WFTW Body: 
1. ಮಧ್ಯಸ್ಥಿಕೆಯ ಪ್ರಾರ್ಥನೆಯ ಸೇವೆ

’ಜೆಕರ್ಯನು 3:1'ರಲ್ಲಿ, ಮಹಾಯಾಜಕನಾದ ಯೆಹೋಶುವನು ಕರ್ತನ ಮುಂದೆ ನಿಂತಿರುವುದನ್ನು ಮತ್ತು ಅಲ್ಲಿ ಸೈತಾನನು ಯೆಹೋಶುವನ ಮೇಲೆ ದೂರು ಹೇಳಲು ನಿಂತಿರುವುದನ್ನು ನಾವು ನೋಡುತ್ತೇವೆ. ಸೈತಾನನು ಯಾವಾಗಲೂ ಮುಖಂಡರ ಮೇಲೆ ತಪ್ಪು ಹೊರಿಸಿ ಅವರಿಗೆ ಕೇಡು ಮಾಡಲು ಯತ್ನಿಸುತ್ತಾನೆ. ಅವನು ಅವರನ್ನು ಮತ್ತು ಅವರ ಹೆಂಡತಿ ಮಕ್ಕಳನ್ನು ಗುರಿ ಮಾಡಿಕೊಳ್ಳುತ್ತಾನೆ. ಒಬ್ಬ ಮುಖಂಡ ಅಥವಾ ಸಭಾನಾಯಕನನ್ನು ಕಠಿಣವಾಗಿ ನ್ಯಾಯತೀರ್ಪು ಮಾಡಬೇಡಿರಿ, ಏಕೆಂದರೆ ಸೈತಾನನ ಗಮನ ನಿಮ್ಮ ಮೇಲೆ ಇರುವುದಕ್ಕಿಂತ ಹೆಚ್ಚಾಗಿ ಅವನ ಮೇಲೆ ಇದೆ. ಅವನ ಪತ್ನಿ ಮತ್ತು ಮಕ್ಕಳು, ನಿಮ್ಮ ಪತ್ನಿ ಮತ್ತು ಮಕ್ಕಳಿಗಿಂತ ಹೆಚ್ಚಾಗಿ ಸೈತಾನನ ಗುರಿಗಳಾಗಿದ್ದಾರೆ. ಸೈತಾನನು ಅಲ್ಲಿ ಯೆಹೋಶುವನ ವಿರುದ್ಧ ದೂರುಗಾರನಾಗಿ ನಿಂತಿದ್ದನು. ಆದರೆ ಕರ್ತನು ಆತನಿಗೆ ಹೀಗೆ ಉತ್ತರಿಸಿದನು - "ಕರ್ತನಾದ ನಾನು ನಿನ್ನ ದೂರುಗಳನ್ನು ತಳ್ಳಿಹಾಕುತ್ತೇನೆ" (ಜೆಕ. 3:2). ತಂದೆಯ ಬಳಿಯಲ್ಲಿ, ನೀತಿವಂತನಾದ ಯೇಸು ಕ್ರಿಸ್ತನೆಂಬ ಮಧ್ಯಸ್ಥನು ನಮಗಾಗಿ ಇದ್ದಾನೆ. ನಾವು ಕೆಲವೊಮ್ಮೆ ದೂರುಗಾರನ ಮೇಲೆಯೇ ನಮ್ಮ ಗಮನ ಇರಿಸುತ್ತೇವೆ ಮತ್ತು ನಮಗಾಗಿ ನಮ್ಮ ಮಧ್ಯಸ್ಥನು ಮಾಡುತ್ತಿರುವ ವಿಜ್ಞಾಪನೆಯನ್ನು ಸಂಪೂರ್ಣವಾಗಿ ಮರೆತುಬಿಡುತ್ತೇವೆ.

