WFTW Body: 

ನಾವು ಪ್ರಕಟನೆ 2 ಮತ್ತು 3ರಲ್ಲಿ, ಕರ್ತರಿಂದ ಗದರಿಸಲ್ಪಟ್ಟ ಐದು ಸಭೆಗಳ ದೂತರು ಹಾಗೂ ಐದು ಸಭೆಗಳನ್ನು ನೋಡಿದಾಗ, ಅಲ್ಲಿ ಗುಣಮಟ್ಟ ಕ್ಷೀಣಿಸುತ್ತಾ ಇತ್ತೆಂದು ಸ್ಪಷ್ಟವಾಗಿ ತಿಳಿಯುತ್ತದೆ.

(1) ಎಫೆಸದಲ್ಲಿ, ಆರಂಭದಲ್ಲಿ ಕರ್ತರಿಗಾಗಿ ಇದ್ದ ಪ್ರೀತಿ ನಷ್ಟವಾದದ್ದು ಕಂಡುಬರುತ್ತದೆ. ನಾವು ಕ್ರಿಸ್ತನ ಮೇಲಿನ ಭಕ್ತಿಯನ್ನು ಕಳೆದುಕೊಂಡಾಗ, ಇಳಿಜಾರಿನ ದಾರಿ ಆರಂಭವಾಗುತ್ತದೆ. ಮುಂದೆ ಸ್ವಲ್ಪ ಸಮಯದಲ್ಲಿ, ನಮ್ಮ ಸಹ-ವಿಶ್ವಾಸಿಗಳಿಗಾಗಿ ನಮ್ಮ ಪ್ರೀತಿಯೂ ಕಳೆದುಹೋಗುವದಕ್ಕೆ ಇದು ಕಾರಣವಾಗುತ್ತದೆ.

(2) ಪೆರ್ಗಮದಲ್ಲಿ, ಬಿಳಾಮನ ಬೋಧನೆಯ ಮೂಲಕ ಲೌಕಿಕತೆಯು ಸ್ವಲ್ಪ ಸ್ವಲ್ಪವಾಗಿ ಒಳಕ್ಕೆ ಬರುತ್ತಿರುವುದು ನಮಗೆ ಕಾಣಿಸುತ್ತದೆ. ಈಗ ಇಲ್ಲಿ ನಿಕೊಲಾಯಿತರಿಗೆ (ಎಫೆಸದಲ್ಲಿ ಇವರು ಸಭೆಯಿಂದ ದೂರ ಇರಿಸಲ್ಪಟ್ಟಿದ್ದರು) ಅಧಿಕಾರ ಸಿಕ್ಕಿದೆ. ಕ್ರಿಸ್ತನ ಮೇಲಿನ ಭಕ್ತಿಯು ಇಲ್ಲವಾದಾಗ, ನಿಧಾನವಾಗಿ ಲೌಕಿಕತೆಯು ನುಸುಳಿ ಒಳಗೆ ಸೇರುತ್ತದೆ ಮತ್ತು ಧಾರ್ಮಿಕ ವರ್ಗಶ್ರೇಣಿಗಳು ಸಭೆಯಲ್ಲಿ ಬಲಗೊಳ್ಳುತ್ತವೆ. ಎಲ್ಲಿ ಧಾರ್ಮಿಕ ವರ್ಗಶ್ರೇಣಿಯು ಸಭೆಯ ನಾಯಕತ್ವವನ್ನು ತನ್ನ ಹಿಡಿತದಲ್ಲಿ ಇರಿಸಿಕೊಂಡಿದೆಯೋ, ಅಲ್ಲಿ ಶೀಘ್ರವೇ ಬಾಬೆಲ್ ಪಟ್ಟಣವು ಕಟ್ಟಲ್ಪಡುತ್ತದೆ.

