ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ಜ್ಞಾನೋಕ್ತಿಗಳು 10:12ರಲ್ಲಿ, "ಪ್ರೀತಿಯು ಪಾಪಗಳನ್ನೆಲ್ಲಾ ಮುಚ್ಚುತ್ತದೆ" ಎಂಬುದಾಗಿ ಹೇಳಲ್ಪಟ್ಟಿದೆ. ಪೇತ್ರನು ತನ್ನ ಪತ್ರಿಕೆಯಲ್ಲಿ ಇದನ್ನು ಉಲ್ಲೇಖಿಸಿದ್ದಾನೆ (1 ಪೇತ್ರ 4:8). ನೀವು ಒಬ್ಬ ವ್ಯಕ್ತಿಯನ್ನು ಪ್ರೀತಿಸುವುದಾದರೆ ಆತನ ಬಲಹೀನತೆಗಳನ್ನು ನೀವು ಮರೆಮಾಡುತ್ತೀರಿ ಮತ್ತು ಅವುಗಳನ್ನು ಇತರರಿಗೆ ತೋರಿಸುವುದಿಲ್ಲ. ದೇವರು ನಮ್ಮೊಂದಿಗೆ ಇದೇ ರೀತಿಯಾಗಿ ನಡೆದುಕೊಳ್ಳುತ್ತಾರೆ. ದೇವರು ನಮ್ಮ ಹಿಂದಿನ ಪಾಪಗಳನ್ನು ಯಾರಿಗೂ ತೋರಿಸಿಲ್ಲ. ದೇವರು ನಮ್ಮೊಂದಿಗೆ ನಡೆದುಕೊಂಡಂತೆ ನಾವೂ ಸಹ ಇತರರೊಂದಿಗೆ ನಡೆಯಬೇಕು. ನೀವು ಜ್ಞಾನಿಗಳಾಗಲು ಬಯಸುವುದಾದಾರೆ, ನಿಮ್ಮ ಯೌವನದ ದಿನಗಳಲ್ಲಿ ನಾನು ನಿಮಗೊಂದು ಸಲಹೆಯನ್ನು ಕೊಡ ಬಯಸುತ್ತೇನೆ. ನಿಮಗೆ ಯಾರ ವಿಷಯವಾಗಿಯಾದರೂ ಒಂದು ಕೆಟ್ಟದ್ದು ಗೊತ್ತಿದ್ದರೆ, ಆ ವಿಷಯವು ನಿಮ್ಮಲ್ಲಿಯೇ ಅಳಿದುಹೋಗಲಿ. ಜನರ ಬಳಿ ಹೋಗಿ ಅದರ ಬಗ್ಗೆ ಮಾತನಾಡಬೇಡಿ. ವಿಶೇಷವಾಗಿ ದೇವರ ಮಕ್ಕಳ ಬಗ್ಗೆ ಏನಾದರೂ ಕೆಟ್ಟ ವಿಷಯ ನೀವು ಕೇಳಿಸಿಕೊಂಡಾಗ ನೀವು ಹೀಗೆ ಮಾಡುವುದಾದರೆ, ದೇವರು ನಿಮ್ಮನ್ನು ಸನ್ಮಾನಿಸುತ್ತಾರೆ. ಆಗ ದೇವರು ನಿಮ್ಮನ್ನು ವಿಶೇಷವಾಗಿ ಪ್ರೀತಿಸುತ್ತಾನೆ. ಒಬ್ಬ ತಂದೆಯ ಬಗ್ಗೆ ಯೋಚಿಸಿ, ಆತನ ಮಗು ಏನಾದರೂ ತಪ್ಪನ್ನು ಮಾಡಿರುತ್ತಾನೆ ಮತ್ತು ನನಗೆ ಅದರ ಬಗ್ಗೆ ಸ್ವಲ್ಪ ಗೊತ್ತಾಗುತ್ತದೆ; ಆದರೆ ನಾನು ಆ ಮಗನ ತಪ್ಪನ್ನು ಯಾರಿಗೂ ತಿಳಿಸದೇ ಸುಮ್ಮನಿರುತ್ತೇನೆ. ಇದಕ್ಕಾಗಿ ಆ ತಂದೆಯು ನನ್ನನ್ನು ತುಂಬಾ ಪ್ರೀತಿಸುತ್ತಾನೋ ಇಲ್ಲವೋ, ನೀವೇ ಯೋಚಿಸಿರಿ! ನಾವು ದೇವರ ಮಕ್ಕಳೊಂದಿಗೆ ಪ್ರೀತಿಯಿಂದ ನಡೆಯುವುದನ್ನು ದೇವರು ಗಮನಿಸಿದಾಗ. ಅವರು ನಮ್ಮನ್ನು ಹೆಚ್ಚಾಗಿ ಪ್ರೀತಿಸುತ್ತಾರೆ.

