WFTW Body: 

ಕರ್ತನ ದಾರಿಯನ್ನು ಸಿದ್ಧಮಾಡುವುದಕ್ಕಾಗಿ ನಾಲ್ಕು ಸಂಗತಿಗಳನ್ನು ಮಾಡುವಂತೆ ದೇವರು ತನ್ನನ್ನು ಕಳುಹಿಸಿದ್ದಾಗಿ ಸ್ನಾನಿಕ ಯೋಹಾನನು ಹೇಳಿದನು (ಲೂಕನು 3:5):

1) ತಗ್ಗು ಪ್ರದೇಶಗಳನ್ನು ಮೇಲೆತ್ತಲಿಕ್ಕಾಗಿ; 2) ಬೆಟ್ಟಗುಡ್ಡಗಳನ್ನು ತಗ್ಗಿಸಲಿಕ್ಕಾಗಿ; 3) ಡೊಂಕಾಗಿರುವುದನ್ನು ನೆಟ್ಟಗಾಗಿಸುವುದಕ್ಕಾಗಿ; ಮತ್ತು 4) ಕೊರಕಲು ದಾರಿಗಳನ್ನು ಸಮತಟ್ಟಾಗಿಸಲಿಕ್ಕಾಗಿ.

ನಮ್ಮ ಜೀವಿತಗಳಲ್ಲೂ ಪವಿತ್ರಾತ್ಮನು ಇವನ್ನೇ ಮಾಡಬಯಸುತ್ತಾನೆ: 1) ನಮ್ಮ ಮೇಲೆ ಅಧಿಕಾರ ಚಲಾಯಿಸುವ ಲೌಕಿಕ ವಿಷಯಗಳಾದ ಕಾಮುಕ ಸ್ವಭಾವ, ಹಣದಾಸೆ, ಮಾನವನ ಗೌರವ-ಸಮ್ಮಾನಕ್ಕಾಗಿ ಸೆಣೆಸಾಟ, ಇವೇ ಮುಂತಾದ ತಗ್ಗು ಪ್ರದೇಶಗಳನ್ನು ಆತನು ಮೇಲೆತ್ತಬೇಕು;

2) ನಮ್ಮ ಜೀವಿತದಲ್ಲಿನ ಪರ್ವತಗಳಾದ ಹೆಮ್ಮೆ, ಅಹಂಕಾರ ಮತ್ತು ಕಪಟತನ (ನಮ್ಮ ಸಾಮರ್ಥ್ಯವೇ ಇದಕ್ಕೆ ಮೂಲಕಾರಣ), ಮತ್ತು ಚಿಕ್ಕ ಗುಡ್ಡ-ದಿಣ್ಣೆಗಳಾದ ಹಿರಿಮೆಯ (ನಾವು ಒಂದು ಕೆಲಸವನ್ನು ಚೆನ್ನಾಗಿ ಮಾಡಿದಾಗ ನಮ್ಮಲ್ಲಿ ಉಂಟಾಗುವ) ಮನೋಭಾವಗಳನ್ನು ಸಹ ಆತನು ಕೆಡವಿ ಬೀಳಿಸಬೇಕು;

3) ನಮ್ಮೊಳಗಿನ ಎಲ್ಲಾ ಮೋಸ ಮತ್ತು ವಂಚನೆಗಳನ್ನು ಆತನು ತೆಗೆದು ಹಾಕಬೇಕು;

4) ನಮ್ಮ ಕಠಿಣ ಸ್ವಭಾವ, ನಿರ್ದಯತೆ ಮತ್ತು ಒರಟುತನ ಇತ್ಯಾದಿಗಳನ್ನು ಆತನು ಮೆತ್ತಗಾಗಿಸಬೇಕು.

