ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ
WFTW Body: 

ಅಪೊಸ್ತಲ ಪೌಲನು ಕೊರಿಂಥದ ಸಭೆಗೆ ಬರೆದದ್ದು ಏನೆಂದರೆ, "ನೀವು ಕ್ರಿಸ್ತನ ದೇಹವು, ಮತ್ತು ನೀವು ಒಬ್ಬೊಬ್ಬರಾಗಿ ಅದಕ್ಕೆ ಅಂಗಗಳಾಗಿದ್ದೀರಿ" (1 ಕೊರಿ. 12:27). ವಿಶ್ವಾಸಿಗಳು ಕ್ರಿಸ್ತನಲ್ಲಿ ಒಂದು ದೇಹವಾಗಿದ್ದಾರೆ ಎಂಬ ಶ್ರೇಷ್ಠ ಸತ್ಯಾಂಶವನ್ನು ಪೌಲನು ಎಫೆಸದ ಸಭೆಯವರಿಗೆ ಬರೆದ ಪತ್ರಿಕೆಯು ಮುಖ್ಯವಾಗಿ ನಿರೂಪಿಸುತ್ತದೆ. ಕ್ರಿಸ್ತನು ಸಭೆಯ ಶಿರಸ್ಸಾಗಿದ್ದಾನೆ, ಮತ್ತು ಸಭೆಯು ಆತನ ದೇಹವಾಗಿದೆ (ಎಫೆ. 1:22,23) . ಪ್ರತಿಯೊಬ್ಬ ವಿಶ್ವಾಸಿಯು ಈ ದೇಹದ ಒಂದು ಅಂಗವಾಗಿದ್ದಾನೆ. "ನೀವು ದೇವರಿಂದ ಕರೆಯಲ್ಪಟ್ಟವರಾದ ಕಾರಣ ಯೋಗ್ಯರಾಗಿ ನಡೆದುಕೊಳ್ಳಬೇಕೆಂದು ಕರ್ತನ ಸೇವೆಯಲ್ಲಿ ಸೆರೆಯವನಾದ ನಾನು ನಿಮ್ಮನ್ನು ಪ್ರಬೋಧಿಸುತ್ತೇನೆ. ನೀವು ಪೂರ್ಣ ವಿನಯ, ಸಾತ್ವಿಕತ್ವಗಳಿಂದಲೂ, ದೀರ್ಘಶಾಂತಿಯಿಂದಲೂ ಕೂಡಿದವರಾಗಿ, ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ," ಎಂದು ನಾವು ’ಎಫೆಸದ ಪತ್ರಿಕೆ’ಯ 4:1-2ರಲ್ಲಿ ಓದುತ್ತೇವೆ. ದೇವರು ದೀನತೆ, ಸೌಮ್ಯಭಾವ ಮತ್ತು ತಾಳ್ಮೆಯನ್ನು ನಮ್ಮಿಂದ ನಿರೀಕ್ಷಿಸುತ್ತಾರೆ. ’ಎಫೆಸದ ಪತ್ರಿಕೆ’ಯ 4:2 'Living Bible' ಅನುವಾದವು, "ನಿಮ್ಮ ಪ್ರೀತಿಯ ದೆಸೆಯಿಂದಾಗಿ ನೀವು ಒಬ್ಬರು ಮತ್ತೊಬ್ಬರ ಕುಂದುಕೊರತೆಗಳನ್ನು ಸಹಿಸಿಕೊಳ್ಳಿರಿ," ಎಂದು ಬೋಧಿಸುತ್ತದೆ. ಯಾವುದೇ ಸಭೆಯಲ್ಲಿ ಒಬ್ಬರೂ ಸಹ ಪರಿಪೂರ್ಣರಾಗಿ ಇರುವುದಿಲ್ಲ. ಪ್ರತಿಯೊಬ್ಬರು ತಪ್ಪುಗಳನ್ನು ಮಾಡುತ್ತಾರೆ. ಹಾಗಾಗಿ ಸಭೆಯಲ್ಲಿ ನಾವು ಒಬ್ಬರು ಇನ್ನೊಬ್ಬರ ತಪ್ಪುಗಳನ್ನು ಸಹಿಸಿಕೊಳ್ಳುವುದನ್ನು