ಜ್ಞಾನೋಕ್ತಿಗಳು 11:24: "ಒಬ್ಬನು ತನ್ನ ಧನವನ್ನು ಚೆಲ್ಲಿದರೂ ಆತನಿಗೆ ವೃದ್ಧಿ ಉಂಟಾಗುವುದು." ಕೊಡುವವನು ಹೆಚ್ಚು ಪಡೆದುಕೊಳ್ಳುವನು, ಏಕೆಂದರೆ ದೇವರು ಅವನನ್ನು ಆಶೀರ್ವದಿಸುತ್ತಾನೆ, ಎನ್ನುವಂಥದ್ದು ಕ್ರೈಸ್ತ ಜೀವಿತದ ಒಂದು ಆಶ್ಚರ್ಯಕರ ಸತ್ಯಾಂಶವಾಗಿದೆ. ಯಾರು ಜಿಪುಣತನದಿಂದ ಹಿಡಿದಿಟ್ಟುಕೊಳ್ಳುತ್ತಾರೋ, ಅವರು ಬಡವರಾಗುತ್ತಾರೆ. ಜಿಪುಣನು ದೇವರನ್ನು ನಂಬಿದಾಗ, ಉದಾರಿಯಾಗುತ್ತಾನೆ. ಯೇಸು ತನ್ನ ಶಿಷ್ಯಂದಿರಿಗೆ ಈ ರೀತಿ ಹೇಳಿದರು, "ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ" (ಮತ್ತಾಯ 10:8). ದೇವರು ನಮಗೆ ಹಲವಾರು ಸಂಗತಿಗಳನ್ನು ಉಚಿತವಾಗಿ ಕೊಟ್ಟಿದ್ದಾರೆ. ಹಾಗಾಗಿ ನಾವು ಸಹ ಮತ್ತೊಬ್ಬರಿಗೆ ಉಚಿತವಾಗಿ ಕೊಡಬೇಕು. ಸುವಾರ್ತೆಗಳಲ್ಲಿ ಬರುವಂತ ವಿಧವೆಯು ಕೇವಲ ಎರಡು ನಾಣ್ಯಗಳನ್ನು ಹೊಂದಿದ್ದಳು. ಆಕೆ ತನ್ನ ಬಳಿ ಇದ್ದುದನ್ನು ಕೊಟ್ಟುಬಿಟ್ಟಳು ಮತ್ತು ದೇವರು ಆಕೆಯನ್ನು ಸನ್ಮಾನಿಸಿದರು; ಅಷ್ಟೇ ಅಲ್ಲದೆ, ಆಕೆಗೆ ಯಾವುದೇ ಕೊರತೆ ಉಂಟಾಗಾಲಿಲ್ಲ ಎಂಬುದಾಗಿ ನಾನು ನಿಶ್ಚಯವಾಗಿ ನಂಬುತ್ತೇನೆ. "ನೀರು ಹಾಯಿಸುವವನಿಗೆ ನೀರು ಸಿಕ್ಕುವುದು" (ಜ್ಞಾನೋಕ್ತಿಗಳು 11:25). ದೇವರು ನಿಮಗೆ ನೀರನ್ನು ಹಾಯಿಸಬೇಕು ಮತ್ತು ನಿಮ್ಮನ್ನು ಉಲ್ಲಾಸದಿಂದ ಇರಿಸಬೇಕೆಂದು ನೀವು ಬಯಸುವುದಾದರೆ, ನೀವು ಮತ್ತೊಬ್ಬರಿಗೆ ನೀರನ್ನು ಹಾಯಿಸಬೇಕು. ಅನೇಕ ಕ್ರೈಸ್ತರು ಏಕೆ ಸ್ವಾರಸ್ಯಹೀನರಾಗಿದ್ದಾರೆ, ಮತ್ತು ಅವರು ಒಣಗಿಹೋಗಲು ಏನು ಕಾರಣ? ಏಕೆಂದರೆ ದೇವರು ಅವರಿಗೆ ನೀರು ಹಾಯಿಸುತ್ತಿಲ್ಲ. ಹಾಗಾದರೆ, ದೇವರು ಏಕೆ ಅವರಿಗೆ ನೀರು ಹಾಯಿಸುತ್ತಿಲ್ಲ? ಏಕೆಂದರೆ ಅವರು ಮತ್ತೊಬ್ಬರಿಗೆ ನೀರು ಹಾಯಿಸದೇ ಇರುವುದರಿಂದ. ಇತರರ ಅಗತ್ಯತೆಗಳ ಕುರಿತು ಯೋಚಿಸಲು ಪ್ರಾರಂಭಿಸಿರಿ ಮತ್ತು ನೀವು ಅವರನ್ನು ಹೇಗೆ ಆಶೀರ್ವದಿಸಬಹುದು ಎಂಬುದಾಗಿ ವೀಕ್ಷಿಸಿ ನೋಡಿರಿ. ಆಗ ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸುತ್ತಾರೆಂದು ನೀವು ಕಂಡುಕೊಳ್ಳುತ್ತೀರಿ,

ಜ್ಞಾನೋಕ್ತಿಗಳು 15:13ರಲ್ಲಿ, "ಹರ್ಷಹೃದಯದಿಂದ ಹಸನ್ಮುಖ," ಎಂಬುದಾಗಿ ಹೇಳಲ್ಪಟ್ಟಿದೆ. ನಮ್ಮ ಹೃದಯದ ಆನಂದವು ನಮ್ಮ ಮುಖವನ್ನು ಪ್ರಕಾಶಮಾನವಾಗಿ ಮಾಡುತ್ತದೆ. "ಹರ್ಷಹೃದಯನಿಗೆ ನಿತ್ಯವೂ ಔತಣ" (ಜ್ಞಾನೋಕ್ತಿಗಳು 15:15). ನಮ್ಮ ಜೀವನದಲ್ಲಿ ಹರ್ಷವನ್ನು ಹೊಂದಿರುವುದರ ಬಗ್ಗೆ ಜ್ಞಾನೋಕ್ತಿಗಳಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. "ಹರ್ಷಹೃದಯವು ಒಳ್ಳೇ ಔಷದ" (ಜ್ಞಾನೋಕ್ತಿಗಳು 17:22). ಹಾಗಾಗಿ ಆನಂದವು ನಮ್ಮನ್ನು ಆರೋಗ್ಯವಂತರನ್ನಾಗಿಯೂ ಸಹ ಇರಿಸುತ್ತದೆ. ದೇವರ ರಾಜ್ಯವು ಕೇವಲ ನೀತಿಯಲ್ಲ, ನೀತಿಯೊಟ್ಟಿಗೆ ಪವಿತ್ರಾತ್ಮನಿಂದಾಗುವ ಆನಂದವೂ ಸಹ ಆಗಿದೆ. ಹಳೆ ಒಡಂಬಡಿಕೆಯಲ್ಲಿದ್ದಂತ ಜನರು ಆನಂದವಿಲ್ಲದೇ ನೀತಿಯನ್ನು ಹೊಂದಿದ್ದರು. ಪ್ರಸ್ತುತ ನಾವು ನೀತಿಯೊಟ್ಟಿಗೆ ಆನಂದವನ್ನೂ ಸಹ ಹೊಂದಿದ್ದೇವೆ. ನಾವು ಯೇಸುವನ್ನು ಹಿಂಬಾಲಿಸಿ ನಡೆಯುವಾಗ, ನಮ್ಮ ಹೆಜ್ಜೆಯಲ್ಲಿ ಒಂದು ಉತ್ಸಾಹ ತುಂಬಿರುತ್ತದೆ, ನಮ್ಮ ಹೃದಯದಲ್ಲಿ ಗಾನವು ತುಂಬಿರುತ್ತದೆ ಮತ್ತು ಹಾಗೇ ನಮ್ಮ ಮುಖದಲ್ಲಿ ಒಂದು ಬೆಳಕು ಹೊಳೆಯುತ್ತಿರುತ್ತದೆ.

