WFTW Body: 

ನಾವು ಸೈತಾನನ ವಿರುದ್ಧವಾದ ಆತ್ಮಿಕ ಯುದ್ಧದಲ್ಲಿ ಯಥಾರ್ಥವಾಗಿ ಹೋರಾಡುವುದಾದರೆ, ಸೈತಾನನ ಕುತಂತ್ರಗಳ ಬಗ್ಗೆ, ಆತನ ಯೋಜನೆಗಳು ಹಾಗೂ ಆತನ ಯುದ್ಧತಂತ್ರಗಳ ವಿಷಯದಲ್ಲಿ ಅಜ್ಞಾನಿಗಳು ಆಗಿರಬಾರದು. ಸೈತಾನನು ಯೇಸುವನ್ನು ಅಡವಿಯಲ್ಲಿ ಹೇಗೆ ಶೋಧನೆಗೆ ಒಳಪಡಿಸಿದನೆಂದು ನಾವು ಗಮನಿಸಿ ನೋಡಿದರೆ, ಸೈತಾನನು ನಮ್ಮನ್ನೂ ಸಹ ನ್ಯಾಯಬದ್ಧವಾದ ದೈಹಿಕ ಆಸೆಗಳ ಮೂಲಕ ಶೋಧನೆಗೆ ಒಳಪಡಿಸುತ್ತಾನೆ, ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಯೇಸುವು ತನ್ನ ಶಿಷ್ಯರಿಗೆ ಆಹಾರ ಮತ್ತು ಬಟ್ಟೆಬರೆಯ ವಿಚಾರವಾಗಿ ಹೆಚ್ಚು ಚಿಂತಿಸದಿರುವಂತೆ ಎಚ್ಚರಿಸಿದರು. ನಮ್ಮ ಮನಸ್ಸನ್ನು ಊಟ, ತಿಂಡಿ ಹಾಗೂ ಅಂದವಾದ ಉಡುಪುಗಳು ಸೆಳೆಯುವುದಾದರೆ, ಆಗ ಭೂಲೋಕ ರಾಜ್ಯವು ನಮ್ಮ ಆದ್ಯತೆಯಾಗಿದೆ, ಮತ್ತು ಖಂಡಿತವಾಗಿ ಸೈತಾನನು ನಮ್ಮ ಮೇಲೆ ಪ್ರಭಾವ ಬೀರುತ್ತಾನೆ. ನಾವು ನಮ್ಮ ಸಭೆಗಳಲ್ಲಿ ಯೌವನಸ್ಥೆ ಹುಡುಗಿಯರ ಬಗ್ಗೆ ಕಾಳಜಿ ವಹಿಸಿ, ಅವರ ಹೆಚ್ಚಿನ ಗಮನ ಉಡುಪು, ಅಲಂಕಾರದ ಕಡೆಗೆ ಇರದಂತೆ ಅವರಿಗೆ ತರಬೇತಿ ನೀಡಬೇಕು, ಇಲ್ಲವಾದರೆ ಮುಂದೆ ಅವರು ವಯಸ್ಸಿಗೆ ಬರುವಾಗ ಸೈತಾನನ ಹಿಡಿತಕ್ಕೆ ಸಿಲುಕುತ್ತಾರೆ.

"ಲೂಸಿಫರನು" (ಆತನು ದೇವದೂತರ ನಾಯಕನಾಗಿದ್ದನು) ಮಿಕ್ಕ ದೇವದೂತರಿಗಿಂತ ತಾನು ಹೆಚ್ಚಿನವನು ಎಂಬ ಮನೋಭಾವವನ್ನು ಬೆಳೆಸಿಕೊಳ್ಳಲು ಆರಂಭಿಸಿದಾಗ, ಸೈತಾನನಾಗಿ ಬದಲಾದನು (ಯೆಹೆ. 28:11-18; ಯೆಶಾ. 14:12-15) . ಅನೇಕ ವಿಶ್ವಾಸಿಗಳ ಹೃದಯಗಳನ್ನು ಸೈತಾನನು ಇದೇ ರೀತಿಯಾಗಿ ಪ್ರವೇಶಿಸುತ್ತಾನೆ. ಒಬ್ಬ ಸಹೋದರನು ಸಭೆಯಲ್ಲಿ ತಾನೊಬ್ಬ ಪ್ರಮುಖನು ಎಂಬ ಭಾವನೆಯನ್ನು ಬೆಳೆಸಿಕೊಂಡಾಗ, ಆತನಿಗೆ ಸೈತಾನನ ಆತ್ಮದ ಸೋಂಕು ಹತ್ತಿದೆ, ಎನ್ನುವದು ಸ್ಪಷ್ಟವಾಗುತ್ತದೆ. ಹೀಗಿರುವಾಗ, ವಿವೇಚನೆಯಿಲ್ಲದ ಆತನ ಸಹ-ವಿಶ್ವಾಸಿಗಳು ಒಂದು ವೇಳೆ ಆತನು ಬಹಳ ಪ್ರಮುಖ ವ್ಯಕ್ತಿಯೆಂದು ಹೇಳಿ ಆತನ ಅಹಂಭಾವವನ್ನು ಹೆಚ್ಚಿಸಿದರೂ, ಆತ್ಮಿಕ ಕಾಳಗದಲ್ಲಿ ಆತನು ಸಫಲನಾಗುವುದಿಲ್ಲ!

ಒಬ್ಬ ಸಹೋದರನು ಸಭಾಕೂಟದಲ್ಲಿ ಬೋಧಿಸುವಾಗ ಹೆಚ್ಚಿನ ಕಾಲಾವಧಿಯನ್ನು ಬಳಸಿಕೊಂಡು, ತಾಳ್ಮೆಯಿಂದ ಕೇಳುತ್ತಿರುವ ಬಡ ಸಹೋದರ ಸಹೋದರಿಯರ ಮೇಲೆ ತನ್ನ ಆತ್ಮಿಕ ಮಟ್ಟಕ್ಕೆ ಮೀರಿದ ಸತ್ಯವೇದ-ಜ್ಞಾನವನ್ನು ಕಕ್ಕುವಾಗ, ಇತರರಿಗಿಂತ ತಾನು ಹೆಚ್ಚು ಪ್ರಮುಖನು ಮತ್ತು ಅವರಿಗಿಂತ ಹೆಚ್ಚಿನವನು ಎಂಬ ಅವನ ಮನೋಭಾವವು ಸ್ಪಷ್ಟವಾಗಿ ಕಾಣಿಸುತ್ತದೆ. ಇದು ಸೈತಾನನ ಆತ್ಮವಾಗಿದೆ. ಅಷ್ಟೇ ಅಲ್ಲದೆ ಇಂತಹ ಸಹೋದರನಲ್ಲಿ ಸಾಮಾನ್ಯವಾಗಿ ನಮಗೆ ಕಾಣಿಸುವದು ಏನೆಂದರೆ, ಎಲ್ಲರೂ ಮೊದಲು ಕಲಿಯಬೇಕಾದ ಒಂದು ಪ್ರಾಥಮಿಕ ಸಂಗತಿ - ಬಹಳ ಸುಲಭವಾಗಿ ಅವಮಾನಿಸಲ್ಪಡದೇ ಇರುವದು - ಇದರಲ್ಲಿ ಅವನು ಜಯ ಗಳಿಸಿರುವುದಿಲ್ಲ. ಸಭಾಕೂಟ ಕೊನೆಗೊಂಡ ನಂತರ, ಸಂಕ್ಷಿಪ್ತವಾಗಿ ಮಾತನಾಡುವದು ಒಳ್ಳೆಯದು ಎಂದು ಆತನಿಗೆ ತೋರಿಸಿಕೊಟ್ಟರೆ, ಆತನು ಅವಮಾನಿತನಾಗುತ್ತಾನೆ. ಇದರಿಂದ ಸ್ಪಷ್ಟವಾಗಿ ತಿಳಿಯುವ ವಿಷಯ, ಇಂತಹ ಸಹೋದರರು ತಮ್ಮನ್ನೇ ತಾವು ನ್ಯಾಯತೀರ್ಪು ಮಾಡಿಕೊಳ್ಳುವುದಿಲ್ಲ; ಹಾಗೆ ಮಾಡುತ್ತಿದ್ದರೆ, ಪವಿತ್ರಾತ್ಮನಿಂದ ಉಂಟಾಗುವ ಅಪರಾಧ ಪ್ರಜ್ಞೆಯು ಅವರಲ್ಲಿ ಜಂಭ ಮತ್ತು ಅಹಂಕಾರದ ಕುರಿತಾಗಿ ಪಶ್ಚಾತ್ತಾಪವನ್ನು ಉಂಟುಮಾಡುತ್ತಿತ್ತು.

ಯೇಸುವು ತನ್ನ ಶಿಷ್ಯಂದಿರಿಗೆ ಪದವಿಗಳನ್ನು ಮತ್ತು ಬಿರುದುಗಳನ್ನು ಬಳಸಿಕೊಳ್ಳುವ ಕುರಿತಾಗಿಯೂ ಸಹ ಎಚ್ಚರಿಕೆ ನೀಡಿ, ಸೈತಾನನ ಆತ್ಮವು ಇತರರ ಮುಂದೆ ಹೆಚ್ಚಳಪಡಲು ಇಷ್ಟ ಪಡುತ್ತದೆಂದು ಎಚ್ಚರಿಸಿದರು. "ಪೂಜ್ಯನು" ("Reverend") ಎಂದು ಕರೆಸಿಕೊಳ್ಳುವವನು ಇತರ ಸಾಮಾನ್ಯ ಸಹೋದರರಿಗಿಂತ ಹೆಚ್ಚಿನವನು ಆಗುತ್ತಾನೆ. "ಪಾದ್ರಿ" ("Pastor") ಎಂಬ ಬಿರುದನ್ನು ಪಡೆದಾತನೂ ಸಹ ಒಬ್ಬ ಸಾಮಾನ್ಯ ಸಹೋದರನಿಗಿಂತ ಹೆಚ್ಚಿನವನು ಆಗುತ್ತಾನೆ. ಆದರೆ ನಾವೆಲ್ಲರೂ ಸಾಮಾನ್ಯ ಸಹೋದರರು ಮಾತ್ರ ಆಗಿರಬೇಕೆಂದು ಯೇಸುವು ಹೇಳಿದರು. ಬಾಬೆಲಿನ ಪ್ರಜೆಗಳು ತಮ್ಮ ಬಿರುದುಗಳನ್ನು ಇರಿಸಿಕೊಳ್ಳಲಿ. ಆದರೆ ಇಂತಹ ಯೋಚನೆ ನಮ್ಮ ಬಳಿ ಸುಳಿಯದಂತೆ ನಾವು ನೋಡಿಕೊಳ್ಳೋಣ. ಸಭೆಯಲ್ಲಿ ನಿಮ್ಮ ಆತ್ಮದಲ್ಲಿ ನೀವು ಯಾವಾಗಲೂ ಅತಿ ಕಿರಿಯ ಸಹೋದರರು ಆಗಲು ಬಯಸಿರಿ, ಆಗ ನೀವು ತೊಂದರೆಯಿಂದ ದೂರವಿರುವುದು ಮಾತ್ರವಲ್ಲದೆ, ಸೈತಾನನ ವಿರುದ್ಧವಾದ ಹೋರಾಟದಲ್ಲಿ ಫಲಕಾರಿಗಳೂ ಆಗುವಿರಿ.

ಲೂಸಿಫರನಲ್ಲಿ ದೇವರು ತನ್ನನ್ನು ಇರಿಸಿದ್ದ ಪರಿಸ್ಥಿತಿಯ ಬಗ್ಗೆಯೂ ಅತೃಪ್ತಿ ಇತ್ತು. ಇದು ಆತನನ್ನು ಪಿಶಾಚನಾಗಿ ಬದಲಾಯಿಸಿತು. ಈಗ ಸೈತಾನನು ವಿಶ್ವದಾದ್ಯಂತ ಜನರ ನಡುವೆ ಇದೇ ಅಸಂತೃಪ್ತಿಯ ಆತ್ಮವನ್ನು ಹರಡಿಸುತ್ತಿದ್ದಾನೆ. ನಿಜ ಹೇಳಬೇಕೆಂದರೆ, ಅಸಂಖ್ಯಾತ ಕ್ರೈಸ್ತ ವಿಶ್ವಾಸಿಗಳು ಸಹ ಈ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದಾರೆ. ನಿಮ್ಮ ಸುತ್ತಮುತ್ತಲಿನ ಲೌಕಿಕ, ಐಹಿಕ ಪರಿಸ್ಥಿತಿಯನ್ನು ಉತ್ತಮ ಪಡಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ನಿಮಗಿಂತ ಉತ್ತಮ ಸ್ಥಿತಿಯಲ್ಲಿರುವ ಇನ್ನೊಬ್ಬ ಸಹೋದರನನ್ನು ನೋಡಿದಾಗ, ಅವನ ಬಗ್ಗೆ ಅಸೂಯೆ ಪಡಬೇಡಿರಿ, ಅವನು ಹೊಂದಿರುವಂಥದ್ದು ನಿಮಗೂ ಸಿಗಲಿ ಎಂದು