ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ Struggling
WFTW Body: 

ಪ್ರಪಂಚದ ಎಲ್ಲಾ ಜನರು ಸಂತೋಷವನ್ನು ಹುಡುಕುತ್ತಿದ್ದಾರೆ. ಆದರೆ ಅವರು ಅದನ್ನು ತಪ್ಪಾದ ರೀತಿಯಲ್ಲಿ ಹೊಂದಲು ಶ್ರಮಿಸುತ್ತಿದ್ದಾರೆ. ಅವರು ಅನೈತಿಕ ಲೈಂಗಿಕ ಭೋಗ, ಅಥವಾ ವಿಫುಲವಾದ ಸಂಪತ್ತು, ಅಥವಾ ಪ್ರಖ್ಯಾತಿ ಮತ್ತು ಸಮ್ಮಾನ ಮತ್ತು ಉನ್ನತ ಹುದ್ದೆ ಮತ್ತು ಅಧಿಕಾರ, ಇತ್ಯಾದಿಗಳಿಂದ ಸಂತೋಷವನ್ನು ಪಡೆಯಬಹುದೆಂದು ಭಾವಿಸುತ್ತಾರೆ. ಇವೆಲ್ಲಾ ಸಂಗತಿಗಳಲ್ಲಿ ಒಂದಿಷ್ಟು ಇಂದ್ರಿಯ ಸುಖ ಇರುವುದರಲ್ಲಿ ಸಂದೇಹವಿಲ್ಲ. ಆದರೆ ಆ ಸಂತೋಷವು ಬಹಳ ಸಮಯ ಇರುವುದಿಲ್ಲ.

ದೇವರು ಸಹ ನಾವು ಸಂತೋಷವಾಗಿ ಇರಬೇಕೆಂದು ಬಯಸುತ್ತಾರೆ. ಆದರೆ ಅವರು ಹೇಳಿರುವಂತೆ, "ನಿರ್ಮಲ ಹೃದಯ ಉಳ್ಳವರು ಸಂತೋಷವನ್ನು ಹೊಂದುತ್ತಾರೆ" (ಮತ್ತಾ. 5:8 - "Living Bible" ಭಾಷಾಂತರ). ನಾವು ಪವಿತ್ರರಾದಾಗ ಮಾತ್ರ ನಿಜವಾದ ಸಂತೋಷವನ್ನು ಹೊಂದುತ್ತೇವೆ. ಕ್ರೈಸ್ತನಾಗಿರುವ ನೀನು ಹೊಂದಿರುವ ಅತ್ಯಂತ ಶ್ರೇಷ್ಠ ಸಂತೋಷಕ್ಕೆ ನಿನ್ನ ಪವಿತ್ರ ಜೀವಿತವೇ ಕಾರಣವಾಗಿದೆ, ಎಂಬುದನ್ನು ನಿನ್ನ ಸುತ್ತಲಿನ ಪ್ರಪಂಚಕ್ಕೆ ತೋರಿಸಿ ಕೊಡುವ ಕರೆಯನ್ನು ನೀನು ಹೊಂದಿರುವೆ. ಅದಲ್ಲದೆ ಸಂತೋಷವಾಗಿ ಇರುವುದಕ್ಕಾಗಿ ದೇವರು ನಿಷೇಧಿಸಿದ ಯಾವುದೇ ಪಾಪಕರ ಸಂಗತಿಯು ನಿನಗೆ ಅವಶ್ಯವಿಲ್ಲವೆಂದು ನೀನು ಇತರರಿಗೆ ತೋರ್ಪಡಿಸಬೇಕಾಗಿದೆ.

