WFTW Body: 

ಪವಿತ್ರಾತ್ಮನ ದೀಕ್ಷಾಸ್ನಾನ (ಅಂದರೆ ಮುಳುಗಿಸುವಿಕೆ) ಕಡಿಮೆ ಪ್ರಾಮುಖ್ಯತೆಯುಳ್ಳದ್ದು ಎಂಬ ಮನೋಭಾವವು ಪ್ರಸ್ತುತ ದಿನಗಳಲ್ಲಿ ಹರಡಿರುವುದರ ಕುರಿತಾಗಿ ನಮ್ಮಲ್ಲಿ ಗಂಭೀರವಾದ ಕಾಳಜಿ ಇರಬೇಕು. ಇಂದು ಕ್ರೈಸ್ತ ಪ್ರಪಂಚದ ಜನರಲ್ಲಿ ಎರಡು ವಿಪರೀತ ದೃಷ್ಟಿಕೋನಗಳನ್ನು ನಾವು ಕಾಣಬಹುದು: ಪವಿತ್ರಾತ್ಮನ ದೀಕ್ಷಾಸ್ನಾನವನ್ನು ಸಂಪೂರ್ಣವಾಗಿ ನಿರಾಕರಿಸುವುದು, ಮತ್ತು ಕಳಪೆ ಭಾವಾವೇಶದ ನಕಲಿ ದೀಕ್ಷಾಸ್ನಾನದಲ್ಲಿ ಹೆಚ್ಚಳ ಪಡುವುದು (ಅಂತಹ ದೀಕ್ಷಾಸ್ನಾನವು ಜನರ ಸೇವೆಗಾಗಿ ಬಲವನ್ನಾಗಲೀ, ಅಥವಾ ಜೀವನದಲ್ಲಿ ಪವಿತ್ರತೆಯನ್ನಾಗಲೀ ಒದಗಿಸಲು ಅಸಮರ್ಥವಾದದ್ದು). ನಾವು ಇವೆರಡು ದೃಷ್ಟಿಕೋನಗಳಿಂದ ದೂರ ಸರಿಯಬೇಕು ಮತ್ತು ನಮ್ಮ ಜೀವನ ಮತ್ತು ನಮ್ಮ ಸೇವೆ ಫಲಪ್ರದವಾಗುವಂತೆ ಬಲವನ್ನು ಒದಗಿಸುವಂತ ಯಥಾರ್ಥವಾದ ತುಂಬಿಸುವಿಕೆಗಾಗಿ ದೇವರನ್ನು ಪ್ರಾರ್ಥಿಸಬೇಕು.

ಸ್ವತಃ ನಾವು ಆತ್ಮಿಕವಾಗಿ ಯಾವ ಮಟ್ಟವನ್ನು ತಲಪಿದ್ದೇವೋ, ಅದಕ್ಕಿಂತ ಉನ್ನತ ಮಟ್ಟಕ್ಕೆ ಒಂದು ಸಭೆಯನ್ನು ನಡೆಸಲು ನಮ್ಮಿಂದ ಸಾಧ್ಯವಾಗುವುದಿಲ್ಲ. ನಾವು ಕೇವಲ ನಕಲಿ ಅನುಭವಗಳನ್ನು ಹೊಂದಿದ್ದರೆ, ಆಗ ನಾವು ಇತರರನ್ನು ಸಹ ನಕಲಿ ಅನುಭವಗಳಿಗೆ ಕರೆದೊಯ್ಯುತ್ತೇವೆ. ನಾವು ಯಥಾರ್ಥವಾಗಿ ಪವಿತ್ರಾತ್ಮನಿಂದ ಮುಳುಗಿಸಲ್ಪಡುವಂತ ದೀಕ್ಷಾಸ್ನಾನದ ಅನುಭವವನ್ನು ಅಗತ್ಯವಾಗಿ ಹೊಂದಬೇಕು. ಆದರೆ ಅಷ್ಟು ಮಾತ್ರ ಸಾಕಾಗುವುದಿಲ್ಲ. ನಾವು ಕರ್ತರ ಸೇವೆಯನ್ನು ಪರಿಣಾಮಕಾರಿಯಾಗಿ ಮಾಡಬೇಕಾದರೆ, ನಿರಂತರವಾಗಿ ಆತ್ಮನ ಅಭಿಷೇಕದ ಪೂರ್ಣತೆಯನ್ನೂ ಸಹ ನಾವು ಅನುಭವಿಸುವುದು ಅವಶ್ಯವಾಗಿದೆ. ನಾವು "ಪವಿತ್ರಾತ್ಮನಿಂದ ಯಾವಾಗಲೂ ತುಂಬಿಸಲ್ಪಡುತ್ತಾ ಇರುವುದು" ಅವಶ್ಯವಾಗಿದೆ (ಎಫೆ. 5:18,19 - ಅಕ್ಷರಶಃ ಅನುವಾದ).

