(ಸಭಾ ಹಿರಿಯರು, ನ್ಯೂ ಕವೆನೆಂಟ್ ಕ್ರಿಶ್ಚಿಯನ್ ಫ಼ೆಲೋಷಿಪ್, ಕ್ಯಾಲಿಫ಼ೋರ್ನಿಯಾ, USA)
ಕೆಲವೊಮ್ಮೆ ಜನರು ನಮ್ಮ ಮೇಲೆ ಬಹಳ ಸಿಟ್ಟಾಗುವಂತ ಸಂದರ್ಭಗಳು ಎದುರಾಗುತ್ತವೆ. ನಾವು ಇದನ್ನು ನಮ್ಮ ಬಾಲ್ಯದಲ್ಲೇ ಅನುಭವಿಸಿದ್ದೇವೆ. ಉದಾಹರಣೆಗೆ, ಮನೆಯಲ್ಲಿ ಅಣ್ಣ ತಮ್ಮಂದಿರ ನಡುವೆ ಜಗಳಗಳು ನಡೆಯುತ್ತವೆ, ಶಾಲೆಯಲ್ಲಿ ಪುಂಡರು ಇರುತ್ತಾರೆ, ಅಥವಾ ಕ್ರೂರ ಗೆಳೆಯರು ಇರುತ್ತಾರೆ. ನಾವು ಬೆಳೆದು ಪ್ರಾಯಸ್ಥರಾದಾಗ ಕೆಲವೊಮ್ಮೆ ನಮ್ಮ ಕಛೇರಿಯಲ್ಲಿ ಜೊತೆಯ ಕೆಲಸಗಾರರು ಅಥವಾ ಮನೆಯಲ್ಲಿ ಕುಟುಂಬದ ಸದಸ್ಯರು ನಮ್ಮ ಮೇಲೆ ಕೋಪಗೊಂಡು ತಿಂಗಳುಗಟ್ಟಲೆ ಅಥವಾ ವರ್ಷಗಟ್ಟಲೆಯೂ ನಮ್ಮೊಂದಿಗೆ ಮಾತನಾಡದೇ ಇರಬಹುದು. ಕೆಲವೊಮ್ಮೆ ನಾವು ತಪ್ಪು ಮಾಡಿರಬಹುದು, ಅದು ನಮ್ಮ ಲೋಪ ಅಥವಾ ನಾವು ಅವರ ವಿರುದ್ಧವಾಗಿ ಪಾಪ ಮಾಡಿರಬಹುದು. ಅಥವಾ ಇದರಲ್ಲಿ ನಮ್ಮ ದೋಷವೇನೂ ಇಲ್ಲದಿರಬಹುದು, ಹಾಗಿದ್ದರೂ ಏನೋ ನಡೆದದ್ದರಿಂದ ಇತರರು ನಮ್ಮ ಮೇಲೆ ಸಿಟ್ಟುಗೊಂಡಿರಬಹುದು.
ಹೀಗೆ ನಡೆದಾಗ ನಾವೂ ಸಹ ಸಿಟ್ಟಾಗಬಹುದು, ಅಥವಾ ಬೇಸರಗೊಳ್ಳಬಹುದು ಅಥವಾ ಅವರು ನಮ್ಮನ್ನು ಕ್ಷಮಿಸುತ್ತಿಲ್ಲವೆಂದು ಚಿಂತಿಸಬಹುದು, ಅಥವಾ ಅವರು ನಮ್ಮೊಂದಿಗೆ ಸಿಟ್ಟಾಗಿ ಬಹಳ ತಪ್ಪಾದ ರೀತಿಯಲ್ಲಿ ಅದೈವಿಕತೆಯಿಂದ ನಡೆದಿದ್ದಾರೆ ಎಂಬ ಭಾವನೆಯಿಂದ ನಾವು ಅವರನ್ನು ಕೀಳಾಗಿ ನೋಡಬಹುದು. ಈ ಮೇಲಿನ ಯಾವುದೂ ದೇವರ ಚಿತ್ತವಲ್ಲ.
