ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಶಿಷ್ಯಂದಿರಿಗೆ
WFTW Body: 

1 ಕೊರಿಂಥ 4:2 ರಲ್ಲಿ ಇದು ಬರೆಯಲ್ಪಟ್ಟಿದೆ - ”ಒಬ್ಬ ಸೇವಕನ ವಿಷಯವಾಗಿ ಒಂದು ಬಹುಮುಖ್ಯ ಸಂಗತಿ ಏನೆಂದರೆ, ತನ್ನ ಯಜಮಾನನು ಹೇಳುವಂತ ಪ್ರತಿಯೊಂದನ್ನು ಮಾಡುವಂತದ್ದಾಗಿದೆ”. ನಂಬಿಗಸ್ಥ ಸೇವಕನು ಎಂಬುದರ ಅರ್ಥ ಇದೇ ಆಗಿದೆ. ಎಷ್ಟನ್ನು ನೀವು ಮಾಡುತ್ತೀರಿ ಎಂಬುದರ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ, ಆದರೆ ದೇವರು ಹೇಳುವಂತದ್ದನ್ನು ಮಾತ್ರವೇ ನೀವು ಮಾಡುತ್ತಿದ್ದೀರಾ ಮತ್ತು ದೇವರು ಯಾವ ರೀತಿ ಆಗಬೇಕು ಎಂದು ಬಯಸುತ್ತಾರೋ, ಅದೇ ನೀವು ಮಾಡುತ್ತಿದ್ದೀರಾ. ಅದಕ್ಕಾಗಿ ನೀವು ದೇವರಿಗಾಗಿ ಕಾದುಕೊಂಡು, ”ದೇವರೇ ನಾನು ಏನು ಮಾಡಬೇಕು ಎಂದು ನೀನು ಬಯಸುತ್ತೀ? ನಾನು ಅದನ್ನು ಮಾತ್ರವೇ ಮಾಡುತ್ತೇನೆ” ಎಂದು ಹೇಳುವವರಾಗಿರಬೇಕು. ಉದಾಹರಣೆಗೆ, ನೀವು ಒಬ್ಬ ಸೇವಕನನ್ನು ಇಟ್ಟುಕೊಂಡಿದ್ದರೆ, ತನಗೆ ಇಷ್ಟ ಬಂದಂತೆ ನಿಮಗೆ ಆ ಸೇವಕನು ಕೆಲಸ ಮಾಡಲು ನೀವು ಅನುಮತಿಸುವುದಿಲ್ಲ. ಇಲ್ಲ. ಆತನು ನಿಮ್ಮ ಮಾತನ್ನು ಕೇಳಬೇಕು ಮತ್ತು ನೀವು ಹೇಳುವಂತದ್ದನ್ನು ಮಾಡಬೇಕು ಎಂದು ನೀವು ಬಯಸುತ್ತೀರಿ. ಆದರೆ ಅನೇಕ ಕ್ರೈಸ್ತ ಸೇವಕರು ದೇವರು ತನ್ನ ವಾಕ್ಯದಲ್ಲಿ ಹೇಳಿರುವಂತದ್ದನ್ನು ಕೇಳಿಸಿಕೊಳ್ಳುವುದಿಲ್ಲ ಮತ್ತು ಆ ದೈವಿಕ ತತ್ವಗಳನ್ನು ಹಿಂಭಾಲಿಸುವುದಿಲ್ಲ. ಅದರ ಹೊರತಾಗಿ, ಅವರು ಉತ್ತಮ ಎಂದು ಭಾವಿಸುವಂತ ರೀತಿಯಲ್ಲಿ ತಮ್ಮದೇ ಆದ ಚಾಣಕ್ಷ ಅಲೋಚನೆಗಳಿಂದ ದೇವರ ಕಾರ್ಯವನ್ನು ಮಾಡುತ್ತಾರೆ, ಅವು ಸಾಮಾನ್ಯವಾಗಿ ಪ್ರಾಪಂಚಿಕತೆಯಿಂದ ಕೂಡಿರುತ್ತವೆ. ಅವರು ದೇವರನ್ನು ಸೇವೆ ಮಾಡಲು ತಮ್ಮ ಸ್ವಂತ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ ಮತ್ತು ಅವರು ದೇವರಿಗಾಗಿ ಕಾದುಕೊಂಡು ದೇವರ ಚಿತ್ತ ಏನು ಎಂಬುದನ್ನು ಕಂಡುಕೊಳ್ಳುವುದರಲ್ಲಿ ತಾಳ್ಮೆಯನ್ನು ಹೊಂದಿರುವುದಿಲ್ಲ.

