WFTW Body: 

ಮೊದಲ ಪರೀಕ್ಷೆ: ದೇವರು ಅಬ್ರಹಾಮನನ್ನು ಆತನ 75ನೇ ವಯಸ್ಸಿನಲ್ಲಿ, ಹುಟ್ಟೂರು ಕಲ್ದೀಯರ ’ಊರ್’ ಎಂಬ ಪಟ್ಟಣವನ್ನು ಮತ್ತು ತನ್ನ ನೆಂಟರಿಷ್ಟರನ್ನು ಬಿಟ್ಟು, ದೇವರಲ್ಲಿ ನಂಬಿಕೆ ಇರಿಸಿ ಒಂದು ಅಪರಿಚಿತ ಮಾರ್ಗದಲ್ಲಿ ನಡೆಯುವದಕ್ಕಾಗಿ ಕರೆದಿದ್ದರು. ಆತನು ಆ ಮೊದಲನೆಯ ಪರೀಕ್ಷೆಯಲ್ಲಿ ಸಫಲನಾದನು. ತಂದೆ, ತಾಯಿ, ಸಹೋದರರು, ಸಹೋದರಿಯರು, ಇವರೆಲ್ಲರಿಂದ ದೂರ ಸರಿಯುವುದು ಸುಲಭವಲ್ಲ; ಆದರೆ ನಮ್ಮನ್ನು ಅವರೊಂದಿಗೆ ಜೋಡಿಸುವ ಆ ಹೊಕ್ಕುಳ ಬಳ್ಳಿ (ಗರ್ಭನಾಳ) ಕಡಿಯಲ್ಪಡದೇ ಇರುವಷ್ಟು ದಿನ ನಾವು ಯೇಸುವಿನ ಶಿಷ್ಯರಾಗುವುದು ಅಸಾಧ್ಯವಾದ ಮಾತು! ಯೇಸುವು ಬೋಧಿಸಿದ್ದು ಏನೆಂದರೆ, "ಯಾವನಾದರೂ ನನ್ನ ಬಳಿಗೆ ಬಂದು, ತನ್ನ ತಂದೆ ತಾಯಿ ಹೆಂಡತಿ ಮಕ್ಕಳು ಅಣ್ಣ ತಮ್ಮಂದಿರು ಅಕ್ಕತಂಗಿಯರು ಇವರನ್ನೂ, ತನ್ನ ಪ್ರಾಣವನ್ನು ಸಹ ದ್ವೇಷಿಸದಿದ್ದರೆ, ಅವನು ನನ್ನ ಶಿಷ್ಯನಾಗಿರಲಾರನು" (ಲೂಕ 14:26) . ಇಲ್ಲಿ ಅಬ್ರಹಾಮನು ದೇವರಿಗೆ ಕೂಡಲೇ ವಿಧೇಯನಾದನು. ದೇವರ ಕರೆಗೆ ಅಬ್ರಹಾಮನು ಓಗೊಡದೇ ಇದ್ದಿದ್ದರೆ ಏನಾಗುತ್ತಿತ್ತೆಂದು ನಾನು ಯೋಚಿಸಿ ಬೆರಗಾಗಿದ್ದೇನೆ. ದೇವರು ಖಂಡಿತವಾಗಿ ಅವನನ್ನು ಒತ್ತಾಯಿಸುತ್ತಿರಲಿಲ್ಲ. ದೇವರು ಬೇರೊಬ್ಬ ವ್ಯಕ್ತಿಯನ್ನು ಆರಿಸಿಕೊಳ್ಳುತ್ತಿದ್ದರು; ಮತ್ತು ಆ ಮೇಲೆ ನಾವು ಅಬ್ರಹಾಮನ ಹೆಸರನ್ನೇ ಕೇಳುತ್ತಿರಲಿಲ್ಲ. ದೇವರ ಕರೆಗೆ ಸ್ಪಂದಿಸಿದ ಆ ಬೇರೊಬ್ಬ ವ್ಯಕ್ತಿಯು ನಂಬಿಕೆಯ ಪಿತಾಮಹನೂ, ಮೆಸ್ಸೀಯನ (ಕ್ರಿಸ್ತನ) ಮೂಲಪುರುಷನೂ ಆಗುತ್ತಿದ್ದನು! ಅಬ್ರಹಾಮನು ಅ ಮೊದಲ ಪರೀಕ್ಷೆಯಲ್ಲಿ ಸಫಲನಾಗದೇ ಇದ್ದಿದ್ದರೆ ಎಂತಹ ದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತಿದ್ದನು! ಆತನು ಬಂಧು ಬಳಗದವರ ವಿನಂತಿಯನ್ನು ಕಡೆಗಣಿಸಿ, ಊರ್ ಪಟ್ಟಣವನ್ನು ಬಿಟ್ಟು ಹೊರಟಾಗ, ದೇವರು ತನಗಾಗಿ ಎಂತಹ ಮಹಿಮಾಭರಿತ ಭವಿಷ್ಯವನ್ನು ಸಿದ್ಧಗೊಳಿಸಿದ್ದಾರೆ ಎಂಬುದರ ಸ್ವಲ್ಪ ಸುಳಿವೂ ಸಹ ಆತನಿಗೆ ಇರಲಿಲ್ಲ.

