ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ತಿಳಿಯುವುದು
WFTW Body: 

ದೇವರ ಆರಾಧನೆಯು ನಮ್ಮನ್ನು ನಮ್ಮ ಪರಲೋಕದ ತಂದೆಯೊಡನೆ ಬಹಳ ಹತ್ತಿರವಾದ ಸಂಬಂಧಕ್ಕೆ ನಡೆಸುತ್ತದೆ, ಮತ್ತು ಆರಾಧನೆಯು ದೇವರಿಗೆ ಕೆಲವು ಪದಗಳನ್ನು ಅಥವಾ ಮಾತುಗಳನ್ನು ಹೇಳುವುದಕ್ಕಿಂತ ಹೆಚ್ಚಿನದ್ದಾಗಿದೆ. ಶೇಕಡ 90ಕ್ಕೂ ಹೆಚ್ಚಿನ ವಿಶ್ವಾಸಿಗಳಲ್ಲಿ ಇರುವಂಥ ಒಂದು ತಪ್ಪಾದ ತಿಳುವಳಿಕೆಯನ್ನು ನಾನು ಸರಿಪಡಿಸಲು ಬಯಸುತ್ತೇನೆ. ಅನೇಕ ಕ್ರೆöÊಸ್ತಸಭೆಗಳು ಇಂದು ಬಹಳ ಸಾಮಾನ್ಯವಾಗಿ ತಮ್ಮ ಭಾನುವಾರದ ಬೆಳಗ್ಗಿನ ಕೂಟಗಳನ್ನು "ಆರಾಧನಾ ಕೂಟ" ಎಂಬ ಹೆಸರಿನಿಂದ ಕರೆಯುತ್ತಾರೆ. ಕ್ಯಾರಿಸ್‌ಮ್ಯಾಟಿಕ್ ಸಭೆಗಳು ಅಥವಾ ಬೇರೆ ಪೆಂತೆಕೋಸ್ತ ಸಭೆಗಳಲ್ಲಿ ಇದನ್ನು "ಸ್ತೋತ್ರ ಮತ್ತು ಆರಾಧನೆಯ ಸಮಯ" ಎಂದು ಕರೆಯುತ್ತಾರೆ. ಒಂದು ವೇಳೆ ನೀವು ನಿಖರವಾಗಿ ಧರ್ಮಶಾಸ್ತ್ರ ಮತ್ತು ಸತ್ಯವೇದಕ್ಕೆ ಅನುಸಾರವಾಗಿ ನೋಡುವುದಾದರೆ, ಈ ಪದಗಳ ಉಪಯೋಗ ಸಂಪೂರ್ಣವಾಗಿ ತಪ್ಪಾಗಿದೆ; ಅವರು ಭಾನುವಾರ ಬೆಳಗ್ಗೆ ಮಾಡುತ್ತಿರುವುದು ಆರಾಧನೆಯಲ್ಲ. ಅವರು ಹಾಡುವ ಹಾಡುಗಳ ಪದಗಳನ್ನು ನೀವು ಕೇಳಿಸಿಕೊಂಡರೆ, ಅದು ಸ್ತೋತ್ರ ಹಾಗೂ ಕೃತಜ್ಞತೆಯಾಗಿರುತ್ತದೆ. ಅದು ಆರಾಧನೆ ಅಲ್ಲವೇ ಅಲ್ಲ. ನಿಮಗೆ ನನ್ನ ಮಾತಿನಲ್ಲಿ ನಂಬಿಕೆ ಇಲ್ಲವಾದರೆ, ನೀವು ಸತ್ಯವೇದದ ಹೊಂದಾಣಿಕೆ ಅಥವಾ 'ಕನ್‌ಕೋರ್ಡೆನ್ಸ್'ನ್ನು ತೆಗೆದುಕೊಂಡು, ಹೊಸ ಒಡಂಬಡಿಕೆಯ ಮೊದಲಿನಿಂದ ಕೊನೆಯವರೆಗೂ 'ಆರಾಧನೆ' ಎಂಬ ಪದವು ಹೇಗೆ ಕಂಡುಬರುತ್ತದೆ ಎಂಬುದಾಗಿ ನೋಡಿಕೊಳ್ಳಬಹುದು. ಹಳೆಯ ಒಡಂಬಡಿಕೆಯಲ್ಲಿ, ಜನರು ದೇವರ ಆರಾಧನೆಗೆ ಒಂದು ನಿಗದಿತ ವಿಧಾನವನ್ನು ಮಾತ್ರ ಉಪಯೋಗಿಸಬಹುದಾಗಿತ್ತು: ದೇವರಿಗೆ ಕೈಗಳನ್ನು ತಟ್ಟಿ ಹಾಡುವುದು ಮತ್ತು ವಿವಿಧ ವಾದ್ಯಗಳೊಂದಿಗೆ ಹಾಡುಗಳನ್ನು ಹಾಡುವುದು. ಆದರೆ ಹೊಸ ಒಡಂಬಡಿಕೆಯಲ್ಲಿ, ಯೋಹಾ. 