ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ
WFTW Body: 

ದಾನಿಯೇಲನು ತನ್ನ ಜನಾಂಗದಲ್ಲಿ ದೇವರು ಉಪಯೋಗಿಸ ಬಹುದಾಗಿದ್ದ ಪುರುಷರಲ್ಲಿ ಒಬ್ಬನಾಗಿದ್ದನು. ಆತನು ತನ್ನ 17 ವಯಸ್ಸಿನ ಯೌವನ ಪ್ರಾಯದಲ್ಲಿ, "ತನ್ನನ್ನು ಅಶುದ್ಧ ಮಾಡಿಕೊಳ್ಳಬಾರದು, ಎಂದು ತನ್ನ ಹೃದಯದಲ್ಲಿ ನಿಶ್ಚಯಿಸಿದನು" (ದಾನಿ. 1:8). ಯುವಕನಾದ ದಾನಿಯೇಲನು ಕರ್ತನಿಗಾಗಿ ತೆಗೆದುಕೊಂಡ ಈ ದೃಢ ನಿರ್ಧಾರವನ್ನು ಗಮನಿಸಿದ ಹನನ್ಯ, ಮೀಶಾಯೇಲ ಮತ್ತು ಅಜರ್ಯರು ಧೈರ್ಯಗೊಂಡು, ತಾವು ಸಹ ಕರ್ತನಿಗಾಗಿ ದೃಢವಾಗಿ ನಿಲ್ಲುವ ನಿರ್ಣಯವನ್ನು ಮಾಡಿದರು (ದಾನಿ. 1:11). ತಾವಾಗಿಯೇ ಎದ್ದು ನಿಲ್ಲುವ ಧೈರ್ಯ ಅವರಿಗೆ ಇರಲಿಲ್ಲ. ಆದರೆ ದಾನಿಯೇಲನ ದೃಢ ನಿಲುವು ಅವರಿಗೆ ಧೈರ್ಯವನ್ನು ತಂದು ಕೊಟ್ಟಿತು. ಈ ದಿನವೂ ಇಂತಹ ಹಲವು ಜನರು ಇದ್ದಾರೆ; ಒಂಟಿಯಾಗಿ ಎದ್ದು ನಿಲ್ಲುವ ಧೈರ್ಯ ಅವರಲ್ಲಿ ಇಲ್ಲದೇ ಹೋದರೂ, ಅವರು ದಾನಿಯೇಲನಂತ ಒಬ್ಬನು ಒಂದು ದೃಢ ನಿಲುವನ್ನು ತೆಗೆದುಕೊಳ್ಳುವುದಕ್ಕಾಗಿ ಕಾಯುತ್ತಾರೆ. ಅನಂತರ ಅವರು ಅವನೊಂದಿಗೆ ಸೇರಿಕೊಳ್ಳುತ್ತಾರೆ. ನೀವು ಇಂತಹ ಒಬ್ಬ ದಾನಿಯೇಲನಾಗುವಿರಾ? "ನಾನು ನನ್ನನ್ನು ಅಶುದ್ಧ ಮಾಡಿಕೊಳ್ಳುವುದಿಲ್ಲ. ನಾನು ಅರಸನನ್ನು, ಅಥವಾ ಸೇನಾನಾಯಕನನ್ನು, ಅಥವಾ ಯಾರೋ ಒಬ್ಬ ಹಿಂಜಾರಿ ಬಿದ್ದಿರುವ ಹಿರಿಯನನ್ನು, ಅಥವಾ ಇನ್ನು ಯಾರನ್ನೇ ಆದರೂ ಮೆಚ್ಚಿಸಲು ತವಕಿಸುವುದಿಲ್ಲ. ನಾನು ದೇವರ ವಾಕ್ಯಕ್ಕೆ ನೂರಕ್ಕೆ ನೂರರಷ್ಟು ವಿಧೇಯನಾಗಿ ನಿಲ್ಲುತ್ತೇನೆ," ಎಂದು ಹೇಳುವಿರಾ? ಈ ದಿನ ನಮ್ಮ ದೇಶದಲ್ಲಿ ದಾನಿಯೇಲನಂತ ಸೇವೆಯ ಅವಶ್ಯಕತೆಯು ಹೆಚ್ಚಿದೆ - "ಬಹು ಜನರನ್ನು ನೀತಿಯ ಕಡೆಗೆ ತಿರುಗಿಸುವಂತ" ಸ್ತ್ರೀ-ಪುರುಷರು ಬೇಕಾಗಿದ್ದಾರೆ (ದಾನಿ. 12:3). ಈ ವಚನವು ನೀತಿವಂತಿಕೆಯ ಬೋಧಕರ ಕುರಿತಾಗಿ ಮಾತನಾಡುತ್ತಿಲ್ಲ, ಆದರೆ - ಇತರರನ್ನು ತಮ್ಮ ನುಡಿ ಮತ್ತು ನಡೆಯ ಮೂಲಕ - ನೀತಿವಂತರಾಗುವಂತೆ ನಡೆಸುವ ಜನರ ಕುರಿತಾಗಿ ಪ್ರಸ್ತಾಪಿಸುತ್ತಿದೆ.