ಈ ಸಮಯದಲ್ಲಿ ಪರಲೋಕದಲ್ಲಿ ಎರಡು ವಿಧವಾದ "ಊಳಿಗ"ಗಳು ("ಸೇವೆ"ಗಳು) ನಡೆಯುತ್ತಿವೆ. ಒಂದು ಸೈತಾನನದ್ದು, ದೂಷಣೆ ಮಾಡುವಂತದ್ದು. ಆತನು ಯೋಬ ಮತ್ತು ಯೆಹೋಶುವರನ್ನು ದೂಷಿಸಿದನು. ಇದೇ ವೇಳೆಯಲ್ಲಿ, ಪರಲೋಕದಲ್ಲಿ ಇನ್ನೊಂದು ಸೇವೆಯೂ ನಡೆಯುತ್ತಿದೆ. "ಯೇಸುವು ಯಾವಾಗಲೂ ನಮಗೋಸ್ಕರ ವಿಜ್ಞಾಪನೆ ಮಾಡುವದಕ್ಕೆ ಜೀವಿಸಿದ್ದಾನೆ" (ಇಬ್ರಿ. 7:25). ಇವೆರಡರಲ್ಲಿ, ಒಂದು "ದೂಷಣೆಯ ಊಳಿಗ" ಮತ್ತು ಇನ್ನೊಂದು "ಮಧ್ಯಸ್ಥಿಕೆಯ ಪ್ರಾರ್ಥನೆಯ ಸೇವೆ" ಆಗಿದೆ. ಸೈತಾನನೊಂದಿಗೆ ಅನ್ಯೋನ್ಯತೆ ಹೊಂದಿರುವಂತವರು ಇತರ ವಿಶ್ವಾಸಿಗಳನ್ನು ದೂಷಿಸುತ್ತಾರೆ. ನೀವು ಪ್ರತೀ ಸಲ ಇನ್ನೊಬ್ಬ ವಿಶ್ವಾಸಿಯ ಬಗ್ಗೆ ಚಾಡಿ ಹೇಳುವಾಗ ಅಥವಾ ಕೆಟ್ಟದಾಗಿ ಮಾತಾಡುವಾಗ, ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ, ನೀವು ಸೈತಾನನ ಜೊತೆಗೆ ಧ್ವನಿಗೂಡಿಸಿ, "ಸೈತಾನನೇ, ನಾನು ನಿನ್ನ ಮಾತನ್ನು ಒಪ್ಪಿಕೊಳ್ಳುತ್ತೇನೆ. ಆ ಮನುಷ್ಯ ಅಂಥವನೇ ಆಗಿದ್ದಾನೆ," ಎಂದು ಹೇಳುತ್ತಿದ್ದೀರಿ. ಮತ್ತು ಪ್ರತೀ ಸಲ ನೀವು ಒಬ್ಬ ಬಲಹೀನ ಸಹೋದರನಿಗಾಗಿ ಪ್ರಾರ್ಥಿಸುವಾಗ, ನೀವು ಯೇಸುವಿನ ಜೊತೆಗೆ ಧ್ವನಿಗೂಡಿಸಿ, "ಕರ್ತನೇ, ನಾನು ನಿನ್ನ ಮಾತನ್ನು ಒಪ್ಪಿಕೊಳ್ಳುತ್ತೇನೆ. ಆ ಸಹೋದರನಿಗಾಗಿ ನಾವು ಪ್ರಾರ್ಥಿಸಬೇಕು ಮತ್ತು ಅವನನ್ನು ಆ ಸಮಸ್ಯೆಯಿಂದ ತಪ್ಪಿಸಬೇಕು," ಎಂದು ಹೇಳುತ್ತಿದ್ದೀರಿ.

2. ಉತ್ತೇಜಕ ಸೇವೆ

ನಿರುತ್ಸಾಹದಿಂದ ಬಳಲುತ್ತಿರುವ ಜನರನ್ನು ಪ್ರೋತ್ಸಾಹಿಸುವ ಆಶೀರ್ವದಿತ ಸೇವೆ ಜೆಕರ್ಯನದಾಗಿತ್ತು. ಬಾಬೆಲಿನಿಂದ ಈಗ ತಾನೇ ಹಿಂದಿರುಗಿದ್ದ ಯೆಹೂದ್ಯರು, ಆ ದೇಶದಲ್ಲಿ ತಮ್ಮ ಪಿತೃಗಳು ಗುಲಾಮರಾಗಿದ್ದರಿಂದ ಬಡತನ, ಭಯ ಮತ್ತು ನಿರುತ್ಸಾಹಗಳಿಂದ ಪೀಡಿತರಾಗಿದ್ದರು. ಅದು ಸೋತುಹೋಗಿದ್ದ ಜನರ ಒಂದು ಗುಂಪಾಗಿತ್ತು. 200 ವರ್ಷಗಳ ಹಿಂದೆ ಅವರ ಹಿರಿಯರಲ್ಲಿದ್ದ ನಯ-ವಿನಯದ ನಡೆ-ನುಡಿಯಾಗಲೀ, ಆಸ್ತಿ-ಸಂಪತ್ತಾಗಲೀ ಅವರಲ್ಲಿ ಇರಲಿಲ್ಲ. ಜೆಕರ್ಯನು ಅವರನ್ನು ಹುರಿದುಂಬಿಸಲು ಕರೆಯಲ್ಪಟ್ಟಿದ್ದನು. ’ಜೆಕ. 8:6,8'ರಲ್ಲಿ, ಕರ್ತನು ಅವರನ್ನು ಈ ಮಾತುಗಳಿಂದ ಹುರಿದುಂಬಿಸುತ್ತಾನೆ: "ಈಗಿನ ಕಾಲದ ಸ್ಥಿತಿಯು ಈ ಪುಟ್ಟ ಜನಶೇಷದವರ ದೃಷ್ಟಿಗೆ ಅತ್ಯಾಶ್ಚರ್ಯವಾದರೂ, ನನ್ನ ದೃಷ್ಟಿಗೆ ಅತ್ಯಾಶ್ಚರ್ಯವೋ? ನಾನು ಸರ್ವಶಕ್ತನಾದ ದೇವರಾಗಿದ್ದೇನೆ. ನಾನು ನನ್ನ ಜನರನ್ನು ಮತ್ತೊಮ್ಮೆ ಯೆರೂಸಲೇಮಿನಲ್ಲಿ (ದೇವಸಭೆಯಲ್ಲಿ) ವಾಸಿಸಲಿಕ್ಕಾಗಿ ಬರಗೊಳಿಸುವೆನು. ಅವರು ನನ್ನ ಪ್ರಜೆಗಳಾಗಿರುವರು, ಮತ್ತು ನಾನು ಅವರಿಗೆ ನಂಬಿಗಸ್ತನಾದ ದೇವರಾಗಿರುವೆನು." ಹಾಗಾಗಿ ಅವರ ಸಭೆಯು ದೋಷರಹಿತವಾಗಿ ಅಭಿವೃದ್ಧಿಗೊಳ್ಳುವ ವರೆಗೆ, ನಾವು ಹೃದಯವನ್ನು ಬಲಪಡಿಸಿಕೊಂಡು ದುಡಿಯಬೇಕೆಂದು ದೇವರು ನಮಗೆ ಹೇಳುತ್ತಾರೆ. "ಹಾಗಾಗಿ ದೇವಾಲಯವನ್ನು (ದೇವಸಭೆಯನ್ನು) ಕಟ್ಟುವ ಕಾರ್ಯದಲ್ಲಿ ಶತ್ರುಗಳ ಭಯವಿಲ್ಲದೆ, ನಿರಾಶೆಗೊಳ್ಳದೆ, ಅದನ್ನು ಕಟ್ಟುತ್ತಾ ಮುಂದುವರೆಯಿರಿ" (ಜೆಕ. 8:9-13) . ಈ ಪ್ರೋತ್ಸಾಹಕ ನುಡಿಗಳು ಜೆಕರ್ಯನ ದಿನದಲ್ಲಿ ಜನರಲ್ಲಿ ಉಲ್ಲಾಸವನ್ನು ತುಂಬಿ, ಅವರು ದೇವಾಲಯವನ್ನು ಕಟ್ಟಲು ಶ್ರಮಿಸುವಂತೆ ಅವರನ್ನು ಬಲಪಡಿಸಿತು. ಹಾಗೆಯೇ ಈ ದಿನವೂ ಪ್ರೋತ್ಸಾಹಕ ಮಾತುಗಳು ಜನರು ಸಭೆಯನ್ನು ಕಟ್ಟಲು ಹೆಚ್ಚು ಶ್ರಮಿಸುವಂತೆ ಅವರನ್ನು ಬಲಪಡಿಸುತ್ತವೆ.

