WFTW Body: 

1. ನಮ್ಮನ್ನು ನೀತಿವಂತರಾಗಿ ಮಾಡಲು ಸ್ವತಃ ಯೇಸುವು ಪಾಪ ಸ್ವರೂಪಿಯಾದನು:

"ನಾವು ಆತನಲ್ಲಿ ದೇವರಿಗೆ ಸಮರ್ಪಕರಾದ ನೀತಿ ಸ್ವರೂಪಿಗಳಾಗುವಂತೆ, ದೇವರು ಪಾಪಜ್ಞಾನವಿಲ್ಲದ ಕ್ರಿಸ್ತನನ್ನು ಪಾಪ ಸ್ವರೂಪಿಯಾಗಿ ಮಾಡಿದರು" (2 ಕೊರಿಂಥ. 5: 21). ನಮ್ಮಲ್ಲಿ "ಕ್ರಿಸ್ತನ ಮೂಲಕ" ದೇವರ ನೀತಿವಂತಿಕೆ ಉಂಟಾಗುವ ನಿಮಿತ್ತ, ಕ್ರಿಸ್ತನು ನಮಗಾಗಿ ಪಾಪವನ್ನು ಹೊತ್ತುಕೊಂಡನು. ನಾವು ನೀತಿವಂತರೆಂದು ನಿರ್ಣಯಿಸಲ್ಪಡುವದು ("Justified") ದೇವರ ಒಂದು ವರವಾಗಿದೆ. ಅದು ಯಾರಿಗೆ ಉಚಿತಾರ್ಥವಾಗಿ ಸಿಗುತ್ತದೆ ಎಂದರೆ, ದೇವರ ಪವಿತ್ರ ನೀತಿವಂತಿಕೆಯ ಮಟ್ಟವನ್ನು ನಾವಾಗಿಯೇ ತಲುಪುವದು ಅಸಾಧ್ಯವೆಂದು ಅರಿತುಕೊಳ್ಳುವಷ್ಟು ದೀನತೆಯನ್ನು ಹೊಂದಿರುವ ಜನರಿಗೆ.

ನಾವು ನೀತಿವಂತರೆಂದು ನಿರ್ಣಯಿಸಲ್ಪಡುವುದು ಕೇವಲ ದೇವರ ಕೃಪೆಯ ಮೂಲಕ, ಮತ್ತು ಸತ್ಯವೇದವು ಹೇಳುವಂತೆ, ನಮ್ಮನ್ನು "ಕೃಪೆಯಿಂದ ಆದುಕೊಂಡನು ಅಂದ ಮೇಲೆ, ಪುಣ್ಯಕ್ರಿಯೆಗಳ ಕಾರಣದಿಂದ ಆದುಕೊಳ್ಳಲಿಲ್ಲವಷ್ಟೇ; ಹಾಗಲ್ಲದ ಪಕ್ಷಕ್ಕೆ ಕೃಪೆಯನ್ನು ಇನ್ನು ’ಕೃಪೆ’ ಅನ್ನುವದಕ್ಕೆ ಆಗುವುದಿಲ್ಲ" (ರೋಮಾ. 11:6). ಯೇಸುವು ನಮ್ಮ ಪಾಪಕ್ಕೆ ಸಲ್ಲುವ ದಂಡನೆಯನ್ನು ಸ್ವೀಕರಿಸಿದ್ದು ಮಾತ್ರವೇ ಅಲ್ಲ, ಆತನು "ಸ್ವತಃ ಪಾಪ ಸ್ವರೂಪಿಯಾದನು". ದೇವರ ನೀತಿವಂತಿಕೆಯನ್ನು ಜಗತ್ತಿನ ಅತ್ಯಂತ ನೀತಿವಂತ ಮನುಷ್ಯನ ನೀತಿವಂತಿಕೆಯೊಂದಿಗೆ ಹೋಲಿಸಿದಾಗ, ಅದು ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ಅಷ್ಟು ಉನ್ನತವಾದದ್ದು ಆಗಿರುತ್ತದೆ (ಯೆಶಾಯ 55: 8,9). ಪಾಪವಿಲ್ಲದ ದೇವದೂತರೂ ಸಹ ದೇವರ ಮುಖವನ್ನು ನೋಡಲಾರರು, ಅವರು ದೇವರ ಸಮ್ಮುಖದಲ್ಲಿ ತಮ್ಮ ಮುಖಗಳನ್ನು ಮುಚ್ಚಿಕೊಳ್ಳುತ್ತಾರೆ (ಯೆಶಾಯ 6:2,3). ಕ್ರಿಸ್ತನೊಬ್ಬನೇ ದೇವರನ್ನು ನೇರವಾಗಿ ದೃಷ್ಟಿಸ ಬಲ್ಲನು. ಆದುದರಿಂದ ದೇವರು ನಮ್ಮನ್ನು ಕ್ರಿಸ್ತನಲ್ಲಿ ಇರಿಸುತ್ತಾರೆ, ಹಾಗಾಗಿ ಈಗ ನಾವು ಯಾವ ಭಯವೂ ಇಲ್ಲದೆ ದೇವರ ಸನ್ನಿಧಿಗೆ ಬರಬಹುದು - ಏಕೆಂದರೆ ನಾವು ಕ್ರಿಸ್ತನಲ್ಲಿ ಇದ್ದೇವೆ.