(3) ಥುವತೈರದಲ್ಲಿ, ಸಭೆಯು ಸಂಪೂರ್ಣವಾಗಿ ಲೌಕಿಕತೆಯ ಕಡೆಗೆ ತಿರುಗಿದೆ, ಮತ್ತು ಇದರ ಫಲವಾಗಿ ಧಾರ್ಮಿಕ ಜಾರತ್ವವು ಎಲ್ಲೆಡೆ ಹರಡಿದೆ. ಈಗ ಒಬ್ಬ ಸ್ತ್ರೀಯು ಸಭೆಯ ಮೇಲೆ ಪ್ರಭಾವ ಬೀರಲು ಶಕ್ತಳಾಗಿದ್ದಾಳೆ, ಮತ್ತು ಆಕೆಯು ಸುಳ್ಳು ಕೃಪೆಯನ್ನು ಬೋಧಿಸುತ್ತಾ, ಪವಿತ್ರಾತ್ಮನ ವರಗಳನ್ನು (ವಿಶೇಷವಾಗಿ ಪ್ರವಾದನೆಯ ವರವನ್ನು) ನಕಲು ಮಾಡುವದಕ್ಕೂ ಹಿಂಜರಿಯುವುದಿಲ್ಲ.

(4) ಸಾರ್ದಿಸಿನಲ್ಲಿ, ನಾವು ಕಪಟತನವನ್ನು ಕಾಣುತ್ತೇವೆ. ಪಾಪವು ಮರೆಮಾಚಲ್ಪಟ್ಟಿದೆ ಮತ್ತು ದೇವರ ಅಭಿಪ್ರಾಯಕ್ಕಿಂತ ಹೆಚ್ಚಾಗಿ ಮಾನವ ಅಭಿಪ್ರಾಯಕ್ಕೆ ಮಹತ್ವ ನೀಡಲಾಗುತ್ತದೆ. ಈ ಸಭೆಯ ದೂತನು ಆತ್ಮಿಕವಾಗಿ ನಿದ್ದೆಹೋಗಿದ್ದಾನೆ (ಆತ್ಮಿಕ ಸಹಜಸ್ಥಿತಿಯನ್ನು ಅರಿತುಕೊಂಡಿಲ್ಲ). ಆದರೆ ಕರ್ತರು ಆತನಲ್ಲಿ ನೋಡುವ ಆತ್ಮಿಕ ಮರಣವು, ಜನರ ಕಣ್ಣಿಗೆ ಬೀಳದಂತೆ ಹೊರತೋರಿಕೆಯ ದೇವಭಕ್ತಿಯ ಮೂಲಕ ಮರೆಮಾಡಲ್ಪಟ್ಟಿದೆ.

(5) ಲವೊದಿಕೀಯದಲ್ಲಿ, ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಕ್ರಿಸ್ತನ ದೇಹವು ಸತ್ತುಹೋಗಿರುವದು ಅಷ್ಟೇ ಅಲ್ಲ, ಅದು ಕೊಳೆತು ನಾರುತ್ತಿದೆ. ಉಗುರು ಬೆಚ್ಚಗಿನ ಸ್ಥಿತಿ ಮತ್ತು ಆತ್ಮಿಕ ಅಹಂಕಾರ ಇವೆರಡು ಮರಣಕ್ಕೆ ಕಾರಣವಾಗಿವೆ. ಈ ಮೇಲಿನ ನಾಲ್ಕು ಸಭೆಗಳಲ್ಲಿ ಪ್ರತಿಯೊಂದರಲ್ಲೂ, ಕರ್ತರು ಮೆಚ್ಚುವಂತಹ ಕೆಲವು ಸಂಗತಿಗಳನ್ನು ಇನ್ನೂ ಸಹ ನೋಡಲು ಸಾಧ್ಯವಾಯಿತು. ಆದರೆ ಲವೊದಿಕೀಯದಲ್ಲಿ ಅಂತಹ ಯಾವುದೇ ಒಳ್ಳೆಯ ಸಂಗತಿ ಅವರಿಗೆ ಕಾಣಿಸಲಿಲ್ಲ.

