WFTW Body: 

ನಾವು ಒಂದು ಸಭೆಯಾಗಿ ಮಾಡುವ ಸೇವೆಯು ವಿರೋಧವನ್ನು ಎದುರಿಸುತ್ತಿರುವುದಕ್ಕೆ ಪ್ರಮುಖ ಕಾರಣ, ನಾವು ಪವಿತ್ರತೆ ಮತ್ತು ನೀತಿವಂತಿಕೆಯ ಕುರಿತಾದ ಬೋಧನೆ ಮಾಡುತ್ತಿರುವುದಾಗಿದೆ. ನಾವು ಸಾರುವ ಕೆಲವು ಸತ್ಯಾಂಶಗಳು, "ಇನ್ನು ಮುಂದೆ ಪಾಪವು ನಮ್ಮ ಮೇಲೆ ಅಧಿಕಾರ ನಡೆಸ ಬೇಕಿಲ್ಲ" (ರೋಮಾ. 6:14) ಎಂಬುದಾಗಿ, ಮತ್ತು "ಧನವನ್ನು ಪ್ರೀತಿಸುವವರು ದೇವರ ಸೇವೆ ಮಾಡಲಾರರು" (ಲೂಕ. 16:13) ಎಂಬುದಾಗಿ, ಮತ್ತು "ಇತರರ ಮೇಲೆ ಸಿಟ್ಟುಗೊಳ್ಳುವವರು ಮತ್ತು ಇತರರನ್ನು ನಿಂದಿಸುವವರು ನರಕಕ್ಕೆ ಹೋಗುವಷ್ಟು ದೋಷಿಗಳಾಗಿದ್ದಾರೆ " (ಮತ್ತಾ. 5:22) ಎಂಬುದಾಗಿ, ಮತ್ತು "ಪರಸ್ತ್ರೀಯರನ್ನು ನೋಡಿ ಮನಸ್ಸಿನಲ್ಲಿ ಮೋಹಿಸುವವರು ಸಹ ನರಕಕ್ಕೆ ಹೋಗುವ ಅಪಾಯಕ್ಕೆ ಈಡಾಗುತ್ತಾರೆ" (ಮತ್ತಾ. 5:28,29), ಇತ್ಯಾದಿ. ವಿಶ್ವಾಸಿಗಳಲ್ಲಿ ಬಹುತೇಕ ಮಂದಿ ಯೇಸುವಿನ ಈ ಮಾತುಗಳನ್ನು ಸ್ವೀಕರಿಸಲು ಬಯಸದೇ ಇರುವುದರಿಂದ, ಅವರು ನಮ್ಮನ್ನು ವಿರೋಧಿಸುತ್ತಾರೆ.

ನಾವು ವಿರೋಧಿಸಿರುವ ಸಂಗತಿಗಳು ಯಾವುವೆಂದರೆ, ಕ್ರೈಸ್ತ ಕಾರ್ಯಕರ್ತರ ಸಂಬಳದ ಪದ್ಧತಿ (ಮೊದಲನೇ ಶತಮಾನದಲ್ಲಿ ಈ ಪದ್ಧತಿಯು ಸಂಪೂರ್ಣ ಅಪರಿಚಿತವಾಗಿತ್ತು) ಮತ್ತು ಕ್ರೈಸ್ತ ಸಂಘಟನೆಗಳು ಬಳಸುವಂತ, ಆದರೆ ದೇವರ ವಾಕ್ಯದಲ್ಲಿ ಇಲ್ಲದಿರುವ, ಹಣವನ್ನು ಬೇಡುವ ಪದ್ಧತಿ. ಇದರಿಂದಾಗಿ ಜೀವನ ನಿರ್ವಹಣೆಗಾಗಿ ಪ್ರಸಂಗಿಸುವ ಜನರಿಂದ, ಮತ್ತು ಅಂತಹ ಸಂಪಾದನೆಯ ಮೂಲಕ ಖಾಸಗಿ ಸಾಮ್ರಾಜ್ಯಗಳನ್ನು ಕಟ್ಟುವ ಜನರಿಂದ ನಾವು ತೀವ್ರ ಕೋಪವನ್ನು ಎದುರಿಸಿದ್ದೇವೆ. ಇದಲ್ಲದೆ ಸಭೆಗಳಲ್ಲಿ ವ್ಯಕ್ತಿತ್ವದ ಮೇಲೆ ಆಧಾರಿತವಾದ ನಾಯಕತ್ವ, ಪರಮಾಧ್ಯಕ್ಷನ ಪದ್ಧತಿ ("pope"), ಕ್ರೈಸ್ತ ಧಾರ್ಮಿಕ ಪಂಗಡಗಳ ಪದ್ಧತಿ ("denominations"), ಕ್ರೈಸ್ತ ಸಭೆಗಳ ಮೇಲೆ ಪಾಶ್ಚಿಮಾತ್ಯ ದೇಶಗಳ ಪ್ರಭಾವ, ಮತ್ತು ಅನಾರೋಗ್ಯಕರವಾದ ರೀತಿಯಲ್ಲಿ ಪಾಶ್ಚಿಮಾತ್ಯ ನಾಯಕರನ್ನು ಅವಲಂಬಿಸಿದ ಸಭೆಗಳಲ್ಲಿ ಕುಂಟಿತವಾಗಿರುವ ಬೆಳವಣಿಗೆ, ಇವೆಲ್ಲವುಗಳನ್ನೂ ಸಹ ನಾವು ವಿರೋಧಿಸಿ ನಿಂತಿದ್ದೇವೆ. ಇದು ದೇವರ ತತ್ವಗಳನ್ನು ಅಲ್ಲಗಳೆಯುವ ಪಂಗಡಗಳನ್ನು ("cults") ಕೆರಳಿಸಿದೆ.