ಯಾರಾದರೂ ನಮ್ಮ ಮೇಲೆ ಸಿಟ್ಟಾದಾಗ ನಾವು ಏನು ಮಾಡಬೇಕು?
ನಾನು ನಂಬುತ್ತೇನೆ ಮೊದಲು ಮಾಡಬೇಕಾದ ಕಾರ್ಯ ನಮ್ಮನ್ನು ನಾವು ತಗ್ಗಿಸಿಕೊಳ್ಳುವುದು ಮತ್ತು ನಮ್ಮನ್ನು ನಾವು ತಗ್ಗಿಸಿಕೊಳ್ಳುವುದರ ಭಾಗವೇನೆಂದರೆ : ಸಂಬಂಧವನ್ನು ಸರಿಪಡಿಸಿಕೊಳ್ಳುವಲ್ಲಿ ಮೊದಲ ಹೆಜ್ಜೆಯನ್ನು ನಾವು ಇಡುವಂತದ್ದಾಗಿದೆ.
ವಿವಾದವು ತಲೆದೋರಿದಾಗ, ಅಲ್ಲಿ ಅತಿ ಹೆಚ್ಚು ದೈವಿಕನಾದವನು ಯಾರೆಂದರೆ, ಅದು ಕ್ಷಮೆ ಕೇಳುವಂತವನು ಮತ್ತು ಸಂಬಂಧವನ್ನು ಸರಿಪಡಿಸಲು ಪ್ರಯತ್ನಿಸುವವನು. ನಾನು ಯೇಸುವನ್ನು ಹಿಂಬಾಲಿಸಲು ಬಯಸುವುದಾದರೆ, ಸಂಬಂಧವನ್ನು ಸರಿಪಡಿಸಲಿಕ್ಕಾಗಿ ನಾನೇ ಮೊದಲು ತವಕಿಸಬೇಕು.
’ಮತ್ತಾಯನು 5:23-24'ರಲ್ಲಿ ಯೇಸುವು ತಿಳಿಸಿದ್ದು ಏನೆಂದರೆ, ನನ್ನ ಸಹೋದರನು ನಮ್ಮ ಮೇಲೆ ಸಿಟ್ಟಾಗಿದ್ದರೆ, ನಾವು ದೇವರ ಸನ್ನಿಧಿಗೆ ಹೋಗುವುದಕ್ಕೆ ಮೊದಲು ಆ ಸಹೋದರನ ಬಳಿಗೆ ಹೋಗಿ ಆತನೊಂದಿಗೆ ರಾಜಿ ಮಾಡಿಕೊಂಡು ಸಮಾಧಾನವನ್ನು ಉಂಟುಮಾಡಲು ಪ್ರಯತ್ನಿಸಬೇಕು. ಕ್ಷಮೆಯನ್ನು ಕೇಳಿರಿ, ಸರಿಪಡಿಸಿರಿ, ಸಮಾಧಾನಕ್ಕಾಗಿ ಪ್ರಯತ್ನಿಸಿರಿ - ಬಹುಶಃ ತಪ್ಪು ನಮ್ಮದೇ ಇರಬಹುದು. ನಮ್ಮ ತಪ್ಪು ಇರದಿದ್ದರೂ ನಾವು ಸಂಬಂಧವನ್ನು ಸರಿಪಡಿಸಿಕೊಳ್ಳುವುದಕ್ಕೆ ಪ್ರಯತ್ನಿಸಬಹುದು. ನಮ್ಮ ತಪ್ಪಿಲ್ಲದಿದ್ದರೂ ನಾವು ಕ್ಷಮೆ ಕೇಳಬೇಕಾಗಬಹುದು! ಯೇಸುವಿನ ಹೃದಯ ಹೀಗಿತ್ತೆಂದು ನಾನು ನಂಬುತ್ತೇನೆ - ಅವರು ತಾನು ಮಾಡದಿದ್ದ ಅನೇಕ ಪಾಪಗಳಿಗಾಗಿ ಪ್ರಾಣವನ್ನು ನೀಡಿದರು - ಸಮಾಧಾನವನ್ನು ಹುಡುಕಿರಿ, ನಾವು ನಮ್ಮ ಸ್ವಾರ್ಥಕ್ಕೆ ಸಾಯಬೇಕು ಎಂದರೂ ಸಹ. ಹೀಗೆ ಕ್ಷಮೆ ಕೇಳುವಾಗ ಆ ಮತ್ತೊಬ್ಬ ವ್ಯಕ್ತಿಯು ಅದಕ್ಕೆ ಒಪ್ಪುತ್ತಾನೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ, ಆದರೆ ಇಲ್ಲಿ ಪ್ರಶ್ನೆ ಏನೆಂದರೆ, ಸಮಾಧಾನವನ್ನು ತರಲಿಕ್ಕಾಗಿ ನಾವು ನಮ್ಮ ಕೈಲಾದ ಪ್ರತಿಯೊಂದನ್ನೂ ಮಾಡಿದ್ದೇವೆಯೇ?