1 ಕೊರಿಂಥ 4ನೇ ಅಧ್ಯಾಯದಲ್ಲಿ, ನಿಜವಾದ ಕ್ರಿಸ್ತನ ಸೇವಕರು (ಶಿಲುಬೆಯ ಹಾದಿಯಲ್ಲಿ ಹೋಗುವಂತವರು) ಲೋಕದಿಂದ ಗೌರವವನ್ನು ಪಡೆದುಕೊಳ್ಳುವುದಿಲ್ಲ (ಲೋಕದ ವಿಶ್ವಾಸಿಗಳಿಂದಲೂ ಸಹ). ದೇವರ ಸಭೆಯಲ್ಲಿ ಅಪೊಸ್ತಲರು ಅತಿ ದೊಡ್ಡ ದೇವರ ಸೇವಕರಾಗಿದ್ದರು. ಸಭೆಗಳಲ್ಲಿನ ಸಭಾ ಹಿರಿಯರಿಗೇ ಅಪೊಸ್ತಲರು ಹಿರಿಯರಾಗಿದ್ದರು. ಅಪೊಸ್ತಲರು ಸಭೆಗಳನ್ನು ನೆಟ್ಟರು, ಸಭಾ ಹಿರಿಯರನ್ನು ನೇಮಿಸಿದರು ಮತ್ತು ಆ ಸಭಾ ಹಿರಿಯರಿಗೆ ಮಾರ್ಗದರ್ಶನ ನೀಡಿದರು. ಆದರೆ ಲೋಕವು ಹೇಗೆ ಈ ಅಪೊಸ್ತಲರನ್ನು ನೋಡಿಕೊಂಡಿತು? ”ಯಾಕೆಂದರೆ ದೇವರು ಅಪೊಸ್ತಲರಾದ ನಮ್ಮನ್ನು ಮರಣಕ್ಕೆ ನೇಮಿಸಿದನೋ ಎಂಬಂತೆ, ಕಡೆಯವರಾಗಿ ತೋರಿಸಿದ್ದಾನೆಂದು ನನಗೆ ತೋಚುತ್ತವೆ” (1 ಕೊರಿಂಥ 4:9). ಲೋಕದ ದೃಷ್ಠಿಯಲ್ಲಿ ಅಪೊಸ್ತಲರು ಸಮಾಜವೆಂಬ ಏಣಿಯ ಕೆಳಗಡೆ ಇದ್ದರು. ಅವರು ”ನಾವು ಸೇರೆವಾಸಿಗಳಾಗಿದ್ದು ಆದಷ್ಟು ಬೇಗನೆ ಕೊಲ್ಲಲ್ಪಡುವವರಾಗಿದ್ದೇವೆ, ಮನುಷ್ಯರಿಗೂ ನಾವು ನೋಟವಾದೆವು, ಮೂಢರಾಗಿದ್ದೇವೆ, ಪರಿಹಾಸ್ಯಕ್ಕೆ ಒಳಗಾದವರು, ಗುದ್ದು ತಿನ್ನುವವರೂ ಆಗಿದ್ದೇವೆ” (1 ಕೊರಿಂಥ 4:9-11 - ಎಲ್.ಬಿ ಅನುವಾದ). ಇಲ್ಲಿ ಪೌಲನು ತನ್ನನ್ನು ಮತ್ತು ಬೇರೆ ಅಪೊಸ್ತಲರನ್ನು ಪ್ರಾಪಂಚಿಕತೆಯಿಂದ ಕೂಡಿದ ಕೊರಿಂಥ ಕ್ರೈಸ್ತರೊಟ್ಟಿಗೆ ಹೋಲಿಸಿ ನೋಡಿದನು. ”ನೀವೋ ಕ್ರಿಸ್ತನಲ್ಲಿ ಬುದ್ಧಿವಂತರಾಗಿದ್ದೀರಿ, ನಾವು ಬಲಹೀನರು, ಆದರೆ ನೀವು