WFTW Body: 

ಇಡೀ ಹೊಸ ಒಡಂಬಡಿಕೆಯಲ್ಲಿ ಪವಿತ್ರಾತ್ಮನ ಸೇವೆಯನ್ನು ಅತ್ಯುತ್ತಮವಾಗಿ ವಿವರಿಸುವಂತಹ ವಚನ, 2 ಕೊರಿಂಥ. 3:18 ಆಗಿದೆ. ಪವಿತ್ರಾತ್ಮನು ನಮ್ಮ ಜೀವನದ ಕರ್ತನಾದಾಗ, ಅವನು ನಮಗೆ ಬಿಡುಗಡೆಯನ್ನು ತರುತ್ತಾನೆ. "ಕರ್ತನ ಆತ್ಮನು ಯಾರಲ್ಲಿದ್ದಾನೋ ಅವನಿಗೆ ಬಿಡುಗಡೆ ಉಂಟು" (ವಚನ 17). ಅವನು ನಮ್ಮನ್ನು ಬಿಡುಗಡೆಗೊಳಿಸುವುದು ಪ್ರಾಥಮಿಕವಾಗಿ ಪಾಪದ ಬಲದಿಂದ, ಮತ್ತು ಅದರ ಜೊತೆಗೆ ಹಣದ ಆಸೆಯಿಂದ, ದೇವರ ವಾಕ್ಯಕ್ಕೆ ವಿರುದ್ಧವಾಗಿ ನಮ್ಮ ವಂಶ ಪರಂಪರೆಯಲ್ಲಿ ತಂದೆಯಿಂದ ಮತ್ತು ನಮ್ಮ ಹಿರಿಯರಿಂದ ಬಂದಿರುವ ಸಂಪ್ರದಾಯಗಳಿಂದ, ಹಾಗೂ ಜನರ ಅಭಿಪ್ರಾಯಗಳಿಂದ, ಇತ್ಯಾದಿ. ಇದು ನಿಜವಾಗಿಯೂ ಒಂದು ಶ್ರೇಷ್ಠವಾದ ಬಿಡುಗಡೆಯಾಗಿದೆ. ಆಗ ನಾವು ದೇವರ ಸೇವೆ ಮಾಡಲು ಸ್ವತಂತ್ರರಾಗುತ್ತೇವೆ, ಮನುಷ್ಯರ ಸೇವೆಯಲ್ಲ.

2 ಕೊರಿಂಥ 3:18ರಲ್ಲಿ ಹೇಳಲ್ಪಟ್ಟಿರುವಂತೆ, ಪವಿತ್ರಾತ್ಮನು ಯೇಸುವಿನ ಮಹಿಮೆಯನ್ನು ದೇವರ ವಾಕ್ಯದ ಮೂಲಕ ನಮಗೆ ತೋರಿಸುತ್ತಾನೆ (’ಕನ್ನಡಿ’ಯು ದೇವರ ವಾಕ್ಯವಾಗಿದೆ - ಯಾಕೋಬ 1:23- 25). ಕೆಲವರು ಸತ್ಯವೇದವನ್ನು ಕೇವಲ ಪ್ರಸಂಗಗಳನ್ನು ಸಿದ್ಧಪಡಿಸುವುದಕ್ಕಾಗಿ ಮತ್ತು ಸಿದ್ಧಾಂತಗಳನ್ನು ಪರಿಶೀಲಿಸುವುದಕ್ಕಾಗಿ ಓದುತ್ತಾರೆ. ಆದರೆ ಪವಿತ್ರಾತ್ಮನು ಪ್ರಾಥಮಿಕವಾಗಿ ನಮಗೆ ಸತ್ಯವೇದದಲ್ಲಿ ಯೇಸುವಿನ ಮಹಿಮೆಯನ್ನು ತೋರಿಸಲು ಬಯಸುತ್ತಾನೆ. ಇದರ ಜೊತೆಗೆ, ಯೇಸುವಿನ ಮಹಿಮೆಯನ್ನು ನಾವು ನೋಡುತ್ತಿರುವಾಗ, ಪವಿತ್ರಾತ್ಮನು ನಮ್ಮನ್ನು ಆತನ ಸಾರೂಪ್ಯಕ್ಕೆ ಬದಲಾಯಿಸುತ್ತಾನೆ. ಆ ಬದಲಾವಣೆಯು, ಸೇವೆ ಮಾಡುವ ರೀತಿಯಲ್ಲಿಯೂ ನಮ್ಮನ್ನು ಕ್ರಿಸ್ತನಂತೆ ಮಾಡುತ್ತದೆ. ಆಗ ನಾವು ಆತನಂತೆ ಸೇವೆ ಮಾಡಲು ಆರಂಭಿಸುತ್ತೇವೆ. ಯೇಸುವು ತನ್ನ ತಂದೆಯ ಸೇವೆ ಮಾಡಲು ಹೇಗೆ ತ್ಯಾಗ ಮಾಡಿದನೆಂಬುದನ್ನು ಪವಿತ್ರಾತ್ಮನು ನಮಗೆ ತೋರಿಸುತ್ತಾನೆ - ಮತ್ತು ನಾವೂ ಸಹ ಕರ್ತನ ಸೇವೆಗಾಗಿ ತ್ಯಾಗ ಮಾಡುವಂತೆ ಮಾಡುತ್ತಾನೆ. ಪವಿತ್ರಾತ್ಮನು ನಮ್ಮನ್ನು ಬದಲಾಯಿಸಲು ನಾವು ಅನುಮತಿಸಿದರೆ, ನಮ್ಮ ಜೀವನ ಮತ್ತು ನಮ್ಮ ಸೇವೆ ಸಂಪೂರ್ಣವಾಗಿ ಬದಲಾಗುತ್ತದೆ.

ಈಗ ನಾವು ದೇವರ ವಾಕ್ಯದಲ್ಲಿ ಯೇಸುವಿನ ಮಹಿಮೆಯನ್ನು ನೋಡುವಾಗ, ಆತನ ಮಹಿಮೆಯು ನಮ್ಮಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುವಂತೆ ಪವಿತ್ರಾತ್ಮನು ನಮ್ಮನ್ನು ಒಂದು ಮಟ್ಟದಿಂದ ಇನ್ನೊಂದು ಮಟ್ಟಕ್ಕೆ ಒಯ್ಯುತ್ತಾನೆ (2 ಕೊರಿಂಥ. 3:18). ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಾವು ಆತ್ಮನಿಗೆ ಸಂಪೂರ್ಣವಾಗಿ ಅಧೀನರಾದರೆ, ನಮ್ಮಲ್ಲಿ ಪವಿತ್ರಾತ್ಮನ ಅಭಿಷೇಕವು ಕೆಲವು ವರ್ಷಗಳ ಹಿಂದೆ ಇದ್ದಕ್ಕಿಂತಲೂ ಇಂದು ಅಧಿಕವಾಗಿ ಇರುತ್ತದೆ, ಹಾಗೂ 30 ವರ್ಷಗಳ ಹಿಂದೆ ಇದ್ದಕ್ಕಿಂತಲೂ ಬಹಳ ಹೆಚ್ಚಾಗಿರುತ್ತದೆ. ಆದರೆ, ನೀವು ನಂಬಿಗಸ್ಥರಾಗಿ ಇರದಿದ್ದರೆ, ವರ್ಷಗಳು ಸಾಗುತ್ತಿದ್ದಂತೆ, ನಿಮ್ಮಲ್ಲಿ ದೇವರ ಮಹಿಮೆಯು ಕಡಿಮೆಯಾಗುತ್ತದೆ. ಬಹಳ ಉತ್ಸಾಹಿಗಳಾಗಿದ್ದ ಅನೇಕಾನೇಕ ಯುವಜನರು ಮದುವೆಯಾದ ಕೂಡಲೇ ಹಿಂಜಾರುತ್ತಾರೆ. ಹೀಗೆ ಏಕೆ ಆಗುತ್ತದೆ? ನೀವು ದೇವರ ಇಚ್ಛೆಗೆ ಅನುಸಾರವಾಗಿ ಮದುವೆಯಾಗಿದ್ದರೆ, ನೀವು ಒಂಟಿಯಾಗಿ ಇದ್ದಾಗಕ್ಕಿಂತಲೂ ಈಗ ನಿಮ್ಮಲ್ಲಿ ಹೆಚ್ಚು ಉತ್ಸಾಹ ಮತ್ತು ದೇವರ ಮಹಿಮೆ ಕಂಡುಬರುತ್ತಿತ್ತು. ಆದರೆ, ನಿಮ್ಮ ಪತ್ನಿ, ಅಥವಾ ನಿಮ್ಮ ಮನೆ ನಿಮಗೆ ಕರ್ತನಿಗಿಂತ ಹೆಚ್ಚು ಮುಖ್ಯವಾಗಿದ್ದರೆ, ಮಹಿಮೆಯು ಕುಗ್ಗುತ್ತದೆ. ಅಂತಹ ಮನುಷ್ಯನು ಕರ್ತನ ಮಹಿಮೆಯನ್ನು ನೋಡುವುದರ ಬದಲಾಗಿ ತನ್ನ ದೃಷ್ಟಿಯನ್ನು ಬೇರೆಡೆಗೆ ಸರಿಸುತ್ತಾನೆ ಮತ್ತು ಹಿಂಜಾರಲು ಆರಂಭಿಸುತ್ತಾನೆ.

