WFTW Body: 

ಈ ಜಗತ್ತು ಕಂಡಿರುವ ಅತೀ ಸುಂದರ, ಅತೀ ಅಚ್ಚುಕಟ್ಟಾದ, ಬಹಳ ಶಾಂತಿ-ಸಮಾಧಾನವಿದ್ದ ಹಾಗೂ ಸಂತೋಷದಿಂದ ಉಕ್ಕಿ ಹರಿಯುತ್ತಿದ್ದ ಜೀವನ ಯೇಸುವಿನ ಜೀವನವಾಗಿದೆ. ದೇವರ ವಾಕ್ಯಕ್ಕೆ ಯೇಸುವಿನ ಸಂಪೂರ್ಣ ವಿಧೇಯತೆಯ ಮೂಲಕ ಇದು ಸಾಧ್ಯವಾಯಿತು. ದೇವರಿಗೆ ಸಂಪೂರ್ಣ ವಿಧೇಯತೆ ಇರುವಲ್ಲಿ ಪರಿಪೂರ್ಣತೆ ಮತ್ತು ಮನೋಹರತೆ ಇರುತ್ತದೆ - ನಾವು ಇದನ್ನು ಆಕಾಶದ ಗ್ರಹಗಳಲ್ಲಿ ಮತ್ತು ತಾರೆಗಳಲ್ಲಿ ಕಾಣುತ್ತೇವೆ. "ಕರ್ತನ ಭಯವು ಜೀವದ ಬುಗ್ಗೆಯಾಗಿದೆ" (ಜ್ಞಾನೋ. 14:27) ಎಂಬ ವಾಕ್ಯಕ್ಕೆ ಯೇಸುವು ವಿಧೇಯನಾಗಿ, "ಕರ್ತನಲ್ಲಿ ದಿನವೆಲ್ಲಾ ಭಯಭಕ್ತಿಯುಳ್ಳವನಾಗಿ" (ಜ್ಞಾನೋ. 23:17) ನಡೆದನು. ಯೇಸುವು ಈ ಲೋಕದಲ್ಲಿ ಓಡಾಡಿದಾಗ, ಜನರು ಆತನಲ್ಲಿ ಪರಲೋಕದ ಜೀವವನ್ನು ಕಂಡರು. ಅವನಲ್ಲಿದ್ದ ಅನುಕಂಪ, ಇತರರ ಬಗ್ಗೆ ಕಾಳಜಿ, ಅವನ ಪರಿಶುದ್ಧತೆ, ನಿಸ್ವಾರ್ಥ ಪ್ರೇಮ ಮತ್ತು ದೀನತೆ, ಇವೆಲ್ಲವೂ ದೇವರ ನಿಜಜೀವದ ಚಿತ್ರಣವಾಗಿದ್ದವು.

ಈಗ ನಮ್ಮ ಹೃದಯಕ್ಕೆ ದೇವರ ಈ ಜೀವವನ್ನು ಮತ್ತು ಪರಲೋಕದ ವಾತಾವರಣವನ್ನು ತರಲಿಕ್ಕಾಗಿ ಪವಿತ್ರಾತ್ಮನು ಬಂದಿದ್ದಾನೆ. ಈ ಲೋಕಕ್ಕೆ ಪರಲೋಕದ ಜೀವವನ್ನು ಪ್ರದರ್ಶಿಸಲಿಕ್ಕಾಗಿ ದೇವರು ನಮ್ಮನ್ನು ಈ ಭೂಮಿಯ ಮೇಲೆ ಇರಿಸಿದ್ದಾರೆ. ಈ ಹೊಸ ವರ್ಷದಲ್ಲಿ ಪರಲೋಕದ ಉಲ್ಲಾಸ, ಸಮಾಧಾನ, ಪ್ರೀತಿ, ಪರಿಶುದ್ಧತೆ ಮತ್ತು ಒಳ್ಳೆಯತನ, ಇವೆಲ್ಲವುಗಳ ಪೂರ್ವಾನುಭವ ನಿಮಗೆ ನಿಮ್ಮ ಮನೆ ಮತ್ತು ನಿಮ್ಮ ಸಭೆಯಲ್ಲಿ ಸಿಗಲಿ, ಎಂದು ದೇವರು ಬಯಸುತ್ತಾರೆ. ಯೇಸುವು ಈ ಭೂಮಿಯ ಮೇಲೆ ಪರಲೋಕದ ಜೀವವನ್ನು ಜೀವಿಸಿದನು. ನೀವು ನಿಮ್ಮ ದೃಷ್ಟಿಯನ್ನು ಆತನ ಮೇಲಿರಿಸಿ ಆತನನ್ನು ಹಿಂಬಾಲಿಸಿದರೆ, ಆಗ ನಿಮಗೆ ಈ ವರ್ಷದ ಪ್ರತಿ ದಿನವೂ ಭೂಮಿಯ ಮೇಲೆ ಪರಲೋಕದ ಒಂದು ದಿನದಂತೆ ಆಗುತ್ತದೆ.

