WFTW Body: 

ಎಲ್ಲಾ ಯೌವನಸ್ಥರೂ ಒಂದಲ್ಲ ಒಂದು ಸಂದರ್ಭದಲ್ಲಿ ಕೆಟ್ಟ ಆಲೋಚನೆಗಳಿಂದ ಶೋಧಿಸಲ್ಪಡುತ್ತಾರೆ. ಸ್ತ್ರೀಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಬಲವಾದ ಮತ್ತು ಒತ್ತಾಯಿಸುವಂತ ಲೈಂಗಿಕ ಪ್ರೇರೇಪಣೆ ಇರುವುದರಿಂದ, ಅವರು ಸ್ತ್ರಿಯರಿಗಿಂತ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಯೇಸುವು ಮಾರ್ಕನು 7:21'ರಲ್ಲಿ ಮನುಷ್ಯರ ಹೃದಯದಿಂದ ಹೊರಡುವಂತ ಸಂಗತಿಗಳನ್ನು ಪಟ್ಟಿಮಾಡಿ, ಅವುಗಳಲ್ಲಿ "ಕೆಟ್ಟ ಆಲೋಚನೆಗಳು" ಮೊದಲನೆಯ ಸ್ಥಾನದಲ್ಲಿವೆಯೆಂದು ತಿಳಿಸಿದರು. ಮಾನಸಾಂತರ ಹೊಂದದ ಎಲ್ಲಾ ಪುರುಷರ ಹೃದಯಗಳು ಒಂದೇ ಸಮನಾಗಿ ಕೆಟ್ಟದಾಗಿವೆ, ಆದ್ದರಿಂದ ಯೇಸುವು ನೀಡಿದ ವಿವರಣೆಯು ಅವರೆಲ್ಲರಿಗೂ ಅನ್ವಯಿಸುತ್ತದೆ. ಅಶುದ್ಧವಾದ ಆಲೋಚನೆಗಳು ನೈತಿಕವಾಗಿ ಜೀವಿಸುವ ನೀತಿವಂತನ ಮತ್ತು ಜಾರತ್ವದ ಮನಸ್ಸನ್ನು ಹೊಂದಿರುವ ಮನುಷ್ಯ ಇವರಿಬ್ಬರ ಮನಸ್ಸನ್ನೂ ಕಾಡಿಸುತ್ತವೆ - ನೈತಿಕ ವ್ಯಕ್ತಿಯು ಸೂಕ್ತ ಅವಕಾಶ ಸಿಗದಿದ್ದುದರಿಂದ ಮತ್ತು ಸಮಾಜದ ಭಯದಿಂದಾಗಿ ವ್ಯಭಿಚಾರದಿಂದ ದೂರವಿರಬಹುದು.

