ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಆತ್ಮಭರಿತ ಜೀವಿತ
WFTW Body: 

ಎಲೀಷನು ಯಾಕೆ ಅಭಿಷೇಕಿಸಲ್ಪಟ್ಟವನಾಗಿದ್ದನು ಎಂಬುದಕ್ಕೆ ಮೂರು ಕಾರಣಗಳು ಇಲ್ಲಿವೆ.

.1.ದಾಹ

ದೇವರು ಎಲೀಷನನ್ನು ಅಭಿಷೇಕಿಸುವದಕ್ಕೆ ಮೊದಲನೇ ಕಾರಣ, ಆತನಲ್ಲಿ ಅದಕ್ಕಾಗಿ ಸ್ಪಷ್ಟವಾದ ದಾಹವಿತ್ತು ಮತ್ತು ಆತನು ಲೋಕದಲ್ಲಿ ಎಲ್ಲದಕ್ಕೂ ಹೆಚ್ಚಾಗಿ ಅದಕ್ಕಾಗಿ ಹಾತೊರೆಯುತಿದ್ದನು.

2 ಅರಸು 2:1-10ರಲ್ಲಿ, ಎಲೀಯನು ಈ ವಿಷಯದಲ್ಲಿ ಎಲೀಷನನ್ನು ಹೇಗೆ ಪರೀಕ್ಷಿಸಿದನೆಂದು ನಾವು ಓದುತ್ತೇವೆ. ಮೊದಲನೆಯದಾಗಿ, ತಾನು ಗಿಲ್ಗಾಲಿನಿಂದ ಹೊರಟಿದ್ದರೂ ಸಹ ಎಲೀಷನನ್ನು ಅಲ್ಲಿಯೇ ಉಳಕೊಳ್ಳಲು ಹೇಳಿದನು. ಆದರೆ ಎಲೀಷನು ಎಲೀಯನನ್ನು ಬಿಟ್ಟಿರಲು ನಿರಾಕರಿಸಿದನು. ನಂತರ ಎಲೀಯನು ಅವನನ್ನು 15 ಮೈಲು ಪಶ್ಚಿಮಕ್ಕೆ ಬೇತೇಲಿಗೆ, ಅಲ್ಲಿಂದ ಮತ್ತೊಮ್ಮೆ 12 ಮೈಲು ಯೆರಿಕೋವಿನ ಕಡೆಗೆ ಮತ್ತು ಅಲ್ಲಿಂದ ಪೂರ್ವಕ್ಕೆ 5 ಮೈಲು ಯೊರ್ದನಿಗೆ ನಡೆಸುವುದರ ಮೂಲಕ, ಪ್ರತಿಯೊಂದು ಹಂತದಲ್ಲೂ ಎಲೀಷನ ತಾಳ್ಮೆ ಮತ್ತು ಆಸಕ್ತಿಯನ್ನು ಪರೀಕ್ಷಿಸಿದನು. ಅಂತಿಮವಾಗಿ, ಎಲೀಯನು ಅವನನ್ನು ಬಿಟ್ಟುಹೋಗುವ ಮೊದಲು ಕೊಡಬಹುದಾದ ಏನಾದರೂ ಬೇಡಿಕೆ ಇದೆಯಾ? ಎಂದು ಕೇಳಿದನು. ಆಗ ಎಲೀಷನು, “ನನಗೆ ಬೇಕಾಗಿರುವದು ಒಂದೇ ಒಂದು. ಆದಕ್ಕಾಗಿಯೇ ಇಷ್ಟು ಹೊತ್ತಿನಿಂದ ನಾನು ನಿನ್ನನ್ನು ಹಿಂಬಾಲಿಸುತ್ತಿದ್ದೇನೆ. ಅದಕ್ಕಾಗಿಯೇ ನೀನು ನನ್ನನ್ನು ದೂರ ಸರಿಸಲು ಪ್ರಯತ್ನಿಸಿದಾಗ್ಯೂ ನಾನು ನಿನ್ನನ್ನು ಬಿಡಲಿಲ್ಲ. ನಿನಗಿರುವ ಆತ್ಮದ ಎರಡರಷ್ಟನ್ನು ನನಗೆ ಅನುಗ್ರಹಿಸು,” ಎಂದನು.