2 ಕೊರಿಂಥ. 4:1ರಲ್ಲಿ ಪೌಲನು, ತನ್ನ ಸೇವೆಯನ್ನು ವಿವರಿಸುತ್ತಾ ಮುಂದುವರಿಯುತ್ತಾನೆ. "ಆದುದರಿಂದ ನಾವು ದೇವರ ಕರುಣೆಯಿಂದ ಈ ಸೇವೆಯನ್ನು ಹೊಂದಿದವರಾಗಿರಲಾಗಿ, ಧೈರ್ಯಗೆಟ್ಟು ಹಿಂದೆಗೆಯುವದಿಲ್ಲ." ಧೈರ್ಯಗೆಡುವುದು ಎಂದರೆ ನಿರುತ್ಸಾಹಗೊಳ್ಳುವುದು. ಅಪೊಸ್ತಲನಾದ ಪೌಲನೂ ಸಹ ನಿರುತ್ಸಾಹದ ಶೋಧನೆಗೆ ಒಳಗಾದನು. ಆದುದರಿಂದ ನಿರುತ್ಸಾಹದ ಶೋಧನೆ ನಿಮ್ಮನ್ನು ಎದುರಿಸಿದರೆ, ಅದು ಯಾರೂ ಅನುಭವಿಸದಿರುವ ವಿಶೇಷ ಸಂಗತಿಯೆಂದು ಯೋಚಿಸಬೇಡಿ. ನಾನು ಬಹಳಷ್ಟು ಸಲ ಅಧೈರ್ಯಪಡಿಸುವ ಶೋಧನೆಗೆ ಒಳಗಾಗಿದ್ದೇನೆ. ಆದರೆ ನಾನು ಪೌಲನು ಹೇಳಿದ್ದನ್ನೇ ಹೇಳಿದ್ದೇನೆ, "ನಾವು ಧೈರ್ಯಗೆಡುವುದಿಲ್ಲ, ಏಕೆಂದರೆ ನಮ್ಮ ಕಣ್ಣುಗಳು ಯೇಸುವನ್ನು ದೃಷ್ಟಿಸುತ್ತಿವೆ ಮತ್ತು ದೇವರು ನಮಗೆ ಕೊಟ್ಟಿರುವ ಈ ಅದ್ಭುತವಾದ ಸೇವೆಯನ್ನು ನಾವು ನೆನಪಿಸಿಕೊಳ್ಳುತ್ತೇವೆ." ಹಾಗಾಗಿ, ನಿರುತ್ಸಾಹದ ಶೋಧನೆಯು ನಮ್ಮನ್ನು ಎದುರಿಸುವದು ನಿಶ್ಚಿತವಾಗಿದ್ದರೂ, ನಾವು ಎಡೆಬಿಡದೆ ಕರ್ತನ ಮೇಲೆ ದೃಷ್ಟಿ ಇರಿಸಿದರೆ, ನಮ್ಮಲ್ಲಿ ಒಬ್ಬನೂ ಸಹ ಎಂದಿಗೂ ನಿರುತ್ಸಾಹಕ್ಕೆ ತಲೆ ಬಾಗಿಸಬೇಕಿಲ್ಲ.