ಕಲಿಯಬೇಕಾಗುತ್ತದೆ. ನಾವು ಒಬ್ಬರನ್ನೊಬ್ಬರು ಪ್ರೀತಿಸುವುದರಿಂದ, ಒಬ್ಬರು ಇನ್ನೊಬ್ಬರ ತಪ್ಪುಗಳನ್ನು ಮನ್ನಿಸಬೇಕು. "ನೀನು ಒಂದು ತಪ್ಪನ್ನು ಮಾಡಿದರೆ ನಾನು ಅದನ್ನು ಮುಚ್ಚಿಬಿಡುತ್ತೇನೆ. ನೀನು ಯಾವುದೋ ಕೆಲಸವನ್ನು ಪೂರ್ಣಗೊಳಿಸದಿದ್ದರೆ, ನಾನು ಅದನ್ನು ಮಾಡುತ್ತೇನೆ". ಈ ರೀತಿಯಾಗಿ ಕ್ರಿಸ್ತನ ದೇಹವು ಕೆಲಸ ಮಾಡಬೇಕು. ನಾವು ’ ಎಫೆಸ 4:3’ ರಲ್ಲಿ, "ನೀವು ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು, ಪವಿತ್ರಾತ್ಮನಿಂದ ಉಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತರಾಗಿರಿ," ಎಂದು ಓದುತ್ತೇವೆ. ಪೌಲನು ಬರೆದ ಅನೇಕ ಪತ್ರಿಕೆಗಳಲ್ಲಿ ಐಕ್ಯತೆಯು ಒಂದು ಶ್ರೇಷ್ಠ ವಿಷಯವಸ್ತುವಾಗಿದೆ. ಅದಲ್ಲದೆ ಕರ್ತರು ತಮ್ಮ ಸಭೆಗಾಗಿಯೂ ಸಹ ಇದೇ ಭಾರವನ್ನು ಹೊಂದಿದ್ದಾರೆ. ಕ್ರಿಸ್ತನ ದೇಹದಲ್ಲಿ, ಮೊದಲನೆಯದಾಗಿ ಪ್ರತಿಯೊಬ್ಬ ಸದಸ್ಯನು ಆಂತರಿಕವಾಗಿ ತಲೆಯೊಂದಿಗೆ ಜೋಡಿಸಲ್ಪಟ್ಟಿದ್ದಾನೆ ಮತ್ತು ಇದರ ನಂತರ ಇತರ ಸದಸ್ಯರೊಂದಿಗೆ ಆಂತರಿಕವಾಗಿ ಬಿಡಿಸಲಾಗದಂತೆ ಜೋಡಿಸಲ್ಪಟ್ಟಿದ್ದಾನೆ. ಇಂತಹ ಸದಸ್ಯರು, ತಮ್ಮ ನಡುವಿನ ಅನ್ಯೋನ್ಯತೆಯು ತಂದೆಯಾದ ದೇವರು ಮತ್ತು ಮಗನಾದ ಕ್ರಿಸ್ತನ ನಡುವಿನ ಐಕ್ಯತೆಯ ಮಟ್ಟವನ್ನು ತಲುಪುವ ತನಕ ಐಕ್ಯತೆಯಲ್ಲಿ ಬೆಳೆಯಬೇಕು ( ಯೋಹಾ. 17:21-23).

’ಎಫೆಸದ ಪತ್ರಿಕೆ’ 4:16ರಲ್ಲಿ, "ದೇಹವೆಲ್ಲಾ ಆತನ ದೊರೆತನದಲ್ಲಿದ್ದು, ತನ್ನಲ್ಲಿರುವ ಎಲ್ಲಾ ನರಗಳಿಂದ ಬಿಗಿಯಾಗಿ ಜೋಡಿಸಲ್ಪಟ್ಟು, ಪ್ರತಿ ಅಂಗದಿಂದ ಅದರದರ ಶಕ್ತಿಯ ಪ್ರಕಾರ ಸಹಾಯ ಹೊಂದಿ, ಪ್ರೀತಿಯಿಂದ ಐಕ್ಯವಾಗಿದ್ದು, ಕ್ಷೇಮಾಭಿವೃದ್ಧಿಯನ್ನು ಹೊಂದುತ್ತದೆ," ಎಂದು ಪೌಲನು ಹೇಳುತ್ತಾನೆ. ಇಲ್ಲಿ ಪ್ರಸ್ತಾಪಿಸಿರುವ ಸಂಧಿಗಳು (ಅಂಗಗಳ ಜೋಡಣೆಗಳು) ಅನ್ಯೋನ್ಯತೆಯನ್ನು ಸೂಚಿಸುತ್ತವೆ. ನೀವು ನಿಮ್ಮ ತೋಳನ್ನು ಪರೀಕ್ಷಿಸಿರಿ ಮತ್ತು ಅದರಲ್ಲಿ ಎಷ್ಟು ಸಂಧಿಗಳು ಅಥವಾ ಜೋಡಣೆಗಳು ಇವೆಯೆಂದು ಗಮನಿಸಿರಿ. ಭುಜದಲ್ಲಿ ಒಂದು ಸಂಧಿ, ಮೊಳಕೈಯಲ್ಲಿ ಮತ್ತು ಮುಂಗೈಯಲ್ಲಿ ಒಂದೊಂದು, ಅನಂತರ ಒಂದು ಬೆರಳಿಗೆ ಸುಮಾರು ಮೂರರಂತೆ - ಒಟ್ಟಾರೆ 17 ಸಂಧಿಗಳು. ಈ ಸಂಧಿಗಳಿಂದಾಗಿ ನಿಮ್ಮ ತೋಳು ಸಲೀಸಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ನೀವು ಬಲಿಷ್ಠವಾದ ತೋಳಿನ ಮೇಲ್ಭಾಗ ಮತ್ತು ಬಲಿಷ್ಠವಾದ ಮುಂಗೈಯನ್ನು ಹೊಂದಿರುತ್ತೀರಿ, ಆದರೆ ನಿಮ್ಮ ಮೊಳಕೈಯಲ್ಲಿ ಸಂಧಿವಾತವಿದ್ದರೆ, ಆಗ ನೀವು ತೋಳನ್ನು ಉಪಯೋಗಿಸಲು ಆಗುತ್ತಿತ್ತೇ? ಇಲ್ಲ. ತೋಳನ್ನು ಸರಿಯಾಗಿ ಉಪಯೋಗಿಸಲು ತೋಳಿನ ಬಲ ಮಾತ್ರ ಸಾಲದು. ತೋಳಿನ ಸಂಧಿಗಳು (ಅಥವಾ ಜೋಡಣೆಗಳು) ಸಲೀಸಾಗಿ ಕೆಲಸ ಮಾಡಬೇಕು. ಈ ಉದಾಹರಣೆಯು ಕ್ರಿಸ್ತನ ದೇಹಕ್ಕೆ ಹೇಗೆ ಅನ್ವಯಿಸುತ್ತದೆಂದು ಈಗ ಅಲೋಚಿಸಿರಿ. ಒಬ್ಬ ಒಳ್ಳೆಯ ಸಹೋದರ ಇರುತ್ತಾನೆ, ಆತನು ಒಂದು ಬಲವಾದ ತೋಳಿನ ಮೇಲ್ಭಾಗದಂತೆ. ಮತ್ತು ಇನ್ನೊಬ್ಬ ಒಳ್ಳೆಯ ಸಹೋದರ, ಒಂದು ಬಲಿಷ್ಠ ಮುಂಗೈಯಂತೆ ಇರುತ್ತಾನೆ. ಆದರೆ ಇವರು ಒಬ್ಬನು ಇನ್ನೊಬ್ಬನೊಂದಿಗೆ ಅನ್ಯೋನ್ಯತೆಯಿಂದಿರಲು ಆಗುತ್ತಿಲ್ಲ. ಈ ದಿನ ಕ್ರಿಸ್ತನ ದೇಹದ ದುರಂತ ಕಥೆ ಇದೇ ಆಗಿದೆ. ಮಾನವ ದೇಹದಲ್ಲಿ, ಇದನ್ನು ಸಂಧಿವಾತ ಎಂದು ಕರೆಯುತ್ತಾರೆ ಮತ್ತು ಇದು ಬಹಳ ಹೆಚ್ಚು ನೋವನ್ನು ಉಂಟುಮಾಡುತ್ತದೆ. ಅನೇಕ ಸ್ಥಳೀಯ ಕ್ರೈಸ್ತಸಭೆಗಳಲ್ಲಿ ಇಂತಹ ಸಂಧಿವಾತ ಕಾಯಿಲೆ ಇದೆ. ನಮ್ಮ ಸಂಧಿಗಳು ಸರಿಯಾಗಿ ಕೆಲಸ ಮಾಡುವಾಗ ಯಾವ ಶಬ್ದವನ್ನೂ ಉಂಟುಮಾಡುವುದಿಲ್ಲ. ಆದರೆ ದೇಹದಲ್ಲಿ ಸಂಧಿವಾತ ಕಾಣಿಸಿಕೊಂಡಾಗ, ಅದು ಕಿರುಗುಟ್ಟುತ್ತದೆ ಮತ್ತು ಪ್ರತಿಯೊಂದು ಚಲನೆಯು ಒಂದು ಅಸಹಜವಾದ ಶಬ್ದವನ್ನು ಉಂಟುಮಾಡುತ್ತದೆ. ಕೆಲವು ವಿಶ್ವಾಸಿಗಳ ನಡುವಿನ "ಅನ್ಯೋನ್ಯತೆ" ಎಂದು ಹೇಳುವಂಥದ್ದು ಇದಕ್ಕೆ ಸರಿಯಾಗಿ ಹೋಲುತ್ತದೆ. ಅದು ಕಿರಿಗುಟ್ಟುತ್ತದೆ. ಆದರೆ ಸಂಧಿಗಳು ಸರಿಯಾಗಿ ಕೆಲಸ ಮಾಡುವಾಗ ಸ್ವಲ್ಪವೂ ಶಬ್ದ ಉಂಟಾಗುವುದಿಲ್ಲ. ನಮ್ಮ ನಡುವೆ ಪರಸ್ಪರ ಅನ್ಯೋನ್ಯತೆಯು ಹೀಗಿರಬೇಕು. ನಿಮ್ಮ ವಿಷಯದಲ್ಲಿ ಇದು ಹಾಗೆ ಇಲ್ಲವಾದಲ್ಲಿ, ನೀವು ಸಂಧಿವಾತದ ಔಷಧಿಯನ್ನು ತೆಗೆದುಕೊಳ್ಳ ಬೇಕಾಗುತ್ತದೆ: ನೀವು ನಿಮ್ಮಲ್ಲಿ ಇರುವ "ಸ್ವೇಚ್ಛಾ ಪ್ರವೃತ್ತಿ"ಗೆ ಸಾಯಬೇಕು. ಆಗ ನಿಮ್ಮ ಕಾಯಿಲೆ ಗುಣವಾಗುತ್ತದೆ ಮತ್ತು ನೀವು ಇತರರೊಂದಿಗೆ ಉಜ್ವಲ ಅನ್ಯೋನ್ಯತೆಯನ್ನು ಹೊಂದುತ್ತೀರಿ. ಇದು ಕ್ರಿಸ್ತನ ದೇಹಕ್ಕಾಗಿ ದೇವರ ಚಿತ್ತವಾಗಿದೆ.

ಹಳೆಯ ಒಡಂಬಡಿಕೆಯಲ್ಲಿ, ದೇವಜನರಾಗಿದ್ದ ಯೆಹೂದ್ಯರು ಒಂದೇ ದೇಹವಾಗಲು ಸಾಧ್ಯವಿರಲಿಲ್ಲ. ಇದು ಸಾಧ್ಯವಾದದ್ದು ಯೇಸುವು ಪರಲೋಕಕ್ಕೆ ಏರಿದ ಮೇಲೆ ಪವಿತ್ರಾತ್ಮನನ್ನು ಸುರಿಸಿ, ಮಾನವನೊಳಗೆ ಆತನು ನೆಲೆಗೊಳ್ಳುವಂತೆ ಮಾಡಿದ ಮೇಲೆಯೇ. ಈಗ ಇಬ್ಬರು ಒಂದಾಗಬಹುದು. ಹಳೆಯ ಒಡಂಬಡಿಕೆಯಲ್ಲಿ, ಇಸ್ರಾಯೇಲ್ ದೇಶವು ಒಂದು ಪಂಗಡವಾಗಿತ್ತು ('Congregation'). ಆ ದೇಶದ ಗಾತ್ರವು ಹೆಚ್ಚಿತು, ಆದರೆ ಅದು ಒಂದು ಪಂಗಡವಾಗಿಯೇ ಮುಂದುವರಿಯಿತು. ಆದರೆ, ಹೊಸ ಒಡಂಬಡಿಕೆಯ ಸಭೆಯು ಒಂದು ದೇಹವಾಗಿರಬೇಕು, ಒಂದು ಪಂಗಡವಲ್ಲ. ಇಬ್ಬರು ಒಂದಾಗದಿದ್ದರೆ ಅಲ್ಲಿ ನಿಮಗೆ ಕೇವಲ ಒಂದು ಪಂಗಡ ಸಿಗುತ್ತದೆ. ಕ್ರಿಸ್ತನ ದೇಹದಲ್ಲಿ ಪ್ರಮುಖ ಅಂಶ ಗಾತ್ರವಲ್ಲ, ಆದರೆ ಐಕ್ಯತೆಯಾಗಿದೆ. ಮತ್ತು ಈ ಅಳತೆಗೋಲಿನಿಂದ ಅಳತೆ ಮಾಡಿದಾಗ, ಪಂಗಡವಲ್ಲದ ಒಂದು ’ಸಭೆ’ ಸಿಗುವುದು ಬಹಳ ಅಪರೂಪ. ಪಂಗಡಗಳು ಗಾತ್ರದಲ್ಲಿ ಬೆಳೆಯುತ್ತಿರುವುದು ಎಲ್ಲೆಲ್ಲೂ ಕಂಡುಬರುತ್ತದೆ - ಆದರೆ ಐಕ್ಯತೆಯಲ್ಲಿ ಅಲ್ಲ. ನಾಯಕತ್ವದ ಮಟ್ಟದಲ್ಲೂ ಸಹ ಜಗಳ, ಹೊಟ್ಟೆಕಿಚ್ಚು ಮತ್ತು ಪ್ರತಿಸ್ಪರ್ಧೆ ಕಂಡುಬರುತ್ತದೆ. ಜಗತ್ತಿನಾದ್ಯಂತ ಎಲ್ಲಾ ಸ್ಥಳಗಳಲ್ಲಿ ಕ್ರಿಸ್ತನ ದೇಹವು ತೋರಿಸಲ್ಪಡಬೇಕೆಂದು ದೇವರ ಇಚ್ಛೆಯಾಗಿದೆ.

ಕ್ರಿಸ್ತನ ದೇಹದಲ್ಲಿ, ಯಾವುದೇ ವರವನ್ನು ಹೊಂದಿರದ ವ್ಯಕ್ತಿಯೂ ಸೇರಿದಂತೆ, ಒಬ್ಬೊಬ್ಬ ವ್ಯಕ್ತಿಗೂ ಮಹತ್ವವಿದೆ. ಒಬ್ಬ ವ್ಯಕ್ತಿಯು ದೇಹದ ಒಂದು ಅಂಗವಾಗಿರುವುದರಿಂದ ಆತನಿಗೆ ಮಹತ್ವವಿದೆ. ವಾಸ್ತವವಾಗಿ, ದೇವರ ವಾಕ್ಯದಲ್ಲಿ ಹೇಳಲ್ಪಟ್ಟಂತೆ, ದೇವರು ಕೊರತೆಯುಳ್ಳ ಅಂಗಕ್ಕೆ ಹೆಚ್ಚಾದ ಮಾನವನ್ನು ಕೊಟ್ಟು ದೇಹವನ್ನು ಹದವಾಗಿ ಕೂಡಿಸಿದ್ದಾರೆ ( 1 ಕೊರಿ. 12:24,25). ಸಭೆಯಲ್ಲಿ ಯಾವುದೇ ವಿಶೇಷ ಪ್ರತಿಭೆ ಇಲ್ಲದವರೂ ಸಹ ದೇವಭಕ್ತಿ ಮತ್ತು ದೀನತೆಯನ್ನು ಹೊಂದಿದ್ದರೆ, ನಾವು ದೇವರ ಮಾದರಿಯನ್ನು ಅನುಸರಿಸಬೇಕು ಮತ್ತು ಅವರಿಗೆ ಹೆಚ್ಚಿನ ಮಾನವನ್ನು ಸಲ್ಲಿಸಬೇಕು. ಬಾಬೆಲಿನಲ್ಲಿ, ಪ್ರತಿಭೆಯುಳ್ಳ ಬೋಧಕ, ಇಂಪಾದ ಗಾಯಕ ಮತ್ತು ಮಾನಸಾಂತರ ಹೊಂದಿರುವ ಅಂತರಿಕ್ಷ ಯಾತ್ರಿಕನಿಗೆ ಹೆಚ್ಚಿನ ಗೌರವ ಕೊಡಲಾಗುತ್ತದೆ. ಆದರೆ ಸಭೆಯಲ್ಲಿ (ದೇವರ ಗುಡಾರದಲ್ಲಿ), ಕರ್ತನಲ್ಲಿ ಭಯಭಕ್ತಿ ಉಳ್ಳವರನ್ನು ನಾವು ಸನ್ಮಾನಿಸುತ್ತೇವೆ ( ಕೀರ್ತ. 15:1,4 ನೋಡಿರಿ). ಬಾಬೆಲ್ ಮತ್ತು ಯೆರೂಸಲೇಮಿನ ನಡುವೆ ಹೋಲಿಸಲಾಗದಷ್ಟು ಅಂತರವಿದೆ. ಇಂದು ದೇವರು ನಮ್ಮನ್ನು ಬಾಬೆಲನ್ನು ಬಿಡುವಂತೆ ಮತ್ತು ಯೆರೂಸಲೇಮನ್ನು ಕಟ್ಟಲು ಬರುವಂತೆ ಕರೆಯುತ್ತಾರೆ (ಪ್ರಕ. 18:4).