ಬಲಿಷ್ಠರು; ನೀವು ಗೌರವವುಳ್ಳವರು, ಆದರೆ ನಾವು ಹೀನೈಸಲ್ಪಟ್ಟವರು” ಎಂಬುದಾಗಿ ಪೌಲನು ಹೇಳುತ್ತಾನೆ. ಒಬ್ಬ ನಿಜವಾದ ಯೇಸು ಕ್ರಿಸ್ತನ ಅಪೊಸ್ತಲನು ಲೋಕದಿಂದ ಗೌರವಕ್ಕೆ ಒಳಪಡುವುದಿಲ್ಲ. ಕೇವಲ ಪ್ರಾಪಂಚಿಕ ಕ್ರೈಸ್ತರು ಮಾತ್ರ ಲೋಕದಿಂದ ಗೌರವವನ್ನು ಸಂಪಾದಿಸುತ್ತಾರೆ. ನೀವು ಲೋಕದ ಗೌರವವನ್ನು ಹುಡುಕುವುದಾದಲ್ಲಿ, ನೀವು ನಿಶ್ಚಯವಾಗಿ ಪ್ರಾಪಂಚಿಕ ಕ್ರೈಸ್ತರಾಗಿ ಕೊನೆಗಾಣುತ್ತೀರಿ.

ಒಬ್ಬ ನಿಜವಾದ ಕ್ರಿಸ್ತನ ಅಪೊಸ್ತಲನು ಸುವಾರ್ತೆಯನ್ನು ಸಾರುವ ಮುಖಾಂತರ ಐಶ್ವರ್ಯವಂತನಾಗುವುದಿಲ್ಲ. ಒಬ್ಬನು ಸುವಾರ್ತೆಯನ್ನು ಸಾರುವುದರಿಂದ ಐಶ್ವರ್ಯವಂತನಾಗಿದ್ದಾನೆ ಎಂದಾದಲ್ಲಿ, ಆತನು ಕ್ರಿಸ್ತನ ಅಪೊಸ್ತಲನಲ್ಲ ಎಂಬುದಾಗಿ ನೀವು ನಿಶ್ಚಯಪಡಿಸಿಕೊಳ್ಳಬೇಕು. ಒಬ್ಬ ವ್ಯಕ್ತಿಯು ಸುವಾರ್ತೆಯನ್ನು ಸಾರುವ ಮುಖಾಂತರ ಮನೆಗಳನ್ನು ಹಾಗೂ ಜಾಗಗಳನ್ನು ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ಕೊಂಡುಕೊಂಡಿದ್ದರೆ, ಆ ವ್ಯಕ್ತಿಯು ಕ್ರಿಸ್ತನ ಅಪೊಸ್ತಲನಲ್ಲ. ಸುವಾರ್ತೆಯನ್ನು ಸಾರುವ ಮುಖಾಂತರ ಒಬ್ಬ ಮನುಷ್ಯನು ಹಣದ ಜೊತೆ ಬೆಲೆ ಬಾಳುವಂತ ಕಾರುಗಳನ್ನು ಕೊಂಡುಕೊಂಡಿದ್ದೇ ಆದಲ್ಲಿ, ಆತನು ಕ್ರಿಸ್ತನ ಅಪೊಸ್ತಲನಲ್ಲ. ಆತನು ಪ್ರಾಪಂಚಿಕ ಕ್ರೈಸ್ತನು ಅಷ್ಟೇ. ಪೌಲನು ತಾನು ಹೊಂದಿದಂತ ಬೋಧನೆಯ ವರದ ಮುಖಾಂತರ ಹೆಚ್ಚು ಹಣವನ್ನು ಮಾಡಬಹುದಿತ್ತು: ಆದರೆ ಪೌಲನು ಹಾಗೇ ಮಾಡಲಿಲ್ಲ. ಒಬ್ಬ ನಿಜವಾದ ದೇವರ ಸೇವಕನು ಸುವಾರ್ತೆಯನ್ನು ಸಾರುವ ಮುಖಾಂತರ ಹಣವನ್ನು ಮಾಡುವುದಿಲ್ಲ. ಆತನು ತನ್ನ ಇಹಲೋಕದ ಅಗತ್ಯತೆಗಳಿಗಾಗಿ ಕಾಣಿಕೆಗಳನ್ನು ಸ್ವೀಕರಿಸಿಕೊಳ್ಳಬಹುದು, ಯೇಸು ಮತ್ತು ಅಪೊಸ್ತಲರು ಮಾಡಿದಂತೆ, ಹಾಗಿದ್ದರೂ ಅವರು ಕೋಟ್ಯಾದಿಪತಿಗಳಾಗಲಿಲ್ಲ. ಆದರೆ ಇಂದು ನಾವು ನೋಡುವಂತ ಕ್ರೈಸ್ತತ್ವದಲ್ಲಿ ಇದು ತದ್ವಿರುದ್ಧವಾಗಿದೆ. ಅದಕ್ಕಾಗಿ ಯಾರು ಅಪೊಸ್ತಲರು ಮತ್ತು ಮತ್ತು ಬೋಧಕರು ಎಂದು ಕೇವಲ ಹೆಸರಿಗಾಗಿ ಕರೆದುಕೊಳ್ಳುತ್ತಾರೋ (ಅವರು ಅಸ್ವಸ್ಥರನ್ನು ಸ್ವಸ್ಥಪಡಿಸಬಹುದು) ಅವರ ವಿಷಯವಾಗಿ ನಾನು ಶೂನ್ಯ ಗೌರವವನ್ನು ಹೊಂದಿದ್ದೇನೆ. ರೋಮನ್ ಕ್ಯಾಥೋಲಿಕ್ ನಲ್ಲಿನ ಯಾಜಕರುಗಳ ವಿಷಯವಾಗಿ ನನಗೆ ಹೆಚ್ಚು ಗೌರವವಿದೆ, ಏಕೆಂದರೆ ಸುವಾರ್ತಿಕ ಬೋಧಕರುಗಳು ಬಡ ಜನರಿಂದ ದಶಮಾಂಶಗಳನ್ನು ತೆಗೆದುಕೊಂಡು ಸುವಾರ್ತೆ ಸಾರಿ ಐಶ್ವರ್ಯವಂತರಾಗುವವರಿಗಿಂತ, ಈ ರೋಮನ್ ಕ್ಯಾಥೋಲಿಕ್ ನಲ್ಲಿನ ಯಾಜಕರುಗಳು ಉತ್ತರ ಭಾರತಕ್ಕೆ ತೆರಳಿ, ಸರಳವಾಗಿ ಜೀವಿಸುತ್ತಾ ಬಡ ಜನರಿಗೆ ಸಹಾಯ ಮಾಡುತ್ತಿರುತ್ತಾರೆ. ಹಾಗಾದರೆ ನೀವು ಯಾರನ್ನು ಹಿಂಭಾಲಿಸುತ್ತೀರಿ? ಪೌಲನನ್ನ ಅಥವಾ ಪೇತ್ರನನ್ನ? ಅಥವಾ ಇವತ್ತಿನ ನಕಲಿಗಳನ್ನ? ಪೌಲನು ಮುಂದುವರೆದು ಈ ರೀತಿ ಹೇಳುತ್ತಾನೆ, ”ನಾವು ನಮ್ಮ ಸ್ವಂತ ಕೈಗಳಿಂದ ಕೆಲಸ ಮಾಡಿ ದುಡಿಯುವವರೂ, ಹಿಂಸೆಪಟ್ಟು ಸಹಿಸಿಕೊಳ್ಳುವವರು ಆಗಿದ್ದೇವೆ” (1 ಕೊರಿಂಥ 4:11<, 12).

