WFTW Body: 

1. ನಮ್ಮಲ್ಲಿ ಪ್ರತಿಯೊಬ್ಬರಿಗಾಗಿ ದೇವರ ಒಂದು ಪರಿಪೂರ್ಣ ಯೋಜನೆ ಇದೆಯೆಂದು ನಂಬಿರಿ:

""ನಾವು ಆತನ ನಿರ್ಮಾಣ; ಸತ್ಕಾರ್ಯಗಳನ್ನು ಮಾಡುವುದಕ್ಕಾಗಿಯೇ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟೆವು. ನಾವು ಸತ್ಕಾರ್ಯಗಳನ್ನು ನಡಿಸುವವರಾಗಿ ಬದುಕಬೇಕೆಂದು ದೇವರು ನಮ್ಮನ್ನು ಮೊದಲೇ ನೇಮಿಸಿದನು" (ಎಫೆಸ. 2:10) ". ಅನಾದಿ ಕಾಲದಲ್ಲಿ, ದೇವರು ನಮ್ಮನ್ನು ಕ್ರಿಸ್ತನಲ್ಲಿ ಆರಿಸಿಕೊಂಡಾಗ, ನಾವು ನಮ್ಮ ಭೂಮಿಯ ಮೇಲಿನ ಜೀವಿತದಲ್ಲಿ ಏನು ಮಾಡಬೇಕೆಂದು ಮೊದಲೇ ನಿರ್ಧರಿಸಿದರು. ಈಗ ನಮ್ಮ ಕರ್ತವ್ಯ ಏನೆಂದರೆ, ಅವರು ನಮ್ಮ ಒಂದೊಂದು ದಿನಕ್ಕಾಗಿ ಇರಿಸಿರುವ ಯೋಜನೆ ಏನೆಂದು ತಿಳಿದುಕೊಂಡು, ಅದರಂತೆ ನಡೆಯುವುದು. ನಾವು ದೇವರ ಯೋಜನೆಗಿಂತ ಶ್ರೇಷ್ಠವಾದ ಬೇರೊಂದನ್ನು ಸಿದ್ಧಪಡಿಸಲು ಸಾಧ್ಯವಿಲ್ಲ. ದೇವರು ತನ್ನ ಪ್ರತಿಯೊಂದು ಮಗುವಿಗಾಗಿ ಬೇರೆ ಬೇರೆ ಯೋಜನೆಗಳನ್ನು ಇರಿಸಿದ್ದಾರೆ, ಹಾಗಾಗಿ ನಾವು ಯಾವತ್ತೂ ಇತರರ ಅನುಕರಣೆ ಮಾಡಬಾರದು. ಉದಾಹರಣೆಗಾಗಿ, ಯೋಸೇಫನಿಗಾಗಿ ದೇವರ ಯೋಜನೆ ಏನೆಂದರೆ, ಆತನು ತನ್ನ ಬದುಕಿನ ಕೊನೆಯ 80 ವರ್ಷಗಳನ್ನು ಐಗುಪ್ತದ ಅರಮನೆಯಲ್ಲಿ ವಿಶೇಷ ಸುಖ-ಸಂಪತ್ತಿನಲ್ಲಿ ಜೀವಿಸುವುದಾಗಿತ್ತು. ಇನ್ನೊಂದು ಕಡೆ, ಮೋಶೆಗಾಗಿ ದೇವರು ಇರಿಸಿದ್ದ ಯೋಜನೆಯ ಅಡಿಯಲ್ಲಿ, ಆತನು ಐಗುಪ್ತದ ಅರಮನೆಯನ್ನು ಬಿಟ್ಟು, ತನ್ನ ಜೀವನದ ಕೊನೆಯ 80 ವರ್ಷಗಳನ್ನು ಬಹಳ ಕಷ್ಟಕರ ಪರಿಸ್ಥಿತಿಯಲ್ಲಿ - ಅರಣ್ಯ ಪ್ರದೇಶಗಳಲ್ಲಿ - ಜೀವಿಸ ಬೇಕಾಗಿತ್ತು.

