WFTW Body: 
  • 1. ದೇವರ ಭಯ
  • : "ಕರ್ತನ ಭಯವೇ ಜ್ಞಾನಕ್ಕೆ ಮೂಲವು (ಅಕ್ಷರಾಭ್ಯಾಸದ ಪ್ರಾರಂಭ)" (ಜ್ಞಾನೋಕ್ತಿ. 9:10). ಜ್ಞಾನದ ಪಾಠಶಾಲೆಯ ಮೊದಲನೆಯ ಪಾಠ ಇದಾಗಿದೆ. ನಾವು ಶುರುವಿನಲ್ಲಿ ಅಕ್ಷರಮಾಲೆಯನ್ನು ಕಲಿಯದೇ ಹೋದರೆ, ಮುಂದೆ ಸಾಗುವದು ಅಸಾಧ್ಯ. ಸ್ವತಃ ದೇವರು ಪಾಪವನ್ನು ದ್ವೇಷಿಸುತ್ತಾರೆ, ಮತ್ತು "ಕರ್ತನ ಭಯವು ಪಾಪದ ದ್ವೇಷವನ್ನು ಹುಟ್ಟಿಸುತ್ತದೆ" (ಜ್ಞಾನೋಕ್ತಿ. 8:13). ಪರಿಶುದ್ಧರಾದ ದೇವರು ನಮಗೆ ಪರಿಶುದ್ಧರಾಗುವ ಕರೆಯನ್ನು ನೀಡಿದಾಗ, ಆ ಕರೆಗೆ ನಾವು ಓಗೊಟ್ಟರೆ, ನಮ್ಮಲ್ಲಿ ಪಾಪದ ಬಗ್ಗೆ ದ್ವೇಷ ಉಂಟಾಗುತ್ತದೆ.

    ಅನೇಕ ವಿಶ್ವಾಸಿಗಳು ತಾವು ಇತರ ವಿಶ್ವಾಸಿಗಳ ನಡುವೆ ಇರುವ ಸಮಯದಲ್ಲಿ, ತಮಗೆ ಕೆಟ್ಟ ಹೆಸರು ಬರುತ್ತದೆಂಬ ಭಯದಿಂದ, ಕೆಲವು ಪಾಪಗಳನ್ನು (ಕೋಪ, ಲೈಂಗಿಕ ಪಾಪಗಳು, ಇತ್ಯಾದಿ) ಬಹಳ ಸಲೀಸಾಗಿ ಜಯಿಸಲು ಸಾಧ್ಯವಾಗುತ್ತದೆ. ಆದರೆ ಯಾರೂ ನೋಡದಿರುವ ಸಮಯದಲ್ಲಿ ಅವರು ಬಹಳ ಸುಲಭವಾಗಿ ಇವೇ ಪಾಪಗಳಲ್ಲಿ ತೊಡಗುತ್ತಾರೆ. ಹಾಗಾದರೆ ಅವರು ಈ ಪಾಪಗಳಲ್ಲಿ ಜಾರಿ ಬೀಳಲು ಕಾರಣ ಪಾಪವನ್ನು ಜಯಿಸುವ ಬಲ ಅವರಲ್ಲಿ ಇಲ್ಲವೆಂದಲ್ಲ, ಆದರೆ ಅವರಲ್ಲಿ ದೇವರ ಭಯಕ್ಕಿಂತ ಹೆಚ್ಚಾಗಿ ತಮ್ಮ ಒಳ್ಳೆಯ ಹೆಸರಿನ ಪ್ರೇಮವಿದೆ. ಅವರು ದೇವರ ಚಿತ್ತಕ್ಕಿಂತ ಹೆಚ್ಚಾಗಿ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಾರೆ. ಇಂತಹ ಕ್ರೈಸ್ತರು, ತಾವು "ಸೃಷ್ಟಿಕರ್ತನನ್ನು ಪೂಜಿಸುವುದಕ್ಕಿಂತ ಹೆಚ್ಚಾಗಿ ಸೃಷ್ಟಿಯಾಗಿರುವ ಮಾನವನನ್ನು ಪೂಜಿಸಿದ ಕುರಿತಾಗಿ" (ರೋಮಾ. 1:25) ಅವಶ್ಯವಾಗಿ ದುಃಖಪಟ್ಟು ಪಶ್ಚಾತ್ತಾಪ ಪಡಬೇಕು ಮತ್ತು ದೇವರ ಭಯವನ್ನು ತಮಗೆ ಕಲಿಸುವಂತೆ ದೇವರನ್ನು ಅಂತಃಕರಣದಿಂದ ಮೊರೆಯಿಟ್ಟು ಪ್ರಾರ್ಥಿಸಬೇಕು.