ಇದಲ್ಲದೆ ನಾವು ದೇವರ ವಾಕ್ಯದಲ್ಲಿ "ದಾನಿಯೇಲ-ಸೇವೆ"ಗೆ ಸಂಪೂರ್ಣ ವಿರುದ್ಧವಾದ ಬೇರೊಂದು ಸೇವೆಯ ಕುರಿತಾಗಿ ಓದುತ್ತೇವೆ - ಅದು "ಲೂಸಿಫರ-ಸೇವೆ". ನಾವು ಪ್ರಕಟನೆ 12:4ರಲ್ಲಿ, ಲೂಸಿಫರನು, ಕೋಟ್ಯಾಂತರ ದೇವದೂತರು ತನ್ನನ್ನು ಹಿಂಬಾಲಿಸುವಂತೆ ಮಾಡಿ, ಆವರನ್ನು ದೇವರ ವಿರುದ್ಧವಾಗಿ ತಿರುಗಿಬೀಳುವಂತೆ ಮಾಡುವಲ್ಲಿ ಯಶಸ್ಸು ಕಂಡನು ಎಂದು ಓದುತ್ತೇವೆ. ಇಷ್ಟು ಮಂದಿ ದೇವದೂತರನ್ನು ಲೂಸಿಫರನು ದಾರಿ ತಪ್ಪಿಸುವುದನ್ನು ದೇವರು ಏಕೆ ಅನುಮತಿಸಿದರು? ಯಾಕೆಂದರೆ ಪ್ರತಿಯೊಬ್ಬ ಅಸಂತುಷ್ಟ ಮತ್ತು ದಂಗೆಕೋರ ದೇವದೂತನನ್ನು ಪರಲೋಕದಿಂದ ಹೊರಕ್ಕೆ ಹಾಕಿ, ಪರಲೋಕವನ್ನು ಸ್ವಚ್ಛಗೊಳಿಸುವುದಕ್ಕಾಗಿ ದೇವರು ಹಾಗೆ ಮಾಡಿದರು. ಲೂಸಿಫರನು ಅವರ ನಡುವೆ ಎದ್ದು ಬಂದು, ದೇವರ ವಿರುದ್ಧ ವಿದ್ರೋಹ ಮಾಡುವಂತೆ ಅವರನ್ನು ನಡೆಸದೇ ಇದ್ದಿದ್ದರೆ, ಅವರ ದುಷ್ಟ ಹೃದಯಗಳು ಪ್ರಕಟವಾಗುತ್ತಿರಲಿಲ್ಲ.