ನಾವು ಕ್ರಿಸ್ತನ ದೇಹವನ್ನು ನೋಡಲು ಸಾಧ್ಯವಾದಾಗ ಹೊಟ್ಟೆಕಿಚ್ಚಿಗೆ ಸ್ವಲ್ಪವೂ ಅವಕಾಶ ಇರಲಾರದು. ಮಾನವ ಶರೀರದಲ್ಲಿ, ಕಾಲು ತಾನು ಕೇವಲ ಕಾಲಾಗಿದ್ದೇನೆ, ಎಂದು ಚಿಂತಿಸುವುದಿಲ್ಲ. ಅದಕ್ಕೆ ತಾನು ಕಾಲು ಆಗಿರದೆ ಬೇರೇನೋ ಆಗುವ ಇಚ್ಛೆಯಿಲ್ಲ ಮತ್ತು ಅದು ತಾನು ಕೈಯಾಗುವ ಕನಸು ಕಾಣುವುದಿಲ್ಲ. ಅದಕ್ಕೆ ಕಾಲಾಗಿ ಇರುವುದರಲ್ಲಿ ಸಂಪೂರ್ಣ ತೃಪ್ತಿಯಿದೆ. ದೇವರು ಸರಿಯಾಗಿ ಯೋಚಿಸಿ ತನ್ನನ್ನು ಕಾಲಾಗಿ ಮಾಡಿದ್ದಾರೆಂದು ಅದಕ್ಕೆ ತಿಳಿದಿದೆ. ಅದು ಕಾಲಾಗಿ ಇದ್ದುಕೊಂಡು ಖುಷಿ ಪಡುತ್ತದೆ; ಅದೇ ವೇಳೆ, ಕೈಯು ಮಾಡುವುದನ್ನು ತಾನು ಮಾಡಲಾರೆನೆಂದು ಕಾಲು ಅರಿತಿದ್ದರೂ, ಕೈಯ ಸಾಧನೆಯನ್ನು ನೋಡಿ ಅದು ಹಿಗ್ಗುತ್ತದೆ. ಕ್ರಿಸ್ತನ ದೇಹವನ್ನು "ನೋಡಿರುವ" ಪ್ರತಿಯೊಬ್ಬರು ಹೀಗೆಯೇ ಹಿಗ್ಗುತ್ತಾರೆ. ನೀವು ಇನ್ನೊಬ್ಬನನ್ನು ನೋಡಿ ಅಸೂಯೆ ಪಡುವಾಗ, ದೇವರು ಇನ್ನೊಬ್ಬ ಸದಸ್ಯನನ್ನು ಬಹಳವಾಗಿ ಉಪಯೋಗಿಸುವುದನ್ನು ನೋಡಿ ನಿಮಗೆ ಹೃತ್ಪೂರ್ವಕವಾಗಿ ಆನಂದಿಸಲು ಆಗದಿದ್ದರೆ, ನೀವು ಈ ಸತ್ಯಾಂಶವನ್ನು ಅರ್ಥಮಾಡಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಶಿರಸ್ಸಿನೊಂದಿಗೆ (ಕ್ರಿಸ್ತನು) ನಿಕಟ ಬಾಂಧವ್ಯ ಇರಿಸಿಕೊಂಡು ಜೀವಿಸುವ ಪ್ರತಿಯೊಬ್ಬ ಸದಸ್ಯನು ಉಲ್ಲಾಸಿಸುತ್ತಾನೆ ಮತ್ತು ದೇಹದ ಬೇರೊಬ್ಬ ಸದಸ್ಯನು ಸನ್ಮಾನಿಸಲ್ಪಟ್ಟಾಗ ಸಂತೋಷಿಸುತ್ತಾನೆ (1 ಕೊರಿ. 12:26).

