WFTW Body: 

1. ಪಲಾಯನ ಮಾಡುವುದು

ಶೋಧನೆಯಿಂದ ತಪ್ಪಿಸಿಕೊಂಡು ಆ ಜಾಗದಿಂದ ಓಡಿ ಹೋಗುವುದು ಶೋಧನೆಯನ್ನು ಜಯಿಸುವ ಅತ್ಯುತ್ತಮ ವಿಧಾನವಾಗಿದೆ - ಯೋಸೇಫನು ಇದನ್ನೇ ಮಾಡಿದನು (ಆದಿ. 39:7-12). ನೀವು ತಪ್ಪು ಕೆಲಸ ಮಾಡುವಂತೆ ನಿಮ್ಮನ್ನು ದುರ್ಬಲಗೊಳಿಸುವ ಮತ್ತು ನಿಮ್ಮನ್ನು ಬಲವಾದ ಶೋಧನೆಗೆ ಗುರಿಪಡಿಸುವ ಎಲ್ಲಾ ಜಾಗಗಳಿಂದ ಮತ್ತು ಎಲ್ಲಾ ಜನರಿಂದ ದೂರವಿರಿ. ನಾವು ಪ್ರಾರ್ಥಿಸುವಾಗ, "ನಮ್ಮನ್ನು ಶೋಧನೆಯೊಳಗೆ ಸೇರಿಸಬೇಡಿರಿ," ಎಂದು ಕೇಳಬೇಕೆಂದು ಯೇಸುವು ನಮಗೆ ಬೋಧಿಸಿದರು. ನೀವು ಇದನ್ನು ಪಾಲಿಸಿದರೆ, ಆಗ ನೀವು ನಿತ್ಯತ್ವದಲ್ಲಿ ಸಂತೋಷಿಸುವಿರಿ. ಈ ಭೂಮಿಯ ಮೇಲೂ ಸಹ, ಕೆಲವು ವರ್ಷಗಳು ದಾಟಿದ ಮೇಲೆ, ನಿಮ್ಮ ಶಕ್ತಿ ಮೀರುವಂತ ಮತ್ತು ನೀವು ಜಯಿಸಲಾರದಂತ ಶೋಧನೆಗಳಿಗೆ ನಿಮ್ಮನ್ನು ಗುರಿಮಾಡುವ ಜಾಗಗಳಿಂದ ಮತ್ತು ಅಂತಹ ಜನರಿಂದ ನೀವು ತಪ್ಪಿಸಿಕೊಂಡು ದೂರ ಹೋಗಿದ್ದಕ್ಕಾಗಿ ನೀವು ಸಂತೋಷಿಸುತ್ತೀರಿ. ನೀವು ಇಂತಹ ಸ್ಥಳಗಳು ಮತ್ತು ಇಂತ ಜನರಿಂದ ದೂರ ಸರಿಯುವುದರ ಮೂಲಕ, ನೀವು ನಿಜವಾಗಿ ದೇವರನ್ನು ಮಾತ್ರ ಮೆಚ್ಚಿಸಲು ಬಯಸುತ್ತೀರಿ ಎಂಬುದನ್ನು ರುಜುವಾತುಪಡಿಸುತ್ತೀರಿ (ಈ ವಿಷಯಕ್ಕೆ ಸಂಬಂಧಿಸಿದಂತೆ ಜ್ಞಾನೋಕ್ತಿಗಳು 7ನೇ ಅಧ್ಯಾಯವನ್ನು ಓದಿಕೊಳ್ಳಿರಿ. ಇದು ಎಲ್ಲಾ ಯುವಜನರು ಆಗಾಗ ಓದಿಕೊಳ್ಳಲು ಬಹಳ ಯೋಗ್ಯವಾದ ಅಧ್ಯಾಯವಾಗಿದೆ).