    ದೇವರ ವಾಗ್ದಾನ ಏನೆಂದರೆ, ನೀವು ದೇವರ ಭಯಭಕ್ತಿಯನ್ನು ಪಡೆಯುವದಕ್ಕಾಗಿ ಭೂಮಿಯೊಳಗೆ ಬಚ್ಚಿಟ್ಟ ಚಿನ್ನ ಬೆಳ್ಳಿಯ ನಿಕ್ಷೇಪವನ್ನು ಹುಡುಕುವಂತೆ ಹುಡುಕಿ, ಬಾಯಾರಿದವನು ನೀರಿಗಾಗಿ ಕೂಗುವಂತೆ ಮೊರೆಯಿಟ್ಟರೆ, ಆಗ ದೇವರು ನಿಮಗೆ ತನ್ನ ಭಯಭಕ್ತಿಯನ್ನು ಕಲಿಸಿಕೊಡುತ್ತಾರೆ (ಜ್ಞಾನೋಕ್ತಿ. 2:3-5; ಮತ್ತಾಯ 5:6). ಅವರನ್ನು ಮನಃಪೂರ್ವಕವಾಗಿ ಹುಡುಕುವವರು ಮಾತ್ರವೇ ಅವರನ್ನು ಕಂಡುಕೊಳ್ಳುತ್ತಾರೆ (ಯೆರೆಮೀಯ 29:13). ಯಾರು ತಮ್ಮ ಸೋಲುಗಳಿಗಾಗಿ ದುಃಖಿಸಿ ಅಳುತ್ತಾರೋ, ಅವರು ಮಾತ್ರವೇ ಸಮಾಧಾನ ಹೊಂದುವರು - ದೇವರ ಪವಿತ್ರಾತ್ಮನ ಬಲದ ಸಹಾಯ ಪಡೆಯುವರು (ಮತ್ತಾಯ 5:4). ಕೇವಲ ಕರ್ತನ ಮುಖದ ಎದುರು ಜೀವಿಸುವದು ನಮ್ಮ ದಿನಚರಿ ಆಗಬೇಕು. ನಮ್ಮ ಆಲೋಚನೆಗಳಲ್ಲಿ ದೇವರ ಭಯವಿದೆಯೋ ಎಂಬುದನ್ನು ಪರೀಕ್ಷಿಸುವುದಕ್ಕಾಗಿ ದೇವರು ಪ್ರತಿಯೊಬ್ಬರಿಗೂ ನಮ್ಮದೇ ಆದ ಒಂದು ಖಾಸಗಿ ಜಾಗವನ್ನು - ಅಂದರೆ ನಮ್ಮ ಆಲೋಚನಾಲೋಕವನ್ನು - ನಮಗೆ ಕೊಟ್ಟಿದ್ದಾರೆ. ಜನರ ಮುಂದೆ ಒಳ್ಳೆಯ ಹೆಸರು ಬರಬೇಕು ಎನ್ನುವ ಒಂದೇ ಗುರಿಯನ್ನು ನಾವು ಇರಿಸಿಕೊಂಡಿದ್ದರೆ, ಪಾಪದ ಬಗ್ಗೆ ನಮ್ಮ ಯೋಚನಾಲೋಕದಲ್ಲಿ ಕಾಳಜಿ ಇರುವುದಿಲ್ಲ. ಇದರ ಮೂಲಕ ದೇವರು ನಮ್ಮನ್ನು ಎರಡು ಪಂಗಡಗಳಾಗಿ ವಿಂಗಡಿಸುತ್ತಾರೆ - ಸಂಪೂರ್ಣ ಜಯಕ್ಕಾಗಿ ಹಂಬಲಿಸುವವರು ಮತ್ತು ಕೇವಲ ಹೊರತೋರಿಕೆಗೆ ಪಾಪದ ಮೇಲೆ ಜಯವನ್ನು ಬಯಸುವವರು. ನಮ್ಮ ಅಲೋಚನಾ ಜೀವಿತದ ಪಾಪವನ್ನು ಕಣ್ಣಿಗೆ ಕಾಣಿಸುವ ಪಾಪದಷ್ಟೇ ನಾವು ದ್ವೇಷಿಸಿ ದುಃಖಿಸಿದರೆ, ನಾವು ಬಹಳ ತುರ್ತಾಗಿ ಪಾಪದ ಮೇಲೆ ಜಯದ ಅನುಭವವನ್ನು ಪಡೆಯುತ್ತೇವೆ.

