WFTW Body: 

ದೇವರೊಂದಿಗೆ ಅನ್ಯೋನ್ಯತೆಯಲ್ಲಿ ನಡೆದಂತ ಇಬ್ಬರು ಮನುಷ್ಯರನ್ನು ನಾವು ಪರಿಗಣಿಸೋಣ - ಅವರು ಯಾರೆಂದರೆ ಹನೋಕನು ಮತ್ತು ನೋಹನು.

ಆದಿಕಾಂಡ 5ನೇ ಅಧ್ಯಾಯದಲ್ಲಿ, ’ಮತ್ತು ಆತನು ಸತ್ತನು’ ಎಂಬಂತ ಹೇಳಿಕೆಯನ್ನು 8 ಬಾರಿ ನೋಡುತ್ತೇವೆ. ಆದರೆ ಈ ಅಧ್ಯಾಯದ ಮಧ್ಯಭಾಗದಲ್ಲಿ, ಒಬ್ಬನು ಸಾಯಲೇ ಇಲ್ಲ ಎಂಬುದಾಗಿ ಓದುತ್ತೇವೆ!! ಆತನು ಹನೋಕನಾಗಿದ್ದಾನೆ. ಆತನು ದೇವರೊಟ್ಟಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಿರುವಾಗ, ದೇವರು ಆತನನ್ನು ಜೀವಂತವಾಗಿ ಪರಲೋಕಕ್ಕೆ ಕರೆದುಕೊಂಡರು. ಈ ಅಧ್ಯಾಯದಲ್ಲಿ ಮರಣದ ಸುದ್ದಿಯ ಮಧ್ಯದಲ್ಲಿ ಪುನರುತ್ಥಾನ ಜೀವಿತದ ಒಂದು ಚಿತ್ರಣವು ಅಡಗಿದೆ. ಹನೋಕನು ಪುನರುತ್ಥಾನದ ಬಲದಿಂದ ಜೀವಿಸಿದಂತ ಮನುಷ್ಯನಾಗಿದ್ದನು, ಆತನು ಮರಣವನ್ನು ಜಯಿಸಿದನು ಮತ್ತು ಪರಲೋಕಕ್ಕೆ ಎತ್ತಲ್ಪಟ್ಟನು. ಇದು ಒಂದು ದೈವಿಕ ಸಭೆಯು ಆತ್ಮಿಕ ಮರಣದ ನಡುವೆ ಜೀವಿಸಿ, ಪುನರುತ್ಥಾನದ ಬಲದಿಂದ ಜಯಿಸಿ ಮತ್ತು ಕೊನೆಯದಾಗಿ ಮೇಲಕ್ಕೆ ಎತ್ತಲ್ಪಡುವುದರ ಚಿತ್ರಣವಾಗಿದೆ.

ಹನೋಕನು ತನ್ನ ಜೀವಿತದ ಮೊದಲ 65 ವರುಷಗಳ ಕಾಲ ಬಹುಶಃ ದೇವರಿಂದ ದೂರವಾಗಿ ಜೀವಿಸಿದಂತ ಮನುಷ್ಯನು ಆಗಿರಬಹುದು. ಆದರೆ ಆತನು ತನ್ನ 65ನೇ ವಯಸ್ಸಿನಲ್ಲಿ ಒಬ್ಬ ಮಗನನ್ನು ಪಡೆದುಕೊಂಡನು. ಹನೋಕನು ತನ್ನ ಮಗನಿಗೆ ದೈವಿಕ ಪ್ರಕಟನೆಯ ಮೂಲಕ "ಮೆತೂಷೆಲಹನು" ಎಂದು ಹೆಸರಿಟ್ಟನು. "ಮೆತೂಷೆಲಹ" ಎಂಬುದರ ಅರ್ಥ, "ಆತನ ಮರಣದ ಸಮಯದಲ್ಲಿ ನೀರು ಉಕ್ಕಿ ಹರಿಯುವುದು" ಎಂಬುದಾಗಿ. ಇದು ಸೂಚಿಸುವಂತೆ, ಹನೋಕನ ಮಗನು ಜನಿಸಿದಾಗ ದೇವರು ಹನೋಕನಿಗೆ ಒಂದು ಪ್ರಕಟನೆಯನ್ನು ಕೊಟ್ಟರು. ದೇವರು ಹನೋಕನಿಗೆ ತಿಳಿಸಿದ ಮಾತು, ’ನಿನ್ನ ಈ ಮಗನು ಸಾಯುವಾಗ, ಲೋಕವು ನೀರಿನ ಪ್ರವಾಹದ ಮೂಲಕ ತೀರ್ಪಿಗೆ ಒಳಗಾಗುವುದು,’ ಎಂಬುದಾಗಿ. ನ್ಯಾಯತೀರ್ಪಿನ ಈ ಪ್ರಕಟನೆಯು ಮೊದಲು ಹನೋಕನಿಗೆ ಬಂತೇ ಹೊರತು ನೋಹನಿಗಲ್ಲ. ಈ ಕಾರಣಕ್ಕಾಗಿ ಹನೋಕನು ತನ್ನ ಮಗನಿಗೆ ’ಮೆತೂಷೆಲಹ’ ಎಂದು ಹೆಸರಿಟ್ಟನು.