4:23-24ರಲ್ಲಿ ಯೇಸುವು ಸಮಾರ್ಯದ ಹೆಂಗಸಿಗೆ ಹೇಳಿದ್ದು ಏನೆಂದರೆ, "ನಿಜವಾದ ಆರಾಧಕರು ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಗಳಿಗೆಯು ಬರುತ್ತದೆ, ಅದು ಈಗಲೇ ಬಂದಿದೆ; ಯಾಕೆಂದರೆ ತನ್ನನ್ನು ಆರಾಧಿಸುವುದಕ್ಕೆ ತಂದೆಯು ಅಂತವರನ್ನು ಹುಡುಕುತ್ತಾನೆ. ದೇವರು ಆತ್ಮನಾಗಿದ್ದಾನೆ; ಆತನನ್ನು ಆರಾಧಿಸುವವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸತಕ್ಕದ್ದು ಅಂದನು".

ಯೇಸುವು ಇಲ್ಲಿ "ಮುಂದೆ ಬರಲಿಕ್ಕಿದ್ದ" ಸಮಯದ ಬಗ್ಗೆ ಮಾತನಾಡಿದರು. ಆ ಸಂದರ್ಭದಲ್ಲಿ ಪಂಚಾಶತ್ತಮ ದಿನದ ಹಬ್ಬವು ಇನ್ನೂ ಬಂದಿರಲಿಲ್ಲ, ಅವರು ಅದರ ಕುರಿತಾಗಿ ಮೇಲಿನ ಮಾತನ್ನು ಹೇಳಿದರು. ಯೋಹಾ. 4:23ರಲ್ಲಿ ಅವರು "ಈಗಲೇ ಬಂದಿದೆ" ಎಂಬ ಮತ್ತೊಂದು ಮಾತನ್ನು ಹೇಳಿದ್ದರ ಅರ್ಥ, ತನ್ನಲ್ಲಿ ಅದು ಈಗಾಗಲೇ ನೆರವೇರಿದೆ, ಯಾಕೆಂದರೆ ಹೊಸ ಒಡಂಬಡಿಕೆಯಲ್ಲಿ ಯೇಸುವಿಗೆ ಅನೇಕ ಮಂದಿ ಸಹೋದರರಿದ್ದಾರೆ ಮತ್ತು ಆತನೇ ಅವರೆಲ್ಲರಿಗೆ ಹಿರಿಯನಾಗಿದ್ದಾನೆ. ಆತನೇ ಹೊಸ ಒಡಂಬಡಿಕೆಯನ್ನು ನಮಗೆ ತೆರೆದಾತನು. ಹಾಗಾಗಿ ಈ ಅರ್ಥದಲ್ಲಿ, ಆತನೇ ನಮಗೆ ಮೊದಲಿಗನು ಹಾಗೂ ನಮ್ಮ ನಾಯಕನು. ಆದ್ದರಿಂದ, ಈಗ ಅಂತಿಮವಾಗಿ ತಂದೆಯಾದ ದೇವರನ್ನು ಆತ್ಮದಿಂದಲೂ ಮತ್ತು ಸತ್ಯದಿಂದಲೂ ಆರಾಧಿಸುವ ಒಬ್ಬ ವ್ಯಕ್ತಿಯು ಭೂಮಿಯ ಮೇಲೆ ನಡೆಯುವಂತ ಸಮಯ ಪ್ರಾಪ್ತವಾಗಿತ್ತು, ಮತ್ತು ಆ ವ್ಯಕ್ತಿಯು ಸ್ವತಃ ಯೇಸುವೇ ಆಗಿದ್ದನು. ಇದಕ್ಕಿಂತ ಮುಂಚೆ ಯಾರೂ ಸಹ ಇದನ್ನು ಸಾಧಿಸಿರಲಿಲ್ಲ.

