WFTW Body: 

ಅಪೊಸ್ತಲ ಪೌಲನು 1 ಕೊರಿ. 6:12ರಲ್ಲಿ, ಜನರು ಮೂರು ವಿಭಿನ್ನ ಮಟ್ಟಗಳಲ್ಲಿ ಜೀವಿಸಲು ಸಾಧ್ಯವಿದೆ, ಎಂದು ಹೇಳುತ್ತಾನೆ.

"ಎಲ್ಲಾ ಕಾರ್ಯಗಳು ನ್ಯಾಯೋಚಿತವಾಗಿವೆ, ಆದರೆ ಎಲ್ಲಾ ಕಾರ್ಯಗಳು ಲಾಭದಾಯಕವಲ್ಲ". ನ್ಯಾಯಬಾಹಿರ (ಅಥವಾ ಅನೈತಿಕ) ಜೀವನವು ಕ್ರಿಸ್ತನಲ್ಲಿ ವಿಶ್ವಾಸವಿಲ್ಲದ ಬಹಳಷ್ಟು ಜನರ ಜೀವನದ ಮಟ್ಟವಾಗಿದೆ. ಯಾವ ವಿಶ್ವಾಸಿಯೂ ಈ ಮಟ್ಟಕ್ಕೆ ಇಳಿಯಬಾರದು - ಆದರೆ ಕೆಲವರು ಅಲ್ಲಿಗೆ ಇಳಿಯುತ್ತಾರೆ ಎನ್ನುವದು ದುರದೃಷ್ಟಕರ. ಅವರು ಅದೇ ರೀತಿಯಾಗಿ ಜೀವಿಸುತ್ತಾ ಮುಂದುವರಿದರೆ, ತಮ್ಮ ರಕ್ಷಣೆಯನ್ನು ಕಳಕೊಳ್ಳುತ್ತಾರೆ. ಒಬ್ಬ ಕ್ರೈಸ್ತ ವಿಶ್ವಾಸಿಯ ಕನಿಷ್ಠ ಮಟ್ಟವು ಇದಕ್ಕಿಂತ ಮೇಲಿನ ಮಟ್ಟವಾಗಿದೆ - ನ್ಯಾಯೋಚಿತ (ಅಥವಾ ನೀತಿವಂತಿಕೆಯ) ಮಟ್ಟ. ಆದರೆ ಇದಕ್ಕೂ ಉನ್ನತವಾದ ಒಂದು ಮಟ್ಟವಿದೆ - ಲಾಭದಾಯಕ ಮಟ್ಟ. 100 ಕಾರ್ಯಗಳಲ್ಲಿ, 70 ಕಾರ್ಯಗಳು ಕಾನೂನಿಗೆ ವಿರುದ್ಧವಾಗಿರಬಹುದು. ಹಾಗಾಗಿ ನಾವು ಅವುಗಳಲ್ಲಿ ಒಂದನ್ನೂ ಮಾಡಬಾರದು. ಆದರೆ ಮಿಕ್ಕಿರುವ 30 ನ್ಯಾಯೋಚಿತ ಕಾರ್ಯಗಳಲ್ಲಿ, ನಾವು ಯಾವುದನ್ನಾದರೂ ಮಾಡಬಹುದು. ಆದರೆ ಆ 30 ಕಾರ್ಯಗಳಲ್ಲಿ, ಕೇವಲ 10 ಆತ್ಮಿಕವಾಗಿ ನಿಜವಾಗಿ ಲಾಭದಾಯಕ ಆಗಿರಬಹುದು. ಒಬ್ಬ ಪೂರ್ಣಹೃದಯದ ಕ್ರೈಸ್ತನು ಆ 10 ಸಂಗತಿಗಳನ್ನು ಮಾತ್ರ ಮಾಡುತ್ತಾನೆ.

ಆದರೆ ಒಬ್ಬ ಅರೆಮನಸ್ಸಿನ ಕ್ರೈಸ್ತನು ಆ 30 ನ್ಯಾಯಬದ್ಧ ಕಾರ್ಯಗಳಲ್ಲಿ ಯಾವುದನ್ನಾದರೂ ಆರಿಸಿಕೊಳ್ಳುತ್ತಾನೆ. ನೀವು ದೇವರ ಒಬ್ಬ ಪೂರ್ಣಮನಸ್ಸಿನ, ಪರಿಣಾಮಕಾರಿ ಸೇವಕರಾಗಲು ಬಯಸಿದರೆ, ಆಗ ನೀವು ನ್ಯಾಯಬದ್ಧ ಕಾರ್ಯಗಳಲ್ಲಿ ಲಾಭದಾಯಕ ಕಾರ್ಯಗಳನ್ನು ಮಾತ್ರ ಆರಿಸಿಕೊಳ್ಳ ಬೇಕಾಗುತ್ತದೆ.

