ಬರೆದಿರುವವರು :   ಝ್ಯಾಕ್ ಪೂನನ್
WFTW Body: 

1. ಸಮಯವನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ

ನಾವು ಇಷ್ಟ ಬಂದಂತೆ ಜೀವಿಸಿ, ಸಮಯವನ್ನು ಪಾಪದಲ್ಲಿ ಪೋಲು ಮಾಡಿದರೆ, ಆ ಸಮಯ ತಿರುಗಿ ಸಿಗುವುದಿಲ್ಲ. ದೇವರು ಅನ್ಯಾಯವಾಗಿ ಕಳೆದ ನಮ್ಮ ಜೀವಿತವನ್ನು ಕ್ಷಮಿಸಬಹುದು ಮತ್ತು ನಮ್ಮನ್ನು ದೇವರ ರಾಜ್ಯಕ್ಕೆ ಸೇರಿಸಿಕೊಳ್ಳಲೂ ಬಹುದು. ಆದರೆ ನಾವು ಕೆಡಿಸಿಕೊಂಡ ವರ್ಷಗಳನ್ನು ದೇವರೂ ಸಹ ಹಿಂದಿರುಗಿಸಲಾರರು. ದುರುಪಯೋಗವಾದ ಸಮಯ ಸದಾ ಕಾಲಕ್ಕೂ ನಶಿಸಿ ಹೋಗುತ್ತದೆ. ಅದು ಮತ್ತೊಮ್ಮೆ ಸಿಗುವುದಿಲ್ಲ. ಹಾಗಾಗಿ ನಿಮ್ಮ ಯೌವನ ಪ್ರಾಯದಿಂದಲೇ ಕರ್ತನಾದ ಯೇಸುವನ್ನು ಹಿಂಬಾಲಿಸಲು ಆರಂಭಿಸುವುದು ಬಹಳ ಉತ್ತಮವಾದದ್ದು. ನಮ್ಮ ಭೂಮಿಯ ಮೇಲಿನ ಜೀವಾವಧಿ ಬಹಳ ಅಲ್ಪವಾದದ್ದು. ಹಾಗಾಗಿ ಸಮಯ ಅಮೂಲ್ಯವೆಂದು ತಿಳಿದು, ಶೋಧನೆಗಳನ್ನು ಜಯಿಸುವ ಮತ್ತು ಬೇರೆಯವರಿಗೆ ಒಳ್ಳೆಯದನ್ನು ಮಾಡುವ ಪ್ರತಿಯೊಂದು ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವುದು ಅವಶ್ಯಕವಾಗಿದೆ. ನೀವು ದೀನತೆ, ಯಥಾರ್ಥತೆ ಮತ್ತು ಪ್ರೀತಿಯಲ್ಲಿ ಬೇರೂರಿ ಜೀವಿಸಲು ಎಷ್ಟು ಹೆಚ್ಚಿನ ಬೆಲೆಯನ್ನಾದರೂ ಕೊಡಲು ಸಿದ್ಧವಾಗಿರಿ. ದೇವರು ನಿಮಗೆ ಬೆಳಕನ್ನು ಕೊಟ್ಟ ಮೇಲೆ ನೀವು ಜೀವಿಸಿದ ರೀತಿಯು, ಪ್ರತ್ಯಕ್ಷನಾಗಲಿರುವ ಯೇಸುವಿನ ಮುಂದೆ ಆ ದಿನದಲ್ಲಿ ನಾವು ನಿಲ್ಲುವಾಗ ನಿಮ್ಮನ್ನು ನಾಚಿಕೆ ಪಡಿಸುವಂಥದ್ದು ಆಗಿರಬಾರದು.