ಕ್ರೈಸ್ತ ಸೇವಕರಲ್ಲಿ ಅನೇಕರು ಕೆಲವು ವರ್ಷಗಳ ಸೇವೆಯ ನಂತರ ನಿರುತ್ಸಾಹ, ಚಿಂತೆ ಮತ್ತು ಕೊರಗುವಿಕೆಗೆ ಒಳಗಾಗುತ್ತಾರೆ; ಮತ್ತು ಅವರಲ್ಲಿ ಕೆಲವರು ಮನೋಸ್ಥೈರ್ಯವನ್ನೇ ಕಳೆದುಕೊಳ್ಳುತ್ತಾರೆ. ಇದಕ್ಕೆ ಕಾರಣ ಅವರು ತಮ್ಮ ಸ್ವಂತ ಸಾಮರ್ಥ್ಯದಿಂದ ದೇವರ ಸೇವೆ ಮಾಡಲು ಪ್ರಯತ್ನಿಸಿದ್ದಾರೆ. ನಮ್ಮನ್ನು ದೇವರ ಸೇವೆಗೆ ಸಿದ್ಧಗೊಳಿಸುವುದಕ್ಕಾಗಿ ನಾವು ಆತನಲ್ಲಿ ಭರವಸೆ ಇಡುವುದು ಬಹಳ ಮುಖ್ಯ. ನಾವು ಆತನ ಸೇವೆ ಮಾಡುವುದಾದರೆ, ನಮ್ಮ ದೈಹಿಕ ಆರೋಗ್ಯಕ್ಕಾಗಿಯೂ ನಾವು ದೇವರನ್ನು ನಂಬಬೇಕು. ದೇವರ ವಾಗ್ದಾನ ಏನೆಂದರೆ, "ಕರ್ತನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ತರುಣರೂ ಸೊರಗಿ ಮುಗ್ಗರಿಸುವರು, ಆದರೆ ನೀನು ಒಂದು ಹದ್ದಿನಂತೆ ರೆಕ್ಕೆಗಳನ್ನು ಚಾಚಿಕೊಂಡು ಮೇಲಕ್ಕೆ ಏರುವೆ" (ಯೆಶಾಯ 40:31). ನಮ್ಮ ಅರ್ಹತೆಯು ದೇವರಿಂದ ಬಂದಂಥದ್ದಾಗಿದೆ. ನೀವು ಹಣಕಾಸಿನ ತೊಂದರೆಗೆ ಒಳಗಾಗಿದ್ದರೂ, ಈ ವಾಗ್ದಾನವನ್ನು ಗಟ್ಟಿಯಾಗಿ ಹಿಡಿದುಕೊಳ್ಳಿರಿ: "ನಮಗಿರುವ ಸಾಮರ್ಥ್ಯವು ದೇವರಿಂದಲೇ ಬಂದದ್ದು" (2 ಕೊರಿಂಥ. 3:5). ದೇವರು ನಮಗೆ ಅವಶ್ಯವಾದ ಪ್ರತಿಯೊಂದನ್ನೂ ನೀಡಲು ಧಾರಾಳವಾಗಿ ಶಕ್ತರಾಗಿದ್ದಾರೆ.

