ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಶಿಷ್ಯಂದಿರಿಗೆ
WFTW Body: 

ಹಳೆಯ ಒಡಂಬಡಿಕೆಯ ಅಡಿಯಲ್ಲಿ, ದೇವರು ಯೆಹೂದ್ಯರಿಗೆ ಅನೇಕ ವಿಧವಾದ "ಸಬ್ಬತ್"‌ಗಳನ್ನು ಕೊಟ್ಟರು. ಇವುಗಳಲ್ಲಿ ವಾರದ ’ಸಬ್ಬತ್’ದಿನವು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂಥದ್ದಾಗಿದೆ. ಆದರೆ ಜನರಿಗೆ ಅಷ್ಟೊಂದು ಪರಿಚಯವಿಲ್ಲದಂತ ಇನ್ನೂ ಕೆಲವು "ಸಬ್ಬತ್"‌ಗಳು ಸಹ ಇದ್ದವು. ಇವುಗಳಲ್ಲೊಂದು ಪ್ರತಿ ಆರು ಸಾಮಾನ್ಯ ವರ್ಷಗಳ ನಂತರ ಬರುವ ಏಳನೆಯ ವರ್ಷ "ಸಬ್ಬತ್ ವರ್ಷ"ವಾಗಿತ್ತು(ಯಾಜಕಕಾಂಡ 25:2-4).ಅದಲ್ಲದೆ ಇಂತಹ ಏಳು "ಸಬ್ಬತ್ ವರ್ಷ"ಗಳ ನಂತರ (ಅಂದರೆ ನಲ್ವತ್ತೊಂಭತ್ತು ವರ್ಷಗಳ ನಂತರ) ’ಐವತ್ತನೇ ವರ್ಷದ ಸಬ್ಬತ್’ಬರುತ್ತಿತ್ತು. ಈ ಐವತ್ತನೇ ವರ್ಷದ ಸಬ್ಬತ್ತನ್ನು"ಜೂಬಿಲಿ ವರ್ಷ"ಎಂದು ಹೆಸರಿಸಲಾಗಿತ್ತು(ಯಾಜಕಕಾಂಡ 25:8-12).

ಆ ಜೂಬಿಲಿ ವರ್ಷದಲ್ಲಿ,"ದೇಶದಾದ್ಯಂತ ಎಲ್ಲಾ ಸಾಲಗಾರರಿಗೆ ಬಿಡುಗಡೆಯನ್ನು ಸಾರಬೇಕು"ಎಂದು ಇಸ್ರಾಯೇಲ್ಯರಿಗೆ ಆದೇಶಿಸಲಾಗಿತ್ತು, ಮತ್ತು ಅದು "ಎಲ್ಲಾ ಸಾಲಗಳನ್ನು ಮನ್ನಿಸುವ ಸಮಯವಾಗಿತ್ತು"(ಯಾಜಕಕಾಂಡ 25:10-Living Bible ಭಾಷಾಂತರ).

ಪ್ರತಿ ಏಳು ವರ್ಷಗಳ ಅವಧಿಯ ಕೊನೆಯಲ್ಲೂ ಸಹ ಎಲ್ಲಾ ಸಾಲಗಳನ್ನು ಮನ್ನಿಸಬೇಕೆಂದು ಕರ್ತರು ಆಜ್ಞಾಪಿಸಿದ್ದರು, ಮತ್ತು "ಸಾಲ ಕೊಟ್ಟವರೆಲ್ಲರೂ ತಮ್ಮ ನೆರೆಯವರಿಗೆ ಕೊಟ್ಟ ’ಸಾಲದ ಚೀಟಿ’ಯ ಮೇಲೆ ’ಸಾಲ ಸಂಪೂರ್ಣವಾಗಿ ಪಾವತಿಯಾಗಿದೆ’ ಎಂದು ಬರೆದು ಕೊಡಬೇಕಾಗಿತ್ತು, ಏಕೆಂದರೆ ಅದು ಕರ್ತನಿಂದ ಬಂದಿರುವ ಬಿಡುಗಡೆಯಾಗಿತ್ತು .... ಎಲ್ಲರ ಋಣ ತೀರಿತು," ಎಂದು ಅವರಿಗೆ ತಿಳಿಸಲಾಗಿತ್ತು (ಧರ್ಮೋಪದೇಶಕಾಂಡ 15:1-10ನ್ನು ನಿಧಾನವಾಗಿ ಓದಿಕೊಳ್ಳಿರಿ).

ಈ ಸಬ್ಬತ್ ವರ್ಷಗಳು ಬಹಳ ಆಶೀರ್ವಾದದ ಮತ್ತು ಸಂತೋಷದ ಸಮಯವಾಗಿ ನೇಮಕವಾಗಿದ್ದವು. "ಜೂಬಿಲಿ"ಎಂಬ ಪದದ ಅರ್ಥ "ಹರ್ಷದ ಹಬ್ಬ" ಎಂಬುದಾಗಿದೆ. ಇಡೀ ಜೂಬಿಲಿ ವರ್ಷವು ಹರ್ಷದ ಜಯಘೋಷಗಳಿಂದ ತುಂಬಿದ ಸಂಭ್ರಮದ ವರ್ಷವಾಗಿತ್ತು - ಏಕೆಂದರೆ ಪ್ರತಿಯೊಂದು ಸಾಲವು ಮನ್ನಿಸಲ್ಪಟ್ಟಿತ್ತು, ಮತ್ತು ಪ್ರತಿಯೊಬ್ಬ ಸಾಲಗಾರನು ಬಿಡುಗಡೆ ಹೊಂದಿದ್ದನು. ಆ ವರ್ಷವನ್ನು ಕುರಿತು ಕರ್ತರು ಇಸ್ರಾಯೇಲ್ಯರಿಗೆ, "ಇದು ನಿಮಗೆ ಎಷ್ಟು ಸಂಭ್ರಮದ ವರ್ಷವಾಗಿದೆ!"ಎಂದು ಹೇಳಿದರು (ಯಾಜಕಕಾಂಡ 25:11- Living Bible).

ಈಗ ಹೊಸ ಒಡಂಬಡಿಕೆಯ ಅಡಿಯಲ್ಲಿ, ನಾವು ಪ್ರತಿಯೊಂದು ದಿನವನ್ನೂ ’ಸಬ್ಬತ್’(ವಿಶ್ರಾಂತಿ) ಎಂದು ಆಚರಿಸುತ್ತೇವೆ, ಏಕೆಂದರೆ ಪ್ರತಿಯೊಂದು ದಿನವೂ ಕರ್ತನಿಗಾಗಿ ಪವಿತ್ರ ದಿನವಾಗಿದೆ.

ಹಾಗೆಯೇ ನಾವು ಪ್ರತಿಯೊಂದು ವರ್ಷವನ್ನೂ ’ಸಬ್ಬತ್ ವರ್ಷ’ವೆಂದು ಆಚರಿಸುತ್ತೇವೆ - ಏಕೆಂದರೆ ಪ್ರತಿ ವರ್ಷವೂ ಒಂದು ಜೂಬಿಲಿ (ಉತ್ಸಾಹಕರ) ಸಂವತ್ಸರವಾಗಿದೆ - ಅಂದರೆ ನಮಗೆ ಹಾನಿ ಮಾಡಿರುವ ಮತ್ತು ಮೋಸ ಮಾಡಿರುವ ಎಲ್ಲರನ್ನೂ ನಾವು ಕ್ಷಮಿಸಿ ಬಿಡುಗಡೆಗೊಳಿಸಿ, ಹರ್ಷೋಲ್ಲಾಸದಿಂದ ಆಚರಿಸುವ ವರ್ಷವಾಗಿರುತ್ತದೆ. ಈ ರೀತಿಯಾಗಿ ನಮ್ಮ ಜೀವನದ ಪ್ರತಿ ವರ್ಷವೂ ಸಂತೋಷದ ಸಮಯವಾಗಲು ಸಾಧ್ಯವಿದೆ - ಏಕೆಂದರೆ ಪ್ರತಿ ವರ್ಷವೂ ನಮಗೆ ಒಂದು ಜೂಬಿಲಿ ಸಂವತ್ಸರವಾಗಬೇಕೆಂದು ದೇವರು ನೇಮಿಸಿದ್ದಾರೆ.

ನಮ್ಮ ಕರೆ ಏನೆಂದರೆ, ದೇವರು ನಮಗೆ ಕರುಣೆ ತೋರಿಸಿದ ಪ್ರಕಾರವೇ ನಾವು ಇತರರಿಗೆ ಕರುಣೆ ತೋರಿಸಬೇಕು, ಎಂಬುದಾಗಿದೆ. "ದೇವರು ನಮಗೆ ಕೊಟ್ಟಿರುವ ಪ್ರಕಾರ"ಎಂಬ ನುಡಿಗಟ್ಟನ್ನು ನಾವು ಧ್ಯೇಯವನ್ನಾಗಿ ನಮ್ಮ ಮನಸ್ಸಿನಲ್ಲಿ ಇರಿಸಿಕೊಳ್ಳಬೇಕು, ಮತ್ತು ನಾವು ಪ್ರತಿಯೊಬ್ಬ ಮಾನವನೊಂದಿಗೆ ವ್ಯವಹರಿಸುವಾಗಲೂ ಇದನ್ನು ಜ್ಞಾಪಿಸಿಕೊಳ್ಳಬೇಕು.

ನಾವು ಕರ್ತರಿಂದ ಬಹಳಷ್ಟನ್ನು ಉಚಿತವಾಗಿ ಹೊಂದಿದ್ದೇವೆ. ಹಾಗಿರುವಾಗ, ನಾವು ಇತರರಿಗೆ ಉಚಿತವಾಗಿಯೇ ಕೊಡೋಣ(ಮತ್ತಾಯನು 10:8)- ಜಿಪುಣತನದಿಂದ ಅಥವಾ ಲೋಭದಿಂದಲ್ಲ, ಆದರೆ ಉದಾರವಾಗಿ ಮತ್ತು ವಿಶಾಲ ಹೃದಯದಿಂದ ಕೊಡೋಣ.

