WFTW Body: 

ಅಪೊಸ್ತಲ ಪೌಲನ ನಿಕಟ ಜೊತೆಕೆಲಸಗಾರರಲ್ಲಿ "ತೀತ"ನಂತ ಕೆಲವರು ಯೆಹೂದ್ಯ ಜನಾಂಗಕ್ಕೆ ಸೇರಿದವರು ಆಗಿರಲಿಲ್ಲ. ಸ್ವತಃ ಪೌಲನು ಬಹಳ ಕಟ್ಟುನಿಟ್ಟಾದ ಒಬ್ಬ ಯೆಹೂದ್ಯನಾಗಿದ್ದು, ಯೆಹೂದ್ಯರಲ್ಲಿ ಯೆಹೂದ್ಯನು ಎನಿಸಿಕೊಂಡಿದ್ದನು. ಆದಾಗ್ಯೂ, ಆತನ ಜೊತೆಯಲ್ಲಿ ಸದಾಕಾಲ ಪ್ರಯಾಣ ಸಂಗಾತಿಯಾಗಿ ಇದ್ದಾತನು, ಗ್ರೀಸ್ ದೇಶದ "ಲೂಕ" ಎಂಬ ಹೆಸರಿನ ಒಬ್ಬ ವೈದ್ಯನಾಗಿದ್ದನು - ಆತನು 'ಲೂಕನ ಸುವಾರ್ತೆ' ಮತ್ತು 'ಅಪೊಸ್ತಲರ ಕೃತ್ಯಗಳು' ಎಂಬ ಪುಸ್ತಕಗಳನ್ನು ಬರೆದನು. ಇದೇ ರೀತಿಯಾಗಿ ಪೌಲನ ಆಪ್ತ ಜೊತೆಕೆಲಸಗಾರರಲ್ಲಿ ಇನ್ನೊಬ್ಬನು ತಿಮೊಥೆಯನಾಗಿದ್ದನು. ತಿಮೊಥೆಯನ ತಂದೆ ಗ್ರೀಸ್ ದೇಶದ ಪ್ರಜೆ ಆಗಿದ್ದುದರಿಂದ, ಆತನು ಅರೆವಾಸಿ ಗ್ರೀಕ್ ನಾಗರಿಕನಾಗಿದ್ದನು. ತೀತನು ಸಹ ಒಬ್ಬ ಗ್ರೀಕ್ ನಾಗರಿಕನಾಗಿದ್ದನು. ಹಾಗಾಗಿ ವಿಭಿನ್ನ ಸಮುದಾಯಗಳಿಗೆ ಸೇರಿದ್ದ ಈ ನಾಲ್ಕು ವ್ಯಕ್ತಿಗಳು ಜೊತೆಯಾಗಿ ಕೆಲಸ ಮಾಡಿದರು - ಪೌಲನು, ತೀತನು, ತಿಮೊಥೆಯನು ಮತ್ತು ಲೂಕನು - ಇವರು ವಿವಿಧ ದೇಶಗಳ ಜನರು ಒಂದಾಗಿ ಕೆಲಸ ನಿರ್ವಹಿಸಬಹುದು ಎಂದು ಹೊಸ ಒಡಂಬಡಿಕೆಯ ಸುವಾರ್ತೆಯು ಸಾರುವ ವಿಷಯಕ್ಕೆ ಜೀವಂತ ನಿದರ್ಶನಗಳಾಗಿದ್ದರು.

