ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ ಮನೆ ಸಭೆ
WFTW Body: 

(ಇಲ್ಲಿ ಉಲ್ಲೇಖಿಸಿರುವ ಎಲ್ಲಾ ವಚನಗಳನ್ನು ಓದಿಕೊಳ್ಳಿರಿ)

ಹೊಸ ವರ್ಷದ ಒಂದು ಪ್ರಾರ್ಥನೆ:
"ಕರ್ತನೇ, ನಮ್ಮ ದಿನಗಳನ್ನು ಎಣಿಸಿಕೊಳ್ಳುವುದನ್ನು ನಮಗೆ ಕಲಿಸು; ಆಗ ನಾವು ಜ್ಞಾನದಿಂದ ತುಂಬಿದ ಹೃದಯವನ್ನು ನಿನಗೆ ಸಮರ್ಪಿಸುವೆವು"(ಕೀರ್ತನೆಗಳು 90:12)

ಆತ್ಮಿಕವಾಗಿ ಬೆಳೆಯುವುದು ಹಾಗೂ ಕ್ರಿಸ್ತನ ಸಾರೂಪ್ಯಕ್ಕೆ ಬದಲಾಗುವುದು ಒಂದು ದಿನದ ಕಾರ್ಯವಲ್ಲ. ಇದು ನಿಧಾನವಾಗಿ - ದಿನದಿಂದ ದಿನಕ್ಕೆ, ಸ್ವಲ್ಪ ಸ್ವಲ್ಪವೇ - ನಡೆಯುತ್ತದೆ. ನಾವು ಒಂದು ಹಾಡಿನಲ್ಲಿ ಹಾಡಿಕೊಳ್ಳುವಂತೆ:
"ಸ್ವಲ್ಪ ಸ್ವಲ್ಪವೇ ಮತ್ತು ದಿನದಿಂದ ದಿನಕ್ಕೆ;
ಪ್ರತಿಯೊಂದು ಕಾರ್ಯದಲ್ಲೂ ಸ್ವಲ್ಪ ಸ್ವಲ್ಪವಾಗಿ,
ನನ್ನ ಯೇಸುವು ನನ್ನನ್ನು ಬದಲಾಯಿಸುತ್ತಿದ್ದಾನೆ;
ಹಿಂದಿನ ವರ್ಷ ನಾನಿದ್ದಂತೆ ಈಗ ಇಲ್ಲ;
ಮತ್ತು ಕಣ್ಣೆದುರಿನ ದೃಶ್ಯವು ಅಸ್ಪಷ್ಟವಾಗಿದ್ದರೂ,
ಆತನು ನನ್ನನ್ನು ಬದಲಾಯಿಸುತ್ತಿದ್ದಾನೆಂದು ನನಗೆ ತಿಳಿದಿದೆ;
ಇದು ನಿಧಾನವೇ ಆಗಿದ್ದರೂ,
ನನಗೆ ಒಂದು ಮಾತ್ರ ತಿಳಿದಿದೆ -
ಒಂದು ದಿನ ನಾನು ಆತನಂತೆಯೇ ಆಗುವೆನು"

ಆದಕಾರಣ, ಕರ್ತನು ನಮ್ಮನ್ನು ರೂಪಾಂತರಿಸುವಂತೆ (ಮಾರ್ಪಾಡುಗೊಳಿಸುವಂತೆ) ಈ ವರ್ಷದ ಪ್ರತಿಯೊಂದು ದಿನವೂ ನಮ್ಮನ್ನೇ ನಾವು ಕರ್ತನಿಗೆ ಒಪ್ಪಿಸಿಕೊಡೋಣ.

