WFTW Body: 

ಆದಿಕಾಂಡ 28:11 ರಲ್ಲಿ ”ಸೂರ್ಯ ಮುಳುಗಿದನು” ಎಂಬುದಾಗಿ ಬರೆಯಲ್ಪಟ್ಟಿದೆ. ಇದು ಕೇವಲ ಒಂದು ಭೌಗೋಳಿಕ ವಾಸ್ತವಾಂಶ ಆಗಿದ್ದಾಗ್ಯೂ, ಯಾಕೋಬನ ಆತ್ಮೀಕ ಜೀವಿತದಲ್ಲಿಯೂ ಸಹ ಸೂರ್ಯನು ನಿಶ್ಚಿತವಾಗಿ ಮುಳುಗಿದ್ದನು. ಆತನು ಲೋಕಕ್ಕಾಗಿ ಜೀವಿಸುತ್ತಿದ್ದನು ಮತ್ತು ಮೋಸ ಮಾಡಿ ಎಲ್ಲವನ್ನೂ ತನ್ನತ್ತ ಬಾಚಿಕೊಳ್ಳುತ್ತಿದ್ದನು. ಆದಾಗ್ಯೂ ದೇವರು ತನ್ನ ಕರುಣೆಯಲ್ಲಿ ಯಾಕೋಬನನ್ನು ಸಂಧಿಸಿದರು ಮತ್ತು ಆತನ ಜೀವಿತಕ್ಕೆ ದೊಡ್ಡ ಉದ್ದೇಶವಿರುವುದಾಗಿ ತಿಳಿಸಿದರು. ದೇವರು ಯಾಕೋಬನಿಗೆ ಹೇಳಿದ್ದೇನೆಂದರೆ, ”ನಾನೇ ನಿನ್ನ ತಂದೆಯಾದ ಅಬ್ರಹಾಮನ ದೇವರಾಗಿದ್ದೇನೆ”; ”ನೀನು ಮಲಗಿಕೊಂಡಿರುವ ಈ ದೇಶವನ್ನು ನಿನಗೂ ನಿನ್ನ ಸಂತತಿಗೂ ಕೊಡುತ್ತೇನೆ. ನಿನ್ನ ಮೂಲಕವೂ ನಿನ್ನ ಸಂತತಿಯ ಮೂಲಕವೂ ಭೂಮಿಯ ಎಲ್ಲಾ ಕುಲದವರಿಗೆ ಆಶೀರ್ವಾದ ಉಂಟಾಗುವದು” (ಆದಿಕಾಂಡ 28:13,14) . ಇದು ”ಅಬ್ರಹಾಮನ ಆಶೀರ್ವಾದ” ಎಂಬುದಾಗಿ ಕರೆಯಲ್ಪಟ್ಟಿದೆ (ಗಲಾತ್ಯ 3:14). ದೇವರು ಅಬ್ರಹಾಮನನ್ನು ಕರೆದಾಗ, ಆತನಿಗೆ ಹೇಳಿದ್ದೇನೆಂದರೆ, ”ನಾನು ನಿನ್ನನ್ನು ಆಶೀರ್ವದಿಸುವೆನು, ಮತ್ತು ನಿನ್ನ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದ ಉಂಟಾಗುವದು” (ಆದಿಕಾಂಡ 12:2,3) . ದೇವರು ಅದೇ ಮಾತನ್ನು ಇಲ್ಲಿ ಯಾಕೋಬನಿಗೆ ಮತ್ತೊಮ್ಮೆ ಹೇಳಿದರು. ಗಲಾತ್ಯ 3:14 ರಲ್ಲಿ ನಮಗೆ ತಿಳಿಸಲಾಗಿರುವಂತೆ, ನಾವು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಾಗ, ಈ ಆಶೀರ್ವಾದವು ನಮಗೂ ಅನ್ವಯಿಸುತ್ತದೆ.