ನೀವು ನಿಮ್ಮ ಸ್ವಂತ ಸಂಸ್ಕೃತಿ ಮತ್ತು ನಿಮ್ಮ ದೇಶದ ಜನರೊಂದಿಗೆ ಮಾತ್ರ ಕೆಲಸ ಮಾಡುವುದಾದರೆ, ಆಗ ನಿಮ್ಮ ಕ್ರೈಸ್ತತ್ವದಲ್ಲಿ ಏನೊ ಒಂದು ಕೊರತೆಯಿದೆ. ನೀವು ಒಬ್ಬ ಮಲಯಾಳಿ ಜನಾಂಗದ ವ್ಯಕ್ತಿಯಾಗಿದ್ದು, ನಿಮಗೆ ಕೇವಲ ಮಲಯಾಳಿಗಳ ಜೊತೆಗೆ ಕೆಲಸ ಮಾಡಲು ಸಾಧ್ಯವಾದರೆ, ನೀವು ಸುವಾರ್ತೆಯನ್ನು ಅರ್ಥ ಮಾಡಿಕೊಂಡಿಲ್ಲ. ಸುವಾರ್ತೆಯು ಅಪೊಸ್ತಲ ಪೌಲನನ್ನು ವಿವಿಧ ಭಾಷೆಗಳ ಮತ್ತು ವಿವಿಧ ದೇಶಗಳ ಜನರೊಂದಿಗೆ ಕೆಲಸ ಮಾಡಿಸಿತು. ನಾವು ಸಹ ಬೇರೆ ಬೇರೆ ಮನೋಭಾವದ ಮತ್ತು ಬೇರೆ ಬೇರೆ ರಾಷ್ಟ್ರೀಯತೆಯ ಜನರೊಂದಿಗೆ - ಅವರು ಚೀನೀಯರು, ಆಫ್ರಿಕದವರು, ರಷ್ಯದವರು, ದಕ್ಷಿಣ ಅಮೇರಿಕದವರು ಅಥವಾ ಉತ್ತರ ಅಮೇರಿಕದವರು ಆಗಿದ್ದರೂ ಸರಿ - ಅವರು ಸಂಕೋಚ ಸ್ವಭಾವದವರು ಅಥವಾ ವಾಚಾಳಿಗಳು ಆಗಿದ್ದರೂ ಸರಿ, ಅವರು ಯೇಸುವಿನ ಶಿಷ್ಯರಾಗಿದ್ದರೆ, ಅವರೆಲ್ಲರೊಂದಿಗೆ ಹೊಂದಿಕೊಂಡು ಕೆಲಸ ಮಾಡಲು ಸಿದ್ಧರಿರಬೇಕು. ಮನೋಭಾವ ಮತ್ತು ರಾಷ್ಟ್ರೀಯತೆಯಲ್ಲಿ ವ್ಯತ್ಯಾಸ ಇರಬಹುದು, ಆದರೆ ಅವರೆಲ್ಲರೂ ನಿಕಟ ಜೊತೆಕೆಲಸದವರಾಗಬಹುದು. ನಾವು ಕೇವಲ ನಮ್ಮ ರಾಷ್ಟ್ರೀಯರು, ನಮ್ಮ ಪ್ರವೃತ್ತಿಯ ಜನರೊಂದಿಗೆ ಮಾತ್ರ ಸೇರಿಕೊಳ್ಳಲು ಬಯಸುವುದನ್ನು ಮತ್ತು ಜಾತಿ-ಪಂಗಡಗಳೆಂಬ ಕಿರಿದಾದ ಮನೋಭಾವವನ್ನು ಬಿಟ್ಟು ಬಿಡಬೇಕು ಮತ್ತು ಯೇಸುವಿನ ದೇಹಕ್ಕೆ ಸೇರಿದ ಎಲ್ಲರೊಂದಿಗೆ ಹೊಂದಿಕೊಂಡು ಕೆಲಸ ಮಾಡುವುದನ್ನು ಕಲಿಯಬೇಕು.

