WFTW Body: 

ನಾವು 2ಪೂರ್ವಕಾಲವೃತ್ತಾಂತ 3:1ರಲ್ಲಿ ಓದುವಂತೆ, "ಸೊಲೊಮೋನನು ಮೋರೀಯಾ ಗುಡ್ಡದಲ್ಲಿ ಕರ್ತನ ಆಲಯವನ್ನು ಕಟ್ಟಿಸ ತೊಡಗಿದನು". ಮೊರೀಯಾ ಬೆಟ್ಟವು ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ದೇವರಿಗೆ ಸಮರ್ಪಿಸಿದ ಸ್ಥಳವಾಗಿತ್ತು (ಆದಿ. 22). ದೇವರ ದಾರಿಯು ಸಮರ್ಪಣೆಯ ದಾರಿಯೆಂದು ಅಬ್ರಹಾಮನು ಆ ಬೆಟ್ಟದ ಮೇಲೆ ತಿಳಿದುಕೊಂಡನು ಮತ್ತು ಅದಕ್ಕೆ ವಿಧೇಯನಾದನು. ದೇವರು ಆ ಸ್ಥಳವನ್ನು ಪ್ರತಿಷ್ಠಿಸಿದರು ಮತ್ತು 1000 ವರ್ಷಗಳ ನಂತರ ತನಗಾಗಿ ಕಟ್ಟಲ್ಪಡುವ ಆಲಯವು ಅದೇ ಸ್ಥಳದಲ್ಲಿ ಇರಬೇಕೆಂದು ನಿರ್ಧರಿಸಿದರು. ಅದಲ್ಲದೆ ಈ ದಿನವೂ ಸಹ ದೇವರು ತನ್ನ ಮನೆಯನ್ನು (ಕ್ರೈಸ್ತಸಭೆಯನ್ನು) ಇದೇ ಜಾಗದಲ್ಲಿ - ಅಬ್ರಹಾಮನ ಆತ್ಮ ಮತ್ತು ಆತನ ನಂಬಿಕೆಯನ್ನು ಅವರು ಎಲ್ಲೆಲ್ಲಿ ಕಾಣುತ್ತಾರೋ, ಅಲ್ಲಿ - ಕಟ್ಟುತ್ತಾರೆ. ಮೊರೀಯ ಬೆಟ್ಟದ ಮೇಲೆ ಅಬ್ರಹಾಮನು ಸಾಂಕೇತಿಕವಾಗಿ ನುಡಿದ ಮಾತು, ಆದಾಮ ಮತ್ತು ಹವ್ವರು ದೇವರಿಗೆ ಏದೆನ್ ತೋಟದಲ್ಲಿ ಹೇಳಿದ ಮಾತಿಗೆ ಸಂಪೂರ್ಣ ವಿರುದ್ಧವಾದದ್ದಾಗಿತ್ತು.

