WFTW Body: 

ಆದಿಕಾಂಡ 22ನೇ ಅಧ್ಯಾಯ, "ಈ ಸಂಗತಿಗಳ ನಂತರ" ಎಂದು ಆರಂಭಗೊಳ್ಳುತ್ತದೆ. ಈ ಅಧ್ಯಾಯದಲ್ಲಿ ಬರುವ ಪರಿಶೋಧನೆಗೆ ಮೊದಲು ನಡೆದ ಸಂಗತಿಯನ್ನು ನಾವು ಗಮನಿಸಿದರೆ, ಅಬ್ರಹಾಮನು ಒಂದು ಪ್ರಭಾವಶಾಲಿ ಸ್ಥಾನದಲ್ಲಿ ಇರುವುದನ್ನು ನಾವು ಕಾಣುತ್ತೇವೆ. ಅನ್ಯಜನರು ಆತನ ಬಳಿಗೆ ಬಂದು, "ನೀನು ಮಾಡುವ ಎಲ್ಲಾ ಕೆಲಸಗಳಲ್ಲೂ ದೇವರು ನಿನ್ನ ಸಂಗಡ ಇದ್ದಾನೆ,"ಎಂದು ಅವನಿಗೆ ಹೇಳುತ್ತಾರೆ (ಆದಿ. 21:22). ಸಾರಳು ಗರ್ಭವತಿಯಾದ ಸಂಗತಿಯನ್ನು ಅವರು ಕೇಳಿ, ನಿಶ್ಚಯವಾಗಿ ದೇವರು ಈ ಕುಟುಂಬದ ಸಂಗಡ ಇದ್ದಾರೆಂದು ಅವರಿಗೆ ಮನವರಿಕೆಯಾಗಿತ್ತು. ಈಗ ಇಷ್ಮಾಯೇಲನು ಹೊರಗೆ ಹಾಕಲ್ಪಟ್ಟಿದ್ದನು ಮತ್ತು ಇಸಾಕನು ಅಬ್ರಹಾಮನ ಹೃದಯದ ಕಣ್ಮಣಿಯಾಗಿದ್ದನು. ಹೀಗಿರುವಾಗ, ಅಬ್ರಹಾಮನು ದೇವರನ್ನು ಸಂಪೂರ್ಣ ಸಮರ್ಪಣಾ ಭಾವದಿಂದ ಮತ್ತು ಬೇರೆಲ್ಲಕ್ಕೂ ಹೆಚ್ಚಾಗಿ ಪ್ರೀತಿಸುವ ಸ್ಥಿತಿಯಿಂದ ದೂರ ಸರಿಯುವ ಬಹು ದೊಡ್ಡ ಅಪಾಯದಲ್ಲಿದ್ದನು. ಹಾಗಾಗಿ ದೇವರು ಅವನನ್ನು ಮತ್ತೊಮ್ಮೆ ಪರೀಕ್ಷಿಸಿದರು, ಮತ್ತು ಇಸಾಕನನ್ನು ಸರ್ವಾಂಗ ಹೋಮವಾಗಿ ತನಗೆ ಸಮರ್ಪಿಸುವಂತೆ ಅವನಿಗೆ ಹೇಳಿದರು. ಆಗಲೂ ಸಹ ದೇವರ ಮಾತನ್ನು ಆಲಿಸುವ ಕಿವಿಗಳು ಹಾಗೂ ದೇವರು ಏನು ಆಜ್ಞಾಪಿಸಿದರೂ ಅದಕ್ಕೆ ವಿಧೇಯನಾಗುವಂತ ಹೃದಯ ಅವನಲ್ಲಿದ್ದವು. ಅಬ್ರಹಾಮನು ಮರುದಿನ ಮುಂಜಾನೆ ಎದ್ದು, ದೇವರ ಆಜ್ಞೆಯನ್ನು ಪಾಲಿಸಲು ಹೊರಟನು (ಆದಿ. 22:3). ದೇವರು ಆ ಹಿಂದಿನ ರಾತ್ರಿ ಈ ಮುದುಕನಾಗಿದ್ದ ಪಿತಾಮಹನೊಂದಿಗೆ ಮಾತನಾಡಿ ಆಜ್ಞೆಯನ್ನು ನೀಡಿದ ನಂತರ, ಆತನ ಮನಸ್ಥಿತಿ ಹೇಗಿತ್ತೆಂದು ದೇವರ ವಚನವು ನಮಗೆ ಏನೂ ಹೇಳುವುದಿಲ್ಲ. ಆ ರಾತ್ರಿ ಆತನು ನಿದ್ರಿಸಲಿಲ್ಲವೆಂದು ನಾನು ದೃಢವಾಗಿ ನಂಬುತ್ತೇನೆ. ಆತನು ಅತ್ತಿಂದಿತ್ತ ತಿರುಗಾಡುತ್ತಾ, ಆಗಾಗ ಹೋಗಿ ತನ್ನ ಮುದ್ದು ಮಗನನ್ನು ನೋಡುತ್ತಾ ಸಮಯ ಕಳೆದಿರಬಹುದು; ಮರುದಿನ ತಾನು ಮಾಡಬೇಕಾಗಿದ್ದ ಕೆಲಸವನ್ನು ನೆನೆಸಿಕೊಂಡು ಅವನ ಕಣ್ಣುಗಳಿಂದ ಬಹಳಷ್ಟು ಕಣ್ಣೀರು ಹರಿದಿರಬಹುದು.