ನಮ್ಮ ಸಂತೋಷವು ವಿವಾಹ ಅಥವಾ ನೌಕರಿ, ಇಂತಹ ಕಾನೂನುಬದ್ಧ ಸಂಗತಿಗಳಿಂದಲೂ ಸಹ ಬರುವುದಿಲ್ಲ. ನಾವು ಇವುಗಳನ್ನು ಅನುಭವಿಸಬಹುದು, ಆದರೆ ನಾವು ಅವುಗಳಿಂದ ಸಂತೋಷವನ್ನು ಪಡೆಯಲು ಆಗುವುದಿಲ್ಲ. ನಾವು ಕರ್ತ ಯೇಸುವಿನಲ್ಲಿ ಮಾತ್ರ ಸಂತೋಷವನ್ನು ಹೊಂದಲು ಸಾಧ್ಯವಿದೆ. ಆಗ ಮಾತ್ರ ನಾವು ಸುವಾರ್ತೆಯ ಸತ್ಯಾಂಶಕ್ಕೆ ಯಥಾರ್ಥ ಸಾಕ್ಷಿಗಳಾಗುತ್ತೇವೆ.

ಯೇಸು ಕ್ರಿಸ್ತನು ಬಂದದ್ದು ನಮ್ಮನ್ನು ಪಾಪದಿಂದ ಬಿಡಿಸುವುದಕ್ಕೆ ಮಾತ್ರವಲ್ಲದೆ, ಈ ಲೋಕದ ವ್ಯವಸ್ಥೆಯಿಂದಲೂ (ರೀತಿ-ನೀತಿಗಳಿಂದ) ಬಿಡಿಸುವುದಕ್ಕೆ ಆಗಿತ್ತು. ಸೈತಾನನು ಈ ಲೋಕದ ಆಡಳಿತಾಧಿಕಾರಿಯಾಗಿದ್ದಾನೆ. ಆತನು ತನ್ನ ಹಿಡಿತವನ್ನು ಈ ಲೋಕದ ವಸ್ತ್ರಾಲಂಕಾರ, ಮನೋರಂಜನೆ, ಶಿಕ್ಷಣ ವ್ಯವಸ್ಥೆ ಇವುಗಳ ಮೇಲೆ ಮಾತ್ರವಲ್ಲದೆ, ಲೋಕದಲ್ಲಿ ಕಂಡುಬರುವ ಇತರ ಅನೇಕ ದಿನನಿತ್ಯದ ಸಾಮಾನ್ಯ ಸಂಗತಿಗಳ ಮೇಲೆಯೂ ಇರಿಸಿದ್ದಾನೆ. ಉದಾಹರಣೆಗೆ ಹೇಳುವುದಾದರೆ, ನಾವು ನಮ್ಮ ಎಲ್ಲಾ ಬಿಡುವಿನ ವೇಳೆಯನ್ನು ಒಳ್ಳೆಯ ಕ್ರೈಸ್ತ ಸಂಗೀತ ಕೇಳುವುದರಲ್ಲಿ ಕಳೆದರೆ, ಇದು ಆ ಅವಧಿಯಲ್ಲಿ ನಾವು ನಮ್ಮ ಹೃದಯವನ್ನು ಶಾಂತ ಪಡಿಸಿಕೊಂಡು ದೇವರ ಸ್ವರವನ್ನು ಕೇಳಿಸಿಕೊಳ್ಳುವ ಅವಕಾಶವನ್ನು ತಪ್ಪಿಸುವುದಕ್ಕಾಗಿ ಸೈತಾನನ ಕುತಂತ್ರವೂ ಆಗಿರಬಹುದು. ಆಗ ಒಳ್ಳೆಯದು ಅತ್ಯುತ್ತಮವಾದದ್ದರ ಶತ್ರುವಾಗಿ ಬದಲಾಗುತ್ತದೆ!