ಯೇಸುವಿಗೆ ತಂದೆಯ ಅನ್ಯೋನ್ಯತೆಯು ಎಲ್ಲಕ್ಕಿಂತ ಹೆಚ್ಚು ಅಮೂಲ್ಯ ಸಂಪತ್ತು ಆಗಿತ್ತು. ಆತನಿಗೆ ಸಮಸ್ತ ಭೂಮ್ಯಾಕಾಶದಲ್ಲಿ ಅದರಷ್ಟು ಬೆಲೆಬಾಳುವಂಥದ್ದು ಯಾವುದೂ ಇರಲಿಲ್ಲ. ಕಲ್ವಾರಿಯ ಶಿಲುಬೆಯ ಮೇಲೆ ಮೂರು ಗಂಟೆಗಳ ಕಾಲ, ಕಳೆದುಹೋದ ಮಾನವ ಜಾತಿಯ ಪರವಾಗಿ ಯೇಸುವು ನಿತ್ಯ ನರಕದ ಸಂಕಟವನ್ನು ಸಹಿಸಿಕೊಳ್ಳುವಾಗ, ಈ ಅನ್ಯೋನ್ಯತೆಯು ಮುರಿಯಲ್ಪಡ ಬೇಕಾಗುತ್ತದೆಂದು ಆತನಿಗೆ ತಿಳಿದಿತ್ತು (ಮತ್ತಾ. 27:45)ಆಗ ತಂದೆಯು ಆತನನ್ನು ದೂರ ತಳ್ಳಿಬಿಡುತ್ತಾರೆ, ಮತ್ತು ಆತನು ತಂದೆಯೊಂದಿಗೆ ನಿತ್ಯತ್ವದಿಂದ ಹೊಂದಿದ್ದ ಅನ್ಯೋನ್ಯತೆ ಮೂರು ಗಂಟೆಗಳ ಕಾಲ ಕಳೆದು ಹೋಗುತ್ತದೆ. ಈ ಅಗಲಿಕೆಯು ಆತನಿಗೆ ಎಷ್ಟು ಭಯಾನಕವಾಗಿತ್ತು ಎಂದರೆ, ಗೆತ್ಸೇಮನೆ ತೋಟದ ಪ್ರಾರ್ಥನೆಯ ಸಮಯದಲ್ಲಿ ಆತನ ಬೆವರಿನ ಹನಿಗಳು ರಕ್ತದ ದೊಡ್ಡ ಹನಿಗಳಂತೆ ಆದವು. ಆತನು ಅತ್ಯಾಸಕ್ತಿಯಿಂದ "ನನ್ನಿಂದ ಇದನ್ನು ತೊಲಗಿಸು," ಎಂದು ಪ್ರಾರ್ಥಿಸಿದ್ದು ಇದೇ ವಿಷಯದ ಬಗ್ಗೆ: ತಾನು ತಂದೆಯಿಂದ ದೂರ ತಳ್ಳಲ್ಪಡುವುದರ ಬಗ್ಗೆ. ಯೇಸುವನ್ನು ಹಿಂಬಾಲಿಸುವುದರ ಅರ್ಥ, ತಂದೆಯ ಅನ್ಯೋನ್ಯತೆಯನ್ನು ಆತನು ಅಮೂಲ್ಯವಾಗಿ ಕಂಡಂತೆ ನಾವು ಕಾಣುವುದು. ಆಗ ನಮಗೆ ಪಾಪವು ಅತಿ ಘೋರವಾಗುತ್ತದೆ, ಏಕೆಂದರೆ ಅದು ತಂದೆಯೊಂದಿಗೆ ನಮ್ಮ ಅನ್ಯೋನ್ಯ ಸಂಬಂಧವನ್ನು ಕಡಿದು ಹಾಕುತ್ತದೆ. ನಾವು ಇನ್ನೊಬ್ಬ ಮನುಷ್ಯನನ್ನು ಪ್ರೀತಿಯಿಲ್ಲದ ಮನೋಭಾವದಿಂದ ನೋಡಲು ನಿರಾಕರಿಸುತ್ತೇವೆ, ಏಕೆಂದರೆ ಅದು ತಂದೆಯೊಂದಿಗೆ ನಮ್ಮ ಅನ್ಯೋನ್ಯತೆಯನ್ನು ಕಡಿದು ಹಾಕುತ್ತದೆ.