ಪವಿತ್ರಾತ್ಮನಿಂದ ಮತ್ತು ದೇವರ ವಾಕ್ಯದಿಂದ ಮಾರ್ಪಾಡಾಗುವುದು

ಪವಿತ್ರಾತ್ಮನು ನಮ್ಮ ಜೀವಿತದ ಕರ್ತನಾಗಲು ನಾವು ಒಪ್ಪಿಕೊಂಡಾಗ, ಮೊದಲನೆಯದಾಗಿ ಆತನು ನಮ್ಮನ್ನು ಬಿಡುಗಡೆಗೊಳಿಸುವನು (2 ಕೊರಿ. 3:17) - ಪಾಪದ ಬಲದಿಂದ, ಹಣದ ವ್ಯಾಮೋಹದಿಂದ, ದೇವರ ವಾಕ್ಯಕ್ಕೆ ವ್ಯತಿರಿಕ್ತವಾದ ಮಾನವ ಸಂಪ್ರದಾಯಗಳಿಂದ ಮತ್ತು ಜನರ ಅಭಿಪ್ರಾಯಕ್ಕೆ ತಲೆಬಾಗಿ ಅವರ ದಾಸರಾಗುವುದರಿಂದ ನಮಗೆ ಬಿಡುಗಡೆಯನ್ನು ಕೊಡುವನು. ಇದರ ನಂತರ ಪವಿತ್ರಾತ್ಮನು ದೇವರ ವಾಕ್ಯದ ಮೂಲಕ ನಮಗೆ ಯೇಸುವಿನ ಪ್ರಭಾವವನ್ನು ತೋರಿಸುವನು, ಮತ್ತು ಯೇಸುವು ಯೋಚಿಸಿದಂತೆ ನಾವು ಯೋಚಿಸುವ ಹಾಗೆ ನಮ್ಮನ್ನು ಬದಲಾಯಿಸುತ್ತಾ, ನಿಧಾನವಾಗಿ ಯೇಸುವಿನ ಪ್ರಭಾವದ ಸಾರೂಪ್ಯವನ್ನು ನಮ್ಮಲ್ಲಿ ಉಂಟುಮಾಡಲು ಪ್ರಯತ್ನಿಸುವನು (2 ಕೊರಿ. 3:18; ರೋಮಾ. 12:2). ಈ ವರ್ಷ ಪವಿತ್ರಾತ್ಮನು ನಮ್ಮಲ್ಲಿ ಈ ಕಾರ್ಯವನ್ನು ಮಾಡಲು ಬಯಸುತ್ತಾನೆ. ಆದಕಾರಣ ಆತನಿಗೆ ಅಧೀನರಾಗಿರಿ.

ಸ್ತುತಿ ಮತ್ತು ಕೃತಜ್ಞತೆಯ ಮೂಲಕ ಮಾರ್ಪಾಡಾಗುವುದು

"ನೀವು ಪವಿತ್ರಾತ್ಮಭರಿತರಾಗಿದ್ದು, ಕೀರ್ತನೆಗಳಿಂದಲೂ ಮತ್ತು ಹಾಡುಗಳಿಂದಲೂ ಮತ್ತು ಆತ್ಮ ಸಂಬಂಧವಾದ ಪದಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಾ ಇರಿ" (ಎಫೆ. 5:19-20). ಪವಿತ್ರಾತ್ಮನು ನಮ್ಮನ್ನು ಎಲ್ಲಾ ಹರಟೆ ಮಾತುಗಳಿಂದ, ಜನರನ್ನು ನಿಂದಿಸುವುದರಿಂದ, ಮನಸ್ಸಿನ ಕಹಿತನದಿಂದ ಮತ್ತು ಸಿಟ್ಟಿನ ಸ್ವಭಾವದಿಂದ ಬಿಡಿಸಲಿಕ್ಕಾಗಿ, ನಮಗೆ ಕೃತಜ್ಞತೆಯ ಆತ್ಮವನ್ನು ಕೊಡಲು ಬಯಸುತ್ತಾನೆ. ಪ್ರಕಟಣೆಯ ಪುಸ್ತಕದಲ್ಲಿ ನಮಗೆ ತೋರಿಸಲಾಗಿರುವ ಪರಲೋಕದ ಏಳು ಕಿರುಚಿತ್ರಣಗಳಲ್ಲಿ ನಮಗೆ ಕಂಡುಬರುವುದು ಏನೆಂದರೆ, ಪರಲೋಕವಾಸಿಗಳು ’ಎಡೆಬಿಡದೆ ದೇವರನ್ನು ಸ್ತುತಿಸುತ್ತಾರೆ’. ಪರಲೋಕದ ವಾತಾವರಣದಲ್ಲಿ ನಿರಂತರ ಸ್ತುತಿ ಇರುತ್ತದೆಯೇ ಹೊರತು, ಯಾವುದೇ ಅಸಮಾಧಾನ ಅಥವಾ ಗುಣಗುಟ್ಟುವಿಕೆ ಇರುವುದಿಲ್ಲ. ಈ ಹೊಸ ವರ್ಷದಲ್ಲಿ, ಪವಿತ್ರಾತ್ಮನು ನಮ್ಮ ಹೃದಯಗಳಿಗೆ ಮತ್ತು ನಮ್ಮ ಮನೆಗಳಿಗೆ ಇಂತಹ ವಾತಾವರಣವನ್ನು ತರಲು ಬಯಸುತ್ತಾನೆ. ಇದಕ್ಕಾಗಿ ಆತನಿಗೆ ಒಳಪಡಿರಿ.

ದೇವರ ಕೃಪೆಯಿಂದ ಮಾರ್ಪಾಡಾಗುವುದು

"ಈ ಕೆಟ್ಟದಾದಂತ ಲೋಕದಲ್ಲಿ ದೇವರ ಕೃಪೆಯು ಪ್ರತ್ಯಕ್ಷವಾದ್ದರಿಂದ, ನಾವು ಭಕ್ತಿಹೀನತೆಯನ್ನೂ, ಲೋಕದ ಆಶೆಗಳನ್ನೂ ತ್ಯಜಿಸಿ, ನೀತಿವಂತರಾಗಿಯೂ, ಭಕ್ತಿಯುಳ್ಳವರಾಗಿಯೂ ಜೀವಿಸಲು ಸಾಧ್ಯವಾಗಿದೆ"(ತೀತ. 2:11-13). ಈ ವರ್ಷ ದೇವರು ತನ್ನ ಕೃಪೆಯ ಮೂಲಕ ನಾವು ಆಲೋಚಿಸುವ ರೀತಿಯನ್ನು ಬದಲಾಯಿಸಲು ಇಚ್ಛಿಸುತ್ತಾರೆ, ಮತ್ತು ನಾವು ಆಡುವ ಮಾತುಗಳಲ್ಲಿ ವಿನಯಶೀಲತೆಯನ್ನು ತುಂಬಿಸುವುದರ ಮೂಲಕ ನಾವು ಭೇಟಿಯಾಗುವ ಪ್ರತಿಯೊಬ್ಬರನ್ನು ಆಶೀರ್ವದಿಸಲು ಬಯಸುತ್ತಾರೆ (ಕೊಲೊ. 4:6). ಮತ್ತು ಈ ವರ್ಷ ದೇವರು ತನ್ನ ಕೃಪೆಯ ಮೂಲಕ ಗಂಡ-ಹೆಂಡತಿಯರು ಒಬ್ಬರೊಟ್ಟಿಗೆ ಒಬ್ಬರು ವರ್ತಿಸುವ ರೀತಿಯನ್ನು ಸಹ ಬದಲಾಯಿಸಲು ಬಯಸುತ್ತಾರೆ (1 ಪೇತ್ರ. 3:7). ಅದಲ್ಲದೆ ನಾವು ಈ ವರ್ಷ ಎದುರಿಸುವ ಪ್ರತಿಯೊಂದು ಶೋಧನೆಯಲ್ಲೂ, ದೇವರು ನಮ್ಮ ಅವಶ್ಯಕತೆಗೆ ತಕ್ಕಂತೆ ನಮಗೆ ತನ್ನ ಕೃಪೆಯನ್ನು ಒದಗಿಸಲು ಶಕ್ತರಾಗಿದ್ದಾರೆ (2 ಕೊರಿ. 12:9). ಆದ್ದರಿಂದ, ಈ ವರ್ಷ ಪ್ರತಿಯೊಂದು ಸಂದರ್ಭದಲ್ಲೂ ನೀವು ನಿಮ್ಮನ್ನು ತಗ್ಗಿಸಿಕೊಳ್ಳಿರಿ - ಯಾಕೆಂದರೆ ದೇವರು ತನ್ನ ಕೃಪೆಯನ್ನು ದೀನರಿಗೆ ಮಾತ್ರ ನೀಡುತ್ತಾರೆ (1 ಪೇತ್ರ. 5:5).