ಅಬ್ರಹಾಮನಿಗೆ ತನ್ನ ಮುದಿ ಪ್ರಾಯದಲ್ಲಿ ಹುಟ್ಟಿದ ಮಗನನ್ನು ಬಲಿಯಾಗಿ ಅರ್ಪಿಸುವುದು ಎಷ್ಟು ಕಷ್ಟಕರವಾಗಿರಬೇಕು. ಆದರೆ ಆತನು ದೇವರಿಗೆ ವಿಧೇಯನಾಗುವುದಕ್ಕೆ ಎಷ್ಟು ದೊಡ್ಡ ಬೆಲೆಯನ್ನಾದರೂ ಕಟ್ಟಲು ಸಿದ್ಧನಿದ್ದನು. ಆತನು ಐವತ್ತು ವರ್ಷಗಳ ಹಿಂದೆ ಊರ್ ಎಂಬ ಪಟ್ಟಣದಲ್ಲಿ ದೇವರ ಕರೆಯನ್ನು ಕೇಳಿ ನೊಗಕ್ಕೆ ಕೈಹಾಕಿದ್ದನು; ಮತ್ತು ಈಗ ಆತನು ಹಿಂದೆ ತಿರುಗಿ ನೋಡಲು ಸಿದ್ಧನಿರಲಿಲ್ಲ. ಆತನಲ್ಲಿ ಮಿತಿಯಿಲ್ಲದ ವಿಧೇಯತೆಯಿತ್ತು ಮತ್ತು ಆತನ ಮನಸ್ಸು ತನ್ನ ದೇವರಿಗಾಗಿ ಯಾವುದೇ ತ್ಯಾಗ ಮಾಡಲು ಹಿಂಜರಿಯಲಿಲ್ಲ. ದೇವರ ಸ್ನೇಹಿತನೆಂಬ ಹೆಸರು ಆತನಿಗೆ ಸಿಕ್ಕಿದ್ದರಲ್ಲಿ ಅಶ್ಚರ್ಯವೇನೂ ಇಲ್ಲ.

ಅಬ್ರಹಾಮನು ಇಸಾಕನನ್ನು ಯಜ್ಞವೇದಿಯ ಮೇಲೆ ಸಮರ್ಪಿಸಲು ಹೊರಟಾಗ, ತನ್ನ ಮಗನು ಸತ್ತರೂ ಅವನನ್ನು ಬದುಕಿಸಲು ದೇವರು ಶಕ್ತರಾಗಿದ್ದಾರೆ ಎಂಬ ನಂಬಿಕೆ ಆತನ ಹೃದಯದಲ್ಲಿತ್ತು. ಇಬ್ರಿಯರಿಗೆ 11:19ರಲ್ಲಿ ಹಾಗೆಂದು ಬರೆದಿರುವುದನ್ನು ನಾವು ನೋಡುತ್ತೇವೆ. ಈಗಾಗಲೇ ದೇವರು ಮರಣದಿಂದ ಮೇಲಕ್ಕೆ ಎಬ್ಬಿಸುವ ತನ್ನ ಪ್ರಭಾವದ ಪೂರ್ವಾನುಭವವನ್ನು ಅಬ್ರಹಾಮನಿಗೆ, ಆತನ ಮತ್ತು ಸಾರಳ ಪ್ರಾಯಮೀರಿದ್ದ ದೇಹಗಳಿಂದ ಇಸಾಕನು ಜನಿಸುವುದರ ಮೂಲಕ ತೋರಿಸಿದ್ದರು. ಯಜ್ಞವೇದಿಯ ಮೇಲೆ ಕೊಲ್ಲಲ್ಪಡಲಿದ್ದ ಇಸಾಕನನ್ನು ತಿರುಗಿ ಜೀವಂತಗೊಳಿಸಲು ಇಂತಹ ದೇವರಿಗೆ ಖಂಡಿತವಾಗಿ ಯಾವ ಅಡೆತಡೆಯೂ ಇರಲಾರದು. ಹಾಗಾಗಿ ಅಬ್ರಹಾಮನು ತನ್ನ ಸೇವಕರಿಗೆ ಮೊರೀಯ ಬೆಟ್ಟದ ಬುಡದಲ್ಲಿ ಇರುವಂತೆ ತಿಳಿಸುವಾಗ, "ನಾನೂ ನನ್ನ ಮಗನೂ ಅಲ್ಲಿಗೆ ಹೋಗಿ ದೇವಾರಾಧನೆ ಮಾಡಿಕೊಂಡು ನಿಮ್ಮ ಬಳಿಗೆ ತಿರಿಗಿ ಬರುತ್ತೇವೆ," ಎಂದು ಹೇಳಿದನು (ಆದಿ. 22:5). ಆ ಮಾತು ನಂಬಿಕೆಯ ಮಾತಾಗಿತ್ತು. ಇಸಾಕನು ತನ್ನ ಜೊತೆಗೆ ಹಿಂದಿರುಗಿ ಬರುತ್ತಾನೆಂದು ಆತನು ನಂಬಿದ್ದನು.