ಪೌಲನು ತನ್ನ ಹಣಕಾಸಿನ ಅಗತ್ಯತೆಗಳನ್ನು ತಾನೇ ನೋಡಿಕೊಂಡನು, ಹಾಗಿದ್ದರೂ ಸಹ ಪೌಲನು ಹಿನೈಸಲ್ಪಟ್ಟವನು ಮತ್ತು ಮತ್ತೊಬ್ಬರಿಂದ ದೂಷಿಸಲ್ಪಟ್ಟವನು ಆಗಿದ್ದನು. ಜನರು ಪೌಲನ ವಿಷಯವಾಗಿ ಕಟ್ಟು ಕಥೆಗಳನ್ನು ಹೇಳುತ್ತಿದ್ದರು. ಆದರೆ ಪೌಲನು ಹಿಂತಿರುಗಿ ಅವರನ್ನು ಆಶೀರ್ವದಿಸಿದನು. ತಾನು ತೆರಳಿದಂತ ಪ್ರತಿಯೊಂದು ಕಡೆನೂ ಆತನು ಮತ್ತೊಬ್ಬರಿಂದ ಹಿಂಸೆಗೆ ಒಳಗಾದನು ಹಾಗೂ ”ಲೋಕದ ಕಸವೋ ಎಲ್ಲಾದರ ಹೊಲಸೋ” ಎಂಬಂತೆ ಇದ್ದನು (1 ಕೊರಿಂಥ 4:13). ಅದರ ಅರ್ಥ ಲೋಕವು ಪೌಲನನ್ನು ಚರಂಡಿಯಲ್ಲಿ ಹರಿಯುವಂತ ಹೊಲಸಿನ ರೀತಿಯಲ್ಲಿ ನೋಡುತ್ತಿತ್ತು. ಈ ರೀತಿಯಾಗಿ ಆ ದಿನಮಾನಗಳಲ್ಲಿನ ಅಪೊಸ್ತಲರು ಲೋಕದಿಂದ ಹಿನೈಸಲ್ಪಟ್ಟಿದ್ದರು. ಇದಕ್ಕೆ ತದ್ವಿರುದ್ಧವಾಗಿ, ಕೊರಿಂಥದ ಕ್ರೈಸ್ತರು ಲೋಕದಿಂದ ಗೌರವಿಸಲ್ಪಟ್ಟವರು ಮತ್ತು ಸನ್ಮಾನಿಸಲ್ಪಟ್ಟವರು ಆಗಿದ್ದರು ಮತ್ತು ಅವರು ಈ ವಿಷಯವಾಗಿ ಸಂತೋಷವಾಗಿದ್ದರು. ಇದನ್ನು ಹೇಳಲು ವಿಷಾಧಿಸುತ್ತೇನೆ, ಇಂದಿನ ಕ್ರೈಸ್ತತ್ವವು ದೇವರ ಸೇವಕನು ಎಂಬುದರ ಅರ್ಥವನ್ನು ಕಳೆದುಕೊಂಡಿದೆ. ನಮಗಿರುವಂತ ಸವಾಲು ಏನೆಂದರೆ, ನಾವು ಈ ಸ್ಥಳದಲ್ಲಿ ದೇವರ ಸೇವಕನು ಯಾರು ಎಂಬುದಾಗಿ ನಾವು ತೋರಿಸುವವರಾಗಿರಬೇಕು - ಅಂದರೆ, ರಾಜಿಯಾಗದೇ ಇರುವಂತವರು ಅಥವಾ ಲೋಕದ ಗೌರವವನ್ನು ಹುಡುಕದೇ ಇರುವಂತವರು ಆಗಿರಬೇಕು. ದೇವರು ಯಾರೊಬ್ಬರ ಲೋಕದ ಅರ್ಹತೆಗಳನ್ನಾಗಲಿ ಅಥವಾ ಸತ್ಯವೇದದ ಅಧ್ಯಯನದಲ್ಲಿ ಪಡೆದುಕೊಂಡಂತ ಪದವಿಯನ್ನಾಗಲಿ ನೋಡುವುದಿಲ್ಲ. ಇಂಥಹ ಅರ್ಹತೆಗಳು ಸೈತಾನನ್ನು ಸಹ ಭಯ ಬೀಳಿಸುವುದಿಲ್ಲ!