ಎಲೀಷನು ಹೃದಯಪೂರ್ವಕವಾಗಿ ಆ ಅಭಿಷೇಕವನ್ನು ಹಂಬಲಿಸಿದನು. ಆತನು ಇದಕ್ಕಿಂತ ಕಡಿಮೆಯಾದ ಯಾವುದರಲ್ಲೂ ತೃಪ್ತಿ ಹೊಂದಲು ಸಿದ್ಧನಿರಲಿಲ್ಲ. ಹಾಗಾಗಿ ತಾನು ಕೇಳಿಕೊಂಡದ್ದನ್ನು ಆತನು ಪಡೆದನು.

ಎಲೀಯನು ಎಲೀಷನನ್ನು ನಡೆಸಿದಂತೆಯೇ, ಅನೇಕ ಸಲ ದೇವರು ನಮ್ಮನ್ನು ನಡೆಸಿ, ನಾವು ಪವಿತ್ರಾತ್ಮನ ಪೂರ್ಣ ಅಭಿಷೇಕಕ್ಕಿಂತ ಕಡಿಮೆಯಾದ ಯಾವುದರಲ್ಲೋ ತೃಪ್ತಿ ಪಟ್ಟುಕೊಳ್ಳುತ್ತೇವೋ ಎಂದು ಪರೀಕ್ಷಿಸುತ್ತಾನೆಂದು ನಾನು ನಂಬುತ್ತೇನೆ. ನಾವು ಕಡಿಮೆಯಲ್ಲೇ ತೃಪ್ತಿಗೊಳ್ಳುವದಾದರೆ, ನಮಗೆ ಅಷ್ಟೇ ದೊರಕುತ್ತದೆ. ಅಭಿಷೇಕವಿಲ್ಲದಿದ್ದರೆ ತೊಂದರೆಯಿಲ್ಲ ಎಂದುಕೊಂಡು, ಯಾವ ಚಿಂತೆಯೂ ಇಲ್ಲದೆ ಸಂತುಷ್ಟನಾಗಿರುವ ವಿಶ್ವಾಸಿಗೆ, ದೇವರು ಈ ಅಭಿಷೇಕವನ್ನು ಕೊಡುವದಿಲ್ಲ.

ಆದರೆ ನಾವು ಎಲೀಷನಂತೆ, ಇದು ಎಲ್ಲಕಿಂತ ಹೆಚ್ಚು ಅವಶ್ಯವೆಂದು ತಿಳಕೊಂಡು ಇದು ಸಿಗುವ ವರೆಗೂ ಇದಕ್ಕಾಗಿ ಪ್ರಯಾಸ ಪಡುವದಾದರೆ, ಮತ್ತು ಪೆನಿಯೇಲಿನಲ್ಲಿ ಯಾಕೋಬನು ಹೇಳಿದಂತೆ, “ಕರ್ತನೇ, ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನ್ನು ಬಿಡುವುದಿಲ್ಲ,” ಎಂದು ಯಥಾರ್ಥವಾಗಿ ಹೇಳುವದಾದರೆ, ನಾವು ಈ ಪವಿತ್ರಾತ್ಮನ ಶಕ್ತಿಗಾಗಿ, ಪುನರುತ್ತಾನದ ಶಕ್ತಿಗಾಗಿ, ಹೆಣಗುತ್ತಾ ನಿಜವಾಗಿ ಹಂಬಲಿಸಿದರೆ, ಆಗ ನಿಜವಾಗಿಯೂ ನಾವು ಅದನ್ನು ಪಡೆಯುತ್ತೇವೆ. ಆಗ ನಾವು ದೇವರೊಂದಿಗೂ ಮತ್ತು ಮನುಷ್ಯರೊಂದಿಗೂ ಶಕ್ತಿಯುಳ್ಳ ನಿಜವಾದ ಇಸ್ರಾಯೇಲ್ಯರಾಗುತ್ತೇವೆ.