ಸಾಮಾನ್ಯವಾಗಿ ನೀವು ಒಂದು ಮಗುವನ್ನು ಪಡೆದಾಗ, ಆ ಮಗು ಎಷ್ಟು ದಿನ ಜೀವಿಸುತ್ತದೆ ಎಂಬುದಾಗಿ ನಿಮಗೆ ಗೊತ್ತಿರುವುದಿಲ್ಲ. ಹಾಗಾಗಿ ಪ್ರತಿ ಬಾರಿ ಮೆತೂಷೆಲಹನು ಖಾಯಿಲೆ ಬಿದ್ದಾಗ, ನ್ಯಾಯತೀರ್ಪು ಹತ್ತಿರವಾಯಿತೇನೋ, ಎಂದು ಹನೋಕನು ಗಾಬರಿಗೊಳ್ಳುತ್ತಿದ್ದನು. ಒಂದು ಮಗುವಿನ ಹೆಸರು "ಈ ಮಗನ ಮರಣದ ಸಮಯದಲ್ಲಿ ನೀರು ಉಕ್ಕಿ ಹರಿಯುವುದು" ಎಂಬ ಅರ್ಥ ಹೊಂದಿದ್ದರೆ, ಆಗ ನಿಮ್ಮ ಆಲೋಚನೆಗಳು ಹೇಗಿರಬಹುದು? ಪ್ರತಿಬಾರಿ ನೀವು ಆ ಮಗುವನ್ನು ಕರೆದಾಗ, ನೀವು ನ್ಯಾಯತೀರ್ಪನ್ನು ನೆನಪು ಮಾಡಿಕೊಳ್ಳುತ್ತೀರಿ. ಇದರ ಫಲವಾಗಿ ಹನೋಕನು ದೇವರ ನ್ಯಾಯತೀರ್ಪಿನ ಭಯದಿಂದ ದೇವರೊಟ್ಟಿಗೆ ಅನ್ಯೋನ್ಯವಾಗಿ ನಡೆದನು ಮತ್ತು ತಾತ್ಕಾಲಿಕ ಸಂಗತಿಗಳಿಗಿಂತ ನಿತ್ಯತ್ವಕ್ಕೆ ಸಂಬಂಧಿಸಿದ ಸಂಗತಿಗಳು ಬಹಳ ಪ್ರಮುಖವಾದವುಗಳು ಎಂಬುದನ್ನು ಗ್ರಹಿಸಿಕೊಂಡನು. ಹನೋಕನಿಗೆ ಈ ಬಿಕ್ಕಟ್ಟು ಎದುರಾಗಿದ್ದರಿಂದ, ಆತನು ಮುಂದಿನ 300 ವರುಷಗಳ ಕಾಲ ಪ್ರತಿದಿನ ದೇವರೊಟ್ಟಿಗೆ ಅನ್ಯೋನ್ಯವಾಗಿ ನಡೆದನು.