ದೇವರ ಪವಿತ್ರಾಲಯವನ್ನು ಒಂದಲ್ಲ ಒಂದು ರೀತಿಯಾಗಿ ಕೆಡಿಸುವುದು ಸೈತಾನನ ಗುರಿಯಾಗಿದೆ. ಆತನು ತನ್ನ "ಸೈನಿಕರನ್ನು" ಸಭೆಯೊಳಗೆ ಕಳುಹಿಸುತ್ತಾನೆ (ದಾನಿ. 11:31), ಮತ್ತು ಹೀಗೆ ದೇವರ ಕಾರ್ಯವನ್ನು ಒಳಗಿನಿಂದಲೇ ನಾಶಗೊಳಿಸುವ ಉದ್ದೇಶವನ್ನು ಹೊಂದಿದ್ದಾನೆ. ಕ್ರೈಸ್ತತ್ವದ ಇತಿಹಾಸವು ತೋರಿಸುವಂತೆ, ಕಳೆದ 20 ಶತಮಾನಗಳಲ್ಲಿ ಇಂತಹ ಸೇನೆಗಳು ಒಂದರ ನಂತರ ಒಂದು ಪಂಗಡವನ್ನು ಮತ್ತು ಒಂದರ ನಂತರ ಒಂದು ಆಂದೋಲನವನ್ನು ಭ್ರಷ್ಟಗೊಳಿಸುವುದರಲ್ಲಿ ಯಶಸ್ವಿಯಾಗಿವೆ.

ಕ್ರೈಸ್ತಸಭೆಯ ಸೋಲಿಗೆ ಮುಖ್ಯ ಕಾರಣವೇನೆಂದರೆ, ಸಭೆಯಲ್ಲಿ ದೇವರಿಂದ ನೇಮಿಸಲ್ಪಟ್ಟ ಕಾವಲುಗಾರರು ಎಚ್ಚರವಾಗಿದ್ದು ಜಾಗರೂಕತೆಯಿಂದ ತಮ್ಮ ಕೆಲಸವನ್ನು ನಿಭಾಯಿಸದೇ ಇರುವುದು. ಸೈತಾನನು ಈ ಕಾವಲುಗಾರರು ನಿದ್ದೆಹೋಗುವಂತೆ ಮಾಡುವುದರಲ್ಲಿ ಹೇಗೆ ಸಫಲನಾದನು? ಕೆಲವು ಸಂದರ್ಭಗಳಲ್ಲಿ, ಸತ್ಯದ ಬೋಧನೆಯಿಂದ ಕೆಲವು ಜನರು ಸಿಟ್ಟಾಗಬಹುದು - ವಿಶೇಷವಾಗಿ ಐಶ್ವರ್ಯವಂತರು ಮತ್ತು ಪ್ರಭಾವಶಾಲಿಗಳಾದ ಜನರು - ಎಂಬ ಭಯ ಅವರಲ್ಲಿ ಮೂಡಿಸುವ ಮೂಲಕ. ಇನ್ನು ಕೆಲವು ಪ್ರಕರಣಗಳಲ್ಲಿ, ಅವರು ತಮ್ಮ ಹಂಡತಿಯರನ್ನುಮೆಚ್ಚಿಸುವಂತೆ ಮಾಡಿ, ಮತ್ತು ಅವರಲ್ಲಿ ಹಣದಾಸೆ ಹಾಗೂ ಒಳ್ಳೆಯ ಆಹಾರದ ಆಸೆಯನ್ನು ಮೂಡಿಸುವುದರ ಮೂಲಕ. ಇನ್ನು ಕೆಲವು ಸಂದರ್ಭಗಳಲ್ಲಿ, ಸಭೆಯಲ್ಲಿ ದೇವರ ಗುಣಮಟ್ಟವನ್ನು ಎತ್ತಿ ಹಿಡಿಯುವಂತ ಕಾವಲುಗಾರರ ಸಂದೇಶಗಳಿಗೆ ನಿರಂತರವಾಗಿ ವಿರೋಧ ಬರುವುದನ್ನು ನೋಡಿ ಸ್ವತಃ ಅವರೇ ಮನಗುಂದಿದರು. ಹಾಗಾಗಿ ಅವರು ಜನರ ಮೆಚ್ಚುಗೆಯನ್ನು ಸಂಪಾದಿಸಲಿಕ್ಕಾಗಿ ತಮ್ಮ ಸಂದೇಶಗಳನ್ನು ಮಂದಗೊಳಿಸಿದರು.