ದೇವರು ಅಬ್ರಹಾಮನನ್ನು ಕರೆದಂತೆ, ಈಗಲೂ ಜನರನ್ನು ಕರೆಯುತ್ತಾರೆ. ಹಾಗೆ ಕರೆಯಲ್ಪಟ್ಟವರು ದೇವರ ಕರೆ ಬಂದಾಗ, ತಾವು ಮಾಡುವ ನಿರ್ಧಾರದ ಮೇಲೆ ಎಂತಹ ಶ್ರೇಷ್ಠವಾದ ಸಂಗತಿಗಳು ಅವಲಂಬಿಸಿರುತ್ತವೆ ಎಂಬುದನ್ನು ಊಹಿಸುವುದಿಲ್ಲ. ಈ ಹಿಂದಿನ 20 ಶತಮಾನಗಳ ದೇವಸಭೆಯ ಇತಿಹಾಸದಲ್ಲಿ, ದೇವರ ಕರೆಯನ್ನು ಕೇಳಿ ತಡಮಾಡದೆ, ಹರ್ಷಭರಿತರಾಗಿ, ಪೂರ್ಣಹೃದಯದಿಂದ ಆ ಕರೆಗೆ ಓಗೊಟ್ಟ ಸ್ತ್ರೀ-ಪುರುಷರ ಅದ್ಭುತವಾದ ಕಥೆಗಳು ಬಹಳಷ್ಟು ಇವೆ.

ಎರಡನೆಯ ಪರೀಕ್ಷೆ: ಅಬ್ರಹಾಮನು ತನ್ನ ನೆಂಟರಿಂದ ದೂರ ಸರಿದ ನಂತರ, ದೇವರು ಅವನನ್ನು ಲೌಕಿಕ ವಸ್ತುಗಳ ವಿಷಯದಲ್ಲಿ ಪರೀಕ್ಷಿಸಲು ಸಾಧ್ಯವಾಯಿತು. ಇದೂ ಸಹ ಶಿಷ್ಯತ್ವಕ್ಕೆ ಬೇಕಾಗುವ ಇನ್ನೊಂದು ಅವಶ್ಯಕತೆಯಾಗಿದೆ. ಯೇಸುವು ಹೇಳಿದಂತೆ, "ಯಾವನೇ ಆಗಲಿ ತನಗಿರುವದನ್ನೆಲ್ಲಾ ಬಿಟ್ಟುಬಿಡದೆ ಹೋದರೆ, ಅವನು ನನ್ನ ಶಿಷ್ಯನಾಗಿರಲಾರನು" (ಲೂಕ 14:33) . ಆದಿಕಾಂಡ 13 ಮತ್ತು 14ನೇ ಅಧ್ಯಾಯಗಳಲ್ಲಿ, ಅಬ್ರಹಾಮನು ಲೌಕಿಕ ಸಂಪತ್ತಿನ ವಿಷಯದಲ್ಲಿ ಶೋಧಿಸಲ್ಪಟ್ಟ ಎರಡು ಸನ್ನಿವೇಷಗಳನ್ನು ನಾವು ಓದುತ್ತೇವೆ. ಮೊದಲನೇ ಘಟನೆ, ಅಬ್ರಹಾಮ ಮತ್ತು ಲೋಟನ ದನ ಕುರಿಗಳ ಮಂದೆಗಳು ಬಹಳವಾಗಿ ಬೆಳೆದು, ಅವರು ಒಟ್ಟಿಗೆ ಇರುವದು ಅಸಾಧ್ಯವಾದಾಗ, ಅವರು ಪ್ರತ್ಯೇಕವಾಗಬೇಕಾದ ಸಂದರ್ಭ. ಅವರಿಬ್ಬರಲ್ಲಿ ಹಿರಿಯನೂ, ದೇವರಿಂದ ಕಾನಾನ್ ದೇಶಕ್ಕೆ ಕಳುಹಿಸಲ್ಪಟ್ಟವನೂ ಆಗಿದ್ದ ಅಬ್ರಹಾಮನು ತನಗೆ ಬೇಕಾದ ಜಮೀನನ್ನು ಮೊದಲು ಆರಿಸಿಕೊಳ್ಳುವುದು ಸುಲಭವಾದ ಕಾರ್ಯವಾಗಿತ್ತು, ಮತ್ತು ಅದರಲ್ಲಿ ಯಾವ ತಪ್ಪೂ ಇರಲಿಲ್ಲ. ಆದರೆ ಯಥಾರ್ಥ ನಿಸ್ವಾರ್ಥತೆಯಿಂದ ಮತ್ತು ವಿಶಾಲ ಹೃದಯದಿಂದ ಆತನು ಲೋಟನಿಗೆ ಮೊದಲ ಆಯ್ಕೆಯ ಅವಕಾಶವನ್ನು ಕೊಟ್ಟನು. ಲೋಟನ ಆಯ್ಕೆ ಮಾನವ ದೃಷ್ಟಿಯಲ್ಲಿ ಶ್ರೇಷ್ಠವಾಗಿತ್ತು - ಸೊದೋಮಿನ ಪ್ರದೇಶ. ಆದರೆ ಅಬ್ರಹಾಮನಿಗೆ ಮತ್ತು ಲೋಟನಿಗೆ ತಿಳಿಯದಿದ್ದ ವಿಷಯ ಏನೆಂದರೆ, ದೇವರು ಈ ವ್ಯವಹಾರವನ್ನು ಮೌನವಾಗಿ ದೂರದಿಂದ ಗಮನಿಸುತ್ತಿದ್ದರು - ಅವರು ಅದೇ ರೀತಿಯಾಗಿ ನಮ್ಮ ಹಣಕಾಸಿನ ವ್ಯವಹಾರಗಳನ್ನು ಗಮನಿಸಿ ನೋಡುತ್ತಾರೆ. ಅಬ್ರಹಾಮನು ತೋರಿಸಿದ ನಿಸ್ವಾರ್ಥತೆ ದೇವರನ್ನು ಎಷ್ಟು ಮೆಚ್ಚಿಸಿತೆಂದರೆ, ಅವರು ಒಡನೆಯೇ ಆತನೊಂದಿಗೆ ಮಾತನಾಡಿ, ಅಬ್ರಹಾಮನ ಸಂತತಿಯು ಆತನ ಸುತ್ತಲೂ - ನಾಲ್ಕೂ ದಿಕ್ಕುಗಳಲ್ಲಿ - ಕಾಣಿಸುವಂತ ಎಲ್ಲಾ ಪ್ರದೇಶವನ್ನು ವಂಶಾನುಕ್ರಮವಾಗಿ ಪಡೆಯುವದಾಗಿ ತಿಳಿಸಿದರು. ಇದರಲ್ಲಿ ಲೋಟನ ಪ್ರದೇಶವೂ ಸಹ ಸೇರಿತ್ತು. "ಲೋಟನು ಅಬ್ರಾಮನನ್ನು ಬಿಟ್ಟು ಬೇರೆಯಾದ ನಂತರ ಕರ್ತನು ಅಬ್ರಾಮನಿಗೆ, ’ನೀನಿರುವ ಸ್ಥಳದಿಂದ ದಕ್ಷಿಣೋತ್ತರಪೂರ್ವಪಶ್ಚಿಮಗಳಿಗೆ ಕಣ್ಣೆತ್ತಿ ನೋಡು. ನೀನು ನೋಡುವ ಈ ದೇಶವನ್ನೆಲ್ಲಾ ನಿನಗೂ ನಿನ್ನ ಸಂತತಿಗೂ ಶಾಶ್ವತವಾಗಿ ಕೊಡುವೆನು.’ " (ಆದಿಕಾಂಡ 13:14,15).