ಸತ್ಯವೇದವನ್ನು ತಿಳಿದುಕೊಳ್ಳುವ ರಹಸ್ಯ ಏನೆಂದರೆ, ಎಲ್ಲಕ್ಕೂ ಮೊದಲು ಕರ್ತನೊಂದಿಗೆ ಅನ್ಯೋನ್ಯ ಸಂಬಂಧ ಇರಿಸಿಕೊಳ್ಳುವುದು. ಪವಿತ್ರಾತ್ಮನು ದೇವರ ವಾಕ್ಯದಲ್ಲಿ ತಾನು ಪ್ರೇರೇಪಿಸಿದ ವಿಷಯವನ್ನು ವಿವರಿಸ ಬಲ್ಲನು. ಇದಕ್ಕಾಗಿ ಆದಿ ಶಿಷ್ಯರು ನಡೆದಂತೆ ಯೇಸುವಿನೊಂದಿಗೆ ನಡೆಯಿರಿ ಮತ್ತು ಆತನು ನಿಮಗೆ ಹೇಳುವ ಮಾತನ್ನು ಕೇಳಿಸಿಕೊಳ್ಳಲು ತವಕಿಸಿರಿ. ಆಗ ಅವರ ಕಣ್ಣುಗಳು ತೆರೆಯಲ್ಪಟ್ಟಂತೆ ನಿಮ್ಮ ಕಣ್ಣುಗಳು ತೆರೆಯಲ್ಪಡುತ್ತವೆ ಮತ್ತು ಅವರು ಅನುಭವಿಸಿದಂತೆ ನಿಮ್ಮ ಹೃದಯಗಳು ಕುದಿಯುತ್ತವೆ. ಹಿಂದಿನ 61 ವರ್ಷಗಳಲ್ಲಿ ನಾನು ಕರ್ತನನ್ನು ಹಿಂಬಾಲಿಸಿ ಕಂಡುಕೊಂಡಿರುವ ವಿಷಯ ಇದೇ ಆಗಿದೆ.

ನಾವು ಹುಟ್ಟುವುದಕ್ಕೆ ಮುಂಚೆಯೇ ದೇವರು ನಮ್ಮ ಜೀವನದ ಯೋಜನೆಯನ್ನು ತಯಾರಿಸಿದರು. ದಾವೀದನು ನುಡಿದಿರುವಂತೆ, "ನಾನು ಹುಟ್ಟುವುದಕ್ಕೆ ಮೊದಲು ನಿನ್ನ ಕಣ್ಣುಗಳು ನನ್ನನ್ನು ನೋಡಿದವು ಮತ್ತು ನಾನು ಉಸಿರಾಡಲು ಆರಂಭಿಸುವುದಕ್ಕೆ ಮೊದಲೇ ನೀನು ನನ್ನ ಜೀವನದ ಪ್ರತಿಯೊಂದು ದಿನಕ್ಕೆ ಒಂದೊಂದು ಯೋಜನೆಯನ್ನು ಮಾಡಿ, ಅದನ್ನು ನಿನ್ನ ಪುಸ್ತಕದಲ್ಲಿ ಬರೆದಿದ್ದೀ. ಕರ್ತನೇ, ನನ್ನ ಕುರಿತಾದ ಅನೇಕ ಅಮೂಲ್ಯ ಸಂಕಲ್ಪಗಳನ್ನು ನೀನು ಮಾಡುತ್ತಲೇ ಇರುವೆ, ಎಂದು ತಿಳಿದಾಗ ನಾನು ಪುಳಕಿತನಾದೆನು! ಒಂದು ದಿನದಲ್ಲಿ ಲೆಕ್ಕವಿಲ್ಲದಷ್ಟು ಸಲ ನೀನು ನನ್ನ ಕುರಿತಾಗಿ ಯೋಚಿಸುತ್ತೀ. ಮತ್ತು ಮುಂಜಾನೆ ಎಚ್ಚರವಾಗಲು, ನೀನು ನನ್ನ ಬಳಿಯಲ್ಲೇ ನಿಂತು ಯೋಚಿಸುತ್ತಿದ್ದೀ!" (ಕೀರ್ತ. 139:16-18 - "Living Bible" ಭಾಷಾಂತರ).