ಆದಾಗ್ಯೂ, ನಾವು ಶೋಧನೆ ಮತ್ತು ಪಾಪ ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಅವಶ್ಯವಾಗಿದೆ. ಯೇಸುವೂ ಕೂಡ "ಎಲ್ಲಾ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು" (ಇಬ್ರಿ. 4:15). ಆದರೆ ಅವರು ಒಂದು ಬಾರಿಯೂ ಶೋಧನೆಗೆ ತಲೆಬಾಗಲಿಲ್ಲ (ತನ್ನ ಮನಸ್ಸಿನಲ್ಲಿಯೂ ಸಹ) ಮತ್ತು ಹಾಗಾಗಿ ಎಂದಿಗೂ ಪಾಪ ಮಾಡಲಿಲ್ಲ. ನಾವು ಸಹ ನಮ್ಮ ಭೂಲೋಕದ ಜೀವಿತದ ಕೊನೆಯ ದಿನದ ವರೆಗೂ ಶೋಧನೆಗೆ ಒಳಗಾಗುತ್ತೇವೆ. ಆದರೆ ನಾವು ಪಾಪ ಮಾಡಬೇಕಾಗಿಲ್ಲ. ನಮ್ಮ ಮನಸ್ಸಿನಲ್ಲಿ ಆಶಾಪಾಶಗಳು ಬೇರೂರುವುದಕ್ಕೆ ನಾವು ಅವಕಾಶ ನೀಡಿದಾಗ ಮಾತ್ರ, ಅಂದರೆ, ನಮ್ಮ ಮನಸ್ಸಿನಲ್ಲಿ ಹೊಳೆಯುವ ಕಾಮದ ಆಲೋಚನೆಯನ್ನು ನಾವು ಸ್ವೀಕರಿಸಿದಾಗ ಪಾಪ ಮಾಡುತ್ತೇವೆ (ಯಾಕೋಬ. 1:15). ಆ ಆಲೋಚನೆಯನ್ನು ನಾವು ತಕ್ಷಣ ತಿರಸ್ಕರಿಸಿದರೆ, ನಾವು ಪಾಪ ಮಾಡುವುದಿಲ್ಲ. ಹಿಂದಿನ ಕಾಲದ ಪರಿಶುದ್ಧ ಧಾರ್ಮಿಕವಾದಿಯು ಹೇಳಿದಂತೆ, "ನಾನು ನನ್ನ ತಲೆಯ ಮೇಲೆ ಪಕ್ಷಿಗಳು ಹಾರಾಡುವುದನ್ನು ತಡೆಯಲಾರೆ, ಆದರೆ ಅವುಗಳು ನನ್ನ ತಲೆಯ ಮೇಲೆ ಗೂಡು ಕಟ್ಟುವುದನ್ನು ನಾನು ತಡೆಯಬಲ್ಲೆ". ಒಂದು ದುರಾಲೋಚನೆಯು ನಮ್ಮ ಬಳಿಗೆ ಬಂದಾಗ, ನಾವು ನಮ್ಮ ಮನಸ್ಸಿನಲ್ಲಿ ಅದನ್ನು ಒಂದು ಕ್ಷಣವಾದರೂ ರುಚಿಸಲು ಬಯಸಿದರೆ, ಆಗ ನಾವು ಅದಕ್ಕೆ "ಗೂಡು ಕಟ್ಟಲು" ಅವಕಾಶ ಮಾಡಿಕೊಡುತ್ತೇವೆ ಮತ್ತು ಪಾಪ ಮಾಡುತ್ತೇವೆ.

ಕಾಮದ ಆಲೋಚನೆಯನ್ನು ಒಂದು ಸಾರಿ ರುಚಿಸಿ ನೋಡಿದರೆ, ಅದು ಆ ವ್ಯಕ್ತಿಯನ್ನು ಹೆಚ್ಚು ಹೆಚ್ಚಾಗಿ ತನ್ನ ದಾಸನನ್ನಾಗಿ ಮಾಡುತ್ತದೆ. ಅದರಿಂದ ಬಿಡುಗಡೆಯು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಕಷ್ಟಕರವಾಗುತ್ತದೆ. ನಾವು ಬಿಡುಗಡೆಗಾಗಿ ಎಷ್ಟು ಬೇಗನೆ ತವಕಿಸುತ್ತೇವೋ, ಅದು ಅಷ್ಟೇ ಸುಲಭವಾಗುತ್ತದೆ. ದುರಾಲೋಚನೆಗಳಿಂದ ಬಿಡುಗಡೆ ಹೊಂದುವುದು (ಇತರ ಎಲ್ಲಾ ಪಾಪಗಳನ್ನು ಜಯಿಸುವ ಹಾಗೆಯೇ) ಪ್ರಾಮಾಣಿಕವಾಗಿ ಸೋಲನ್ನು ಅರಿಕೆಮಾಡುವುದರಿಂದ, ಬಿಡುಗಡೆಗಾಗಿ ನಿಜವಾಗಿ ಹಂಬಲಿಸುವುದರಿಂದ, ಕ್ರಿಸ್ತನೊಂದಿಗೆ ನಾವು ಮರಣ ಹೊಂದಿದ್ದೇವೆಂಬ ಅಂಶವನ್ನು ಒಪ್ಪಿಕೊಂಡಾಗ, ಮತ್ತು ನಮ್ಮ ದೇಹಗಳನ್ನು ಮತ್ತು ಮನಸ್ಸುಗಳನ್ನು ದೇವರಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಾಗ ಸಾಧ್ಯವಾಗುತ್ತದೆ (ರೋಮಾ. 6:1-14)

.

ನಾವು ನಮ್ಮ ಜೀವನದಲ್ಲಿ ನಿರಂತರವಾಗಿ ಜಯಶಾಲಿಗಳು ಆಗುವುದಕ್ಕೆ ಮಾಡಬೇಕಾದ ಕಾರ್ಯವೆಂದರೆ, "ಪವಿತ್ರಾತ್ಮನೊಂದಿಗೆ ನಡೆಯಬೇಕು" ಮತ್ತು ಪವಿತ್ರಾತ್ಮನು ನಮ್ಮನ್ನು ಶಿಸ್ತಿಗೆ ಒಳಪಡಿಸುವಾಗ ಆತನೊಂದಿಗೆ ಸಹಕರಿಸಬೇಕು (ಗಲಾ. 5:16-19). ನಾವು ನಮ್ಮ ಕಣ್ಣುಗಳನ್ನು ಹಾಗೂ ಕಿವಿಗಳನ್ನು ಶಿಸ್ತಿಗೆ ಒಳಪಡಿಸದೇ ಇದ್ದರೆ (ನಾವು ಓದುವುದರಲ್ಲಿ ಮತ್ತು ನೋಡುವುದರಲ್ಲಿ ಮತ್ತು ಕೇಳುವುದರಲ್ಲಿ ಪ್ರತಿಯೊಂದು ಕಾಮೋತ್ತೇಜಕ ಸಂಗತಿಯನ್ನು ಕಿತ್ತು ಬಿಸಾಕುವುದು), ನಮ್ಮ ಆಲೋಚನೆಗಳು ಸಹ ಹಿಡಿತದಲ್ಲಿ ಇರುವುದಿಲ್ಲ (ಮತ್ತಾ. 5:28-30' ನಿಜವಾಗಿ ಇದನ್ನೇ ಸೂಚಿಸಲಾಗಿದೆ). ಕಾಮ ಪ್ರಚೋದಕ ಆಲೋಚನೆಗಳಿಂದ ಬಿಡುಗಡೆ ಹೊಂದಲು ದೈಹಿಕ ಶಿಸ್ತು ಬಹಳ ಅವಶ್ಯವಾಗಿದೆ. ಅತಿ ಶ್ರೇಷ್ಠ ದೇವಭಕ್ತರು ತಮ್ಮ ಮನಸ್ಸಿನಲ್ಲಿ ಸ್ತ್ರೀ-ವ್ಯಾಮೋಹದ ಶೋಧನೆಗಳ ವಿರುದ್ಧವಾಗಿ ಸತತವಾಗಿ ಹೋರಾಡಿದ್ದಾಗಿ ಒಪ್ಪಿಕೊಳ್ಳುತ್ತಾರೆ. ಅವರು ಜಯಹೊಂದಲು ತಮ್ಮ ದೇಹಗಳನ್ನು ಕಠಿಣ ಶಿಸ್ತಿಗೆ ಒಳಪಡಿಸಬೇಕಾಯಿತು.