ಮೇಲಿನ ಸಭೆಗಳ ದೂತರಲ್ಲಿ ಒಬ್ಬನಿಗೂ ತನ್ನ ಸ್ವಂತ ಜೀವನದಲ್ಲಿ ಅಥವಾ ತನ್ನ ಸಭೆಯಲ್ಲಿ ನಿಜವಾದ ಆತ್ಮಿಕ ಸ್ಥಿತಿ ಹೇಗಿದೆ ಎಂಬುದರ ತಿಳುವಳಿಕೆ ಇರಲಿಲ್ಲ. ಅವರೆಲ್ಲರೂ ಯಾವುದನ್ನೂ ಸೂಕ್ಷ್ಮವಾಗಿ ಪರಿಶೀಲಿಸದೆ ಹಾಯಾಗಿ ಇದ್ದರು, ಏಕೆಂದರೆ ಅವರಿಗೆ ಸ್ವತಃ ತಮ್ಮ ಬಗ್ಗೆ ಬಹಳ ಉತ್ತಮ ಅಭಿಪ್ರಾಯವಿತ್ತು. ಕರ್ತರು ಅವರಿಗೆ ವೈಯಕ್ತಿಕವಾಗಿ ಏನನ್ನು ಹೇಳಲು ಬಯಸಿದ್ದರೋ ಅದನ್ನು ಕೇಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ, ಏಕೆಂದರೆ ಅವರೆಲ್ಲರು ಇತರರಿಗೆ ಬೋಧಿಸಲು ಪ್ರಸಂಗಗಳನ್ನು ಸಿದ್ಧಪಡಿಸುವದರಲ್ಲಿ ಬಿಡುವಿಲ್ಲದೆ ತೊಡಗಿದ್ದರು. ಅವರಿಗೆ ಹೆಚ್ಚಿನ ಆಸಕ್ತಿ ತಮ್ಮ ಸ್ವಂತ ಆತ್ಮಿಕ ಅವಶ್ಯಕತೆಯನ್ನು ತಿಳಿಯುವುದರಲ್ಲಿ ಇರಲಿಲ್ಲ, ಆದರೆ ಬೋಧಿಸುವುದರಲ್ಲಿ ಇತ್ತು. ಒಬ್ಬ ವ್ಯಕ್ತಿಯು ಒಂದು ಸಭೆಯ ದೂತನಾಗಿ ನೇಮಕಗೊಂಡಾಗ, ಸ್ವತಃ ತನಗೆ ತಿದ್ದುವಿಕೆಯ ಅವಶ್ಯಕತೆ ಇಲ್ಲವೆಂಬ ಭಾವನೆ ಆತನಲ್ಲಿ ಸುಲಭವಾಗಿ ಬೇರೂರುತ್ತದೆ.

ಸತ್ಯವೇದವು ಪ್ರಸಂಗಿ 4:13ರಲ್ಲಿ, "ಎಚ್ಚರದ ಮಾತಿಗೆ ಕಿವಿಗೊಡುವುದನ್ನು ಬಿಟ್ಟ ಮೂರ್ಖನಾದ ಒಬ್ಬ ಮುದಿಯರಸನು," ಎಂಬ ಮಾತನ್ನು ಹೇಳುತ್ತದೆ. ಈ ಐದು ಸಭೆಗಳ ದೂತರು ಆ ಮುದಿ ಅರಸನಂತೆ ಮೂರ್ಖರಾಗಿದ್ದರು. ಹಲವಾರು ವರ್ಷಗಳಿಂದ ಅವರು ನುಡಿದ ಮಾತು ಅಪ್ಪಣೆಯಾಗಿ ಪರಿಗಣಿಸಲ್ಪಟ್ಟಿತ್ತು, ಹಾಗಾಗಿ ಈಗ ತಾವು ಯಾವುದೇ ವಿಷಯದಲ್ಲಿ ತಪ್ಪು ಮಾಡುತ್ತೇವೆ ಎಂಬ ಕಲ್ಪನೆಯೂ ಸಹ ಅವರಿಗೆ ಇರಲಿಲ್ಲ!! ಇಂತಹ ಮರುಳುಗೊಂಡ ಮನೋಸ್ಥಿತಿಯಲ್ಲಿ ಅವರಿದ್ದರು. ಅವರು ದೇವರಿಂದ ಹೊಂದಿದ್ದ ಆತ್ಮನ ಅಭಿಷೇಕವು ಜೀವನದಲ್ಲಿ ತಮ್ಮನ್ನು ಬಿಟ್ಟುಹೋಗುವ ಸಾಧ್ಯತೆ ಎಂದಿಗೂ ಬರುವುದಿಲ್ಲವೆಂದು ಅವರು ಯೋಚಿಸಿದ್ದರು. ಅವರ ಅಹಂಕಾರ ಮನೋಭಾವವು ಅವರನ್ನು ಆತ್ಮಿಕವಾಗಿ ಕಿವುಡುಗೊಳಿಸಿತ್ತು.