ಇದರಿಂದ ಕಲಿಯಬೇಕಾದದ್ದು ಏನೆಂದರೆ, ದೇವರು ನಿಮ್ಮ ಜೀವನಕ್ಕಾಗಿ ಒಂದು ವಿಸ್ತಾರವಾದ ಯೋಜನೆಯನ್ನು ಮನಸ್ಸಿನಲ್ಲಿ ಇರಿಸಿಕೊಂಡಿದ್ದಾರೆ. ನೀವು ಜನಿಸುವುದಕ್ಕೆ ಲಕ್ಷಾಂತರ ವರ್ಷಗಳ ಮೊದಲು, ಅವರು ಆಗಲೇ ನಿಮ್ಮ ತಂದೆ-ತಾಯಿ ಯಾರು, ನೀವು ಯಾವ ದೇಶದಲ್ಲಿ ಜನಿಸುವಿರಿ, ಮತ್ತು ನಿಮ್ಮನ್ನು ಕ್ರಿಸ್ತನ ಕಡೆಗೆ ತರುವುದಕ್ಕೆ ತಾನು ಏರ್ಪಡಿಸುವ ಸಂದರ್ಭಗಳು ಯಾವುವು, ಎಲ್ಲವನ್ನೂ ಆಗಲೇ ಬರೆದು ಇರಿಸಿದ್ದರು. ಅವರು ಬರೆದು ಇಟ್ಟದ್ದರಲ್ಲಿ, ನಿಮ್ಮನ್ನು ನಿಮ್ಮ ಶಿಕ್ಷಣಕ್ಕಾಗಿ ಯಾವ ಶೋಧನೆಗಳ ಮೂಲಕ ಕರೆದುಕೊಂಡು ಹೋಗುತ್ತಾರೆ; ಮತ್ತು ನಿಮ್ಮ ದೊಡ್ಡ ವಿಫಲತೆಗಳು ಮತ್ತು ತಪ್ಪುಗಳ ಮೂಲಕವೂ ಅವರು ಹೇಗೆ ತಮ್ಮ ಮಹಿಮೆಗಾಗಿ ಕಾರ್ಯಾಚರಣೆ ಮಾಡುತ್ತಾರೆ, ಎಂಬುದೂ ಸಹ ಬರೆಯಲ್ಪಟ್ಟಿದೆ.

ಯಾವುದೇ ಒಂದು ಕ್ರೈಸ್ತಸಭೆಯಲ್ಲಿ ಅತೀ ಅಮೂಲ್ಯ ಸಹೋದರ ಮತ್ತು ಸಹೋದರಿ ಯಾರೆಂದರೆ, ಆ ಸಭೆಗೆ ಪರಲೋಕದ ವಾತಾವರಣವನ್ನು ತಂದು, ಅಲ್ಲಿ ಅನ್ಯೋನ್ಯತೆಯನ್ನು ಬೆಳೆಸುವಂಥವರು. ಹೀಗೆ ಮಾಡುವ ವ್ಯಕ್ತಿಯು ಆ ಸಭೆಯ ಹಿರಿಯ ಸಹೋದರರಲ್ಲಿ ಒಬ್ಬರು ಆಗಿರಬೇಕಿಲ್ಲ. ನಾವು ಪ್ರತಿಯೊಬ್ಬರೂ ಇಂತಹ ಸಹೋದರರು ಮತ್ತು ಸಹೋದರಿಯರು ಆಗುವ ಅವಕಾಶವನ್ನು ಹೊಂದಿದ್ದೇವೆ.

ಒಂದು ಸಭೆಯಲ್ಲಿ ಇಂತಹ ಸಹೋದರ/ ಸಹೋದರಿ ಇದ್ದಾಗ, ಅಲ್ಲಿನ ವಾತಾವರಣ ಹೇಗಿರುತ್ತದೆಂದು ಯೋಚಿಸಿರಿ: ಆತ/ ಆಕೆ ಒಂದು ಸಭಾಕೂಟಕ್ಕೆ ಅಥವಾ ಒಂದು ಮನೆಗೆ ಬಂದಾಗ, ಅಲ್ಲಿ ಪರಲೋಕದ ಶುದ್ಧ ಗಾಳಿ ಬೀಸಿದ ಅನುಭವ ನಿಮಗಾಗುತ್ತದೆ. ಇಂತಹ ಸಹೋದರ/ ಸಹೋದರಿ ಎಷ್ಟು ಬೆಲೆಬಾಳುವಂಥವರು ಆಗಿದ್ದಾರೆ! ಆತ/ ಆಕೆ ನಿಮ್ಮನ್ನು ಭೇಟಿ ಮಾಡಿ, ನಿಮ್ಮೊಂದಿಗೆ ಕೇವಲ ಐದು ನಿಮಿಷವನ್ನು ಕಳೆದರೆ, ಅದು ನಿಮ್ಮನ್ನು ಉಲ್ಲಾಸಗೊಳಿಸುತ್ತದೆ. ಆ ಐದು ನಿಮಿಷಗಳಲ್ಲಿ ಪರಲೋಕವೇ ನಿಮ್ಮ ಮನೆಗೆ ಬಂತೇನೋ ಎಂಬ ಭಾವನೆ ನಿಮಗೆ ಉಂಟಾಗುತ್ತದೆ!