ಆ ದಿನದಲ್ಲಿ ಅನೇಕ ವಿಶ್ವಾಸಿಗಳು ಯೇಸುವನ್ನು ನೋಡುವಾಗ ಮತ್ತು ಆತನು ತಮ್ಮ ಮೇಲೆ ಎಷ್ಟು ಅಪಾರವಾದ ಪ್ರೀತಿಯನ್ನು ಇರಿಸಿದ್ದನೆಂದು ಮನಗಂಡಾಗ, ತಾವು ಪರಲೋಕಕ್ಕೆ ಪ್ರವೇಶ ಪಡೆದರೂ ಸಹ, ಲೌಕಿಕ ಜೀವಿತವನ್ನು ತಾವು ಆರೆಮನಸ್ಸಿನಿಂದ ಜೀವಿಸಿದ್ದು ಅವರ ಮನಸ್ಸನ್ನು ದುಃಖ ಮತ್ತು ವ್ಯಥೆಯಿಂದ ಜಜ್ಜುತ್ತದೆ. ದೇವರು ನಿಮ್ಮನ್ನು ಇಂತಹ ವ್ಯಥೆಯಿಂದ ಪಾರುಮಾಡಲಿ. ಈಗಿನ ಸಮಯ ಇದರ ಬಗ್ಗೆ ಯೋಚಿಸಿ ಜಾಣರಾಗಿ ನಡೆಯಲು ಸೂಕ್ತವಾಗಿದೆ. ಏಸಾವನು ಮಾಡಿದಂತೆ ಒಂದು ಬಟ್ಟಲು ರುಚಿಕರ ಅಂಬಲಿಯನ್ನು ಆಶಿಸಿ (ಅಂದರೆ, ದೈಹಿಕ ಸುಖಭೋಗ), ನಿಮ್ಮ ಜನ್ಮಸಿದ್ಧ ಹಕ್ಕನ್ನು (ಅಂದರೆ, ಆತ್ಮಿಕ ಆಶೀರ್ವಾದಗಳು) ಯಾವತ್ತೂ ಮಾರಾಟ ಮಾಡಬೇಡಿರಿ. "ಎಲ್ಲರ ಸಂಗಡ ಸಮಾಧಾನದಿಂದ ಇರುವುದಕ್ಕೂ, ಪರಿಶುದ್ಧತೆಯನ್ನು ಹೊಂದುವದಕ್ಕೂ ಪ್ರಯತ್ನ ಮಾಡಿರಿ; ಇವುಗಳಿಲ್ಲದೆ ಯಾವನೂ ಕರ್ತನನ್ನು ಕಾಣುವುದಿಲ್ಲ" (ಇಬ್ರಿ. 12:14-15). "ಇನ್ನು ಸ್ವಲ್ಪದರಲ್ಲಿ, ನಾವು ಯೇಸುವಿನ ಮುಂದೆ ನಿಲ್ಲುವಾಗ, ನಾವು ಆತನಿಗಾಗಿ ಏನಾದರೂ ಹೆಚ್ಚಿನದನ್ನು ಮಾಡಬೇಕಾಗಿತ್ತು..." ಎಂಬ ಹಂಬಲ ಉಂಟಾಗುತ್ತದೆ.

2. ನಿಮ್ಮ ಸ್ವಭಾವವು ಪ್ರತಿದಿನ ನೂತನವಾಗುತ್ತಾ ಬರಲಿ

ನಮ್ಮ ದೇಹವು ದಿನೇದಿನೇ ನಶಿಸುತ್ತಾ ಹೋಗುತ್ತದೆ. ಇದು ಸ್ವಾಭಾವಿಕ ಪ್ರವೃತ್ತಿಯಾಗಿದೆ. ಆದರೂ ಇದರ ಜೊತೆಗೆ ನಮ್ಮ ಸ್ವಭಾವವು ದಿನೇದಿನೇ ’ಹೊಸತನವನ್ನು ಹೊಂದಬೇಕು’ ಎಂಬುದು ದೇವರ ಚಿತ್ತವಾಗಿದೆ (2 ಕೊರಿ. 4:16). ಆದರೆ ಇದು ಸ್ವಾಭಾವಿಕವಾಗಿ ನಡೆಯುವುದಿಲ್ಲ. ವಿಶ್ವಾಸಿಗಳಲ್ಲಿ ಹೆಚ್ಚಿನವರ ಸ್ವಭಾವವು ಪ್ರತಿದಿನ ನವೀಕರಣವಾಗುತ್ತಿಲ್ಲ, ಏಕೆಂದರೆ ಯೇಸುವು ನಮಗೆ ’ದಿನಾಲೂ ಮಾಡಬೇಕೆಂದು ತೋರಿಸಿರುವ ಒಂದೇ ಒಂದು ಕಾರ್ಯವನ್ನು’ - ಶಿಲುಬೆಯನ್ನು ಹೊರುವುದು - ’ಅವರು ಮಾಡುತ್ತಿಲ್ಲ’ (ಲೂಕ. 9:23). ಹೊಸ ಸ್ವಭಾವವನ್ನು ಹೊಂದುವುದು, ಎಂದರೆ ನಮ್ಮೊಳಗೆ ಯೇಸುವಿನ ಜೀವವನ್ನು ಹೆಚ್ಚು ಹೆಚ್ಚಾಗಿ ಪಡೆಯುವುದು. ನಾವು ಪ್ರತಿದಿನ ನಮ್ಮ ದೇಹದಲ್ಲಿ ಯೇಸುವಿನ ಮರಣಾವಸ್ಥೆಯನ್ನು ಅನುಭವಿಸಿದರೆ ಮಾತ್ರ ಇದು ಸಾಧ್ಯವಾಗುತ್ತದೆ (2 ಕೊರಿ. 4:10) . ಪ್ರತಿಯೊಂದು ದಿನಕ್ಕೆ ಸಂಬಂಧಪಟ್ಟ ಒಂದಿಷ್ಟು ಕಾಟಗಳು, ಕಷ್ಟಗಳು ಮತ್ತು ಶೋಧನೆಗಳು ಇರುತ್ತವೆ (ಯೇಸುವು ಮತ್ತಾ. 6:34 ರಲ್ಲಿ ಇದನ್ನು ತಿಳಿಸಿದ್ದಾರೆ). ನಾವು ಶಿಲುಬೆಯನ್ನು ಹೊತ್ತುಕೊಳ್ಳುವುದು ಮತ್ತು ನಮ್ಮ ಭೂಸಂಬಂಧವುಳ್ಳ ಭಾವಗಳನ್ನು ಸಾಯಿಸುವುದು ಅಂದರೆ, ಇಂತಹ ಶೋಧನೆಗಳನ್ನು ನಿಭಾಯಿಸುವುದೇ ಆಗಿದೆ, ಮತ್ತು ಹೀಗೆ ಪ್ರತಿಯೊಂದು ಕಾಟದ ಮೂಲಕವೂ ದೇವರ ಮಹಿಮೆಯ ಸ್ವಲ್ಪ ಭಾಗ ನಮ್ಮ ವಶವಾಗುತ್ತದೆ.

ನಾವು ಏರುವಿಕೆ-ಬೀಳುವಿಕೆಯ ಜೀವನ ಜೀವಿಸುವುದು ದೇವರ ಚಿತ್ತವಲ್ಲ (ಕೆಲವೊಮ್ಮೆ ಪರ್ವತ ಶಿಖರದ ಮೇಲೆ ಮತ್ತು ಬೇರೊಮ್ಮೆ ತಗ್ಗಿನ ಕಣಿವೆಯಲ್ಲಿ). ನಮ್ಮ ಜೀವಿತವು ಸತತವಾಗಿ ಮೇಲಕ್ಕೆ ಮಾತ್ರ ಏರಬೇಕೆಂದು - ನಿರಂತರವಾಗಿ ನಮ್ಮ ಸ್ವಭಾವವು ನವೀಕರಿಸಲ್ಪಡಬೇಕೆಂದು - ದೇವರ ಅಪೇಕ್ಷೆಯಾಗಿದೆ. ಇದಕ್ಕಾಗಿ ನಾವು ಪ್ರತಿದಿನ ನಮ್ಮನ್ನು ಎದುರಿಸುವ ಒಂದೊಂದು ಸನ್ನಿವೇಶದಲ್ಲಿ ಯೇಸುವಿನೊಂದಿಗೆ ಸಾಯುವುದರ ಕಡೆಗೆ ಗಮನ ಕೊಡಬೇಕು. ನಾವು ಸಭಾಕೂಟಗಳು ಮತ್ತು ಸಮ್ಮೇಳನಗಳ ’ಸಡಗರದ ವಾತಾವರಣ’ದ ಮೂಲಕ ದೈವಿಕ ಜೀವನವನ್ನು ಪಡಕೊಳ್ಳಲಾರೆವು. ಅನೇಕ ಜನರು ಒಂದು ಸಭಾಕೂಟದಲ್ಲಿ ಅಥವಾ ಒಂದು ಸಮ್ಮೇಳನದಲ್ಲಿ ಉತ್ತೇಜಿತ ಭಾವನೆಯನ್ನು ಅನುಭವಿಸಿದಾಗ, ತಾವು ಆತ್ಮಿಕರಾದೆವು ಎಂದುಕೊಂಡು ತಮ್ಮನ್ನೇ ಮರಳು ಮಾಡಿಕೊಳ್ಳುತ್ತಾರೆ. ಆದರೆ ಕೇವಲ ಕೂಟಗಳು ಮತ್ತು ಸಮ್ಮೇಳನಗಳಿಗೆ ಹಾಜರಾಗುವುದರಿಂದ ಬೆಳವಣಿಗೆ ಉಂಟಾಗುವುದಿಲ್ಲ. ದಿನನಿತ್ಯದ ಸಾಮಾನ್ಯ ಆಗುಹೋಗುಗಳ ತಿಕ್ಕಾಟದ ನಡುವೆ ಯಥಾರ್ಥರಾಗಿ ಶಿಲುಬೆಯನ್ನು ಹೊರುವುದರ ಮೂಲಕ ಬೆಳವಣಿಗೆಯು ಉಂಟಾಗುತ್ತದೆ. ನಾವು ಪ್ರತಿದಿನ ಸಭೆಗಳಿಗೆ ಹೋಗಲು ಆಗುವುದಿಲ್ಲ. ಆದರೆ ಪ್ರತಿದಿನ ಶೋಧನೆಗಳು ನಮ್ಮನ್ನು ಎದುರಿಸುವುದರಿಂದ, ಪ್ರತಿದಿನವೂ ಹೊಸತನವನ್ನು ಪಡೆಯುವ ಅವಕಾಶ ನಮಗೆ ಸಿಗುತ್ತದೆ.