ಮನುಷ್ಯನು ಆತ್ಮ, ಪ್ರಾಣ ಮತ್ತು ಶರೀರವಾಗಿದ್ದಾನೆ, ಎಂಬುದಾಗಿ 1 ಥೆಸ. 5:23ರಲ್ಲಿ ಹೇಳಲಾಗಿರುವ ವಾಕ್ಯವು ನಮಗೆ ತಿಳಿಸುವುದು ಏನೆಂದರೆ, ಯೇಸುವು ಮೇಲೆ ಪ್ರಸ್ತಾಪಿಸಿದ ವಚನದಲ್ಲಿ "ಆತ್ಮ" ಎಂಬ ಪದವನ್ನು ಬಳಸಲು ಕಾರಣ - ಆ ಸಮಯದವರೆಗೆ ಎಲ್ಲಾ ಹಳೆಯ ಒಡಂಬಡಿಕೆಯ ಆರಾಧನೆಯೂ ಶರೀರ ಮತ್ತು ಪ್ರಾಣದ ಮಟ್ಟದಲ್ಲೇ ಇತ್ತು ಎಂಬುದನ್ನು ಸೂಚಿಸುವುದಕ್ಕಾಗಿ ಆಗಿತ್ತು. ಹಳೆಯ ಒಡಂಬಡಿಕೆಯಲ್ಲಿ ಜನರು ತಮ್ಮ ಕೈಗಳಿಂದ ದೇವರನ್ನು ಆರಾಧಿಸುತ್ತಿದ್ದರು, ಕೈಗಳನ್ನು ಎತ್ತುವುದು ಮತ್ತು ಚಪ್ಪಾಳೆ ತಟ್ಟುವುದರ ಮೂಲಕ; ಅವರು ತಮ್ಮ ಪ್ರಾಣದಲ್ಲಿ ದೇವರನ್ನು ಆರಾಧಿಸುತ್ತಿದ್ದರು, ಅದು ಹೇಗೆಂದರೆ, ತಮ್ಮ ಮನಸ್ಸು, ಬುದ್ಧಿಶಕ್ತಿ ಮತ್ತು ಭಾವನೆಗಳಿಂದ; ನೀವು ನಿಮ್ಮ ಕೂಟಗಳಲ್ಲಿ ಸ್ತೋತ್ರ ಮತ್ತು ಕೃತಜ್ಞತೆಯ ಹಾಡುಗಳನ್ನು ಹಾಡಿ ಸಂತೋಷಿಸುವ ಹಾಗೆಯೇ ಅವರೂ ಸಹ ಆನಂದಿಸುತ್ತಿದ್ದರು ಮತ್ತು ಭಾವನಾತ್ಮಕ ಉತ್ಸಾಹವನ್ನು ಅನುಭವಿಸುತ್ತಿದ್ದರು. ಈ ರೀತಿಯಾಗಿ ಶರೀರ ಮತ್ತು ಪ್ರಾಣದಲ್ಲಿ ಆರಾಧನೆ ನಡೆಯುತ್ತಿತ್ತು. ಆದರೆ ಯೇಸುವು ಹೇಳಿದ್ದು ಏನೆಂದರೆ, "ಇನ್ನು ಮುಂದೆ ನೀವು ಇನ್ನಷ್ಟು ಆಳವಾದ ಆರಾಧನೆಯನ್ನು ಅನುಭವಿಸಲು ಸಾಧ್ಯವಿದೆ, ನನ್ನಲ್ಲಿ ಪವಿತ್ರಾತ್ಮನು ನೆಲೆಗೊಂಡಿರುವ ಹಾಗೆಯೇ ಆತನು ನಿಮ್ಮಲ್ಲಿಯೂ ನೆಲೆಗೊಂಡಾಗ ಇದು ಸಾಧ್ಯವಾಗುತ್ತದೆ."ಯೇಸುವು ಅವರಿಗೆ ತೋರಿಸಿಕೊಟ್ಟದ್ದು ಏನೆಂದರೆ, "ನೀವು ಶರೀರ ಮತ್ತು ಪ್ರಾಣದಲ್ಲಿ ಆರಾಧಿಸುವುದು ಮಾತ್ರವಲ್ಲದೆ, ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವಿರಿ."