'1 ಸಮುವೇಲನು 18:1-4' ರಲ್ಲಿ, ಯೋನಾತಾನನು ದಾವೀದನೊಂದಿಗೆ ಒಂದು ಒಡಂಬಡಿಕೆ ಮಾಡಿಕೊಂಡನೆಂದು ನಾವು ಓದುತ್ತೇವೆ. ಇದು ಕ್ರಿಸ್ತನ ದೇಹದಲ್ಲಿ ಒಡಂಬಡಿಕೆಯ ಸಂಬಂಧ ಹೇಗಿರಬೇಕು ಎನ್ನುವದನ್ನು ಬಹಳ ಸುಂದರವಾಗಿ ಚಿತ್ರಿಸುತ್ತದೆ. ಆ ವಾಕ್ಯದಲ್ಲಿ ಯೋನಾತಾನನ ಪ್ರಾಣವು ದಾವೀದನ ಪ್ರಾಣದೊಡನೆ ಒಂದಾಯಿತು ಎಂದು ಹೇಳಲಾಗಿದೆ. ಕ್ರಿಸ್ತನ ದೇಹದಲ್ಲಿ ಇದೇ ಕರೆ ನಮಗೂ ಕೊಡಲ್ಪಟ್ಟಿದೆ - ಒಂದಾಗಿ ಜೋಡಿಸಲ್ಪಟ್ಟು ಸೇರಿಕೊಳ್ಳುವುದು, ಮತ್ತು ಆಗ ನಮ್ಮ ಶತ್ರುವು ನಮ್ಮ ನಡುವೆ ಕಾಲಿಕ್ಕಿ ಮನಸ್ತಾಪವನ್ನು ಉಂಟುಮಾಡುವುದಕ್ಕೆ ಯಾವುದೇ ಸಂದು ಅಥವಾ ಬಿರುಕು (ತಪ್ಪು ತಿಳುವಳಿಕೆ, ಅಸೂಯೆ, ಸಂದೇಹ, ಇಂತವುಗಳು) ಇರುವುದಿಲ್ಲ. ಸತತವಾಗಿ ಸ್ವೇಚ್ಛಾ ಜೀವನವನ್ನು ನಿರಾಕರಿಸದೆ ಇಂತಹ ಒಡಂಬಡಿಕೆಯ ಸಂಬಂಧವನ್ನು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಕ್ರಿಸ್ತನ ದೇಹದಲ್ಲಿ ದೇವರು ಸಂಕಲ್ಪಿಸಿರುವ ವೈವಿಧ್ಯತೆ ಇದೆ. ದೇವರು ನಮ್ಮ ವಿವಿಧ ಸ್ವಭಾವಗಳನ್ನು ಮತ್ತು ವರಗಳನ್ನು ಉಪಯೋಗಿಸಿಕೊಂಡು ಕ್ರಿಸ್ತನ ಹದವಾದ ಚಿತ್ರಣವನ್ನು ಲೋಕಕ್ಕೆ ತೋರಿಸುತ್ತಾರೆ. ಕ್ರಿಸ್ತನ ದೇಹದಲ್ಲಿ ನಿಮಗೆ ಒಂದು ವಿಶಿಷ್ಟವಾದ ಮತ್ತು ಪ್ರತ್ಯೇಕವಾದ ಸೇವೆ ಇದೆ ಮತ್ತು ಇನ್ಯಾರೂ ಅದನ್ನು ಪೂರೈಸಲಾರರು. ಮತ್ತು ಇಂತಹ ಸೇವೆಯು ಸಂತುಲಿತವಾಗಿ ಇರುವುದಿಲ್ಲ. ಆ ಸೇವೆಯು ಸಮತೂಕವಿಲ್ಲದೆ ಒಂದು ಕಡೆಗೆ ವಾಲಿರುತ್ತದೆ. ಇದರಲ್ಲಿ ಸಮತೂಕ ಪಡೆಯಲು, ನೀವು ಕ್ರಿಸ್ತನ ದೇಹದಲ್ಲಿ ನಿಮಗಿಂತ ವಿಭಿನ್ನ ಸೇವೆಯನ್ನು ಮಾಡುವಂತ ಇತರರೊಂದಿಗೆ ಅನ್ಯೋನ್ಯತೆ ಇರಿಸಿಕೊಂಡು ಕೆಲಸ ಮಾಡಬೇಕಾಗುತ್ತದೆ. ಈ ರೀತಿಯಾಗಿ - ಇತರರನ್ನು ಅವಲಂಬಿಸುವಂತೆ ಮಾಡುವುದರ ಮೂಲಕ - ದೇವರು ನಮ್ಮನ್ನು ದೀನತೆಯಲ್ಲಿ ಇರಿಸುತ್ತಾರೆ. ಇದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸಿರಿ!