ಏದೆನ್ ತೋಟದಲ್ಲಿ, ಆದಾಮ ಮತ್ತು ಹವ್ವರು ನಿಷೇಧಿಸಲ್ಪಟ್ಟಿದ್ದ ಹಣ್ಣನ್ನು ತಿನ್ನುವುದರ ಮೂಲಕ, ತಮಗೆ ಸೃಷ್ಟಿಯ ವಸ್ತುಗಳ ಆನಂದವು ಸ್ವತಃ ಸೃಷ್ಟಿಕರ್ತನ ಆನಂದಕ್ಕಿಂತ ಹೆಚ್ಚು ಅಮೂಲ್ಯವಾದದ್ದು, ಎಂದು ದೇವರಿಗೆ ಹೇಳಿದ ಹಾಗಿತ್ತು. ಈ ದಿನವೂ ಸಹ ಸಾವಿರಾರು ಕೋಟಿ ಜನಸಂಖ್ಯೆಯ ಮಾನವ ಕುಲವು ದೇವರಿಗೆ ನಿಖರವಾಗಿ ಇದೇ ಮಾತನ್ನು ಹೇಳುತ್ತಿದೆ. "ಅವರು ಸೃಷ್ಟಿಕರ್ತನನ್ನು ಪೂಜಿಸದೆ ಸೃಷ್ಟಿವಸ್ತುಗಳನ್ನೇ ಪೂಜಿಸಿ ಸೇವಿಸುವವರಾದರು" . ಆದರೆ ಮೊರೀಯ ಬೆಟ್ಟದ ಮೇಲೆ ಅಬ್ರಹಾಮನು ಇದಕ್ಕೆ ವಿರೋಧವಾದ ಮಾತನ್ನು ಆಡಿದನು: ತನಗೆ ಭೂಮಿಯ ಮೇಲಿನ ಅತ್ಯಂತ ಅಮೂಲ್ಯ ಸಂಪತ್ತಿಗಿಂತ (ಅಂದರೆ ಇಸಾಕನು) ತನ್ನ ದೇವರು ಮತ್ತು ತನ್ನ ಸೃಷ್ಟಿಕರ್ತರು ಹೆಚ್ಚು ಅಮೂಲ್ಯವಾಗಿದ್ದಾರೆ, ಎಂಬುದಾಗಿ. ಇದನ್ನು ರುಜುಪಡಿಸಲು ಆತನು ಇಸಾಕನನ್ನು ಯಜ್ಞವಾಗಿ ಒಪ್ಪಿಸಲು ತಯಾರಾಗಿದ್ದನು. ದೇವರು ತ್ಯಾಗ ಭಾವದ ಈ ಜೀವ ನಿಯಮದ ಪ್ರಕಾರ ಜೀವಿಸುವ ಪ್ರತಿಯೊಬ್ಬನನ್ನು ಸನ್ಮಾನಿಸುತ್ತಾರೆ. ಈ ದಿನವೂ ಸಹ ದೇವರ ನಿಜವಾದ ಮನೆಯು ಈ ದಾರಿಯಲ್ಲಿ ನಡೆಯಲು ಪಣತೊಟ್ಟಿರುವ ಜನರಿಂದ ಕಟ್ಟಲ್ಪಡಲಿದೆ.

ಕಲ್ವಾರಿಯ ಗುಡ್ಡದ ಮೇಲೆ, ಯೇಸುವು ಲೋಕದ ಪಾಪಗಳಿಗಾಗಿ ತನ್ನ ಪ್ರಾಣವನ್ನು ನೀಡುವುದರ ಜೊತೆಗೆ, ಇನ್ನೊಂದು ಕಾರ್ಯವನ್ನು ಸಹ ಮಾಡಿದರು. ದೇವರ ಪ್ರತಿಯೊಂದು ಕಾರ್ಯಯೋಜನೆಯು ತ್ಯಾಗದ ನಿಯಮವನ್ನು ಆಧರಿಸಿದೆ ಎಂಬುದನ್ನು ಯೇಸುವು ಅಲ್ಲಿ ತೋರಿಸಿಕೊಟ್ಟರು. ಕರ್ತರ ಸೇವೆಯನ್ನು ಯಾರೂ ಸಹ ಬೇರೆ ಯಾವುದೇ ರೀತಿಯಲ್ಲಿ ಮಾಡಲು ಸಾಧ್ಯವಿಲ್ಲ. 'ಈ ಲೋಕದಲ್ಲಿ ಸುಖವಾಗಿ ಜೀವಿಸುತ್ತೇವೆ ಮತ್ತು ಅದರ ಜೊತೆಗೆ ಕ್ರೈಸ್ತ ಸಭೆಯನ್ನು ಸಹ ಕಟ್ಟುತ್ತೇವೆ', ಎಂದು ಯೋಚಿಸುವವರು ತಮ್ಮನ್ನೇ ವಂಚಿಸಿಕೊಳ್ಳುತ್ತಾರೆ. ಇಹಲೋಕದಲ್ಲಿಯೂ ಪರಲೋಕದಲ್ಲಿಯೂ ಸುಖ-ಸೌಲಭ್ಯಕ್ಕಾಗಿ ತವಕಿಸುವವರು ಸೈತಾನನಿಂದ ಸಂಪೂರ್ಣವಾಗಿ ವಂಚಿಸಲ್ಪಟ್ಟಿದ್ದಾರೆ. ಅನೇಕರು ತ್ಯಾಗ ಅಥವಾ ಸಮರ್ಪಣೆಯಿಲ್ಲದೆ ದೇವರ ಸೇವೆ ಮಾಡಲು ಪ್ರಯತ್ನ ಪಟ್ಟಿದ್ದಾರೆ. ಅವರ ಇಂತಹ ಪ್ರಯತ್ನಗಳು ಗಳಿಸುವ ಬಹುಮಾನ ಸೋಲಿನ ಮೇಲೆ ಸೋಲು, ಅಷ್ಟೇ!!