ಜ್ಞಾನೋಕ್ತಿಗಳು 18:16: "ಕಾಣಿಕೆಯು ಅನುಕೂಲಕರ ಸ್ಥಿತಿಗೂ, ಶ್ರೀಮಂತರ ಸಾನ್ನಿಧ್ಯ ಪ್ರವೇಶಕ್ಕೂ ಸಾಧನವಾಗಿದೆ," ಎಂಬುದಾಗಿ ಹೇಳಲ್ಪಟ್ಟಿದೆ. ನಮಗೆ ವರವನ್ನು ಕೊಡುವ ಮೂಲಕ ದೇವರು ನಮಗೆ ಸಭೆಯಲ್ಲಿ ಸೇವೆಯ ಅವಕಾಶವನ್ನು ಒದಗಿಸುತ್ತಾರೆ. ಇಂದು ಸಭೆಯಲ್ಲಿ ನಾವು ಕಾಣುವ ಕರುಣಾಜನಕ ಸ್ಥಿತಿ ಏನೆಂದರೆ, ಅನೇಕರು ದೇವರಿಂದ ವರಗಳನ್ನು ಹೊಂದದೇ ಇದ್ದಾಗ್ಯೂ, ಸ್ಥಾನ-ಮಾನಗಳಿಗಾಗಿ ಹೊಡೆದಾಡುತ್ತಾರೆ. ನಾವು ವಿಶೇಷವಾಗಿ ಮಾಡಬೇಕಾದ ಒಂದು ವಿಷಯವಿದೆ, "ಪವಿತ್ರಾತ್ಮನಿಂದ ಉಂಟಾಗುವ ವರಗಳನ್ನು, ಅವುಗಳೊಳಗೆ ವಿಶೇಷವಾಗಿ ಪ್ರವಾದಿಸುವ ವರವನ್ನೇ ಆಸಕ್ತಿಯಿಂದ ಅಪೇಕ್ಷಿಸಿರಿ," (1 ಕೊರಿಂಥ 14 : 1). ಪ್ರವಾದಿಸುವ ವರ ಯಾವುದೆಂದರೆ, ದೇವರ ವಾಕ್ಯವನ್ನು ಭಕ್ತಿವೃದ್ಧಿಗಾಗಿ, ಪಾಪವನ್ನು ಗುರುತಿಸುವುದಕ್ಕಾಗಿ, ಸಂತೈಸಲಿಕ್ಕಾಗಿ, ಪ್ರೋತ್ಸಾಹಿಸಲಿಕ್ಕಾಗಿ ಮತ್ತು ಬಲಪಡಿಸುವದಕ್ಕಾಗಿ ಉಪಯೋಗಿಸುವುದಾಗಿದೆ (1 ಕೊರಿಂಥ 14 : 3). ದೇವರ ವರಗಳು ಅಮೂಲ್ಯವೆಂದು ಯಾರು ಪರಿಗಣಿಸುವುದಿಲ್ಲವೋ ಅಂಥವರಿಗೆ ದೇವರು ತನ್ನ ವರಗಳನ್ನು ಕೊಡುವುದಿಲ್ಲ. ದೇವರ ಸಂದೇಶವನ್ನು ಪಡೆದಿರುವ ಒಬ್ಬ ಮನುಷ್ಯನ ಮಾತನ್ನು ಆಲಿಸಲು ಜನರು ನೂರಾರು ಮೈಲುಗಳು ಪ್ರಯಾಣಿಸುತ್ತಾರೆ. ಸ್ನಾನಿಕನಾದ ಯೋಹಾನನು ಪರಲೋಕದಿಂದ ಬಂದಂತಹ ದೇವರ ಸಂದೇಶವನ್ನು ಹೊಂದಿದ್ದರಿಂದ, ಆತನು ಅರಣ್ಯದಲ್ಲಿದ್ದರೂ ಯೂದಾಯದ ಎಲ್ಲಾ ಪ್ರಾಂತ್ಯಗಳ ಜನರು ಆತನಿದ್ದಲ್ಲಿಗೆ ತೆರಳಿ, ಆತನ ಮಾತನ್ನು ಆಲಿಸುತ್ತಿದ್ದರು.