ಇದರ ನಂತರ ನಮಗಿರುವ ವಾಗ್ದಾನವೇನೆಂದರೆ, "ದೇವರು ನಮ್ಮ ಜೀವನದಲ್ಲಿ ಸಿದ್ಧಪಡಿಸಿದ ರಕ್ಷಣೆಯನ್ನು ಇತರ ಮನುಷ್ಯರೆಲ್ಲರೂ ಕಾಣುವರು" (ಲೂಕನು 3:6); ಅದಲ್ಲದೆ, ದೇವರ ಮಹಿಮೆಯನ್ನು ನಾವು ನಮ್ಮ ಬದಲಾದ ಶರೀರಭಾವದ ಎಲ್ಲಾ ಅಂಶಗಳಲ್ಲೂ ಪ್ರಕಟಿಸುತ್ತೇವೆ (ಯೆಶಾಯನು 40:3-5 ಈ ವಚನಗಳನ್ನು ಹೋಲಿಸಿ ನೋಡಿರಿ). ಕಾಡಿನಲ್ಲಿ ಹರಡುವ ಬೆಂಕಿಯಂತೆ, ದೇವರ ಮಹಿಮೆಯು ನಮ್ಮ ಬದುಕಿನಲ್ಲಿ ಸ್ವಲ್ಪ ಸ್ವಲ್ಪವಾಗಿ, ಹಂತ ಹಂತವಾಗಿ ಹರಡುತ್ತಾ, ನಮ್ಮ ಶರೀರಭಾವವನ್ನು ಸಂಪೂರ್ಣವಾಗಿ ನಾಶಗೊಳಿಸಬೇಕು, ಎಂಬುದು ದೇವರ ಇಚ್ಛೆಯಾಗಿದೆ.

ಯೆರೆಮೀಯನು 48:10'ರಲ್ಲಿ ಹೀಗೆ ಹೇಳಲ್ಪಟ್ಟಿದೆ: "ಕರ್ತನು ನೇಮಿಸಿದ ಕೆಲಸದಲ್ಲಿ (ನಮ್ಮ ಶರೀರ ಸಂಬಂಧದ ಎಲ್ಲಾ ಕ್ಷೇತ್ರಗಳಲ್ಲಿ ಯೇಸುವನ್ನು ಕರ್ತನನ್ನಾಗಿ ಮಾಡುವುದರಲ್ಲಿ) ಆಲಸ್ಯಗಾರನು ಶಾಪಗ್ರಸ್ತನಾಗಲಿ, ತನ್ನ ಕತ್ತಿಯು ರಕ್ತವನ್ನು ಸುರಿಸದಂತೆ ತಡೆಯುವವನಿಗೆ (ಅಂದರೆ, ನಮ್ಮ ಮಾಂಸದ ಆಸೆಗಳೊಂದಿಗೆ ನಿರ್ದಯವಾಗಿ ವ್ಯವಹರಿಸದೆ, ಮೃದುವಾಗಿ ವ್ಯವಹರಿಸುವುದು) ಶಾಪ ತಗಲಲಿ ." ಮುಂದಿನ ವಚನವು ತಿಳಿಸುವ ಪ್ರಕಾರ, ಮೋವಾಬ ದೇಶವು ತನ್ನಲ್ಲಿರುವ ಹೊಲಸಿನಿಂದ ಬೇರ್ಪಡಲಿಕ್ಕಾಗಿ "ಪಾತ್ರೆಯಿಂದ ಪಾತ್ರೆಗೆ ಹೊಯ್ಯಲ್ಪಡಲಿಲ್ಲ, ಹಾಗಾಗಿ ಅದರ ದುರ್ವಾಸನೆ ಅದರಲ್ಲೇ ಉಳಿದಿದೆ."