ನಾವು ನಮ್ಮ ಸಭೆಯಲ್ಲಿ ಪರಿಣಾಮಕಾರಿಯಾಗಿ ಸೇವೆ ಮಾಡಲು, ಸಭೆಯ ಸಹೋದರ ಸಹೋದರಿಯರ ಆತ್ಮಿಕ ಬೆಳವಣಿಗೆಯ ಕುರಿತಾಗಿ ನಾವು ನಿಜವಾದ ಕಾಳಜಿ ವಹಿಸಬೇಕು. ನಮ್ಮ ಸಹವಿಶ್ವಾಸಿಗಳಿಗೆ ಫಲಪ್ರದ ಸೇವೆ ಸಲ್ಲಿಸುವ ಸಲುವಾಗಿ "ಪ್ರವಾದನೆಯ ವರಕ್ಕಾಗಿ" ದೇವರನ್ನು ಯಾಚಿಸುವಂತೆ ಇದು ನಮ್ಮನ್ನು ಪ್ರೇರೇಪಿಸುತ್ತದೆ. ಪವಿತ್ರಾತ್ಮನ ಈ ವರವಿಲ್ಲದೆ ಸತ್ಯವೇದ ವಾಕ್ಯವನ್ನು ಫಲಪ್ರದವಾಗಿ ಹಂಚಿಕೊಂಡು ದೇವರ ಸೇವೆ ಮಾಡುವುದು ಅಸಾಧ್ಯವಾದ ಕಾರ್ಯವಾಗಿದೆ. ಆದುದರಿಂದ ನಾವು ಪೂರ್ಣ ಹೃದಯದಿಂದ ಅದನ್ನು ಬೇಡಿಕೊಳ್ಳಬೇಕು. ಒಬ್ಬ ವ್ಯಕ್ತಿಯು ಮಧ್ಯರಾತ್ರಿಯಲ್ಲಿ ತನ್ನ ಸ್ನೇಹಿತನಿಗೆ ಆಹಾರ ಒದಗಿಸಲು ತನ್ನ ನೆರೆಯವನ ಮನೆಗೆ ಹೋಗಿ ಆತನನ್ನು ಕಾಡಿಸಿ ಪಡೆದುಕೊಂಡ ಬಗ್ಗೆ ಯೇಸುವು ಹೇಳಿದ ಸಾಮ್ಯವು, ನಮ್ಮ ಸಭೆಯಲ್ಲಿ ಕೊರತೆಯಲ್ಲಿರುವ ಜನರ ಬಗ್ಗೆ ನಮಗೆ ಎಷ್ಟು ಕಾಳಜಿ ಇರಬೇಕು ಎಂಬುದನ್ನು ಕಲಿಸಿಕೊಡುತ್ತದೆ. ನಾವು ಇದನ್ನು ಅರ್ಥಮಾಡಿಕೊಂಡು, ದೇವರ ಬಾಗಿಲನ್ನು ತಟ್ಟಿ, "ನಮಗೆ ಬೇಕಾದಷ್ಟು ಪವಿತ್ರಾತ್ಮನ ಶಕ್ತಿಯನ್ನು ಪಡೆಯುವ ವರೆಗೆ" ದೇವರನ್ನು ಬೇಡಿಕೊಳ್ಳಬೇಕೆಂದು ಅದು ತೋರಿಸಿಕೊಡುತ್ತದೆ (ಲೂಕ. 11:8,13 - ಈ ವಚನಗಳನ್ನು ಹೋಲಿಸಿ ನೋಡಿರಿ).