ಕರ್ತನಾದ ಯೇಸುವು ನಮ್ಮನ್ನು ಸೃಷ್ಟಿಸಿ, ನಮ್ಮನ್ನು ಬೆಲೆ ತೆತ್ತು ಖರೀದಿಸಿದ್ದರಿಂದ, ನಮ್ಮ ಜೀವನವು ಆತನಿಗೆ ಸೇರಿದೆ; ಹಾಗಾಗಿ ನಮ್ಮ ಜೀವನವು ನಮಗೆ ಸೇರಿದ್ದಲ್ಲವೆಂದು ತಿಳಿದು (ಅಂದರೆ, ನಮಗೆ ಇಷ್ಟಬಂದಂತೆ ನಡೆದುಕೊಳ್ಳಲು ಆಗುವುದಿಲ್ಲ), ನಾವು ದೈನಂದಿನದ ಶೋಧನೆಗಳಲ್ಲಿ ಕರ್ತನಿಗೆ ಸರಳ ಪ್ರಾಮಾಣಿಕರಾಗಿ ನಡೆದುಕೊಂಡು, ಗುಣಗುಟ್ಟದೆಯೂ ವಿವಾದವಿಲ್ಲದೆಯೂ ಜೀವಿಸಲು ಪ್ರಯತ್ನಿಸಬೇಕು. ಹಾಗೆ ಮಾಡಿದಾಗ ನಾವು ದಿನೇ ದಿನೇ ನೂತನ ಸ್ವಭಾವವನ್ನು ಅನುಭವಿಸುತ್ತೇವೆ. ಆದರೆ ಹೇಗೆ ನಮ್ಮ ದೇಹವು ಕ್ಷೀಣಿಸುವುದು ಪ್ರತಿದಿನ ಗಮನಕ್ಕೆ ಬರುವುದಿಲ್ಲ, ಆದರೆ ಹಲವು ದಿನಗಳ ನಂತರ ಸ್ಪಷ್ಟವಾಗುತ್ತದೋ, ಹಾಗೆಯೇ ನಮ್ಮ ಒಳಗಿನ ಮನಸ್ಸಿನ ಹೊಸತನವು ಕೆಲವು ವರ್ಷಗಳ ನಂತರ ಮಾತ್ರ ಕಂಡುಬರುತ್ತದೆ. ಆದರೆ ನಾವು ಯಥಾರ್ಥರಾಗಿದ್ದರೆ, ಆ ನವೀಕರಣವು ಪ್ರತಿದಿನ ನಡೆಯುತ್ತದೆ (2 ಕೊರಿ. 4:16) . ಹಾಗಾಗಿ ಚಿಕ್ಕ ಸಂಗತಿಗಳಲ್ಲಿ ಮತ್ತು ದೊಡ್ಡ ಸಂಗತಿಗಳಲ್ಲಿ ಪ್ರಾಮಾಣಿಕರಾಗಿರಿ. ನೀವು ನಿಮ್ಮ ಶರೀರಭಾವ ಮತ್ತು ಸೇಚ್ಛೆಯನ್ನು ಶಿಲುಬೆಗೆ ಹಾಕಿದ್ದು (ಗಲಾ. 5:24), ಮತ್ತು ದೇವರಿಗೆ ಆದ್ಯತೆ ನೀಡಿ, ಸಂಪೂರ್ಣ ಜೀವನವನ್ನು ಅವರಿಗಾಗಿ ಜೀವಿಸಿದ್ದು ಸಾರ್ಥಕವಾಯಿತೆಂದು ನೀವು ಕೊನೆಯಲ್ಲಿ ಕಂಡುಕೊಳ್ಳುತ್ತೀರಿ.