ಕರ್ತನಾದ ಯೇಸುವು ನಮ್ಮನ್ನು ಈ ಲೋಕದಿಂದ ಹೊರತೆಗೆಯುವುದಿಲ್ಲ. ’ಯೋಹಾನನು 17:15'ರಲ್ಲಿ ಯೇಸುವು ತನ್ನ ತಂದೆಯ ಬಳಿ ಪ್ರಾರ್ಥಿಸಿದಾಗ, ತನ್ನ ಶಿಷ್ಯರನ್ನು ಈ ಲೋಕದಿಂದ ತೆಗೆಯಬೇಕೆಂದು ಕೇಳಿಕೊಳ್ಳಲಿಲ್ಲ, ಅದಕ್ಕೆ ಬದಲಾಗಿ ಅವರನ್ನು ದುಷ್ಟನಿಂದ (ಸೈತಾನನಿಂದ) ಕಾಪಾಡುವಂತೆ ಪ್ರಾರ್ಥಿಸಿದನು. ನಮಗೆ ಪರಿಶುದ್ಧತೆಯಲ್ಲಿ ತರಬೇತಿ ಹೊಂದಿ ಬೆಳೆಯುವ ಅವಕಾಶ ಈ ಲೋಕದಲ್ಲಿ ಮಾತ್ರ ಸಿಗುತ್ತದೆ. ಒಂದು ಹಡಗಿನಲ್ಲಿ ನೀರಿನ ಸೋರುವಿಕೆ ಇದೆಯೋ ಎಂಬ ಪರೀಕ್ಷೆ ಮಾಡಬೇಕಾದದ್ದು ಸಮುದ್ರದ ನಡುವೆ, ಮತ್ತು ಇದನ್ನು ಬಂದರಿನ ನೀರಿಲ್ಲದ ಹಡಗು ನಿಲ್ದಾಣದಲ್ಲಿ ಪರೀಕ್ಷಿಸಲು ಬರುವುದಿಲ್ಲ!

ನೋಹನ ದಿನದಲ್ಲಿಯೂ, ಲೋಟನ ದಿನದಲ್ಲಿಯೂ ಜನರು ಉಣ್ಣುತ್ತಿದ್ದರು, ಕುಡಿಯುತ್ತಿದ್ದರು, ಕೊಳ್ಳುತ್ತಿದ್ದರು, ಮಾರುತ್ತಿದ್ದರು, ಕಟ್ಟುತ್ತಿದ್ದರು, ನೆಡುತ್ತಿದ್ದರು, ಮದುವೆ ಮಾಡಿಕೊಳ್ಳುತ್ತಿದ್ದರು ಮತ್ತು ಮದುವೆ ಮಾಡಿಕೊಡುತ್ತಿದ್ದರು (ಲೂಕ. 17:26-28) - ಇವೆಲ್ಲವೂ ನ್ಯಾಯಸಮ್ಮತ ಚಟುವಟಿಕೆಗಳು ಆಗಿದ್ದವೆಂದು ಯೇಸುವು ಹೇಳಿದರು. ಆದಾಗ್ಯೂ, ನಾವು ಇಂತಹ "ಪ್ರಾಪಂಚಿಕ ಕಾಳಜಿಗಳಲ್ಲಿ" ನಮ್ಮನ್ನು ಅತಿಯಾಗಿ ತೊಡಗಿಸಿಕೊಂಡರೆ, ಆಗ ನಮ್ಮಲ್ಲಿ ದೇವರಿಗಾಗಿ ಸಮಯವಿರುವುದಿಲ್ಲ. ಕಡೆಯ ದಿವಸಗಳಲ್ಲಿ ಇಂತಹ ಅಪಾಯ ಉಂಟಾಗುತ್ತದೆ. ಈಗ ನಾವು ಇಂತಹ ದಿವಸಗಳಲ್ಲಿ ಜೀವಿಸುತ್ತಿದ್ದೇವೆ. ನಮ್ಮ ಸಂಪಾದನೆ ಹೆಚ್ಚುತ್ತಾ ಹೋದಾಗ, ಮತ್ತು ನಾವು ಸುಖಭೋಗದ ಜೀವಿತಕ್ಕೆ ಕಾಲಿಟ್ಟಾಗ, ನಾವು ಸುಲಭವಾಗಿ ದೇವರಿಂದ ದೂರ ಸರಿಯಬಹುದು. "ದುಂದುವೆಚ್ಚವಿಲ್ಲದ ದೇವಭಕ್ತಿಯ ಜೀವನವು ಬಹಳ ಉತ್ತಮ ಆತ್ಮಿಕ ಲಾಭಕ್ಕೆ ಕಾರಣವಾಗುತ್ತದೆ," ಎಂದು ಸತ್ಯವೇದವು ತಿಳಿಸುತ್ತದೆ (1 ತಿಮೊ. 6:6 - ಭಾವಾನುವಾದ).