ಇಬ್ರಿಯ 12:3ರಲ್ಲಿ, ಯೇಸುವಿನ ಕುರಿತಾಗಿ, "ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು, ಹಾಗಾಗಿ ನಾವು ಆತನ ಬಗ್ಗೆ ಯೋಚಿಸಿ ಮನಗುಂದದೆ, ಬೇಸರಗೊಳ್ಳದೆ ಇರೋಣ," ಎಂದು ನಮಗೆ ಹೇಳಲಾಗಿದೆ. ಯೇಸುವನ್ನು ವಿರೋಧಿಸಿದ ಈ ಪಾಪಿಗಳು ಯಾರು? ಅವರು ಇಸ್ರಾಯೇಲಿನ ಸೂಳೆಯರು ಅಥವಾ ಕೊಲೆಗಾರರು ಅಥವಾ ಕಳ್ಳರು ಆಗಿರಲಿಲ್ಲ. ಅವರು ರೋಮ್ ಪಟ್ಟಣದವರು ಅಥವಾ ಗ್ರೀಕರು ಆಗಿರಲಿಲ್ಲ. ಇಲ್ಲ. ಯೇಸುವನ್ನು ಎಡೆಬಿಡದೆ ವಿರೋಧಿಸಿದ ಪಾಪಿಗಳು, ಧರ್ಮಶಾಸ್ತ್ರವನ್ನು ಕೊಂಡಾಡಿ ಮಾತಾಡುತ್ತಿದ್ದ ಇಸ್ರಾಯೇಲಿನ ಧರ್ಮಗುರುಗಳು ಮತ್ತು ಧಾರ್ಮಿಕ ನಾಯಕರು ಆಗಿದ್ದರು. ಅವರು ಯೇಸುವನ್ನು ನೋಡಿ ಅಸೂಯೆ ಪಡುತ್ತಿದ್ದರು ಮತ್ತು ಕೊನೆಗೆ ಅವರು ಆತನನ್ನು ಕೊಂದರು.

ನಾವು ಯೇಸುವನ್ನು ಹಿಂಬಲಿಸುವುದಾದರೆ, ಈ ದಿನವೂ ಸಹ ನಾವು ಇದೇ ಪಂಗಡದ ಜನರಿಂದ ವಿರೋಧವನ್ನು ಎದುರಿಸುತ್ತೇವೆ. ನಮಗೆ ಅತಿ ಹೆಚ್ಚಿನ ವಿರೋಧವು ದೇವರ ಗುಣಮಟ್ಟವನ್ನು ಕೆಳಗಿಳಿಸಿರುವ ಮತ್ತು ಸಭೆಯನ್ನು ಕೆಡಿಸಿರುವ ಬೋಧಕರಿಂದ ಬರುತ್ತದೆ. ಇವರು ಸೈತಾನನ ಮುಖ್ಯ ದಲ್ಲಾಳಿಗಳಾಗಿ ನಮ್ಮನ್ನು ವಿರೋಧಿಸುತ್ತಾರೆ. ನಾವು ಇವರಿಂದ ಎಡೆಬಿಡದೆ ವಿರೋಧವನ್ನು ಎದುರಿಸುವಾಗ, ಬಹಳ ಸುಲಭವಾಗಿ ಸುಸ್ತಾಗಬಹುದು ಮತ್ತು ನಿರಾಶೆಗೊಳ್ಳಬಹುದು.