ಅನೇಕ ಕ್ರೈಸ್ತ ಸೇವಕರು ಸಿಂಹಾಸನದ ಮೇಲೆ ಕೂತುಕೊಂಡು ಗೌರವವನ್ನು ಪಡೆದುಕೊಳ್ಳಬೇಕು ಎಂಬ ಬಯಕೆಯನ್ನು ಹೊಂದಿರುತ್ತಾರೆ. ಆ ಮಾರ್ಗದಲ್ಲಿ ನೀವು ಹೋಗಬೇಡಿ. ನಿಮ್ಮ ಜೀವಿತದ ಪೂರ್ತಿ ದೀನತೆಯುಳ್ಳ ದೇವರ ಸೇವಕನಾಗಿರಿ. ನೀವು ಒಂದು ವೇಳೆ ಲೋಕದಿಂದ ಮತ್ತು ಬಾಬೇಲೋನಿನ ಕ್ರೈಸ್ತತ್ವದಿಂದ ತಿರಸ್ಕರಿಸಲ್ಪಟ್ಟರೂ ಸಹ. ಒಬ್ಬ ಸಾಮಾನ್ಯ ಸಹೋದರ ಮತ್ತು ಸಹೋದರಿಯಾಗಿರಿ.

ಕೊರಿಂಥದವರು ವಿಶೇಷವಾಗಿದ್ದಿದ್ದಕ್ಕಾಗಿ ಮತ್ತು ನೆಮ್ಮದಿಯಿಂದ ಇದ್ದಿದ್ದಕ್ಕಾಗಿ ಪೌಲನು ಹೊಟ್ಟೆಕಿಚ್ಚು ಪಟ್ಟನಾ? ಇಲ್ಲ. ಅವರಿಗಾಗಿ ವಿಷಾಧವನ್ನು ಹೊಂದಿದ್ದನು, ಏಕೆಂದರೆ ಪೌಲನು ಅವರಿಗಿಂತ ಹೆಚ್ಚು ಆಶೀರ್ವದಿಸಲ್ಪಟ್ಟಂತ ಸ್ಥಾನದಲ್ಲಿ ಇದ್ದನು. ಪೌಲನು ಅವರಿಗೆ ತಂದೆಯ ರೀತಿಯಲ್ಲಿ ಮಾತನಾಡುತ್ತಿದ್ದನು ಮತ್ತು ಅವರನ್ನು ನಾಚಿಕೆ ಪಡಿಸುತ್ತಿರಲಿಲ್ಲ (1 ಕೊರಿಂಥ 4:14). ಒಬ್ಬ ನಿಜವಾದ ದೇವರ ಸೇವಕನು ತಂದೆಯಾಗಿದ್ದಾನೆ. ಆತನು ಜನರನ್ನು ನಾಚಿಕೆ ಪಡಿಸುವುದಿಲ್ಲ. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ನಾಚಿಕೆಪಡಿಸಬಹುದು. ಒಬ್ಬ ಒಳ್ಳೆಯ ತಂದೆಯು ಮಗು ಏನೇ ಮಾಡಿದರೂ ಆ ಮಗುವನ್ನು ನಾಚಿಕೆ ಪಡಿಸುವುದಿಲ್ಲ, ಒಂದು ವೇಳೆ ಮೂಢತನದ ಕೆಲಸವನ್ನು ಮಾಡಿದರೂ ಸಹ. ಆದರೆ ಉಪಾಧ್ಯಾಯರು ಹತ್ತು ಸಾವಿರ ಮಂದಿ ಇದ್ದರೂ ತಂದೆಗಳು ಬಹು ಮಂದಿ ಇಲ್ಲ. ಕ್ರೈಸ್ತತ್ವದಲ್ಲಿ ತಂದೆಗಳಿಂದ ಉಪಾಧ್ಯಾಯರಿಗೆ ಅನುಪಾತವು 1:10,000 ಇದೆ ಎಂಬುದಾಗಿ ಹೇಳಬಹುದು (1 ಕೊರಿಂಥ 4:15).