WFTW Body: 

1. ದೇವರು ಯೇಸುವನ್ನು ಪ್ರೀತಿಸಿದ ಹಾಗೆಯೇ ನಮ್ಮನ್ನೂ ಪ್ರೀತಿಸುತ್ತಾರೆ

"ನೀನು ನನ್ನನ್ನು ಪ್ರೀತಿಸಿದಂತೆ ಅವರನ್ನೂ ಪ್ರೀತಿಸಿದ್ದೀ" (ಯೋಹಾ. 17:23). ಸತ್ಯವೇದದಲ್ಲಿ ನಾನು ಕಂಡುಕೊಂಡಿರುವ ಅತ್ಯಂತ ಶ್ರೇಷ್ಠವಾದ ಸತ್ಯಾಂಶ ಇದಾಗಿದೆ. ಇದು ನನ್ನನ್ನು ಒಬ್ಬ ಭರವಸೆಯಿಲ್ಲದ ಮತ್ತು ಮಂಕಾದ ವಿಶ್ವಾಸಿಯಿಂದ ದೇವರಲ್ಲಿ ಸಂಪೂರ್ಣ ಭದ್ರತೆಯನ್ನು ಹೊಂದಿರುವ ಮತ್ತು - ಯಾವಾಗಲೂ - ಕರ್ತನಲ್ಲಿ ಆನಂದಿಸುವ ವ್ಯಕ್ತಿಯನ್ನಾಗಿ ಮಾರ್ಪಡಿಸಿದೆ. ದೇವರು ನಮ್ಮನ್ನು ಪ್ರೀತಿಸುತ್ತಾರೆಂದು ಸತ್ಯವೇದದ ಹಲವಾರು ವಚನಗಳು ನಮಗೆ ತಿಳಿಸುತ್ತವೆ, ಆದರೆ ಕೇವಲ ಈ ಒಂದು ವಚನ ದೇವರ ಪ್ರೀತಿಯ ಗಾತ್ರ ಎಷ್ಟೆಂದು ನಮಗೆ ತೋರಿಸುತ್ತದೆ - "ಅವರು ಯೇಸುವನ್ನು ಎಷ್ಟು ಪ್ರೀತಿಸುತ್ತಾರೋ, ಅಷ್ಟು". ಪರಲೋಕದಲ್ಲಿರುವ ನಮ್ಮ ತಂದೆಯು ಪಕ್ಷಪಾತವಿಲ್ಲದೆ ತನ್ನ ಪ್ರತಿಯೊಬ್ಬ ಮಗನನ್ನೂ ಪ್ರೀತಿಸುವುದರಿಂದ, ಅವರು ನಿಶ್ಚಯವಾಗಿ ತನ್ನ ಚೊಚ್ಚಲ ಮಗನಾದ ಯೇಸುವಿಗಾಗಿ ಮಾಡಿದ ಎಲ್ಲವನ್ನೂ ಅವರ ಪುತ್ರರಾದ ನಮಗಾಗಿ ಮಾಡಲು ಸಿದ್ಧರಾಗಿದ್ದಾರೆ. ಅವರು ಯೇಸುವಿಗೆ ಸಹಾಯವನ್ನು ಒದಗಿಸಿದ ಹಾಗೆಯೇ ನಮಗೂ ಸಹಾಯವನ್ನು ನೀಡುತ್ತಾರೆ. ಅವರು ಯೇಸುವನ್ನು ನೋಡಿಕೊಂಡಂತೆಯೇ ನಮ್ಮನ್ನು ಸಹ ನೋಡಿಕೊಳ್ಳುತ್ತಾರೆ. ಅವರು ಯೇಸುವಿನ ಪ್ರತಿದಿನದ ಕಾರ್ಯಕ್ರಮವನ್ನು ಯೋಜಿಸುವುದರಲ್ಲಿ ಆಸಕ್ತಿ ವಹಿಸಿದಂತೆಯೇ ನಮ್ಮ ದಿನನಿತ್ಯದ ಕಾರ್ಯಗಳನ್ನು ನಿಯೋಜಿಸುತ್ತಾರೆ. ನಮ್ಮನ್ನು ಎದುರಿಸುವ ಯಾವುದೇ ಪರಿಸ್ಥಿತಿಯೂ ಸಹ ದೇವರಿಗೆ ತಿಳಿಯದಂತೆ ಜರಗುವುದಿಲ್ಲ. ನಮಗೆ ಯಾವ ಅನಿರೀಕ್ಷಿತ ಪ್ರಸಂಗ ಸಂಭವಿಸಿದರೂ, ಅವರು ಅದಕ್ಕಾಗಿ ಬೇಕಾಗುವ ಸಿದ್ಧತೆಯನ್ನು ಮೊದಲೇ ಮಾಡಿರುತ್ತಾರೆ. ಹಾಗಾಗಿ ಇನ್ನು ಮುಂದೆ ನಾವು ಅಭದ್ರತೆಯ ಭಾವನೆಯನ್ನು ಇರಿಸಿಕೊಳ್ಳುವ ಅವಶ್ಯಕತೆಯಿಲ್ಲ. ಯೇಸುವು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಭೂಮಿಗೆ ಕಳುಹಿಸಲ್ಪಟ್ಟಂತೆಯೇ ನಾವು ಸಹ ಕಳುಹಿಸಲ್ಪಟ್ಟಿದ್ದೇವೆ. ಇವೆಲ್ಲಾ ಸಂಗತಿಗಳು ನಿಮಗೂ ಸಹ ವೈಯಕ್ತಿಕವಾಗಿ ಅನ್ವಯಿಸುತ್ತವೆ - ಆದರೆ ಇದನ್ನು ನೀವು ನಂಬಿದರೆ ಮಾತ್ರ ಹಾಗಾಗುತ್ತದೆ. ದೇವರ ವಾಕ್ಯವನ್ನು ನಂಬದೇ ಇರುವವನಿಗೆ ಯಾವುದೂ ನಡೆಯುವುದಿಲ್ಲ.

2. ದೇವರು ಯಥಾರ್ಥರಾದ ಜನರಲ್ಲಿ ಹರ್ಷಿಸುತ್ತಾರೆ

"ಆತನು ಬೆಳಕಿನಲ್ಲಿ ಇರುವಂತೆಯೇ ನಾವು ಬೆಳಕಿನಲ್ಲಿ ನಡೆದರೆ, ನಾವು ಒಬ್ಬರ ಸಂಗಡ ಒಬ್ಬರು ಅನ್ಯೋನ್ಯತೆಯಲ್ಲಿ ಇರುತ್ತೇವೆ" (1 ಯೋಹಾ.1:7). ’ಬೆಳಕಿನಲ್ಲಿ ನಡೆಯುವುದು’ ಎಂಬ ಹೇಳಿಕೆಯ ಅರ್ಥ, ಮೊದಲನೆಯದಾಗಿ ನಾವು ದೇವರಿಂದ ಯಾವುದನ್ನೂ ಮರೆಮಾಚದೇ ಇರುವುದು. ನಾವು ಅವರಿಗೆ ಎಲ್ಲವನ್ನೂ ಇದ್ದುದನ್ನು ಇದ್ದಂತೆಯೇ ತಿಳಿಸುತ್ತೇವೆ. ದೇವರ ಬಳಿಗೆ ಬರುವುದಕ್ಕೆ ಅವಶ್ಯವಾದ ಮೊದಲ ಹೆಜ್ಜೆ ಪ್ರಾಮಾಣಿಕತೆಯೆಂದು ನನಗೆ ಮನದಟ್ಟಾಗಿದೆ. ದೇವರು ಕಪಟಿಗಳನ್ನು ತಿರಸ್ಕರಿಸುತ್ತಾರೆ. ಯೇಸುವು ಇತರ ಎಲ್ಲಾ ಜನರಿಗಿಂತ ಹೆಚ್ಚಾಗಿ ತೋರಿಕೆಯ ವೇಷ ಹಾಕುವ ಜನರನ್ನು ಖಂಡಿಸಿದರು. ದೇವರು, ಆರಂಭದಲ್ಲಿ ನಾವು ಪರಿಶುದ್ಧರು ಅಥವಾ ಪರಿಪೂರ್ಣರು ಆಗಿರಬೇಕೆಂದು ಬಯಸುವುದಿಲ್ಲ, ಆದರೆ ನಾವು ಪ್ರಾಮಾಣಿಕರಾಗಿರುವುದನ್ನು