ಬಯಸದಿರಿ, ಮತ್ತು ಅವನಿಂದ ಯಾವುದೇ ಕೊಡುಗೆಯನ್ನು ಪಡೆಯುವ ಆಸೆಯನ್ನು ಇರಿಸಿಕೊಳ್ಳಬೇಡಿ. "ಲಂಚವನ್ನು ಒಪ್ಪದವನು ಸುಖವಾಗಿ ಬಾಳುವನು." ( ಜ್ಞಾನೋಕ್ತಿ 15:27b - KJV). ಸೈತಾನನ ತಂತ್ರೋಪಾಯಗಳ ಬಗ್ಗೆ ಅಜ್ಞಾನಿಗಳು ಆಗಬೇಡಿರಿ. ನಿಮ್ಮ ಸಂಬಳದ ಬಗ್ಗೆ, ನಿಮ್ಮ ಮನೆಯ ಬಗ್ಗೆ, ನಿಮ್ಮ ಚರ್ಮದ ಬಣ್ಣದ ಬಗ್ಗೆ, ಅಥವಾ ಇಂತಹ ಇನ್ಯಾವುದೋ ವಿಷಯಕ್ಕಾಗಿ ನಿಮ್ಮಲ್ಲಿ ಅತೃಪ್ತಿ ಕಾಣಿಸಿಕೊಂಡ ತಕ್ಷಣವೇ, ನೀವು ನಿಮ್ಮ ಹೃದಯದ ಬಾಗಿಲನ್ನು ಸೈತಾನನಿಗೆ ತೆರೆಯುತ್ತೀರಿ.

ಕ್ರೈಸ್ತರಲ್ಲಿ ಬಹುತೇಕ ಮಂದಿಯನ್ನು ಸೈತಾನನು ನಿಷ್ಕ್ರಿಯ ಗೊಳಿಸಿ, ತನ್ನ ವಿರುದ್ಧವಾಗಿ ಅವರು ಮಾಡುವ ಹೋರಾಟವು ವ್ಯರ್ಥವಾಗುವಂತೆ ಮಾಡಿರುವದು ಹೇಗೆಂದರೆ, ಅವರಿಗೆ ತಮ್ಮ ಸಹೋದರ-ಸಹೋದರಿಯರ ವಿರುದ್ಧ ಗೊಣಗುಟ್ಟುವ ಮತ್ತು ದೂರುವ ಆತ್ಮದ ಸೋಂಕನ್ನು ತಗಲಿಸುವ ಮೂಲಕ; ಅದೇ ರೀತಿ ಅವರು ತಮ್ಮ ನೆಂಟರ ಮತ್ತು ನೆರೆಹೊರೆಯವರ ವಿರುದ್ಧ, ತಮ್ಮ ಪರಿಸ್ಥಿತಿಗಳ ವಿರುದ್ಧ, ಹಾಗೂ ಸ್ವತಃ ದೇವರ ವಿರುದ್ಧವೂ ಗೊಣಗುಟ್ಟುತ್ತಾರೆ. ನಾವು ಈ ಕೆಳಗಿನ ಪ್ರೋತ್ಸಾಹಕರ ಮಾತುಗಳಿಗೆ ವಿಧೇಯರಾದಾಗ ಸೈತಾನನನ್ನು ಸೋಲಿಸುತ್ತೇವೆ: (1) "ಕ್ರಿಸ್ತನ ಸಮಾಧಾನವು ನಿಮ್ಮ ಹೃದಯಗಳಲ್ಲಿ ಯಜಮಾನನಂತಿದ್ದು ತೀರ್ಪು ಹೇಳಲಿ; ನೀವು ಒಂದೇ ದೇಹಕ್ಕೆ ಸೇರಿದವರಾಗಿ, ಸಮಾಧಾನದಿಂದ ಇರುವುದಕ್ಕಾಗಿ ಕರೆಯಲ್ಪಟ್ಟಿರಿ; ಇದಲ್ಲದೆ ಕೃತಜ್ಞತೆಯುಳ್ಳವರು ಆಗಿರ್ರಿ" (ಕೊಲೊ. 3:15). (2) "ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ಕೃತಜ್ಞತಾ ಸ್ತುತಿಗಳನ್ನು ಮಾಡಬೇಕೆಂದು ಬೋಧಿಸುತ್ತೇನೆ" (1 ತಿಮೊ. 2:1). (3) "ಯಾವಾಗಲೂ ಎಲ್ಲಾ ಕಾರ್ಯಗಳಿಗೋಸ್ಕರ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರ ಮಾಡುತ್ತಾ ಇರ್ರಿ" (ಎಫೆಸ 5:20).