"ಕ್ರಿಸ್ತನು ಸಭೆಯನ್ನು ಪ್ರೀತಿಸಿದನು ಮತ್ತು ಅದಕ್ಕಾಗಿ 'ತನ್ನನ್ನೇ ಒಪ್ಪಿಸಿಕೊಟ್ಟನು'" (ಎಫೆ. 5:25,26). ನಾವು ಸಭೆಯನ್ನು ಕಟ್ಟುವುದಕ್ಕೆ, ಇದೇ ರೀತಿಯಾಗಿ ಸಭೆಯನ್ನು ಪ್ರೀತಿಸಬೇಕು. ನಮ್ಮ ಹಣ ಅಥವಾ ನಮ್ಮ ಸಮಯವನ್ನು ಕೊಟ್ಟರೆ ಸಾಕಾಗುವುದಿಲ್ಲ. ನಾವು ನಮ್ಮನ್ನೇ - ನಮ್ಮ ಸ್ವಾರ್ಥ ಜೀವಿತವನ್ನು - ಬಿಟ್ಟುಕೊಡಬೇಕು.

ದೇವರು ಮಾನವನಿಗಾಗಿ ತನ್ನ ಪ್ರೀತಿಯನ್ನು ವಿವರಿಸುವುದಕ್ಕೆ, ಕೇವಲ ಒಂದು ಲೌಕಿಕ ಉದಾಹರಣೆಯನ್ನು ತೆಗೆದುಕೊಳ್ಳಲು ಸಾಧ್ಯವಾಯಿತು - ಒಬ್ಬ ತಾಯಿಗೆ ತಾನು ಹೆತ್ತ ಮಗುವಿನ ಮೇಲೆ ಇರುವ ಪ್ರೀತಿ (ಯೆಶಾ. 49:15 ನೋಡಿರಿ). ನೀವು ಒಬ್ಬ ತಾಯಿಯನ್ನು ಗಮನಿಸಿದರೆ, ಆಕೆಯಲ್ಲಿ ತನ್ನ ಕೂಸಿಗಾಗಿ ಇರುವ ಪ್ರೀತಿಯಲ್ಲಿ ಎಂತಹ ತ್ಯಾಗದ ಆತ್ಮವಿದೆಯೆಂದು ನಿಮಗೆ ತಿಳಿಯುತ್ತದೆ. ಮುಂಜಾವದಿಂದ ನಡುರಾತ್ರಿಯ ವರೆಗೆ ಮತ್ತು ರಾತ್ರಿಯ ಉದ್ದಕ್ಕೂ, ಒಬ್ಬ ತಾಯಿಯು ತನ್ನ ಕೂಸಿಗಾಗಿ ಬಿಡುವಿಲ್ಲದೆ, ನಿರಂತರವಾಗಿ, ಕೊನೆಯಿಲ್ಲದೆ ತ್ಯಾಗ ಮಾಡುತ್ತಲೇ ಇರುತ್ತಾಳೆ. ಮತ್ತು ಆಕೆಗೆ ಇದಕ್ಕಾಗಿ ಯಾವ ಪ್ರತಿಫಲವೂ ಸಿಗುವುದಿಲ್ಲ. ಆಕೆಯು ಹಲವಾರು ವರ್ಷಗಳ ಕಾಲ ಯಾವ ಪ್ರತಿಫಲವನ್ನೂ ನಿರೀಕ್ಷಿಸದೆ, ತನ್ನ ಮಗುವಿಗಾಗಿ ನೋವು ಮತ್ತು