ವಿರುದ್ಧ ಲಿಂಗದ ಒಬ್ಬ ವ್ಯಕ್ತಿಯೊಂದಿಗೆ ಬಹಳ ಆತ್ಮೀಯ ಗೆಳೆತನ ಬೆಳೆಸುವುದರಿಂದ ಓಡಿ ಹೋಗಿರಿ. ನಿಮ್ಮ ಕಾಮಾಭಿಲಾಷೆಯನ್ನು ಎಬ್ಬಿಸುವ ಮತ್ತು ಪ್ರೋತ್ಸಾಹಿಸುವ ಪುಸ್ತಕ ಅಥವಾ ಪತ್ರಿಕೆಗಳಿಂದ (ಮತ್ತು ’ವೆಬ್‌ಸೈಟ್’ಗಳಿಂದ) ದೂರಕ್ಕೆ ಓಡಿರಿ. ನಿಮ್ಮ ಸಮಯವನ್ನು ವ್ಯರ್ಥಗೊಳಿಸುವ ಪ್ರಯೋಜನವಿಲ್ಲದ TV ಕಾರ್ಯಕ್ರಮಗಳಿಂದಲೂ ಸಹ ದೂರ ಓಡಿರಿ. ಹರಟೆ ಮತ್ತು ಚಾಡಿ ಮಾತುಗಳನ್ನು ಕೇಳುವುದರಿಂದ ಓಡಿ ಹೋಗಿರಿ. ಕೆಟ್ಟ ಮಾತುಗಳನ್ನು ಆಲಿಸುವುದು, ಕೆಟ್ಟ ವಿಷಯಗಳ ಬಗ್ಗೆ ಓದುವುದು ಮತ್ತು ಅವುಗಳನ್ನು ನೋಡುವುದರಿಂದ ನಿಮ್ಮಲ್ಲಿ ಕೆಟ್ಟತನದ ಜ್ಞಾನ ಮಾತ್ರ ಹೆಚ್ಚುತ್ತದೆ. ಆದರೆ ಇಂತಹ ಹೊಲಸು ಸಮಾಚಾರದಿಂದ ನಿಮಗೆ ಏನು ಲಾಭ? ಅದು ನಿಮ್ಮನ್ನು ಹೊಲಸು ಗೊಳಿಸಿ ನಾಶ ಮಾಡುತ್ತದೆ. ಇನ್ನು ಮುಂದೆ, ಇಂತಹ ಎಲ್ಲಾ ವಿಷಯಗಳಿಗೆ ನೀವು ಕಿವುಡರೂ ಕುರುಡರೂ ಆಗಬೇಕು. ಇತರರ ದುಷ್ಟತನದ ಜ್ಞಾನವು ನಿಮ್ಮನ್ನು ಎಂದಿಗೂ ಜಾಣರಾಗಿಸುವುದಿಲ್ಲ. ಸತ್ಯವೇದವು ನಮಗೆ, "ಕೆಟ್ಟತನದ ವಿಷಯದಲ್ಲಿ ಶಿಶುಗಳಾಗಿಯೇ ಇರಬೇಕು" (1 ಕೊರಿ. 14:20), ಎಂದು ಒತ್ತಾಯಿಸುತ್ತದೆ. ಒಂದು ಚಿಕ್ಕ ಮಗುವಿನ ಮನಸ್ಸು ಸ್ವಲ್ಪವೂ ಕೆಟ್ಟತನವಿಲ್ಲದೆ ಶುದ್ಧವಾಗಿದೆ. ಸುವಾರ್ತೆಯು ನೀಡುವ ಒಳ್ಳೆಯ ಸುದ್ದಿ ಏನೆಂದರೆ, ನಾವು ಅನೇಕ ವರ್ಷಗಳ ವರೆಗೆ ಕೆಟ್ಟ ವಿಷಯಗಳಿಂದ ನಮ್ಮ ಮನಸ್ಸನ್ನು ಅಶುದ್ಧಗೊಳಿಸಿದ್ದರೂ, ಈಗ ನಾವು