ನಮಗೆ ಈ ಅಭಿಷೇಕವು ಎಷ್ಟು ಅಗತ್ಯವೆಂಬುದನ್ನು ತೋರಿಸುವುದಕ್ಕಾಗಿ, ದೇವರು ಅನೇಕ ಸಲ ನಮ್ಮ ಜೀವನದಲ್ಲಿ ಸೋಲು, ನಿರಾಶೆಗಳನ್ನು ಅನುಮತಿಸುತ್ತಾನೆ. ನಾವು ಸುವಾರ್ತಾ ಪ್ರಸಾರದ ಸಿದ್ಧಾಂತವನ್ನು ನಂಬಿದ್ದರೂ ಮತ್ತು ನಮ್ಮೊಳಗೆ ಪವಿತ್ರಾತ್ಮನು ವಾಸಮಾಡಿದ್ದರೂ, ನಮ್ಮ ಮೇಲೆ ದೇವರಾತ್ಮನು ಶಕ್ತಿಯುತವಾಗಿ ನೆಲೆಗೊಳ್ಳುವ ಅನುಭವ ನಮಗೆ ಅಗತ್ಯವೆಂದು ನಾವು ಸ್ಪಷ್ಟವಾಗಿ ಗ್ರಹಿಸುವಂತೆ ಮಾಡಲು ಆತನು ಇಚ್ಛಿಸುತ್ತಾನೆ.

ಅಭಿಷೇಕವನ್ನು ಹೊಂದುವುದು ಅಷ್ಟು ಸುಲಭವಾದ ಸಂಗತಿಯಲ್ಲ. ಎಲೀಯನು ಎಲೀಷನ ಬಿನ್ನಹವನ್ನು ಕೇಳಿದಾಗ, “ಓಹೋ, ನೀನು ಕೇಳಿಕೊಂಡಿರುವುದು ಬಹು ಸುಲಭವಾದ ಸಂಗತಿ, ನೀನಿಲ್ಲಿ ಮೊಣಕಾಲೂರು, ನಾನು ನಿನ್ನ ತಲೆಯ ಮೇಲೆ ಕೈ ಇಡುವೆನು ಮತ್ತು ನಿನಗೆ ಅದು ಸಿಕ್ಕುತ್ತದೆ” ಎಂದು ಅವನಿಗೆ ಹೇಳಲಿಲ್ಲ. ಬದಲಾಗಿ, ಎಲೀಯನು ಎಲೀಷನಿಗೆ, “ನೀನು ಕಠಿಣವಾದ ಸಂಗತಿಯನ್ನು ಕೇಳಿಕೊಂಡಿದ್ದಿ,” ಎಂದು ಹೇಳಿದನು. ಹೌದು, ಅದು ನಿಜವಾಗಿಯೂ ಒಂದು ಕಠಿಣವಾದ ಸಂಗತಿಯಾಗಿದೆ. ನಾವು ಅದರ ಬೆಲೆಯನ್ನು ತೆರಬೇಕಾಗುತ್ತದೆ. ನಾವು ಅದಕ್ಕಾಗಿ ಈ ಲೋಕದ ಪ್ರತಿಯೊಂದನ್ನೂ ತ್ಯಜಿಸಲು ಸಿದ್ಧರಾಗಬೇಕು.

ನಾವು ಪವಿತ್ರಾತ್ಮನ ಅಭಿಷೇಕವನ್ನು ಈ ಲೋಕದ ಇನ್ನೆಲ್ಲವುಗಳಿಗಿಂತ ಹೆಚ್ಚಾಗಿ - ಸಂಪತ್ತು, ಸುಖ-ಸೌಲಭ್ಯಗಳು, ಕೀರ್ತಿ ಮತ್ತು ಪ್ರಸಿದ್ಧಿ, ಅಷ್ಟೇ ಅಲ್ಲದೆ ಯಶಸ್ವೀ ಕ್ರಿಸ್ತೀಯ ಸೇವೆಗಿಂತಲೂ ಹೆಚ್ಚಾಗಿ ಆಶಿಸಬೇಕು. ಹೌದು, ಅದು ನಿಜವಾಗಿಯೂ ಕಠಿಣವಾದ ಸಂಗತಿಯಾಗಿದೆ. ಆದರೆ ದಾಹ ಎಂಬುದರ ಅರ್ಥ ಇದೇ ಆಗಿದೆ. ನಾವು ಆ ಸ್ಥಿತಿಗೆ ತಲುಪಿದಾಗ, ದೇವರ ವಚನವು ವಿವರಿಸುವಂತೆ, ಯೇಸುವಿನ ಬಳಿಗೆ ಹೋಗಿ ಆ ಜೀವಜಲವನ್ನು ಕುಡಿಯುತ್ತೇವೆ, ಮತ್ತು ಜೀವಕರವಾದ ನೀರಿನ ಹೊಳೆಗಳು ನಮ್ಮಿಂದ ಅನೇಕ ದಿಕ್ಕುಗಳಲ್ಲಿ ಹರಡಿ ಹೋಗುತ್ತವೆ ಮತ್ತು ಅವು ಹರಿಯುವಲ್ಲೆಲ್ಲಾ ಮರಣದಿಂದ ಜೀವ ಉಂಟಾಗುತ್ತದೆ (ಯೋಹಾನ 7:37-39; ಯೆಹೆಜ್ಕೇಲ 47:8,9).

ನಾವು ಈ ಅಭಿಷೇಕವನ್ನು ಪಡೆದ ಮೇಲೆ, ಏನೇ ಆದರೂ ಅದನ್ನು ಕಳಕೊಳ್ಳದಂತೆ ಎಚ್ಚರವಾಗಿರಬೇಕು. ಅಜಾಗ್ರತೆಯ ಮೂಲಕ ನಾವು ಹೊಂದಿರುವದನ್ನು ಕಳಕೊಳ್ಳಲೂ ಸಾಧ್ಯವಿದೆ. ನಮ್ಮ ನಿರ್ದಾಕ್ಷಿಣ್ಯ ಟೀಕೆಗಳು, ಅಥವಾ ಬಾಯಿಗೆ ಬಂದಂತೆ ಆಡುವ ಮಾತುಗಳು, ಅಥವಾ ಅಶುದ್ಧ ಕಲ್ಪನೆಗಳು, ಇಲ್ಲವೇ ನಮ್ಮ ಹೃದಯದ ಗರ್ವ ಅಥವಾ ಇತರರನ್ನು ಕ್ಷಮಿಸಲಾರದ ಛಲ, ನಾವು ಇವೆಲ್ಲವುಗಳನ್ನು ದೂರ ಮಾಡದಿದ್ದಲ್ಲಿ, ಅಭಿಷೇಕವು ಹೊರಟು ಹೋಗುತ್ತದೆ.