’ರೋಮಾಪುರದವರಿಗೆ 12:18'ರಲ್ಲಿ ಹೀಗೆ ಹೇಳಲಾಗಿದೆ - "ನಿಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ."
ನನ್ನನ್ನು ನಾನು ತಗ್ಗಿಸಿಕೊಳ್ಳುವಂತದ್ದರ ಭಾಗದ ಮತ್ತೊಂದು ಸಂಗತಿ ನಾನು ನೋಡಿದ್ದೇನೆಂದರೆ, ನಾನು ದೇವರಿಂದ ಎಷ್ಟು ಕ್ಷಮಿಸಲ್ಪಟ್ಟಿದ್ದೇನೆ, ಮತ್ತು ಪ್ರತಿ ಕ್ಷಣ ಆತನು ಎಷ್ಟು ಕರುಣೆಯನ್ನು ನನಗೆ ಸುರಿಸುತ್ತಿದ್ದಾನೆ ಎಂದು ನೆನಪಿಸಿಕೊಳ್ಳುತ್ತೇನೆ.
ಉದಾಹರಣೆಗೆ, ನನ್ನ ಮಗುವು ಯಾವುದೋ ವಿಷಯದಲ್ಲಿ ನನಗೆ ಅವಿಧೇಯನಾದನೆಂದು ನಾನು ಕೋಪಿಸಿಕೊಂಡಾಗ, ನಾನು ವಯಸ್ಸಿನಲ್ಲಿ ದೊಡ್ಡವನು ಮತ್ತು ಹೆಚ್ಚು ತಿಳುವಳಿಕೆ ಉಳ್ಳವನೆಂದು ನಾನು ಜ್ಞಾಪಿಸಿಕೊಂಡರೆ, ಆ ಮಗುವಿನ ಅವಿಧೇಯತೆಗಿಂತ ನನ್ನ ಕೋಪವು ಹೆಚ್ಚು ಗಂಭೀರವಾದದ್ದೆಂಬ ತಿಳುವಳಿಕೆ ನನ್ನಲ್ಲಿ ಉಂಟಾಗುತ್ತದೆ! ದೇವರು ನನಗೆ ತನ್ನ ಪ್ರೀತಿ ಮತ್ತು ತನ್ನ ಕರುಣೆ ಮತ್ತು ತನ್ನ ಕ್ಷಮೆ ಎಷ್ಟು ಅಪಾರವಾಗಿವೆಯೆಂದು ತೋರಿಸಿದ್ದಾರೆ, ಹಾಗಿದ್ದರೂ ನಾನು ಅವರಿಗೆ ವಿಧೇಯನಾಗಿಲ್ಲವೆಂದು ನನಗೆ ಚೆನ್ನಾಗಿ ತಿಳಿದಿದೆ .... ಹಾಗಾಗಿ ನಾನು ನನ್ನ ಮಕ್ಕಳ ಅವಿಧೇಯತೆಯ ಬಗ್ಗೆ ಬಹಳ ಕೋಪಗೊಂಡಾಗ, ಅವರಿಗಿಂತಲೂ ಹೆಚ್ಚಾಗಿ ನನಗೆ ದೇವರ ಕೃಪೆ ಮತ್ತು ಕರುಣೆ ಅವಶ್ಯವಿದೆ ಎಂಬುದನ್ನು ನೆನಪಿಸಿಕೊಂಡು ನಾನು ಎಚ್ಚರಗೊಳ್ಳುತ್ತೇನೆ.