ಅರಸನಾದ ಸೌಲನು ಉತ್ತಮವಾಗಿ ಆರಂಭಿಸಿ ಬಹಳ ಶೀಘ್ರವೇ ದಾರಿಯಲ್ಲಿ ಎಡವಿ ಬಿದ್ದ ಮೂರ್ಖ ರಾಜರಲ್ಲಿ ಮತ್ತೊಬ್ಬನಾಗಿದ್ದನು. ಅವನು ಶುರುವಿನಲ್ಲಿ ಕರ್ತರಿಂದ ರಾಜನಾಗಿ ಅಭಿಷೇಕಿಸಲ್ಪಟ್ಟಾಗ, "ತನ್ನ ದೃಷ್ಟಿಯಲ್ಲಿ ಅಲ್ಪನಾಗಿದ್ದನು" (1 ಸಮುವೇಲ 15:17). ಆದರೆ ತಾನು ಅಲ್ಪನೆಂಬ ತಗ್ಗಿಸಿದ ಅಭಿಪ್ರಾಯವನ್ನು ಆತನು ಬಹಳ ಕಾಲ ಇರಿಸಿಕೊಳ್ಳಲಿಲ್ಲ. ಮತ್ತು ಇದರಿಂದಾಗಿ ಆತನಲ್ಲಿದ್ದ ದೇವರ ಅಭಿಷೇಕವು ಹೊರಟುಹೋಯಿತು. ಆತನಲ್ಲಿದ್ದ ಅಭಿಷೇಕವು ಎಳೆ ವಯಸ್ಸಿನ ದಾವೀದನಿಗೆ ಸರಿದು ಹೋಯಿತು. ಸೌಲನು ಇದನ್ನು ಅರಿತುಕೊಂಡನು, ಆದರೆ ಆತನು ಈ ನಿಜಸ್ಥಿತಿಯನ್ನು ಒಪ್ಪಿಕೊಂಡು ಸ್ವೀಕರಿಸಲಿಲ್ಲ. ಆತನು ಮೊಂಡುತನದಿಂದ ಸಿಂಹಾಸನದಲ್ಲಿ ಮುಂದುವರಿದನು ಮತ್ತು ದಾವೀದನನ್ನು ಸಾಯಿಸಲು ಪ್ರಯತ್ನಿಸಿದನು. ಕೊನೆಯಲ್ಲಿ, ದೇವರು ಸೌಲನ ಜೀವವನ್ನು ತೆಗೆದರು ಮತ್ತು ದಾವೀದನನ್ನು ಸಿಂಹಾಸನಕ್ಕೆ ಏರಿಸಿದರು.

ಇಂದು ಅನೇಕ ಸಭೆಗಳಲ್ಲಿ ನಾವು ಇದೇ ಪರಿಸ್ಥಿತಿಯನ್ನು ಕಾಣುತ್ತೇವೆ. ಆತ್ಮನ ಅಭಿಷೇಕವು ಹಿಂದೆ ಕರ್ತನ ದೂತರಾಗಿದ್ದ ಅನೇಕರಿಂದ ಹೊರಟುಹೋಗಿದೆ, ಮತ್ತು ಅದು ಅವರ ಸಭೆಗಳಲ್ಲಿ ಕೆಲವು ಎಳೆಯ ವಯಸ್ಸಿನ ಸಹೋದರರಲ್ಲಿ ಬಲವಾಗಿ ನೆಲೆಗೊಂಡಿದೆ. ಆದರೆ "ಮುದುಕರೂ, ಮೂರ್ಖರೂ ಆಗಿರುವ ಅರಸರು" ಇದನ್ನು ಸಹಿಸುವುದಿಲ್ಲ. ಹೀಗಿದ್ದಾಗ ಅವರು ಏನು ಮಾಡುತ್ತಾರೆ? ಅವರ ಅಸೂಯೆ ಮತ್ತು ಅಧಿಕಾರವನ್ನು ಉಳಿಸಿಕೊಳ್ಳುವ ಸ್ವೇಚ್ಛೆಯು ಅವರನ್ನು ಪ್ರಚೋದಿಸಿ, ಆ ಕಿರಿಯ ಸಹೋದರರನ್ನು ಹೇಗಾದರೂ ತಡೆಹಿಡಿಯುವಂತೆ ಮಾಡುತ್ತದೆ. ಆಸ್ಯ ಪ್ರಾಂತ್ಯದ ಬಿದ್ದುಹೋದ ಆ ಐದು ಸಭೆಗಳಲ್ಲೂ ಬಹುಶಃ ಇಂತಹದೇ ಸಂಗತಿಗಳು ನಡೆದಿರಬದುದು. ಹಾಗಾಗಿ ಕರ್ತರು ಆ ದೂತರಿಗೆ ಒಂದು ಕೊನೆಯ ಎಚ್ಚರಿಕೆಯನ್ನು ಕೊಟ್ಟರು.