ವಿಧೇಯತೆಯ ಮೂಲಕ ಮಾರ್ಪಾಡಾಗುವುದು

ಯೇಸುವು "ತಾನು ಅನುಭವಿಸಿದ ಬಾಧೆಗಳಿಂದ ವಿಧೇಯತೆಯನ್ನು ಕಲಿತುಕೊಂಡನು," ಎಂಬುದಾಗಿ ನಮಗೆ ತಿಳಿಸಲಾಗಿದೆ (ಇಬ್ರಿ. 5:8). ಯಾವುದೇ ವಿಷಯದಲ್ಲಾದರೂ ತನ್ನ ತಂದೆಯು "ಇಲ್ಲ"ವೆಂದಾಗ, ಯೇಸುವು ಸಹ ಅದಕ್ಕೆ "ಇಲ್ಲ"ವೆಂದು ಹೇಳಿದರು. ಇದಕ್ಕಾಗಿ ಅವರು ಯಾವಾಗಲೂ ತನ್ನ ಸ್ವಚಿತ್ತವನ್ನು ನಿರಾಕರಿಸುವ ಬಾಧೆಗೆ ಒಳಗಾದರು. ಹೀಗೆ ಅನೇಕ ವರ್ಷಗಳು ತನ್ನ ಸ್ವ-ಚಿತ್ತವನ್ನು ನಿರಾಕರಿಸುತ್ತಾ "ಯೇಸುವು ಪರಿಪೂರ್ಣರಾದರು" (ಇಬ್ರಿ. 5:9). ಇಲ್ಲಿ "ಪರಿಪೂರ್ಣ" ಎಂಬ ಪದದ ಅರ್ಥ "ಕಾರ್ಯವನ್ನು ಪೂರ್ಣಗೊಳಿಸುವುದು" ಎಂದಾಗಿದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ಯೇಸುವು ’ವಿಧೇಯತೆಯ ತರಬೇತಿಯನ್ನು’ ಪೂರ್ಣಗೊಳಿಸಿ ವಿಧೇಯತೆಯ ಪದವಿಯನ್ನು ಗಳಿಸಿದರು. ನಾವು ಸಹ ಇದೇ ಪದವಿಯನ್ನು ಗಳಿಸಬೇಕೆಂದು ಪವಿತ್ರಾತ್ಮನು ಬಯಸುತ್ತಾನೆ. ಹಾಗಾಗಿ ಆತನು ನಮ್ಮನ್ನು ಅನೇಕ ಪರೀಕ್ಷೆಗಳಿಗೆ ಒಳಪಡಿಸುತ್ತಾನೆ. ಒಂದು ವೇಳೆ ನಾವು ಯಾವುದಾದರೂ ಪರೀಕ್ಷೆಯಲ್ಲಿ ಸೋತರೆ, ಆತನು ನಮಗೆ ಮತ್ತೊಂದು ಅವಕಾಶವನ್ನು ಒದಗಿಸುತ್ತಾನೆ! ನಾವು ಸಹ ಯೇಸುವು ಪಡೆದ "ಪದವಿಯನ್ನು" ಗಳಿಸಬೇಕೆಂದು ಮತ್ತು ನಮ್ಮನ್ನು ಜಯಶಾಲಿಗಳಾಗಿ ಮಾಡಬೇಕೆಂದು ಆತನ ಇಚ್ಛೆಯಾಗಿದೆ (ಪ್ರಕ. 3:21)! ಇದು ನಾವು ಪಡೆಯಬಹುದಾದ ಅತ್ಯಂತ ಪ್ರಾಮುಖ್ಯವಾದ ಪದವಿಯಾಗಿದೆ. ಆದ್ದರಿಂದ, ನಾವು ಈ ವರ್ಷದಲ್ಲಿ ಪವಿತ್ರಾತ್ಮನ ಬಲದಿಂದ, ಎಲ್ಲಾ ಸಂದರ್ಭಗಳಲ್ಲಿ ನಮ್ಮ ಸ್ವ-ಚಿತ್ತಕ್ಕೆ "ಇಲ್ಲ" ಎಂದು ಮತ್ತು ದೇವರ ಚಿತ್ತಕ್ಕೆ "ಹೌದು" ಎಂದು ಹೇಳೋಣ.