ಆದಿಕಾಂಡ 14ರಲ್ಲಿ, ಅಬ್ರಹಾಮನು ಲೌಕಿಕ ಐಶ್ವರ್ಯದ ವಿಷಯದಲ್ಲಿ ಮತ್ತೊಮ್ಮೆ ದೇವರ ಒಬ್ಬ ನಿಜವಾದ ಸೇವಕನಿಗೆ ಇರಬೇಕಾದ ಪ್ರತಿಷ್ಠೆಗೆ ತಕ್ಕಂತೆ ನಡೆಯುವುದನ್ನು ನಾವು ನೋಡುತ್ತೇವೆ. ಸೊದೋಮಿನ ರಾಜನ ಆಸ್ತಿಯನ್ನೂ, ಅವನಿಗೆ ಸೇರಿದ ಜನರನ್ನೂ ವೈರಿಗಳು ಅಪಹರಿಸಿದಾಗ, ಅಬ್ರಹಾಮನು ಅವರೊಂದಿಗೆ ಹೋರಾಡಿ ಎಲ್ಲವನ್ನೂ ಹಿಂದಕ್ಕೆ ಪಡೆದುಕೊಂಡನು. ಇದಕ್ಕೆ ಬಹುಮಾನವಾಗಿ ಸೊದೋಮಿನ ರಾಜನು ಆ ಆಸ್ತಿಯನ್ನು ಅಬ್ರಹಾಮನಿಗೇ ಒಪ್ಪಿಸಿಕೊಟ್ಟನು. ಆದರೆ ಅಬ್ರಹಾಮನು ಯಾವುದನ್ನೂ ತೆಗೆದುಕೊಳ್ಳಲು ನಿರಾಕರಿಸಿದನು. "ಆಗ ಅಬ್ರಾಮನು ಅವನಿಗೆ, "ಒಂದು ದಾರವನ್ನಾಗಲೀ ಕೆರದ ಬಾರನ್ನಾಗಲೀ ನಿನ್ನದರಲ್ಲಿ ಯಾವದನ್ನೂ ತೆಗೆದುಕೊಳ್ಳುವದಿಲ್ಲವೆಂದು ಭೂಮ್ಯಾಕಾಶಗಳನ್ನು ನಿರ್ಮಾಣ ಮಾಡಿದ ಪರಾತ್ಪರ ದೇವರಾಗಿರುವ ಕರ್ತನ ಕಡೆಗೆ ಕೈಯೆತ್ತಿ ಪ್ರಮಾಣ ಮಾಡುತ್ತೇನೆ. ’ಅಬ್ರಾಮನು ನನ್ನ ಸೊತ್ತಿನಿಂದಲೇ ಐಶ್ವರ್ಯವಂತನಾದನು’ ಎಂದು ಹೇಳಿಕೊಳ್ಳುವದಕ್ಕೆ ನಿನಗೆ ಆಸ್ಪದವಾಗಬಾರದು, ನನಗೆ ಏನೂ ಬೇಡ," ಎಂದು ಹೇಳಿದನು" (ಆದಿಕಾಂಡ 14: 22,23). ಅಬ್ರಹಾಮನ ಮಾತಿನ ತಾತ್ಪರ್ಯ ಏನೆಂದರೆ, "ನನ್ನ ದೇವರು ಭೂಮ್ಯಾಕಾಶಗಳ ಒಡೆಯರಾಗಿದ್ದಾರೆ; ಹಾಗಾಗಿ ನನಗೆ ನಿನ್ನಿಂದ ಏನೂ ಬೇಕಾಗಿಲ್ಲ." ಈ ಸಂದರ್ಭದಲ್ಲೂ ಇವರ ನಡುವಿನ ಸಂಭಾಷಣೆಯನ್ನು ದೇವರ ಮೌನವಾಗಿ ಕೇಳಿಸಿಕೊಂಡರು. ಅವರು ಒಡನೆಯೇ ಅಬ್ರಹಾಮನಿಗೆ ಕಾಣಿಸಿಕೊಂಡು, ತಾನು ಸ್ವತಃ ಅವನಿಗೆ ಬಹುಮಾನವನ್ನು ಕೊಡುವುದಾಗಿ ಹೇಳಿದರು. "ಈ ಸಂಗತಿಗಳು ನಡೆದ ಮೇಲೆ ಅಬ್ರಾಮನಿಗೆ ದರ್ಶನದಲ್ಲಿ ಕರ್ತನ ವಾಕ್ಯವುಂಟಾಯಿತು, ಏನೆಂದರೆ, "ಅಬ್ರಾಮನೇ, ಭಯಪಡಬೇಡ, ನಾನು ನಿನಗೆ ಗುರಾಣಿಯಾಗಿದ್ದೇನೆ; ನಿನಗೋಸ್ಕರ ಅತ್ಯಧಿಕ ಬಹುಮಾನವು ಇಟ್ಟದೆ" (ಆದಿಕಾಂಡ 15:1) . ನಾವು ದೇವರನ್ನು ಸನ್ಮಾನಿಸಿದರೆ, ಅವರು ನಿಶ್ಚಯವಾಗಿ ನಮ್ಮನ್ನು ಗೌರವಿಸುವರು.

