ಸೈತಾನನು ಪೇತ್ರನನ್ನು ಗೋಧಿಯಂತೆ ಒನೆಯಬೇಕೆಂದು ದೇವರಿಂದ ಅಪ್ಪಣೆಯನ್ನು ಕೇಳಿದನು. ದೇವರು ಅದರಂತೆ ಆತನಿಗೆ ಅಪ್ಪಣೆ ಕೊಟ್ಟರು - ಏಕೆಂದರೆ ಪೇತ್ರನು, ಈ ರೀತಿ ಒನೆಯಲ್ಪಟ್ಟಿರದ ಇತರರೆಲ್ಲರಿಗಿಂತ ಹೆಚ್ಚು ಪ್ರಾಮುಖ್ಯವಾದ ಸೇವೆಯನ್ನು ಹೊಂದಿದ್ದನು. ಯೇಸುವು ಪೇತ್ರನ ನಂಬಿಕೆಯು ಕುಂದಬಾರದೆಂದು ಪ್ರಾರ್ಥಿಸಿದರು. ಪೇತ್ರನು ಕರ್ತನನ್ನು ಮೂರು ಬಾರಿ ನಿರಾಕರಿಸಿದನು. ಆದರೆ ಅವನು ಇದರ ಫಲವಾಗಿ ಸಂಪೂರ್ಣವಾಗಿ ಮುರಿಯಲ್ಪಟ್ಟನು ಮತ್ತು ತಗ್ಗಿಸಲ್ಪಟ್ಟನು ಮತ್ತು ವ್ಯಥೆಪಟ್ಟು ಅತ್ತನು ಹಾಗೂ ಮಾನಸಾಂತರಗೊಂಡನು. ಈ ರೀತಿಯಾಗಿ ದೇವರ ಯೋಜನೆಯು ನೆರವೇರಿತು ಮತ್ತು ಹೊಟ್ಟಿನಂತಿದ್ದ ಆತನ ಗರ್ವವು ಒನೆಯಲ್ಪಟ್ಟಿತು. ಅದಕ್ಕಾಗಿ ದೇವರು ಸೈತಾನನನ್ನು ಬಳಸಿಕೊಂಡರು. ದೇವರು ಸೈತಾನನನ್ನು ಇನ್ನೂ ನಾಶಗೊಳಿಸದೆ ಇರುವುದಕ್ಕೆ ಇದು ಒಂದು ಕಾರಣವಾಗಿದೆ. ಕರ್ತರಿಗೆ ಸ್ತೋತ್ರ.
ಪುನರುತ್ಥಾನದ ನಂತರ, ದೇವರು ಸಮಾಧಿಯ ಬಳಿಯಿದ್ದ ಸ್ತ್ರೀಯರಿಗೆ ದೇವದೂತನ ಮೂಲಕ, "ನೀವು ಹೋಗಿ ಆತನ ಶಿಷ್ಯರಿಗೂ ಮತ್ತು ಪೇತ್ರನಿಗೂ, ’ಯೇಸುವು ಮರಣದಿಂದ ಎದ್ದಿದ್ದಾನೆ; ಆತನು ನಿಮಗಿಂತ ಮುಂಚಿತವಾಗಿ ಗಲಿಲಾಯಕ್ಕೆ ಹೋಗುತ್ತಾನೆ’ ಎಂದು ಹೇಳಿರಿ," ಎಂಬ ವಿಶೇಷ ಸಂದೇಶವನ್ನು ಕಳುಹಿಸಿದರು (ಮಾರ್ಕ. 16:7). ಅದರಲ್ಲಿ "...ಮತ್ತು ಪೇತ್ರನಿಗೆ ..." ಎಂಬ ನುಡಿಯು ನಮ್ಮ ಕರ್ತನ ವಿಶೇಷತೆಯಾಗಿದೆ. ಪೇತ್ರನೂ ಸಹ ಒಬ್ಬ ಶಿಷ್ಯನಾಗಿರಲಿಲ್ಲವೇ? ಕರ್ತನು ಆತನ ಹೆಸರನ್ನು ಮಾತ್ರ ವಿಶೇಷವಾಗಿ ಉಲ್ಲೇಖಿಸಿದ್ದೇಕೆ? ಏಕೆಂದರೆ ಪೇತ್ರನು ತಾನು ಮಾಡಿದ ಅತಿ ಘೋರ ತಪ್ಪಿನಿಂದಾಗಿ "ಯೇಸುವಿನ ಶಿಷ್ಯ" ಎಂಬ ಹೆಸರಿಗೆ ತಾನು ಯೋಗ್ಯನಲ್ಲವೆಂದು ಮನಸ್ಸಿನಲ್ಲಿ ಭಾವಿಸಿರಬಹುದು. ಹಾಗಾಗಿ ಕರ್ತನು ತಾನು ಆತನನ್ನು ಇನ್ನೂ ತನ್ನ ಶಿಷ್ಯನೆಂದು ಪರಿಗಣಿಸುತ್ತೇನೆಂದು ಆತನಿಗೆ ತೋರಿಸುವ ಉದ್ದೇಶದಿಂದ ಆ ಪದವನ್ನು ಬಳಸಿದನು.
