ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
WFTW Body: 

"ನಾವು ಹೋರಾಡುವುದು ಮನುಷ್ಯ ಮಾತ್ರದವರ ಸಂಗಡವಲ್ಲ; ಆದರೆ ನಾವು ರಾಜ್ಯತ್ವಗಳ ಮೇಲೆಯೂ, ಅಧಿಕಾರಗಳ ಮೇಲೆಯೂ, ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ, ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ಹೋರಾಡುವವರಾಗಿದ್ದೇವೆ"(ಎಫೆ. 6:12).

3500 ವರ್ಷಗಳ ಹಿಂದೆ, ಮೋಶೆಯು ಸೀನಾಯಿ ಬೆಟ್ಟದಿಂದ ಇಳಿದು ಬಂದನು ಮತ್ತು ಇಸ್ರಾಯೇಲ್ಯರಿಗೆ ದೇವರಿಂದ ಈ ಭೂಲೋಕದ ರಾಜ್ಯದ ವಾಗ್ದಾನವನ್ನು ತಂದನು. ಆದರೆ 2000 ವರ್ಷಗಳ ಹಿಂದೆ, ಯೇಸು ಪರಲೋಕದಿಂದ ಇಳಿದು ಬಂದರು ಮತ್ತು ನಮಗೆ ಪರಲೋಕ ರಾಜ್ಯದ ವಾಗ್ದಾನವನ್ನು ತಂದರು. ಇದು ಹೊಸ ಒಡಂಬಡಿಕೆ ಮತ್ತು ಹಳೆಯ ಒಡಂಬಡಿಕೆಯ ನಡುವೆ ಇರುವಂತ ಮೂಲಭೂತ ವ್ಯತ್ಯಾಸವಾಗಿದೆ. ನಾವು ಇದನ್ನು ಅರ್ಥ ಮಾಡಿಕೊಳ್ಳದೇ ಹೋದರೆ, ಸೈತಾನನ ವಿರುದ್ಧವಾಗಿ ನಮ್ಮ ಯುದ್ಧವು ಫಲಕಾರಿಯಾಗುವುದಿಲ್ಲ.

"ನಮ್ಮನ್ನು ಪ್ರೀತಿಸುವ ತಂದೆಯಾದ ದೇವರು ನಮ್ಮ ಪ್ರತಿಯೊಂದು ಪರಿಸ್ಥಿತಿಯನ್ನು ನಮ್ಮ ಒಳ್ಳೆಯದಕ್ಕಾಗಿ - ನಾವು ತನ್ನ ಮಗನ ಸಾರೂಪ್ಯವನ್ನು ಹೊಂದಬೇಕೆಂಬ ಉದ್ದೇಶದಿಂದ - ಅತ್ಯುತ್ತಮವಾಗಿ ಸಂಕಲ್ಪಿಸಿದ್ದಾರೆ"

ನಮ್ಮ ರಾಜ್ಯವು ಈ ಲೋಕಕ್ಕೆ ಸೇರಿದ್ದಲ್ಲ. ಆದುದರಿಂದ ನಾವು ಎಂದಿಗೂ, ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ, ಜನರೊಂದಿಗೆ ಖಂಡಿತವಾಗಿ ಜಗಳ ಅಥವಾ ಹೊಡೆದಾಟವನ್ನು ಮಾಡಲೇ ಬಾರದು. ಪರಿಣಾಮಕಾರಿ ಆತ್ಮಿಕ ಯುದ್ಧದ ಮೊಟ್ಟ ಮೊದಲನೆಯ ಅವಶ್ಯಕತೆ ಇದಾಗಿದೆ. ವಿಶ್ವಾಸಿಗಳನ್ನು ಅವರ ಕರೆಯಿಂದ ದಾರಿ ತಪ್ಪಿಸಲು ಇರುವಂತ ಸೈತಾನನ ಮುಖ್ಯ ಮಾರ್ಗಗಳು ಯಾವುದೆಂದರೆ, ಅದು, ಇತರರೊಂದಿಗೆ - ಅವರ ಸಂಬಂಧಿಕರು ಅಥವಾ ಅವರ ನೆರೆಹೊರೆಯವರು ಅಥವಾ ಅವರ ಸಹೋದರ-ಸಹೋದರಿಯರೊಂದಿಗೆ ಜಗಳ ಅಥವಾ ಹೊಡೆದಾಟಕ್ಕೆ ನಡೆಸುವುದಾಗಿದೆ ಮತ್ತು ಆ ಜಗಳವು ಯಾವಾಗಲೂ ಯಾವುದೋ ಲೌಕಿಕ ಸಂಗತಿಗೆ ಸಂಬಂಧಿಸಿದ್ದು ಆಗಿರುತ್ತದೆ. ಹೀಗೆ ಆತನು ವಿಶ್ವಾಸಿಗಳನ್ನು ಅವರ ಪರಲೋಕದ ಸ್ಥಾನದಿಂದ ಈ ಲೋಕಕ್ಕೆ ಮತ್ತು ಲೌಕಿಕ ಸಂಗತಿಗಳಿಗೆ ಎಳೆದು ತರುವುದರಲ್ಲಿ ಯಶಸ್ವಿಯಾಗುತ್ತಾನೆ, ಮತ್ತು ಈ ಮೂಲಕ ಅವರು ತನ್ನ ವಿರುದ್ಧ ಮಾಡುವ ಹೋರಾಟದಲ್ಲಿ ಪರಿಣಾಮಕಾರಿಯಾಗಿರದಂತೆ ಮಾಡುತ್ತಾನೆ.