ಅಪೊಸ್ತಲನಾದ ಪೌಲನು, ಇತರರಿಗೆ ಬೋಧಿಸಿದ ಮೇಲೆ ತಾನೇ ಅಯೋಗ್ಯನು ಎನಿಸಿಕೊಳ್ಳದೇ ಇರುವಂತೆ, ತನ್ನ ದೇಹದ ಅಂಗಗಳನ್ನು ಜಜ್ಜಿ ಸ್ವಾಧೀನ ಪಡಿಸಿದ್ದಾಗಿ 1 ಕೊರಿಂಥ 9:27ರಲ್ಲಿ ಹೇಳುತ್ತಾನೆ. ಇಲ್ಲಿ ಅವನು ಹೇಳುತ್ತಿರುವದು, ತಾನು ರಕ್ಷಣೆಯನ್ನು ಕಳೆದುಕೊಳ್ಳುವ ಸಾಧ್ಯತೆಯ ಕುರಿತಲ್ಲ, ಆದರೆ ತಾನು ಅಭಿಷೇಕವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆಯೆಂದು ಹೇಳುತ್ತಿದ್ದಾನೆಂದು ನಾನು ನಂಬುತ್ತೇನೆ. ಪೌಲನಂತ ಒಬ್ಬ ಶ್ರೇಷ್ಠ ಅಪೊಸ್ತಲನು, ಹಲವಾರು ಸಭೆಗಳನ್ನು ಸ್ಥಾಪಿಸಿದ ನಂತರ, ಎಷ್ಟೋ ಅದ್ಭುತಗಳನ್ನು ಮಾಡಿದ ಮೇಲೆ ಮತ್ತು ದೇವರಿಂದ ಬಲವಾಗಿ ಉಪಯೋಗಿಸಲ್ಪಟ್ಟಿದ್ದರೂ, ಅಜಾಗರೂಕನಾಗಿ ನಡೆದರೆ ಅಭಿಷೇಕವನ್ನು ಕಳಕೊಳ್ಳುವ ಅಪಾಯದಲ್ಲಿದ್ದರೆ, ನಮ್ಮ ಗತಿಯೇನೆಂದು ನಾನು ಚಕಿತನಾಗಿ ಯೋಚಿಸುವದನ್ನು ನಿಲ್ಲಿಸಿಲ್ಲ.

“ಕರ್ತನೇ, ನನ್ನ ಜೀವನದಲ್ಲಿ ನಾನು ಏನನ್ನು ಕಳಕೊಂಡರೂ ನಿನ್ನ ಅಭಿಷೇಕವನ್ನು ಮಾತ್ರ ಎಂದಿಗೂ ಕಳಕೊಳ್ಳದಂತೆ ನನ್ನನ್ನು ಇರಿಸು,” ಎಂದು ನಾವು ಎಡೆಬಿಡದೆ ಪ್ರಾರ್ಥಿಸುವದು ಅವಶ್ಯ.

2. ಉದ್ದೇಶದಲ್ಲಿ ಪರಿಶುದ್ಧತೆ

ಎಲೀಷನು ಅಭಿಷೇಕ ಹೊಂದಿದ್ದರ ಎರಡನೆಯ ಕಾರಣ, ಅವನ ಉದ್ದೇಶಗಳು ಶುದ್ಧವಾಗಿದ್ದವು. ಅವನ ಒಂದೇ ಒಂದು ಇಚ್ಛೆ - ದೇವರನ್ನು ಮಹಿಮೆ ಪಡಿಸುವುದೇ ಆಗಿತ್ತು. ಈ ಮಾತು ಎಲ್ಲಿಯೂ ಬರಯಲ್ಪಟ್ಟಿಲ್ಲ, ಆದರೆ ಅವನ ಜೀವನದ ವಿವರಗಳನ್ನು ಓದುವಾಗ ಅದು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಎಲೀಷನ ಕಾಲದಲ್ಲಿ ದೇವರ ನಾಮವು ನಿಂದೆಗೆ ಒಳಗಾಗಿದ್ದುದನ್ನು ಮತ್ತು ದೇವಜನರು ಅಪಾರವಾದ ಕೊರತೆಯಲ್ಲಿ ಇದ್ದುದನ್ನು ನೋಡಿ, ಅವನ ಮೊದಲು ಎಲೀಯನು ಅನುಭವಿಸಿದಂತೆಯೇ, ಅವನಿಗೆ ಬಹಳ ನೋವಾಯಿತು. ಅವನು ಆ ನಾಡಿನಲ್ಲಿ ದೇವರ ಸೇವೆಯ ಅವಶ್ಯಕತೆಯನ್ನು ಪೂರೈಸಿ, ಆತನ ಮಹಿಮೆಯುಳ್ಳ ನಾಮಕ್ಕೆ ಉಂಟಾಗಿದ್ದ ನಿಂದೆಯನ್ನು ತೊಲಗಿಸಲು ಬೇಕಾದ ಅಭಿಷೇಕಕ್ಕಾಗಿ ಹಂಬಲಿಸುತ್ತಿದ್ದನು.