ಸತ್ಯವೇದವು 1 ಯೋಹಾನ 2:17 ರಲ್ಲಿ, "ಲೋಕವು ಗತಿಸಿ ಹೋಗುತ್ತದೆ" ಎಂಬುದಾಗಿ ಹೇಳುತ್ತದೆ. ನಾವು ಸಹ ಹನೋಕನು ಗ್ರಹಿಸಿಕೊಂಡಂತೆ ಇದನ್ನು ನಂಬುವವರಾದರೆ, ಈಗಿನ ತಾತ್ಕಾಲಿಕ ಸಂಗತಿಗಳಿಗಿಂತ ನಿತ್ಯತ್ವಕ್ಕೆ ಸಂಬಂಧಪಟ್ಟಂತ ಸಂಗತಿಗಳು ಹೆಚ್ಚು ಪ್ರಮುಖವಾದವು ಎಂದು ತಿಳಿದುಕೊಳ್ಳುತ್ತೇವೆ.

ಮೆತೂಷೆಲಹನು ಬೇರೆ ಎಲ್ಲಾ ಮಾನವರಿಗಿಂತ ಹೆಚ್ಚು ವರ್ಷಗಳು - ಅಂದರೆ 969 ವರುಷಗಳ ಕಾಲ - ಜೀವಿಸುವಂತೆ ದೇವರು ಅನುಮತಿಸಿದ್ದರಲ್ಲಿ ನಾವು ನೋಡುವುದೇನೆಂದರೆ, ಮನುಷ್ಯನೊಟ್ಟಿಗೆ ದೇವರು ಅತಿಶಯವಾದಂತ ದೀರ್ಘಶಾಂತಿಯನ್ನು ಹೊಂದಿದ್ದಾರೆ. 969 ವರುಷಗಳ ಕಾಲ ಜನರು ಪ್ರತೀ ಬಾರಿ ಮೆತೂಷೆಲಹನ ಹೆಸರನ್ನು ಕೇಳಿದಾಗ, ನ್ಯಾಯತೀರ್ಪು ಬರಲಿಕ್ಕಿದೆ ಎಂಬ ಸಂದೇಶವನ್ನು ಕೇಳಿಸಿಕೊಂಡರು. ಆದರೆ ಈ ಸಂದೇಶವನ್ನು ಜನರು ತಿರಸ್ಕಾರ ಮಾಡಿದರು. ಈ ಸಂದೇಶವನ್ನು ಹನೋಕನು 300 ವರುಷಗಳ ಕಾಲ ಸಾರಿದ್ದು ಮಾತ್ರವಲ್ಲದೆ, ಮುಂದಿನ 669 ವರುಷಗಳ ಕಾಲ ಮೆತೂಷೆಲಹನು ತನ್ನ ಹೆಸರಿನ ಮೂಲಕ ಈ ಸಂದೇಶವನ್ನು ಸಾರಿದನು.

ನೋಹನು ಸಹ ದೇವರೊಟ್ಟಿಗೆ ಅನ್ಯೋನ್ಯವಾಗಿ ನಡೆದಂತ ಮನುಷ್ಯನಾಗಿದ್ದನು ಮತ್ತು ಮೆತೂಷೆಲಹನ ಜೀವಿತದ ಕೊನೆಯ 120 ವರುಷಗಳ ಅವಧಿಯಲ್ಲಿ ನ್ಯಾಯತೀರ್ಪಿನ ಬಗ್ಗೆ ಬೋಧಿಸಿದನು. ಹನೋಕನಿಗೆ ಮತ್ತು ಮೆತೂಷೆಲಹನಿಗೆ ಪ್ರವಾಹದ ಕುರಿತಾಗಿ ಅಷ್ಟೊಂದು ಸ್ಪಷ್ಟ ಮಾಹಿತಿ ಇರಲಿಲ್ಲ; ಮುಂದೆ ದೇವರು ಇದನ್ನು ನೋಹನಿಗೆ ಪ್ರಕಟಿಸಿದರು. ಆದರೆ, ನೀರಿನ ಪ್ರವಾಹಕ್ಕೆ ಸಂಬಂಧಿಸಿದ ಒಂದು ರೀತಿಯ ನ್ಯಾಯತೀರ್ಪು ಮೆತೂಷೆಲಹನು ಸತ್ತಾಗ ಬರಲಿದೆ, ಎಂಬುದು ಅವರಿಗೆ ತಿಳಿದಿತ್ತು.