ಹೊಸ ಒಡಂಬಡಿಕೆಯಲ್ಲಿ "ಪ್ರವಾದಿಸುವುದು" ಎಂದರೆ, ಪವಿತ್ರಾತ್ಮನ ಅಭಿಷೇಕದೊಂದಿಗೆ, ಸಭೆಯನ್ನು ಎಚ್ಚರಿಸಲು, ಪ್ರೋತ್ಸಾಹಿಸಲು ಮತ್ತು ಭಕ್ತಿವೃದ್ಧಿಪಡಿಸಲು ದೇವರ ವಾಕ್ಯವನ್ನು ಉಪಯೋಗಿಸಿಕೊಳ್ಳುವುದು (1 ಕೊರಿ. 14:4,24,25). 1 ಕೊರಿಂಥದವರಿಗೆ 14ನೇ ಅಧ್ಯಾಯದಲ್ಲಿ, ಪೌಲನು ಸ್ಥಳೀಯ ಸಭಾಕೂಟಗಳಲ್ಲಿ ಪ್ರವಾದನೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾನೆ. ಇಂತಹ ಅಭಿಷಿಕ್ತ ಪ್ರವಾದನೆಯಿಲ್ಲದೆ ಸಭೆಯನ್ನು ಕಟ್ಟಲು ಸಾಧ್ಯವಿದ್ದಿದ್ದರೆ, ಆಗ ದೇವರು ಸಭೆಗೆ ಈ ವರವನ್ನು ಅನಗತ್ಯವಾಗಿ ನೀಡಿದ್ದಾರೆಂದು ಹೇಳಬಹುದು. ಹಾಗಿದ್ದಲ್ಲಿ "ಪ್ರವಾದಿಸುವ ವರವನ್ನು ಆಸಕ್ತಿಯಿಂದ ಅಪೇಕ್ಷಿಸಿರಿ," ಎಂಬ ಬೋಧನೆಯು ಅನಗತ್ಯವಾದ ಉಪದೇಶವಾಗಿರುತ್ತದೆ (1 ಕೊರಿ. 14:1,39). ಆದರೆ ಈ ವರವು ಸಭೆಯಲ್ಲಿ ಭಕ್ತಿವೃದ್ಧಿಪಡಿಸಲು ಅವಶ್ಯವಾಗಿದೆ ಎಂಬುದು ವಾಸ್ತವಾಂಶವಾಗಿದೆ. ಒಂದು ಕ್ರೈಸ್ತಸಭೆಯಲ್ಲಿ ಪವಿತ್ರಾತ್ಮನ ಮೂಲಕ ಪ್ರವಾದಿಸುವ ಒಬ್ಬ ಸಹೋದರನೂ ಇಲ್ಲದಿದ್ದಲ್ಲಿ, ಶೀಘ್ರವೇ ಆ ಸಭೆಯು ಆತ್ಮಿಕ ಮರಣವನ್ನು ಕಾಣುತ್ತದೆ.

ಪವಿತ್ರಾತ್ಮನ ಅಭಿಷೇಕವನ್ನು ನಿರ್ಲಕ್ಷಿಸುವುದನ್ನು ಯಾವುದಕ್ಕೆ ಹೋಲಿಸಬಹುದು ಎಂದರೆ, ಪಂಚಾಶತ್ತಮ ದಿನದಂದು ಪವಿತ್ರಾತ್ಮನು ಸುರಿಯಲ್ಪಟ್ಟದ್ದು ಅನಾವಶ್ಯಕವಾಗಿತ್ತು, ಮತ್ತು ನಾವು ಆತನ ಬಲಪಡಿಸುವಿಕೆಯ ಸಹಾಯವಿಲ್ಲದೆ ಕರ್ತರ ಸೇವೆಯನ್ನು ಅಚ್ಚುಕಟ್ಟಾಗಿ ಮಾಡಲು ಶಕ್ತರಾಗಿದ್ದೇವೆ, ಎಂಬ ರೀತಿಯಲ್ಲಿ ಮಾತನಾಡುವುದಕ್ಕೆ! ಇದು ಎಷ್ಟು ಗಂಭೀರವಾದ ತಪ್ಪೆಂದರೆ, ಕರ್ತನಾದ ಯೇಸುವು ಭೂಲೋಕಕ್ಕೆ ಬರುವ ಅವಶ್ಯಕತೆ ಇರಲಿಲ್ಲ, ಮತ್ತು ಆತನು ಬರದೇ ಇದ್ದಿದ್ದರೂ ನಾವು ಸುಲಭವಾಗಿ ದೇವರ ರಾಜ್ಯಕ್ಕೆ ಸೇರಲು ಸಾಧ್ಯವಾಗುತ್ತಿತ್ತು, ಎಂಬ ಸಂಪೂರ್ಣ ತಪ್ಪಾದ ಹೇಳಿಕೆಗೆ ಸಮನಾದ ಹೇಳಿಕೆ ಇದಾಗಿದೆ! ತ್ರಯೇಕ ದೇವರಲ್ಲಿ ಮೂರನೆಯ ವ್ಯಕ್ತಿಯ ಬರುವಿಕೆಯನ್ನು ನಿರ್ಲಕ್ಷಿಸುವುದರಿಂದ ಪವಿತ್ರಾತ್ಮನನ್ನು ಕೀಳಾಗಿ ನೋಡಿದಂತೆ ಆಗುತ್ತದೆ ಮತ್ತು ಇದು ತ್ರಯೇಕ ದೇವರಲ್ಲಿ ಎರಡನೆಯ ವ್ಯಕ್ತಿಯ ಬರುವಿಕೆಯನ್ನು ನಿರ್ಲಕ್ಷಿಸುವ ಪಾಪದಷ್ಟೇ ಗಂಭೀರವಾಗಿದೆ.