ದೇವರು ನಮ್ಮನ್ನು ಕ್ರಿಸ್ತನಲ್ಲಿ ಇರಿಸಿ, ನಾವು ನೀತಿವಂತರೆಂದು ನಿರ್ಣಯಿಸಿ, ನಮ್ಮನ್ನು ಸ್ವತಃ ಕ್ರಿಸ್ತನಷ್ಟೇ ನೀತಿವಂತರೆಂದು ಸ್ವೀಕರಿಸುತ್ತಾರೆ. ನಾವು ಕ್ರಿಸ್ತನ ಮೂಲಕ ದೇವರ ನೀತಿವಂತಿಕೆಯನ್ನು ಹೊಂದಿರುವುದರಿಂದ, ಈಗ ಯಾವ ಅಡ್ಡಿಯೂ ಇಲ್ಲದೆ ದೇವರು ನಮ್ಮನ್ನು ಸ್ವೀಕರಿಸಿದ್ದಾರೆ - ಇದು ನಮ್ಮ ಸೌಭಾಗ್ಯವಾಗಿದೆ.

2. ಯೇಸುವು ನಮ್ಮನ್ನು ಐಶ್ವರ್ಯವಂತರಾಗಿ ಮಾಡಲು ತಾನು ಬಡವನಾದನು:

"ಆತನು ಐಶ್ವರ್ಯವಂತನಾಗಿದ್ದು, ತಾನು ಬಡತನದಲ್ಲಿ ಸೇರುವುದರಿಂದ ನೀವು ಐಶ್ವರ್ಯವಂತರು ಆಗಬೇಕೆಂದು, ನಿಮಗೋಸ್ಕರ ಬಡವನಾದನು" (2 ಕೊರಿಂಥ. 8:9). ನಾವು ಐಶ್ವರ್ಯವಂತರು ಆಗುವುದಕ್ಕಾಗಿ ಯೇಸುವು ಶಿಲುಬೆಯ ಮೇಲೆ ಬಡವನಾದನು - ನಾವು "ಒಂದು ಕೊರತೆಯೂ ಇಲ್ಲದೆ" ಜೀವಿಸಬೇಕೆಂದು ಹಾಗೆ ಮಾಡಿದನು. ದೇವರ ವಾಗ್ದಾನ ನಾವು ಬಯಸಿದ ಎಲ್ಲವನ್ನೂ ಕೊಡುವುದಾಗಿ ಅಲ್ಲ, ಆದರೆ "ನಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವದಾಗಿ" ಆಗಿದೆ (ಫಿಲಿಪ್ಪಿ. 4:19). ಜ್ಞಾನಿಗಳಾದ ತಂದೆತಾಯಂದಿರು ತಮ್ಮ ಮಕ್ಕಳು ಬಯಸಿದ ಪ್ರತಿಯೊಂದನ್ನೂ ಅವರಿಗೆ ಕೊಡುವದಿಲ್ಲ, ಆದರೆ ಅವರಿಗೆ ಅವಶ್ಯವಾಗಿರುವ ಎಲ್ಲವನ್ನು ಕೊಡುತ್ತಾರೆ. ದೇವರು ಸಹ ಹಾಗೆಯೇ. ಹಳೆಯ ಒಡಂಬಡಿಕೆಯು, ಧರ್ಮಶಾಸ್ತ್ರವನ್ನು ಪಾಲಿಸಿವರಿಗೆ ಲೌಕಿಕ ಸಂಪತ್ತಿನ ವಾಗ್ದಾನ ನೀಡಿತು. ಆದರೆ ಹೊಸ ಒಡಂಬಡಿಕೆಯಲ್ಲಿ, ನಾವು ಮೊದಲು ದೇವರ ರಾಜ್ಯಕ್ಕಾಗಿಯೂನೀತಿಗಾಗಿಯೂ ತವಕಿಸಿದರೆ, ದೇವರು ನಮಗೆ ಇನ್ನೂ ಶ್ರೇಷ್ಠವಾದದ್ದನ್ನು ವಾಗ್ದಾನ ಮಾಡಿದ್ದಾರೆ: ಭೂಲೋಕದ ಜೀವಿತದಲ್ಲಿ ನಮ್ಮ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವುದಾಗಿ ಹೇಳಿದ್ದಾರೆ (ಮತ್ತಾಯ. 6:33; ಹಾಗೂ 2 ಪೇತ್ರ. 1:4 ನೋಡಿರಿ).

