ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ Spiritual Treasure
WFTW Body: 

ದೇವರು ಇಬ್ಬರು ದೈವಿಕ ಮನುಷ್ಯರ ಪ್ರಭಾವದ ಮೂಲಕ - ಎಜ್ರ ಮತ್ತು ನೆಹೆಮೀಯರ ಮೂಲಕ - ಯೆಹೂದ್ಯರ ದುರಾವಸ್ಥೆಯನ್ನು ತಪ್ಪಿಸಿ ಅವರನ್ನು ಶ್ರೇಷ್ಠವಾದ ಆತ್ಮಿಕ ಸ್ಥಿತಿಗೆ ಮೇಲಕ್ಕೆತ್ತಿದ್ದನ್ನು, ಅಂದರೆ ಅವರ ನಡುವೆ ಅತಿ ಶ್ರೇಷ್ಠ ಉಜ್ಜೀವನವನ್ನು ಉಂಟುಮಾಡಿದ್ದನ್ನು ’ನೆಹೆಮೀಯನ ಪುಸ್ತಕವು’ ನಮಗೆ ತೋರಿಸುತ್ತದೆ.

ನೆಹೆಮೀಯ ಪುಸ್ತಕದ 8ನೇ ಅಧ್ಯಾಯದಲ್ಲಿ, ದೇವರು, ಎಜ್ರನ ಮೂಲಕ ಮಾಡಿದ ಕಾರ್ಯದ ಬಗ್ಗೆ ನಾವು ಓದುತ್ತೇವೆ.ಎಜ್ರನು ದೇವರ ವಾಕ್ಯವನ್ನು ತೆಗೆದುಕೊಂಡು, ಸ್ತ್ರೀ-ಪುರುಷರು ಮತ್ತು ಮಕ್ಕಳಲ್ಲಿ ಬೋಧನೆಯನ್ನು ಅರಿಯಲು ಶಕ್ತರಾಗಿರುವಂತ ಎಲ್ಲರನ್ನು ಒಟ್ಟಾಗಿ ಕೂಡಿಸಿದನು. ಆ ಮೇಲೆ ಆತನು ಅವರಿಗೆ 6 ಘಂಟೆಗಳ ಕಾಲ ಒಂದು ಸತ್ಯವೇದದ ಪಾಠವನ್ನು ಮಾಡಿದನು! ಅವರೆಲ್ಲರೂ "ಧರ್ಮಶಾಸ್ತ್ರ ಪಾರಾಯಣವನ್ನು ಆಸಕ್ತಿಯಿಂದ ಲಾಲಿಸಿದರು," ಎಂದು ಅಲ್ಲಿ ಹೇಳಲಾಗಿದೆ (ನೆಹೆ. 8:3). ಅವರು ದೇವರನ್ನು ಸ್ತುತಿಸುವ ಮೂಲಕ ಕೂಟವನ್ನು ಆರಂಭಿಸಿದರು (ನೆಹೆ. 8:4). ಆ ಮೇಲೆ ಎಜ್ರನು ದೇವರ ವಾಕ್ಯದಲ್ಲಿ ಬರೆಯಲ್ಪಟ್ಟಿದ್ದ ಎಲ್ಲಾ ಸಂಗತಿಗಳನ್ನು ಸ್ಪಷ್ಟವಾಗಿ ಓದಿ, ಅದರ ತಾತ್ಪರ್ಯವನ್ನು ಅವರಿಗೆ ತಿಳಿಯುವಂತೆ ಆಸಕ್ತಿಯಿಂದ ವಿವರಿಸಿದನು (ನೆಹೆ. 8:8). ಎಜ್ರನು ಅಲ್ಲಿ ನೆರೆದಿದ್ದ ಎಲ್ಲಾ ಜನರಿಗೆ ಇವೆಲ್ಲವನ್ನು ಬಹಳ ಸ್ಪಷ್ಟವಾಗಿ ವಿವರಿಸುವ ಸಾಮರ್ಥ್ಯವನ್ನು ಹೊಂದಬೇಕಾದರೆ, ಆತನು ಸ್ವತಃ ಅನೇಕ ತಿಂಗಳುಗಳ ಮತ್ತು ವರ್ಷಗಳ ಕಾಲ ದೇವರ ವಾಕ್ಯವನ್ನು ಅಧ್ಯಯನ ಮಾಡಿದ್ದನು. ಈ ಸಮಯಕ್ಕಾಗಿ ದೇವರು ಆತನನ್ನು ಗುಟ್ಟಾಗಿ ಸಿದ್ಧಪಡಿಸಿದ್ದರು.