ಯೇಸುವು ಲೋಕಕ್ಕೆ ಬಂದ ಉದ್ದೇಶ ಕೇವಲ ಸಂಪಾದನೆಯ ಶೇಕಡಾ 10ರಷ್ಟನ್ನು ತಂದೆಗೆ ಕೊಡುವುದಕ್ಕಾಗಿ ಆಗಿರಲಿಲ್ಲ. ಅವರು ಒಂದು ಹೊಸ ಒಡಂಬಡಿಕೆಯನ್ನು ಪ್ರತಿಷ್ಠಾಪನೆ ಮಾಡುವುದಕ್ಕಾಗಿ ಮತ್ತು ಹೊಸ ಒಡಂಬಡಿಕೆಯ ಒಂದು ಸಭೆಯನ್ನು ಕಟ್ಟುವುದಕ್ಕಾಗಿ ಬಂದರು. ಇದಕ್ಕಾಗಿ ಅವರು ತನ್ನ ಎಲ್ಲವನ್ನೂ ಶೇಕಡಾ 100ರಷ್ಟು ತನ್ನ ತಂದೆಗೆ ಕೊಟ್ಟರು. ಮತ್ತು ಈಗ ಅವರು ನಮಗೆ, "ನನ್ನನ್ನು ಹಿಂಬಾಲಿಸು," ಎಂದು ಹೇಳುತ್ತಾರೆ. ಕ್ರಿಸ್ತನ ದೇಹವನ್ನು ಕಟ್ಟುವುದಕ್ಕೆ ನಮಗೆ ಎಷ್ಟು ವೆಚ್ಚ ತಗಲಿದರೂ ಪರವಾಗಿಲ್ಲ, ನಾವು ಅದನ್ನು ಮಾಡಲು ಸಿದ್ಧವಿರಬೇಕು - ಅದಕ್ಕಾಗಿ ನಮ್ಮ ಹಣ, ನಮ್ಮ ಮಾನ, ನಮ್ಮ ಅನುಕೂಲ, ನಮ್ಮ ದೈಹಿಕ ಬಲ, ನಮ್ಮ ಒಳ್ಳೆಯ ಹೆಸರು, ನಮ್ಮ ನೌಕರಿ, ಅಥವಾ ಬೇರೆ ಯಾವುದೇ ಆಗಿರಬಹುದು, ಅದನ್ನೆಲ್ಲ ಕೊಡಲು ನಾವು ಸಮ್ಮತಿಸಬೇಕು. ಕರ್ತನ ಸಲುವಾಗಿ ನಾವು ಮಾಡುವ ತ್ಯಾಗಕ್ಕೆ ಯಾವುದೇ ಮಿತಿ ಇರಬಾರದು. ಯಾವುದೇ ವಿಷಯದಲ್ಲಿ ನಮ್ಮ ಅನುಕೂಲ ಅಥವಾ ನಮ್ಮ ಸ್ವಂತ ಸೌಕರ್ಯಗಳ ಮೇಲೆ ನಾವು ಮನಸ್ಸು ಇಡಬಾರದು. ನಮ್ಮ ಸಕಲ ಕಾರ್ಯಗಳು ಕ್ರಿಸ್ತನ ದೇಹವನ್ನು ಕಟ್ಟಿ ನೆಲೆಗೊಳಿಸುವದಕ್ಕೆ ಸಂಬಂಧಿಸಿರಬೇಕು. ನಮ್ಮ ಲೌಕಿಕ ವೃತ್ತಿಯೂ ಸಹ ಕೇವಲ ನಮ್ಮ ಜೀವನದ ವೆಚ್ಚಗಳಿಗಾಗಿ ಸಂಪಾದನೆ ಮಾಡುವ ಒಂದು ಸಾಧನವಾಗಿ ಇರಬೇಕು, ಮತ್ತು ಇದರ ಮೂಲಕ ನಾವು ನಮ್ಮ ಹಣಕಾಸಿನ ಅವಶ್ಯಕತೆಗಾಗಿ ಸಭೆಯ ಇತರ ಸದಸ್ಯರನ್ನು ಅವಲಂಬಿಸುವುದನ್ನು ತಪ್ಪಿಸಬಹುದು.