ನಾವು ಇತರ ವ್ಯಕ್ತಿಯೊಂದಿಗೆ ಸಮಾಧಾನಕ್ಕೆ ಸಂಬಂಧಿಸಿದಂತೆ ಎಲ್ಲವನ್ನು ಮಾಡಿದ್ದರೂ, ಅವರು ನಮ್ಮೊಂದಿಗೆ ಇನ್ನೂ ಸಹ ಸಿಟ್ಟಾಗಿದ್ದರೆ, ಅದು ನಮ್ಮಲ್ಲಿ ಚಿಂತೆ, ನಿರಾಸೆ ಅಥವಾ ನಾವು ಅವರ ಮೇಲೆ ಕೋಪಿಸಿಕೊಳ್ಳುವ ಶೋಧನೆಗೆ ಒಳಗಾಗಬಹುದಾದ ಸಾಧ್ಯತೆ ಇದೆ. ಕೆಲವೊಮ್ಮೆ ಇತರರು ನನ್ನನ್ನು ತಕ್ಷಣವೇ ಕ್ಷಮಿಸದಿದ್ದಾಗ ನಾನು ಅದರಿಂದಾಗಿ ಬಹಳ ನಿರಾಶೆಗೊಂಡಿದ್ದೇನೆ. ನಾನು ದೇವರಿಂದ ಮಾತ್ರವೇ ಬಲವನ್ನೂ, ವಿಶ್ರಾಂತಿಯನ್ನು ಪಡೆಯುವುದು ಕಲಿತುಕೊಂಡಿದ್ದೇನೆ - ಅವರ ಪ್ರೀತಿ ಮತ್ತು ಮೆಚ್ಚುಗೆ ಮಾತ್ರವೇ ಬಹಳ ಮುಖ್ಯವಾದ ವಿಷಯವಾಗಿದೆ.
ದಾವೀದನು ಇದಕ್ಕೆ ಬಹಳ ಶ್ರೇಷ್ಠವಾದ ಉದಾಹರಣೆಯಾಗಿದ್ದಾನೆ:
'1 ಸಮುವೇಲನು 30:6': ಜನರು, ತಮ್ಮ ಮಕ್ಕಳು ಸೆರೆಯಾಗಿ ಹೋಗಿದ್ದರಿಂದ ಕಹಿ ಮನಸ್ಸುಳ್ಳವರಾಗಿ ದಾವೀದನನ್ನು ಕಲ್ಲೆಸೆದು ಕೊಲ್ಲಬೇಕೆಂದು ಮಾತನಾಡಿಕೊಂಡಾಗ, ದಾವೀದನ ಮನಸ್ಸು ಬಹಳ ನೋವನ್ನು ಅನುಭವಿಸಿತು. ಆದರೂ ದಾವೀದನು ಕರ್ತನಾದ ದೇವರಲ್ಲಿ ತನ್ನನ್ನು ಬಲಪಡಿಸಿಕೊಂಡನು.