"ನಾವು ಪ್ರತಿದಿನವೂ ನಮ್ಮ ಮನಸ್ಸುಗಳನ್ನು ದೇವರ ವಾಕ್ಯದಿಂದ ತುಂಬಬೇಕು - ಏಕೆಂದರೆ ಕೆಟ್ಟ ಆಲೋಚನೆಗಳು ಒಳಗೆ ಪ್ರವೇಶಿಸದಂತೆ ನಮ್ಮ ಮನಸ್ಸುಗಳನ್ನು ದೇವರ ವಾಕ್ಯದಿಂದ ಸಂಪೂರ್ಣವಾಗಿ ತುಂಬುವುದು ಅವುಗಳ ಸುರಕ್ಷಣೆಯ ಒಂದು ಅತ್ಯುತ್ತಮ ವಿಧಾನವಾಗಿದೆ."

ಯೋಬನು ವಿವಾಹಿತನಾಗಿ ಹತ್ತು ಮಕ್ಕಳ ತಂದೆಯಾಗಿದ್ದರೂ, ತಾನು ಸ್ತ್ರೀ-ವ್ಯಾಮೋಹದಿಂದ ಬಿಡುಗಡೆ ಹೊಂದುವುದಕ್ಕೆ ತನ್ನ ಕಣ್ಣುಗಳನ್ನು ಹತೋಟಿಯಲ್ಲಿ ಇರಿಸಿಕೊಳ್ಳಬೇಕು, ಎಂಬುದನ್ನು ಅರಿತಿದ್ದನು. "ನಾನು ಒಬ್ಬ ಯುವತಿಯನ್ನು ವ್ಯಾಮೋಹದಿಂದ ನೋಡುವುದಿಲ್ಲವೆಂದು ನನ್ನ ಕಣ್ಣುಗಳೊಡನೆ ಒಂದು ನಿಬಂಧನೆಯನ್ನು ಮಾಡಿದ್ದೇನೆ," ಎಂದು ಆತನು ನುಡಿದನು (ಯೋಬನು 31:1 - 'LIVING BIBLE'). ಪುರುಷರಿಗೆ ಅತಿ ದೊಡ್ಡ ಶೋಧನೆಯು ಕಣ್ಣುಗಳ ಮೂಲಕ ಬರುತ್ತದೆ. ಈ ವಿಷಯದಲ್ಲಿ ನಾವು ಎಚ್ಚರಿಕೆ ವಹಿಸದಿದ್ದರೆ ಮತ್ತು ಒಂದು ಅಶುದ್ಧ ಆಲೋಚನೆ ಅಥವಾ ಒಂದು ಚಿತ್ರವು ನಮ್ಮ ಕಣ್ಣಿನ ದ್ವಾರದ ಮೂಲಕ ನಮ್ಮ ಮನಸ್ಸನ್ನು ಪ್ರವೇಶಿಸುವ ಅವಕಾಶವನ್ನು ನಾವು ನೀಡಿದರೆ, ಅದನ್ನು ಅಲ್ಲಿಂದ ತೆಗೆದುಹಾಕುವ ಸಾಧ್ಯತೆ ಇಲ್ಲವೆಂದೇ ಹೇಳಬಹುದು.