ಕೆಲವು ನಿರ್ದಿಷ್ಟ ರಾಷ್ಟ್ರಗಳ ಮತ್ತು ಸಮುದಾಯಗಳ ಜನರಲ್ಲಿ ಅವರದೇ ಆದ ಕೆಲವು ವಿಶಿಷ್ಟ ಗುಣಗಳು ಇರುತ್ತವೆ. ಆದರೆ ಅವರು ಕ್ರಿಸ್ತನ ಬಳಿಗೆ ಬಂದಾಗ, ಆ ವಿಶಿಷ್ಟ ಗುಣಗಳಿಂದ ಬಿಡುಗಡೆ ಹೊಂದಲು ಸಾಧ್ಯವಿದೆ. ತೀತನು 'ಕ್ರೇತ' ಎಂಬ ದೇಶದಲ್ಲಿದ್ದಾಗ, ಪೌಲನು ತೀತನಿಗೆ ಕ್ರೇತದ ಒಬ್ಬ ಪ್ರವಾದಿಯ ಮಾತನ್ನು ನೆನಪಿಸಿದನು, "ಕ್ರೇತದವರು ಯಾವಾಗಲೂ ಸುಳ್ಳುಗಾರರೂ, ದುಷ್ಟ ಮೃಗಗಳೂ, ಸೋಮಾರಿಗಳೂ, ಹೊಟ್ಟೇಬಾಕರೂ ಆಗಿದ್ದಾರೆ" (ತೀತ. 1:12). ಅದು ಯಥಾರ್ಥವಾದ ಮಾತು ಆಗಿರಬಹುದು. ಆದರೆ ಆಗಿನ ಒಬ್ಬ ಮನುಷ್ಯನು ಕ್ರೇತದಿಂದ ಕ್ರಿಸ್ತನ ಬಳಿಗೆ ಬಂದು ಪವಿತ್ರಾತ್ಮನಿಂದ ತುಂಬಲ್ಪಟ್ಟಾಗ, ಅವನು ಸುಳ್ಳುಗಾರನೂ ದುಷ್ಟನೂ ಆಗಿ ಇರುವುದಿಲ್ಲ, ಅವನು ದುಷ್ಟ ಮೃಗದಂತೆ ವರ್ತಿಸುವುದಿಲ್ಲ, ಅವನು ಹಿಂದಿನಂತೆ ಸೋಮಾರಿಯೂ ಹೊಟ್ಟೇಬಾಕನೂ ಆಗಿರುವುದಿಲ್ಲ. ಹಾಗಾಗಿ ನಾವು ಒಬ್ಬ ವ್ಯಕ್ತಿಯನ್ನು ಆತನ ರಾಷ್ಟ್ರೀಯತೆ ಅಥವಾ ಸಮುದಾಯದ ಆಧಾರದ ಮೇಲೆ ತೀರ್ಪು ಮಾಡಬಾರದು. ನಾವು ಸಮುದಾಯದ ಹೆಸರಿನಲ್ಲಿ ಒಬ್ಬ ಕ್ರೈಸ್ತನಿಗೆ ಪಕ್ಷಪಾತ ಮಾಡಿದರೆ, ನಾವು ಆತ್ಮಿಕವಾಗಿ ದರಿದ್ರರಾಗಿಯೇ ಉಳಿಯುತ್ತೇವೆ.