ಅದರಿಂದ ಬಿಡುಗಡೆ ಹೊಂದಬೇಕೆಂದು ಹಾತೊರೆಯುತ್ತಿದ್ದರೆ, ನಾವು ಮತ್ತೊಮ್ಮೆ ಒಂದು ಚಿಕ್ಕ ಮಗುವಿನ ಶುದ್ಧ ಮನಸ್ಸನ್ನು ಪಡೆಯಲು ಪವಿತ್ರಾತ್ಮನು ಸಹಾಯ ಮಾಡಬಲ್ಲನು. ಇದೇ ’ದೇವರ ಕೃಪೆ’ಯು ನಮಗಾಗಿ ಮಾಡುವ ಕಾರ್ಯವಾಗಿದೆ. ದೇವರಿಗೆ ಸ್ತೋತ್ರವಾಗಲಿ! "ಒಳ್ಳೇತನದ ವಿಷಯದಲ್ಲಿ ಜಾಣರೂ, ಕೆಟ್ಟತನದ ವಿಷಯದಲ್ಲಿ ಕಳಂಕ ಇಲ್ಲದವರೂ" ಅಗಿರಲಿಕ್ಕಾಗಿ ನಾವು ಕರೆಯಲ್ಪಟ್ಟಿದ್ದೇವೆ (ರೋಮಾ. 16:19). ಹಾಗಾಗಿ ಯೇಸುವು ಹೇಗೆ ಜೀವಿಸಿದರು, ಎಂದು ತೋರಿಸಬೇಕೆಂದು ಪವಿತ್ರಾತ್ಮನನ್ನು ಕೇಳಿರಿ. ಆಗ "ಒಳ್ಳೇತನದ ವಿಷಯದಲ್ಲಿ ಜಾಣರು" ಆಗುವುದು ಎಂದರೆ ಏನೆಂದು ನಿಮಗೆ ತಿಳಿಯುತ್ತದೆ.

2. ದುಃಖಿಸುವುದು

ಒಂದು ವೇಳೆ ನೀವು ಪಾಪದಲ್ಲಿ ಜಾರಿ ಬಿದ್ದರೆ, ಒಡನೆಯೇ ದುಃಖಿಸಬೇಕು ಮತ್ತು ಪಾಪ ಕ್ಷಮಾಪಣೆಗಾಗಿ ಬೇಡಬೇಕು; ಹೀಗೆ ಮಾಡದಿದ್ದರೆ ಕ್ರಮೇಣವಾಗಿ ನೀವು ಪಾಪವನ್ನು ಹಗುರವಾಗಿ ತೆಗೆದುಕೊಳ್ಳುತ್ತೀರಿ, ಮತ್ತು ಜಯವನ್ನು ಪಡೆಯುವುದು ಹೆಚ್ಚು ಹೆಚ್ಚು ಕಠಿಣವಾಗುತ್ತದೆ. ಆದುದರಿಂದ, ಯಾವುದೇ ಒಂದು ಕ್ಷೇತ್ರದಲ್ಲಿ ದೇವರ ನೀತಿಯ ಮಟ್ಟದಿಂದ ಜಾರಿ ಹೋಗಿರುವ ಪ್ರಜ್ಞೆ ಅಥವಾ ಅರಿವು ನಿಮಗೆ ಉಂಟಾದ ಒಡನೆಯೇ, ನೀವು ದೇವರಿಂದ ಶೀಘ್ರ ವಿಮೋಚನೆಯನ್ನು ಹೊಂದುವುದಕ್ಕಾಗಿ, ಪಾಪವನ್ನು ಅರಿಕೆ ಮಾಡಿ, ಪಾಪದಿಂದ ದೂರ ಸರಿದು, ಪಾಪಕ್ಕಾಗಿ ಪಶ್ಚಾತಾಪ ಪಡುವುದನ್ನು ಕಲಿಯಬೇಕು. ಪ್ರತೀ ಸಲ ನೀವು