ನಾವು ಪ್ರತಿದಿನವೂ ನಮ್ಮ ಮನಸ್ಸನ್ನು ದೇವರ ವಾಕ್ಯದಿ೦ದ ಸಮ್ಪೂರ್ಣವಾಗಿ ತು೦ಬಿಸಬೆಕು - ಏಕೆಂದರೆ ಕೆಟ್ಟ ಆಲೋಚನೆಗಳು ಒಳಗೆ ಪ್ರವೇಶಿಸದಂತೆ ನಮ್ಮ ಮನಸ್ಸುಗಳನ್ನು ದೇವರ ವಾಕ್ಯದಿಂದ ಸಂಪೂರ್ಣವಾಗಿ ತುಂಬುವುದು ಅವುಗಳ ಸುರಕ್ಷಣೆಯ ಒಂದು ಅತ್ಯುತ್ತಮ ವಿಧಾನವಾಗಿದೆ. ದಾವೀದನು ಹೀಗೆ ಹೇಳಿದನು "ನಾನು ನಿನ್ನ ನುಡಿಗಳ ಬಗ್ಗೆ ಬಹಳವಾಗಿ ಆಲೋಚಿಸಿದ್ದೇನೆ, ಮತ್ತು ಅವನ್ನೇ ನನ್ನ ಹೃದಯದಲ್ಲಿ ತುಂಬಿಕೊಂಡಿದ್ದೇನೆ; ಹಾಗಾಗಿ ಅವುಗಳು ನನ್ನನ್ನು ಪಾಪದಿಂದ ದೂರವಿರಿಸಿವೆ" (ಕೀರ್ತನೆಗಳು 119:11 - 'LIVING BIBLE'). ಸತ್ಯವೇದದಲ್ಲಿ ಕೊಡಲ್ಪಟ್ಟಿರುವ ಇನ್ನೊಂದು ವಚನ, "ನೀನು ದೇವರ ಮೆಚ್ಚುಗೆಗಾಗಿ ಹಾತೊರೆಯುವುದಾದರೆ, ನಿನ್ನ ಮನಸ್ಸಿನಲ್ಲಿ ಪರಿಶುದ್ಧವೂ, ಸತ್ಯವೂ, ಕಲಬೆರಕೆಯಿಲ್ಲದ್ದೂ, ಮನೋಹರವೂ, ಉತ್ತಮವೂ ಆಗಿರುವ ಸಂಗತಿಗಳ ಬಗ್ಗೆ ಯೋಚಿಸು" (ಫಿಲಿಪ್ಪಿಯವರಿಗೆ 4:8 - 'JBP' ಅನುವಾದ).

ಪ್ರಪಂಚದಲ್ಲಿ ನಮ್ಮ ಸುತ್ತಲೂ ಹರಡಿರುವ ಪ್ರಚಲಿತ ನೈತಿಕ ಗುಣಮಟ್ಟವು ಬಹಳ ಕೆಳಮಟ್ಟದ್ದು ಆಗಿರುವಾಗ, ಅಶುದ್ಧ ಆಲೋಚನೆಗಳಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದುವುದು ಬಹಳ ಕಷ್ಟಕರವೆಂದು ಕೆಲವರು ಹೇಳಬಹುದು. ಆದರೆ ಈ ಪರಿಸ್ಥಿತಿಯು ಕೇವಲ 21ನೇ ಶತಮಾನದ ವಿಶೇಷತೆಯಲ್ಲ. 1ನೇ ಶತಮಾನದ ಕೊರಿಂಥ ಪಟ್ಟಣವು ಕಾಮುಕತೆ ಮತ್ತು ಅನೀತಿಯ ಕೇಂದ್ರಬಿಂದುವಾಗಿತ್ತು, ಆದಾಗ್ಯೂ ಪವಿತ್ರಾತ್ಮನು ಅಲ್ಲಿದ್ದ ಕ್ರೈಸ್ತ ವಿಶ್ವಾಸಿಗಳಿಗೆ ತಮ್ಮ ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿಯುವಂತೆ ಪ್ರೋತ್ಸಾಹಿಸಿದನು (2 ಕೊರಿ. 10:5). ಆತನು ಈ ದಿನ ನಮಗೂ ಸಹ ಇದನ್ನೇ ಮಾಡುವಂತೆ ಹೇಳುತ್ತಾನೆ. ಈ ಜೀವನದ ದಾರಿಯು ಕಿರಿದಾಗಿಯೂ ಕಷ್ಟಕರವಾಗಿಯೂ ಇರಬಹುದು, ಆದರೆ ಆ ದಾರಿಯಲ್ಲಿ ನಡೆಯುವುದಕ್ಕಾಗಿ ಪವಿತ್ರಾತ್ಮನು ನಮ್ಮನ್ನು ಬಲಪಡಿಸುತ್ತಾನೆ.