ನಾವು ಕ್ರಿಸ್ತನ ದೇಹದಲ್ಲಿರುವ ನಮ್ಮ ಸಹೋದರ-ಸಹೋದರಿಯರಿಗಾಗಿ ಕೃತಜ್ಞರಾಗಿ ಇರುವುದನ್ನು ಕಲಿತ ಮೇಲೆ, ಎಲ್ಲಾ ಜನರಿಗಾಗಿಯೂ ಕೃತಜ್ಞತೆಯನ್ನು ಸಲ್ಲಿಸಲು ಕಲಿಯುವುದು ಸಾಧ್ಯವಾಗುತ್ತದೆ; ಇದಾದ ಮೇಲೆ, ನಾವು ಜೀವನದಲ್ಲಿ ಎದುರಾಗುವ ಎಲ್ಲಾ ಪರಿಸ್ಥಿತಿಗಳಿಗೋಸ್ಕರವೂ ಸಹ ಕೃತಜ್ಞರು ಆಗುತ್ತೇವೆ. ಪರಲೋಕದಲ್ಲಿರುವ ನಮ್ಮ ತಂದೆಯು ಸಾರ್ವಭೌಮರಾಗಿದ್ದಾರೆ - ಅವರು ಎಲ್ಲಾ ಜನರನ್ನೂ ಮತ್ತು ಎಲ್ಲಾ ಸಂಗತಿಗಳನ್ನೂ ತನ್ನ ನಿಯಂತ್ರಣದಲ್ಲಿ ಇರಿಸಿದ್ದಾರೆಂದು ನಮಗೆ ಗೊತ್ತಿದೆ. ನಾವು ಈ ಮಾತನ್ನು ನಿಜವಾಗಿ ನಂಬಿದರೆ, ಆಗ ಎಲ್ಲಾ ವೇಳೆಯಲ್ಲೂ ಖಂಡಿತವಾಗಿ ನಾವು ದೇವರನ್ನು ಸ್ತುತಿಸುತ್ತೇವೆ, ಮತ್ತು ಆ ಮೂಲಕ ನಮ್ಮದು ಪರಲೋಕ ರಾಜ್ಯ, ಈ ಲೋಕದ ರಾಜ್ಯವಲ್ಲ, ಎಂದು ಸಾಬೀತು ಮಾಡುತ್ತೇವೆ. ಆಗ ಸೈತಾನನು ನಮ್ಮ ಮೇಲಿನ ಹಿಡಿತವನ್ನು ಕಳಕೊಳ್ಳುತ್ತಾನೆ. ಇದಾದ ಮೇಲೆ ಮಾತ್ರವೇ ನಾವು ಅತನ ವಿರುದ್ಧವಾದ ಹೋರಾಟದಲ್ಲಿ ಫಲಕಾರಿಗಳು ಆಗುತ್ತೇವೆ. ಪ್ರಕಟನೆ 12:8 ರಲ್ಲಿ ಬರೆಯಲ್ಪಟ್ಟಿರುವ ಒಂದು ಆಶ್ಚರ್ಯಕರವಾದ ವಾಕ್ಯವು ಹೇಳುವುದು ಏನೆಂದರೆ, ಸೈತಾನನಿಗೂ ಅವನ ದೂತರಿಗೂ ಪರಲೋಕದೊಳಗೆ ಸ್ಥಾನವು ತಪ್ಪಿಹೋಯಿತು, ಎಂಬುದಾಗಿ. ನಮ್ಮ ಜೀವಿತಗಳಲ್ಲೂ ಇದೇ ರೀತಿ ನಡೆಯಬೇಕು - ಅಂದರೆ, ನಮ್ಮ ಹೃದಯಗಳಲ್ಲಿ, ನಮ್ಮ ಮನೆಗಳಲ್ಲಿ, ಮತ್ತು ನಮ್ಮ ಸಭೆಗಳಲ್ಲಿ. ಈ ಪ್ರತಿಯೊಂದು ಕಡೆಯೂ ಸೈತಾನ ಮತ್ತು ಅವನ ದೂತರು ಜಾಗ ಖಾಲಿ ಮಾಡುವಂತೆ ಆಗಬೇಕು!