ನೀವು ಸೈತಾನನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ಮಾಡಬೇಕಾದರೆ ಮತ್ತು ಸಭೆಯನ್ನು ಕಟ್ಟಬೇಕಾದರೆ, ಯಾವ ಮನುಷ್ಯರೊಂದಿಗೂ, ಅಥವಾ ಯಾವುದೇ ಲೌಕಿಕ ಸಂಗತಿಗೆ ಸಂಬಂಧಿಸಿದಂತೆ ಎಂದಿಗೂ ವಿವಾದಕ್ಕೆ ಇಳಿಯುವುದಿಲ್ಲವೆಂದು ನಿರ್ಧರಿಸಿರಿ. ನಾವು ಇತರರೊಂದಿಗೆ ನಮ್ಮ ಮನಸ್ಸಿನೊಳಗೆ ಜಗಳಗಳನ್ನು ಮಾಡುವ ಕಲ್ಪನೆಯನ್ನೂ ಸಹ ಮಾಡಬಾರದು. ನಮ್ಮಲ್ಲಿ ಯಾರ ವಿರುದ್ಧವಾಗಿಯೂ ಒಂದೇ ಒಂದು ದೂರು ಸಹ ಇರಬಾರದು.

ಅಷ್ಟು ಮಾತ್ರವಲ್ಲದೇ,, ನಾವು ನಮ್ಮೊಳಗೆ ಯಾರ ಮೇಲೂ ಯಾವುದೇ ಬೇಡಿಕೆ ಅಥವಾ ಅಪೇಕ್ಷೆಯನ್ನು ಹೇರಬಾರದು. ಉದಾಹರಣೆಗೆ, ಜನರು ನಮ್ಮನ್ನು ಗೌರವಿಸಬೇಕು, ಅಥವಾ ನಮ್ಮನ್ನು ಪರಿಗಣಿಸಬೇಕು, ಅಥವಾ ನಮಗೆ ಪ್ರೀತಿಯನ್ನು ತೋರಿಸಬೇಕು, ಅಥವಾ ಅವರು ನಮ್ಮನ್ನು ಎಂದಿಗೂ ವಂಚಿಸಬಾರದು ಅಥವಾ ಮೋಸಗೊಳಿಸಬಾರದು, ಇಂತಹ ಯಾವುದೇ ಬೇಡಿಕೆಗಳು ನಮ್ಮಲ್ಲಿ ಇರಬಾರದು. ನಾವು ನಮ್ಮ ಬಾಳ ಸಂಗಾತಿಗಳಿಂದಲೂ ಸಹ ಇಂತಹ ನಿರೀಕ್ಷೆಗಳನ್ನು ಇರಿಸಿಕೊಳ್ಳಬಾರದು. ಅಂತಹ ಎಲ್ಲಾ ವಿವಾದಗಳು ಮತ್ತು ದೂರುಗಳು ಮತ್ತು ಬೇಡಿಕೆಗಳು ಒಬ್ಬ ಮನುಷ್ಯನು ಇಹಲೋಕದ ರಾಜ್ಯಕ್ಕೆ ಸೇರಿದ್ದಾನೆಂದು ಮತ್ತು ಆತನು ತನ್ನ ಹೃದಯದಲ್ಲಿ ಸೈತಾನನಿಗೆ ಸ್ಥಳವನ್ನು ನೀಡಿದ್ದಾನೆಂದು ಸೂಚಿಸುತ್ತವೆ. ಮತ್ತು ಇಂತಹ ಜನರ ಜೀವನವು ಬೇಸರದಿಂದ ತುಂಬಿರುವುದರಲ್ಲಿ ಆಶ್ಚರ್ಯವಿಲ್ಲ.

ನಾವು ದೇವರಿಗೆ ಮಾತ್ರ ಲೆಕ್ಕ ಒಪ್ಪಿಸಬೇಕಾಗಿದೆ (ಇಬ್ರಿಯರಿಗೆ 4:13). ನಮ್ಮ ಜೀವಿತದ ಎಲ್ಲಾ ಪರಿಸ್ಥಿತಿಗಳು (ಬೇರೆಯವರು ನಮ್ಮೊಂದಿಗೆ ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದೂ ಸೇರಿದಂತೆ) ನಮ್ಮ ಪ್ರೀತಿಯ ತಂದೆಯಾದ ದೇವರಿಂದ ನಮ್ಮ ಹೆಚ್ಚಿನ ಒಳಿತಿಗಾಗಿ - ನಮ್ಮನ್ನು ತನ್ನ ಮಗನ ಸಾರೂಪ್ಯಕ್ಕೆ ನಡೆಸುವ ಉದ್ದೇಶದಿಂದ - ಅತ್ಯುತ್ತಮವಾಗಿ ಯೋಜಿಸಲ್ಪಟ್ಟಿವೆ. ಆದುದರಿಂದ, ನಾವು ಯಾರನ್ನೂ ದೂರುವುದಕ್ಕೆ ಅವಕಾಶವಿಲ್ಲ, ಆದರೆ ಎಲ್ಲಾ ಸಮಯದಲ್ಲಿ ದೇವರನ್ನು ಸ್ತುತಿಸುವುದಕ್ಕೆ ಧಾರಾಳವಾಗಿ ಅವಕಾಶವಿದೆ.