ಸಮಯದ ಕುರಿತಾದ ಒಂದು ಉದಾಹರಣೆಯನ್ನು ಗಮನಿಸೋಣ. ನಮ್ಮೆಲ್ಲರಿಗೆ ಒಂದು ದಿನದಲ್ಲಿ 24 ತಾಸುಗಳಿವೆ. ನೀವು ಅದರಲ್ಲಿ ಒಂದು ಭಾಗವನ್ನು ಹೊಲಸು ಚಲನಚಿತ್ರಗಳನ್ನು ಅಥವಾ ಅಶ್ಲೀಲ ಪುಸ್ತಕಗಳನ್ನು ಓದುವುದರಲ್ಲಿ ಕಳೆದರೆ, ಆಗ ನೀವು ಸಮಯವನ್ನು ಅನ್ಯಾಯವಾದ ರೀತಿಯಲ್ಲಿ ಉಪಯೋಗಿಸಿದಂತೆ ಆಗುತ್ತದೆ. ಇನ್ನೊಂದು ಮಗ್ಗಲಿನಲ್ಲಿ, ನೀವು ನಿಮ್ಮ ದಿನವನ್ನು ಅನೇಕ ನ್ಯಾಯಸಮ್ಮತವಾದ ಕಾರ್ಯಗಳಿಗೆ ಬಳಸಬಹುದು. ಅವುಗಳಲ್ಲಿ ಕೆಲವು ಮಾಡಲೇ ಬೇಕಾದವುಗಳು ಮತ್ತು ನಾವು ಅವುಗಳನ್ನು ಮಾಡಬೇಕು. ಆದರೆ ನೀವು ಹಲವು ತಾಸುಗಳನ್ನು ವಾರ್ತಾಪತ್ರಿಕೆಯನ್ನು ಓದುವುದಕ್ಕೆ ಬಳಸಬಹುದು - ಅದು ನ್ಯಾಯಬದ್ಧವಾದರೂ, ದಿನದ ಅತ್ಯಂತ ಲಾಭದಾಯಕ ಉಪಯೋಗವಲ್ಲ.