ಬಯಸುತ್ತಾರೆ. ಇಲ್ಲಿಂದಲೇ ನಿಜವಾದ ಪರಿಶುದ್ಧತೆಯು ಆರಂಭವಾಗುತ್ತದೆ. ಈ ಬುಗ್ಗೆಯಿಂದ ಬೇರೆಲ್ಲವೂ ಚಿಮ್ಮುತ್ತವೆ. ಅದಲ್ಲದೆ ಯಾರೇ ಆದರೂ ಬಹಳ ಸುಲಭವಾಗಿ ಮಾಡಬಹುದಾದ ಒಂದು ಕಾರ್ಯವೆಂದರೆ, ಪ್ರಾಮಾಣಿಕತೆಯಿಂದ ನಡೆದುಕೊಳ್ಳುವುದಾಗಿದೆ. ಹಾಗಾಗಿ, ಪಾಪವನ್ನು ತಕ್ಷಣವೇ ದೇವರಿಗೆ ಅರಿಕೆಮಾಡಿರಿ. ಪಾಪದ ಆಲೋಚನೆಗಳಿಗೆ "ಸಭ್ಯತೆಯ" ಬಣ್ಣ ಬಳಿಯಬೇಡಿರಿ. ನಿಮ್ಮ ಕಣ್ಣುಗಳಲ್ಲಿ ಇರುವ ಕಾಮುಕತೆಯ ದೃಷ್ಟಿಗೆ,"ನಾನು ದೇವರ ಸೃಷ್ಟಿಯನ್ನು ನೋಡಿ ಸವಿಯುತ್ತಿದ್ದೆ" ಎಂಬ ವಿವರಣೆಯನ್ನು ಕೊಡಬೇಡಿರಿ. "ಕೋಪ"ವನ್ನು "ನ್ಯಾಯವಾದ ಕೋಪ" ಎಂದು ಕರೆಯಬೇಡಿರಿ. ನಿಮ್ಮಲ್ಲಿ ಪ್ರಾಮಾಣಿಕತೆ ಇಲ್ಲದಿದ್ದರೆ, ನಿಮಗೆ ಎಂದಿಗೂ ಪಾಪದ ವಿರುದ್ಧ ಜಯ ದೊರಕುವುದಿಲ್ಲ. ಮತ್ತು "ಪಾಪವನ್ನು" "ಒಂದು ತಪ್ಪು ಕೆಲಸ" ಎಂಬುದಾಗಿ ಎಂದಿಗೂ ವಿವರಿಸಬೇಡಿರಿ, ಏಕೆಂದರೆ ಯೇಸುವಿನ ರಕ್ತವು ಸಕಲ ಪಾಪವನ್ನು ನಿವಾರಣೆ ಮಾಡುತ್ತದೆ, ಆದರೆ ಅದು ನಿಮ್ಮ ’ತಪ್ಪು ಕೆಲಸಗಳನ್ನು’ ಶುದ್ಧೀಕರಿಸುವುದಿಲ್ಲ!! ಪ್ರಾಮಾಣಿಕತೆಯಿಲ್ಲದ ಜನರನ್ನು ಯೇಸುವು ಶುದ್ಧೀಕರಿಸುವುದಿಲ್ಲ. ಯಥಾರ್ಥ ಜನರಿಗೆ ಮಾತ್ರ ಪಾಪ ನಿವಾರಣೆಯ ನಿರೀಕ್ಷೆ ಇರುತ್ತದೆ. "ದೋಷವನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು" (ಜ್ಞಾ. 28:13). ಕಳ್ಳರು ಮತ್ತು ಸೂಳೆಯರು ದೇವರ ರಾಜ್ಯವನ್ನು ಸೇರುವುದಕ್ಕೆ ಧಾರ್ಮಿಕ ನಾಯಕರಿಗಿಂತ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆಂದು ಯೇಸುವು ಹೇಳಲು ಕಾರಣವೇನು (ಮತ್ತಾ. 