ಮೂರನೆಯ ಪರೀಕ್ಷೆ: ಅಬ್ರಹಾಮನು ತನ್ನ ಬಂಧು-ಬಳಗದ ವಿಷಯದಲ್ಲಿ ಹಾಗೂ ಲೌಕಿಕ ವಸ್ತುಗಳ ವಿಷಯದಲ್ಲಿ ಪರೀಕ್ಷಿಸಲ್ಪಟ್ಟಿದ್ದನು. ಈಗ ಆತನು ತನ್ನ ಮಗನ ಕುರಿತಾದ ಪರೀಕ್ಷೆಗೆ ಒಳಗಾಗಬೇಕಿತ್ತು. ಆದಿಕಾಂಡ 22:2ರಲ್ಲಿ ದೇವರು ಅಬ್ರಹಾಮನಿಗೆ ಹೀಗೆ ಹೇಳಿದರು, "ನಿನಗೆ ಪ್ರಿಯನಾಗಿರುವ ಒಬ್ಬನೇ ಮಗನಾದ ಇಸಾಕನನ್ನು ತೆಗೆದುಕೊಂಡು ಮೊರೀಯ ದೇಶಕ್ಕೆ ಹೋಗಿ ಅಲ್ಲಿ ಅವನನ್ನು ನಾನು ಹೇಳುವ ಒಂದು ಬೆಟ್ಟದ ಮೇಲೆ ಸರ್ವಾಂಗಹೋಮವಾಗಿ ಅರ್ಪಿಸಬೇಕು." ಆ ರಾತ್ರಿ ದೇವರು ಅವನಿಂದ ಕೇಳಿದ ಕೋರಿಕೆ ಬಹಳ ದುಬಾರಿಯಾಗಿತ್ತು. ಮರುದಿನ ಅಬ್ರಹಾಮನು ಈ ವಿಷಯದಲ್ಲಿ ಏನೂ ಮಾಡದೆ ಸುಮ್ಮನೆ ಇರಬಹುದಾಗಿತ್ತು, ಮತ್ತು ಯಾರಿಗೂ ಅಬ್ರಹಾಮನ ಅವಿಧೇಯತೆಯ ವಿಚಾರ ತಿಳಿಯುತ್ತಿರಲಿಲ್ಲ. ಅಬ್ರಹಾಮನಲ್ಲಿ ಎಷ್ಟು ದೇವಭಯವಿದೆ ಎನ್ನುವುದನ್ನು ದೇವರು ಈ ರೀತಿಯಾಗಿ ಪರೀಕ್ಷಿಸಿದರು. ಅಬ್ರಹಾಮನು ಆ ಪರೀಕ್ಷೆಯಲ್ಲಿ ಉತ್ತೀರ್ಣನಾದನು. ಆತನು ಮನುಷ್ಯರ ಮುಂದೆ ಮಾತ್ರವೇ ಉತ್ತಮ ಸಾಕ್ಷಿಯನ್ನು ಇರಿಸಿಕೊಳ್ಳಲು ತವಕಿಸಲಿಲ್ಲ. ಅವನು ರಹಸ್ಯ ಸ್ಥಳದಲ್ಲಿಯೂ ಸಹ ದೇವರಿಗೆ ವಿಧೇಯನಾಗಿರಲು ಬಯಸಿದನು. ಇದಕ್ಕಾಗಿ ಆತನು ಮರುದಿನ ಬೆಳಿಗ್ಗೆಯೇ ಇಸಾಕನನ್ನೂ ಕರೆದುಕೊಂಡು ಮೊರೀಯ ಬೆಟ್ಟಕ್ಕೆ ಹೊರಟನು; ಅಲ್ಲಿ ತನ್ನ ಹೃದಯಕ್ಕೆ ಅತಿ ಪ್ರಿಯನಾಗಿದ್ದ ಮಗನನ್ನು ದೇವರಿಗೆ ಹೋಮವಾಗಿ ಒಪ್ಪಿಸಿಕೊಟ್ಟನು, ಮತ್ತು ಆ ಮೂಲಕ, "ಕರ್ತನೇ, ನಾನು ಈ ಲೋಕದಲ್ಲಿ ಇತರ ಎಲ್ಲಾ ಜನರಿಗಿಂತ ಮತ್ತು ಎಲ್ಲಾ ಸಂಗತಿಗಳಿಗಿಂತ ನಿನ್ನನ್ನು ಹೆಚ್ಚಾಗಿ ಪ್ರೀತಿಸುತ್ತೇನೆ," ಎಂಬ ಮಾತನ್ನು ದೇವರಿಗೆ ರುಜುವಾತು ಮಾಡಿದನು.