ಆದರೆ ಪೇತ್ರನು ಎಷ್ಟು ನಿರುತ್ಸಾಹಗೊಂಡಿದ್ದನು ಎಂದರೆ, ಆ ಸಂದೇಶವನ್ನು ಕೇಳಿದರೂ ಕೂಡ ಆತನು ಮೀನು ಹಿಡಿಯುವ ತನ್ನ ಹಳೆಯ ಕಸುಬಿಗೆ ಶಾಶ್ವತವಾಗಿ ಹಿಂದಿರುಗಲು ನಿರ್ಧರಿಸಿದನು (ಯೋಹಾ. 21:3). ಆದ್ದರಿಂದ ಸ್ವತಃ ಕರ್ತರೇ ಪೇತ್ರನ ಬಳಿಗೆ ಬಂದು ಆತನನ್ನು ತನ್ನ ಅಪೊಸ್ತಲನಾಗಲು ಮತ್ತೆ ಕರೆದರು. ಕರ್ತರ ಪ್ರೀತಿಯು ಅಂಥದ್ದು. ಕರ್ತರು ನಮ್ಮ ಹಿಂದೆಯೇ ಬರುತ್ತಿರುತ್ತಾರೆ. ಹೀಗೆ ಪೇತ್ರನು ಹಿಂದಿರುಗಿದನು ಮತ್ತು "ಆತನ ನಂಬಿಕೆಯು ಕುಂದಿಹೋಗಲಿಲ್ಲ."ಇದು ಪೇತ್ರನು ಎಂದಿಗೂ ವಿಫಲನಾಗದೆ ಅಥವಾ ಯಾವ ತಪ್ಪನ್ನೂ ಮಾಡದೆ ಸಾಧಿಸಿದ ಕಾರ್ಯವಲ್ಲ.
ಹಾಗಾಗಿ, ನಾವು ನಿಜವಾಗಿಯೂ ಹೊಸದಾಗಿ ಹುಟ್ಟಿ ಯೇಸುವಿನ ಶಿಷ್ಯರಾಗಿದ್ದರೆ, ದೇವರು ನಮ್ಮನ್ನು ಕ್ರಿಸ್ತನಲ್ಲಿ ಸ್ವೀಕರಿಸಿದ್ದಾರೆಂದು ಮತ್ತು ’ಯಾವುದೇ ಷರತ್ತಿಲ್ಲದೆ’ ನಮ್ಮನ್ನು ಪ್ರೀತಿಸುತ್ತಾರೆಂದು ನಾವು ನಂಬಬೇಕು - ಏಕೆಂದರೆ ’ದೇವರು ಪ್ರೀತಿಸ್ವರೂಪಿಯಾಗಿದ್ದಾರೆ.’
ವಿಶ್ವಾಸಿಗಳಲ್ಲಿ ಎರಡು ವರ್ಗದವರು ಇದ್ದಾರೆ:
(1) ಪರಲೋಕದ ತಂದೆಯ ಪ್ರೀತಿ ’ಷರತ್ತಿಲ್ಲದ ಪ್ರೀತಿ’ ಎಂದು ನಂಬುವವರು.
(2) ಪರಲೋಕದ ತಂದೆಯ ಪ್ರೀತಿ ’ಷರತ್ತು ಬದ್ಧವಾಗಿದೆ’ ಎಂದು ನಂಬುವವರು.