"ನಾನು ಈ ಲೋಕದಲ್ಲಿ ದೇವರನ್ನು ಹೊರತುಪಡಿಸಿ ಯಾವುದನ್ನೂ ಬಯಸುವುದಿಲ್ಲ ಎಂಬುದಾಗಿ ಹೃದಯದಲ್ಲಿ ಸಂಕಲ್ಪ ಮಾಡಿಕೊಳ್ಳುವುದೇ ನಿಜವಾದ ಆರಾಧನೆಯಾಗಿದೆ"

ನಾವು ಇಂದು ಏನು ಮಾಡಬೇಕು? ನಾವು ಈಗಲೂ ಚಪ್ಪಾಳೆ ತಟ್ಟುತ್ತೇವೆ ಮತ್ತು ಕರಗಳನ್ನು ಎತ್ತುತ್ತೇವೆ, ಭಾವುಕರಾಗುತ್ತೇವೆ ಮತ್ತು ದೇವರನ್ನು ಸ್ತುತಿಸುವಾಗ ನಮ್ಮ ಬುದ್ಧಿಶಕ್ತಿಯನ್ನು ಬಳಸುತ್ತೇವೆ; ಆದರೆ ಇದಕ್ಕೂ ಮೀರಿ, ನಾವು ಆತ್ಮದಲ್ಲಿ ಆರಾಧಿಸಬೇಕು, ಅದಕ್ಕಾಗಿ ನಾವು ಪ್ರಾಣ ಮತ್ತು ಆತ್ಮದ ನಡುವೆ ಇರುವಂತ ಪರದೆ ಅಥವಾ ತೆರೆಯನ್ನು ದಾಟಿ, ನಾವು ದೇವರೊಟ್ಟಿಗೆ ಏಕಾಂತ ಇರುವಂತ ಕ್ಷೇತ್ರವನ್ನು ಪ್ರವೇಶಿಸಬೇಕು. ಹಳೆಯ ಒಡಂಬಡಿಕೆಯ ಗುಡಾರದಲ್ಲಿ ಮೂರು ಭಾಗಗಳಿದ್ದವು - ಇವು ಶರೀರ, ಪ್ರಾಣ ಮತ್ತು ಆತ್ಮವನ್ನು ಪ್ರತಿನಿಧಿಸುತ್ತವೆ - ಮತ್ತು ಇವುಗಳಲ್ಲಿ ಕೊನೆಯ ಸ್ಥಳವು, ಅಂದರೆ ತೆರೆಯಿಂದ ಮುಚ್ಚಲ್ಪಟ್ಟಿದ್ದ ಭಾಗವು ಮಹಾಪವಿತ್ರಸ್ಥಾನವಾಗಿದ್ದು, ಅಲ್ಲಿ ದೇವರೊಬ್ಬರೇ ವಾಸವಾಗಿದ್ದರು. ಹೊರಗಿನ ಪ್ರಾಕಾರದಲ್ಲಿ, ಯಜ್ಞ ಸಮರ್ಪಣೆ ನಡೆಯುತ್ತಿದ್ದುದರಿಂದ ಅಲ್ಲಿ ತುಂಬಾ ಚಟುವಟಿಕೆಯಿತ್ತು. ಪವಿತ್ರ ಸ್ಥಾನದಲ್ಲಿ, ಹಲವಾರು ಯಾಜಕರು ಓಡಾಡುತ್ತಾ ಧೂಪವನ್ನು ಸಮರ್ಪಿಸುತ್ತಿದ್ದರು ಮತ್ತು ದೀಪಗಳನ್ನು ಬೆಳಗಿಸುತ್ತಿದ್ದರು. ಆದರೆ ಮಹಾಪವಿತ್ರಸ್ಥಾನದಲ್ಲಿ, ದೇವರೊಬ್ಬರೇ ಇದ್ದರು. ಹಾಗಾಗಿ ಒಬ್ಬ ವ್ಯಕ್ತಿಯು