ಯಾವುದಾದರೂ ಪಾಪದಲ್ಲಿ ಜಾರಿಬಿದ್ದಾಗ ಅದಕ್ಕಾಗಿ ದುಃಖಿಸಿದರೆ, ನೀವು ಪಾಪ ಮೇಲೆ ಜಯದ ಜೀವಿತಕ್ಕಾಗಿ ನಿಜವಾಗಿ ಬಾಯಾರಿದ್ದೀರೆಂದು ದೇವರು ತಿಳಿದುಕೊಳ್ಳುತ್ತಾರೆ. ಹಾಗಾಗಿ ಯಾವುದೋ ಒಂದು ವಿಷಯದಲ್ಲಿ ನಿಮ್ಮ ಮನಸ್ಸಾಕ್ಷಿಯಲ್ಲಿ ಸಣ್ಣ ತಳಮಳ ಉಂಟಾದರೆ, ತಡವಿಲ್ಲದೆ ಅದನ್ನು ಬಗೆಹರಿಸಿರಿ. ನೀವು ಮಾಡಿದ ಪಾಪ ಕೇವಲ ಮನಸ್ಸಿನ ಯೋಚನೆಗಳಲ್ಲಿ ಮಾಡಿದ ತಪ್ಪೇ ಆಗಿದ್ದರೂ ಸರಿ, ಆ ಪಾಪವನ್ನು ಒಡನೆಯೇ ದೇವರಿಗೆ ಅರಿಕೆ ಮಾಡಿರಿ. ಯಾರಿಂದ ಕ್ಷಮೆ ಕೇಳಬೇಕೋ, ಅದನ್ನು ಕೇಳಿರಿ. ಹಾಗೆ ಮಾಡಿದಾಗ, ದೇವರು ಹೇಗೆ ನಿಮ್ಮನ್ನು ಬಹಳ ಹೆಚ್ಚಾಗಿ ಬಲಗೊಳಿಸುತ್ತಾರೆಂದು ನಿಮಗೆ ತಿಳಿಯುತ್ತದೆ.

3. ಪಟ್ಟು ಹಿಡಿಯುವುದು

ಪಟ್ಟುಹಿಡಿಯುವುದೇ ಗೆಲುವಿನ ಗುಟ್ಟಾಗಿದೆ. ಪ್ರಯತ್ನವನ್ನು ನಿಲ್ಲಿಸದೆ ಮುಂದುವರಿಸು. ಒಬ್ಬ ವಿದ್ಯಾರ್ಥಿಯು ಅಭ್ಯಾಸ ಮಾಡುವಾಗ ಒಂದು ಸಮಸ್ಯೆಗೆ ಪರಿಹಾರ ಸಿಗುವವರೆಗೆ ಶ್ರಮಿಸುವ ಹಾಗೆ. ನಿರುತ್ಸಾಹಗೊಳ್ಳುವ ಪ್ರಚೋದನೆ ಎಲ್ಲರಿಗೂ ಬರುತ್ತದೆ; ಆದರೆ ಬಿಟ್ಟುಕೊಡಬೇಡ. ನೀನು ಹುಟ್ಟುವ ಮೊದಲು ದೇವರು ನಿನ್ನ ಜೀವನಕ್ಕಾಗಿ ಒಂದು ಪರಿಪೂರ್ಣ ಯೋಜನೆಯನ್ನು ಸಿದ್ಧಪಡಿಸಿದರು (ಕೀರ್ತ. 139:16). ಸೈತಾನನು ಆ ಯೋಜನೆಯನ್ನು ಹಾಳು ಮಾಡಲು ಅವಕಾಶ ಕೊಡಬೇಡ. ಎಷ್ಟೇ ವೆಚ್ಚವಾದರೂ, ನೀನು ಕರ್ತನಿಗಾಗಿ ದೃಢವಾಗಿ ನಿಲ್ಲು. ’ಯೋಹಾನನು 14:30'ರಲ್ಲಿ ಯೇಸುವು ಹೇಳಿದಂತೆ, ಇಹಲೋಕದ ಅಧಿಪತಿಯು ಬಂದಾಗ, ಆತನಿಗೆ ಸಂಬಂಧಪಟ್ಟ ಯಾವ ಸಂಗತಿಯೂ ಯೇಸುವಿನಲ್ಲಿ ಇರಲಿಲ್ಲ. ಈಗ ನಾವು ಯೇಸು ನಡೆದಂತೆ ನಡೆಯಲು ಕರೆಯಲ್ಪಟ್ಟಿದ್ದೇವೆ. ಸೈತಾನನು ನಿನ್ನ ಬಳಿಗೆ ಬಂದಾಗ, ಅವನಿಗೆ ನಿನ್ನಲ್ಲಿ ಯಾವ ಸಂಗತಿಯೂ ಸಿಗಬಾರದು. ಆದ್ದರಿಂದ ನೀನು, "ಯಾವಾಗಲೂ ದೇವರ ವಿಷಯದಲ್ಲಿಯೂ ಮನುಷ್ಯರ ವಿಷಯದಲ್ಲಿಯೂ ನಿರ್ದೋಷಿಯೆಂದು ಹೇಳುವ ಮನಸ್ಸಾಕ್ಷಿ ನಿನ್ನಲ್ಲಿ ಇರಿಸಿಕೊಳ್ಳಲು ಹೆಚ್ಚಿನ ಪ್ರಯತ್ನ ಮಾಡಬೇಕು" (ಅ.ಕೃ. 24:16). ನೀನು "ಅರಿತಿದ್ದೂ ಪಾಪ ಮಾಡದಂತೆ ಜೀವಿಸಲು" ದೇವರ ಸಹಾಯ ಪಡೆಯಲಿಕ್ಕಾಗಿ, ಪೂರ್ಣ ಹೃದಯದಿಂದ ದೇವರನ್ನು ಬೇಡಿಕೊಳ್ಳಬೇಕು. ನಿನ್ನ ಮನಸ್ಸಿನ ಕಾಮನೆಗಳಿಗೆ ನೀನು ತಲೆ ಬಾಗಿದರೆ, ಸೈತಾನನಿಗೆ ನಿನ್ನ ಮೇಲೆ ಒಂದು ಹಿಡಿತ ಸಿಗುತ್ತದೆ. ರೋಮಾಪುರದವರಿಗೆ 6:1ರಲ್ಲಿ ಕೇಳಿರುವ ಪ್ರಶ್ನೆ, "ನಾವು ಪಾಪದಲ್ಲಿ ಇನ್ನೂ ಇರಬೇಕೇ?" ನಂತರ, ರೋಮಾಪುರದವರಿಗೆ 6:15ರಲ್ಲಿ, "ನಾವು ಒಮ್ಮೆಯಾದರೂ ಪಾಪ ಮಾಡಬಹುದೋ?" ಎಂದು ಪ್ರಶ್ನಿಸಲಾಗಿದೆ. ಇವೆರಡು ಪ್ರಶ್ನೆಗಳಿಗೆ ಪ್ರತಿಧ್ವನಿಸುವ ಉತ್ತರ, "ಇಲ್ಲ, ಎಂದಿಗೂ ಮಾಡಬಾರದು." ಶೋಧನೆಗಳು ಮತ್ತು ತಪ್ಪುಗಳು ನಿನ್ನ ಜೀವಿತದ ಕೊನೆಯವರೆಗೂ ನಿರಂತರವಾಗಿ ತಲೆಯೆತ್ತುತ್ತವೆ. ಆದರೆ ಸ್ವಲ್ಪ ಸಮಯದ ನಂತರ ನೀನು ಪ್ರಜ್ಞಾಪೂರ್ವಕ ಪಾಪದ ಮೇಲೆ ವಿಜಯವನ್ನು ಸಾಧಿಸಬಹುದು ಮತ್ತು ಆಮೇಲೆ ಬೀಳುವುದು ಅಪರೂಪವಾಗುತ್ತದೆ.