21:31)? ಕಾರಣವೇನೆಂದರೆ, ಕಳ್ಳರು ಮತ್ತು ಸೂಳೆಯರು ಪರಿಶುದ್ಧತೆಯ ವೇಷ ಹಾಕುವುದಿಲ್ಲ. ಅನೇಕ ಯೌವನಸ್ಥರು ಕ್ರೈಸ್ತಸಭೆಗಳಿಂದ ದೂರ ಸರಿಯಲು ಕಾರಣ, ಸಭೆಯ ಸದಸ್ಯರು ಅವರ ಮುಂದೆ ತಾವು ಪಾಪದ ವಿರುದ್ಧ ಬಹಳ ಸಲೀಸಾಗಿ ಹೋರಾಡಿ ಜಯಿಸಿರುವ ತೋರಿಕೆ ಮಾಡುತ್ತಾರೆ. ಹಾಗಾಗಿ ಆ ಯೌವನಸ್ಥರು, "ಈ ಮಡಿವಂತ ಕ್ರೈಸ್ತರ ಗುಂಪು ನಮ್ಮ ಸಮಸ್ಯೆಗಳನ್ನು ಎಂದಿಗೂ ಅರ್ಥ ಮಾಡಿಕೊಳ್ಳಲಾರದು," ಎಂದುಕೊಳ್ಳುತ್ತಾರೆ!! ನಾವು ಇಂಥವರಾಗಿದ್ದರೆ, ಆಗ ನಾವು ಪಾಪಿಗಳನ್ನು ತನ್ನೆಡೆಗೆ ಬರಮಾಡಿದ ಕ್ರಿಸ್ತನಂತೆ ಇಲ್ಲ.

3. ದೇವರು ಸಂತೋಷವಾಗಿ ಕೊಡುವವನನ್ನು ನೋಡಿ ಹರ್ಷಿಸುತ್ತಾರೆ

"ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು"(2 ಕೊರಿ. 9:7). ಈ ಕಾರಣಕ್ಕಾಗಿ ದೇವರು ಮನುಷ್ಯನಿಗೆ - ಮಾನಸಾಂತರದ ಮೊದಲು ಮತ್ತು ಅದರ ನಂತರ, ಮತ್ತು ಪವಿತ್ರಾತ್ಮನಿಂದ ತುಂಬಲ್ಪಟ್ಟ ಮೇಲೆ - ಸಂಪೂರ್ಣ ಸ್ವಾತಂತ್ರ್ಯವನ್ನು ಕೊಡುತ್ತಾರೆ. ನಾವು ದೇವರ ಹಾಗಿದ್ದರೆ, ನಾವು ಸಹ ಇತರರನ್ನು ನಿಯಂತ್ರಿಸಲು ಅಥವಾ ಅವರ ಮೇಲೆ ಒತ್ತಡವನ್ನು ಹೇರಲು ಪ್ರಯತ್ನಿಸುವುದಿಲ್ಲ. ನಾವು ಅವರಿಗೆ ನಮಗಿಂತ ವಿಭಿನ್ನರಾಗಿರುವ ಸ್ವಾತಂತ್ರ್ಯವನ್ನು ನೀಡುತ್ತೇವೆ, ಮತ್ತು ನಮ್ಮ ದೃಷ್ಟಿಕೋನಕ್ಕಿಂತ ವಿಭಿನ್ನವಾದ ದೃಷ್ಟಿಕೋನವನ್ನು ಇರಿಸಿಕೊಳ್ಳಲು ಮತ್ತು ತಮ್ಮದೇ ಆದ ಗತಿಯಲ್ಲಿ ಆತ್ಮಿಕ ಬೆಳವಣಿಗೆ ಹೊಂದಲು ಅವಕಾಶವನ್ನು ಕೊಡುತ್ತೇವೆ. ಯಾವುದೇ ವಿಧವಾದ ಒತ್ತಾಯವು ಪಿಶಾಚನಿಂದ ಬರುತ್ತದೆ. ಪವಿತ್ರಾತ್ಮನು ಜನರನ್ನು ತುಂಬುತ್ತಾನೆ, ಆದರೆ ಪಿಶಾಚನು