ನಾವು ಧನಿಕರಾಗಬೇಕೆಂಬ ಉದ್ದೇಶದಿಂದ ಯೇಸುವು ಬಡವನಾದನು. ಹಾಗಾಗಿ ನಾವು ಕೊರತೆಯ ಜೀವಿತ ಜೀವಿಸಬೇಕಿಲ್ಲ. ನಾವು ನಮಗಾಗಿ ಅಥವಾ ನಮ್ಮ ಮಕ್ಕಳಿಗಾಗಿ - ನಮ್ಮ ಮುಂದಿನ ಭವಿಷ್ಯದ ಬಗ್ಗೆ - ಹೆದರುವದು ಬೇಡ. ಯೇಸುವು - ಶಿಲುಬೆಯ ಮೇಲೆ - ನಮಗೆ ಮತ್ತು ನಮ್ಮ ಕುಟುಂಬಕ್ಕೆ ಲೌಕಿಕವಾಗಿ ಬೇಕಾಗುವ ಎಲ್ಲಾ ಪದಾರ್ಥಗಳನ್ನು ಕೊಂಡುಕೊಂಡಿದ್ದಾರೆ. ಹಾಗಾಗಿ ಪ್ರಿಯ ಸಹೋದರ ಮತ್ತು ಸಹೋದರಿ, ನಿಮ್ಮ ಎಲ್ಲಾ ಕಳವಳವನ್ನು ಬಿಟ್ಟುಬಿಡಿ. ಯೇಸುವು ನಿಮಗಾಗಿ ಈಗಾಗಲೇ ಶಿಲುಬೆಯ ಮೇಲೆ ಬಡವನಾಗಿದ್ದಾನೆ. ನೀವು ಇನ್ನು ಮುಂದೆ ಜೀವಿತದಲ್ಲಿ ನಿರಂತರವಾದ ಹಣಕಾಸಿನ ತೊಂದರೆಯನ್ನು ಎದುರಿಸಬೇಕಿಲ್ಲ. ನಿಮ್ಮ ಎಲ್ಲಾ ಅವಶ್ಯಕತೆಗಳು ಯಾವಾಗಲೂ ಪೂರೈಸಲ್ಪಡುತ್ತವೆ. ಸುವಾರ್ತೆಯು ಕೊಡುವ ನಿಮ್ಮ ಜನ್ಮಸಿದ್ಧ ಹಕ್ಕನ್ನು ಕೇಳಿ ಪಡಕೊಳ್ಳಿರಿ.

3. ನಮ್ಮನ್ನು ಆಶೀರ್ವಾದ ನಿಧಿಗಳಾಗಿ ಮಾಡಲು ಯೇಸುವು ಒಂದು ಶಾಪವಾದನು:

"ಅಬ್ರಹಾಮನಿಗೆ ಉಂಟಾದ ಆಶೀರ್ವಾದವು ಕ್ರಿಸ್ತ ಯೇಸುವಿನಲ್ಲಿ (ನಮಗೆ) ಉಂಟಾಗುವಂತೆಯೂ, ದೇವರು ವಾಗ್ದಾನ ಮಾಡಿದ ಆತ್ಮನು ನಮಗೆ ನಂಬಿಕೆಯ ಮೂಲಕ ದೊರಕುವಂತೆಯೂ, ಕ್ರಿಸ್ತನು ನಮ್ಮ ನಿಮಿತ್ತ ಶಾಪವಾಗಿ, ಧರ್ಮಶಾಸ್ತ್ರದಲ್ಲಿ ಹೇಳಿರುವ ಶಾಪದೊಳಗಿಂದ ನಮ್ಮನ್ನು ಬಿಡಿಸಿದನು" (ಗಲಾತ್ಯ. 3:13,14). ಸುವಾರ್ತೆಯು ನೀಡುವ ಶುಭ ಸಂದೇಶ ಏನೆಂದರೆ, ಯೇಸುವು ಈಗಾಗಲೇ ನಮ್ಮ ನಿಮಿತ್ತ ಶಾಪವಾಗಿರುವದರಿಂದ, ಇನು ಮುಂದೆ ಧರ್ಮಶಾಸ್ತ್ರದ ಯಾವುದೇ ಶಾಪಗಳು ನಮಗೆ ಸೋಂಕುವುದಿಲ್ಲ. ಇದು ಒಂದು ಸಂತೋಷದ ಸುದ್ದಿಯಾಗಿದೆ. ಆದರೆ ಇದಕ್ಕೂ ಶ್ರೇಷ್ಠವಾದ ಇನ್ನೊಂದು ಸುದ್ದಿ ಇದೆ. ಶಾಪದ ಬದಲಾಗಿ, ಅಬ್ರಹಾಮನಿಗೆ ದೇವರು ನೀಡಿದ ಆಶೀರ್ವಾದವನ್ನು ನಾವು ಹೊಂದಬಹುದು. ಆದಿಕಾಂಡ. 12:2,3ರಲ್ಲಿ, ದೇವರು ಅಬ್ರಹಾಮನನ್ನು ಅಶೀರ್ವದಿಸಿದ್ದನ್ನು ಹೀಗೆ ವಿವರಿಸಲಾಗಿದೆ: "ನಾನು ನಿನ್ನನ್ನು ಹರಸುವೆನು ... ನೀನು ಅಶೀರ್ವಾದ ನಿಧಿಯಾಗುವಿ ... ನಿನ್ನ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದ ಉಂಟಾಗುವದು". ಯೇಸುವು ಶಿಲುಬೆಯ ಮೇಲೆ ಒಂದು ಶಾಪವಾಗಿ, ಆ ಮೂಲಕ ನಮಗಾಗಿ ಖರೀದಿ ಮಾಡಿದ ಆಶೀರ್ವಾದ ಇದಾಗಿದೆ. ಯೇಸುವು ನಮ್ಮನ್ನು ಆಶೀರ್ವದಿಸಲು ಬಯಸುತ್ತಾರೆ ಮತ್ತು ಮತ್ತು ನಮ್ಮ ಜೀವನದ ಉದ್ದಕ್ಕೂ, ಈ ಲೋಕದಲ್ಲಿ ಎಲ್ಲೆಡೆ ನಾವು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಗೂ ನಮ್ಮಿಂದ ಆಶೀರ್ವಾದ ಉಂಟುಮಾಡಲು ಬಯಸುತ್ತಾರೆ. ಈ ಸೌಭಾಗ್ಯವು (ಈ ವಚನದಲ್ಲಿ ಹೇಳಿರುವಂತೆ) ನಾವು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಾಗ ನಮಗೆ ದೊರಕುವುದು.

ಪವಿತ್ರಾತ್ಮನ ಬಗ್ಗೆ ಯೇಸುವು ಹೀಗೆ ವಿವರಣೆ ನೀಡಿದರು - ಪವಿತ್ರಾತ್ಮನು ನಮ್ಮ ಒಳಗಿನಿಂದ ಉಕ್ಕುವ ಒರತೆಯಾಗಿದ್ದು, ಆತನು "ನಿತ್ಯಜೀವದ ಆಶೀರ್ವಾದವನ್ನು ಉಂಟುಮಾಡುವನು" (ಯೋಹಾನ 4:14), ಮತ್ತು ಅದರ ನಂತರ, ಆತನು ಜೀವಕರ ನೀರಿನ ಹೊಳೆಗಳಾಗಿ ನಮ್ಮ ಮೂಲಕ ಹರಿದು "ಇತರರರಿಗೆ ಆಶೀರ್ವಾದವನ್ನು ತರುವನು" (ಯೋಹಾನ 7:37-39). ಈ ದಿನ ಪಾಪದಲ್ಲಿ ಮತ್ತು ಸೋಲಿನಲ್ಲಿ ಜೀವಿಸುತ್ತಿರುವ ಅತಿ ಕೆಟ್ಟ ಪಾಪಿಗೂ ಸಹ ಕರ್ತನು ನೀಡುವ ವಾಗ್ದಾನ ಇದು:"ನಿಮ್ಮ ಹೆಸರು ಹೇಗೆ ಜನಾಂಗಗಳಲ್ಲಿ ಶಾಪದ ಮಾತಾಗಿ ಸಲ್ಲುತ್ತಿತ್ತೋ, ಹಾಗೆಯೇ ... (ಇನ್ನು ಮುಂದೆ) ನಿಮ್ಮ ಹೆಸರು ಹರಕೆಯ ಮಾತಾಗಲು ಸಾಧ್ಯವಿದೆ, ಹೆದರಬೇಡಿರಿ" (ಜೆಕರ್ಯ 8:13). ನಾವು ಈ ಲೋಕದಲ್ಲಿ ಭೇಟಿ ಮಾಡುವ ಪ್ರತಿಯೊಂದು ಕುಟುಂಬಕ್ಕೆ ನಾವು ಆಶೀರ್ವಾದವನ್ನು ತರಬೇಕು, ಎನ್ನುವದು ದೇವರ ಚಿತ್ತವಾಗಿದೆ.