  • 2.ಬಾಧೆಯನ್ನು ಅನುಭವಿಸುವ ಮನೋಭಾವ ಇರಿಸಿಕೊಳ್ಳುವುದು:
  • ಪಾಪಭೋಗವು ರುಚಿಕರವಾಗಿ ಇರುತ್ತದೆ - ಆದರೆ ಅದು ನಮ್ಮನ್ನು ವಂಚಿಸುತ್ತದೆ ಮತ್ತು ಸ್ವಲ್ಪ ಕಾಲ ಮಾತ್ರ ಇರುತ್ತದೆ (ಇಬ್ರಿಯ 3:13; 11:25). ಬಾಧೆಯು ಸುಖಭೋಗಕ್ಕೆ ವಿರುದ್ಧವಾದದ್ದು. ನಮ್ಮ ಶರೀರಭಾವದಲ್ಲಿ ಪಾಪಭೋಗವನ್ನು ನಿರಾಕರಿಸುವುದನ್ನೇ ’ಬಾಧೆಗೆ ಒಳಗಾಗುವುದು’ ಎಂದು ಕರೆಯುತ್ತೇವೆ. ನಾವು ನಮ್ಮಲ್ಲಿ ಇಂತಹ ಮನೋಭಾವವನ್ನು ಇರಿಸಿಕೊಂಡರೆ, ಪಾಪದ ಹಿಡಿತದಿಂದ ಬಿಡುಗಡೆಗೊಂಡು, ದೇವರ ಚಿತ್ತದ ಪ್ರಕಾರ ಜೀವಿತವಿಡೀ ಜೀವಿಸಬಹುದು, ಎಂದು 1 ಪೇತ್ರ. 4:1-2ರಲ್ಲಿ ನಮಗೆ ತಿಳಿಸಲಾಗಿದೆ. ಶರೀರಭಾವದಲ್ಲಿ ಬಾಧೆಗೆ ಒಳಗಾಗುವುದು ಎಂದರೆ ಭೌತಿಕ, ಶಾರೀರಿಕ ಬಾಧೆಗೆ ಒಳಗಾಗುವುದು ಎಂದಲ್ಲ, ಏಕೆಂದರೆ ಈ ರೀತಿಯಾಗಿ ಪಾಪವನ್ನು ತಡೆಯಲು ಎಂದೂ ಯಾರಿಗೂ ಸಾಧ್ಯವಾಗಿಲ್ಲ. ಶರೀರದ ಆಸೆಗಳನ್ನು ತಿರಸ್ಕರಿಸಿದಾಗ ನಮ್ಮೊಳಗೆ ಉಂಟಾಗುವ ನೋವನ್ನು ಇಲ್ಲಿ ಪ್ರಸ್ತಾವಿಸಲಾಗಿದೆ. ಕ್ರಿಸ್ತನು ಮಾಡಿದಂತೆಯೇ, ನಾವು ನಮ್ಮ ಸ್ವಂತ ಸುಖವನ್ನು ನಿರಾಕರಿಸುತ್ತೇವೆ (ರೋಮಾ. 15:3). ಈ ರೀತಿಯಾಗಿ ನಾವು ಆತನ ಬಾಧೆಗಳಲ್ಲಿ ಸಹಭಾಗಿಗಳಾಗುತ್ತೇವೆ.