ನಾವು ನಮ್ಮ ತಂದೆಯಾದ ದೇವರ ಪ್ರೀತಿಯನ್ನು ಆತುಕೊಂಡು ನಿಲ್ಲಬೇಕು ಮತ್ತು ಬೇರೆ ಯಾರ ಪ್ರೀತಿ ಅಥವಾ ಮೆಚ್ಚುಗೆಯನ್ನೂ ಆಧಾರವಾಗಿ ಮಾಡಿಕೊಳ್ಳಬಾರದು. ನಮ್ಮನ್ನು ಬಲಪಡಿಸುವುದಕ್ಕೆ ನಮ್ಮ ತಂದೆಯ ಮೆಚ್ಚುಗೆ ಮತ್ತು ಪ್ರೀತಿಗೆ ಹೊರತಾಗಿ ಬೇರೆ ಯಾವುದೂ ಅವಶ್ಯವಿಲ್ಲ.
ಯಾರೋ ಒಬ್ಬರು ನನ್ನೊಂದಿಗೆ ಮಾತನಾಡದೇ ಇದ್ದಾಗ, ದೇವರು ನನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಲಿಲ್ಲವೆಂಬ ವಿಷಯದಿಂದ ನಾನು ಉತ್ತೇಜನ ಹೊಂದಬಹುದು! ನಾನು ಮಾನಸಾಂತರ ಪಟ್ಟ ನಂತರವೂ ಯಾರಾದರೂ ನನ್ನ ಹಿಂದಿನ ಪಾಪವನ್ನು ಹಿಡಿದಿಟ್ಟುಕೊಂಡರೂ ನಾನು ಚಿಂತಿಸಬೇಕಿಲ್ಲ, ಏಕೆಂದರೆ ದೇವರು ಅದನ್ನು ನೆನಪಿಸಿಕೊಳ್ಳುವುದಿಲ್ಲ! ದೇವರು ನನ್ನ ವಿರುದ್ಧವಾಗಿ ಪಾಪವನ್ನು ಇನ್ನೆಂದಿಗೂ ಹಿಡಿದಿಟ್ಟುಕೊಂಡಿಲ್ಲ ಎಂಬ ವಿಷಯವು ಬೇರೆ ಯಾರಾದರೂ ನನ್ನ ಪಾಪವನ್ನು ಹಿಡಿದಿಟ್ಟುಕೊಂಡಿದ್ದಾರೆಂಬ ವಿಷಯಕ್ಕಿಂತ ಅತ್ಯಂತ ಹೆಚ್ಚು ಮುಖ್ಯವಾದದ್ದು.
ಆದಾಗ್ಯೂ ನಾನು ಕಲಿತುಕೊಂಡಿರುವ ಮತ್ತೊಂದು ಸಂಗತಿ ಏನೆಂದರೆ, ಇತರರು ಸಿಟ್ಟುಗೊಂಡು ನಮ್ಮನ್ನು ಕ್ಷಮಿಸದೇ ಇದ್ದಾಗ ಅಥವಾ ನಾವು ಸಂಬಂಧವನ್ನು ಸರಿಪಡಿಸಲು ಪ್ರಯತ್ನಿಸಿದರೂ ಅವರು ನಮ್ಮೊಂದಿಗೆ ಸಹಕರಿಸದೇ ಇದ್ದಾಗ, ನಾವು ಅವರ ಬಗ್ಗೆ ಇರುವ ನಮ್ಮ ನಿರೀಕ್ಷೆಯನ್ನು ಸುಲಭವಾಗಿ ಬಿಟ್ಟುಕೊಡಬಾರದು. ದೇವರು ನಮ್ಮನ್ನು ದೀರ್ಘಶಾಂತಿಯಿಂದ ನೋಡುವ ಹಾಗೆಯೇ ನಾವೂ ಅವರೊಂದಿಗೆ ತಾಳ್ಮೆಯಿಂದ ನಡೆದುಕೊಳ್ಳಬೇಕು. ನಾವು ಕ್ಷಮೆ ಯಾಚಿಸಿದಾಗಲೂ ಅವರು ನಮ್ಮನ್ನು ಕ್ಷಮಿಸುವುದಕ್ಕೆ ತಡಮಾಡಿದರೆ, ನಾವು ಅವರ ಕೋಪವು ತಣ್ಣಗಾಗಲು ಅವಕಾಶ ನೀಡಬೇಕು. ಇದು ಹೇಗೆಂದರೆ, ಉರಿಯುವ ಕೆಂಡದ ಒಲೆಯಲ್ಲಿ ಮಾಂಸವನ್ನು ಸುಡುವ ಹಾಗೆ - ನೀವು ಒಲೆಯ ಮೇಲೆ ಇದ್ದಲನ್ನು ಜೋಡಿಸಿ ಅದಕ್ಕೆ ಬೆಂಕಿ ಹಚ್ಚುತ್ತೀರಿ, ಮತ್ತು ಮೊದಲು ಸ್ವಲ್ಪ ಸಮಯ ಬೆಂಕಿಯ ಜ್ವಾಲೆಯು ದೊಡ್ಡದಾಗಿ ಉರಿಯುತ್ತದೆ. ಆದರೆ ಒಲೆಯು ಬೇಯಿಸುವುದಕ್ಕೆ ಇನ್ನೂ ತಯಾರಾಗಿಲ್ಲ - ಬೆಂಕಿಯ ಜ್ವಾಲೆಯು ಕುಗ್ಗುವ ವರೆಗೆ ನೀವು ಅಡುಗೆ ಮಾಡಲು ಸಾಧ್ಯವಿಲ್ಲ ಮತ್ತು ಆ ಇದ್ದಲಿನ ಶಾಖವನ್ನು ಬಳಸಿಕೊಳ್ಳಲು ಆಗುವುದಿಲ್ಲ. ಇದೇ ರೀತಿ ಕೆಲವೊಮ್ಮೆ ಒಬ್ಬ ಮನುಷ್ಯನಲ್ಲಿ ಉರಿಯುತ್ತಿರುವ ಕೋಪದ ಜ್ವಾಲೆಯು ತಣಿದು, ಆತನೊಂದಿಗೆ ಲಾಭದಾಯಕ ಮಾತುಕತೆಯ ಅವಕಾಶ ಸಿಗುವುದಕ್ಕೆ ನೀವು ಕಾಯಬೇಕಾಗುತ್ತದೆ. ದೇವರು ನನ್ನೊಂದಿಗೆ ತಾಳ್ಮೆಯಿಂದ ಇರುವಂತೆಯೇ ನಾನು ಇತರರೊಂದಿಗೆ ತಾಳ್ಮೆಯಿಂದ ನಡೆಯಬೇಕೆಂಬ ಪಾಠವನ್ನು ಅವರು ನನಗೆ ಕಲಿಸಲು ಪ್ರಯತ್ನಿಸುತ್ತಿರಬಹುದು.
"ನಾವು ನಮ್ಮ ತಂದೆಯ ಪ್ರೀತಿಯನ್ನು ಆಧರಿಸಿ ನಿಂತಿದ್ದೇವೆಯೇ ಹೊರತು, ಬೇರೆಯವರ ಪ್ರೀತಿ ಅಥವಾ ಶಿಫಾರಸಿನ ಬಲದಿಂದ ಆಲ್ಲ. ನಮ್ಮನ್ನು ಬಲಪಡಿಸಲು ದೇವರ ಮೆಚ್ಚುಗೆ ಮತ್ತು ಪ್ರೀತಿ ಇವು ಮಾತ್ರವೇ ಬೇಕಾಗಿವೆ"
"ಅಪಕಾರಕ್ಕೆ ಪ್ರತಿಯಾಗಿ ಅಪಕಾರವನ್ನು ಮಾಡಬೇಡ; ಆದರೆ ನಿಂದೆಗೆ ಪ್ರತಿಯಾಗಿ ನೀನು ಆಶೀರ್ವದಿಸು"(1 ಪೇತ್ರ. 3:9), ಎಂದು ಸತ್ಯವೇದವು ಹೇಳುತ್ತದೆ. ನಾವು ಯೇಸುವಿನಂತೆ ಆಗಲು