ದೇವರಲ್ಲಿ ಪಕ್ಷಪಾತವಿಲ್ಲ ಮತ್ತು ಅವರಿಗೆ ವಿಶೇಷವಾಗಿ ಅಚ್ಚುಮೆಚ್ಚಿನವರು ಯಾರೂ ಇರುವುದಿಲ್ಲ. ಅಪೊಸ್ತಲನಾದ ಪೌಲನೂ ಸಹ ತನ್ನ ಆತ್ಮಿಕ ಓಟದಲ್ಲಿ, ಸಾಧನೆ ಮಾಡಿ ಶಿಸ್ತಿನ ಜೀವನವನ್ನು ಜೀವಿಸದೆ ಹೋದರೆ, ತಾನು ಜಾರಿಬಿದ್ದು ಅಯೋಗ್ಯನು ಎನ್ನಿಸಿಕೊಂಡೇನು ಎಂಬ ಭಯವನ್ನು ಹೊಂದಿದ್ದನು (1 ಕೊರಿಂಥ. 9:27).

ಪೌಲನು ತಿಮೊಥೆಯನಿಗೆ ಹೀಗೆ ಸಲಹೆ ಮಾಡಿದನು, "ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು; ಹೀಗಿರುವದರಿಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ" (1 ತಿಮೊ. 4:16). ತಿಮೊಥೆಯನು ಮೊದಲು ತನ್ನ ಆತ್ಮಿಕ ಜೀವವನ್ನು ರಕ್ಷಿಸಿಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸಬೇಕಿತ್ತು. ಆ ಮೂಲಕವಾಗಿ ಆತನು ತನ್ನ ಸ್ವಂತ ಜೀವನದಲ್ಲಿ ಕ್ರಿಸ್ತ-ವಿರೋಧಿ ಪ್ರವೃತ್ತಿಯಿಂದ ಬಿಡುಗಡೆ ಹೊಂದುತ್ತಿದ್ದನು ಮತ್ತು ಇತರರನ್ನು ಆ ರಕ್ಷಣೆಗೆ ನಡೆಸುವ ಸಾಮರ್ಥ್ಯವನ್ನು ಸಹ ಪಡೆಯುತ್ತಿದನು. ಕರ್ತರು ತನ್ನ ಪ್ರತಿಯೊಂದು ಸಭೆಯ ಎಲ್ಲಾ ದೂತರಿಗಾಗಿ ನಿಯಮಿಸಿರುವ ಮಾರ್ಗ ಇದೇ ಆಗಿದೆ.

ಪೌಲನು ಎಫೆಸದ ಸಭೆಯ ಹಿರಿಯರಿಗೂ ಸಹ ಮೊದಲು ತಮ್ಮ ವಿಷಯದಲ್ಲಿ, ಅದರ ನಂತರ ತಮ್ಮ ಹಿಂಡಿನ ವಿಷಯದಲ್ಲಿ ಎಚ್ಚರವಾಗಿರಲು ಹೇಳಿದನು (ಅ. ಕೃ. 20:28).

