WFTW Body: 

1. ಬೇರೆ ಬೇರೆ ಸೇವೆಗಳ ಕುರಿತಾಗಿ ಯೇಸುವಿನ ಮನೋಭಾವ

ಯೇಸುವು ಲೂಕ 9:49, 50ರಲ್ಲಿ, ನಮ್ಮ ಸೇವೆಗಿಂತ ಸಂಪೂರ್ಣ ವ್ಯತ್ಯಾಸವಾಗಿ ಸೇವೆ ಮಾಡುವ ಮತ್ತೊಬ್ಬರ ಕುರಿತಾಗಿ ನಾವು ಏನು ಮಾಡಬೇಕು ಎಂಬುದಾಗಿ ನಮಗೆ ಬೋಧಿಸುತ್ತಾರೆ. ಯಾರೋ ಒಬ್ಬನು ದೆವ್ವಗಳನ್ನು ಬಿಡಿಸುತ್ತಿರುತ್ತಾನೆ, ಆದರೆ ಇವನು ಶಿಷ್ಯರೊಂದಿಗೆ ಸೇರಿಕೊಳ್ಳುವದಿಲ್ಲ. ಆತನನ್ನು ತಡೆಯುವಂತೆ ಯೋಹಾನನು ಯೇಸುವನ್ನು ಕೇಳಿದನು. ಆದರೆ ಯೇಸು ಯೋಹಾನನಿಗೆ ಹೇಳಿದ್ದೇನೆಂದರೆ, ಆತನನ್ನು ಬಿಟ್ಟುಬಿಡು, ಆತನು ಆ ಸೇವೆಯನ್ನು ಮುಂದುವರೆಸಿಕೊಂಡು ಹೋಗಲಿ, ಎಂಬುದಾಗಿ. ನೀನು ನಿನ್ನ ಕರೆಗೆ ಓಗೊಟ್ಟು ಅದನ್ನು ಮಾಡು, ಬೇರೆಯವರು ತಮ್ಮ ತಮ್ಮ ಕರೆಗಳನ್ನು ಪೂರೈಸಿಕೊಳ್ಳಲು ಬಿಡು, ಎಂದು ಯೇಸು ಹೇಳಿದರು. ಅನೇಕ ಕ್ರೈಸ್ತರು ತಮ್ಮ ಸ್ವಂತ ಸೇವೆಯೇ ತುಂಬಾ ಶ್ರೇಷ್ಠವೆಂದು ಅಂದುಕೊಂಡು, ಅದೇ ಸೇವೆಯನ್ನು ಎಲ್ಲರೂ ಹೊಂದಬೇಕು ಎಂದು ಅಂದುಕೊಳ್ಳುತ್ತಾರೆ. "ದೇಹವೆಲ್ಲಾ ಕಣ್ಣಾದರೆ ಕಿವಿಯೆಲ್ಲಿ? ಅದೆಲ್ಲಾ ಕಿವಿಯಾದರೆ ಮೂಗೆಲ್ಲಿ?" (1 ಕೊರಿಂಥ 12:17). ಒಬ್ಬ ಪ್ರಬುದ್ಧ ಕ್ರೈಸ್ತನು ಗ್ರಹಿಸಿಕೊಳ್ಳುವುದೇನೆಂದರೆ, ದೇವರು ಬೇರೆ ಬೇರೆ ಸೇವೆಗಳನ್ನು ಬೇರೆ ಬೇರೆ ಜನರಿಗೆ ಕೊಡುತ್ತಾನೆ ಎಂಬುದಾಗಿ. ಒಬ್ಬನು ಸುವಾರ್ತಿಕನಾಗಿ ಸೇವೆ ಮಾಡಬೇಕೆಂದರೆ, ಮತ್ತೊಬ್ಬನು ಸಮಾಜ ಸೇವೆಯನ್ನು ಮಾಡಬಯಸುತ್ತಾನೆ, ಎಲ್ಲರೂ ಅವರದೇ ಆದ ಸೇವೆಗಳನ್ನು ಪೂರೈಸಿಕೊಳ್ಳಲಿ. ಇಬ್ಬರ ಮೂಲಕವೂ ಕ್ರಿಸ್ತನು ಬೇರೆ ಬೇರೆ ರೀತಿಯಲ್ಲಿ ಪ್ರಕಟವಾಗಲು ಸಾಧ್ಯವಿದೆ. ಹಾಗಾಗಿ ನಾವು ಯಾರನ್ನೂ ಟೀಕೆ ಮಾಡಬಾರದು. ಸೃಷ್ಟಿಯಲ್ಲಿ ಹಲವು ವೈವಿಧ್ಯತೆಗಳಿವೆ. ದೇವರು ಎಲ್ಲಾ ಹೂವುಗಳನ್ನು ಒಂದೇ ಬಣ್ಣದಲ್ಲಿ ಸೃಷ್ಟಿ ಮಾಡಲಿಲ್ಲ, ಅವುಗಳನ್ನು ಒಂದೇ ಅಳತೆ ಅಥವಾ ಒಂದೇ ಆಕಾರದಲ್ಲಿ ಮಾಡಲಿಲ್ಲ. ಕಾಮನಬಿಲ್ಲು ಅನೇಕ ವಿಧವಾದ ಬಣ್ಣಗಳನ್ನು ಹೊಂದಿದೆ. ಕ್ರಿಸ್ತನ ದೇಹವೂ ಸಹ ಅದೇ ರೀತಿ ಆಗಿದೆ. ಆದರೆ ಸಣ್ಣ ಬುದ್ಧಿಯ ಜನರಿಗೆ ತಮ್ಮ ಸ್ವಂತ ಸೇವೆಗಿಂತ ಬೇರೆಯಾದ ಸೇವೆ ಕಣ್ಣಿಗೆ ಬೀಳುವದಿಲ್ಲ. ಅಂತಹ ಜನರಿಗೆ ಇಲ್ಲೊಂದು ಮಾತು: ''ಎಲ್ಲಾ ಸೇವೆಗಳಿಗಾಗಿ ದೇವರಿಗೆ ಕೃತಜ್ಞತೆಯನ್ನು ಹೇಳಿ, ನಿಮ್ಮ ಸ್ವಂತ ಸೇವೆಗಳಿಗಾಗಿ ನೀವು ನಿಂತುಕೊಳ್ಳಿ''.

2. ಪಾಪಿಗಳ ಕುರಿತಾಗಿ ಯೇಸುವಿನ ಮನೋಭಾವ

ನಾವು ಯೋಹಾನ 8:1-12ರಲ್ಲಿ ಒಂದು ಸುಂದರವಾದ ಕಥೆಯನ್ನು ಓದುತ್ತೇವೆ; ಇಲ್ಲಿ ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಒಬ್ಬ ಹೆಂಗಸನ್ನು ಫರಿಸಾಯರು ಕಲ್ಲೆಸೆದು ಕೊಲ್ಲಬೇಕು ಎಂದುಕೊಂಡಿರುತ್ತಾರೆ. ಇಂದಿಗೂ ಕಾಣಸಿಗುವ ಇಂತಹ ಅನೇಕ ಫರಿಸಾಯರು ತಮ್ಮ ಜೇಬುಗಳಲ್ಲಿ ಕಲ್ಲುಗಳನ್ನು ಇರಿಸಿಕೊಂಡು ಬೇರೆಯವರ ಮೇಲೆ ಅವುಗಳನ್ನು ಎಸೆಯಲು ಯಾವಾಗಲೂ ಕಾದಿರುತ್ತಾರೆ. ಅನೇಕ ಬೋಧಕರು ತಮ್ಮ ಬೋಧನೆಯಲ್ಲಿ ಜನರ ಮೇಲೆ ಕಲ್ಲನ್ನು ಎಸೆಯುತ್ತಾರೆ. ಯೇಸುವಿನ ಬಳಿ ಯಾರ ಮೇಲೆಯೂ ಎಸೆಯಲು ಕಲ್ಲುಗಳು ಇರಲಿಲ್ಲ. ಪಾಪ ಮಾಡಿದ ಜನರ ಮೇಲೆ ಯೇಸುವು ಯಾವಾಗಲೂ ದಯೆಯನ್ನು ಹೊಂದಿದ್ದರು. ಸುವಾರ್ತೆಗಳಲ್ಲಿ ಯೇಸುವು ಕೊಲೆಗಾರರು, ಕಳ್ಳರು ಮತ್ತು ವ್ಯಭಿಚಾರಿಗಳ ಬಗ್ಗೆ ಟೀಕೆ ಮಾಡುವುದನ್ನು ನಾವು ಕಾಣುವದೇ ಇಲ್ಲ. ಆದರೆ ಆತನು ಫರಿಸಾಯರನ್ನು ಮತ್ತು ಸಭೆಯಲ್ಲಿ ಇರುವ ಧಾರ್ಮಿಕ ಕಪಟಿಗಳನ್ನು ನರಕಪಾತ್ರರೆಂದು ಖಂಡಿಸಿದನು. ಆದರೆ ಆತನು