ಹಾಗಿದ್ದರೆ ಪವಿತ್ರಾತ್ಮನಿಂದ ತುಂಬಿಸಲ್ಪಡುವುದರ ಉದ್ದೇಶವೇನು? ನಾವು ಅನ್ಯ ಭಾಷೆಯಲ್ಲಿ ಮಾತನಾಡಬೇಕೆಂಬ ಉದ್ದೇಶವಂತೂ ನಿಶ್ಚಿತವಾಗಿ ಅಲ್ಲ! ದೇವರು ತನ್ನ ಕೆಲ ಮಕ್ಕಳಿಗೆ ಕೊಡುವ ವರಗಳಲ್ಲಿ ಅದೂ ಒಂದಾಗಿದೆ, ಅಷ್ಟೇ. ದುರದೃಷ್ಟವಶಾತ್ ಅನೇಕ ಕ್ರೈಸ್ತರು ತಪ್ಪಾಗಿ ಅದಕ್ಕೆ ಬಹಳ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ. ಆದರೆ ಅದು ಪವಿತ್ರಾತ್ಮನಿಂದ ತುಂಬಿಸಲ್ಪಡುವುದರ ಮುಖ್ಯ ಉದ್ದೇಶವಲ್ಲ. ಮುಖ್ಯ ಉದ್ದೇಶ ದೈಹಿಕ ಸ್ವಸ್ಥತೆಯೂ ಸಹ ಅಲ್ಲ. ಪೌಲನು ”ತನ್ನ ದೇಹದಲ್ಲಿ ಇದ್ದಂತಹ ಶೂಲದಿಂದ” ಸ್ವಸ್ಥನಾಗಲಿಲ್ಲ. ಪವಿತ್ರಾತ್ಮನಿಂದ ತುಂಬಿಸಲ್ಪಡುವಿಕೆಯ ಮೂಲ ಉದ್ದೇಶ, ದೇವರು ನಮ್ಮನ್ನು ಆಶೀರ್ವದಿಸುವದಕ್ಕಾಗಿ, ಮತ್ತು ನಾವು ಈ ಲೋಕದಲ್ಲಿ ಸಂಧಿಸುವಂತ ಪ್ರತಿಯೊಂದು ಕುಟುಂಬಕ್ಕೂ ಆಶೀರ್ವಾದ ಉಂಟಾಗುವ ಸಲುವಾಗಿ ಆಗಿದೆ (ಗಲಾತ್ಯ 3:13) . ದೇವರು ನಮ್ಮನ್ನು ಪವಿತ್ರಾತ್ಮನಿಂದ ತುಂಬಿಸಿದಾಗ, ನಾವು ಎಲ್ಲಾ ಜನರಿಗೂ ಆಶೀರ್ವಾದನಿಧಿಗಳು ಆಗುತ್ತೇವೆ.

ಯಾರಾದರೂ ನಮ್ಮನ್ನು ಭೇಟಿಯಾದಾಗ ಯಾವುದೋ ಒಂದು ವಿಷಯದಲ್ಲಾದರೂ ಆಶೀರ್ವಾದ ಹೊಂದದೆ ಇರಲಾರರು! ಇದು ಯಾವ ರೀತಿ ಎಂದರೆ, ಹೆಚ್ಚಿನ ಸುಗಂಧ ದ್ರವ್ಯವನ್ನು ಹಾಕಿಕೊಂಡಂತ ಸ್ತ್ರೀಯರ ರೀತಿಯಲ್ಲಿ. ನೀವು ಅವರಿಂದ ಸ್ವಲ್ಪ ದೂರದಲ್ಲಿದ್ದರೂ ಸಹ ಆ ಸುಗಂಧ ದ್ರವ್ಯದ ವಾಸನೆಯನ್ನು ಅಸ್ವಾದಿಸಬಹುದು! ಅವರು ಎಲ್ಲೇ ಹೋದರೂ ಸಹ ಅವರು ಹಾಕಿಕೊಂಡಂತ ಸುಗಂಧ ದ್ರವ್ಯದ ವಾಸನೆಯನ್ನು ಜನರು ಅಸ್ವಾದಿಸುವಂತೆ ಮಾಡುತ್ತಾರೆ. ಅದರಂತೆ ನಮ್ಮ ವಿಷಯವೂ ಸಹ ಇರುತ್ತದೆ. ನಾವು ಒಂದು ಮನೆಯನ್ನು ಪ್ರವೇಶ ಮಾಡಿದಾಗ, ಅದು 5 ನಿಮಿಷಗಳ ಭೇಟಿ ಅಥವಾ ಐದು ದಿನಗಳ ಭೇಟಿ ಆಗಿರಬಹುದು, ಆ ಮನೆಯನ್ನು ನಾವು ಆಶೀರ್ವಾದ ಪಡಿಸುತ್ತೇವೆ. ಅದು ”ಅಬ್ರಹಾಮನ ಆಶೀರ್ವಾದವಾಗಿದೆ” - ಜೀವವುಳ್ಳ ಹೊಳೆಯ ನೀರು ಆಶೀರ್ವಾದಪೂರ್ವಕವಾಗಿ ಎಲ್ಲೆಡೆ ಬಾಯರಿದ ಜನರಿಗೆ ಹರಿದು ಬರುವದು.