    ಅಪೊಸ್ತಲ ಪೇತ್ರನು ತಿಳಿಸಿದಂತೆ, ಶರೀರಸಂಬಂಧ ಬಾಧೆಯನ್ನು ನಾವು ದೃಢ ಚಿತ್ತದಿಂದ ಎದುರಿಸಿದಾಗ, ಅದರ ಮೂಲಕ ನಮಗೆ ಹೋರಾಟದ ದಿನಕ್ಕೆ ಅವಶ್ಯವಾದ ರಕ್ಷಾಕವಚ ಸಿಗುತ್ತದೆ. ಶೋಧನೆ ಮತ್ತು ಪ್ರಚೋದನೆಗಳ ಬಿರುಸಿನ ಧಾಳಿ ಆರಂಭವಾದಾಗ ರಕ್ಷಾಕವಚವನ್ನು ಹುಡುಕುವುದು ವ್ಯರ್ಥ, ಏಕೆಂದರೆ ಸಾಮಾನ್ಯವಾಗಿ ಆ ಗಳಿಗೆಯಲ್ಲಿ ಅದು ಕೈಗೆ ಎಟಕುವುದಿಲ್ಲ. ಹೋರಾಟ ಆರಂಭವಾಗುವ ಮೊದಲೇ ಅದು ಸಿದ್ಧವಾಗಿರಬೇಕು. ನಮ್ಮಲ್ಲಿ ಇಂತಹ ರಕ್ಷಾಕವಚ (ಅಂದರೆ, "ಭೋಗಾಭಿಲಾಷೆಯನ್ನು ಸಂಪೂರ್ಣವಾಗಿ ನಿರಾಕರಿಸಿ, ಅಂತಹ ಪಾಪದ ಒಂದು ಸಣ್ಣ ಆಲೋಚನೆಯನ್ನೂ ಸಹ ಅಲ್ಲಗಳೆದು, ಬಾಧೆಗಳನ್ನು ಸಹಿಸುವ ದೃಢ ಮನಸ್ಸು") ಇಲ್ಲದೇ ಹೋದರೆ, ಪಾಪದ ದುಷ್ಪ್ರೇರಣೆ ನಮ್ಮನ್ನು ಎದುರಿಸಿದಾಗ ನಾವು ಹಿಂಜಾರಿ ಬೀಳುತ್ತೇವೆ (ಇಬ್ರಿಯ 10:38). ಆದರೆ "ಸತ್ತರೂ ಸರಿ, ಪಾಪ ಮಾಡೆವು", ಎಂಬ ಛಲ ನಮ್ಮಲ್ಲಿ ಇದ್ದರೆ - ಅಂದರೆ, ಯೇಸುವಿನಂತೆ ’ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯತೆ’ (ಫಿಲಿಪ್ಪಿ. 2:8) ಇದ್ದರೆ - ಆಗ ಹೋರಾಟದ ದಿನದಲ್ಲಿ ಈ ಕವಚ ನಮ್ಮ ಬಲ ಮತ್ತು ರಕ್ಷಣೆ ಆಗಿರುತ್ತದೆ. ಉದಾಹರಣೆಗಾಗಿ, ನಮ್ಮಲ್ಲಿ ಲೌಕಿಕ ಸಂಗತಿಗಳ ಆಸೆ ಇದ್ದರೆ, ನಾವು ಯಾವುದೋ ವಸ್ತುವನ್ನು ಕಳಕೊಂಡಾಗ ಅಥವಾ ಬೇರೆಯವರು ನಮ್ಮ ಬೆಲೆಬಾಳುವ ವಸ್ತುವನ್ನು ಕೆಡಿಸಿದಾಗ ಅಥವಾ ಕಳೆದುಹಾಕಿದಾಗ, ನಾವು