WFTW Body: 

ನಾವು ಪ್ರಕಟನೆ 3ರಲ್ಲಿ ಓದುವಂತೆ, ಫಿಲದೆಲ್ಫಿಯದ ಸಭೆಯು ಒಂದು ನಂಬಿಗಸ್ತ ಸಭೆಯಾಗಿತ್ತು. ಆಲ್ಲಿನ ಹಿರಿಯನು ನಂಬಿಗಸ್ತನಾಗಿದ್ದನು, ಹಾಗಾಗಿ ಆ ಸಭೆಯು ಯಥಾರ್ಥವಾಗಿತ್ತು. ಕರ್ತನು ಅವರಿಗೆ ಹೇಳಿದ್ದೇನೆಂದರೆ, "ನಾನು ನಿನ್ನೆದುರಿನಲ್ಲಿ ಒಂದು ಬಾಗಿಲನ್ನು ತೆರೆದಿಟ್ಟಿದ್ದೇನೆ. ಯಾರೂ ಅದನ್ನು ಮುಚ್ಚಲಾರರು" (ಪ್ರಕ.3:8).

ಕರ್ತನು ನಮಗಾಗಿ ಒಂದು ಬಾಗಿಲನ್ನು ತೆರೆದಾಗ, ಅದನ್ನು ಯಾರೂ ಮುಚ್ಚಲಾರರು. ಅವರು ಕೊಟ್ಟಿರುವ ಮಾತು, "ಬೀಗದ ಕೈಗಳು ನನ್ನಲ್ಲಿವೆ. ನಾನು ತೆರೆದುದನ್ನು ಯಾರೂ ಮುಚ್ಚಲಾರರು" (ಪ್ರಕ. 3:7). ನಾವು ಯಾವುದೇ ಬಾಗಿಲನ್ನು ಜೋರಾಗಿ ತಟ್ಟುತ್ತಾ ಕಾಯುವ ಅವಶ್ಯಕತೆಯಿಲ್ಲ. ನಮ್ಮ ಕರ್ತನು ನಮಗಾಗಿ ಸೂಕ್ತವಾದ ಬಾಗಿಲನ್ನು ತೆರೆಯುತ್ತಾನೆ, ನಾವು ಅದಕ್ಕಾಗಿ ಸ್ವಲ್ಪವೂ ಶ್ರಮಿಸಬೇಕಿಲ್ಲ. ಕೆಲವು ವಿಮಾನ ನಿಲ್ದಾಣಗಳಲ್ಲಿರುವ ಸ್ವಯಂಚಾಲಿತ ಬಾಗಿಲುಗಳಂತೆ, ನಾವು ಆ ದ್ವಾರಗಳನ್ನು ಸಮೀಪಿಸುತ್ತಿದ್ದಂತೆಯೇ ಅವುಗಳು ತೆರೆಯುತ್ತವೆ. ಸೇವೆಯ ಒಂದು ಅವಕಾಶ ನಿಮಗೆ ಸಿಗುವುದಕ್ಕಾಗಿ ನೀವು ಕಾಯುತ್ತಿದ್ದೀರಾ? ಆ ಬಾಗಿಲನ್ನು ನೀವು ಸ್ವತ: ತೆರೆಯಲು ಪ್ರಯತ್ನಿಸುತ್ತಿದ್ದೀರಾ ಅಥವಾ ಯಾರೋ ಒಬ್ಬ ಪ್ರಭಾವಶಾಲಿ ವ್ಯಕ್ತಿ ಅದನ್ನು ನಿಮಗಾಗಿ ತೆರೆಯಲಿ ಎಂದು ನೀವು ಎದುರು ನೋಡುತ್ತಿದ್ದೀರಾ? ಇನ್ನೊಬ್ಬರ ಸೇವಾಕಾರ್ಯವು ನಿಮಗೆ ಸಿಗಬೇಕೆಂಬ ದುರಾಸೆ ನಿಮಗಿದೆಯೇ? ಅದೊಂದು ಕೆಟ್ಟತನವಾಗಿದೆ.