ಇದೇ ರೀತಿ, ಈ ದಿನವೂ ಸಹ ದೇವರ ಸಭೆಯಲ್ಲಿ ಸಹೋದರರು ಮತ್ತು ಸಹೋದರಿಯರು ಲೂಸಿಫರ-ಸೇವೆಯಲ್ಲಿ ತೊಡಗುವುದನ್ನು ದೇವರು ತಡೆಯುವುದಿಲ್ಲ. ಇಂತಹ ಜನರು ಮನೆ ಮನೆಗಳಿಗೆ ಹೋಗಿ ಚಾಡಿ ಹೇಳುವುದನ್ನು, ದೂಷಿಸುವುದನ್ನು, ಸುಳ್ಳು ಹೇಳುವುದನ್ನು ಮತ್ತು ಕೆಟ್ಟ ಮಾತುಗಳನ್ನು ಮಾತಾಡುವುದನ್ನು ದೇವರು ಅನುಮತಿಸುತ್ತಾರೆ, ಮತ್ತು ಇದರ ಮೂಲಕ ಸಭೆಯಲ್ಲಿ ಅಸಂತುಷ್ಟ, ದಂಗೆಕೋರ ಮತ್ತು ಲೌಕಿಕ ಮನೋಭಾವದ ವಿಶ್ವಾಸಿಗಳು ಗುರುತಿಸಲ್ಪಟ್ಟು, ಪ್ರಕಟಗೊಂಡು, ಒಟ್ಟು ಸೇರಿಸಲ್ಪಟ್ಟು, ಕೊನೆಗೆ ಸಭೆಯಿಂದ ಹೊರಕ್ಕೆ ಹಾಕಲ್ಪಡಲು ಸಾಧ್ಯವಾಗುತ್ತದೆ - ಈ ರೀತಿಯಾಗಿ ಕ್ರಿಸ್ತನ ದೇಹವು ಶುದ್ಧಗೊಳ್ಳುತ್ತದೆ. ಕೋಟ್ಯಾಂತರ ವರ್ಷಗಳ ಹಿಂದೆ ದೇವರು ಲೂಸಿಫರನ ಮೊದಲನೇ ವಿದ್ರೋಹವನ್ನು ಹೇಗೆ ತಡೆಯಲಿಲ್ಲವೋ, ಅದೇ ರೀತಿ ಅವರು ಈಗಲೂ ಇಂತಹ ಲೂಸಿಫರ್-ಸೇವೆಗೆ ಕೈ ಹಾಕುವವರು ಸಭೆಯಲ್ಲಿ ಓಡಾಡುವುದನ್ನು ತಡೆಯುವುದಿಲ್ಲ. ದೇವರ ಜ್ಞಾನವು ಅಂಥದ್ದು.

ನಾವು ಸಹ ಇಂತಹ ಸಹೋದರ-ಸಹೋದರಿಯರ ವಿರುದ್ಧ ಯಾವತ್ತೂ ಹೋರಾಡಬಾರದು. ಸ್ವತಃ ದೇವರೇ ಸಭೆಯನ್ನು ಸುರಕ್ಷಿತವಾಗಿ ಕಾಪಾಡುತ್ತಾರೆ, ಮತ್ತು ಅವರು ಸೂಕ್ತ ಸಮಯದಲ್ಲಿ, ಸಭೆಯನ್ನು ಕೆಡಿಸುವವರನ್ನು ನಾಶಗೊಳಿಸುತ್ತಾರೆ (1 ಕೊರಿ. 3:17). ಆದರೆ ದೇವರು ದೀರ್ಘಶಾಂತಿಯುಳ್ಳವರು ಮತ್ತು ಅವರು ತೀರ್ಪು ಮಾಡುವ ಮೊದಲು ಅನೇಕ ವರ್ಷಗಳ ವರೆಗೆ ಕಾದಿರುತ್ತಾರೆ - ಏಕೆಂದರೆ ಯಾರೂ ನಾಶವಾಗುವುದನ್ನು ಅವರು ಬಯಸುವುದಿಲ್ಲ, ಆದರೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಲಿ ಎಂದು ಅಪೇಕ್ಷಿಸುತ್ತಾರೆ. ನೋಹನ ದಿನದಲ್ಲಿ ಅವರು 120 ವರ್ಷಗಳಷ್ಟು ಸಮಯ ಕಾದಿದ್ದರು. ಆದರೆ ದೇವರು ನ್ಯಾಯತೀರ್ಪು ಮಾಡುವಾಗ, ಅವರ ತೀರ್ಪು ಕಠಿಣವಾಗಿರುತ್ತದೆ. ಹಾಗಿರುವಾಗ ಒಂದು ಸಭೆಯಲ್ಲಿ ಇಲ್ಲಿಯ ವರೆಗೆ ಯಾವುದೇ ಒಡಕು ಅಥವಾ ವಿಭಜನೆ ಉಂಟಾಗಿಲ್ಲವೆಂದು ಹೆಮ್ಮೆ ಪಡುವುದು ಮೂರ್ಖತನವಾಗಿದೆ. ಅನಾದಿ ಕಾಲದಲ್ಲಿ, ಪರಲೋಕದಲ್ಲಿಯೇ ದೇವದೂತರುಗಳ ನಡುವೆ ಒಂದು ವಿಭಜನೆ ಉಂಟಾಗಿತ್ತು. ಇಂತಹ ವಿಭಜನೆಗಳು ಅಥವಾ ಭಿನ್ನಾಭಿಪ್ರಾಯಗಳು ಇರುವದು ಅವಶ್ಯವೇ, ಏಕೆಂದರೆ "ನಿಮ್ಮಲ್ಲಿ ಇಂಥಿಂಥವರು ಯೋಗ್ಯರೆಂದು (ದೇವರ ದೃಷ್ಟಿಯಲ್ಲಿ) ಕಾಣಬರುವಂತೆ, ಭಿನ್ನಾಭಿಪ್ರಾಯಗಳು ಇರುವದು ಅವಶ್ಯವೇ" (1 ಕೊರಿ. 11:19). ಬೆಳಕಿನಿಂದ ಕತ್ತಲೆಯನ್ನು ಬೇರ್ಪಡಿಸುವುದು ಅವಶ್ಯವಾಗಿದೆ. ಇದು ವಿಭಜನೆ ಅಥವಾ ಸೀಳು ಅಲ್ಲ. ಇದು ಶುದ್ಧೀಕರಣವಾಗಿದೆ. ಇದು ಇಲ್ಲವಾದರೆ, ಭೂಮಿಯ ಮೇಲೆ ದೇವರ ಸಾಕ್ಷಿಯು ಕೆಟ್ಟುಹೋಗುತ್ತದೆ.

ನಮ್ಮಲ್ಲಿ ಪ್ರತಿಯೊಬ್ಬರೂ ಸಭೆಯಲ್ಲಿ ಎರಡು ವಿಧವಾದ ಸೇವೆಗಳಲ್ಲಿ ಒಂದನ್ನು ಹೊಂದಬಹುದು: "ದಾನಿಯೇಲ-ಸೇವೆ" - ಐಕ್ಯತೆ ಮತ್ತು ಅನ್ಯೋನ್ಯತೆಯನ್ನು ಬೆಳೆಸುವಂಥದ್ದು - ಅಥವಾ "ಲೂಸಿಫರ-ಸೇವೆ" - ಭಿನ್ನಮತವನ್ನು ಉಂಟುಮಾಡುವಂಥದ್ದು. ನಾವು ಈ ಎರಡರಲ್ಲಿ ಒಂದನ್ನು ಮಾಡಲೇ ಬೇಕಾಗುತ್ತದೆ. ಯೇಸುವು ಹೇಳಿದಂತೆ, ಜನರನ್ನು ಯೇಸುವಿನ ಕಡೆಗೆ ಒಟ್ಟುಗೂಡಿಸದೇ ಇರುವವರು, ಜನರನ್ನು ಚದುರಿಸುತ್ತಾರೆ. ದೇವಸಭೆಯಲ್ಲಿ ಕೇವಲ ಎರಡು ಸೇವೆಗಳು ನಡೆಯುತ್ತವೆ - ಒಟ್ಟುಗೂಡಿಸುವುದು ಮತ್ತು ಚದರಿಸುವುದು (ಮತ್ತಾ. 12:30).

ಈ ಕೊನೆಯ ದಿನಗಳಲ್ಲಿ ನಾವು ಕೃಪೆ ಮತ್ತು ಜ್ಞಾನವನ್ನು ಪಡೆದು, ನಮಗಾಗಿ ದೇವರು ಸಂಕಲ್ಪಿಸಿದ ಹಾಗೆ ಜೀವಿಸಲು ಸಾಧ್ಯವಾಗಲಿ, ಮತ್ತು ಈ ರೀತಿಯಾಗಿ ಪ್ರತಿಯೊಂದು ಸ್ಥಳದಲ್ಲಿ ದೇವರ ನಾಮಕ್ಕೆ ಮಹಿಮೆ ತರುವಂತೆ ದೇವಸಭೆಯು ಒಂದು ಪರಿಶುದ್ಧ ಸಾಕ್ಷಿಯಾಗಿ ಕಟ್ಟಲ್ಪಡಲಿ.