು - ನಂಬಿಕೆಯಿಂದ ಹೀಗೆ ಮಾಡಬೇಕು. ದೇವರು ನಮಗಾಗಿ ಅದ್ಭುತ ಸಂಗತಿಗಳನ್ನು ಇರಿಸಿದ್ದಾರೆ. ನಾವು ಮಾಡಬೇಕಾದ ಒಂದು ಮಹತ್ತಾದ ಕಾರ್ಯವನ್ನು ಅವರು ಇರಿಸಿದ್ದಾರೆ. ನಾವು ಈ ಲೋಕವನ್ನು ಯಾವಾಗ ಬಿಡಬೇಕಾಗುತ್ತದೆ ಎಂದು ನಮಗೆ ಗೊತ್ತಿಲ್ಲ. ಆದರೆ ಕರ್ತನು ತಿರುಗಿ ಬರುವುದಕ್ಕೆ ಮುಂಚೆ, ಆತನಿಗಾಗಿ ಈ ಲೋಕದಲ್ಲಿ ಉಪಯುಕ್ತವಾದ ಯಾವುದೋ ಕಾರ್ಯವನ್ನು ಮಾಡಲು ನಾವು ಆಸಕ್ತರಾಗಿದ್ದೇವೆ. ಲೋಕದಲ್ಲಿ ಹೆಚ್ಚಿನ ಜನರು ಭವಿಷ್ಯವನ್ನು ಭಯ ಮತ್ತು ಚಿಂತೆಯಿಂದ ನೋಡುತ್ತಾರೆ. ಆದರೆ ನಾವು ನಂಬಿಕೆಯಿಂದ ಕಾಯುತ್ತಿದ್ದೇವೆ. ದೇವರು ಧರ್ಮೋಪದೇಶಕಾಂಡದಲ್ಲಿ ಮೋಶೆಗೆ, ಇಸ್ರಾಯೇಲ್ಯರು ಮುಂದೆ ಕಾನಾನ್ ದೇಶದಲ್ಲಿ ಜೀವಿಸುವ ಸಮಯವನ್ನು ಅವರು ಎದುರು ನೋಡುವಂತೆ ಅವರಿಗೆ ಹೇಳಲು ಆದೇಶಿಸಿದರು. ಇಸ್ರಾಯೇಲಿನ ಬಹಳ ಮುಂದಿನ ಭವಿಷ್ಯವನ್ನು ಅವನು ಧರ್ಮೋಪದೇಶಕಾಂಡದಲ್ಲಿ ಪ್ರವಾದಿಸಿದನು.