ಒಂದು ವೇಳೆ ಮೋಶೆಯು ಯೋಸೇಫನ ಉದಾಹರಣೆಯನ್ನು ನೋಡಿ, ತಾನೂ ಸಹ ಉತ್ತಮ ಸೌಕರ್ಯಗಳನ್ನು ಹಾಗೂ ಶ್ರಮವಿಲ್ಲದ ಜೀವಿತವನ್ನು ಬಯಸಿದ್ದರೆ, ಆತನ ಜೀವನದಲ್ಲಿ ದೇವರ ಚಿತ್ತವು ಸಂಪೂರ್ಣವಾಗದೇ ಉಳಿಯುತ್ತಿತ್ತು. ಇದೇ ರೀತಿಯಾಗಿ ಇಂದು, ಒಬ್ಬ ಸಹೋದರನು ಅಮೇರಿಕಾ ದೇಶದಲ್ಲಿ ಸುಖ ಸೌಲಭ್ಯದ ಜೀವನ ನಡೆಸಬೇಕೆಂದು ದೇವರು ಬಯಸಬಹುದು, ಮತ್ತು ಇನ್ನೊಬ್ಬ ಸಹೋದರನು ಉತ್ತರ ಭಾರತದಲ್ಲಿ ಬೆವರು ಸುರಿಸುತ್ತಾ ದುಡಿದು ಇಡೀ ಜೀವನ ಜೀವಿಸಬೇಕೆಂದು ಬಯಸಬಹುದು. ಪ್ರತಿಯೊಬ್ಬನು ದೇವರು ತನಗಾಗಿ ಇರಿಸಿರುವ ಜೀವನದ ಬಗ್ಗೆ ದೃಢ ನಿಶ್ಚಯ ಹೊಂದಿದ್ದು, ತನ್ನ ಪರಿಸ್ಥಿತಿಯನ್ನು ಬೇರೊಬ್ಬ ಸಹೋದರನ ಪರಿಸ್ಥಿತಿಯೊಂದಿಗೆ ಹೋಲಿಸಿ, ಅವನ ಬಗ್ಗೆ ಅಸೂಯೆ ಪಟ್ಟು, ಅವನನ್ನು ಟೀಕಿಸಬಾರದು. ದೇವರು ನನ್ನನ್ನು ಭಾರತ ದೇಶದಲ್ಲಿ ಅವರ ಸೇವೆ ಮಾಡುವುದಕ್ಕಾಗಿ ಕರೆದಿದ್ದಾರೆ ಎಂದು ನನಗೆ ಗೊತ್ತಿದೆ. ಆದರೆ ಬೇರೆ ಯಾರಿಗೂ ನನ್ನ ಕರೆ ಸಿಗಲಿ ಎಂದು ನಾನು ಯಾವತ್ತೂ ಬೇಡಿಕೊಂಡಿಲ್ಲ. ಆದರೆ ನಾವು ಸ್ವಂತ ಖ್ಯಾತಿಗಾಗಿ, ಅಥವಾ ಹಣದ ಆಶೆ ಅಥವಾ ಸುಖ-ಸೌಕರ್ಯಗಳು ಅಥವಾ ಜನರ ಮನ್ನಣೆ, ಇವುಗಳಿಗಾಗಿ ಶ್ರಮಿಸುತ್ತಿದ್ದರೆ, ನಾವು ದೇವರ ಚಿತ್ತವನ್ನು ಕಂಡುಕೊಳ್ಳಲಾರೆವು.

2. ದೇವರನ್ನು ಆಪ್ತನಾಗಿ ಅರಿತುಕೊಳ್ಳುವುದು ಬಲ ಹೊಂದುವ ರಹಸ್ಯವಾಗಿದೆ:

"ದೇವರನ್ನು ಅರಿತವರು ದೃಢಚಿತ್ತರಾಗಿ ಕೃತಾರ್ಥರಾಗುವರು" (ದಾನಿಯೇಲನು 11:32) . ಇಂದು, ನಾವು ದೇವರನ್ನು ಇತರರ ಮೂಲಕ ಪರೋಕ್ಷವಾಗಿ ಅರಿತುಕೊಳ್ಳಲಿ ಎಂದು ಅವರು ಬಯಸುವುದಿಲ್ಲ. ಚಿಕ್ಕವರಿಂದ ಮೊದಲುಗೊಂಡು ಎಲ್ಲರೂ ದೇವರ ಜ್ಞಾನವನ್ನು ನೇರವಾಗಿ ಪಡೆಯುವುದಕ್ಕಾಗಿ ಅವರು ಆಹ್ವಾನಿಸುತ್ತಾರೆ " (ಇಬ್ರಿಯ. 8:11) ". ದೇವರನ್ನು ಮತ್ತು ಯೇಸು ಕ್ರಿಸ್ತನನ್ನು ವ್ಯಕ್ತಿಗತವಾಗಿ ತಿಳಿಯುವುದೇ ನಿತ್ಯಜೀವವು, ಎಂದು ಯೇಸುವು ವಿವರಿಸಿದರು " (ಯೋಹಾನ 17:3). " ಇದು ಅಪೊಸ್ತಲ ಪೌಲನ ಜೀವನದ ಮಹತ್ವಾಕಾಂಕ್ಷೆಯಾಗಿತ್ತು ಮತ್ತು ನಮ್ಮ ಮಹತ್ವಾಕಾಂಕ್ಷೆಯೂ ಇದೇ ಆಗಿರಬೇಕು " (ಫಿಲಿಪ್ಪಿ. 3:10) ". ದೇವರನ್ನು ನಿಕಟವಾಗಿ ಅರಿಯಲು ಬಯಸುವಾತನು, ಯಾವಾಗಲೂ ಅವರ ಧ್ವನಿಯನ್ನು ಗಮನವಿಟ್ಟು ಲಾಲಿಸಬೇಕು. ಯೇಸುವು ಹೇಳಿದಂತೆ, ಅತ್ಮಿಕವಾಗಿ ಬದುಕಿ ಉಳಿಯುವದಕ್ಕೆ ಇರುವಂಥ ಒಂದೇ ಒಂದು ದಾರಿ, ದೇವರ ಬಾಯಿಂದ ಹೊರಡುವ "ಪ್ರತಿಯೊಂದು ಮಾತನ್ನು" ಕಿವಿಗೊಟ್ಟು ಕೇಳುವುದು ಆಗಿದೆ " (ಮತ್ತಾಯ 4:4) ". ಆತನು ನಮಗೆ ತೋರಿಸಿರುವ ಇನ್ನೊಂದು ವಿಷಯ, ಒಬ್ಬ ಕ್ರೈಸ್ತನ ಜೀವನದಲ್ಲಿ ಅತೀ ಮುಖ್ಯವಾದ ಕಾರ್ಯ, ಕರ್ತನ ಪಾದಗಳ ಬಳಿಯಲ್ಲಿ ಕೂತುಕೊಂಡು ಆತನ ಮಾತನ್ನು ಆಲಿಸುವುದಾಗಿದೆ " (ಲೂಕ 10:39,42) ".

ನಾವು ಬೆಳೆಸಿಕೊಳ್ಳಬೇಕಾದ ಇನ್ನೊಂದು ಅಭ್ಯಾಸ, ಯೇಸುವಿನಂತೆ ನಾವು ಪ್ರತಿ ದಿನ ಮುಂಜಾನೆಯಿಂದ ಹಿಡಿದು, ತಂದೆಯ ಧ್ವನಿಯನ್ನು ಕಿವಿಗಳನ್ನು ತೆರೆದು ಲಾಲಿಸುವುದು " (ಯೆಶಾಯ 50:4) ", ಮತ್ತು ದಿನವಿಡೀ ದೇವರ ಧ್ವನಿಗಾಗಿ ಚುರುಕಾಗಿ ಕಾದಿರುವುದು; ಅಷ್ಟು ಮಾತ್ರವಲ್ಲ, ರಾತ್ರಿಯ ವೇಳೆ ನಾವು ನಿದ್ರಿಸುವಾಗಲೂ ಕೇಳಿಸಿಕೊಳ್ಳುವ ಮನೋಭಾವವನ್ನು ಇರಿಸಿಕೊಳ್ಳಬೇಕು - ಆಗ, ನಾವು ನಿದ್ರೆಯಿಂದ ಯಾವಾಗಲಾದರೂ ಎಚ್ಚರಗೊಂಡರೆ, "ಕರ್ತನೇ, ಅಪ್ಪಣೆಯಾಗಲಿ, ನಿನ್ನ ದಾಸನು ಕಾದಿದ್ದಾನೆ," ಎಂದು ಹೇಳಲು ಸಾಧ್ಯವಾಗುತ್ತದೆ " (1 ಸಮುವೇಲನು 3:10) ". ನಾವು ದೇವರ ಚಿತ್ತವನ್ನು ಅರಿತುಕೊಂಡಾಗ ಎಲ್ಲಾ ಸನ್ನಿವೇಷಗಳಲ್ಲೂ ಜಯಶಾಲಿಗಳಾಗುತ್ತೇವೆ - ಏಕೆಂದರೆ ದೇವರ ಬಳಿ ನಮ್ಮ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದೆ - ಮತ್ತು ನಾವು ಆತನ ಧ್ವನಿಯನ್ನು ಚುರುಕಾಗಿ ಕೇಳಿಸಿಕೊಂಡರೆ, ಆತನು ಆ ಪರಿಹಾರ ಏನೆಂದು ನಮಗೆ ತೋರಿಸಿಕೊಡುತ್ತಾನೆ.