ಬಹಳ ಸುಲಭವಾಗಿ ನಮ್ಮ ಮನಃಶಾಂತಿಯನ್ನು ಕಳಕೊಂಡು ಪಾಪಕ್ಕೆ ಬೀಳುತ್ತೇವೆ. ಆದರೆ ನಾವು ’ಶರೀರಸಂಬಂಧವಾದ ಬಾಧೆಯನ್ನು’ ಸ್ವೀಕರಿಸಿದರೆ, ದೇವರು ಎಲ್ಲಾ ಕಾರ್ಯಗಳನ್ನು ನಮ್ಮ ಹಿತಕ್ಕಾಗಿ ನಡೆಸುತ್ತಾರೆ ಎಂದು ನಂಬುತ್ತೇವೆ (ರೋಮಾ. 8:28), ಮತ್ತು ನಾವು ನಮ್ಮ ಸ್ವತ್ತು ನಷ್ಟವಾದಾಗಲೂ ಅದನ್ನು ಸಂತೋಷದಿಂದ ಸ್ವೀಕರಿಸುತ್ತೇವೆ (ಇಬ್ರಿಯ. 10:34).

  • 3. ಅನ್ಯೋನ್ಯತೆ ಅಮೂಲ್ಯವಾದದ್ದು ಎಂದು ಎಣಿಸುವುದು:
  • ಹೊಸ ಒಡಂಬಡಿಕೆಯಲ್ಲಿ ವೈಯಕ್ತಿಕ ಕ್ರೈಸ್ತತ್ವ ಎನ್ನುವಂಥದ್ದು ಇಲ್ಲ. ಹಳೆಯ ಒಡಂಬಡಿಕೆಯ ಪ್ರವಾದಿಗಳು (ಎಲೀಯ ಮತ್ತು ಸ್ನಾನಿಕನಾದ ಯೋಹಾನನಂತೆ) ಒಂಟಿಯಾಗಿ ಜೀವಿಸಿದ್ದರು, ನಿಜ, ಆದರೆ ಆ ದಿನಗಳಲ್ಲಿ ನೆರಳು ಮಾತ್ರ ಇತ್ತು, ದೇಹ ಇರಲಿಲ್ಲ (ಕೊಲೊಸ್ಸೆ. 2:17). ಆದರೆ ಈಗ ಕ್ರಿಸ್ತನ ದೇಹ ನಮಗೆ ದೊರೆತಿದೆ, ಮತ್ತು ನಾವು ಆ ದೇಹಕ್ಕೆ ಸೇರಿಕೊಂಡಾಗ, ಶಿರಸ್ಸು (ಅಂದರೆ ಕ್ರಿಸ್ತನು) ನಾವು ಬೀಳದಂತೆ ನೋಡಿಕೊಳ್ಳುತ್ತದೆ. ಪೌಲನು ಸ್ಪಷ್ಟವಾಗಿ ತೋರಿಸಿಕೊಟ್ಟಿರುವಂತೆ, ಆ ಶಿರಸ್ಸಿನೊಂದಿಗೆ ನಾವು ಹೊಂದಿಕೆಯನ್ನು ಭದ್ರ ಪಡಿಸಿಕೊಂಡು, ನಮ್ಮ ಮೂಲಕ ದೇಹದ ಇತರ ಅಂಗಾಂಗಗಳಿಗೆ ಬೇಕಾದ ಸಹಾಯ ಒದಗಿಸುವುದರಲ್ಲಿ ಕಾರ್ಯನಿರತರಾಗಿದ್ದರೆ ಮಾತ್ರ, ಎಡವಿ ಬೀಳುವುದರಿಂದ ರಕ್ಷಣೆ ಹಾಗೂ ಕ್ರಿಸ್ತೀಯ ಅಭಿವೃದ್ಧಿ ಉಂಟಾಗುತ್ತದೆ (ಕೊಲೊಸ್ಸೆ. 2:19).