ದೇವರ ಉತ್ತೇಜನದಿಂದ ಮಾರ್ಪಾಡಾಗುವುದು

"ನಮ್ಮೆಲ್ಲಾ ಶೋಧನೆಗಳಲ್ಲಿ ದೇವರು ನಮ್ಮನ್ನು ಉತ್ತೇಜಿಸಲು ಬಯಸುತ್ತಾರೆ, ಯಾಕೆಂದರೆ ನಮ್ಮ ಶೋಧನೆಗಳಲ್ಲಿ ನಾವು ದೇವರಿಂದ ಹೊಂದಿದ ಉತ್ತೇಜನದಿಂದಲೇ ಇತರರ ಶೋಧನೆಗಳಲ್ಲಿ ನಾವು ಅವರನ್ನು ಉತ್ತೇಜಿಸಲು ಶಕ್ತರಾಗುತ್ತೇವೆ" (2 ಕೊರಿ. 1:3-4). ಅನೇಕ ರೀತಿಯ ಶೋಧನೆಗಳನ್ನೂ, ಸಮಸ್ಯೆಗಳನ್ನೂ ಎದುರಿಸುತ್ತಿರುವ ಬಹಳ ಜನರು ನಮ್ಮ ಸುತ್ತಮುತ್ತಲು ಇದ್ದಾರೆ. ಅವರು ಜಯಿಸಲು ಒಂದು ವೇಳೆ ನಾವು ಅವರಿಗೆ ಸಹಾಯ ಮಾಡಬೇಕಾದರೆ, ಮೊದಲು ಸ್ವತಃ ನಾವು ಅನೇಕ ಶೋಧನೆಗಳನ್ನು ಮತ್ತು ಸಮಸ್ಯೆಗಳನ್ನು ಎದುರಿಸಿ ಜಯ ಗಳಿಸಬೇಕು. ಆಗ ನಮ್ಮ ಶೋಧನೆಗಳಲ್ಲಿ ಜಯ ಗಳಿಸಲು ದೇವರು ನಮಗೆ ನೀಡುವ ಬಲವನ್ನೂ, ಉತ್ತೇಜನವನ್ನೂ ನಾವು ಇತರರಿಗೆ ಒದಗಿಸಲು ಸಾಧ್ಯವಾಗುತ್ತದೆ. ಈ ವರ್ಷದಲ್ಲಿ ನಾವು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಗೆ ಮತ್ತು ಪ್ರತಿಯೊಂದು ಕುಟುಂಬಕ್ಕೆ ನಮ್ಮಿಂದ ಆಶೀರ್ವಾದ ಒದಗಬೇಕೆಂದು ದೇವರು ಇಚ್ಛಿಸುತ್ತಾರೆ (ಗಲಾ. 3:8,9,14 ನೋಡಿರಿ). ಈ ವರ್ಷದ ಒಂದೊಂದು ದಿನವೂ ನಾವು ಯಾರಾದರೂ ಒಬ್ಬರನ್ನು ಪ್ರೋತ್ಸಾಹಿಸಬೇಕೆಂಬುದು ಅವರ ಬಯಕೆಯಾಗಿದೆ (ಇಬ್ರಿ. 3:13ಓದಿಕೊಳ್ಳಿರಿ). ಅದು ಹಾಗೆಯೇ ಆಗಲಿ.

ನಿಮಗೆ ಬಹಳ ಆಶೀರ್ವಾದಕರ ಹೊಸ ವರ್ಷವನ್ನು ನಾನು ಹಾರೈಸುತ್ತೇನೆ.