ಕರ್ತರ ಪ್ರತಿಯೊಬ್ಬ ದೂತನ ಜವಾಬ್ದಾರಿ ಇದಾಗಿದೆ - ಮೊದಲು ತನ್ನ ವೈಯಕ್ತಿಕ ಜೀವನವನ್ನು ಶುಚಿಯಾಗಿ, ಪವಿತ್ರಾತ್ಮನ ಅಭಿಷೇಕಕ್ಕೆ ಯಾವಾಗಲೂ ಪಾತ್ರವಾಗುವಂತೆ ಇರಿಸಿಕೊಳ್ಳುವುದು. "ನಿನ್ನ ಬಟ್ಟೆಗಳು ಬೆಳ್ಳಗಿರಲಿ; ತಲೆಗೆ ತೈಲದ ಕೊರತೆ ಇಲ್ಲದಿರಲಿ" (ಪ್ರಸಂಗಿ 9:8).

ಕರ್ತರು ಈ ದೂತರೊಂದಿಗೆ ನೇರವಾಗಿ ಮಾತನಾಡಲು ಬಯಸಿದರು. ಆದರೆ ಆ ದೂತರ ಕಿವಿಗಳು ಮುಚ್ಚಿದ್ದವು. ಅಂತಿಮವಾಗಿ ಅವರು ಒಬ್ಬ ಅಪೊಸ್ತಲನ ಮೂಲಕ ಅವರೊಂದಿಗೆ ಮಾತನಾಡಬೇಕಾಯಿತು. ಕರ್ತರ ಧ್ವನಿಯನ್ನು ಸ್ಪಷ್ಟವಾಗಿ ಕೇಳುವಂತಹ ಒಬ್ಬ ಯೋಹಾನನು ಕಡಿಮೆ ಪಕ್ಷ ಅವರಿಗೆ ಸಿಕ್ಕಿದ್ದಕ್ಕಾಗಿ ದೇವರಿಗೆ ಸ್ತೋತ್ರವಾಗಲಿ.

ಆ ಐದು ಸಭೆಗಳ ದೂತರಲ್ಲಿ ಲೋಪ-ದೋಷಗಳು ಇದ್ದಾಗ್ಯೂ, ಕರ್ತರು ಅವರ ಬಗ್ಗೆ ನಿರೀಕ್ಷೆಯನ್ನು ಇರಿಸಿಕೊಂಡಿದ್ದರು - ಏಕೆಂದರೆ ಅವರು ಅವರೆಲ್ಲರನ್ನು ತನ್ನ ಬಲಗೈಯಲ್ಲಿ ಹಿಡಿದುಕೊಂಡಿದ್ದರು (ಪ್ರಕಟನೆ 2:1). ಅವರು ಪಶ್ಚಾತಾಪ ಪಟ್ಟರೆ, ಮತ್ತೊಮ್ಮೆ ಮಹಿಮೆಯುಳ್ಳ ಸಹೋದರರು ಆಗುವ ಸಾಧ್ಯತೆ ಇತ್ತು. ಜೊತೆಗೆ ಅವರ ಸಭೆಗಳು ಕರ್ತನ ತೇಜಸ್ಸಿನಿಂದ ಪ್ರಕಾಶಗೊಂಡು ಮತ್ತೊಮ್ಮೆ ನಿಲ್ಲಬಹುದಾಗಿತ್ತು. ಆದರೆ ಅವರು ಈ ಕೊನೆಯ ಎಚ್ಚರಿಕೆಯನ್ನು ಅಸಡ್ಡೆ ಮಾಡಿದರೆ, ಆಗ ಕರ್ತರು ಅವರನ್ನು ಕಡಿದು ಹಾಕಲಿದ್ದರು.