ನಾವು ಜೀವಿಸುತ್ತಿರುವ ಈ ದಿನವೇ ರಕ್ಷಣೆಯ ದಿನವಾಗಿದೆ. ನಾವು ಜೀವಿತದಲ್ಲಿ ಸ್ವತಃ ದೇವರನ್ನೇ ದೂರ ಸರಿಸಿ ಮಿಕ್ಕ ಸಂಗತಿಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡಬೇಕು. ನಮ್ಮ ಹೃದಯಗಳು ಅಶುದ್ಧವಾಗಿರುವಾಗ ನಾವು ನಿಜವಾದ ಸಂತೋಷವನ್ನು ಹೊಂದಲಾರೆವು. ಯಾರಿಗೂ ತಿಳಿಯದ ರಹಸ್ಯ ಪಾಪಗಳು ಮತ್ತು ಇತರರ ಬಗ್ಗೆ ದುಷ್ಟ ಆಲೋಚನೆಗಳು ನಮ್ಮಲ್ಲಿದ್ದರೆ, ನಮ್ಮ ಮುಖವು ಕಾಯಿನನಂತೆ ಕಳೆಗುಂದಿ, ದೇವರು ಆತನನ್ನು "ನಿನ್ನ ತಲೆಯು ಏಕೆ ಬಾಗಿತು?" ಎಂದು ಪ್ರಶ್ನಿಸಿದಂತೆ ನಮ್ಮನ್ನೂ ಪ್ರಶ್ನಿಸ ಬೇಕಾಗುತ್ತದೆ (ಆದಿ. 4:6). ದೇವರು ಕಾಯಿನನು ಎದುರಿಸುತ್ತಿದ್ದ ಅಪಾಯದ ಬಗ್ಗೆ ಆತನನ್ನು ಎಚ್ಚರಿಸಿದರು. ಪಾಪವು ಅವನ ಹೃದಯದ ಬಾಗಿಲ ಬಳಿ ಅವನನ್ನು ಹಿಡಿಯಲಿಕ್ಕಾಗಿ ಹೊಂಚು ಹಾಕುತ್ತಿದೆಯೆಂದೂ ಮತ್ತು ಅವನು ಅದರ ಮೇಲೆ ಅಧಿಕಾರ ಚಲಾಯಿಸಬೇಕೆಂದೂ ದೇವರು ಅವನಿಗೆ ತಿಳಿಸಿದರು.

ಪಾಪವು ಎಲ್ಲಾ ವೇಳೆಯಲ್ಲೂ ನಮಗೆ ಅತೀ ಸಮೀಪ ಇರುತ್ತದೆ. ಇದನ್ನು ಸದಾ ಅರಿತುಕೊಂಡು ಜೀವಿಸುವವರು ಧನ್ಯರು - ಏಕೆಂದರೆ ಶೋಧನೆಯು ಬಂದಾಗ ಅವರು ಎಚ್ಚರವಾಗಿ ಮತ್ತು ಜಾಗರೂಕರಾಗಿ ಇರುತ್ತಾರೆ. ಯಾರು ತನ್ನ ಶರೀರಭಾವದ ಬಲಹೀನತೆಯನ್ನು ಅರಿತುಕೊಂಡಿದ್ದಾರೋ ಮತ್ತು ದೇವರ ಸಹಾಯಕ್ಕಾಗಿ ನಿರಂತರವಾಗಿ ಮೊರೆಯಿಡುತ್ತಾರೋ, ಅವರು ಪಾಪಕ್ಕೆ ತಲೆಬಾಗುವುದಿಲ್ಲ.