ಅಲ್ಲಿ ಉಜ್ಜೀವನ ಉಂಟಾಯಿತು ಮತ್ತು ಜನರು ತಮ್ಮ ಪಾಪಗಳಿಗಾಗಿ ಅಳಲು ಆರಂಭಿಸಿದರು (ನೆಹೆ. 8:9). ಆಗ ಅವರು ದೇವರಿಂದ ಪಡೆದಿದ್ದ ಒಳ್ಳೆಯ ಆಹಾರ, ಪಾನಗಳನ್ನು ಬಡಜನರೊಂದಿಗೆ ಹಂಚಿಕೊಂಡು ಆನಂದಿಸುವಂತೆ ಅವರನ್ನು ಪ್ರೋತ್ಸಾಹಿಸಲಾಯಿತು. ಹಾಗೆ ಮಾಡಿದಾಗ "ಕರ್ತನ ಆನಂದವೇ ಅವರ ಆಶ್ರಯವಾಗುತ್ತದೆ," ಎಂದು ಅವರಿಗೆ ತಿಳಿಸಲಾಯಿತು (ನೆಹೆ. 8:10). ಅವರೆಲ್ಲರು ಈ ಬೋಧನೆಯನ್ನು ಪಾಲಿಸಿದರು. ಮರುದಿನ ಎಜ್ರನು, ಜನರ ಪ್ರಧಾನರನ್ನು ಸೇರಿಸಿಕೊಂಡು, ಅವರಿಗಾಗಿ ಸತ್ಯವೇದ ಅಧ್ಯಯನವನ್ನು ನಡೆಸಿದನು (ನೆಹೆ. 8:13). ದೇವರ ವಾಕ್ಯದಲ್ಲಿ ಇಸ್ರಾಯೇಲ್ಯರು "ಪರ್ಣಶಾಲೆಗಳ ಜಾತ್ರೆಯನ್ನು" ("Feast of Booths") ಪ್ರತಿ ವರ್ಷವೂ ಏಳನೆಯ ತಿಂಗಳಿನಲ್ಲಿ ಆಚರಿಸಬೇಕು ಎಂಬ ನಿಯಮವು ಅವರ ಗಮನಕ್ಕೆ ಬಂದಾಗ, ಅವರು ತಕ್ಷಣ ಆ ಆಜ್ಞೆಯನ್ನು ಪಾಲಿಸಿದರು. ಈ ಜಾತ್ರೆಯು ಹಿಂದಿನ ಸುಮಾರು 900 ವರ್ಷಗಳಿಂದ ಆಚರಿಸಲ್ಪಟ್ಟಿರಲಿಲ್ಲ - ಯೆಹೋಶುವನ ಕಾಲದಿಂದ ಈ ವರೆಗೂ ಜನರು ಈ ಆಜ್ಞೆಯನ್ನು ಪಾಲಿಸಿರಲಿಲ್ಲ (ನೆಹೆ. 8:14-17). ದೇವರಿಗೆ ಒಪ್ಪುವ ಮನುಷ್ಯನಾಗಿದ್ದ ದಾವೀದನು ಸಹ ಈ ಆಜ್ಞೆಯನ್ನು ಪಾಲಿಸುವಂತೆ ಇಸ್ರಾಯೇಲ್ಯರನ್ನು ನಡೆಸಿರಲಿಲ್ಲ. ಇದರ ನಂತರ ಎಜ್ರನು ಮುಂದಿನ ಏಳು ದಿನಗಳ ವರೆಗೂ ಜನರಿಗಾಗಿ ಧರ್ಮಶಾಸ್ತ್ರ ಪಾರಾಯಣ ಮಾಡಿದನು (ನೆಹೆ. 8:18).