ಯೂದನ ಪತ್ರಿಕೆಯಲ್ಲಿ ಹೇಳಲ್ಪಟ್ಟಿರುವಂತೆ, ಹನೋಕನು ತನ್ನ ಜೀವಿತದ ಅವಧಿಯಲ್ಲಿ, ದೇವಭಕ್ತಿಯಿಲ್ಲದ ಎಲ್ಲಾ ಜನರ ವಿರುದ್ಧವಾಗಿ ನ್ಯಾಯತೀರ್ಪು ಬರಲಿದೆ ಎಂದು ಪ್ರವಾದಿಸಿದನು (ಯೂದನು 14,15). ಹನೋಕನು ಒಬ್ಬ ಪ್ರವಾದಿಯಾಗಿದ್ದನು ಮತ್ತು ದೇವರೊಂದಿಗೆ ಅನ್ಯೋನ್ಯತೆಯಲ್ಲಿ ನಡೆದಂತವನಾಗಿದ್ದನು. ಹನೋಕನು ಹುಟ್ಟಿದಾಗ ಆದಾಮನಿಗೆ 622ನೇ ವಯಸ್ಸಾಗಿತ್ತು ಮತ್ತು ಆದಾಮನು 930ನೇ ವಯಸ್ಸಿನಲ್ಲಿ ಸತ್ತನು (ಆದಿಕಾಂಡ 5:5-23). ಹಾಗಾಗಿ ಹನೋಕನು ಆದಾಮನನ್ನು 308 ವರುಷಗಳಾದರೂ ಅರಿತಿರಬೇಕು. ಆದಾಮನು ಸಹ ಹಿಂದೆ ಒಂದು ಬಾರಿ ಏದೆನ್ ತೋಟದಲ್ಲಿ ದೇವರೊಟ್ಟಿಗೆ ಅನ್ಯೋನ್ಯತೆಯಲ್ಲಿ ನಡೆದಿದ್ದರ ಬಗ್ಗೆ ಹನೋಕನು ಆದಾಮನನ್ನು ಕೇಳಿರಬಹುದು ಎಂದು ನಾನು ಕಲ್ಪಿಸಿಕೊಳ್ಳುತ್ತೇನೆ. ಮತ್ತು ಇದರಿಂದಾಗಿ ಹನೋಕನು ಸಹ ದೇವರೊಟ್ಟಿಗೆ ಅನ್ಯೋನ್ಯವಾಗಿ ನಡೆಯುವಂತ ಒಂದು ದೊಡ್ಡ ಬಯಕೆಯನ್ನು ಹೊಂದಿಕೊಂಡಿರಬಹುದು. ಏದೆನ್ ತೋಟದ ಹೊರಗೂ ಸಹ ದೇವರೊಟ್ಟಿಗೆ ಅನ್ಯೋನ್ಯತೆಯಲ್ಲಿ ನಡೆಯಬಹುದು ಎಂದು ರುಜುವಾತು ಪಡಿಸಿದ ಮೊದಲ ಮನುಷ್ಯ ಹನೋಕನಾಗಿದ್ದಾನೆ. ಲೋಕಕ್ಕೆ ಪಾಪವು ಬಂದ ನಂತರವೂ ಸಹ, ಮನುಷ್ಯನು ದೇವರೊಟ್ಟಿಗೆ ಅನ್ಯೋನ್ಯವಾಗಿ ನಡೆಯಲು ಸಾಧ್ಯವಾಯಿತು.

ನಾನು ನನ್ನ ಜೀವಿತದಲ್ಲಿ ಅನೇಕ ಮಂದಿ ದೊಡ್ಡ ದೊಡ್ಡ ಬೋಧಕರನ್ನು ಭೇಟಿ ಮಾಡಿದ್ದೇನೆ, ಆದರೆ ದೇವರೊಂದಿಗೆ ಅನ್ಯೋನ್ಯವಾಗಿ ನಡೆಯುವಂತ ಕೆಲವೇ ಮಂದಿಯನ್ನು ಮಾತ್ರ ಭೇಟಿಯಾಗಿದ್ದೇನೆ. ಆದರೆ ಈ ಕೆಲವೇ ಮಂದಿ ನನ್ನ ಹೃದಯದಲ್ಲಿ ದೇವರೊಂದಿಗೆ ಅನ್ಯೋನ್ಯವಾಗಿ ನಡೆಯಬೇಕೆನ್ನುವ ಬಯಕೆಯನ್ನು ಯೌವನ ಪ್ರಾಯದಲ್ಲಿ ಉಂಟುಮಾಡಿದರು.