ಆದಿಕಾಂಡ 32ನೇ ಅಧ್ಯಾಯದಲ್ಲಿ ನಾವು ಕಂಡುಕೊಳ್ಳುವುದೇನೆಂದರೆ, ಏಸಾವನು ಬರುವುದನ್ನು ಯಾಕೋಬನು ಕೇಳಿಸಿಕೊಂಡಾಗ, ತಾನು ತಪ್ಪಿಸಿಕೊಳ್ಳಬೇಕೆಂದು ಯೋಜಿಸಿದನು. ಆತನು ತಾನು ಇಷ್ಟಪಡದಂತ ಮೂವರು ಹೆಂಡತಿಯರನ್ನು ಮುಂದೆ ಕಳುಹಿಸಿದನು ಮತ್ತು ತನ್ನ ಜೊತೆಗೆ ರಾಹೇಲಳನ್ನು ಹಿಂದಕ್ಕೆ ನಿಲ್ಲಿಸಿಕೊಂಡನು. ಆತನು ಯೋಜಿಸಿದ್ದೇನೆಂದರೆ - ಒಂದು ವೇಳೆ ಎಲ್ಲರೂ ಕೊಲ್ಲಲ್ಪಟ್ಟರೂ, ತಾನು ಮತ್ತು ರಾಹೇಲಳು ಮಾತ್ರ ಬದುಕಿ ಉಳಿಯಬಹುದು, ಎಂಬುದಾಗಿ! ಹಿಂದೆ ಯಾಕೋಬನಲ್ಲಿದ್ದ ಸ್ವಾರ್ಥತನ ಇನ್ನೂ ಅವನಲ್ಲಿ ಉಳಕೊಂಡಿತ್ತು. ದೇವರು ಇಂತಹ ಸ್ವಾರ್ಥಿಯನ್ನು ಆರಿಸಿಕೊಂಡು, ಆತನನ್ನು ’ಇಸ್ರಾಯೇಲ’ನನ್ನಾಗಿ ರೂಪಾಂತರ ಮಾಡಿರುವಂತದ್ದು ನಮಗೆ ಪ್ರೋತ್ಸಾಹದಾಯಕವಾಗಿದೆ.