ಅನೇಕಾವರ್ತಿ ದೇವರ ಮಕ್ಕಳು ಅಭಿಷೇಕಿಸಲ್ಪಡದೇ ಇರುವದರ ಕಾರಣ, ಅವರ ಅಶುದ್ಧತೆ ಮತ್ತು ಸ್ವಾರ್ಥಪರ ಪ್ರೇರಣೆಗಳು ಆಗಿರುತ್ತವೆ. ಹೆಚ್ಚಿನ ಕ್ರೈಸ್ತರು ಹೊರತೋರಿಕೆಯ ಜೀವನವನ್ನು ಸರಿಪಡಿಸುವದರಲ್ಲಿ ಸಂತೋಷಿಸುತ್ತಾರೆ, ಆದರೆ ದೇವರು ಅಂತರಂಗದಲ್ಲಿ ಸತ್ಯವನ್ನು ಹುಡುಕುತ್ತಾನೆ. ನಮಗಿರುವ ಕಾಳಜಿ ನಮ್ಮ ಸ್ವಂತ ಮಹಿಮೆಗಾಗಿಯೋ ಅಥವಾ ಆತನ ಮಹಿಮೆಗಾಗಿಯೋ ಎನ್ನುವದನ್ನು ಆತನು ಪರೀಕ್ಷಿಸುತ್ತಾನೆ. ಆತನ ನಾಮವು ನಿಂದನೆಗೆ ಗುರಿಯಾಗಿರುವದು ನಮ್ಮನ್ನು ನೋಯಿಸುತ್ತದೋ ಇಲ್ಲವೋ ಎಂದು ಆತನು ನೋಡುತ್ತಾನೆ. ಇಂದಿನ ದಿನ ನಮ್ಮ ನಾಡಿನಲ್ಲಿ ದೇವರ ನಾಮಕ್ಕೆ ಆಗುವ ಅವಹೇಳನವನ್ನು ನೋಡಿ, ನಮ್ಮ ಹೃದಯದಲ್ಲಿ ಭಾರವಾಗಲೀ, ನೋವಾಗಲೀ ಇಲ್ಲವಾದರೆ, ದೇವರು ನಮ್ಮನ್ನು ಎಂದಾದರೂ ಅಭಿಷೇಕಿಸುವನೋ, ಎನ್ನುವ ಸಂದೇಹ ನನಗಿದೆ.

ಯೆಹೆಜ್ಕೇಲ 9:1-6ರಲ್ಲಿ, ದೇವರು ಕೆಲವು ನಿಗದಿತ ಜನರನ್ನು ತನ್ನ ಸ್ವಕೀಯ ಪ್ರಜೆಗಳನ್ನಾಗಿ ಪ್ರತ್ಯೇಕಿಸಿದನೆಂದು ನಾವು ಓದುತ್ತೇವೆ. ಹೀಗೆ ಗುರುತಿಸಲಾದವರು, ದೇವಜನರ ನಡುವೆ ಇದ್ದ ಪಾಪಗಳನ್ನು ಕಂಡು ನರಳಿ ಗೋಳಾಡುವ ಜನರಾಗಿದ್ದರು. ಇವರೇ ದೇವರ ಶೇಷ ಜನರೆಂದು ಗೊತ್ತು ಮಾಡಲ್ಪಟ್ಟವರು ಮತ್ತು ಇಂಥವರನ್ನೇ ದೇವರು ಅಭಿಷೇಕಿಸುವದು - ಇವರೇ ದೇವರ ನಾಮಕ್ಕಾಗಿ ಚಿಂತಿಸುವ ಹೃದಯ ಉಳ್ಳವರು ಮತ್ತು ಆತನೊಬ್ಬನನ್ನೇ ಮಹಿಮೆಪಡಿಸಲು ಹಾತೊರೆಯುವವರು.