ವಿಭಿನ್ನ ದೇಶಗಳ ಮತ್ತು ಅನೇಕ ಸಮುದಾಯಗಳ ಜನರ ಅನ್ಯೋನ್ಯತೆಯ ಮೂಲಕ - ಅಂದರೆ ಚೀನೀಯರು, ಆಫ್ರಿಕದವರು, ವಿವಿಧ ಜನಾಂಗಗಳ ಭಾರತೀಯರು, ಯೂರೋಪಿನವರು, ಅಮೇರಿಕದವರು, ಇತ್ಯಾದಿ ಮೂಲಕ ದೇವರು ನನಗೆ ಆತ್ಮಿಕವಾಗಿ ಅಪಾರವಾದ ಸಂಪತ್ತನ್ನು ನೀಡಿದ್ದಾರೆ. ನನ್ನ ಹೃದಯವು ಯಾವಾಗಲೂ ಎಲ್ಲಾ ಸಮುದಾಯಗಳ ಮತ್ತು ರಾಷ್ಟ್ರಗಳ ದೇವಜನರಿಗಾಗಿ ತೆರೆದಿರುತ್ತದೆ - ಏಕೆಂದರೆ ದೇವಭಕ್ತಿಯು ಯಾವುದೇ ಒಂದು ನಿರ್ದಿಷ್ಟ ದೇಶದಲ್ಲಿ ಕಂಡುಬರುವುದಿಲ್ಲವೆಂದು ನನಗೆ ಗೊತ್ತಿದೆ. ನಿರ್ದಿಷ್ಟ ಕೆಲವು ಶ್ರೀಮಂತ ದೇಶಗಳ ಜನರು ಬಹಳ ಅಹಂಕಾರಿಗಳಾಗಿ ಇರುವುದನ್ನು ನಾನು ಕಂಡುಕೊಂಡಿದ್ದೇನೆ. ಆದರೆ ಆ ದೇಶಗಳ ಯಥಾರ್ಥ ವಿಶ್ವಾಸಿಗಳಲ್ಲಿ ದೀನತೆಯಿದೆ. ಹಾಗಾಗಿ "ಕ್ರೇತ"ದ ಜನರು ಸುಳ್ಳುಗಾರರು ಆಗಿರಬಹುದು, ಆದರೆ ಕ್ರೇತದಲ್ಲಿರುವ ಕ್ರೈಸ್ತರು ಸುಳ್ಳುಗಾರರಲ್ಲ. ಕೆಲವು ಸಮುದಾಯಗಳ ಜನರು ಕೌಟುಂಬಿಕ ಮೌಲ್ಯಗಳ ಕಡೆಗೆ ಸ್ವಲ್ಪವೂ ಗಮನ ಹರಿಸುವುದಿಲ್ಲ. ಆದರೆ ಆ ಹಿನ್ನೆಲೆಯಿಂದ ಬಂದ ಕ್ರೈಸ್ತರು ತಮ್ಮ ಜನರ ಮಾದರಿಯನ್ನು ಅನುಸರಿಸಬೇಕಿಲ್ಲ. ಹಾಗಾಗಿ ನಾವು ಯಾವಾಗಲೂ ಒಬ್ಬ ಕ್ರೈಸ್ತನ ಸಮುದಾಯದ ಅಧಾರದ ಮೇಲೆ ಆತನ ಬೆಲೆ ಕಟ್ಟಬಾರದು. ಆತನು ಒಂದು ಹೊಸ ಸೃಷ್ಟಿಯಾಗಿದ್ದಾನೆ. ಈ ಕಾರಣಕ್ಕಾಗಿ ಅಪೊಸ್ತಲ ಪೌಲನು ಇತರ ರಾಷ್ಟ್ರಗಳ ಜನರನ್ನು ತನ್ನ ಕೆಲಸಗಾರರನ್ನಾಗಿ ಆರಿಸಿಕೊಳ್ಳಲು ಸ್ವಲ್ಪವೂ ಹಿಂಜರಿಯಲಿಲ್ಲ.

ನೀವು ಕ್ರಿಸ್ತನ ದೇಹದಲ್ಲಿ ನಿಮಗಿಂತ ವಿಭಿನ್ನರಾಗಿರುವ ಜನರೊಂದಿಗೆ ಸೇರಿ ಕೆಲಸಮಾಡಲು ಸಿದ್ಧರಿಲ್ಲವಾದರೆ, ದೇವರು ನಿಮ್ಮ ಜೀವಿತಕ್ಕಾಗಿ ನಿಶ್ಚಯಿಸಿರುವ ಸಂಪೂರ್ಣ ಸಂಕಲ್ಪವನ್ನು ನೀವು ಪೂರೈಸಲಾರಿರಿ. ಅಂತಹ ಸಂದರ್ಭದಲ್ಲಿ, ನಿಮ್ಮ ಜೊತೆಕೆಲಸದವರು ಯಾರೆಂದು ದೇವರು ನಿಮಗೆ ತೋರಿಸುವುದಿಲ್ಲ - ಏಕೆಂದರೆ ದೇವರ ಯೋಜನೆಯ ಪ್ರಕಾರ, ನೀವು ಬೇರೊಂದು ದೇಶದ ಜನರೊಂದಿಗೆ ಅಥವಾ ಭಾರತದ ಇನ್ನೊಂದು ಪ್ರದೇಶದ ಜನರೊಂದಿಗೆ ಕೆಲಸ ಮಾಡಬೇಕೆಂದು ದೇವರು ಬಯಸಬಹುದು ಮತ್ತು ನಿಮಗೆ ತನ್ನ ಯೋಜನೆ ಹಿಡಿಸುವುದಿಲ್ಲವೆಂದು ದೇವರು ಅರಿತಿದ್ದಾರೆ.