ಮೊದಲನೆಯ ವರ್ಗದಲ್ಲಿರುವಂತ ವಿಶ್ವಾಸಿಗಳು ವಿಶ್ರಾಂತಿಯನ್ನು ಹೊಂದುತ್ತಾರೆ, ಏಕೆಂದರೆ ಅವರು ಸತ್ಯವನ್ನು ನಂಬುತ್ತಾರೆ. ಇನ್ನಿತರರು ನಿರಂತರವಾಗಿ ಅವಿಶ್ರಾಂತಿಯಲ್ಲಿ ಇರುತ್ತಾರೆ. ಏಕೆಂದರೆ, ದೇವರು ಅವರನ್ನು ಪ್ರೀತಿಸುವುದನ್ನು ಮುಂದುವರೆಸುವುದಕ್ಕಾಗಿ ತಾವು ಮಾಡುವುದನ್ನು ಇನ್ನೂ ಉತ್ತಮವಾಗಿ ಮಾಡಲೇಬೇಕು ಎಂದು ಅವರು ನಂಬುವುದರಿಂದ. ಲೋಕದಲ್ಲಿರುವ ಪ್ರತಿಯೊಂದು ಸುಳ್ಳು ಧಾರ್ಮಿಕತೆಯು, ದೇವರ ಪ್ರೀತಿಯು ಷರತ್ತಿನಿಂದ ಕೂಡಿದೆ ಎಂದು ಬೋಧಿಸುತ್ತದೆ - ಆತನ ಪ್ರೀತಿಯು "ನಮ್ಮ ಕಾರ್ಯಗಳಿಗೆ ತಕ್ಕುದಾದ ಪ್ರೀತಿಯಾಗಿದೆ" - ಈ ಪ್ರೀತಿಯು ನಾವು ಎಷ್ಟು ಚೆನ್ನಾಗಿ ಕಾರ್ಯ ಮಾಡುತ್ತೇವೆ ಅಥವಾ ಪ್ರದರ್ಶನ ಮಾಡುತ್ತೇವೆ ಅನ್ನುವುದರ ಮೇಲೆ ಅವಲಂಬಿತವಾಗಿದೆ ಎಂದು ಬೋಧಿಸುತ್ತದೆ!
ಯೇಸುವು ಬಂದು ಇದಕ್ಕೆ ತದ್ವಿರುದ್ಧವಾದುದನ್ನು ಕಲಿಸಿದರು. ಆದಾಗ್ಯೂ ಹೆಚ್ಚಿನ ವಿಶ್ವಾಸಿಗಳು ಇನ್ನೂ ಅನ್ಯಜನರಂತೆಯೇ ಯೋಚಿಸುತ್ತಾರೆ. ನಾವು ಸೈತಾನನ ಸುಳ್ಳನ್ನು ಪ್ರಕಟಪಡಿಸಬೇಕು. ಏಕೆಂದರೆ ದೇವರು ’ಯಾವುದೇ ಷರತ್ತಿಲ್ಲದೆ ತನ್ನ ಮಕ್ಕಳನ್ನು ಪ್ರೀತಿಸುತ್ತಾರೆ’ ಎಂಬುದು ಸತ್ಯಾಂಶವಾಗಿದೆ. ನಾವು ಈ ಪ್ರೀತಿಯನ್ನು ನಿರಾಕರಿಸಬಹುದು ಮತ್ತು ದೇವರಿಂದ ಬಿದ್ದು ಹೋಗಬಹುದು ಮತ್ತು ಕಳೆದುಹೋಗಬಹುದು. ಆದರೂ ಸಹ ದೇವರು ತನ್ನ ಮಕ್ಕಳಿಗೆ ತೋರಿಸುವ ಪ್ರೀತಿಯಲ್ಲಿ ಯಾವುದೇ ಷರತ್ತು ಇರುವುದಿಲ್ಲ. ತಂದೆಯು ದಾರಿತಪ್ಪಿದ ಮಗನ ಮೇಲೆ ತೋರಿಸುವಂತ ಪ್ರೀತಿಯ ದೃಷ್ಟಾಂತವು ಇದನ್ನು ಬಹಳ ಸೂಕ್ತವಾಗಿ ಚಿತ್ರಿಸುತ್ತದೆ.