ಮಹಾಪವಿತ್ರಸ್ಥಳವನ್ನು ಪ್ರವೇಶಿಸಿದಾಗ, ಆತನು ಏಕಾಂಗಿಯಾಗಿ ದೇವರ ಸನ್ನಿಧಿಯಲ್ಲಿ ಇರುತ್ತಿದ್ದನು. ಆತನಿಗೆ ಬೇರೆ ಜನರ ಅರಿವು ಇರುತ್ತಿರಲಿಲ್ಲ. ಅಲ್ಲಿ ಆತನು ಮತ್ತು ದೇವರ ಹೊರತಾಗಿ ಬೇರೆ ಯಾರೂ ಇರಲಿಲ್ಲ. ಇದೇ ಆತ್ಮದಲ್ಲಿ ಆರಾಧಿಸುವುದಾಗಿದೆ, ಅಲ್ಲಿ ನೀವು ಮತ್ತು ದೇವರು ಮಾತ್ರವೇ ಇರುತ್ತೀರಿ, ಮತ್ತು ನೀವು ನಿಮ್ಮ ಕೊಠಡಿಯಲ್ಲಿ ಇದನ್ನು ಮಾಡಬಹುದಾಗಿದೆ, ಮತ್ತು ಇದು ಕೇವಲ ಮಾತಿನ ಮೂಲಕ ಮಾಡುವ ಸಂಗತಿಯಲ್ಲ.

ದೇವರ ಬಗ್ಗೆ ಒಬ್ಬ ಒಳ್ಳೆಯ ಆರಾಧಕನ ಮನೋಭಾವ ಎಂಥದ್ದು ಎಂಬುದಕ್ಕೆ ಒಂದು ಅತ್ಯುತ್ತಮ ಉದಾಹರಣೆ ಕೀರ್ತ. 73:25ರಲ್ಲಿ ಕಂಡುಬರುತ್ತದೆ. ಇಲ್ಲಿ ಕೀರ್ತನೆಕಾರನು ಹೇಳುವ ಮಾತನ್ನು ನೀವು ನಿಮ್ಮ ಹೃದಯದ ಆಳದಿಂದ ದೇವರಿಗೆ ಪ್ರಾಮಾಣಿಕವಾಗಿ ಹೇಳಲು ಸಾಧ್ಯವಾದರೆ, ನೀವು ನಿಜವಾದ ಆರಾಧಕರಾಗಿದ್ದೀರಿ. ಇಲ್ಲವಾದರೆ, ನೀವು ಆತ್ಮದಿಂದ ಆರಾಧಿಸುವವರಲ್ಲ. "ಓ ದೇವರೇ, ಪರಲೋಕದಲ್ಲಿ ನನಗೆ ನೀನಿಲ್ಲದೆ ಮತ್ತಾರು ಅವಶ್ಯ?" ಎಂದು ಈ ವಾಕ್ಯವು ಹೇಳುತ್ತದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, "ನಾನು ಪರಲೋಕಕ್ಕೆ ಹೋದಾಗ, ಚಿನ್ನದ ಬೀದಿಗಳು ಅಥವಾ ಒಂದು ಮಹಲು ಅಥವಾ ಒಂದು ಕಿರೀಟಕ್ಕಾಗಿ ನಾನು ಎದುರುನೋಡುವುದಿಲ್ಲ. ನಾನು ದೇವರಿಂದ ಮಾತ್ರವೇ ಸಂತೋಷವನ್ನು ಮತ್ತು ತೃಪ್ತಿಯನ್ನು ಹೊಂದುತ್ತೇನೆ. ದೇವರ ಹೊರತಾಗಿ ನನಗೆ ಯಾರೂ ಅಥವಾ ಯಾವುದೂ ಅಗತ್ಯವಿಲ್ಲ." ಈ ಮಾತಿನ ಅರ್ಥವೇನೆಂದರೆ, "ಪರಲೋಕದಲ್ಲಿ ನನ್ನ ಅದ್ಭುತ ಸಹೋದರ ಸಹೋದರಿಯರು ಹಾಗೂ ಕುಟುಂಬದ ಸದಸ್ಯರು ಇರಬಹುದು, ಆದರೆ ನೀವೇ ನನಗೆ ಸರ್ವಸ್ವವೂ ಆಗಿದ್ದೀರಿ." "ಇಹಲೋಕದಲ್ಲಿ ನಿನ್ನನ್ನಲ್ಲದೆ ಇನ್ನಾರನ್ನೂ ಬಯಸುವುದಿಲ್ಲ." ಈ ವಾಕ್ಯದ ಅರ್ಥ, "ಪರಲೋಕದಲ್ಲಿ ಮಾತ್ರವಲ್ಲ, ನಾನು ಪರಲೋಕಕ್ಕೆ ಹೋಗುವದಕ್ಕೆ ಮೊದಲು, ಈ ಭೂಲೋಕದಲ್ಲಿ, ನಾನು ನಿಮ್ಮನ್ನು ಹೊರತಾಗಿ ಬೇರೆ ಏನನ್ನೂ ಬಯಸುವುದಿಲ್ಲ. ನೀವು ನನಗೆ ನೀಡಿರುವ ವಸ್ತುಗಳ ಹೊರತಾಗಿ ಹೆಚ್ಚಿನ ಲೌಕಿಕ ಸಂಪತ್ತನ್ನು ನಾನು ಬಯಸುವುದಿಲ್ಲ. ನಾನು ಸಂಪೂರ್ಣ ತೃಪ್ತಿ ಹೊಂದಿದ್ದೇನೆ." ಸಂತುಷ್ಟಿ ಸಹಿತವಾದ ದೈವಭಕ್ತಿಯು ದೊಡ್ಡ ಲಾಭವೇ ಆಗಿದೆ. ಒಬ್ಬ ಆರಾಧಕನಿಗೆ ಈ ಲೋಕದಲ್ಲಿ ಯಾವ ರೀತಿಯ ಗೊಣುಗುಟ್ಟಿವಿಕೆಯೂ ಇರುವುದಿಲ್ಲ - ದೇವರು ತನಗಾಗಿ ಸಿದ್ಧಪಡಿಸಿದ ಎಲ್ಲಾ ಸನ್ನಿವೇಶಗಳಲ್ಲಿ ಆತನು ಸಂಪೂರ್ಣ ತೃಪ್ತನಾಗಿದ್ದಾನೆ. ದೇವರು ತನಗೆ ನೀಡಿರುವ ಕುಟುಂಬಕ್ಕಾಗಿ, ತನ್ನ ನೌಕರಿ ಮತ್ತು ಬೇರೆಲ್ಲಾ ಸಂಗತಿಗಳಿಗಾಗಿ ಆತನು ತೃಪ್ತನಾಗಿದ್ದಾನೆ. ಅವನಲ್ಲಿ ಸಂಪೂರ್ಣ ತೃಪ್ತಿಯಿದೆ. ಅವನು ದೇವರನ್ನು ಬಿಟ್ಟು ಬೇರೇನನ್ನೂ ಬಯಸುವುದಿಲ್ಲ. ಒಂದು ಹಳೆಯ ನಾಣ್ನುಡಿಯು ಹೇಳುವ ಹಾಗೆ, ನಿನ್ನ ಜೀವನದಲ್ಲಿ ನೀನು ದೇವರನ್ನು ಹೊರತುಪಡಿಸಿ ಬೇರೆಲ್ಲವನ್ನು ಕಳಕೊಂಡರೆ, ನಿನಗೆ ದೇವರೇ ಧಾರಾಳವಾಗಿ ಸಾಕೆಂದು ನೀನು ಕಂಡುಕೊಳ್ಳುವೆ.