ಜನರನ್ನು ವಶಪಡಿಸಿಕೊಳ್ಳುತ್ತಾನೆ. ಎರಡರ ನಡುವಿನ ವ್ಯತ್ಯಾಸ ಇಷ್ಟೇ: ಪವಿತ್ರಾತ್ಮನು ಯಾರನ್ನಾದರೂ ತುಂಬಿಸಿದರೆ, ಆಗಲೂ ಅವರಿಗೆ ತಮ್ಮ ಇಷ್ಟದ ಪ್ರಕಾರ ನಡೆಯುವ ಸ್ವಾತಂತ್ರ್ಯವನ್ನು ಪವಿತ್ರಾತ್ಮನು ಕೊಡುತ್ತಾನೆ. ಆದರೆ ದೆವ್ವಗಳು ತಾವು ಹಿಡಿದ ಜನರಿಂದ ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತವೆ ಮತ್ತು ಅವರನ್ನು ತಮ್ಮ ಹತೋಟಿಯಲ್ಲಿ ಇರಿಸಿಕೊಳ್ಳುತ್ತವೆ. ದೇವರಾತ್ಮನಿಂದ ತುಂಬಲ್ಪಡುವುದರ ಫಲ ಆತ್ಮಸಂಯಮ ಅಥವಾ ಮನಸ್ಸಿನ ಹತೋಟಿಯಾಗಿದೆ (ಗಲಾ. 5:22,23). ಆದರೆ ದೆವ್ವ ಹಿಡಿದಾಗ ಮನಸ್ಸಿನ ಹತೋಟಿಯು ತಪ್ಪಿಹೋಗುತ್ತದೆ. ನಾವು ಜ್ಞಾಪಕ ಇಡಬೇಕಾದದ್ದು ಏನೆಂದರೆ, ನಾವು ದೇವರಿಗಾಗಿ ಮಾಡುವ ಯಾವುದೇ ಕಾರ್ಯವನ್ನು ಉಲ್ಲಾಸದಿಂದ, ಸಂತೋಷವಾಗಿ, ಮುಕ್ತಭಾವದಿಂದ ಮತ್ತು ಸ್ವೇಚ್ಛಾಪೂರ್ವಕವಾಗಿ ಮಾಡದಿದ್ದಲ್ಲಿ, ಅದು ಒಂದು ನಿರ್ಜೀವ ಕರ್ಮವಾಗುತ್ತದೆ. ದೇವರಿಗಾಗಿ ಯಾವುದೇ ಕಾರ್ಯವನ್ನು ಒಂದು ಪ್ರತಿಫಲಕ್ಕಾಗಿ ಅಥವಾ ಒಂದು ಸಂಭಾವನೆಗಾಗಿ ಮಾಡುವುದು ಸಹ ಒಂದು ನಿರ್ಜೀವ ಕರ್ಮವಾಗಿದೆ. ದೇವರ ದೃಷ್ಟಿಯಲ್ಲಿ, ಇತರರ ಒತ್ತಡದಿಂದ ದೇವರಿಗೆ ಹಣವನ್ನು ಕೊಡುವುದು ಯಾವುದೇ ಪ್ರಯೋಜನವಿಲ್ಲದ್ದು ಆಗಿರುತ್ತದೆ!! ಬೇರೆಯವರ ಬಲವಂತದಿಂದ ದೇವರಿಗಾಗಿ ಮಾಡಿದ ಬಹಳ ದೊಡ್ಡ ಕಾರ್ಯಕ್ಕಿಂತ, ಅಥವಾ ಮನಃಸಾಕ್ಷಿ ಪೀಡಿಸಿದ್ದಕ್ಕಾಗಿ ಮಾಡಿದ ಕಾರ್ಯಕ್ಕಿಂತ ಹೆಚ್ಚಾಗಿ, ಉಲ್ಲಾಸಭರಿತವಾಗಿ ದೇವರಿಗಾಗಿ ಕೇವಲ ಸಣ್ಣ ಕೆಲಸವನ್ನು ಮಾಡಿದರೂ ಸಹ, ಅದು ದೇವರ ದೃಷ್ಟಿಯಲ್ಲಿ ಹೆಚ್ಚಿನ ಬೆಲೆ ಉಳ್ಳದ್ದಾಗಿದೆ.