"ಎಲ್ಲವನ್ನು ತ್ಯಜಿಸಿ ಯೇಸುವನ್ನು ಹಿಂಬಾಲಿಸುವ ಶಿಷ್ಯರನ್ನು ದೇವರು ಅತಿಯಾಗಿ ಪ್ರೀತಿಸುತ್ತಾರೆ - ದೇವರು ಸ್ವತಃ ಯೇಸುವನ್ನು ಪ್ರೀತಿಸಿದ ಹಾಗೆ ಅವರನ್ನೂ ಪ್ರೀತಿಸುತ್ತಾರೆ"
ಜನರಿಗಾಗಿ ಇರುವಂತ ದೇವರ ಪ್ರೀತಿಯಲ್ಲಿ ಬೇರೆ ಬೇರೆ ಪ್ರಮಾಣ ಇವೆಯೆಂಬುದು ನಿಜವಾದ ಸಂಗತಿಯಾಗಿದೆ. ದೇವರು ಲೋಕದ ಎಲ್ಲಾ ಜನರಿಗಾಗಿ ಒಂದು ಪ್ರಮಾಣದ ಪ್ರೀತಿಯನ್ನು ಇರಿಸಿಕೊಂಡಿದ್ದಾರೆ (ಯೋಹಾ. 3:16). ಆದರೆ ದೇವರು ಹೊಸದಾಗಿ ಹುಟ್ಟಿರುವ ತನ್ನ ಮಕ್ಕಳನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ಪ್ರೀತಿಸುತ್ತಾರೆ. ಅದಲ್ಲದೆ ದೇವರ ಮಕ್ಕಳಲ್ಲಿ ಕೆಲವರನ್ನು ಇತರರಿಗಿಂತ ಹೆಚ್ಚಾಗಿ ಅವರು ಪ್ರೀತಿಸುತ್ತಾರೆ, ಏಕೆಂದರೆ ಆ ಮಕ್ಕಳು ಕೆಲವು ಷರತ್ತುಗಳನ್ನು ಪೂರೈಸುತ್ತಾರೆ - ಇದನ್ನು ಯೇಸುವು ’ಯೋಹಾನನು 14:21'ರಲ್ಲಿ ಈ ರೀತಿ ಹೇಳಿದರು: "ನನ್ನ ಆಜ್ಞೆಗಳನ್ನು ಕೈಗೊಂಡು ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ತಂದೆಗೆ ಪ್ರಿಯನಾಗಿರುವನು." ಅದಲ್ಲದೆ ಇವರನ್ನೂ ಮೀರಿ, ದೇವರು ಯಾರನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪ್ರೀತಿಸುತ್ತಾರೆಂದರೆ, ಯೇಸುವನ್ನು ಹಿಂಬಾಲಿಸುವುದಕ್ಕಾಗಿ ಎಲ್ಲವನ್ನೂ ಬಿಟ್ಟುಬಿಟ್ಟಿರುವವರನ್ನು - "ದೇವರು ಸ್ವತಃ ಯೇಸುವನ್ನು ಪ್ರೀತಿಸಿದಂತೆಯೇ ಅವರನ್ನೂ ಪ್ರೀತಿಸುತ್ತಾರೆ" (’ಯೋಹಾನನು 17:23'ರಲ್ಲಿ ನೋಡಿರಿ).
’ಆದಾಗ್ಯೂ ದೇವರ ಪ್ರೀತಿಯು ಷರತ್ತಿಲ್ಲದ್ದಾಗಿದೆ.’
ದೇವರ ಪ್ರೀತಿಯ ಒಂದು ವಿಶಿಷ್ಟ ಗುರುತು ’ಲೂಕ 6:35'ರಲ್ಲಿ ಈ ರೀತಿ ತೋರಿಸಲಾಗಿದೆ : "ತಿರುಗಿ ನಿರೀಕ್ಷಿಸದೇ" ಎಂದು. ಮನುಷ್ಯನ ಪ್ರೀತಿಯು ಅದಕ್ಕೆ ಪ್ರತಿಯಾಗಿ ಯಾವಾಗಲೂ ಇತರರಿಂದ ಗೌರವ, ಪ್ರೀತಿ ಮತ್ತು ಉಡುಗೊರೆಗಳನ್ನು ನಿರೀಕ್ಷಿಸುತ್ತದೆ. ಆದರೆ ದೈವಿಕವಾದ ಪ್ರೀತಿಯು ಏನನ್ನೂ ನಿರೀಕ್ಷಿಸುವುದಿಲ್ಲ. ಅದು ತಾನು ಪ್ರೀತಿಸುವವರಿಂದ ಯಾವ ಲಾಭವನ್ನು ಹೊಂದುವ ಬೇಡಿಕೆಯನ್ನೂ ಒಳಗೊಳಗೆ ಇರಿಸಿಕೊಳ್ಳುವುದಿಲ್ಲ. ದೇವರು ಕೆಟ್ಟವರ ಮೇಲೂ ಒಳ್ಳೆಯವರ ಮೇಲೂ ಸೂರ್ಯನು ಒಂದೇ ರೀತಿ ಮೂಡುವಂತೆ ಮಾಡುತ್ತಾರೆ, ಮತ್ತು ಕೆಟ್ಟವರಿಗೆ ಹಾಗೂ ಉಪಕಾರವನ್ನು ಮರೆಯುವವರಿಗೆ ದಯೆಯನ್ನೂ ಕರುಣೆಯನ್ನೂ ತೋರಿಸುತ್ತಾರೆ. ನಾವು ಇಂತಹ ದೈವಿಕ ಪ್ರೀತಿಯನ್ನು ತೋರಿಸುತ್ತಾ ಜೀವಿಸಿದರೆ ಮಾತ್ರ ಪರಿಸಾಯತನದಿಂದ ಸಂಪೂರ್ಣವಾಗಿ ಬಿಡುಗಡೆಯನ್ನು ಪಡೆಯಬಹುದು.