ಹೆಚ್ಚಿನ ಕ್ರೈಸ್ತರು 2 ಕೊರಿಂಥ. 4:10,11ರ ವಚನಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಅನೇಕ ವಿಶ್ವಾಸಿಗಳು ಎಂತಹ ಸುವಾರ್ತೆಯನ್ನು ಕೇಳಿಸಿಕೊಳ್ಳಲು ತವಕಿಸುತ್ತಾರೆಂದರೆ, ತಮ್ಮ ಜೀವನದಲ್ಲಿ ಭೌತಿಕವಾದ ಅದ್ಭುತಕಾರ್ಯವನ್ನು ಮಾಡುವಂಥದ್ದು. ಆದರೆ ಯೇಸುವಿನ ಜೀವವು ನಿಮ್ಮೊಳಗೆ ಬರುವುದನ್ನು ನೀವು ಬಯಸಿದರೆ, ಅದಕ್ಕೆ ದಾರಿ ಈ ವಚನಗಳಲ್ಲಿ ತೋರಿಸಲಾಗಿದೆ. ನಾವು ಯೇಸುವಿನ ಮರಣಾವಸ್ಥೆಯನ್ನು ಯಾವಾಗಲೂ ನಮ್ಮ ದೇಹದಲ್ಲಿ ಅನುಭವಿಸಬೇಕು. ಇಲ್ಲಿ "ಯೇಸುವಿನ ಮರಣಾವಸ್ಥೆ" ಎಂದರೇನು? ಅದು ಯೇಸುವು ಭೂಮಿಯ ಮೇಲೆ ತನ್ನ 33 1/2 ವರ್ಷಗಳ ಸಂಪೂರ್ಣ ಜೀವಿತ ಕಾಲದಲ್ಲಿ ಮಾಡಿದಂತೆ, ನಮ್ಮ ಸ್ವಚಿತ್ತ ಮತ್ತು ನಮ್ಮ ಸ್ವಾರ್ಥ ಜೀವಿತಕ್ಕೆ ಸಾಯುವುದು (ಯೋಹಾನ 6:38). ಅಂದರೆ, ಜೀವನದ ಪ್ರತಿಯೊಂದು ಸಂದರ್ಭ-ಸನ್ನಿವೇಶದಲ್ಲೂ ಯೇಸುವು ಭೂಮಿಯ ಮೇಲೆ ಜೀವಿಸಿದಾಗ ನಡೆದಂತೆ ನಡೆಯುವುದು. ಜನರು ಆತನನ್ನು ಸೈತಾನನೆಂದು ಕರೆದಾಗ, ಇಸ್ಕರಿಯೋತ ಯೂದನು ಆತನ ಹಣವನ್ನು ಕದ್ದಾಗ, ಜನರು ಆತನ ಮೇಲೆ ಉಗುಳಿದಾಗ, ಜನರು ಅವನನ್ನು ಜಾರತ್ವದ ಮಗನೆಂದು ಕರೆದಾಗ (ಮರಿಯಳ ಮಗ), ಜನರು ಅವನನ್ನು ಅಪಹಾಸ್ಯ ಮಾಡಿದಾಗ, ವಂಚಿಸಿದಾಗ, ಬೈದಾಗ, ಅವನು ಬೋಧಿಸುವುದನ್ನು ತಡೆದಾಗ ಮತ್ತು ಅವನನ್ನು ಸಭಾಮಂದಿರದಿಂದ ಹೊರನೂಕಿದಾಗ ಅವನ ಪ್ರತಿಕ್ರಿಯೆ ಹೇಗಿತ್ತು? ಆತನು ಲೋಕದ ಗೌರವ, ಘನತೆ, ಪ್ರಸಿದ್ಧಿ ಮತ್ತು ಪ್ರತಿಷ್ಠೆಗಳಿಗೆ, ಹಾಗೂ ತನ್ನ ಸ್ವಂತ ಚಿತ್ತಕ್ಕೆ ಸತ್ತನು. ಅದನ್ನೇ "ಯೇಸುವಿನ ಮರಣ" ಎಂದು ವಿವರಿಸಿರುವದು. ನಿಮಗೂ ನನಗೂ ಕಲ್ವಾರಿಯಲ್ಲಿ ಯೇಸುವು ಹೊಂದಿದ ಮರಣದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗುವುದಿಲ್ಲ. ನಾವು ಲೋಕದ ಪಾಪಗಳಿಗಾಗಿ ಸಾಯಲು