3. ಈ ಲೋಕವನ್ನು ಪ್ರೀತಿಸದಿರುವದು

ಎಲೀಷನು ಅಭಿಷೇಕ ಹೊಂದಿದ್ದಕ್ಕೆ ಮೂರನೆಯ ಕಾರಣವೆಂದರೆ, ಅವನು ಈ ಲೋಕವನ್ನು ಯಾವುದೇ ರೀತಿಯಲ್ಲಿ ಪ್ರೀತಿಸಲಿಲ್ಲ. ಇದು ಅವನು ನಾಮಾನನೊಂದಿಗೆ ವ್ಯವಹರಿಸಿದ ರೀತಿಯಲ್ಲಿ ವ್ಯಕ್ತವಾಗುತ್ತದೆ. ಆತನು ಗುಣ ಹೊಂದಿದ ತರುವಾಯ ಹಣವನ್ನು ನೀಡಲು ಮುಂದಾದಾಗ, ಅವನು ಅದ್ಭುತಕಾರ್ಯವನ್ನು ನೆರವೇರಿಸಿದ್ದಕ್ಕೆ ಪ್ರತಿಫಲವನ್ನು ಸ್ವೀಕರಿಸಲು ಒಪ್ಪಲಿಲ್ಲ. ಎಲೀಷನಲ್ಲಿ ಈ ಲೋಕಕ್ಕಾಗಿ ಅಥವಾ ಹಣಕ್ಕಾಗಿ ಲಾಲಸೆ ಇರಲಿಲ್ಲ. ಕರ್ತನ ಕಾರ್ಯದಲ್ಲಿ ಅವನು ತನ್ನ ವೈಯಕ್ತಿಕ ಲಾಭವನ್ನು ಹುಡುಕಲಿಲ್ಲ. ಇನ್ನೊಂದು ಕಡೆ, ಇದಕ್ಕೆ ತದ್ವಿರುದ್ಧವಾದ ನಡತೆ ನಮಗೆ ಗೇಹಜಿಯಲ್ಲಿ ಕಾಣಿಸುತ್ತದೆ. ಎಲೀಷನು ಎಲೀಯನ ಸಹಾಯಕನಾಗಿದ್ದಂತೆಯೇ ಇವನು ಎಲೀಷನ ಸಹಾಯಕನಾಗಿದ್ದನು. ಅಲ್ಲಿ ಎಲೀಷನು ಎಲೀಯನ ಆತ್ಮದ ಎರಡು ಪಾಲನ್ನು ಹೊಂದಿ ಎಲೀಯನ ಸೇವೆಯನ್ನು ಮುಂದುವರೆಸಿದಂತೆ, ಗೇಹಜಿಯೂ ಸಹ ಖಂಡಿತವಾಗಿ ಎಲೀಷನ ಆತ್ಮವನ್ನು ಸ್ವೀಕರಿಸಿ ಎಲೀಷನ ಸೇವೆಯನ್ನು ಮುಂದುವರಿಸಬಹುದಿತ್ತು. ಆದರೆ ಅವನಿಗೆ ಆ ಅಭಿಷೇಕವು ದೊರಕಲಿಲ್ಲ. ಅದರ ಬದಲಾಗಿ ಅವನಿಗೆ ಕುಷ್ಠರೋಗ ಹತ್ತಿತು. ಏಕೆ? ಏಕೆಂದರೆ ದೇವರು ಅವನ ಹೃದಯವನ್ನು ನೋಡಿದನು. ಗೇಹಜಿಯಲ್ಲಿ ಆತ್ಮಿಕತೆಯ ಹೊರತೋರಿಕೆ ಇದ್ದರೂ, ಆತನ ಹೃದಯದ ಅಂತರಾಳದಲ್ಲಿ ಸ್ವಾರ್ಥದ ಸಂಪಾದನೆಯ ಆಸೆಯಿತ್ತು. ಅವನು ಕರ್ತನ ಕಾರ್ಯವನ್ನು ಆರಂಭಿಸಿದಾಗ ಪ್ರಾಮಾಣಿಕನಾಗಿಯೇ ಪ್ರಾರಂಭಿಸಿರಬಹುದು, ಆದರೆ ಸ್ವಲ್ಪ ಸಮಯದಲ್ಲೇ ಲೌಕಿಕ ಅನುಕೂಲಗಳ ಬಗ್ಗೆಯೂ ಯೋಚಿಸ ತೊಡಗಿದನು. ಅವನು ಅಭಿಷೇಕವನ್ನು ಪಡೆಯುವದರ ಜೊತೆಗೆ, ಈ ಲೋಕದ ಐಶ್ವರ್ಯವನ್ನೂ ತಾನು ಸಂಪಾದಿಸಬಹುದೆಂದು ಯೋಚಿಸಿದನು. ಆದರೆ ಅವನ ಎಣಿಕೆ ತಪ್ಪಾಗಿತ್ತು. ಅನೇಕ ಕ್ರೈಸ್ತ ಕಾರ್ಯಕರ್ತರು ಇದೇ ತಪ್ಪನ್ನು ಮಾಡಿದ್ದಾರೆ. ಯಾವುದೇ ಕ್ರೈಸ್ತಸಭೆ ಅಥವಾ ಕ್ರೈಸ್ತ ಸಂಸ್ಥೆಗಳಲ್ಲಿ ನಮ್ಮ ಸ್ಥಾನ ಅಥವಾ ನಮ್ಮ ಸೇವೆಯನ್ನು ಯಾವುದೇ ವೈಯಕ್ತಿಕ ಲಾಭದ ಸಾಧನವಾಗಿ ಮಾಡಿಕೊಳ್ಳದಂತೆ ಕರ್ತನು ನಮ್ಮನ್ನು ತಡೆಯಲಿ.