ದೇವರು ಅಬ್ರಹಾಮನಿಗೆ ಕೊಟ್ಟ ವಾಗ್ದಾನ ಹೀಗಿತ್ತು: "ನಾನು ನಿನ್ನನ್ನು ಆಶೀರ್ವದಿಸುವೆನು ... ನಿನ್ನ ಮೂಲಕ ಭೂಲೋಕದ ಎಲ್ಲ ಕುಲದವರಿಗೂ ಆಶೀರ್ವಾದ ಉಂಟಾಗುವುದು" (ಆದಿ. 12:2,3). ಇದೇ ಆಶೀರ್ವಾದವು ನಮಗೆ ಪವಿತ್ರಾತ್ಮನ ಮೂಲಕ (ಗಲಾ. 3:14 ರಲ್ಲಿ ತಿಳಿಸಿರುವಂತೆ) ಬಾಧ್ಯತೆಯಾಗಿ ಸಿಕ್ಕಿದೆ. ಈ ಆಶೀರ್ವಾದದ ಪಾತ್ರೆಯು ಈ ವರ್ಷ ನಿಮ್ಮಿಂದ ಉಕ್ಕಿ ಹರಿಯಲು ಆರಂಭಿಸಿ, ಇನ್ನೂ ಅನೇಕರಿಗೆ ಆಶೀರ್ವಾದ ಉಂಟಾಗಲಿ ಎಂದು ದೇವರು ಬಯಸುತ್ತಾರೆ. ದೇವರ ಅಭಿಷೇಕ ಎಂಥದ್ದೆಂದರೆ, ನೀವು ಈ ವರ್ಷ ನಿಮ್ಮನ್ನು ಭೇಟಿಯಾಗುವ ಒಬ್ಬೊಬ್ಬ ವ್ಯಕ್ತಿಗೂ ಆಶೀರ್ವಾದವನ್ನು ಹಂಚಿಕೊಡಲಿಕ್ಕೆ ಧಾರಾಳವಾದ ಬಲ ಮತ್ತು ಆಶೀರ್ವಾದ ಅದರಲ್ಲಿದೆ.

ಹಾಗಾಗಿ ನೀವು ಪಡೆಯುವ ಅಶೀರ್ವಾದವನ್ನು ಎಡೆಬಿಡದೆ ಇತರರ ಜೀವಿತದಲ್ಲಿ ತುಂಬಿರಿ. ನೀವು ಹಾಗೆ ಮಾಡದೇ, ಬಂದಿರುವ ಆಶೀರ್ವಾದವನ್ನು ಸ್ವಾರ್ಥತೆಯಿಂದ ನಿಮ್ಮ ಸ್ವಂತಕ್ಕಾಗಿ ಇರಿಸಿಕೊಂಡರೆ, ಮರುದಿನದ ತನಕ ಇಟ್ಟುಕೊಂಡ "ಮನ್ನ"ದ ಹಾಗೆ, ಅದು ಕೆಟ್ಟುಹೋಗಿ ದುರ್ವಾಸನೆ ಬರಲು ಶುರುವಾಗುತ್ತದೆ. ಆದರೆ, "ಬೇರೆಯವರಿಗೆ ನೀರು ಹಾಯಿಸುವವನಿಗೆ ದೇವರು ಸ್ವತಃ ನೀರು ಹಾಕುವರು" (ಜ್ಞಾನೋ. 11:25). ಇಂತಹ ಜೀವನ ನಿಮ್ಮದಾಗಲಿ.

ಈ ವರ್ಷ, ನೀವು ಬಹಳ ಆಶೀರ್ವಾದದ ಒಂದು ವರ್ಷವನ್ನು ಪಡೆಯಿರಿ!