ನಾವು ಕ್ರಿಸ್ತನ ದೇಹದಲ್ಲಿ ಇತರರೊಂದಿಗೆ ಯಾವುದೇ ರೀತಿಯ ಭೇದಭಾವವಿಲ್ಲದೆ ಕೆಲಸ ಮಾಡುವದಕ್ಕೆ ಮುನ್ನ, ನಮ್ಮಲ್ಲಿರುವ ಅನೇಕ ತಪ್ಪಾದ ಮನೋಭಾವಗಳನ್ನು ತೆಗೆದುಹಾಕುವುದು ಅವಶ್ಯವಾಗಿದೆ. ನಾವು ನಮ್ಮಂತೆಯೇ ಇರುವ ಜನರೊಂದಿಗೆ ಮಾತ್ರ ಕೆಲಸ ಮಾಡಲು ಬಯಸುವುದಾದರೆ, ದೇವರು ನಮಗೆ ಮಾರ್ಗದರ್ಶನ ನೀಡುವುದಿಲ್ಲ. ನಾವು ಕೆಲಸಕ್ಕಾಗಿ ಜೊತೆಗಾರರನ್ನು ನಾವಾಗಿಯೇ ಆರಿಸಿಕೊಂಡು, ಅವರನ್ನು ಕರ್ತನು ನಮಗೆ ತೋರಿಸಿಕೊಟ್ಟನು ಎಂದು ಹೇಳಬಹುದು - ಆದರೆ ಆ ಮಾತು ಸತ್ಯಕ್ಕೆ ದೂರವಾಗಿದೆ. ನಮ್ಮ ಸ್ವೇಚ್ಛಾಭಾವವು ತೋರಿಸಿದಂತೆ ನಾವು ಆಯ್ಕೆ ಮಾಡಿರುತ್ತೇವೆ. ನಾವು ಜೊತೆಗಾರರನ್ನು ಆರಿಸಿಕೊಳ್ಳುವಾಗ ಬುದ್ಧಿಮಟ್ಟದಲ್ಲಿ ನಮ್ಮ ಹಾಗೆ ಇರುವವರನ್ನು ಅಥವಾ ನಮ್ಮ ಸಮುದಾಯಕ್ಕೆ ಸೇರಿದವರನ್ನು ಅಥವಾ ನಮ್ಮ ಮನೋಭಾವಕ್ಕೆ ಹೊಂದುವಂತ ಜನರನ್ನು ಆರಿಸಿಕೊಂಡಿರುತ್ತೇವೆ. ವಿವಾಹಕ್ಕೆ ಸಂಗಾತಿಯನ್ನು ಆರಿಸಿಕೊಳ್ಳುವಾಗ ಇಂತಹ ಆಯ್ಕೆ ಮಾಡುವುದು ಯೋಗ್ಯವಾದದ್ದು. ಆದರೆ ದೇವರ ಕಾರ್ಯದಲ್ಲಿ, ದೇವರು ಆರಿಸುವ ಯಾವುದೇ ಜನರನ್ನು ನಮ್ಮ ಜೊತೆಗಾರರಾಗಿ ಒಪ್ಪಿಕೊಳ್ಳುವಂತ ತೆರೆದ ಮನಸ್ಸು ನಮ್ಮಲ್ಲಿರಬೇಕು.