ಕೆಲವು ವಿಶ್ವಾಸಿಗಳಿಂದ ಪವಿತ್ರಾತ್ಮನ ಅಭಿಷೇಕವು ದುರುಪಯೋಗ ಮಾಡಲ್ಪಟ್ಟದ್ದರಿಂದ, ನಾವು ಈ ಅಭಿಷೇಕದ ಮಹತ್ವವು ಕಡಿಮೆಯೆಂದು ತಿಳಿಯಬಾರದು. ನಿಮಗೆ ಪವಿತ್ರಾತ್ಮನ ಬಲವು ಪ್ರಾಪ್ತವಾಗದಿದ್ದರೆ, ನೀವು ಕರ್ತನ ಕಾರ್ಯವನ್ನು ನಿಮ್ಮ ಸ್ವಂತ ಮಾನವ ಪ್ರತಿಭೆ ಮತ್ತು ಅನುಭವದ ಅಧಾರದಿಂದ ಮಾಡಲು ಪ್ರಯತ್ನಿಸುತ್ತೀರಿ. ಆದರೆ ಆ ರೀತಿಯಾಗಿ ದೇವರ ಉದ್ದೇಶಗಳನ್ನು ಪೂರೈಸಲು ಸಾಧ್ಯವೇ ಇಲ್ಲ.

ನಾವು ಜನರನ್ನು ಫರಿಸಾಯ ಮನೋಭಾವ ಮತ್ತು ಕಾನೂನುವಾದದಿಂದ ಬಿಡುಗಡೆ ಮಾಡಬೇಕು ಹಾಗೂ ಅವರನ್ನು ಲೋಕದ ಗೆಳೆತನ ಮತ್ತು ಲೋಕದ ಆಶೆಗಳಿಂದ ಬಿಡುಗಡೆ ಮಾಡಬೇಕು. ಇಂತಹ ಸೇವೆಗೆ ಬೇಕಾದ ಸಾಮರ್ಥ್ಯ ಯಾರಲ್ಲಿದೆ? ಪವಿತ್ರಾತ್ಮನ ಬೆಂಬಲವನ್ನು ಪಡೆದಿರುವವನಿಗೆ ಮಾತ್ರ ಇದು ಸಾಧ್ಯವಾಗುತ್ತದೆ. ಹಾಗಾಗಿ ನಾವು ಪವಿತ್ರಾತ್ಮನ ಜ್ಞಾನ ಮತ್ತು ಬಲವನ್ನು ಎಡೆಬಿಡದೆ ದೇವರಿಂದ ಬೇಡಿಕೊಳ್ಳಬೇಕು. ಅಪೊಸ್ತಲ ಪೌಲನು ಎಫೆಸ ಪಟ್ಟಣದ ಕ್ರೈಸ್ತರಿಗಾಗಿ ಪ್ರಾರ್ಥಿಸುವಾಗ, ಅವರು ದೇವರಾತ್ಮನಿಂದ ಬಲವನ್ನೂ ಜ್ಞಾನವನ್ನೂ ಪಡೆಯಬೇಕೆಂದು ಪ್ರಾರ್ಥಿಸುತ್ತಾನೆ (ಎಫೆ. 1:17,3:16). ನಾವು ಸಹ ಇವೆರಡು ಸಂಗತಿಗಳಿಗಾಗಿ ಬೇಡಿಕೊಳ್ಳುವುದು ಅವಶ್ಯವಾಗಿದೆ.