ಈ ಹಿಂದಿನ 20 ಶತಮಾನಗಳ ಕ್ರೈಸ್ತ ಸಭೆಗಳ ಇತಿಹಾಸದಲ್ಲಿ, ಇದೇ ಪ್ರಕ್ರಿಯೆಯು ಈ ಲೋಕದ ಎಲ್ಲೆಡೆಯೂ ಮರುಕಳಿಸಿದ್ದು ಕಂಡುಬರುತ್ತದೆ. ಇದರಿಂದಾಗಿ ಇಂದು ಪ್ರತಿಯೊಂದು ಸ್ಥಳದಲ್ಲಿ ಹಲವಾರು ಬಾಬೆಲಿನ "ಸಭೆಗಳು" ನಮಗೆ ಕಂಡುಬರುತ್ತವೆ. ಈ ಪರಿಸ್ಥಿತಿಯು ಇನ್ನೂ ಹದಗೆಟ್ಟು ಒಂದು ಪಟ್ಟಣದಲ್ಲಿ ದೇವರ ದೀಪಸ್ತಂಭವು ಇಲ್ಲದಂತಾಗುವ ಹಂತಕ್ಕೆ ತಲುಪಬಹುದು. ’ಕ್ರೈಸ್ತಸಭೆ’ಯೆಂದು ಕರೆಯಲ್ಪಡುವ ಪ್ರತಿಯೊಂದು ಬಾಬೆಲಿನ ಸಭೆ ಆಗಬಹುದು.

ಕರ್ತರು ಒಂದು ಸಭೆಯಲ್ಲಿ ಏನಿರಬೇಕೆಂದು ಬಯಸುತ್ತಾರೆ? ಒಂದು ಸಭೆಯು ಹೇಗಿರುತ್ತದೆಂದರೆ,
(i) ಅದು ಕ್ರಿಸ್ತನ ಭಯಭಕ್ತಿಯಿಂದ ಮತ್ತು ಒಬ್ಬರಿಗೊಬ್ಬರ ನಡುವೆ ಇರುವ ಪ್ರೀತಿಯಿಂದ ಉರಿಯುತ್ತದೆ;
(ii) ಅದು ದೇವರಲ್ಲಿ ಸಜೀವ ನಂಬಿಕೆಯನ್ನು ಬೋಧಿಸುತ್ತದೆ;
(iii) ಅದು ದೇವರ ಪ್ರತಿಯೊಂದು ಆಜ್ಞೆಯ ಸಂಪೂರ್ಣ ವಿಧೇಯತೆಗೆ ಒತ್ತು ನೀಡುತ್ತದೆ;
(iv) ಅದು ಯೇಸುವಿನ ಸಾಕ್ಷಿಯನ್ನು ನಾಚಿಕೊಳ್ಳದೆ ಸಾರುತ್ತದೆ;
(v) ಅದು ಆತ್ಮಿಕ ಅಹಂಕಾರ, ಕಪಟತನ ಮತ್ತು ಲೌಕಿಕತೆಯನ್ನು ವಿರೋಧಿಸಿ ನಿಲ್ಲುತ್ತದೆ;
(vi) ಅದು ಕಪಟ ಅಪೊಸ್ತಲರು, ಕಪಟ ಉಪದೇಶಕರು ಮತ್ತು ಸುಳ್ಳು ವರಗಳನ್ನು ಬಯಲು ಮಾಡುತ್ತದೆ;
(vii) ಅದು ನಮ್ಮ ಮಾಂಸಭಾವವನ್ನು ಶಿಲುಬೆಗೆ ಏರಿಸುವುದನ್ನು ನಿರಂತರವಾಗಿ ಬೋಧಿಸುತ್ತದೆ;
(viii) ಅದು ಎಲ್ಲಾ ವಿಶ್ವಾಸಿಗಳು ಎಡೆಬಿಡದೆ ತಮ್ಮನ್ನೇ ನ್ಯಾಯವಿಚಾರಣೆ ಮಾಡಿಕೊಳ್ಳುವಂತೆ; ಪ್ರೋತ್ಸಾಹಿಸುತ್ತದೆ;
(ix) ಅದು ಯೇಸುವು ಜಯ ಹೊಂದಿದಂತೆ ವಿಶ್ವಾಸಿಗಳು ತಾವೂ ಜಯಹೊಂದುವಂತೆ ಸವಾಲು ಒಡ್ಡುತ್ತದೆ.

ಕರ್ತರು ತಮ್ಮ ಹೆಸರಿನ ಇಂತಹ ಒಂದು ಸಾಕ್ಷಿಯನ್ನು ಪ್ರತಿಯೊಂದು ಜಾಗದಲ್ಲಿ ಬಯಸುತ್ತಾರೆ.