ನೀವು ಸಣ್ಣಪುಟ್ಟ ವಿಷಯಗಳಲ್ಲಿ ದೇವರಿಗೆ ನಂಬಿಗಸ್ತರಾಗಿದ್ದರೆ, ಅವರು ನಿಮ್ಮ ಸೇವೆಗೆ ಅವಶ್ಯವಾದ ಬಾಗಿಲುಗಳು ಸಮಯಕ್ಕೆ ಸರಿಯಾಗಿ ತೆರೆಯುವಂತೆ ಮಾಡುತ್ತಾರೆ. ಆಗ ನೀವು ಅನೇಕ ತಪ್ಪಾದ ಬಾಗಿಲುಗಳ ಮೂಲಕ ಸಾಗುತ್ತಾ ನಿಮ್ಮ ಸಮಯವನ್ನೂ ಜೀವನವನ್ನೂ ವ್ಯರ್ಥಗೊಳಿಸುವುದಿಲ್ಲ. ದೇವರಲ್ಲಿ ನಂಬಿಕೆ ಇರಿಸಿರಿ ಮತ್ತು ಅವರೊಬ್ಬರೇ ನಿಮಗೆ ಸೂಕ್ತವಾದ ಬಾಗಿಲುಗಳನ್ನು ತೆರೆಯಲಿ - ಅವರು ಯೋಜಿಸಿರುವ ಸ್ಥಳಕ್ಕೆ ನಿಮ್ಮನ್ನು ಹೆಜ್ಜೆ ಹೆಜ್ಜೆಯಾಗಿ ನಡೆಸುತ್ತಾರೆ.

ಒಮ್ಮೆ ನಾನು ಯಾವುದೋ ಒಂದು ದೇಶಕ್ಕೆ ಪ್ರಯಾಣಿಸುತ್ತಿದ್ದಾಗ, ನನಗೆ ಕರ್ತನು ಹೇಳಿದ ಮಾತು ನೆನಪಿದೆ, "ನೀನು ಆ ದೇಶಕ್ಕೆ ಹೋಗುವಾಗ, ನಿನ್ನ ಪ್ರಯಾಣದ ಬಗ್ಗೆ ಅಲ್ಲಿರುವ ನಿನ್ನ ಪರಿಚಿತ ಜನರಿಗೆ ತಿಳಿಸಬೇಡ. ಸುಮ್ಮನೆ ಹೋಗು." ನಾನು ಹಾಗೆಯೇ ಮಾಡಿದೆ. ನಾನು ಅಲ್ಲಿ ಯಾವುದೇ ವಿಧವಾದ ಸೇವೆಯನ್ನು ಮಾಡಲಿಲ್ಲ - ಮತ್ತು ನಾನು ಹಾಗೆಯೇ ಹಿಂದಿರುಗಿ ಬಂದೆ. ನಾನು ದೇವರಿಗೆ ವಿಧೇಯನಾಗುತ್ತೇನೋ ಎಂದು ಅವರು ಅಲ್ಲಿ ನನ್ನನ್ನು ಪರೀಕ್ಷಿಸಿದರು. ಮುಂದಿನ ಸಲ ನಾನು ಆ ದೇಶಕ್ಕೆ ಹೋದಾಗ, ನನಗೆ ಪರಿಚಯವೇ ಇಲ್ಲದ ಜನರನ್ನು ಭೇಟಿಯಾಗುವಂತೆ ದೇವರು ಹಲವಾರು ಬಾಗಿಲುಗಳನ್ನು ತೆರೆದರು. ನಾನು ಇವೆಲ್ಲಾ ಸ್ಥಳಗಳಿಗೆ ಹೋಗಬೇಕೆಂದು ದೇವರ ಚಿತ್ತವಾಗಿತ್ತು. ಸಾರ್ವಭೌಮನಾದ ದೇವರು ಸೂಕ್ತವಾದ ಬಾಗಿಲುಗಳನ್ನು ಹೇಗೆ ತೆರೆಯುತ್ತಾರೆಂದು ಆಗ ನಾನು ಕಂಡುಕೊಂಡೆನು. ಒಂದು ಸೇವಾಕಾರ್ಯವನ್ನು ಪಡೆಯಲಿಕ್ಕಾಗಿ, ನಾನು ಸ್ವಪ್ರಯತ್ನದಿಂದ ಬಾಗಿಲುಗಳನ್ನು ಮುಂಚಿತವಾಗಿ ತೆರೆಯುತ್ತಿದ್ದರೆ, ದೇವರ ಚಿತ್ತದಿಂದ ನಾನು ಸಂಪೂರ್ಣವಾಗಿ ದೂರ ಸರಿಯುತ್ತಿದ್ದೆ. ಆದ್ದರಿಂದ, ನೀವು ಯಾವ ಸಂದರ್ಭದಲ್ಲೂ ನಿಮ್ಮನ್ನೇ ಹೆಚ್ಚಿಸಿಕೊಳ್ಳಬೇಡಿರಿ. ದೇವರಿಗಾಗಿ ಕಾದಿರಿ ಮತ್ತು ಅವರೇ ನಿಮಗೆ ತಕ್ಕುದಾದ ಬಾಗಿಲುಗಳನ್ನು ತೆರೆಯಲಿ. ಫಿಲದೆಲ್ಪಿಯದವರಂತೆ, ನಿಮ್ಮಲ್ಲೂ ಕೊಂಚ ಶಕ್ತಿ ಇರಬಹುದು. ಆದರೆ, ನೀವು ದೇವರ ಹೆಸರನ್ನು ಅಲ್ಲಗಳೆಯದೆ, ಅವರ ವಾಕ್ಯವನ್ನು ಪಾಲಿಸುವುದಾದರೆ, ದೇವರು ನಿಮ್ಮನ್ನು ಪ್ರೀತಿಸುತ್ತಾನೆಂದು ನಿಮ್ಮ ವೈರಿಗಳೂ ತಿಳಿಯುವಂತೆ ಅವರು ಮಾಡುತ್ತಾರೆ (ಪ್ರಕಟನೆ 3:8, 9).