ಮುಂದೆ ನಾವು ಓದುವುದು ಏನೆಂದರೆ, ದೇವರು ಯಾಕೋಬನನ್ನು ಭೇಟಿಯಾಗಿ, ಆತನೊಟ್ಟಿಗೆ ಹೋರಾಡಿ, ಆತನ ತೊಡೆಯ ಕೀಲನ್ನು ಮುರಿದರು ಎಂಬುದಾಗಿ. ದೇವರು ತಾನು ಬಯಸುವಂತ ರೀತಿಯಲ್ಲಿ ನಮ್ಮನ್ನು ಬದಲಾಯಿಸಲು ನಮ್ಮ ಜೀವಿತದಲ್ಲಿ ಅನೇಕ ರೀತಿಯ ತೀರ್ವವಾದ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ದೇವರು ಯಾಕೋಬನನ್ನು ಮುರಿದು, ಈ ರೀತಿಯಾಗಿ ಹೇಳುತ್ತಾರೆ ”ನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಕರೆಯಲ್ಪಡದೆ ಇಸ್ರಾಯೇಲ (ದೇವರ ರಾಜಕುಮಾರನು) ಎಂದು ಕರೆಯಲ್ಪಡುವುದು” ಎಂಬುದಾಗಿ (ಆದಿಕಾಂಡ 32:28) . ದೇವರು ಆತನನ್ನು ”ಇಸ್ರಾಯೇಲ” ಎಂಬುದಾಗಿ ಕರೆಯಲು ಸಾಧ್ಯವಾದದ್ದು ಯಾವಾಗ? 60 ಅಥವಾ 70 ವರುಷ ಆತನೊಟ್ಟಿಗೆ ಸತತವಾಗಿ ಸೆಣಸಾಡಿ, ಮತ್ತು ಕೊನೆಗೆ ಆತನ ತೊಡೆಯ ಕೀಲನ್ನು ಮುಟ್ಟಿ ಆತನನ್ನು ಸಂಪೂರ್ಣವಾಗಿ ಮುರಿದ ನಂತರವೇ. ಇದರ ನಂತರ ದೇವರು ಈ ರೀತಿಯಾಗಿ ಹೇಳಿದರು, ”ನನ್ನನ್ನು ಹೋಗಲು ಬಿಡು” ಎಂಬುದಾಗಿ. ಕೊನೆಯದಾಗಿ ಯಾಕೋಬನು ಈ ರೀತಿಯಾಗಿ ಹೇಳಿದನು - ”ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನ್ನು ಹೋಗಲು ಬಿಡುವುದಿಲ್ಲ” ಎಂಬುದಾಗಿ. ತನ್ನ ಜೀವಿತವನ್ನು ಹಣವನ್ನು ದೋಚುವುದರಲ್ಲಿ, ಜನ್ಮಸಿದ್ದ ಹಕ್ಕನ್ನು ಬಾಚಿಕೊಳ್ಳುವುದರಲ್ಲಿ, ಆಸ್ತಿಯನ್ನು ಬಾಚಿಕೊಳ್ಳುವುದರಲ್ಲಿ, ಸ್ತ್ರೀಯರನ್ನು ಮತ್ತು ಕುರಿಗಳನ್ನು ಬಾಚುವುದರಲ್ಲಿ ಕಳೆದಿದ್ದ ಯಾಕೋಬನು, ತಾನು ಮುರಿಯಲ್ಪಟ್ಟ ನಂತರ ಅವೆಲ್ಲವನ್ನೂ ಬಿಟ್ಟು, ದೇವರನ್ನು ತಬ್ಬಿಕೊಂಡನು. ಆತನು ಈ ರೀತಿಯಾಗಿ ಹೇಳಿದಂತಿದೆ, ”ದೇವರೇ, ನಾನು ಹಣಕ್ಕಾಗಿ, ಸ್ತ್ರೀಯರಿಗಾಗಿ, ಆಸ್ತಿಗಾಗಿ ಮತ್ತು ಅನೇಕ ಇಹಲೋಕದ ಸಂಗತಿಗಳಿಗಾಗಿ ಜೀವಿಸಿದೆನು, ಆದರೆ ಇನ್ನು ಮುಂದೆ ನನಗೆ ಬೇಕಾಗಿರುವದು ನೀನೊಬ್ಬನೇ”. ದೇವರು ನಮ್ಮ ಜೀವನದಲ್ಲೂ ಸಹ ಈ ಸಂದರ್ಭ ಬರುವುದಕ್ಕಾಗಿ ಕಾಯುತ್ತಿದ್ದಾರೆ. ನಂತರ ದೇವರು ಯಾಕೋಬನಿಗೆ ಹೇಳಿದ ಹಾಗೇ, ನಮಗೂ ಸಹ ಹೀಗೆ ಹೇಳುತ್ತಾರೆ, ”ಇನ್ನು ಮುಂದೆ ನೀನು ದೋಚುವವನು ಅಥವಾ ವಂಚಕನು (ಯಾಕೋಬ) ಎಂಬ ಹೆಸರಿನಿಂದ ಕರೆಯಲ್ಪಡುವುದಿಲ್ಲ. ನೀನು ದೇವರೊಟ್ಟಿಗೆ ಪ್ರಯಾಸಪಟ್ಟು ಜಯಗಳಿಸಿದ್ದರಿಂದಾಗಿ, ಇನ್ನು ಮುಂದೆ ನೀನು ದೇವರ ರಾಜಕುಮಾರನು (ಇಸ್ರಾಯೇಲ) ಎಂದು ಕರೆಯಲ್ಪಡುವೆ.”

ಯಾಕೋಬನು ಜಯಶಾಲಿಯಾದದ್ದು ಯಾವಾಗ? ಆತನ ತೊಡೆಯ ಕೀಲು ಮುರಿಯಲ್ಪಟ್ಟಾಗ. ಸತ್ಯವೇದದ ಪ್ರಾರಂಭದಿಂದಲೂ ನಾವು ಈ ಒಂದು ದೊಡ್ಡ ಸತ್ಯವನ್ನು ನೋಡುತ್ತೇವೆ: ದೇವರು ನಮಗೆ ಬಲವನ್ನು ಕೊಡುವದಕ್ಕೆ ಮೊದಲು ನಮ್ಮನ್ನು ಮುರಿಯಬೇಕಾಗುತ್ತದೆ. ದೇವರ ರಾಜಕುಮಾರನೆಂದು ಕರೆಯಲ್ಪಡುವುದು, ಯಾಕೋಬನಂತೆ ಮುರಿಯಲ್ಪಟ್ಟು ತನ್ನ ಊರುಗೋಲನ್ನು ಆಶ್ರಯಿಸಿರುವ ಒಬ್ಬ ಮನುಷ್ಯನೇ ಹೊರತು, ಒಬ್ಬ ಮಹಾ ಬಲಶಾಲಿ ಎನಿಸಿಕೊಂಡ ’ಮಹಾಪುರುಷನು’ ಅಲ್ಲ. ಪ್ರಿಯ ಸಹೋದರ ಮತ್ತು ಸಹೋದರಿಯೇ, ದೇವರು ನಿಮ್ಮನ್ನು ತಾನು ಬಯಸುವ ರೀತಿಯಲ್ಲಿ ಸಿದ್ಧಗೊಳಿಸುವದಕ್ಕೆ ಮೊದಲು, ನಿಮ್ಮನ್ನು ಮುರಿಯುವದು ಅವಶ್ಯವಾಗಿದೆ. ಇದರ ನಂತರ ಆದಿಕಾಂಡ 32:31 ರಲ್ಲಿ ಈ ಅದ್ಭುತವಾದ ವಾಕ್ಯವನ್ನು ನಾವು ಓದುತ್ತೇವೆ, ”ಆಗ ಸೂರ್ಯೋದಯವಾಯಿತು” ಎಂಬುದಾಗಿ. ಇದೂ ಕೂಡ ಒಂದು ಭೌಗೋಳಿಕ ವಾಸ್ತವಾಂಶವಾಗಿತ್ತು - ಆದರೆ ಆತ್ಮಿಕವಾಗಿಯೂ ಸಹ, ಯಾಕೋಬನ ಜೀವನದಲ್ಲಿ ಇದು ನಿಜವಾಗಿತ್ತು. ಇಪ್ಪತ್ತು ವರುಷಗಳ ಹಿಂದೆ ಆತನ ಜೀವನದಲ್ಲಿ ಸೂರ್ಯನು ಮುಳುಗಿದ್ದನು. ಈಗ ಸೂರ್ಯನು ಉದಯಿಸಿದನು.