ಆತನು ತನ್ನ ಸೇವಕರಿಗೆ ಹೇಳುವಾಗ, "ನಾವು ದೇವಾರಾಧನೆ ಮಾಡಲು ಹೋಗುತ್ತಿದ್ದೇವೆ," ಎಂದು ಹೇಳಿದ್ದನ್ನು ಸಹ ಗಮನಿಸಿರಿ. ದೇವರು ತನ್ನ ಮೇಲೆ ಬಹಳ ದೊಡ್ಡ ಭಾರವನ್ನು ಹೊರಿಸಿದ್ದಾರೆಂದು ಆತನು ಗೊಣಗಲಿಲ್ಲ, ಮತ್ತು ತಾನು ದೇವರಿಗೆ ಒಂದು ಅದ್ಭುತವಾದ ಬಲಿದಾನವನ್ನು ಮಾಡಲಿದ್ದೇನೆಂದು ಸಹ ಆತನು ಹೆಮ್ಮೆಪಡಲಿಲ್ಲ. ಇಲ್ಲ. ದೇವರಿಗೆ ತಾವು ನೀಡುವ ಕೊಡುಗೆಯನ್ನು ಇತರ ಜನರಿಗೆ ಪರೋಕ್ಷವಾಗಿ ತೋರಿಸುವಂತ ಜನರ ಗುಂಪಿಗೆ ಅಬ್ರಹಾಮನು ಸೇರಿರಲಿಲ್ಲ. ಅಬ್ರಹಾಮನು ತನ್ನ ದೇವರನ್ನು ಆರಾಧಿಸಲು ತಾನು ಹೋಗುತ್ತಿದ್ದೇನೆಂದು ಹೇಳಿದನು. ಇಲ್ಲಿ ನಾವು ’ಆರಾಧನೆ’ಯ ನಿಜವಾದ ಅರ್ಥವನ್ನು ಸ್ವಲ್ಪ ಮಟ್ಟಿಗೆ ತಿಳಕೊಳ್ಳುತ್ತೇವೆ. ಒಂದು ಸಲ ಯೇಸುವು ಹೇಳಿದ ಮಾತನ್ನು ನೆನಪಿಸಿಕೊಳ್ಳಿರಿ, "ಅಬ್ರಹಾಮನು ನನ್ನ ದಿನವನ್ನು ನೋಡಿ ಉಲ್ಲಾಸಪಟ್ಟನು; ಅವನು ಅದನ್ನು ನೋಡಿದನು ಮತ್ತು ಸಂತೋಷಗೊಂಡನು"(ಯೋಹಾ. 8:56). ಅಬ್ರಹಾಮನು ಈ ಮೊರೀಯ ಬೆಟ್ಟದ ಮೇಲೆ ಕ್ರಿಸ್ತನ ದಿನವನ್ನು ನೋಡಿದನೆಂದು ಯಾವ ಸಂದೇಹವೂ ಇಲ್ಲದೆ ಹೇಳಬಹುದು. ಮುದಿಪ್ರಾಯದ ಆ ಪಿತಾಮಹನು ತಾನು ಕೈಗೊಂಡ ಕಾರ್ಯದ ಮೂಲಕ ಒಂದು ಪ್ರವಾದನಾ ದರ್ಶನವನ್ನು ಕಂಡು, ಮುಂದೆ ಒಂದು ದಿನ ಸ್ವತಃ ತಂದೆಯಾದ ದೇವರು ಅವರಿಂದ ಹುಟ್ಟಿದ ಒಬ್ಬನೇ ಮಗನನ್ನು ಕಲ್ವಾರಿಯ ಗುಡ್ಡಕ್ಕೆ ಕರೆದೊಯ್ದು, ಆತನನ್ನು ಮಾನವ ಕುಲದ ಪಾಪಗಳಿಗಾಗಿ ಯಜ್ಞವಾಗಿ ಸಮರ್ಪಿಸುವ ಒಂದು ಚಿತ್ರಣವನ್ನು (ಅದು ಬಹಳ ಅಸ್ಪಷ್ಟ ಚಿತ್ರಣವೇ ಇರಬಹುದು) ನೋಡಿದನು. ಮತ್ತು ಅಬ್ರಹಾಮನಿಗೆ ಆ ದಿನ ಮೊರೀಯ ಬೆಟ್ಟದ ಮೇಲೆ, ದಾರಿತಪ್ಪಿದ ಲೋಕವನ್ನು ರಕ್ಷಿಸಲಿಕ್ಕೆ ದೇವರ ಹೃದಯವು ಎಷ್ಟು ದೊಡ್ಡ ಬೆಲೆಯನ್ನು ಕಟ್ಟಬೇಕು ಎಂದು ಸ್ವಲ್ಪ ಮಟ್ಟಿಗೆ ಅರಿವಾಯಿತು. ಆತನು ಆ ಬೆಳಗ್ಗಿನ ಸಮಯದಲ್ಲಿ ದೇವರ ಹೃದಯದೊಂದಿಗೆ ಬಹಳ ನಿಕಟವಾದ ಸಂಬಂಧವನ್ನು ಪಡಕೊಂಡನು. ಹೌದು, ಆತನು ದೇವರನ್ನು ಆರಾಧಿಸಿದನು - ಕೇವಲ ಚೆಲುವಾದ ಮಾತುಗಳಿಂದ ಮತ್ತು ಕೀರ್ತನೆಗಳಿಂದ ಅಲ್ಲ, ಆದರೆ ಬಹು ಬೆಲೆಬಾಳುವ ವಿಧೇಯತೆ ಹಾಗೂ ತ್ಯಾಗದ ಮೂಲಕ.

ದೇವರ ಆಳವಾದ ಮತ್ತು ನಿಕಟವಾದ ಜ್ಞಾನವು ಕೇವಲ ಇಂತಹ ವಿಧೇಯತೆಯ ಮೂಲಕ ಪ್ರಾಪ್ತವಾಗುತ್ತದೆ. ನಾವು ನಮ್ಮ ಮನಸ್ಸುಗಳಲ್ಲಿ ಧರ್ಮಶಾಸ್ತ್ರದ ನಿಖರವಾದ ಜ್ಞಾನವನ್ನು ಹೇರಳವಾಗಿ ತುಂಬಿಕೊಳ್ಳಬಹುದು; ಆದರೆ ನಿಜವಾದ ಆತ್ಮಿಕ ಜ್ಞಾನವು, ನಾವು ನಮ್ಮ ಸಮಸ್ತವನ್ನೂ ದೇವರಿಗೆ ಸಮರ್ಪಿಸಿದಾಗ ಮಾತ್ರ ಬರುತ್ತದೆ. ಇದನ್ನು ಬಿಟ್ಟರೆ ಅದನ್ನು ಪಡೆಯುವುದಕ್ಕೆ ಬೇರೆ ದಾರಿಯಿಲ್ಲ. ಮೇಲಿನ ಸಂದರ್ಭದಲ್ಲಿ ಅಬ್ರಹಾಮನು ಕೊಡುಗೆಗಳನ್ನು ಕೊಡುವಾತನನ್ನು ಪ್ರೀತಿಸುತ್ತಾನೋ ಅಥವಾ ಕೊಡುಗೆಗಳನ್ನು ಹೆಚ್ಚಾಗಿ ಪ್ರೀತಿಸುತ್ತಾನೋ ಎಂದು ಪರೀಕ್ಷಿಸಲ್ಪಟ್ಟನು. ಇಸಾಕನು ನಿಶ್ಚಯವಾಗಿ ದೇವರ ಕೊಡುಗೆಯಾಗಿದ್ದನು, ಆದರೆ ಅಬ್ರಹಾಮನು ತನ್ನ ಮಗನಿಗೆ ಮಿತಿ ಮೀರಿದ ಪ್ರೀತಿಯನ್ನು ತೋರಿಸುವ ಅಪಾಯದಲ್ಲಿದ್ದನು. ಇಸಾಕನು ಒಂದು ವಿಗ್ರಹದಂತೆ ಕಂಡುಬಂದು, ಅಬ್ರಹಾಮನ ಆತ್ಮಿಕ ದೃಷ್ಟಿಯನ್ನು ಮಂಕಾಗಿಸುವ ಹಂತಕ್ಕೆ ಇಸಾಕನು ಬಂದು ತಲುಪಿದ್ದನು. ಹಾಗಾಗಿ ದೇವರು ಅಬ್ರಹಾಮನನ್ನು ಇಂತಹ ದುರಂತದಿಂದ ರಕ್ಷಿಸಲಿಕ್ಕಾಗಿ ಹಸ್ತಕ್ಷೇಪ ಮಾಡಿದರು.