ಆಗುವುದಿಲ್ಲ. ಆದರೆ ಆತನ ಭೂಲೋಕದ ಜೀವಿತದ ಉದ್ದಕ್ಕೂ ಪ್ರತಿದಿನವೂ ಆತನ ಜೀವನದಲ್ಲಿ ಒಂದು ಮರಣಾವಸ್ಥೆ ಇತ್ತು. ನಾವು ಈ ಮರಣಾವಸ್ಥೆಯಲ್ಲಿ ಪಾಲ್ಗೊಳ್ಳ ಬೇಕಾಗಿದೆ. ಇದನ್ನು "ಯೇಸುವಿನ ಮರಣಾವಸ್ಥೆ" ಎಂದು ಕರೆಯುವುದಕ್ಕೆ ಏನು ಕಾರಣ? ಕಾರಣ ಏನೆಂದರೆ, ಸ್ವಂತ ಜೀವಕ್ಕೆ ಮತ್ತು ಲೋಕದ ವಿಷಯಗಳಿಗೆ ಮರಣವನ್ನು ಅನುಭವಿಸಿದ ಮೊದಲ ವ್ಯಕ್ತಿ ಯೇಸುವು ಆಗಿದ್ದನು. ಆತನು ಮಾನವನಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯಕ್ಕೆ ಸತ್ತನು, ಮತ್ತು ಆ ಮೂಲಕ ತಂದೆಯ ಮಹಿಮೆಯನ್ನು ವ್ಯಕ್ತಪಡಿಸಿದನು. ನೀವು ಮತ್ತು ನಾನು ಯೇಸುವಿನ ಈ ಹೆಜ್ಜೆಯ ಜಾಡಿನಲ್ಲಿ ನಡೆಯುವುದಕ್ಕಾಗಿ ಕರೆಯಲ್ಪಟ್ಟಿದ್ದೇವೆ.

2 ಕೊರಿಂಥ. 4:17,18ರಲ್ಲಿ ಪೌಲನು, "ಕ್ಷಣಮಾತ್ರವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತಾಧಿಕವಾದ ಪ್ರತಿಫಲವನ್ನು ಉಂಟುಮಾಡಿ, ನಮಗೆ ನಿರಂತರವಾಗಿರುವ ಗೌರವವಾದ ಪ್ರಭಾವವನ್ನು ದೊರಕಿಸುತ್ತದೆ," ಎಂದು ಹೇಳುತ್ತಾನೆ. ಆದರೆ ನಮ್ಮೊಳಗೆ ಈ ಮಹಿಮೆಯು ನೆಲೆಸುವದು "ನಾವು ಕಾಣುವಂಥದನ್ನು ಲಕ್ಷಿಸದೆ, ಕಾಣದಿರುವಂಥದನ್ನು ಲಕ್ಷಿಸುವವರಾಗಿ" (ವ. 4:18) ಇರುವಷ್ಟು ಸಮಯ ಮಾತ್ರ. ಇದರ ಅರ್ಥ ಏನೆಂದರೆ, ನಾವು ನಮ್ಮ ಯಾವುದೇ ಕಷ್ಟಗಳನ್ನು ಒಂದು ಮಾನವ ದೃಷ್ಟಿಯಿಂದ ನೋಡದೆ, ದೇವರ ದೃಷ್ಟಿಕೋನದಿಂದ ನೋಡುತ್ತೇವೆ. ಈ ಯಾತನೆಗಳ ಮೂಲಕ ನಮ್ಮ ಜೀವನದಲ್ಲಿ ಒಂದು ಮಹಿಮೆಯು ಜಮಾ ಮಾಡಲ್ಪಡುತ್ತದೆ ಮತ್ತು ನಾವು ಯೇಸುವಿನ ಹೃದಯದೊಂದಿಗೆ ನಿಕಟವಾದ ಐಕ್ಯತೆಗೆ ಬರುತ್ತೇವೆ. ಇದು ನಮ್ಮನ್ನು ಪ್ರೋತ್ಸಾಹಿಸುತ್ತದೆ; ಮತ್ತು ನಾವು ಒಂದು ಸೇವೆಯನ್ನು ಪಡೆದುಕೊಳ್ಳುವ ಮಾರ್ಗ ಇದಾಗಿದೆ. ಕೇವಲ ದೇವರ ವಾಕ್ಯದ ಅಧ್ಯಯನದ ಮೂಲಕ ನಾವು ಒಂದು ಸೇವೆಯನ್ನು ಪಡೆದುಕೊಳ್ಳುವುದಿಲ್ಲ.