ನೀವು ದೇವರಿಗೆ ಉಪಯುಕ್ತನಾದ ಒಬ್ಬ ಸೇವಕನಾಗಲು ಬಯಸಿದರೆ, ನೀವು ಕಟ್ಟುನಿಟ್ಟಾಗಿ ಜೀವಿಸಬೇಕು ಮತ್ತು ನಿಮ್ಮ ದೈನಿಕ ಕಾರ್ಯಗಳಲ್ಲಿ ಅನಾವಶ್ಯಕವಾದದ್ದನ್ನು ಬಿಟ್ಟುಬಿಡಬೇಕು ಮತ್ತು ಹೆಚ್ಚು ಸಮಯವನ್ನು ದೇವರ ಕಾರ್ಯಗಳಲ್ಲಿ ಕಳೆಯಬೇಕು. ನೀವು ಅನೇಕ ಗಂಟೆಗಳ ಸಮಯವನ್ನು ’ಇಂಟರ್‌ನೆಟ್ ಸರ್ಫ್’ ಮಾಡುತ್ತಾ (ಸ್ವಚ್ಛ ವೆಬ್‍ಸೈಟ್‍ಗಳಲ್ಲಿ) ಕಳೆಯಲು ನಿರ್ಧರಿಸಬಹುದು ಅಥವಾ ಕ್ರೈಸ್ತ-ಸಂಬಂಧಿ TV ಕಾರ್ಯಕ್ರಮಗಳನ್ನು ನೋಡುತ್ತಾ ಕಳೆಯಬಹುದು ಮತ್ತು ಕೊನೆಯಲ್ಲಿ ಸತ್ಯವೇದದ ಅಧ್ಯಯನಕ್ಕೆ ಬಹಳ ಸ್ವಲ್ಪ ಸಮಯ ಸಿಗಬಹುದು. ಅಥವಾ ಇದಕ್ಕೆ ಬದಲಾಗಿ, ನೀವು ಸ್ವಲ್ಪ ಸಮಯ ’ಇಂಟರ್‌ನೆಟ್ ಸರ್ಫ್’ ಮಾಡಿ (ಜಾಗತಿಕ ಸಮಾಚಾರ, ಇತ್ಯಾದಿಗಳನ್ನು ತಿಳಿಯುವದಕ್ಕೆ), ಸತ್ಯವೇದ ಅಧ್ಯಯನಕ್ಕೆ ಮೊದಲಿಗಿಂತ ಹೆಚ್ಚು ಸಮಯ ಸಿಗುವಂತೆ ನೋಡಿಕೊಳ್ಳಬಹುದು. ನೀವು 2 ತಾಸು ಉತ್ತಮ TV ಕಾರ್ಯಕ್ರಮಗಳನ್ನು ನೋಡಿದರೆ ಅಥವಾ ಸ್ವಚ್ಛ ವೆಬ್‍ಸೈಟ್‍ಗಳ ವಿಷಯಗಳನ್ನು ನೋಡಿದರೆ, ನೀವು ಪಾಪ ಮಾಡುತ್ತಿಲ್ಲ; ಆದರೆ ದೇವರ ವಾಕ್ಯವನ್ನು ಓದುವುದಕ್ಕೆ ಅಥವಾ ತೊಂದರೆಗೆ ಒಳಗಾದ ಜನರ ಸಹಾಯಕ್ಕಾಗಿ ಲಾಭದಾಯಕವಾಗಿ ಉಪಯೋಗವಾಗುತ್ತಿದ್ದ ಸಮಯದ ದುರುಪಯೋಗ ಮಾಡಿದಂತೆ ಆಗಬಹುದು.

ಹಾಗೆಯೇ ಹಣವನ್ನು ವೆಚ್ಚ ಮಾಡುವುದರಲ್ಲಿ ಕಾನೂನು ಉಲ್ಲಂಘಿಸುವಂತ ಬಳಕೆಗಳು, ನ್ಯಾಯ ಸಮ್ಮತವಾದ ಬಳಕೆಗಳು ಮತ್ತು ಲಾಭದಾಯಕ ಬಳಕೆಗಳು ಇವೆ. ಒಬ್ಬ ಪೂರ್ಣಹೃದಯದ ಕ್ರೈಸ್ತನು ತನ್ನ ಸಮಯ ಮತ್ತು ತನ್ನ ಹಣವನ್ನು ಲಾಭದಾಯಕ ರೀತಿಯಲ್ಲಿ ಮಾತ್ರ ಉಪಯೋಗಿಸುತ್ತಾನೆ. ನಾವು ಸರಿಯಾದ ಆಯ್ಕೆಗಳನ್ನು ಮಾಡುವುದನ್ನು ಕಲಿಯಬೇಕು.

ದೈವಿಕ ಜೀವನದ ರಹಸ್ಯವು ನಾವು ಮಾಡುವ ಆಯ್ಕೆಗಳಲ್ಲಿ ಅಡಕವಾಗಿದೆ. ನಮ್ಮ ಸಮಯವನ್ನು ಕಾನೂನುಬದ್ಧವಾಗಿ ಉಪಯೋಗಿಸುವ ಹಲವಾರು ಸಂಗತಿಗಳಲ್ಲಿ, ಅತ್ಯುತ್ತಮ ಕಾರ್ಯಗಳನ್ನು ನಾವು ಆರಿಸಿಕೊಳ್ಳಬೇಕು. ಹಣಕಾಸಿನ ಉಪಯೋಗದ ಎಲ್ಲಾ ನ್ಯಾಯಬದ್ಧ ವಿಧಾನಗಳಲ್ಲಿ, ನಾವು ಅತ್ಯುತ್ತಮ ವಿಧಾನಗಳನ್ನು ಆರಿಸಿಕೊಳ್ಳಬೇಕು. ಅಂತಹ ಒಬ್ಬ ಮನುಷ್ಯನು ದೇವರಿಗೆ ಬಹು ಬೆಲೆಯುಳ್ಳವನು ಆಗುತ್ತಾನೆ.