ನಮ್ಮ ಜೀವನವನ್ನು ಈ ರೀತಿಯಾಗಿ ಶಿಸ್ತುಬದ್ಧಗೊಳಿಸುವುದು ಎಂದರೆ, ನಾವು ವಿರುದ್ಧ ಲಿಂಗದ ಬಗ್ಗೆ ಅಸಹ್ಯ ಮನೋಭಾವವನ್ನು ಬೆಳೆಸಿಕೊಳ್ಳುವುದು ಎಂಬ ಅರ್ಥವಲ್ಲ. ಎಂದಿಗೂ ಇಲ್ಲ! ವಾಸ್ತವವಾಗಿ, ನಮ್ಮ ವಿರುದ್ಧ ಲಿಂಗದ ಕಡೆಗೆ ಆಕರ್ಷಣೆಯೇ ಒಂದು ಪಾಪವಲ್ಲ. ಅದು ಸಂಪೂರ್ಣವಾಗಿ ಸಹಜವಾದದ್ದು. ದೇವರ ಮನೋಹರವಾದ ಸೃಷ್ಟಿಯ ಒಂದು ಅಂಶವಾಗಿರುವ ಒಂದು ಸುಂದರ ಮುಖದ ಬಗ್ಗೆ ನಾವು ಸಂತೋಷಿಸುವುದು ತಪ್ಪಲ್ಲ. ಆದರೆ ಬಿದ್ದುಹೋಗಿರುವ ಜೀವಿಗಳಾದ ನಾವು ಎಚ್ಚರಿಕೆ ವಹಿಸದಿದ್ದರೆ, ನಾವು ಸೌಂದರ್ಯದ ಕಡೆಗೆ ಗಮನ ಹರಿಸುತ್ತಾ, ಮುಂದೆ ವ್ಯಾಮೋಹಕ್ಕೆ ಅವಕಾಶ ನೀಡುತ್ತೇವೆ. ಆದುದರಿಂದ ವಿರುದ್ಧ ಲಿಂಗದ ಆಕರ್ಷಣೆಯಲ್ಲಿ ಅಶುದ್ಧತೆ ಇಲ್ಲದಿದ್ದರೂ, ಅದು ನಮ್ಮನ್ನು ಅಶುದ್ಧ ಆಲೋಚನೆಗೆ ನಡೆಸುವ ಸಾಧ್ಯತೆಯಿದೆ.

ನಮ್ಮ ಸುರಕ್ಷತೆ ಯಾವುದರಲ್ಲಿ ಇದೆಯೆಂದರೆ, ನಮ್ಮೊಳಗೆ ವಾಸವಾಗಿರುವ ಪವಿತ್ರಾತ್ಮನ ಧ್ವನಿಯು ನಮ್ಮನ್ನು ತಡೆದು, ನಮ್ಮ ಕಣ್ಣುಗಳನ್ನು ಮತ್ತು ನಮ್ಮ ಆಲೋಚನೆಗಳನ್ನು ಬೇರೆಡೆಗೆ ತಿರುಗಿಸುವಂತೆ ಹೇಳುವಾಗ, ಆ ಧ್ವನಿಗೆ ತಕ್ಷಣವೇ ವಿಧೇಯರಾಗುವುದರಲ್ಲಿ ಇದೆ. ನಾವು ಪದೇ ಪದೇ ಹೀಗೆ ಪ್ರಾರ್ಥಿಸುತ್ತಿರಬೇಕು, "ಕರ್ತನೇ, ನನ್ನ ಶಕ್ತಿಯನ್ನು ಮೀರುವಂತ ಶೋಧನೆಯನ್ನು (ಈ ವಿಷಯಕ್ಕೆ ಸಂಬಂಧಿಸಿದಂತೆ) ನನಗೆ ಬರಗೊಡಿಸಬೇಡಿ." ಈ ಪ್ರಾರ್ಥನೆಯನ್ನು ಯಥಾರ್ಥವಾಗಿ ಮಾಡುವುದರಿಂದ ಅನೇಕ ಯೌವನಸ್ಥರು ಜಯವನ್ನು ಸಾಧಿಸಿದ್ದಾರೆ.