3. ಇತರರಲ್ಲಿ ಸಮತೋಲನವನ್ನು ಉಂಟುಮಾಡುವ ಸೇವೆ

’ಜೆಕ. 4:1-14'ರ "ಎರಡು ಮರಗಳ" ಚಿಹ್ನೆಯು, ಕರ್ತನು ಅಭಿಷಿಕ್ತರಾದ ದೇವಸೇವಕರ ಮೂಲಕ ತನ್ನ ಸಭೆಯನ್ನು ಯಾವಾಗಲೂ ಚೈತನ್ಯದಿಂದ ಮತ್ತು ಪವಿತ್ರಾತ್ಮನಿಂದ ತುಂಬಿಸುವುದನ್ನು ಸೂಚಿಸುತ್ತದೆ. ಅವರು ಸ್ವತಃ ದೇವರಾತ್ಮನಿಂದ ತುಂಬಲ್ಪಟ್ಟಿದ್ದಾರೆ ಮತ್ತು ಪವಿತ್ರಾತ್ಮನ ಸಾನ್ನಿಧ್ಯವನ್ನು ಯಾವಾಗಲೂ ಕಾಪಾಡಿಕೊಳ್ಳುತ್ತಾರೆ. ಪ್ರತಿ ಸಲ ನೀವು ಅವರನ್ನು ಭೇಟಿಯಾದಾಗ, ಅವರಿಂದ ಹರಿಯುವ ಪವಿತ್ರಾತ್ಮನೆಂಬ ಎಣ್ಣೆಯು ನಿಮ್ಮನ್ನು ಆಶೀರ್ವದಿಸುತ್ತದೆ. ಸಭೆಯಲ್ಲಿ ಇಂತಹ ಅನೇಕ ಸೇವಕರ ಅವಶ್ಯಕತೆ ಇದೆ. ಹಗ್ಗಾಯ ಮತ್ತು ಜೆಕರ್ಯರು ಜೊತೆಯಾಗಿ ಹೊಂದಿಕೊಂಡು ಕೆಲಸ ಮಾಡಬಲ್ಲ ಇಬ್ಬರು ವ್ಯಕ್ತಿಗಳಾಗಿದ್ದರು. ದೇವರ ಪ್ರತಿಯೊಬ್ಬ ಸೇವಕನಿಗೆ, ಆತನ ಸೇವೆಗೆ ಸಮತೋಲನ ನೀಡುವ ಇನ್ನೊಬ್ಬ ಸೇವಕನ ಸೇವೆ ಅಗತ್ಯವಾಗಿ ಬೇಕಾಗುತ್ತದೆ.

ಒಂದು ಮರವು ಒಂದು ಪಕ್ಕದಿಂದ ಎಣ್ಣೆಯನ್ನು ಹೊಯ್ಯುತ್ತದೆ ಮತ್ತು ಇನ್ನೊಂದು ಮರವು ಮತ್ತೊಂದು ಪಕ್ಕದಿಂದ ಎಣ್ಣೆಯನ್ನು ಸುರಿಯುತ್ತದೆ. ಒಬ್ಬನು ಕೃಪೆಗೆ ಪ್ರಾಧಾನ್ಯತೆ ಕೊಡುತ್ತಾನೆ ಮತ್ತು ಮತ್ತೊಬ್ಬನು ಸತ್ಯಕ್ಕೆ ಪ್ರಾಧಾನ್ಯತೆ ಕೊಡುತ್ತಾನೆ. ಆದರೆ ಅವರು ಒಟ್ಟಾಗಿ, ಕ್ರಿಸ್ತನಲ್ಲಿದ್ದ ದೇವರ ಮಹಿಮೆಯನ್ನು ಪ್ರಕಟಿಸುತ್ತಾರೆ ಮತ್ತು ದೇವಸಭೆಯೆಂಬ ದೀಪಸ್ತಂಭವು ಉಜ್ವಲವಾಗಿ ಉರಿಯುತ್ತದೆ (ಯೋಹಾ. 1:14) . ಸಭೆಯನ್ನು ಕಟ್ಟುವುದಕ್ಕಾಗಿ ಇಬ್ಬರು ಸಹೋದರರು ಹೀಗೆ ಹೊಂದಿಕೊಂಡು ಕೆಲಸ ಮಾಡಲು ಸಾಧ್ಯವಾದಾಗ - ಇಬ್ಬರೂ ಪವಿತ್ರಾತ್ಮನಿಂದ ತುಂಬಲ್ಪಟ್ಟು, ಇಬ್ಬರ ನಡುವೆ ಪೈಪೋಟಿ, ಅಸೂಯೆ, ಸ್ವೇಚ್ಛಾ ಹಂಬಲ, ಅಥವಾ ಅವನಿಗಿಂತ ತಾನು ಉತ್ತಮನೆಂದು ತೋರಿಸಿಕೊಳ್ಳುವ ಯಾವುದೇ ಹಂಬಲವಿಲ್ಲದೆ - ದೀಪಸ್ತಂಭವು ಬೆಳಕನ್ನು ನೀಡಬೇಕು ಎಂಬ ಧ್ಯೇಯವನ್ನು ಮಾತ್ರ ಇಟ್ಟುಕೊಂಡಾಗ, ಪಾತಾಳಲೋಕದ ಬಲವು ಎಂದಿಗೂ ಸೋಲಿಸಲಾರದ ಒಂದು ಸಭೆಯನ್ನು ಕಟ್ಟಲು ಅವರಿಗೆ ಸಾಧ್ಯವಾಗುತ್ತದೆ.