ಅನಾನುಕೂಲವನ್ನು ಸಂತೋಷವಾಗಿ ಸಹಿಸಿಕೊಳ್ಳುತ್ತಾಳೆ. ಒಬ್ಬ ತಾಯಿಯು ತನ್ನ ಮಗುವಿಗಾಗಿ ತನ್ನ ಅಕ್ಕಪಕ್ಕದವರು ಯಾವುದೇ ತ್ಯಾಗವನ್ನು ಮಾಡುತ್ತಾರೋ ಇಲ್ಲವೋ ಎಂಬುದರಲ್ಲಿ ಆಸಕ್ತಿ ವಹಿಸುವುದಿಲ್ಲ. ಸ್ವತಃ ಆಕೆಯು ಎಲ್ಲವನ್ನೂ ಸಂತೋಷವಾಗಿ ತ್ಯಾಗ ಮಾಡುತ್ತಾಳೆ. ಇದೇ ರೀತಿಯಾಗಿ, ಕ್ರೈಸ್ತಸಭೆಯನ್ನು ತನ್ನ ಸ್ವಂತ ಮಗುವೆಂದು ತಿಳಿದುಕೊಂಡಿರುವವನು, ತನ್ನ ಅಕ್ಕಪಕ್ಕದವರು ಸಭೆಗಾಗಿ ಯಾವುದೇ ತ್ಯಾಗವನ್ನು ಮಾಡುತ್ತಾರೋ ಇಲ್ಲವೋ ಎಂದು ಚಿಂತಿಸುವುದಿಲ್ಲ.

ದೇವರು ನಮ್ಮನ್ನು ಪ್ರೀತಿಸುವ ರೀತಿ ಇದೇ ಆಗಿದೆ. ಮತ್ತು ಅವರು ನಮಗೆ ಇದೇ ಸ್ವಭಾವವನ್ನು ಕೊಡಲು ಇಚ್ಛಿಸುತ್ತಾರೆ. ಆದರೆ ಜಗತ್ತಿನಾದ್ಯಂತ ಯಾವುದೇ ಒಂದು ಕ್ರೈಸ್ತ ಕೂಟದಲ್ಲಿ, ಪ್ರತಿಯೊಬ್ಬರು ಇತರರನ್ನು ಈ ರೀತಿಯಾಗಿ ಪ್ರೀತಿಸುತ್ತಾರೆಂದು ಪ್ರಾಮಾಣಿಕವಾಗಿ ಹೇಳುವುದು ಅಸಾಧ್ಯವಾದ ಮಾತಾಗಿದೆ. ಹೆಚ್ಚಿನ ವಿಶ್ವಾಸಿಗಳು ತಮ್ಮ ದೃಷ್ಟಿಕೋನವನ್ನೇ ಇರಿಸಿಕೊಳ್ಳುವ ಮತ್ತು ತಮ್ಮ ಗುಂಪಿನ ಜೊತೆಗೆ ಹೊಂದಿಕೊಳ್ಳುವ ಜನರನ್ನು ಮಾತ್ರ ಪ್ರೀತಿಸುವದನ್ನು ಕಲಿತಿದ್ದಾರೆ. ಅವರ ಪ್ರೀತಿಯು ಮಾನವ ಪ್ರೀತಿಯಾಗಿದೆ ಮತ್ತು ಅದು ತಾಯಂದಿರ ತ್ಯಾಗವುಳ್ಳ ಪ್ರೀತಿಗಿಂತ ಬಹಳ ವ್ಯತ್ಯಾಸವುಳ್ಳದ್ದು ಆಗಿದೆ!!