    "ಪಾತಾಳಲೋಕದ ಬಲವು ಅದನ್ನು ಸೋಲಿಸಲಾರದು", ಎಂದು ಯೇಸು ಹೇಳಿದ್ದು ಸಭೆಯ ಕುರಿತಾಗಿ (ಮತ್ತಾಯ 16:18). ಒಬ್ಬ ಕ್ರೈಸ್ತನು ಒಂಟಿಗನಾಗಿ ಜೀವಿಸಲು ಪ್ರಯತ್ನಿಸುವುದಾದರೆ, ಆತನನ್ನು ಸೈತಾನನು ಖಂಡಿತವಾಗಿ ಸೋಲಿಸುತ್ತಾನೆ. ಅಷ್ಟೇ ಅಲ್ಲ, ವಾರದಲ್ಲಿ ಎರಡು ಸಲ ಸಭಾಕೂಟಕ್ಕೆ ಹಾಜರಿದ್ದರೆ ಸಾಲದು. ನಾವು ಇತರ ಸದಸ್ಯರೊಂದಿಗೆ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಕ್ರಿಸ್ತನ ದೇಹದಲ್ಲಿ ಐಕ್ಯವಾಗಬೇಕು. ನಾವು "ದೇಹದ" ಕಾರ್ಯೋನ್ಮುಖ ಸದಸ್ಯರಾಗಿ ನಿರ್ದಿಷ್ಟ ಸ್ಥಾನವನ್ನು ಕಂಡುಕೊಂಡಾಗ ಮಾತ್ರ, ನಾವು "ಶಿರಸ್ಸಿನ" ವಿಜಯೋತ್ಸವದಲ್ಲಿ ಪಾಲ್ಗೊಳ್ಳಬಹುದು. ನಮ್ಮ ಶಕ್ತಿ ಮೀರುವ ಒತ್ತಡದ ಸನ್ನಿವೇಶ ಬಂದರೆ, ಆಗ ದೇಹದ ಸಹ-ಸದಸ್ಯರು ನಮ್ಮೊಂದಿಗೆ ನಿಂತು ನಮಗೆ ಶಕ್ತಿಯನ್ನು ಒದಗಿಸುತ್ತಾರೆ (ಪ್ರಸಂಗಿ 4:9-12). ದೇಹದಲ್ಲಿ ಒಬ್ಬರನ್ನೊಬ್ಬರು ಎಚ್ಚರಿಸುವಂಥದ್ದು, ನಾವು ಮೋಸಹೋಗದೇ ಮತ್ತು ಪಾಪಕ್ಕೆ ಬೀಳದೇ ಇರುವದಕ್ಕಾಗಿ ದೇವರು ಮಾಡಿರುವ ವ್ಯವಸ್ಥೆ (ಇಬ್ರಿಯ 3:13). ಇಂತಹ ಅನ್ಯೋನ್ಯತೆಗೆ ಮಹತ್ವ ನೀಡಿರಿ, ಮತ್ತು ಆ ಮೂಲಕ ಅನೇಕ ವ್ಯಥೆ ಮತ್ತು ಸೋಲುಗಳಿಂದ ಬಿಡುಗಡೆಗೊಳ್ಳಿರಿ.