ಬಯಸುವುದಾದರೆ, ಬೇರೆಯವರ ಅಪಕಾರವನ್ನು ಹಿಂದಿರುಗಿಸದೆ, ಅದಕ್ಕೆ ಬದಲಾಗಿ ಅವರಿಗೆ ಒಳ್ಳೆಯದನ್ನು ಮಾಡುವುದು ಬಹಳ ಉತ್ತಮವಾದ ವಿಧಾನವಾಗಿದೆ. "ಸಿಟ್ಟಿಗೆ ಪ್ರತಿಯಾಗಿ ಮೃದುವಾದ ಮಾತನ್ನಾಡು"(ಜ್ಞಾನೋಕ್ತಿಗಳು 15:1).ಇತರರು ನಿಮ್ಮನ್ನು ದ್ವೇಷಿಸಿದಾಗ, ಅವರಿಗೆ ತಾಳ್ಮೆ ಮತ್ತು ದಯೆಯನ್ನು ಹಿಂದಿರುಗಿಸಿರಿ. ಇದೇ ಯೇಸುವಿನ ಜೀವನದ ಕಥೆಯಾಗಿತ್ತು - ಅವರು ತನ್ನನ್ನು ಅಸಡ್ಡೆಮಾಡಿದ ಲೋಕಕ್ಕಾಗಿ ತನ್ನ ಪ್ರಾಣವನ್ನೇ ನೀಡುವ ಸಂಕಲ್ಪದೊಂದಿಗೆ ಭೂಮಿಗೆ ಬಂದರು. ನಾವು ಅವರನ್ನು ದೃಷ್ಟಿಸಿ ನೋಡಬೇಕಿದೆ.
"ನೀವು ಯೇಸುವಿನ ಕುರಿತು ಆಲೋಚಿಸಿದರೆ, ಮನಗುಂದಿದವರಾಗಿ ಬೇಸರಗೊಳ್ಳುವುದಿಲ್ಲ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು"(ಇಬ್ರಿಯರಿಗೆ 12:3 NASB ಅನುವಾದ).
ನಾವು ಯೇಸುವಿನ ಕಡೆಗೆ ತಿರುಗಿಕೊಂಡು, ಅವರು ಎಷ್ಟು ಸಾತ್ವಿಕರಾಗಿದ್ದಾರೆ, ಅವರು ಎಷ್ಟೋ ವಿರೋಧವನ್ನು ತಾಳ್ಮೆಯಿಂದಲೂ ಕರುಣೆಯಿಂದಲೂ ಹೇಗೆ ಸಹಿಸುತ್ತಾರೆಂದು ನೋಡುವುದರ ಮೂಲಕ ಪ್ರೋತ್ಸಾಹಗೊಳ್ಳಬಹುದು.
ದೇವರಾತ್ಮನ ಬಲವನ್ನು ಹೊಂದಿ, ನಮ್ಮಲ್ಲಿ ಕೋಪದ ವಾಸನೆಯೂ ಸಹ ಇರದಂತೆ ನಾವು ಅದನ್ನು ತೆಗೆದುಹಾಕುವುದಕ್ಕೆ, ಹಾಗೂ ಇತರರು ನಮ್ಮೊಟ್ಟಿಗೆ ಕೋಪಗೊಂಡಾಗ, ಅವರನ್ನು (ನಮ್ಮ ಶತ್ರುಗಳೂ ಒಳಗೊಂಡಂತೆ) ಪರಿಪೂರ್ಣವಾದ ಪ್ರೀತಿಯಿಂದ ನೋಡುವಂತೆ, ನಮ್ಮ ಪ್ರತಿಕ್ರಿಯೆಗಳಲ್ಲಿ ಜ್ಞಾನವನ್ನು ಹೊಂದುವಂತೆ, ತಾಳ್ಮೆಯೂ, ಕರುಣೆಯೂ ನಮ್ಮಲ್ಲಿ ಇರುವಂತೆ ದೇವರು ನಮಗೆ ಸಹಾಯಮಾಡಲಿ.