ದೇವರು ನಮ್ಮ ನಾಡಿನಲ್ಲಿ ಇಂದು ಆತನ ಆತ್ಮನಿಂದ ಆತನು ಅಭಿಷೇಕಿಸಬಹುದಾದ ಸ್ತ್ರೀ-ಪುರುಷರಿಗಾಗಿ ಹುಡುಕುತ್ತಿದ್ದಾನೆ - ಯಾವ ಬೆಲೆಯನ್ನಾದರೂ ಕೊಟ್ಟು ಇಂತಹ ಶಕ್ತಿಯ ವರದಾನವನ್ನು ಸ್ವೀಕರಿಸಿ, ಅದನ್ನು ಉಳಿಸಿಕೊಳ್ಳಲು ಬಯಸುವಂತಹ ಜನಶೇಷ!

ಈ ಅಭಿಷೇಕವು ಮಾತ್ರವೇ ನಮ್ಮ ನಾಡಿನಲ್ಲಿ ವೈರಿಯ ನೊಗವನ್ನು ಮುರಿದು ಹಾಕಲು ಸಮರ್ಥವಾಗಿದೆ (ಯೆಶಾಯ 10:27). ಯೇಸುವಿನ ಹೆಸರು ನಮ್ಮ ವಶಕ್ಕೆ ಒಪ್ಪಿಸಲ್ಪಟ್ಟಿದೆ. ಆದರೆ ಈ ಅಭಿಷೇಕವನ್ನು ನಾವು ಹೊಂದಿದ್ದೇವೋ? ಓ! ನಮ್ಮ ಜೀವನ ಮತ್ತು ನಮ್ಮ ಸೇವೆಯಲ್ಲಿ ದೇವರ ನಾಮವನ್ನು ಮಹಿಮೆ ಪಡಿಸುವಂತೆ, ಆತನ ಚಿತ್ತವನ್ನು ನೆರವೇರಿಸುವಂತೆ, ಮತ್ತು ಆತನ ರಾಜ್ಯವನ್ನು ಬರಮಾಡುವಂತೆ, ಪವಿತ್ರಾತ್ಮನ ಶಕ್ತಿಗಾಗಿ ನಮ್ಮಲ್ಲಿ ದಾಹವು ಅವಶ್ಯವಾಗಿ ಉಂಟಾಗಲಿ!