ಕರ್ತನು ನಮಗೆ ಸಂಪೂರ್ಣ ಉಚಿತವಾಗಿ ದಯಪಾಲಿಸಿರುವ ಕ್ಷಮಾಪಣೆಯ ದೊಡ್ಡ ಅದ್ಭುತವನ್ನು ನಾವು ಎಂದಿಗೂ ಮರೆಯಬಾರದು. ಕರ್ತನು ನಮಗಾಗಿ ಕಲ್ವಾರಿಯ ಶಿಲುಬೆಯ ಮೇಲೆ ಮಾಡಿದ ಎಲ್ಲಾ ಕಾರ್ಯಗಳಿಗಾಗಿ ಆತನಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿಯೇ ನಾವು ಇನ್ನು ಮೇಲೆ ನಮ್ಮ ಸಂಪೂರ್ಣ ಜೀವಮಾನವನ್ನು ಜೀವಿಸಬೇಕು.

ಸುವಾರ್ತೆಯ "ಒಳ್ಳೆಯ ಸುದ್ದಿ"ಏನೆಂದರೆ, ನಾವು ನಮ್ಮ ಶೋಚನೀಯ ಬದುಕಿನಿಂದ ಬಿಡುಗಡೆಯನ್ನು ಪಡೆಯಬಹುದು. ಈಗ ನಮ್ಮ ಮೂಲಕ ದೇವರ ಜೀವಕರವಾದ ನೀರಿನ ಹೊಳೆಗಳು ನಿರಂತರವಾಗಿ ಹರಿಯಬಹುದು, ಮತ್ತು ಇದರ ಮೂಲಕ ನಾವು ಭೇಟಿಮಾಡುವ ಪ್ರತಿಯೊಂದು ಕುಟುಂಬಕ್ಕೆ ಆಶೀರ್ವಾದ ಉಂಟಾಗಬಹುದು.

ದೇವರು ನಮಗೆ ತೋರಿದ ಕರುಣೆಯನ್ನು ನಾವು ಇತರರಿಗೆ ತೋರಬಹುದು.
ದೇವರು ನಮ್ಮನ್ನು ಬಿಡುಗಡೆಗೊಳಿಸಿದ ಹಾಗೆ ನಾವು ಇತರರನ್ನು ಬಿಡುಗಡೆ ಮಾಡಬಹುದು.
ದೇವರು ನಮ್ಮನ್ನು ಆಶೀರ್ವದಿಸಿದ ಹಾಗೆ ನಾವು ಇತರರನ್ನು ಆಶೀರ್ವದಿಸಬಹುದು.
ದೇವರು ನಮಗೆ ಉಚಿತವಾಗಿ ಕೊಟ್ಟಿರುವುದನ್ನು ನಾವು ಇತರರಿಗೆ ಉಚಿತವಾಗಿ ಕೊಡಬಹುದು.
ದೇವರು ನಮಗೆ ವಿಶಾಲ ಹೃದಯವನ್ನು ತೋರಿಸಿದ ಹಾಗೆಯೇ ನಾವು ಇತರರ ಬಗ್ಗೆ ಹೃದಯ-ವೈಶಾಲ್ಯತೆಯನ್ನು ತೋರಿಸಬಹುದು.

ಈ ವರ್ಷ - ಮತ್ತು ಪ್ರತಿಯೊಂದು ವರ್ಷವೂ - ನಮ್ಮ ಪ್ರತಿಯೊಬ್ಬ ಸಾಲಗಾರ, ಅಥವಾ ನಮ್ಮನ್ನು ನೋಯಿಸಿದವನು ಅಥವಾ ನಮಗೆ ಯಾವುದೇ ರೀತಿ ಹಾನಿ ಮಾಡಿದವನನ್ನು ನಾವು ಮನ್ನಿಸಿ ಬಿಡುಗಡೆ ಮಾಡುವುದಾದರೆ, ಇದು ಒಂದು ಸಂತೋಷಭರಿತ ವರ್ಷವಾಗಬಹುದು. ನಿಮ್ಮ ಪ್ರತಿಯೊಂದು ದ್ವೇಷ ಭಾವನೆಯನ್ನು ಶಾಶ್ವತವಾಗಿ ಅಳಿಸಿಹಾಕಿರಿ ಮತ್ತು ಎಲ್ಲಾ ಜನರಿಗೆ ಕರುಣೆಯನ್ನು ತೋರಿಸುತ್ತಾ, ಈ ದಿನದಿಂದ ನಮ್ಮ ಕರ್ತರೊಂದಿಗೆ ಒಂದು ಹೊಸ ಆರಂಭವನ್ನು ಮಾಡಿರಿ.