ವ್ಯಭಿಚಾರದಲ್ಲಿ ಸಿಕ್ಕಿದ ಆ ಹೆಂಗಸಿಗೆ, "ನಾನು ನಿನಗೆ ಶಿಕ್ಷೆ ವಿಧಿಸುವುದಿಲ್ಲ, ಹೋಗು ಇನ್ನು ಮೇಲೆ ಪಾಪ ಮಾಡಬೇಡ," ಎಂದನು (ಯೋಹಾನ 8:11). ಈ ಎರಡು ವಾಕ್ಯಗಳಲ್ಲಿ ಸಂಪೂರ್ಣ ಸುವಾರ್ತೆಯು ಒಳಗೊಂಡಿದೆ - "ನೀತಿಕರಿಸಲ್ಪಡುವುದು ಮತ್ತು ಶುದ್ಧೀಕರಣ". ಯೇಸುವು ಫರಿಸಾಯರಿಗೆ ಹೇಳಿದ್ದೇನೆಂದರೆ, "ನಿಮ್ಮಲ್ಲಿ ಪಾಪವಿಲ್ಲದವನು ಯಾರೋ ಅವನೇ ಮೊದಲು ಆಕೆಯ ಮೇಲೆ ಕಲ್ಲನ್ನು ಹಾಕಲಿ," (ಯೋಹಾನ 8:7) ಎಂಬುದಾಗಿ. ಹಾಗಾಗಿ ನೀವು ಮುಂದಿನ ಸಲ ಯಾರ ಮೇಲಾದರೂ ಕಲ್ಲನ್ನು ಎಸೆಯುವಂತೆ ಶೋಧಿಸಲ್ಪಟ್ಟಾಗ ಎರಡು ಸಂಗತಿಗಳನ್ನು ನೆನಪಿಸಿಕೊಳ್ಳಿರಿ: 1) ನೀವು ಹಿಂದೆ ಗುಂಡಿಗೆ ಬಿದ್ದಾಗ ದೇವರು ನಿಮ್ಮನ್ನು ಮೇಲಕ್ಕೆತ್ತಿದ್ದು; ಮತ್ತು 2) ನಿಮ್ಮ ಶರೀರದಲ್ಲಿ ಇಂದಿಗೂ ಸಹ ಪಾಪ ನೆಲಸಿದೆ. ನೀವು ಇದನ್ನು ಮಾಡಿದಾಗ ನಿಮ್ಮ ಜೇಬಿನಿಂದ ಎಲ್ಲಾ ಕಲ್ಲುಗಳನ್ನು ಚೆಲ್ಲಿಬಿಟ್ಟು ಜೇಬನ್ನು ಖಾಲಿ ಮಾಡಿಕೊಳ್ಳುತ್ತೀರಿ. ಮುಂದೆಂದಿಗೂ ನೀವು ಮತ್ತೊಬ್ಬರ ಮೇಲೆ ಕಲ್ಲು ಎಸೆಯಲು ಸಾಧ್ಯವಾಗುವುದಿಲ್ಲ.

3. ಶಾಸ್ತ್ರ ವಚನದ ಕುರಿತಾದ ಯೇಸುವಿನ ಮನೋಭಾವ

ನಾವು ಲೂಕ 2:47-52ರಲ್ಲಿ ಓದುವ ಒಂದು ಸಂದರ್ಭದಲ್ಲಿ, ಯೇಸುವು ಯೆರೂಸಲೇಮಿಗೆ ತೆರಳಿದ್ದನ್ನೂ, ಮತ್ತು ಆತನನ್ನು ಯೋಸೇಫ ಹಾಗೂ ಮರಿಯಳು ತಿಳಿಯದೆ ದೇವಾಲಯದಲ್ಲೇ ಬಿಟ್ಟದ್ದನ್ನೂ ಕಾಣುತ್ತೇವೆ. ಯೇಸುವು ತನ್ನ 12ನೇ ವಯಸ್ಸಿನಲ್ಲಿ ಇಸ್ರಾಯೇಲಿನ ಎಲ್ಲಾ ವಿದ್ವಾಂಸರಿಗಿಂತ ಹೆಚ್ಚಾಗಿ ಶಾಸ್ತ್ರ ವಚನಗಳನ್ನು ಅರಿತವನಾಗಿದ್ದನು. ಯೇಸುವಿನ ಶಾಸ್ತ್ರ ವಚನಗಳ ವಿವರಣೆಯು ಅವರನ್ನು ಬೆರಗಾಗಿಸಿತು. ಯೇಸುವಿನ ಮನೆಯಲ್ಲಿ ಸತ್ಯವೇದದ ಪ್ರತಿ ಇರಲಿಲ್ಲ. ಆ ದಿನಗಳಲ್ಲಿ ಮುದ್ರಿತವಾದ ಸತ್ಯವೇದ ಇರಲಿಲ್ಲ ಮತ್ತು ಹಳೆ ಒಡಂಬಡಿಕೆಯ ಕೈಯಿಂದ ಬರೆದಂತ ಹಸ್ತಪ್ರತಿಯ ಸುರಳಿ ತುಂಬಾ ಹೆಚ್ಚಿನ ಬೆಲೆಯುಳ್ಳದ್ದಾಗಿತ್ತು. ಅದು ಯಾರ ಮನೆಯಲ್ಲೂ ಇರಲಿಲ್ಲ. ಹಾಗಾದರೆ ಯೇಸುವು ಹೇಗೆ ತನ್ನ 12ನೇ ವಯಸ್ಸಿನಲ್ಲಿ ಧರ್ಮಶಾಸ್ತ್ರವನ್ನು ಅರಿತಿದ್ದನು? ಆತನು ಸಭಾಮಂದಿರದಲ್ಲಿ ಮತ್ತು ಪಾಠಶಾಲೆಯಲ್ಲಿ ದೇವವಚನವನ್ನು ತುಂಬಾ ಶ್ರದ್ಧೆಯಿಂದ ಕೇಳಿಸಿಕೊಳ್ಳುತ್ತಿದ್ದನು. ಇಂದು, ನಮ್ಮ ಮನೆ ಮನೆಗಳಲ್ಲೂ ಮುದ್ರಿತ ಸತ್ಯವೇದ ಪ್ರತಿಗಳು ಇವೆ - ಮತ್ತು ನಮ್ಮಲ್ಲಿ ಅನೇಕರ ಬಳಿ ಅದರ ಹಲವಾರು ಭಾಷಾಂತರಗಳು ಸಹ ಇವೆ. ಹಾಗಿದ್ದರೂ, ಇಂದು ಹೆಚ್ಚಿನ ಕ್ರೈಸ್ತರ ಸತ್ಯವೇದದ ಜ್ಞಾನ ಬಹಳ ವಿರಳವಾಗಿದೆ. ನೀವು ದೇವರ ವಾಕ್ಯವನ್ನು ಅಭ್ಯಾಸಿಸದೇ ಕ್ರಿಸ್ತನ ದೇಹವನ್ನು ಕಟ್ಟಲು ಸಾಧ್ಯವಾಗುವುದಿಲ್ಲ. ಸ್ವತಃ ಯೇಸುವು ತನ್ನ ಪರಲೋಕದ ತಂದೆಯ ಸೇವೆಗಾಗಿ ಚಿಕ್ಕಂದಿನಿಂದಲೇ ಧರ್ಮಶಾಸ್ತ್ರವನ್ನು ಅಭ್ಯಾಸಿಸುವದು ಅವಶ್ಯವಾಗಿತ್ತು. ನೀವು ಸತ್ಯವೇದವನ್ನು ಓದುವುದರಲ್ಲಿ ತೀರಾ ಸೋಮಾರಿಗಳಾಗಿದ್ದರೆ, ದೇವರು ನಿಮ್ಮನ್ನು ಉಪಯೋಗಿಸಿಕೊಳ್ಳುವುದಿಲ್ಲ ಎಂದು ನಾನು ಖಂಡಿತವಾಗಿ ಹೇಳುತ್ತೇನೆ. ಆದರೆ ನೀವು ಸತ್ಯವೇದವನ್ನು ಓದುವುದರಲ್ಲಿ ಪರಿಶ್ರಮಿಗಳಾಗಿದ್ದು, ಪವಿತ್ರಾತ್ಮನಿಂದ ತುಂಬಿಸಲ್ಪಡಲು ತವಕಿಸುತ್ತಿದ್ದರೆ, ದೇವರು ನಿಮ್ಮನ್ನು ಅದ್ಭುತವಾಗಿ ಉಪಯೋಗಿಸುತ್ತಾರೆ. ಹಾಗಾಗಿ ನಿಮ್ಮ ಮಾನಸಾಂತರದ ಪ್ರಾರಂಭದ ದಿನಗಳಲ್ಲೇ ದೇವರ ವಾಕ್ಯವನ್ನು ಓದಿ ಧ್ಯಾನಿಸುವ ಪರಿಪಾಠವನ್ನು ಮಾಡಿಕೊಳ್ಳಿ. ಇದರಿಂದಾಗಿ ನೀವು ದೇವರ ಮನಸ್ಸನ್ನು ಮತ್ತು ದೇವರ ಮಾರ್ಗಗಳನ್ನು ಅರಿತವರಾಗುತ್ತೀರಿ.