ನೆಹೆಮೀಯ ಪುಸ್ತಕದ 9ನೇ ಅಧ್ಯಾಯದಲ್ಲಿ, ದೇವರು ನೆಹೆಮೀಯನ ಮೂಲಕ ನಡೆಸಿದ ಕಾರ್ಯದ ಬಗ್ಗೆ ನಾವು ಓದುತ್ತೇವೆ. ಈ ಅಧ್ಯಾಯ ಇಸ್ರಾಯೇಲ್ಯರು ಉಪವಾಸದ ಮೂಲಕ ತಮ್ಮ ಪಾಪಗಳನ್ನು ಅರಿಕೆ ಮಾಡಿ, ಅನ್ಯಕುಲದವರಿಂದ ತಮ್ಮನ್ನು ಬೇರ್ಪಡಿಸಿಕೊಂಡ ವಿಚಾರದೊಂದಿಗೆ ಆರಂಭವಾಗುತ್ತದೆ (ನೆಹೆ. 9:1,2). ಆ ಮೇಲೆ ಅವರು ಮೂರು ತಾಸುಗಳ ವರೆಗೆ ಸತ್ಯವೇದ ಅಧ್ಯಯನ ಮತ್ತು ತರುವಾಯ ಮೂರು ತಾಸು ತಮ್ಮ ಪಾಪಗಳನ್ನು ದೇವರಿಗೆ ಅರಿಕೆ ಮಾಡಿ, ದೇವರನ್ನು ಸ್ತುತಿಸಿ ಕೊಂಡಾಡುವುದರಲ್ಲಿ ಕಳೆದರು. ಅವರ ನಡುವೆ ಮತ್ತೊಮ್ಮೆ ಉಜ್ಜೀವನ ಉಂಟಾಯಿತು (ನೆಹೆ. 9:3). ಆ ಮೇಲೆ ಲೇವಿಯರು ಎದ್ದುನಿಂತು, ಮಹಾಶಬ್ದದಿಂದ ತಮ್ಮ ದೇವರಾದ ಕರ್ತನಿಗೆ ಮೊರೆಯಿಟ್ಟರು (ನೆಹೆ. 9:4). ನೆಹೆಮೀಯನು 9:6-31 ರಲ್ಲಿ, ಸಂಪೂರ್ಣ ಸತ್ಯವೇದದಲ್ಲಿ ದಾಖಲಾಗಿರುವ ಅತಿ ದೀರ್ಘವಾದ ಪ್ರಾರ್ಥನೆ ನಮಗೆ ಸಿಗುತ್ತದೆ. ಲೇವಿಯರು ಇಸ್ರಾಯೇಲ್ಯರ ಇತಿಹಾಸವನ್ನು ಅಬ್ರಹಾಮನ ದಿನದಿಂದ ಮತ್ತೊಮ್ಮೆ ಜ್ಞಾಪಿಸಿಕೊಂಡರು ಮತ್ತು ಇಸ್ರಾಯೇಲ್ಯರು ನಲವತ್ತು ವರ್ಷಗಳು ಅರಣ್ಯದಲ್ಲಿ ಅಲೆಯುತ್ತಿದ್ದಾಗ ಮತ್ತು ಮುಂದೆ ನ್ಯಾಯಸ್ಥಾಪಕರು ಹಾಗೂ ಅರಸುಗಳ ಕಾಲದಲ್ಲಿ, ತಾವು ಅವಿಧೇಯರಾಗಿ ನಡೆದುದನ್ನು ಅರಿಕೆ ಮಾಡಿದರು ಮತ್ತು ದೇವರ ಪ್ರತಿಯೊಂದು ನ್ಯಾಯತೀರ್ಪು ನ್ಯಾಯಯುತವೆಂದು ಒಪ್ಪಿಕೊಂಡರು. ಅವರು ಮಾನಸಾಂತರಪಟ್ಟರು ಮತ್ತು ದೇವರ ಮುಂದೆ ಒಂದು ದಾಖಲೆಯನ್ನು ಬರೆದು, ನೆಹೆಮೀಯನಿಂದ ಆರಂಭಿಸಿ ಎಲ್ಲರೂ ಸಹಿ ಮಾಡಿದರು (ನೆಹೆ. 10:1).

ಇವೆಲ್ಲಾ ಸಂಗತಿಗಳು ದೇವಭಯವಿದ್ದ ಎಜ್ರ ಮತ್ತು ನೆಹೆಮೀಯ ಇವರಿಬ್ಬರ ಪ್ರಭಾವದಿಂದ ನಡೆದವು. ಅವರು ಜೊತೆಯಾಗಿ ಮಾಡಿದ ಸೇವೆಯು ಬಹುತೇಕ ಹೊಸ ಒಡಂಬಡಿಕೆಯ ಇಬ್ಬರು ಸಭಾ ಹಿರಿಯರು ಕಾರ್ಯ ನಿರ್ವಹಿಸುವುದನ್ನು ಹೋಲುತ್ತದೆ. ನಾವೆಲ್ಲರೂ ಅನುಸರಿಸಲು ಸೂಕ್ತವಾದ ಒಂದು ಬಹಳ ಶ್ರೇಷ್ಠವಾದ ಉದಾಹರಣೆ ಇದಾಗಿದೆ.