ಜ್ಞಾನೋಕ್ತಿಗಳು 18:21: "ಜೀವನ ಮರಣಗಳು ನಾಲಿಗೆಯ ವಶದಲ್ಲಿವೆ." ಪವಿತ್ರಾತ್ಮಾನ ಬೆಂಕಿಯ ಮೂಲಕ ದೇವರು ಪ್ರತಿಯೊಬ್ಬ ಶಿಷ್ಯನ ನಾಲಿಗೆಗೆ ಬೆಂಕಿಯ ಶಕ್ತಿಯನ್ನು ನೀಡಲು ಬಯಸುತ್ತಾರೆ ಎಂದು ತೋರಿಸಿಕೊಡುವುದಕ್ಕಾಗಿ, ಪಂಚಾಶತ್ತಮ ದಿನದಂದು ಉರಿಯಂತಿದ್ದ ನಾಲಿಗೆಗಳು ಶಿಷ್ಯರ ಮೇಲೆ ಕಾಣಿಸಿಕೊಂಡವು. ಯಾಕೋಬ 3:6ರಲ್ಲಿ ಹೇಳಿರುವಂತೆ, ನಾಲಿಗೆಯು ನರಕದ ಬೆಂಕಿಯಿಂದಲೂ ಬೆಂಕಿ ಹತ್ತಿಸಿಕೊಳ್ಳಬಹುದು. ನಮ್ಮ ಮಾಂಸವು ಭ್ರಷ್ಟತ್ವದಿಂದ ತುಂಬಿರುವ ಸಲುವಾಗಿ, ನಮ್ಮ ನಾಲಿಗೆಯು ಪವಿತ್ರಾತ್ಮನ ನಿಯಂತ್ರಣದಲ್ಲಿದ್ದರೆ ಮಾತ್ರ ನಮ್ಮ ನಾಲಿಗೆಗಳ ಮೂಲಕ ಮರಣವು ಹರಡುವ ಕಾರ್ಯದಿಂದ ನಾವು ಬಿಡುಗಡೆ ಹೊಂದಬಹುದು.

ಜ್ಞಾನೋಕ್ತಿಗಳು 22:4: "ಧನ, ಮಾನ, ಜೀವಗಳು ದೀನಭಾವಕ್ಕೂ, ಕರ್ತನ ಭಯಕ್ಕೂ ಸಿಗುವ ಫಲ." ಆತ್ಮಿಕ ಐಶ್ವರ್ಯ, ಆತ್ಮಿಕ ಸನ್ಮಾನ ಮತ್ತು ಆತ್ಮಿಕ ನಿಜಜೀವ ಇವು ದೇವರಿಂದ ಬರುವಂಥವುಗಳು ಮತ್ತು ಇವನ್ನು ನೀಡುವುದಕ್ಕಾಗಿ ದೇವರು ನಮ್ಮಲ್ಲಿ ಎರಡು ಗುಣಲಕ್ಷಣಗಳು ಇವೆಯೋ ಎಂದು ನೋಡುತ್ತಾರೆ: ದೀನತೆ ಮತ್ತು ಕರ್ತನ ಮೇಲಿನ ಭಯ. ನಾವು ಸಭೆಯಲ್ಲಿ ನಾಯಕತ್ವದ ಸ್ಥಾನಕ್ಕೆ ಒಬ್ಬರನ್ನು ಪರಿಗಣಿಸುವಾಗ, ಪ್ರಮುಖವಾಗಿ ಈ ಎರಡು ಗುಣಲಕ್ಷಣಗಳನ್ನು ನೋಡುವವರಾಗಿರಬೇಕು.