ಆಗ ಕರ್ತನು ಈ ಸಭೆಗೆ ಹೇಳಿದ್ದೇನೆಂದರೆ, "ನಾನು ಬೇಗನೆ ಬರುತ್ತೇನೆ; ನಿನಗಿರುವುದನ್ನು ಹಿಡಿದುಕೊಂಡಿರು; ನಿನ್ನ ಜಯಮಾಲೆಯನ್ನು ಯಾರೂ ಅಪಹರಿಸಬಾರದು" (ಪ್ರಕಟನೆ 3:11). ಕರ್ತನು ನಮಗೊಂದು ಸೇವಾಕಾರ್ಯವನ್ನು ಕೊಟ್ಟಾಗ, ಅದನ್ನು ಪೂರೈಸುವುದರಲ್ಲಿ ನಾವು ನಂಬಿಗಸ್ತರಾಗಿರಬೇಕು. ಇಲ್ಲವಾದಲ್ಲಿ ಅವರು ಆ ಸೇವಾಕಾರ್ಯವನ್ನು ಬೇರೊಬ್ಬನಿಗೆ ಕೊಡುತ್ತಾರೆ ಮತ್ತು ಆ ವ್ಯಕ್ತಿಯು ನಿಮಗೆ ಸಿಗಬೇಕಿದ್ದ ಜಯಮಾಲೆಯನ್ನು ಪಡೆಯುತ್ತಾನೆ! ಸ್ವಂತ ಜಯಮಾಲೆಯೊಂದಿಗೆ ಅವನಿಗೆ ನಿಮ್ಮ ಜಯಮಾಲೆಯೂ ಸಿಗುತ್ತದೆ.

ಆದ್ದರಿಂದ ನಂಬಿಗಸ್ತರಾಗಿರಿ. ಜಯಶಾಲಿಗಳನ್ನು ದೇವರು "ತಮ್ಮ ಸಭೆಯ ಸ್ತಂಭಗಳಾಗಿ" ನಿಲ್ಲಿಸುತ್ತಾರೆ (ಪ್ರಕ. 3:12). ಸ್ತಂಭಗಳು ಕಟ್ಟಡವನ್ನು ಎತ್ತಿ ಹಿಡಿಯುತ್ತವೆ. ಸಂಸೋನನು ಎರಡು ಸ್ತಂಭಗಳನ್ನು ನೂಕಿದಾಗ, ಇಡೀ ಕಟ್ಟಡವು ಕುಸಿದು ಬಿತ್ತು. ಕೆಲವು ಸಲ ಇಡೀ ಸಭೆಯ ಭಾರವನ್ನು ಕೇವಲ ಇಬ್ಬರು ಹಿರಿಯರು ಎತ್ತಿ ಹಿಡಿಯಬೇಕಾಗುತ್ತದೆ. ಅವರು ಸತ್ತಾಗ, ಸಭೆಯು ಕೂಡ ಸಾಯುತ್ತದೆ. ತನ್ನ ಸಭೆಗಳಲ್ಲಿ ಅನೇಕ ಸ್ತಂಭಗಳು ಇರಬೇಕೆಂದು ದೇವರು ಬಯಸುತ್ತಾರೆ. ನೀವು ನಿಮ್ಮ ಖಾಸಗಿ ಜೀವಿತದಲ್ಲಿ ಮತ್ತು ನಿಮ್ಮ ಆಲೋಚನೆಗಳಲ್ಲಿ ಜಯಹೊಂದಲು ಶ್ರಮಿಸುವುದಾದರೆ, ನೀವೂ ಒಂದು ಸ್ತಂಭವಾಗಲು ಸಾಧ್ಯವಿದೆ.