ಜಾನ್ ಫಾಲೆಟ್ ಎಂಬ ಬರಹಗಾರರ "ಪಾತ್ರೆಯಿಂದ ಪಾತ್ರೆಗೆ ಹೊಯ್ಯಲ್ಪಡುವುದು" ಎಂಬ ಶೀರ್ಷಿಕೆಯ ಒಂದು ಲೇಖನದಲ್ಲಿ, ದೇವರು ನಮ್ಮಲ್ಲಿರುವ ಕಸ-ಕಲ್ಮಶವನ್ನು ತೆಗೆದುಹಾಕುವ ಉದ್ದೇಶದಿಂದ, ನಮ್ಮನ್ನು ಹೇಗೆ ಹಲವಾರು ಪಾತ್ರೆಗಳಲ್ಲಿ ಸುರಿಸುತ್ತಾರೆಂದು ವಿವರಿಸಿದ್ದಾರೆ - ತಪ್ಪು ತಿಳುವಳಿಕೆಯ ಪಾತ್ರೆ, ಅಪಹಾಸ್ಯದ ಪಾತ್ರೆ, ಸುಳ್ಳು ಆರೋಪ ಮತ್ತು ಅಂಧಕಾರದ ಕಠಿಣ ಅನುಭವದ ಪಾತ್ರೆ ಇತ್ಯಾದಿ. ನಮ್ಮ ಜೀವಿತದಲ್ಲಿ ದ್ರಾಕ್ಷಾರಸವು ಶಾಂತವಾಗಿ ಉಳಿದರೆ ("ವಿಶ್ರಾಂತಿಯಲ್ಲಿ ಉಳಿಯುವುದು"), ಮತ್ತು ಇದರಿಂದಾಗಿ ದ್ರಾಕ್ಷಾರಸದ ಮಡ್ಡಿಯು ತಳಭಾಗಕ್ಕೆ ಸೇರಿಕೊಂಡು, ನಮ್ಮ ಜೀವನದ ತ್ಯಾಜ್ಯ ವಸ್ತುಗಳನ್ನು ಇವೆಲ್ಲಾ ಪಾತ್ರೆಗಳ ಮೂಲಕ ಒಂದು ಅದ್ಭುತಕರವಾದ ರೀತಿಯಲ್ಲಿ ತೆಗೆದುಹಾಕಲು ಸಾಧ್ಯವಾಗುತ್ತದೆ. ಒಂದು ಪಾತ್ರೆಯಲ್ಲಿ ಮಡ್ಡಿಯು (ತ್ಯಾಜ್ಯ ವಸ್ತು) ಕೆಳಭಾಗಕ್ಕೆ ಸೇರಿಕೊಂಡರೆ, ದೇವರು ನಮ್ಮನ್ನು ಇನ್ನೊಂದು ಪಾತ್ರೆಗೆ ಸುರಿಯುತ್ತಾರೆ. ಆಗ ನಮ್ಮ ಸುವಾಸನೆಯು ಹೆಚ್ಚುತ್ತಾ ಹೋಗಿ ನಾವು ಮಧುರ ಸುವಾಸನೆಯನ್ನು ಬೀರುತ್ತೇವೆ. ಆದರೆ ನಮ್ಮ ಸ್ವಂತ ಕಾರ್ಯಗಳನ್ನು ತ್ಯಜಿಸಿ ಶಾಂತರಾಗಿ ಇರುವುದನ್ನು ನಾವು ಕಲಿಯಬೇಕು - ನಮ್ಮನ್ನು ನಾವು ಸಮರ್ಥಿಸಿಕೊಳ್ಳುವುದು ಅಥವಾ ನಾವೇ ಸರಿಯೆಂದು ವಾದಿಸುವುದನ್ನು ಎಂದಿಗೂ ಮಾಡಬಾರದು. ಇಲ್ಲವಾದರೆ ಪದೇ ಪದೇ ಕದಡಿಸಿದ ದ್ರಾಕ್ಷಾರಸವು ತ್ಯಾಜ್ಯವಸ್ತುಗಳಿಂದ ಬೇರ್ಪಡುವುದಿಲ್ಲ. ಅನೇಕ ಬಾರಿ ದೇವಜನರು ವ್ಯರ್ಥ ಪ್ರಯಾಸದಿಂದ ಸಂಕಟಕ್ಕೆ ಒಳಗಾಗುತ್ತಾರೆ, ಏಕೆಂದರೆ ಅವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾರೆ ಮತ್ತು ತಾವು ಮಾಡಬೇಕೆಂದು ಉದ್ದೇಶಿಸಿದ ವಿಷಯಗಳನ್ನು ಸುಮ್ಮನೆ ದೇವರ ಮುಂದೆ ಇರಿಸುವುದಿಲ್ಲ ಮತ್ತು ಎಲ್ಲವನ್ನೂ ದೇವರ ಕೈಗೆ ಒಪ್ಪಿಸಿ ಕೊಡುವುದಿಲ್ಲ.

ಜೆಕರ್ಯನು 2:13'ರಲ್ಲಿ ನಾವು ನೋಡುವಂತೆ, "ನರಪ್ರಾಣಿಗಳೇ, ಕರ್ತನ ಮುಂದೆ ನೀವೆಲ್ಲಾ ಮೌನವಾಗಿರಿ, ಏಕೆಂದರೆ ಕರ್ತನು ತನ್ನ ಪರಿಶುದ್ಧ ನಿವಾಸದಿಂದ ಎದ್ದು ಬಂದು ನಮ್ಮ ಮಧ್ಯದಲ್ಲಿ ವಾಸಿಸುತ್ತಾನೆ" (’ಜೆಕರ್ಯನು 2:10' ನೋಡಿರಿ). ಸದಾಕಾಲವೂ ನಮ್ಮೊಳಗೆ ಇಂತಹ ವಿಶ್ರಾಂತಿ ಇರಬೇಕು.