ನೋಹನು ಮೆತೂಷೆಲಹನ ಮೊಮ್ಮಗನಾಗಿದ್ದನು. ಮತ್ತು ನೋಹನು ಮೆತೂಷೆಲಹನೊಟ್ಟಿಗೆ 600 ವರುಷಗಳ ಕಾಲ ಜೀವಿಸಿದನು. ನೋಹನು ಮೆತೂಷೆಲಹನನ್ನು ಅನೇಕ ಬಾರಿ ಹನೋಕನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುದರ ಕುರಿತಾಗಿ ಪ್ರಶ್ನಿಸಿರಬೇಕು. ಇದರಿಂದಾಗಿ ನೋಹನ ಹೃದಯದೊಳಗೆ ತಾನು ಸಹ ದೇವರೊಟ್ಟಿಗೆ ಅನ್ಯೋನ್ಯವಾಗಿ ನಡೆಯುವಂತ ಬಯಕೆಯು ಹುಟ್ಟಿಕೊಂಡಿರುತ್ತದೆ. ಆದಿಕಾಂಡ 6:9ರಲ್ಲಿ, ನೋಹನು ಸಹ ದೇವರೊಟ್ಟಿಗೆ ಅನ್ಯೋನ್ಯವಾಗಿ ನಡೆದನು ಎಂಬುದನ್ನು ನಾವು ಓದುತ್ತೇವೆ. ನೋಹನು ದೇವರೊಂದಿಗೆ ಅನ್ಯೋನ್ಯವಾಗಿ ನಡೆಯುತ್ತಿರುವಾಗ, ದೇವರು ಆತನಿಗೆ ತನ್ನ ನ್ಯಾಯತೀರ್ಪಿನ ಉದ್ದೇಶವನ್ನು ಪ್ರಕಟಿಸಿದರು.

ದೇವರೊಟ್ಟಿಗೆ ಅನ್ಯೋನ್ಯತೆಯಲ್ಲಿ ನಡೆದವರಲ್ಲಿ (ಸತ್ಯವೇದದಲ್ಲಿ ಬರೆಯಲ್ಪಟ್ಟಿರುವ) ಮೊದಲಿನ ಈ ಇಬ್ಬರು ಮನುಷ್ಯರಿಗೆ ದೇವರು ಪಾಪದ ವಿರುದ್ಧವಾಗಿ ನ್ಯಾಯತೀರ್ಪು ಇದೆ ಎಂಬ ಸತ್ಯವನ್ನು ಪ್ರಕಟಿಸಿದರು. ಅದರಂತೆ ಹನೋಕನು ಮತ್ತು ನೋಹನು ಯಾರೂ ತಮ್ಮನ್ನು ನಂಬದಿದ್ದರೂ ಸಹ, ನಂಬಿಗಸ್ಥಿಕೆಯಿಂದ ಈ ಸಂದೇಶವನ್ನು ಸಾರಿದರು. ’ದೇವರು ವಿಶ್ವಾಸಿಗಳನ್ನು ಮತ್ತು ಅವಿಶ್ವಾಸಿಗಳನ್ನು ಅವರವರ ಪಾಪಗಳಿಗಾಗಿ ನ್ಯಾಯತೀರ್ಪು ಮಾಡುತ್ತಾನೆ,’ ಎಂಬಂತಹ ಸಂದೇಶವನ್ನೇ ದೇವರ ಎಲ್ಲಾ ನಿಜವಾದ ಪ್ರವಾದಿಗಳು ಸಹ ಸಾರಿದ್ದಾರೆ.

ಹನೋಕನು ಮತ್ತು ನೋಹನು ಸತ್ಯವೇದದಲ್ಲಿ ದಾಖಲಾಗಿರುವ ಮೊದಲ ಬೋಧಕರಾಗಿದ್ದಾರೆ ಮತ್ತು ಇವರಿಬ್ಬರೂ ದೇವರೊಂದಿಗೆ ಅನ್ಯೋನ್ಯವಾಗಿ ನಡೆದರು. ಅವರ ನಂತರದ ಪ್ರತಿಯೊಬ್ಬ ಬೋಧಕನೂ ಅದೇ ರೀತಿ ನಡೆದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!