ಇದಾದ ನಂತರ ದೇವರು ಅಬ್ರಹಾಮನಿಗೆ ತನ್ನ ಒಪ್ಪಿಗೆಯ ಪ್ರಮಾಣಪತ್ರವನ್ನು ಕೊಟ್ಟರು ಮತ್ತು ಆತನನ್ನು ಎಲ್ಲೆ ಮೀರಿ ಆಶೀರ್ವದಿಸುವದಾಗಿ ವಾಗ್ದಾನ ಮಾಡಿದರು: "ಕರ್ತನ ಪ್ರಮಾಣವನ್ನು ಕೇಳು, ’ನೀನು ನಿನ್ನ ಒಬ್ಬನೇ ಮಗನನ್ನು ಸಮರ್ಪಿಸುವದಕ್ಕೆ ಹಿಂದೆಗೆಯದೆ ಹೋದದ್ದರಿಂದ ನಾನು ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು; ನಿನ್ನ ಸಂತತಿಯನ್ನು ಹೆಚ್ಚಿಸೇ ಹೆಚ್ಚಿಸುವೆನು; ಅದನ್ನು ಆಕಾಶದ ನಕ್ಷತ್ರಗಳಂತೆಯೂ, ಸಮುದ್ರ ತೀರದಲ್ಲಿರುವ ಉಸುಬಿನಂತೆಯೂ ಅಸಂಖ್ಯವಾಗಿ ಮಾಡುವೆನು; ಅವರು ಶತ್ರುಗಳ ಪಟ್ಟಣಗಳನ್ನು ಸ್ವಾಧೀನ ಮಾಡಿಕೊಳ್ಳುವರು. ನೀನು ನನ್ನ ಮಾತನ್ನು ಕೇಳಿದ್ದರಿಂದ ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದ ಉಂಟಾಗುವದು.’" (ಆದಿಕಾಂಡ 22:16-18).

ತ್ಯಾಗ-ಭರಿತ ವಿಧೇಯತೆಯು ದೇವರಿಗೆ ಅತೀತ ಆನಂದವನ್ನು ನೀಡುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗದೇ ಯಾರೂ ಸಹ ದೇವರ ಮೆಚ್ಚುಗೆಗೆ ಪಾತ್ರರಾಗರು. ನಾವು ಕರ್ತನಿಗೆ ಯಥಾರ್ಥರಾಗಿ, "ಕರ್ತನೇ, ಪರಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರು ಅವಶ್ಯ? ಇಹಲೋಕದಲ್ಲಿ ನಿನ್ನನ್ನಲ್ಲದೆ ಇನ್ನಾರನ್ನೂ, ಇನ್ನಾವುದನ್ನೂ ನಾನು ಬಯಸುವದಿಲ್ಲ" (ಕೀರ್ತನೆ 73:25) , ಎಂದು ನುಡಿಯುವ ನೆಲೆಯನ್ನು ತಲುಪಿದಾಗ ಮಾತ್ರವೇ ನಾವು ದೇವರ ಅತಿ ಹೆಚ್ಚಿನ ಪ್ರೀತಿಗೆ ಪಾತ್ರರಾಗುತ್ತೇವೆ. ಇದೇ ನಮ್ಮಲ್ಲಿ ಪ್ರತಿಯೊಬ್ಬನೂ ಏರಬೇಕಾದ ಮೊರೀಯ ಬೆಟ್ಟವಾಗಿದೆ; ಅಲ್ಲಿ ನಮ್ಮ ಹೃದಯಕ್ಕೆ ಹೆಚ್ಚಿನ ಆನಂದಕರ ಸಂಗತಿಗಳೆಲ್ಲವನ್ನೂ ಯಜ್ಞವೇದಿಯ ಮೇಲೆ ದೇವರಿಗೆ ಸಮರ್ಪಿಸಿ, ನಾವು ಏಕಾಂತದಲ್ಲಿ ದೇವರ ಸನ್ನಿಧಿಯನ್ನು ಸೇರುತ್ತೇವೆ.