ಹಾಗಾಗಿ ನಾನು ಈ ಲೋಕದಲ್ಲಿ ದೇವರನ್ನು ಹೊರತುಪಡಿಸಿ ಯಾವುದನ್ನೂ ಬಯಸುವುದಿಲ್ಲ ಎಂಬುದಾಗಿ ಹೃದಯದಲ್ಲಿ ಸಂಕಲ್ಪ ಮಾಡಿಕೊಳ್ಳುವುದೇ ನಿಜವಾದ ಆರಾಧನೆಯಾಗಿದೆ. ನಿಮ್ಮ ಹೃದಯದಲ್ಲಿ ಈ ಮನೋಭಾವ ಇಲ್ಲದಿದ್ದರೆ, ನೀವು ಭಾನುವಾರದಂದು ಬೆಳಿಗ್ಗೆ ದೇವರನ್ನು ಸ್ತುತಿಸುವಾಗ ಮತ್ತು ಧನ್ಯವಾದ ಸಲ್ಲಿಸುವಾಗ ಎಷ್ಟೇ ಭಾವುಕರಾಗಿದ್ದರೂ ಸಹ, ನೀವು ನಿಜವಾದ ಆರಾಧಕರಲ್ಲ. ನೀವು ಮಾಡುತ್ತಿರುವುದನ್ನು ಆರಾಧನೆ ಮತ್ತು ಸ್ತೋತ್ರವೆಂದು ನೀವು ಕರೆಯಬಹುದು, ಆದರೆ ನೀವು ನಿಮ್ಮನ್ನೇ ವಂಚಿಸಿಕೊಳ್ಳುತ್ತೀರಿ, ಏಕೆಂದರೆ ನೀವು ನಿಜವಾದ ಆರಾಧನೆ ಮಾಡದಿರುವಾಗ ದೇವರನ್ನು ಆರಾಧಿಸುತ್ತಿದ್ದೇನೆ ಎಂದು ಅಂದುಕೊಳ್ಳುತ್ತೀರಿ, ಮತ್ತು ನೀವು ಮೋಸಹೋದದ್ದಕ್ಕಾಗಿ ಸೈತಾನನು ತುಂಬಾ ಸಂತೋಷಿಸುತ್ತಾನೆ. ಆದರೆ ಯೋಹಾ. 4:23ರಲ್ಲಿ, ತಂದೆಯು ತನ್ನನ್ನು ಆತ್ಮದಲ್ಲಿ ಆರಾಧನೆ ಮಾಡುವವರನ್ನು ಅಪೇಕ್ಷಿಸುತ್ತಾರೆಂದು ಯೇಸುವು ಹೇಳಿದರು. ಹಾಗಾಗಿ ತಂದೆಯ ಹಂಬಲ ಎಂಥದ್ದಾಗಿದೆ.

ತಂದೆಯ ಹೃದಯವನ್ನು ತೃಪ್ತಿಪಡಿಸಬೇಕು ಮತ್ತು ಆತ್ಮದಲ್ಲಿ ಆರಾಧಿಸುವವರಾಗಬೇಕೆಂದು ನೀನು ಹಂಬಲಿಸುತ್ತೀಯಾ? ಹಾಗಾದರೆ ಕೀರ್ತ.73:25ನ್ನು ಓದಿಕೋ ಮತ್ತು ಭೂಮಿಯ ಮೇಲೆ ಯೇಸು ಕ್ರಿಸ್ತನನ್ನು ಹೊರತಾಗಿ ಯಾವ ಸೇವೆಯನ್ನಾಗಲೀ ಅಥವಾ ಬೇರೆ ಯಾವುದನ್ನೇ ಆಗಲೀ ನೀನು ಬಯಸುವುದಿಲ್ಲ ಎಂಬ ಅಭಿಲಾಷೆ ನಿನ್ನ ಹೃದಯವನ್ನು ತುಂಬುವ ವರೆಗೆ ನೀನು ಸುಮ್ಮನಾಗಬೇಡ. ನೀನು ಮಾಡುವ ಸುವಾರ್ತಾ ಪ್ರಸಾರದಲ್ಲಿ ಅಥವಾ ಬೋಧನೆಯಲ್ಲಿ ಅಥವಾ ಸಭೆಯನ್ನು ಕಟ್ಟುವುದರಲ್ಲಿ ಅಥವಾ ಯಾವುದೇ ಸೇವೆಯಲ್ಲಿ ಅಥವಾ ಹಣಕಾಸಿನ ವ್ಯವಹಾರ ಮತ್ತು ನಿನ್ನ ಸ್ವತ್ತು-ಸಂಪತ್ತು, ಇವುಗಳಲ್ಲಿ ಯಾವುದರಲ್ಲೂ ನೀನು ತೃಪ್ತಿ ಹೊಂದಬೇಡ. "ಕರ್ತನೇ, ನಾನು ನಿನ್ನನ್ನು ಪಡೆದಿದ್ದೇನೆ ಮತ್ತು ನನಗೆ ಅಷ್ಟೇ ಬೇಕಾಗಿದೆ," ಎಂದು ನೀನು ಅರಿಕೆ ಮಾಡು!