ಸೈತಾನನು "ದೇವಭಕ್ತರನ್ನು ಹಿಂಸಿಸುವ ಮೂಲಕ ಸವೆಯಿಸುವನು" (ದಾನಿ. 7:25). ಇದನ್ನು ಜಯಿಸುವ ಒಂದೇ ಮಾರ್ಗ, ಯೇಸುವು ವಿರೋಧವನ್ನು ನಿರಂತರವಾಗಿ ಎದುರಿಸಿ, ಕೊನೆಗೆ ತನ್ನ ವೈರಿಗಳಿಂದ ಕೊಲ್ಲಲ್ಪಟ್ಟಂತ ಉದಾಹರಣೆಯನ್ನು ನೋಡುವುದೇ ಆಗಿದೆ. ನಾವು ಸಹ "ಸಾಯಬೇಕಾದರೂ ನಂಬಿಗಸ್ತರಾಗಿ ಇರಬೇಕು". ಸುವಾರ್ತೆಯನ್ನು ಸಾರುವವರಲ್ಲಿ ಯಾರಿಗಾದರೂ ತಮ್ಮ ಜೀವಿತದ ಅಂತ್ಯದ ವರೆಗೆ ವಿರೋಧವನ್ನು ಎದುರಿಸುವ ಮನಸ್ಸು ಇಲ್ಲವಾದರೆ, ಅವರು ಜನರ ಕಿವಿಗೆ ಇಂಪಾದ ಸಂದೇಶಗಳನ್ನು ನೀಡುವ ಬೋಧಕರುಗಳಾಗಿ, "ನಯವಾದ ನುಡಿಗಳಿಂದ ಜನರನ್ನು ತಮ್ಮ ಕಡೆಗೆ ಸೆಳೆಯುವವರು" ಆಗುತ್ತಾರೆ (ದಾನಿ. 11:32), ಮತ್ತು ಜೀವಿತದ ಕೊನೆಯಲ್ಲಿ ಪಾಪಿಗಳೊಂದಿಗೆ ರಾಜಿಮಾಡಿದ ಬೀಳಾಮನಂತೆ ಆಗುವರು.

ನಾವು ಎಷ್ಟು ಹೆಚ್ಚಿನ ಬೆಲೆಯನ್ನಾದರೂ ತೆತ್ತು ದೇವರ ಶ್ರೇಷ್ಠ ಗುಣಮಟ್ಟವನ್ನು ನಮ್ಮ ನಡುವೆ ಉಳಿಸಿಕೊಳ್ಳುವುದಕ್ಕಾಗಿ ಒಂದು ಸಭೆಯಾಗಿ ಕರೆಯಲ್ಪಟ್ಟಿದ್ದೇವೆ. ನಾವು ಎಲ್ಲಾ ಸಮಯದಲ್ಲಿ ’ಕ್ರಿಸ್ತ ವಿರೋಧಿ’ ಶಕ್ತಿಗಳ ಬಗ್ಗೆ ಎಚ್ಚರ ವಹಿಸಬೇಕು. ಅಪೊಸ್ತಲ ಪೌಲನು ಎಫೆಸದಲ್ಲಿದ್ದ ಸಭೆಯನ್ನು, ತಾನು ಅಲ್ಲಿದ್ದ ಮೂರು ವರ್ಷಗಳ ವರೆಗೆ, ದೇವರ ಕೃಪೆಯ ಮೂಲಕ ಪರಿಶುದ್ಧವಾಗಿ ರಕ್ಷಿಸಿದ್ದನು. ಆದರೆ ಆತನು ಅಲ್ಲಿಂದ ಹೋಗುವಾಗ ಅಲ್ಲಿನ ಸಭಾ ಹಿರಿಯರಿಗೆ, ತಾನು ಹೋದ ಮೇಲೆ ಅಲ್ಲಿಗೆ ಭ್ರಷ್ಟತೆಯು ಬರುತ್ತದೆಂದು ತನಗೆ ಖಚಿತವಾಗಿ ತಿಳಿದಿದೆಯೆಂದು ಹೇಳಿದನು (ಅ.ಕೃ. 20:29-31) . ಮತ್ತು ಅದು ಹಾಗೆಯೇ ನಡೆಯಿತು, ನಾವು ಇದರ ಕುರಿತಾಗಿ ಎಫೆಸದವರಿಗೆ ಬರೆಯಲ್ಪಟ್ಟ ಎರಡನೇ ಪತ್ರಿಕೆಯಲ್ಲಿ ಓದುತ್ತೇವೆ (ಪ್ರಕ. 2:1-5).