3. ದೇವರು ಸ್ವೀಕರಿಸಿರುವ ಎಲ್ಲರನ್ನು ನೀವು ಸ್ವೀಕರಿಸಿರಿ:

""ದೇವರು ನಮ್ಮ ದೇಹದ ಅಂಗಗಳಲ್ಲಿ ಪ್ರತಿಯೊಂದನ್ನು ತನಗೆ ಸರಿಯಾಗಿ ತೋಚಿದ ಪ್ರಕಾರ ದೇಹದೊಳಗೆ ಇಟ್ಟಿದ್ದಾನೆ... ಹೀಗೆ ದೇಹದ ಅಂಗಗಳ ನಡುವೆ ಭೇದ ಉಂಟಾಗದಂತೆ ಅವುಗಳನ್ನು ಕೂಡಿಸಿದ್ದಾನೆ" (1 ಕೊರಿಂಥ. 12:18, 25) ". ದೇವರು ವಿವಿಧ ದೇಶಗಳಲ್ಲಿ, ಬೇರೆ ಬೇರೆ ಕಾಲಾವಧಿಗಳಲ್ಲಿ, ತನ್ನ ಪರಿಶುದ್ಧವಾದ ಸಾಕ್ಷಿಯನ್ನು ತೋರಿಸುವುದಕ್ಕಾಗಿ ಮನುಷ್ಯರನ್ನು ಮೇಲೆತ್ತಿದ್ದಾರೆ. ಆದರೆ ಇಂತಹ ದೇವರ ಮನುಷ್ಯರು ಮರಣ ಹೊಂದಿದ ಮೇಲೆ, ಅವರ ಅನುಯಾಯಿಗಳು ತಮ್ಮ ಗುಂಪುಗಳನ್ನು ಇತರರಿಂದ ಬೇರ್ಪಡಿಸಿ ಅವುಗಳನ್ನು ಸಂಪ್ರದಾಯಸ್ಥ ಪಂಗಡಗಳಾಗಿ ಮಾಡಿದ್ದಾರೆ. ಆದರೆ ಕ್ರಿಸ್ತನ ದೇಹವು ಯಾವುದೇ ಒಂದು ಪಂಗಡಕ್ಕಿಂತ ವಿಶಾಲವಾದದ್ದು ಆಗಿದೆ. ನಾವು ಇದನ್ನು ಎಂದಿಗೂ ಮರೆಯಬಾರದು. ಇಂದು ಕ್ರಿಸ್ತನ ಮೊದಲಗಿತ್ತಿಯು ಬಹಳಷ್ಟು ಪಂಗಡಗಳಲ್ಲಿ ಇದ್ದಾಳೆ. ಹಾಗಾಗಿ ಬೇರೆ ಬೇರೆ ಪಂಗಡಗಳು ದೇವರ ವಾಕ್ಯವನ್ನು ಬೇರೊಂದು ರೀತಿಯಲ್ಲಿ ಅರ್ಥ ಮಾಡಿಕೊಂಡಿರುವ ಕಾರಣ ನಾವು ಅವರಲ್ಲಿ ಅನೇಕರ ಜೊತೆಗೆ ಒಟ್ಟಾಗಿ ಕೆಲಸ ಮಾಡುವುದು ಅಸಾಧ್ಯವಾಗಿದ್ದರೂ ಸಹ, ನಾವು ಕರ್ತನು ಸ್ವೀಕರಿಸಿರುವ ಎಲ್ಲಾ ಮನುಷ್ಯರ ಜೊತೆ ಅನ್ಯೋನ್ಯತೆಯನ್ನು ಬಯಸಬೇಕು.